ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಶುಕ್ರವಾರ (ಡಿ.19) ಬಿಡುಗಡೆ ಮಾಡಿದೆ.
ಡಿಒಜಿ ಲಕ್ಷಾಂತರ ಪುಟಗಳ ಸಾವಿರಾರು ದಾಖಲೆಗಳನ್ನು ಬಿಡುಗಡೆ ಮಾಡಿದೆ. ಅವುಗಳು ಹಲವು ಫೋಟೋಗಳು, ಕೋರ್ಟ್ ದಾಖಲೆಗಳು, ಇಮೇಲ್‌ಗಳು ಮತ್ತು ತನಿಖಾ ವರದಿಗಳನ್ನು ಒಳಗೊಂಡಿವೆ ಎಂದು ವರದಿಗಳು ಹೇಳಿವೆ.
ಬಿಡುಗಡೆಯಾದ ದಾಖಲೆಗಳಲ್ಲಿ ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್, ಘಿಸ್ಲೇನ್ ಮ್ಯಾಕ್ಸ್‌ವೆಲ್, ಕೆವಿನ್ ಸ್ಪೇಸಿ ಮುಂತಾದವರೊಂದಿಗೆ ಎಪ್‌ಸ್ಟೀನ್ ಇರುವ ಫೋಟೋಗಳಿವೆ. ಕೆಲವು ಫೋಟೋಗಳಲ್ಲಿ ಮುಖಗಳನ್ನು ರೆಡ್ಯಾಕ್ಟ್ (ಕಪ್ಪು ಪಟ್ಟಿಯಿಂದ ಮರೆ ಮಾಚುವುದು) ಮಾಡಲಾಗಿದೆ.
ವರದಿಗಳ ಪ್ರಕಾರ, ಕೆಲ ಫೋಟೋಗಳ ಹೆಚ್ಚಿನ ಭಾಗ ಮತ್ತು ಕೆಲವು ದಾಖಲೆ ಪುಟಗಳನ್ನು ಸಂಪೂರ್ಣವಾಗಿ ರೆಡ್ಯಾಕ್ಟ್ ಮಾಡಲಾಗಿದೆ. ಹಾಗಾಗಿ, ಈ ದಾಖಲೆ ಬಿಡುಗಡೆ ಸರಿಯಾಗಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಡಿಒಜಿ ಹೇಳಿದೆ.
ಹೊಸದಾಗಿ ಬಹಿರಂಗವಾದ ದಾಖಲೆಗಳಲ್ಲಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಪರಾಧಗಳ ಬಗ್ಗೆ ಹೊಸ ಆರೋಪಗಳು ಅಥವಾ ಪ್ರಮುಖ ವ್ಯಕ್ತಿಗಳ ವಿರುದ್ಧ ಹೊಸ ಸಾಕ್ಷ್ಯಗಳೇನು ಇಲ್ಲ.ಹಲವು ದಾಖಲೆಗಳು ಈಗಾಗಲೇ ಸಾರ್ವಜನಿಕವಾಗಿದ್ದವು ಎಂದು ವರದಿಗಳು ಹೇಳಿವೆ.
ಡೆಮಾಕ್ರಟ್‌ಗಳು ಮತ್ತು ಕೆಲವು ರಿಪಬ್ಲಿಕನ್‌ಗಳು ದಾಖಲೆ ಬಿಡುಗಡೆ ವೇಳೆ ಸರಿಯಾಗಿ ನಿಯಮ ಪಾಲನೆಯಾಗಿಲ್ಲ. ಮಾಹಿತಿಗಳನ್ನು ಮರೆ ಮಾಚಲಾಗಿದೆ ಎಂದು ಟೀಕಿಸಿದ್ದಾರೆ. ಆದರೆ,ಡಿಒಜಿ ಸಂತ್ರಸ್ತರ ಗೌಪ್ಯತೆ ಕಾಪಾಡಲು ರೆಡ್ಯಾಕ್ಟ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ಡಿಒಜಿ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಎಪ್‌ಸ್ಟೀನ್ ಜೊತೆ ಬಿಲ್ ಕ್ಲಿಂಟನ್ ಇರುವ ಫೋಟೋ ಚರ್ಚೆಗೆ ಕಾರಣವಾಗಿದೆ. ಆದರೆ ಕ್ಲಿಂಟನ್ ಅವರು ಯಾವುದೇ ತಪ್ಪು ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳು ಸಾಕ್ಷ್ಯ ಒದಗಿಸಿಲ್ಲ.
ಡೊನಾಲ್ಡ್ ಟ್ರಂಪ್‌ಗೆ ಸಂಬಂಧಿಸಿದ ಕೆಲವು ಹಳೆಯ ಫೋಟೋಗಳು ಬಿಡುಗೆಯಾದ ದಾಖಲೆಗಳಲ್ಲಿ ಇವೆ. ಟ್ರಂಪ್ ವಿರುದ್ದವೂ ಯಾವುದೇ ಆರೋಪಗಳು ಮಾಡಿಲ್ಲ. ಟ್ರಂಪ್‌ಗೆ ಸಂಬಂಧಿಸಿದ ದಾಖಲೆಗಳು ಕಡಿಮೆಯೇ ಇವೆ ಎಂದು ವರದಿಯಾಗಿದೆ.
ಯಾವುದೇ ‘ಕ್ಲೈಂಟ್ ಲಿಸ್ಟ್’ ಅಥವಾ ದೊಡ್ಡ ಮಟ್ಟದ ಆರೋಪಗಳ ಮತ್ತು ಅಪರಾಧಗಳ ಕುರಿತು ಹೊಸದಾಗಿ ಏನೂ ದಾಖಲೆಗಳಲ್ಲಿ ಇಲ್ಲ ಎಂದಿವೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಡಿಒಜಿ ಹೇಳಿದೆ. ಹಾಗಾಗಿ, ಮುಂದೆ ಯಾವ ವಿಷಯಗಳು ಬಹಿರಂಗಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ನ್ಯಾಯ ಇಲಾಖೆಯು ಎಪ್‌ಸ್ಟೀನ್ ಪ್ರಕರಣದ ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವುದನ್ನು ಕಡ್ಡಾಯಗೊಳಿಸಿದ’ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್’ಅನ್ನು ಅಮೆರಿಕ ಸಂಸತ್ತು ಈ ಹಿಂದೆ ಅಂಗೀಕರಿಸಿತ್ತು. ಅದಕ್ಕೆ 2025ರ ನವೆಂಬರ್ 19ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿ ಜಾರಿಗೊಳಿಸಿದ್ದರು.
ಕಾನೂನು ಜಾರಿಯಾದ 30 ದಿನಗಳೊಳಗೆ (ನವೆಂಬರ್ 19ರಿಂದ ಡಿಸೆಂಬರ್ 19, 2025ರವರೆಗೆ) ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕಿತ್ತು. ಅದರಂತೆ ನ್ಯಾಯ ಇಲಾಖೆ ನವೆಂಬರ್ 19ರಂದು ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದೆ.


