HomeUncategorizedಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ...

ಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ ಕೋಟಿ ಮಹಲು

- Advertisement -
- Advertisement -

ಹಲವು ಸಹಸ್ರಾರು ವರ್ಷಗಳಿಂದ ಸ್ಮಾರಕಗಳನ್ನು, ವೈಭವಯತವಾದ ಅರಮನೆ-ಕಟ್ಟಡ ಮತ್ತು ದೇವಸ್ಥಾನಗಳ ಮೂಲಕ ಜನರಲ್ಲಿ ಆಡಳಿತದ ಬಗ್ಗೆ, ರಾಜ-ಮುಖಂಡರ ಬಗ್ಗೆ ಆರಾಧನಾ ಭಾವನೆಯನ್ನು ಬೆಳೆಸುವ ಹುನ್ನಾರವನ್ನು ಪ್ರಪಂಚದಾದ್ಯಂತ ರಾಜಮಹಾರಾಜರು, ಸರ್ವಾಧಿಕಾರಿಗಳು ಹೂಡಿಕೊಂಡು ಬಂದಿರುವ ಉದಾಹರಣೆಗಳಿವೆ. 20ನೇ ಶತಮಾನದ ಕ್ರೂರ ಸರ್ವಾಧಿಕಾರಿ ಹಿಟ್ಲರ್ ಕೂಡ ಇಂತಹ ಅಭೂತಪೂರ್ವ ಆರ್ಕಿಟೆಕ್ಚರ್ ನಿರ್ಮಾಣದ ಹಿಂದೆ ಬಿದ್ದವನೇ. ಅಂದಿನ ನಾಜಿ ಜರ್ಮನಿಯ ಆಡಳಿತ ಥರ್ಡ್ ರೈಕ್‌ನ ಮುಖ್ಯ ವಿನ್ಯಾಸಕಾರ ಆಲ್ಬರ್ಟ್ ಸ್ಪೀರ್‌ನನ್ನು ತನ್ನ ಆಪ್ತವಲಯದ ಒಬ್ಬರನ್ನಾಗಿ ಮಾಡಿಕೊಂಡು ಬರ್ಲಿನ್‌ಅನ್ನು ಆಧುನಿಕಗೊಳಿಸುವ, ಬೃಹತ್ ಕಟ್ಟಡಗಳನ್ನು ಎತ್ತುವ ನಿರ್ಧಾರಕ್ಕೆ ಮುಂದಾಗಿದ್ದ. 290 ಮೀಟರ್ ಎತ್ತರದ ವಿಶ್ವದ ಅತಿದೊಡ್ಡ ಗೋಪುರವನ್ನು ಕಟ್ಟಿಸಲು ಯೋಜನೆ ರೂಪಿಸಿದ್ದ. ರಶ್ಯಾ ಅದಕ್ಕಿಂತಲೂ ದೊಡ್ಡದಾದ ಕಟ್ಟಡವನ್ನು ಕಟ್ಟಲು ಮುಂದಾದಾಗ ಹಿಟ್ಲರ್ ಅಸಮಾಧಾನಗೊಂಡಿದ್ದಲ್ಲದೆ, ರಶ್ಯಾ ಮೇಲೆ ದಾಳಿ ನಡೆಸಲು ಮುಂದಾಗಿದ್ದಕ್ಕೆ ಅದು ಕೂಡ ಕಾರಣವಾಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಲಕ್ಷಾಂತರ ಜ್ಯೂಗಳ ಮಾರಣ ಹೋಮ ನಡೆಸಿ, ಅವರ ಹೆಣಗಳ ಮೇಲೆ ಭವ್ಯತೆಯನ್ನು ಮತ್ತು ಆಧುನಿಕತೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಹೊರಟವನು ಹಿಟ್ಲರ್. ಇದು 20ನೇ ಶತಮಾನದ ಮಧ್ಯಭಾಗದ ಇತಿಹಾಸವಾದರೆ ಅದರ ಹಿಂದೆಯೂ ಮತ್ತು ಪ್ರಸಕ್ತದಲ್ಲೂ ಇಂತಹ ಕತೆಗಳಿಗೆ ಬರವೇನಿಲ್ಲ!

ಭಾರತದ ಒಕ್ಕೂಟ ಸರ್ಕಾರ ಕಳೆದ ಬಜೆಟ್‌ನಲ್ಲಿ ಕೋವಿಡ್ ಲಸಿಕೆಗಳನ್ನು ಕೊಂಡು ಲಸಿಕಾ ಅಭಿಯಾನಕ್ಕೆ ಮೀಸಲಿಟ್ಟ ಹಣ ಸುಮಾರು 35 ಸಾವಿರ ಕೋಟಿ. ಇದು ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂಬುದರ ಸ್ಪಷ್ಟ ಚಿತ್ರಣವಿಲ್ಲ. ಆದರೆ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಲಸಿಕೆಯ ಹಾಹಾಕಾರ ಎದ್ದಿದೆ. ಸಮರ್ಪಕವಾದ ಲಸಿಕೆ ಅಭಿಯಾನ ನಡೆಯದೆ, ಕೋವಿಡ್ ಎರಡನೇ ಅಲೆ ಲಕ್ಷಾಂತರ ಜನರನ್ನು ಆಹುತಿ ಪಡೆದಿದೆ. ಪಶ್ಚಿಮದ ಹಲವು ದೇಶಗಳು ತಮ್ಮ ನಾಗರಿಕರ ಸಂಖ್ಯೆಯ ಎರಡರಷ್ಟು-ಮೂರರಷ್ಟು-ನಾಲ್ಕರಷ್ಟು ಮತ್ತೂ ಇನ್ನೂ ಹೆಚ್ಚಿನ ಪಟ್ಟು ಲಸಿಕೆಯನ್ನು ಉತ್ಪಾದಿಸಿ ಕೊಂಡುಕೊಳ್ಳಲು ಯೋಜನೆ ತಯಾರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಆದರೆ ಇದೇ ಸಮಯದಲ್ಲಿ ಭಾರತದ ಒಕ್ಕೂಟ ಸರ್ಕಾರ ಇಲ್ಲಿನ ಜನಸಂಖ್ಯೆಗೆ ಬೇಕಾಗಿರುವಷ್ಟೂ ಲಸಿಕೆಗೆ ಬೇಡಿಕೆಯಿಟ್ಟಿರಲಿಲ್ಲ ಎಂಬ ವರದಿ ಏನನ್ನು ಸೂಚಿಸುತ್ತದೆ?

ಕೋವಿಡ್ ಸಾಂಕ್ರಾಮಿಕ ಸಮಸ್ಯೆ ಇಡೀ ದೇಶವನ್ನು ಆವರಿಸಿಕೊಂಡು, ಜನಸಾಮಾನ್ಯರ ಯಾತನೆಯ ಗೋಪುರ ಮುಗಿಲುಮುಟ್ಟುತ್ತಿರುವಾಗ, ದೆಹಲಿಯಲ್ಲಿ ನೂತನ ’ಗೋಪುರ’ ಸಂಸತ್ ಭವನ (ಸೆಂಟ್ರಲ್ ವಿಸ್ತಾ), ಪ್ರಧಾನಮಂತ್ರಿಗಳ ಹಾಗೂ ರಾಷ್ಟ್ರಪತಿಗಳ ನೂತನ ನಿವಾಸ, ಮತ್ತಿತರ ಕಚೇರಿಗಳ ಕಟ್ಟಡಗಳ ನಿರ್ಮಾಣಕ್ಕೆ ಸುಮಾರು 20ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆ ತಯಾರಿಸಿ ಒಕ್ಕೂಟ ಸರ್ಕಾರ ಮುಂದುವರೆದಿದೆ. ಬೇರೆ ಸಮಯದಲ್ಲಿ ಇದು ನಡೆದಿದ್ದರೆ ಇಷ್ಟು ಆಕ್ರೋಶವನ್ನು ಹುಟ್ಟಿಸುತ್ತಿರಲಿಲ್ಲವೇನೋ! ಗಮನಿಸಿ, 130 ಕೋಟಿ ಜನರ ಲಸಿಕೆಗಾಗಿ ಘೋಷಿಸಿದ್ದ ಹಣದ ಅರ್ಧಕ್ಕೂ ಹೆಚ್ಚಿನಷ್ಟು ಹಣವನ್ನು ಈ ಯೋಜನೆಗಾಗಿ ವ್ಯಯಿಸಲಾಗುತ್ತಿದೆ. ಆದರೆ ಕೋವಿಡ್ ಲಸಿಕೆಯ ಪೂರೈಕೆಯಲ್ಲಿ ವ್ಯತ್ಯಯ ಇದೆ. ಸಾರ್ವತ್ರಿಕ ಲಸಿಕಾ ಅಭಿಯಾನದ ಬಗ್ಗೆ ಚಕಾರವಿಲ್ಲ!

ಇದು ಕೋವಿಡ್ ಸಮಯದಲ್ಲಿ ಆರ್ಥಿಕ ಸಂಪನ್ಮೂಲದ ವ್ಯರ್ಥ ವ್ಯಯದ ಪ್ರಶ್ನೆಯಾಗಿಯಷ್ಟೇ ಉಳಿದಿಲ್ಲ. ಈ ಆರೋಪಕ್ಕೆ ಸರ್ಕಾರದವರು ಉತ್ತರವನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ. ಎಲ್ಲ ನಿರ್ಬಂಧಗಳ ನಡುವೆ ಈ ಕಟ್ಟಡಗಳ ನಿರ್ಮಾಣವನ್ನು ’ಅಗತ್ಯ ಸೇವೆ’ ಎಂದು ಪರಿಗಣಿಸಿ, ಅದು ಹಲವರಿಗೆ ಉದ್ಯೋಗ ನೀಡಲಿದೆ ಎಂಬ ನೆಪವೊಡ್ಡಿದೆ! ಮೂಲ ಸೌಕರ್ಯಗಳು ಉದ್ಯೋಗ ಸೃಷ್ಟಿಸಲಿವೆ ಎಂದಾಗಿದ್ದರೆ, ಹಲವು ಸರ್ಕಾರಿ ಆಸ್ಪತ್ರೆಗಳನ್ನು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ನಿರ್ಮಿಸುವುದರಿಂದ ಆ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದಿತ್ತು. ರಾಜ್ಯಗಳ ಹೊರೆಯನ್ನು ತುಸು ಇಳಿಸಬಹುದಿತ್ತು! ಊಹು, ಅದರಲ್ಲಿ ವೈಭವ ಇಲ್ಲ, ಜನೋಪಕಾರಿ ಯೋಜನೆಗಳಿಗೆ ಆ ಮಟ್ಟದ ಪ್ರಚಾರ ಸಿಗುವುದಿಲ್ಲವಲ್ಲಾ. ಸರ್ವಾಧಿಕಾರಿಯ ಮೋಜು ಹಾಗೂ ಪೊಗರು ಅದರಿಂದ ತಣಿಯುವುದಿಲ್ಲ. ಹೀಗೆ ಜನಸಾಮಾನ್ಯರ ಹಲವು ಪ್ರಶ್ನೆಗಳಿಗೆ ಜಾಣ ಮೌನ ತಳೆದು ಕಟ್ಟಡಗಳ ನಿರ್ಮಾಣದ ಜಾಗದಲ್ಲಿ ಫೋಟೋ ತೆಗೆಯುವುದು ಕೂಡ ಅಪರಾಧ ಎಂದು ಆಡಳಿತ ವ್ಯವಸ್ಥೆ ಈಗ ಘೋಷಿಸಿದೆ. ಆದರೆ ಕೇಳಬೇಕಾದ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಲೇಬೇಕಲ್ಲವೇ?

ಮೊದಲನೆಯದಾಗಿ, ಈಗಿನ ಸರ್ಕಾರ ಮತ್ತು ಪ್ರಧಾನಿಯವರು ಅಧಿಕಾರಕ್ಕೆ ಬಂದದ್ದೇ ಲ್ಯುಟಿನ್ಸ್ ದೆಹಲಿಯಲ್ಲಿ ಆರಾಮವಾಗಿ ಕಾಲ ಕಳೆಯುವ ಕೆಲವು ’ಎಲೀಟ್ಗಳ ಐಶಾರಾಮಿತ್ವವನ್ನು ಗೇಲಿ ಮಾಡುವುದರೊಂದಿಗೆ! ಅವರಿಂದ ದೇಶಕ್ಕೇನೂ ಪ್ರಯೋಜನವಿಲ್ಲ ಎಂಬುದು ಅವರ ಟೀಕೆಯಾಗಿತ್ತು. ಬ್ರಿಟಿಷರ ಆಡಳಿತದ ಕಾಲದ ಲ್ಯುಟಿನ್ಸ್ ಎಂಬ ವಿನ್ಯಾಸಕಾರನ ಸಮಯದಲ್ಲಿ ನಿರ್ಮಾಣವಾದ ಈ ಆಧುನಿಕ ಸಮುಚ್ಚಯಗಳಲ್ಲಿ ಹಲವು ರಾಜಕಾರಣಿಗಳು, ಅಧಿಕಾರಿಗಳು, ಸಿರಿವಂತರು ನೆಲೆಸಿದ್ದಾರೆ. ಇವರ ಬಗ್ಗೆ ಪ್ರಶ್ನೆ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದ ನಾಯಕರು ಈಗ ಅದಕ್ಕಿಂತಲೂ ಐಶಾರಾಮಿ ಕಟ್ಟಡಗಳನ್ನು, ಸರ್ಕಾರಿ ಮನೆಗಳನ್ನು ಕಟ್ಟಿಸುವುದಕ್ಕೆ ಹೊರಟಿರುವುದೇಕೆ?

ಎರಡನೆಯದಾಗಿ, ಯಾವುದೇ ಒಂದು ನಗರದ ಮುಖ್ಯ ಪ್ರದೇಶದ ವಿನ್ಯಾಸದ ಪರಂಪರೆಯಲ್ಲಿ ಇತಿಹಾಸದ ನೆನಪುಗಳು ಕೂಡ ಇರುತ್ತವೆ. ಒಂದೇ ಏಟಿಗೆ ಆ ಇತಿಹಾಸದ ನೆನಪುಗಳನ್ನು ಅಳಿಸಿಹಾಕುವ ಹುನ್ನಾರವೇ ಇದು ಎಂಬ ಆತಂಕಗಳು ಕೂಡ ಎದ್ದಿವೆ; ಇದಕ್ಕೆ ಕಾರಣವಿಲ್ಲದ್ದಿಲ್ಲ. ಈಗ ಯೋಜನೆ ಹಾಕಿಕೊಂಡಿರುವ ಭಾಗದಲ್ಲಿ ಇರುವ ನ್ಯಾಶನಲ್ ಆರ್ಕೈವ್ಸ್ ಕಾಂಪ್ಲೆಕ್ಸ್‌ನ (ರಾಷ್ಟ್ರೀಯ ಪತ್ರಾಗಾರ ಸಂಕೀರ್ಣ) ಒಂದು ಭಾಗ ನೆಲಸಮವಾಗುವ ವರದಿಗಳು ಕೂಡ ಮೂಡಿಬಂದಿವೆ. ಅದನ್ನು ನಿರಾಕರಿಸುವ ಸ್ಪಷ್ಟ ಹೇಳಿಕೆಗಳನ್ನು ನೀಡದೆ ಸರ್ಕಾರದ ವಕ್ತಾರರು ಆ ಪ್ರಾಚೀನ ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸಿ ಸ್ಥಳಾಂತರಿಸಲಾಗುತ್ತದೆ ಎಂದಿದ್ದಾರೆ. ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಪಠ್ಯಪುಸ್ತಕಗಳಲ್ಲಿ ಇತಿಹಾಸಗಳನ್ನೇ ತಿರುಚಿದ, ಮತದ್ವೇಷಕ್ಕಾಗಿ ರಸ್ತೆ, ಊರು ಮತ್ತು ಕಟ್ಟಡಗಳ ಹೆಸರುಗಳನ್ನು ಬದಲಾಯಿಸುವ ಖ್ಯಾತಿವಂತರ ಬಗ್ಗೆ ನಂಬಿಕೆ ಮೂಡುವುದು ಅಷ್ಟು ಸುಲಭವಲ್ಲ.

ಮೇಲಿನ ಆತಂಕ ಮೂರನೆಯ ಪ್ರಶ್ನೆಗೆ ಎಡೆಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ, ಇತಿಹಾಸಕಾರರಿಗೆ, ಸಂಶೋಧಕರಿಗೆ ನೆಚ್ಚಿನ ಮತ್ತು ಅಗತ್ಯ ತಾಣ ರಾಷ್ಟ್ರೀಯ ಪತ್ರಾಗಾರ ಸಂಕೀರ್ಣ. ಈಗ ಅಲ್ಲಿ ಹೊಸ ಕಟ್ಟಡಗಳ ನಿರ್ಮಾಣದ ನೆಪ ಒಡ್ಡಿ ಅನಿರ್ದಿಷ್ಟ ಕಾಲದವರೆಗೆ ಅಲ್ಲಿಗೆ ಪ್ರವೇಶ ನಿಷೇಧ ಮಾಡುವುದು ಎಷ್ಟು ಸರಿ? ಇದಕ್ಕೆ ಮೊದಲು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಬೇಕಿತ್ತು ಅಲ್ಲವೇ? ಸಾರ್ವಜನಿಕರ ಜೊತೆಗೆ ಮಾತುಕತೆ ನಡೆಸದೇ ಬೇಜವಾಬ್ದಾರಿ ಮತ್ತು ಅನಾಹುತಕಾರಿ ನಿರ್ಧಾರ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವವನ್ನು ಅವಮಾನಿಸಿದಂತಲ್ಲವೇ?

ಇವುಗಳಷ್ಟೇ ಅಲ್ಲದೆ ಅಲ್ಲಿ ಪರಿಸರ ಕಾರ್ಯಕರ್ತರೂ ಈ ಯೋಜನೆಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ನೂತನ ಕಟ್ಟಡಗಳು ತಲೆಯೆತ್ತಿದ ಮೇಲೆ ಸಾರ್ವಜನಿಕರಿಗೆ ಸೇರಲು ಮತ್ತು ಪ್ರತಿಭಟನೆ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕವನ್ನೂ ಹಲವು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಹಲವು ಚಿಂತಕರು, ಸಾಹಿತಿಗಳು, ವಿಜ್ಞಾನಿಗಳು ಪತ್ರ ಬರೆದು ಸದ್ಯಕ್ಕೆ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

ಈ ಯಾವ ಆತಂಕ-ಆಕ್ಷೇಪಗಳಿಗೂ ಸೊಪ್ಪು ಹಾಕದೆ ತಾನು ನಡೆದಿದ್ದೇ ದಾರಿ ಎಂಬ ಅಹಂಕಾರದಿಂದ ಕೊರೊನಾ ಬಿಕ್ಕಟ್ಟಿನ ನಡುವೆ ಸೆಂಟ್ರಲ್ ವಿಸ್ತಾ ಯೋಜನೆ ಒಕ್ಕೂಟ ಸರ್ಕಾರಕ್ಕೆ ಆದ್ಯತೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.

ಇನ್ನು ಭಾರತದಲ್ಲಿನ ವೈಭವಯುತ ಕಟ್ಟಡ ಮತ್ತು ಸ್ಮಾರಕಗಳ ಬಗ್ಗೆ ಒಂದೆರಡು ಮಾತು..

ಸಾಮಾನ್ಯವಾಗಿ ನಗರಗಳನ್ನು ವಿನ್ಯಾಸ ಮಾಡುವಾಗ ಎಲ್ಲರನ್ನೂ ಒಳಗೊಳ್ಳುವಂತೆ ಕಟ್ಟುವುದು ಧ್ಯೇಯವಾಗಬೇಕು. ’ಎಕ್ಸ್‌ಕ್ಲೂಸಿವ್‌ನೆಸ್ ಇಲ್ಲವಾಗುವಂತೆ ನೋಡಿಕೊಳ್ಳಬೇಕು. ಸಾಮಾಜೀಕರಣ ಅದರ ಧ್ಯೇಯವಾಗಬೇಕು. ನಗರಗಳಲ್ಲಿ ಕೆಲವು ಕಡೆ ಪಾರ್ಕ್‌ಗಳನ್ನು ಅಂತಹ ಧ್ಯೇಯದಿಂದ ಕಟ್ಟಲಾಗುತ್ತದೆ. ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳಿಗೂ ಅಂತಹ ಲಕ್ಷಣ ಇರುವುದು ಮುಖ್ಯ.

ಆದರೆ ಈಗ ವಿಧಾನಸೌಧವನ್ನೇ ನೋಡಿ. ಸಾಮಾನ್ಯನೊಬ್ಬನಿಗೆ ಅಲ್ಲಿ ಪ್ರವೇಶ ಪಡೆಯುವುದು, ಅಲ್ಲಿ ಯಾರನ್ನೋ ಭೇಟಿ ಮಾಡಿ ತನ್ನ ಕೆಲಸಕ್ಕಾಗಿ ಮಾತುಕತೆ ನಡೆಸುವುದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರೊಳಗೆ ಹೋಗುವುದೇ ಅಸಾಧ್ಯವಿರುವಾಗ, ಅದರ ಬಾಹ್ಯ ಸೌಂದರ್ಯಕ್ಕಾಗಿ ಇಡೀ ನಾಡಿನ ಪ್ರಜೆಗಳು ಏಕೆ ಹೆಮ್ಮೆ ಪಡಬೇಕು? ಆ ಭವ್ಯ ಸೌಧವು ತನ್ನದೂ ಹೌದೆಂದು ಸಾಮಾನ್ಯನೊಬ್ಬ ಹೇಗೆ
ಅಂದುಕೊಳ್ಳಬೇಕು?

ಈಗ ಕಟ್ಟಲಾಗುತ್ತಿರುವ ಸೆಂಟ್ರಲ್ ವಿಸ್ತಾದ ಬಗ್ಗೆಯೂ ಇಂತಹುವೇ ಅನೇಕ ಪ್ರಶ್ನೆಗಳು ಇವೆ. ಸದ್ಯಕ್ಕಂತೂ ಇದರ ನಿರ್ಮಾಣವನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮುಂದೆ ಸಾಂಕ್ರಾಮಿಕದ ಎಲ್ಲ ಬಾಧೆಗಳೂ ಕಳೆದ ಮೇಲೆ, ದೇಶದ ಆರ್ಥಿಕತೆ ಚೇತರಿಸಿಕೊಂಡ ಮೇಲೆ ಕಟ್ಟುವುದಾದರೆ ಅದು ಜನಸಾಮಾನ್ಯನಿಗೆ ಎಷ್ಟು ಅಕ್ಸೆಸಿಬಲ್ ಆಗಿರುತ್ತದೆ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸುವುದು ಮುಖ್ಯವಾಗುತ್ತದೆ.

ಇನ್ನು ನಾಗರಿಕರಾದ ನಾವು ರಾಜ ಮಹಾರಾಜರ ಸಾಮ್ರಾಜ್ಯಗಳದ್ದಾಗಲೀ, ಆಧುನಿಕ

ಸರ್ಕಾರಗಳದ್ದಾಗಲಿ ಅವುಗಳ ದಕ್ಷತೆಯನ್ನು-ಆಡಳಿತವನ್ನು, ಅವುಗಳು ಕಟ್ಟಿದ ವೈಭವಪೂರ್ಣ ಅರಮನೆಗಳು, ಅತ್ಯುನ್ನತ ವಾಸ್ತು ವಿನ್ಯಾಸದ ಕಟ್ಟಡಗಳಿಂದ ಅಳೆಯುವ ವಿವೇಚನಾರಹಿತ ಇತಿಹಾಸ ಪ್ರಜ್ಞೆಯನ್ನು ಕಳೆದುಕೊಳ್ಳಬೇಕು. ಸಾಮಾನ್ಯ ಜನರಿಗೆ ಸ್ಪಂದಿಸಿದ/ಕಡೆಗಣಿಸಿದ ಕಥೆಗಳನ್ನು ಹುಡುಕಿ ಇತಿಹಾಸ ಬರೆಯಬೇಕು, ಮುಂದಿನ ಪೀಳಿಗೆಗೆ ಅದು ಮಾನದಂಡವಾಗುವಂತೆ ನೋಡಿಕೊಳ್ಳಬೇಕು.

ಸೆಂಟ್ರಲ್ ವಿಸ್ತಾ ಕಟ್ಟಿದ ನಂತರ ಅದು ಭಾರತೀಯರು ಹೆಮ್ಮೆ ಪಡುವಂತಹ ಮಾರ್ವೆಲ್ ಆಗುತ್ತದೆ ಎಂಬ ನರೆಟಿವ್‌ಗಳನ್ನು ತಮ್ಮ ಮಹಾ’ಒಡೆಯ’ನ ಭಟ್ಟಂಗಿ ಮಾಧ್ಯಮಗಳು ತುತ್ತೂರಿ ಊದುತ್ತಿವೆ. ಬೇರೆ ಮುಖ್ಯ ಆದ್ಯತೆಗಳು ಇದ್ದಾಗ ಮೂರು ಸಾವಿರ ಕೋಟಿ ವ್ಯಯಿಸಿ ಕಟ್ಟಿದ ಪ್ರತಿಮೆಗೆ ಹೆಮ್ಮೆ ಪಟ್ಟಿದ್ದೇ ಸಾಕು ಎನ್ನುವಂತಾಗಿದೆ. ಅದೇ ರಾಜ್ಯದಲ್ಲಿ ಆರೋಗ್ಯ ಮೂಲ ಸೌಕರ್ಯಗಳ ಕೊರತೆಯಿಂದ ಸಾವಿರಾರು ಜನ ಕೊರೊನಾಗೆ ಚಿಕಿತ್ಸೆ ಸಿಗದೆ ಅಸುನೀಗುತ್ತಿದ್ದರೆ, ಅಂಕಿಅಂಶಗಳನ್ನು ತಿದ್ದುವುದರಲ್ಲಿ ಅಲ್ಲಿನ ಸರ್ಕಾರ ನಿರತವಾಗಿದೆ.

ಶಾ ಬಾಲುರಾಯರು ಅನುವಾದಿಸಿರುವ ಬ್ರೆಕ್ಟ್‌ನ ಈ ಪದ್ಯದ ಕೆಲವು ಸಾಲುಗಳು ಇಂತಹ ವೈಭವಪೂರ್ಣ ನಿರ್ಮಾಣಗಳ ಬಂಡವಾಳವನ್ನು ನಿಖರಾವಾಗಿ ಸಾರುತ್ತವೆ..

“ಸಪ್ತದ್ವಾರಗಳ ಥೀಬ್ ನಗರವನ್ನು ಯಾರು ಕಟ್ಟಿದರು?
ಪುಸ್ತಕಗಳು ರಾಜಮಹಾರಾಜರುಗಳ ಹೆಸರನ್ನು ಹೇಳುತ್ತವೆ.
ಏನು, ರಾಜಮಹಾರಾಜರು ಕಲ್ಲು ಹೊತ್ತರೆ?
ಬೇಬಿಲಾನ್ ನಗರ ಎಷ್ಟೊಂದು ಸಲ ನೆಲಸಮವಾಯಿತು.
ಅಷ್ಟು ಸಲವೂ ಅದನ್ನು ಯಾರು ಮತ್ತೆ ಮತ್ತೆ ಕಟ್ಟಿದರು?
ಸ್ವರ್ಣೋಜ್ವಲ ಲೀಮಾ ನಗರದಲ್ಲಿ ಕಲ್ಲು ಕುಟಿಗರು ವಾಸಿಸುತ್ತಿದ್ದುದಾದರೂ ಎಲ್ಲಿ?
ಚೀನಾದ ದೊಡ್ಡಗೋಡೆಯನ್ನು ಕಟ್ಟಿ ಮುಗಿಸಿದ ಸಂಜೆ ಅದನ್ನು ಕಟ್ಟಿದವರು ಎಲ್ಲಿ ಹೋದರು?
ಮಹಾನಗರ ರೋಮ್ ವಿಜಯತೋರಣಗಳಿಂದ ತುಂಬಿದೆ.
ಅವನ್ನು ಯಾರು ನಿಲ್ಲಿಸಿದರು? ಯಾರ ಮೇಲೆ ಸೀಸರರು ವಿಜಯ ಸ್ಥಾಪಿಸಿದರು?
ಹಾಡಿ ಹೊಗಳಿಸಿಕೊಂಡ ಬೈಜ್ಹಾಂಟಿಯಮ್‌ನಲ್ಲಿ ಆವಾಸಿಗಳಿಗೆಲ್ಲ ಅರಮನೆಗಳೇ
ಇದ್ದವೇ?
ದಂತಕತೆಗಳ ಅಟ್ಲಾಂಟಿಸ್ ಭೂಖಂಡದಲ್ಲಿ ಸಹ ಅದು ಮಹಾಸಾಗರದಲ್ಲಿ ಮುಳುಗಿಹೋದ ರಾತ್ರಿ ಮುಳುಗುತ್ತಿದ್ದವರು ಅವರವರ ಗುಲಾಮರನ್ನು ಅರಚಿ ಕರೆಯುತ್ತಿದ್ದರು.”

ಎಂದು ಪ್ರಾರಂಭವಾಗುವ ಪದ್ಯ ’ಎಷ್ಟೊಂದು ಸಂಗತಿಗಳು. ಎಷ್ಟೊಂದು ಪ್ರಶ್ನೆಗಳು’ ಎಂದು ಅಂತ್ಯವಾಗುತ್ತದೆ. ಈಗ ಸೆಂಟ್ರಲ್ ವಿಸ್ತಾ ಬಗ್ಗೆ ಕೂಡ ಎಷ್ಟೊಂದು ಕಾರಣಗಳಿಗೆ ’ಎಷ್ಟೊಂದು ಪ್ರಶ್ನೆಗಳು’. ಆದರೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವವರು ಕಳೆದುಹೋಗಿದ್ದಾರೆ ತಮ್ಮ ದಂತಗೋಪುರದಲ್ಲಿ!

  • ಗುರುಪ್ರಸಾದ್ ಡಿ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...