ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ತೀವ್ರ ವಾಗ್ವಾದದ ನಂತರ, ರಾಜ್ಯಸಭೆಯು ಸೋಮವಾರ ಮತ್ತು ಮಂಗಳವಾರ ಇದೇ ವಿಷಯದಲ್ಲಿ ಚರ್ಚೆ ನಡೆಸಲು ನಿರ್ಧರಿಸಿದೆ. ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ವಿರೋಧ ಪಕ್ಷಗಳು ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಚರ್ಚೆ ನಡೆಯಲಿದೆ.
ಬಿಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಇಂದು ಬೆಳಗ್ಗೆ 11 ಗಂಟೆಗೆ ಮೇಲ್ಮನೆಯಲ್ಲಿ ಚರ್ಚೆಯನ್ನು ಪ್ರಾರಂಭಿಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರ ನೀಡುವ ನಿರೀಕ್ಷೆಯಿದೆ.
ಆಡಳಿತಾರೂಢ ಬಿಜೆಪಿಯ ಇತರ ಪ್ರಮುಖ ಭಾಷಣಕಾರರಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಹರ್ದೀಪ್ ಸಿಂಗ್ ಪುರಿ, ಸಂಸದರಾದ ಸುಧಾಂಶು ತ್ರಿವೇದಿ, ಭೂಪೇಂದ್ರ ಯಾದವ್ ಮತ್ತು ಬ್ರಿಜ್‌ಲಾಲ್ ಸೇರಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ ಮೇಲಿನ ಚರ್ಚೆಯು ಪ್ರತಿಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ಆದರೂ, ಅದಾನಿ ವಿವಾದ, ಜಾರ್ಜ್ ಸೊರೊಸ್ ಆರೋಪಗಳು ಮತ್ತು ಧನಕರ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ಸದನಗಳ ಕಲಾಪಗಳು ಅಡ್ಡಿಪಡಿಸಿದವು.
ಕಳೆದ ವಾರ, ಧನಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ವಿರೋಧ ಪಕ್ಷದ ಸಂಸದರು ಬಿಜೆಪಿ ಶಾಸಕರೊಂದಿಗೆ ವಾಗ್ದಾಳಿ ನಡೆಸಿದ್ದರಿಂದ ರಾಜ್ಯಸಭೆಯು ಭಾರಿ ಕೋಲಾಹಲ ಮತ್ತು ಸದನ ಮುಂದೂಡಿಕೆಗಳನ್ನು ಕಂಡಿತು. ರಾಜ್ಯಸಭೆಯ ಅಧ್ಯಕ್ಷರು ಮತ್ತು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವಿನ ವಾಗ್ವಾದದ ನಂತರ ಶುಕ್ರವಾರದ ಅಧಿವೇಶನವನ್ನು ಗಂಟೆಗೂ ಮೊದಲು ಮುಂದೂಡಲಾಯಿತು.
ಸದನದ ಕೊನೆಯ ಅಧಿವೇಶನದ ಸಂದರ್ಭದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಧನಕರ್, “ಇದು ನನ್ನ ವಿರುದ್ಧದ ಅಭಿಯಾನವಲ್ಲ. ಆದರೆ, ನಾನು ಸೇರಿರುವ ರೈತ ಸಮುದಾಯದ ವಿರುದ್ಧ. ರೈತನ ಮಗನಾಗಿ ನಾನು ದೌರ್ಬಲ್ಯವನ್ನು ತೋರಿಸುವುದಿಲ್ಲ” ಎಂದಿದ್ದರು.
ತೃಣಮೂಲ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಡೆರೆಕ್ ಒ’ಬ್ರೇನ್ ಅವರು ಬಿಜೆಪಿಯನ್ನು ದೂಷಿಸಿದರು. ರಾಜ್ಯಸಭೆಯ ಸುಗಮ ಕಾರ್ಯನಿರ್ವಹಣೆಗೆ ಬಿಜೆಪಿ ಪಕ್ಷವು ಅಡ್ಡಿಪಡಿಸಿದೆ ಎಂದು ಪ್ರತಿಪಾದಿಸಿದರು.
“ಬಿಜೆಪಿ ಸಂಸತ್ತಿಗೆ ಅಡ್ಡಿಪಡಿಸದಿದ್ದರೆ, ಸದನವನ್ನು ನಡೆಸಬೇಕು ಮತ್ತು ಸಂವಿಧಾನದ ಮೇಲಿನ ಚರ್ಚೆಯನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಪ್ರತಿಪಕ್ಷಗಳು ಜನರ ಸಮಸ್ಯೆಗಳ ಮೇಲೆ ಕೇಂದ್ರೀಕೃತ ಚರ್ಚೆಗಳನ್ನು ಬಯಸುತ್ತವೆ” ಎಂದು ಒ’ಬ್ರೇನ್ ಹೇಳಿದರು.
ಲೋಕಸಭೆಯು ತನ್ನ ಸಂವಿಧಾನದ ಚರ್ಚೆಯನ್ನು ಡಿಸೆಂಬರ್ 14 ರಂದು ಮುಕ್ತಾಯಗೊಳಿಸಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರವು ಸಂವಿಧಾನವನ್ನು ಬುಡಮೇಲು ಮಾಡಿದೆ ಎಂದು ಆರೋಪಿಸಿತು. ತಮ್ಮ ಉತ್ತರದಲ್ಲಿ, ಪ್ರಧಾನಿ ಮೋದಿ ಅವರು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ “ಸಂವಿಧಾನವನ್ನು ವಿರೂಪಗೊಳಿಸುತ್ತಿದೆ” ಎಂದು ಆರೋಪಿಸಿದರು.
“ಕಾಂಗ್ರೆಸ್ ತನ್ನ ಅಧಿಕಾರದ ದುರಾಸೆಯಲ್ಲಿ ರಕ್ತದ ರುಚಿ ನೋಡಿದೆ” ಎಂದು ಅವರು ಹೇಳಿದರು. 2014 ರಿಂದ ಅವರ ಸರ್ಕಾರದ ನೀತಿಗಳು ಭಾರತದ ಏಕತೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂವಿಧಾನದ ದೃಷ್ಟಿಗೆ ಹೊಂದಿಕೆಯಾಗುತ್ತವೆ ಎಂದು ಪ್ರತಿಪಾದಿಸಿದರು.
ಡಿಸೆಂಬರ್ 16 ಮತ್ತು 17 ರಂದು ನಡೆಯಲಿರುವ ರಾಜ್ಯಸಭೆಯ ಚರ್ಚೆಯು ಬಿಸಿಯಾಗಿ ಪರಿಣಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ; ಉಪವಾಸ ಕೊನೆಗೊಳಿಸುವಂತೆ ರೈತ ನಾಯಕ ದಲ್ಲೆವಾಲ್ ಅವರಲ್ಲಿ ಪಂಜಾಬ್ ಡಿಜಿಪಿ-ಎಂಎಚ್‌ಎ ಮನವಿ


