ಪಹಲ್ಗಾಮ್‌ನಲ್ಲಿ ನಡೆದ ಭದ್ರತಾ ಲೋಪಗಳ ಕುರಿತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿದರು. “ಗೃಹ ಸಚಿವ ಅಮಿತ್ ಶಾ ಅವರೇ ದಾಳಿಯ ಹೊಣೆ ಹೊರಬೇಕು” ಎಂದು ಹೇಳಿದರು.
ಮೋದಿ ಸರ್ಕಾರ ದುರಹಂಕಾರಿಯಾಗಿದೆ, ವಿರೋಧ ಪಕ್ಷದ ಪತ್ರಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದ ನಂತರ, ಬಿಹಾರದಲ್ಲಿ ಪ್ರಚಾರ ಮಾಡುವ ಬದಲು ಪಹಲ್ಗಾಮ್ ಮಾರಕ ದಾಳಿಗೆ ಸಂಬಂಧಿಸಿದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಹಾಜರಿರಬೇಕಿತ್ತು ಎಂದು ಖರ್ಗೆ ಹೇಳಿದರು.
ದಾಳಿಗಳನ್ನು ನಿಲ್ಲಿಸುವಲ್ಲಿ ಸರ್ಕಾರ ತನ್ನ ‘ಲೋಪಗಳು ಮತ್ತು ವೈಫಲ್ಯ’ವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ ಅವರು, ಹೊಣೆಗಾರಿಕೆಗೆ ಒತ್ತಾಯಿಸಿದರು.
“ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಪಹಲ್ಗಾಮ್‌ನಲ್ಲಿಯೇ ಐದು ಭಯೋತ್ಪಾದಕ ದಾಳಿಗಳು ನಡೆದಿವೆ. ಆ ದಾಳಿಗಳಿಂದ ಅವರು ಯಾವುದೇ ಪಾಠ ಕಲಿತಿಲ್ಲ” ಎಂದು ಖರ್ಗೆ ರಾಜ್ಯಸಭೆಯಲ್ಲಿ ಹೇಳಿದರು.
“ಪಹಲ್ಗಾಮ್ ದಾಳಿಗೆ ಯಾರು ಹೊಣೆ; ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು” ಎಂದು ಖರ್ಗೆ ಹೇಳಿದರು.
“ದಾಳಿಗೆ ಕೆಲವು ದಿನಗಳ ಮೊದಲು ಪ್ರಧಾನಿ ಮೋದಿ ತಮ್ಮ ಕಾಶ್ಮೀರ ಪ್ರವಾಸವನ್ನು ರದ್ದುಗೊಳಿಸಿದ್ದರು. ಅಪಾಯವಿದೆ ಎಂದು ಅವರಿಗೆ ತಿಳಿದಿದ್ದರೆ, ಜನರನ್ನು ಏಕೆ ಎಚ್ಚರಿಸಲಿಲ್ಲ” ಎಂದು ಖರ್ಗೆ ಕೇಳಿದರು.
ಪಹಲ್ಗಾಮ್ ದಾಳಿಯ ಮೂವರು ಭಯೋತ್ಪಾದಕರು ಹತರಾಗಿದ್ದಾರೆ: ಕೇಂದ್ರ ಗೃಹ ಸಚಿವ ಅಮಿತ್ ಶಾ


