Homeಮುಖಪುಟಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ...

ಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ…

ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

- Advertisement -
- Advertisement -

ಪುಟಕಿಟ್ಟ ಪುಟಗಳು

  • ಯೋಗೇಶ್‌ ಮಾಸ್ಟರ್‌

‍“ನಾವು ಹೈಟೆಕ್ ಯುಗದಲ್ಲಿದ್ದೇವೆ. ಇಷ್ಟೊಂದು ಮುಂದುವರಿದಿದ್ದೇವೆ. ಹಳ್ಳಿಹಳ್ಳಿಗೂ ಸ್ಮಾರ್ಟ್‌ ಫೋನ್‌ಗಳು ಬಂದಿವೆ” ಎಂದು ತನ್ನ ಮಾತನ್ನು ಪ್ರಾರಂಭಿಸುವ ಲೇಖಕಿ ಎತ್ತುವ ಪ್ರಶ್ನೆ ಎಂದರೆ ಮಾನಸಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಸಮಾಜ ಹೇಗೆ ನೋಡುತ್ತದೆ ಎಂದು. ಮಾನಸಿಕ ಖಾಯಿಲೆ ಇರುವವರೊಂದಿಗೆ ಯಾವ ರೀತಿ ವರ್ತಿಸಬೇಕು, ಅವರನ್ನು ಹೇಗೆ ನೋಡಬೇಕು ಎಂಬ ಅರಿವು ನಮ್ಮ ಸಮಾಜಕ್ಕಿಲ್ಲ ಎಂಬುದು ಲೇಖಕಿಯ ಕೊರಗು ಮತ್ತು ಅದು ನಿಜವೂ ಕೂಡ. ಸ್ಥೂಲವಾಗಿ ಕಾಣುವ ದೈಹಿಕ ಅಸಮರ್ಥತೆಯನ್ನು ಗುರುತಿಸಲು ಸಾಧ್ಯ ಮತ್ತು ಸಿಗುವಂತಹ ಪ್ರೋತ್ಸಾಹದಿಂದ ಅವರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೂ ಸಾಧ್ಯ. ಆದರೆ ಮಾನಸಿಕ ಸಮಸ್ಯೆ ಇರುವವರು ಹಾಗೆ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನ್ಮುಖಿಯಾಗಿ ಹೋರಾಡಬೇಕೆಂದರೆ ಗುಣಮುಖವಾಗುವ ಲಕ್ಷಣಗಳನ್ನು ತೋರಬೇಕು ಎಂದು ಅಮೃತಾ ರಕ್ಷಿದಿ ಹೇಳುವ ಕಾರಣವೇನೆಂದರೆ ತಾನೇ ಸ್ವತಃ ಪಾರಾನಾಯ್ಡ್ ಸ್ಕೀಜೋಫ್ರೇನಿಯಾದಿಂದ ಬಳಲಿದ್ದ ಅನುಭವಗಳು.

ಅಮೃತಯಾನ ಐದು ಪುಸ್ತಕಗಳ ಗುಚ್ಛ. ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

ನಮ್ಮ ಮನೆಯ ಅಥವಾ ನೆರೆಮನೆಯ ಹೆಣ್ಣುಮಗುವೊಂದು ನಮ್ಮೊಡನೆ ಕುಳಿತುಕೊಂಡು ಆಪ್ತವಾಗಿ ತನ್ನ ಅನುಭವಗಳನ್ನು, ಕನಸುಗಳನ್ನು, ತನ್ನ ಬಾಧೆಗಳನ್ನು ಹಂಚಿಕೊಂಡಷ್ಟು ಸಹಜವಾದ ಬರವಣಿಗೆ. ಈ ಲೇಖಕಿ ಚಿತ್ರಕಲಾವಿದೆಯೂ ಆಗಿರುವ ಛಾಯೆಯನ್ನು ತನ್ನ ಬರಹದಲ್ಲಿ ಓದುಗರಿಗೆ ಚಿತ್ರಣವನ್ನು ಕಟ್ಟಿಕೊಡುವುದು ಬರಹವನ್ನು ಆಪ್ತವಾಗಿಸುತ್ತದೆ, ನಮ್ಮನ್ನೂ ಆ ಕಾಲಕ್ಕೆ, ದೇಶಕ್ಕೆ, ಸಂಗತಿಗಳಿಗೆ ಕರೆದೊಯ್ಯುತ್ತದೆ.

ರಕ್ಷಿದಿಯಲ್ಲಿರುವ ತಮ್ಮ ಮನೆ, ಪರಿಸರ, ಅದರ ವಿವರಣೆಗಳೆಲ್ಲವೂ ತೆರೆದುಕೊಳ್ಳುತ್ತಾ ಬರಿಯ ಚಿತ್ರಗಳನ್ನು ಮಾತ್ರವಲ್ಲದೇ ಗಾಳಿಗಂಧವನ್ನು ಉಸಿರಾಡುವಂತೆ ಮಾಡುತ್ತದೆ. ತನ್ನ ಅಪ್ಪ, ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯನ ಜೊತೆ ಜೊತೆಗೆ ಇತರ ಸಹಜೀವಿಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ಪರಿಚಯವು ಸ್ಥೂಲವಾಗಿರದೇ ಭಾವುಕವಾಗಿಯೂ ಮತ್ತು ಪದರಗಳಾಚೆ ನೋಡಿದರೆ ಮಾನಸಿಕ ವ್ಯಕ್ತಿತ್ವಗಳನ್ನೂ ಸೂಚಿಸಿರುವುದನ್ನು ಕಾಣಬಹುದು. ಸಣ್ಣದು ಎನಿಸಬಹುದಾದ ಸಂಗತಿಗಳೆಲ್ಲವೂ ಮನನಕ್ಕೆ ಒಳಗಾಗಿ, ಚಿಂತನದಲ್ಲಿ ಎರಕ ಹೊಯ್ದು ಸೂಕ್ಷ್ಮ ಸಂವೇದನೆಯಲ್ಲಿ ಅಚ್ಚುಹೊಯ್ದಂತೆ ಮನದೊಳಗೆ ಪ್ರವೇಶಿಸುತ್ತದೆ. ಅಮೃತಾ ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವಂತೆ ಸಂಗತಿಗಳನ್ನು ವಿವರಿಸಿರುವುದು ಅನನ್ಯ.

ತಾನು ಕೇಳಿದ ಕತೆಗಳು, ತಾನು ಹಾದು ಹೋಗಬೇಕಾದ ಸಾಂಸ್ಕೃತಿಕ ಸಂಗತಿಗಳನ್ನು ಬರಿದೇ ಸಾಕ್ಷೀಕರಿಸುವುದಕ್ಕಿಂತ ಅದನ್ನು ದಾಖಲು ಮಾಡುವಾಗ ವಹಿಸಿರುವ ಎಚ್ಚರದಲ್ಲಿ ಸಾಹಿತ್ಯದ ತಂತ್ರಗಾರಿಕೆಯ ಬಗ್ಗೆ ಹೊಂದಿರುವ ಪರಿಣತಿಯು ಬೆರಗುಗೊಳಿಸುತ್ತದೆ. ಆ ಬೆರಗಿನ ಕಾರಣವೇ ಪ್ರಾಮಾಣಿಕ ನಿವೇದನೆ.

ಅಮೃತಾ ತನ್ನ ತಂದೆಯ ದೆಸೆಯಿಂದ ದೊರಕಿದ ಸಾಹಿತ್ಯದ ಮತ್ತು ಸಾಂಸ್ಕೃತಿಕ ಪರಿಸರವನ್ನು ಉಸಿರಾಡಿರುವುದರ ಉಲ್ಲೇಖಗಳು ಸಾಧಾರಣವಲ್ಲ. ತನಗೆ ಲಭ್ಯವಾದ ಓದು, ಚಿತ್ರಕಲೆಯ ಅಭ್ಯಾಸ, ಸಾಹಿತಿ, ರಂಗಕರ್ಮಿಗಳು ಮತ್ತು ನಿರ್ದೇಶಕರೊಡನೆ ಒಡನಾಟ, ರಂಗಭೂಮಿಯ ಅನುಭವ; ಹೀಗೆ ಎಲ್ಲವನ್ನೂ ಪ್ರಸ್ತುತಪಡಿಸುವ ಆ ಬಗೆಯಲ್ಲಿ ಓದುಗರನ್ನೂ ಜೊತೆಗಿರಿಸಿಕೊಂಡು ಒಂದು ಪಕ್ಕದಲ್ಲಿ ಕೂರಿಸಿಕೊಂಡೋ ಅಥವಾ ಕಿಟಕಿಯಲ್ಲಿ ನಿಂತು ನೋಡಿಕೊಂಡಿರುವ ಹಾಗೆ ಮಾಡಿರುವುದು ಸಾಹಿತ್ಯದ ತಂತ್ರಗಾರಿಕೆ ಎನ್ನುವುದಕ್ಕಿಂತ ಅಮೃತಾ ದೃಷ್ಟಿಯಲ್ಲಿದ್ದ ಸರಳ ಮತ್ತು ಪ್ರಾಮಾಣಿಕ ಧೋರಣೆ ಇರಬಹುದು ಎಂದು ಭಾಸವಾಗುತ್ತದೆ.

ತನ್ನ ಅನುಭವಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಹಾಗೆ, ತನಗೆ ಬರುತ್ತಿದ್ದ ಕೋಪವನ್ನು, ಅವರಿವರ ಟೀಕೆ ಮತ್ತು ರಗಳೆಗಳು ತಂದೊಡ್ಡುತ್ತಿದ್ದ ಉಪದ್ರವಗಳನ್ನೂ ಹೇಳುತ್ತಲೇ, ಅವರ ಮಾನಸಿಕ ಸ್ಥಿತಿಗಳನ್ನು, ವರ್ತನೆಗಳ ಪ್ರತಿವರ್ತನೆಗಳ ಸೂಕ್ಷ್ಮತೆಗಳನ್ನು ವಿವೇಚಿಸುವರು.

ಭ್ರಮೆ ಮತ್ತು ನಿಜಗಳ ನಡುವಿನ ಸಲ್ಲಾಪ ಮತ್ತು ಸಂಘರ್ಷಗಳು, ಮೂರ್ತ ಮತ್ತು ಅಮೂರ್ತಗಳನ್ನು ಕಾಣುವ ಪ್ರತಿಮೆಗಳಲ್ಲೇ ಎರಕ ಹುಯ್ಯುವಂತಹ ಮನಶಾಸ್ತ್ರೀಯ ದೃಷ್ಟಿಕೋನಗಳು, ಹೊರಗಿನ ಮತ್ತು ಒಳಗಿನ ತಾಕಲಾಟದಲ್ಲಿ ಡೋಲಾಯಮಾನವಾದ ಭಾವನೆಗಳ ಭಿತ್ತಿಗಳು; ಎಲ್ಲವೂ ತನ್ನ ತಾನು ಸಾಕ್ಷೀಕರಿಸಿಕೊಂಡಿರುವ ಒಂದು ಮಹತ್ವದ ದಾಖಲೆ ಈ ಅಮೃತಯಾನ.

ಅಮೃತ ತಾನೇ ಹೇಳಿರುವಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅರಿಯುವ ಮತ್ತು ಉಪಚರಿಸುವ ಬಗೆಯನ್ನು ಸ್ಪಷ್ಟೀಕರಿಸಿಕೊಂಡಿಲ್ಲದ ಸ್ಥಿತಿ ನಮ್ಮ ಭಾರತದಲ್ಲಿದೆ. ಅದಕ್ಕೆಂದು ಇರುವ ವೈಜ್ಞಾನಿಕ ಮತ್ತು ವೈದ್ಯಕೀಯ ಸೌಲಭ್ಯವು ಇರುವ ಸಮಸ್ಯೆಗಳ ಗಾತ್ರದ ಮುಂದೆ ಬಹಳ ಪುಟ್ಟ ಕಣವಾಗಿದೆ. ಅಮೃತಾಳ ಬರಹ ಹಲವು ರೀತಿಗಳಲ್ಲಿ ಕಣ್ಣು ತೆರೆಸುವಂತದ್ದು.

ಬರಿಯ ತನ್ನ ನಲಿವಿನ ಪ್ರದರ್ಶನ ಮತ್ತು ನೋವಿನ ನಿವೇದನೆಯ ದಾಖಲೆಯಾಗಿರದೇ ಆಕೆಯದಂತಹ ಹಲವು ಬದುಕುಗಳ ಮತ್ತು ಜೀವಿಗಳ ಕಡೆಗೆ ಗಮನ ನೀಡಲು ಕೈತೋರುವಂತಿದೆ.

ಅಮೃತಾ ಈಗ ನಮ್ಮೊಡನಿಲ್ಲ. ಅವಳೇ ಹೇಳಿರುವಂತೆ,

“1992ರಲ್ಲಿ ಅಮೃತಾ ಎಂಬ ಕಾಲಯಾನಿ ನಮ್ಮ ಉದರದ ಮೂಲಕ ಭೂಸ್ಪರ್ಶವನ್ನು ಮಾಡಿದಳು. ಅವಳ ಇಪ್ಪತ್ತೈದು ವರ್ಷಗಳ ಸುದೀರ್ಘ ಕಥಾನಕವನ್ನು ಈಗ ನಿಮ್ಮ ಮುಂದಿಟ್ಟಿದ್ದಾಳೆ”. ಪುಸ್ತಕ ಬಿಡುಗಡೆಯ ಸಿದ್ಧತೆಯಾಗುತ್ತಿದ್ದಂತೆ, ಅವಳ ಬದುಕಿನ ಆದ್ಯತೆಯೇ ಬದಲಾಗುತ್ತ ಹೋಯಿತು. ಅವಳ ಕೊನೆಯ ಚಿತ್ರವೂ ಅಪೂರ್ಣ. ಗೆಳೆಯರೊಬ್ಬರ ಮಾತಿನಂತೆ “ಅಪೂರ್ಣತೆಯಲ್ಲಿಯೇ ಆಕೆಯ ಇರುವಿಕೆಯನ್ನು ಕಾಣುವ ಅವಕಾಶವನ್ನು ಉಳಿಸಿ ಹೋಗಿದ್ದಾಳೆ.”

ಆದರೆ ಟೇಬಲ್ಲಿನ ಮೇಲೆ ಸದಾ ಕಾಣುವಂತೆ ಕುಳಿತಿರುವ ಅಮೃತಾಯಾನ ಬರಿಯ ಪುಸ್ತಕಗಳಾಗಿರದೆ ಕೈಗೆಟುಕಿದವರನ್ನೆಲ್ಲಾ ತನ್ನೂರನ್ನು, ಮನೆಯನ್ನು, ಚಟುವಟಿಕೆಗಳನ್ನು, ಆಪ್ತರನ್ನು ತೋರಲು ಕರೆದುಕೊಂಡು ಹೋಗುತ್ತಿರುತ್ತಾಳೆ. ತನ್ನ ಅಂತರಂಗದ ಕದವನ್ನು ತೆರೆದು ತೋರುವ ನೆಪದಲ್ಲಿ ನಮ್ಮಂತರಂಗವನ್ನೂ ಇಣುಕಿ ನೋಡಿಕೊಳ್ಳುವಂತೆ ಮಾಡುತ್ತಾಳೆ. ತುಟಿಯ ಮೇಲೆ ನಗು ತರುತ್ತಾಳೆ. ಕಂಗಳಲ್ಲಿ ಕಂಬನಿ ತರಿಸುತ್ತಾಳೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...