Homeಮುಖಪುಟಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

- Advertisement -
- Advertisement -

ಬ್ರಿಟನ್‌ನ ಪ್ರಜೆಗಳಿಗೆ 2009 ಅನ್ನುವುದು ಐತಿಹಾಸಿಕ ವರ್ಷ. ಅದು ಯಾಕ ಅಂದ್ರ, ಅಲ್ಲಿ ಒಂದು ಐತಿಹಾಸಿಕ ಘಟನೆ ನಡೀತು.

ಆ ವರ್ಷದ ಸುರುವಾತಿಗೆ ಅಲ್ಲಿನ ರಾಜ ವಂಶಸ್ಥ ರಾಜಕುಮಾರ ವಿಲಿಯಮ್ ಅವರು ತಮ್ಮ ಪದವಿ ಮುಗಿಸಿ ಬ್ರಿಟಿಷ್ ವಾಯುಸೇನೆ ಸೇರಿಕೊಂಡರು, ಅದರ ತುರ್ತು ಸೇವೆ ಹಾಗೂ ರಕ್ಷಣೆ ವಿಭಾಗದ ಹುಡುಕು- ಮತ್ತು – ಉಳಿಸು ವಿಭಾಗದ ಫ್ಲೈಟ್ ಲೆಫ್ಟ್ ನೆಂಟ್ ಆಗಿ ಕೆಲಸ ಮಾಡಿದರು.

ಆ ವರ್ಷದ ಕೊನೆಗೆ ಅವರು ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡರು.

ನಮ್ಮ ಧಾರವಾಡ ಕಡೆ ಇಂಥವುಕ್ಕೆಲ್ಲಾ ಯಾಕ ಐತಿಹಾಸಿಕ ಘಟನೆ ಅಂತೇವಿ ಅಂದ್ರ, ನಾವು ಆ ಕಾಲದ ಬಗ್ಗೆ ಮಾತಾಡೋವಾಗ, ನಾವು ಆ ಕಾಲಕ್ಕ ಹೋಗಿ- ನೋಡರೆಪಾ ಇದು ಹಿಂಗ ಐತಿ, ಅದು ಹಂಗ ಐತಿ ಅಂತ ಹೇಳತೇವಿ. ಅದಕ್ಕ ಅದು ಐತಿಹಾಸಿಕ.

ಆದರ ನಾ ಹೇಳ್ತಾ ಇರೋದು ಇಂಗ್ಲಂಡಿನ ಐತಿಹಾಸಿಕ ಘಟನೆ ವಿಲಿಯಮ್ ಅವರ ನೌಕರಿ ಅಥವಾ ತಲೆಗೂದಲು ಬಿಡುವ ಶೈಲಿಯ ಸುದ್ದಿ ಅಲ್ಲ.

ಅಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟು ಅನ್ನುವುದು ಶುರು ಆಯಿತು. ಹಂಗಅಂದ್ರ ಒಂದು ಸಾವಿರ ವರ್ಷ ಇತಿಹಾಸ ಇರೋ ಇಂಗ್ಲೀಷ್ ನ್ಯಾಯದಾನ ವ್ಯವಸ್ಥೆಗೆ ಮುಖ್ಯಸ್ಥರು ಅನ್ನುವವರು ಇರಲೇ ಇಲ್ಲೇನು? ಮೇಲ್ಮನವಿ ಅನ್ನೋ ಅವಕಾಶ ಇರಲೇ ಇಲ್ಲೇನು?

ವಿಪರೀತ ಶ್ರೇಣೀಕೃತ ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರೋ ಭಾರತೀಯರಿಗೆ ಈ ಥರ ಸಂದೇಹ ಬರೋದು ಸಹಜ. ಅದರಾಗ ನಾವು ನಮ್ಮ ನ್ಯಾಯಾಂಗ ಬ್ರಿಟಿಷರ ಮಾದರಿಯನ್ನು ಆಧರಿಸಿದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳೋರು. ಹಂಗಾಗಿ ನಮಗ ಒಂದು ದಾರಿ ತೋರಿಸಿ ಅವರು ಇನ್ನೊಂದು ಹಿಡಿದರೇನಪ್ಪಾ? ಅಂತ ಅನ್ನಿಸಿಯೇ ಅನ್ನಿಸತದ.

ಮಜಾ ಏನು ಅಂದ್ರ, ಇವೆಲ್ಲಾ ಇತ್ತು. ಆದರ ಅದರ ಸ್ವರೂಪ ಬೇರೆ ಇತ್ತು. ಆಶ್ಚರ್ಯಕರ ಸಂಗತಿ ಏನು ಅಂದ್ರ 1065ಇಸವಿಯಲ್ಲಿ ಶುರು ಆದ ಬ್ರಿಟನ್ ನ್ಯಾಯದಾನ ವ್ಯವಸ್ಥೆ ಒಳಗ ಸುಪ್ರೀಂ ಕೋರ್ಟು ಅನ್ನೋ ಪ್ರತ್ಯೇಕ ಅಂಗ ಇರಲೇ ಇಲ್ಲ.

ಅಲ್ಲಿನ ಸಂಸತ್ತಿನ ಮೇಲ್ಮನೆ ಸದಸ್ಯರು ಅಲ್ಲಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನ್ಯಾಯಾಂಗದ ಸ್ವಾತಂತ್ರ‍್ಯವನ್ನು ಹಾಗೂ ನಮ್ಮ ರಾಜ್ಯಸಭೆಗೆ ನೇಮಕವಾಗುವ ಪುಣ್ಯಾತ್ಮರ ನವರಂಗೀ ವ್ಯಕ್ತಿತ್ವಗಳನ್ನ ಕಂಡ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಎಂಪಿ ಆಗೋವಂತ ಮನುಷ್ಯರು ನ್ಯಾಯಾಧೀಶರಾಗುವುದು, ನ್ಯಾಯ ನಿರ್ಣಯ ಮಾಡುವುದು ಹೆಂಗ ಸಾಧ್ಯ’ ಅಂತ ನಾವು ತಲಿ ಕೆರಕೋತ ಕೂಡಬಹುದು.

ಆದರ ಅಲ್ಲಿ ಹಂಗ ಆತು. ಅಷ್ಟ ಅಲ್ಲ, ಅದು ಒಂದು ಸಾವಿರ ವರ್ಷ ನಡೀತು. ಹಂಗ ಅಂತ ಅಲ್ಲಿನ ನ್ಯಾಯಾಧೀಶರು ಆಯೋಗ್ಯರಾಗಿರಲಿಲ್ಲ. ಭಾರತದ ದಿಕ್ಕು ಬದಲಿಸಿದ ಅನೇಕ ತೀರ್ಪುಗಳು ಅಲ್ಲಿಂದ ಹೊರಗಬಿದ್ದವು.

ಮೂರು ನೂರು ವರ್ಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ ಅನೇಕ ಜನ ವಿರೋಧಿ ಆದೇಶಗಳನ್ನು ಪ್ರಿವಿ ಕೌನ್ಸಿಲ್ ತಳ್ಳಿಹಾಕಿತು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಬೇಕು ಅಂತ ಬ್ರಿಟಿಷ್ ಸಂಸದರು ಪಾಸು ಮಾಡಿದ ಅನೇಕ ಕ್ರೂರ ಕಾನೂನುಗಳನ್ನ ಸ್ವಾಭಾವಿಕ ನ್ಯಾಯ ಹಾಗೂ ಸಿದ್ಧ ನ್ಯಾಯ ಪ್ರಕ್ರಿಯೆಯ ವಿರುದ್ಧವಾಗಿ ಇರೋ ಕಾರಣಗಳಿಗೆ ರದ್ದು ಮಾಡಿತು.

ಉದಾಹರಣೆಗೆ ರಾಜಾ ರಾಮ್ ಮೋಹನ್ ರಾಯ ಅವರು ಸತಿ ಪದ್ಧತಿ ನಿಷೇಧ ಮಾಡಲು ಹೋರಾಟ ನಡೆಸಿದಾಗ ಅಲ್ಲಿನ ‘ಪ್ರಿವಿ ಕೌನ್ಸಿಲ್’ ಅಂದ್ರ ಅಂದಿನ ಸುಪ್ರೀಂ ಕೋರ್ಟು, ನಿಷೇಧವನ್ನು ಎತ್ತಿ ಹಿಡಿಯಿತು. ರಾಮ್ ಮೋಹನ್ ರಾಯ ಅವರ ಬೆಂಬಲಕ್ಕ ನಿಂತುಕೊಂಡಿತು.

‘ಮೊಹರಿ ಬೀಬಿ ವಿ. ಧರ್ಮ ದಾಸ ಘೋಷ್’ ಎನ್ನುವ ಪ್ರಕರಣದಾಗ ವಯಸ್ಕರೊಂದಿಗೆ ಮಾತು ಕರಾರು ಸಾಧ್ಯ. ಚಿಕ್ಕ ಮಕ್ಕಳೊಂದಿಗೆ ಕರಾರು ಮಾಡಿಕೊಂಡರೆ ಅದು ಗೈರು ಕಾನೂನಿ ಅಂತ ಹೇಳಿತು. ಇಡೀ ಭಾರತೀಯ ಕರಾರು ಕಾನೂನು ಸಂಹಿತೆ ನಿಂತಿರೋದು ಈ ತೀರ್ಪಿನ ಮೇಲೆಯೇ.

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

ನಮ್ಮಲ್ಲಿ ನ್ಯಾಯಾಧೀಶರು ನ್ಯಾಯಾಧೀಶರನ್ನ ನೇಮಿಸುತ್ತಾರೆ. ಅದು ಅಲ್ಲದೇ ನ್ಯ್ಯಾಯಾಧೀಶರ ವಿರುದ್ಧ ಏನಾದರೂ ದೂರು ಬಂದರೆ ಅದನ್ನ ಅವರೇ ವಿಚಾರಣೆ ಮಾಡಿ ಅವರೇ ತೀರ್ಪು ಕೊಡ್ತಾರ. ಇದು ಯಾಕ್ ಅಂದ್ರ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಡಳಿತ ವ್ಯವಸ್ಥೆಯ ನಿಯಂತ್ರಣ ಇರಬಾರದು. ಅವರು ತಮ್ಮ ಆತ್ಮ ನಿರೀಕ್ಷಣೆಯಿಂದ ತಾವೇ ತಮ್ಮನ್ನು ತಿದ್ದಿಕೊಳ್ಳಲಿ, ಅಂತ ಹೇಳಿ ಮಾಡಿರುವ ವ್ಯವಸ್ಥೆ.

ಅವರನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದು ಆದರೆ ಸಬೂತು ಇಲ್ಲದೇ ಟೀಕೆ ಮಾಡಬಾರದು. ಅವರ ಕೆಲಸದ ಬಗ್ಗೆ ಸದುದ್ದೇಶದ ಟಿಪ್ಪಣಿ ಮಾಡಬಹುದು, ದುರುದ್ದೇಶಪೂರಿತವಾಗಿ ಮಾಡಬಾರದು. ತೀರ್ಪು ಕೊಡುವವನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ, ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ವೃಥಾ ಹಗರಣ ಸೃಷ್ಟಿಸುವಂತೆ ನಿಂದೆ ಮಾಡಬಾರದು ಅನ್ನುವ ನಿಯಮ ಇದೆ.

ಬ್ರಿಟನ್ನಿನಲ್ಲಿ ಗಾರ್ಡಿಯನ್ ಪತ್ರಿಕೆ ಒಮ್ಮೆ ನ್ಯಾಯಾಧೀಶರನ್ನ ಮೂರ್ಖ ಮುದುಕರು ಅಂತ ಮೂದಲಿಸಿತು. ಅದಕ್ಕೆ ಅಲ್ಲಿನ ನ್ಯಾಯಾಧೀಶ ಲಾರ್ಡ್ ಟೆಂಪಲ್ಮ್ಯಾ ಅವರು ‘ನಾವು ಮುದುಕರು ಅನ್ನುವುದು ಸತ್ಯ. ಮೂರ್ಖರು ಹೌದೊ ಅಲ್ಲವೋ ಅನ್ನುವುದು ಅವರವರ ಗ್ರಹಿಕೆಗೆ ಬಿಟ್ಟ ವಿಷಯ’ ಅಂತ ಹೇಳಿದರು. ಸರಕಾರವೇ ದಾಖಲಿಸಿದ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈ ಬಿಟ್ಟರು. ಗಾರ್ಡಿಯನ್ ಪ್ರಕರಣ 1987ರಲ್ಲಿ ನಡೆದಿತ್ತು.

ರಾಜಕಾರಣಿಗಳೇ ನ್ಯ್ಯಾಯಾಧೀಶರಾಗಿದ್ದ ಬ್ರಿಟಿಷ್ ಸುಪ್ರೀಂ ಕೋರ್ಟು ಅತ್ಯಂತ ನ್ಯಾಯ ನಿಷ್ಟುರವಾಗಿ ನಡೆದುಕೊಂಡಾಗ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇರೋ ನಮ್ಮ ದೇಶದಾಗ ಯಾಕ ನಮ್ಮ ನ್ಯಾಯಾಧೀಶರು ಶೀಘ್ರ ಕೋಪದವರು ಇದ್ದಾರ?

ಡೇಲಿ ಮಿರರ ಪತ್ರಿಕೆ ನ್ಯಾಯಾಧೀಶರನ್ನ ಪ್ರಜೆಗಳ ವಿರೋಧಿಗಳು ಅಂತ ಕರೆದಾಗ `ಅದನ್ನು ಜನ ನಿರ್ಧರಿಸುತ್ತಾರೆ’, ಅಂತ ನ್ಯಾಯಾಂಗ ನಿಂದನೆ ಕೈ ಬಿಟ್ಟರು. ಇದು ನಡೆದಿದ್ದು 2016ರಾಗ. ಅಂದ್ರ ಹೊಸ ಸುಪ್ರೀಂ ಕೋರ್ಟು ಅಸ್ತಿತ್ವಕ್ಕೆ ಬಂದ ಮ್ಯಾಲೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರು ದಶಕಗಟ್ಟಲೆ ಜನಪರ ಹೋರಾಟ ಮಾಡಿದಾರು. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಬೋಫೋರಸು ಹಗರಣದ ವಿಚಾರಣೆ ಬರುವಂತೆ ಮಾಡಿದರು. ಮೊನ್ನೆ ಮೊನ್ನೆ ಲೋಕಪಾಲ್ ಹೋರಾಟದಾಗ ಭಾಗಿ ಆದರು. ಅದರಿಂದ ಕಾಂಗ್ರೆಸ್ಸು ನಷ್ಟ ಅನುಭವಿಸುವಂತೆ ಆತು. ಆಮ್ ಆದಮಿ ಹಾಗೂ ಬಿಜೆಪಿ ಪಕ್ಷಗಳಿಗೆ ನೇರವಾಗಿ ಇಲ್ಲದಿದ್ದರೂ ಸುತ್ತು ಬಳಸಿ ಅನುಕೂಲವಾಗುವಂತೆ ಆತು. ಅದನ್ನು ಅವರು ರಾಜಕೀಯ ಕಾರಣ ಇಟ್ಟುಕೊಂಡು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಏನು ಅಂದ್ರ ಅವರು ಕೇಜರಿವಾಲ್ ಪಕ್ಷ ಅಥವಾ ಸರಕಾರ ಸೇರಲಿಲ್ಲ. ಇನ್ನ ಇಂದಿನ ಸರಕಾರದ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಿಕ್ಕೆ ಹತ್ತ್ಯಾರ.

ಆಳುವ ಪಕ್ಷದ ವಿರೋಧಿಗಳು ನಮ್ಮ ವಿರೋಧಿಗಳು ಅಂತ ಎನರ ನ್ಯಾಯಾಂಗದವರು ತಿಳಕೋಂಡ್ರ ಅದು ಅವರ ತಪ್ಪಲ್ಲ. ನಮ್ಮ ತಪ್ಪು.

ಇದರಾಗ ಒಂದು ಸೂಕ್ಷ್ಮ ವಿಚಾರ ಐತಿ ನೋಡ್ರಿ.

ಅದು ಎನಪಾ ಅಂದ್ರ ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಅನ್ನೋ ಕಲ್ಪನೆ ಇಲ್ಲ. ಇಲ್ಲಿ ಇರೋದು ನಿನ್ನೆಯ ಆಳುವ ಪಕ್ಷ, ಇಂದಿನ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಪತ್ರಿಕೋದ್ಯಮ ತಜ್ಞ ಎಂ. ಎ. ಈಪನ್ ಅವರು ಹೇಳುತ್ತಿದ್ದರು. ನೀವು ನಿನ್ನೆಯ ಆಳುವ ಪಕ್ಷದ ವಿರೋಧ ಮಾಡರಿ, ಅಥವಾ ಇಂದಿನ ಆಳುವ ಪಕ್ಷದ ವಿರೋಧ ಮಾಡ್ರಿ, ನೀವು ಇಬ್ಬರಿಗೂ ವಿರೋಧಿಗಳೇ ಹೊರತು, ಯಾರಿಗೂ ಮಿತ್ರರಲ್ಲ. ಅದಕ್ಕೆ ಬಸವಣ್ಣ ಖಂಡಿತವಾದಿ, ಲೋಕ ವಿರೋಧಿ ಅಂತ ಹೇಳಿದ್ದು ಐತಿ ನೋಡ್ರಿಪಾ.

ಅಂದ ಹಂಗ ಇಲ್ಲೇ ನೋಡ್ರಿ ಮತ್ತೊಮ್ಮೆ `ಐತಿ’ ಅನ್ನೋದು ಬಂತು. ಇದೂ ಕೂಡ ಐತಿಹಾಸಿಕ ಆಗೋ ಲಕ್ಷಣ ಕಾಣಾಕ ಹತ್ಯಾವು. ಅಲ್ಲಾ!


ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...