ಅಸ್ಸಾಮಿನ ಹೆಸರಾಂತ ರೈತ ಸಂಘಟನೆಯಾದ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (KMSS)ಯ ನಾಯಕರಾದ ಅಖಿಲ್ ಗೊಗೋಯ್ ಅವರನ್ನು ಜೊರ್‌ಹಾಟ್‌ನಲ್ಲಿ 2019ರ ಡಿಸೆಂಬರ್ 12ರ ಸಂಜೆ ಬಂಧಿಸಿದಾಗ ಅವರು ಆಗಷ್ಟೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭಾಷಣ ಮುಗಿಸಿದ್ದರು. ಆಗಿನಿಂದ ಕಳೆದ ಎಂಟು ತಿಂಗಳಲ್ಲಿ ಒಂದಾದರ ನಂತರ ಇನ್ನೊಂದರಂತೆ ಸುಳ್ಳು ಆಪಾದನೆಗಳಿಗಾಗಿ ಸೆರೆವಾಸ ಅನುಭವಿಸುತ್ತಿರುವ ಈ ಜನನಾಯಕನನ್ನು ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾದಾಗಲೂ ಸರ್ಕಾರ ಬಿಡುಗಡೆ ಮಾಡಲಿಲ್ಲ.

ಹುಟ್ಟುಹಾಕಿದ ಆಪಾದನೆಗಳಿಂದಾಗಿ ಸೆರೆವಾಸ ಅನುಭವಿಸುತ್ತಿರುವುದು ಅಖಿಲ್ ಗೊಗೋಯ್‌ರಿಗೆ ಹೊಸದೇನಲ್ಲ. ಅಪಾರ ಜನಬೆಂಬಲ ಪಡೆಯುವ ಚಳವಳಿಯ ನಾಯಕರಾದ ಗೊಗೋಯ್ ಅವರನ್ನು ಬಂಧಿಸುವುದು, ಅವರ ವಿಚಾರಾಣಾಧೀನ ಬಂಧನದ ಅವಧಿಯನ್ನು ವಿಸ್ತರಿಸುವುದು, ಪ್ರತಿಭಟನೆಯ ತೀವ್ರತೆಯನ್ನು ತಗ್ಗಿಸುವ ಸರ್ಕಾರದ ಹುನ್ನಾರದ ಭಾಗವಾಗಿಯೇ ನಡೆಯುತ್ತದೆ. ಮುಂಚೆ 2016ರಲ್ಲಿ ಹಳೆಯ ಕೇಸುಗಳ ಕಾರಣ ಕೊಟ್ಟು 78ದಿನಗಳ ಕಾಲ ಇವರನ್ನು ಜೈಲಿನಲ್ಲಿಡಲಾಗಿತ್ತು. 2016ರ ಅಕ್ಟೋಬರ್ 2ರಂದು ಗೌಹಾಟಿಯ ಗಾಂಧಿಬಸ್ತಿಯಲ್ಲಿ ನಡೆದ ಈ ಬಂಧನಕ್ಕೆ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತು ಸುತ್ತ ನೆಲೆಸಿರುವ ‘ಅಕ್ರಮ ನಿವಾಸಿ’ಗಳ ಮೇಲೆ ನಡೆದ ದೌರ್ಜನ್ಯವನ್ನು ಪ್ರತಿಭಟಿಸಲು ಜನರನ್ನು ಪ್ರೇರೇಪಿಸಿದ ಕಾರಣ ನೀಡಲಾಗಿತ್ತು.

ಅಖಿಲ್ ಗೊಗೋಯ್‌ರ ಜೈಲುವಾಸವನ್ನು ವಿಸ್ತರಿಸಲು ಬಳಸುವ ಬಂಧನ, ಮರುಬಂಧನಗಳ ಜಾಲವನ್ನು ಗಮನಿಸಿದರೆ ಪ್ರತಿರೋಧಕ ದನಿಗಳನ್ನು ಹತ್ತಿಕ್ಕುವ, ನ್ಯಾಯಪರತೆಯನ್ನು ದಮನಿಸಲು ಪೊಲೀಸ್ ಮತ್ತು ಕ್ರಿಮಿನಲ್ ನ್ಯಾಯವ್ಯವಸ್ಥೆಯನ್ನು ಬಿಜೆಪಿ ಸರ್ಕಾರದ ದುರುಪಯೋಗಪಡಿಸಿಕೊಳ್ಳುವ ನಡೆ ಅರ್ಥ ಮಾಡಿಕೊಳ್ಳಲು ಕಾನೂನುಪಂಡಿತನಾಗಿರಬೇಕಿಲ್ಲ.

ಅಖಿಲ್ ಗೊಗೋಯ್‌ರ ಹೋರಾಟದ ಬದುಕು ಕಾಂಗ್ರೆಸ್ ಆಡಳಿತದಲ್ಲೂ ಸುಗಮವಾಗೇನೂ ಇರಲಿಲ್ಲ. ಅಸ್ಸಾಂನಲ್ಲಿ15 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ವಿರೋಧ ಪಕ್ಷಗಳ ಕೆಲಸವನ್ನು ಅಖಿಲ್ ಗೊಗೋಯ್ ನಾಯಕತ್ವದ KMSS ಸಂಘಟನೆ ಮಾಡಿತ್ತು. ಹಗರಣಗಳನ್ನು, ಭ್ರಷ್ಟಾಚಾರವನ್ನು ಹೊರಹಾಕುವ ಮೂಲಕ ಮಾಹಿತಿ ಹಕ್ಕಿನ ಅಡಿಯಲ್ಲಿ ಸರ್ಕಾರದ ಕಾರ್ಪೊರೇಟ್ ಭೂಗಳ್ಳತನವನ್ನು ಪ್ರಶ್ನಿಸುವುದರ ಮೂಲಕ ಬಲವಾಗಿ ಆ ಸರ್ಕಾರದ ನೀತಿಗಳನ್ನು ವಿರೋಧಿಸಿತ್ತು. ವಲಸಿಗರನ್ನು ಬಲವಂತವಾಗಿ ಹೊರಹಾಕುವ ಕ್ರಮವನ್ನು ಪ್ರಶ್ನಿಸುತ್ತಾ ಬೃಹತ್ ಅಣೆಕಟ್ಟುಗಳನ್ನು ವಿರೋಧಿಸುತ್ತಾ ಅರಣ್ಯವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಾ ಬಲಗೊಂಡ ಈ ಸಂಘಟನೆಯನ್ನು ಮುಖ್ಯವಾಗಿ ಇದರ ನಾಯಕನನ್ನು ಹತ್ತು ಹಲವು ಕೇಸುಗಳಿಂದ ಕಟ್ಟಿಹಾಕಲು ಹದಿನೈದು ವರ್ಷದ ಕಾಂಗ್ರೆಸ್ ಸರ್ಕಾರದ ಎರಡನೇ ಮತ್ತು ಮೂರನೇ ಅವಧಿಯಲ್ಲಿ ಕೆಲಸ ಮಾಡಲಾಯಿತು.

ಅಸ್ಸಾಮಿನ ಡೊಯಾಂಗ್ ಮತ್ತು ತೆಂಗಾನಿ ಪ್ರದೇಶಗಳಲ್ಲಿ ಸರ್ಕಾರದ ಜನವಿರೋಧಿ ಒಕ್ಕಲೆಬ್ಬಿಸುವ ನೀತಿಯನ್ನು ಉಗ್ರವಾಗಿ ವಿರೋಧಿಸುತ್ತಾ 2005ರಲ್ಲಿ ಹುಟ್ಟಿದ KMSS ಸಂಘಟನೆ ಅತಿ ವೇಗವಾಗಿ ದಮನಿತ ಶ್ರಮಿಕ ವರ್ಗದ, ರೈತರ ಹಕ್ಕುಗಳ ದನಿಯಾಗಿ ತನ್ನ ವ್ಯಾಪ್ತಿ ಮತ್ತು ಗಾತ್ರವನ್ನು ಹಿರಿದಾಗಿಸಿಕೊಂಡಿತು.

ಜನಪರ ಚಳವಳಿಗಳು, ಸೈಕಲ್ ಜಾಥಾಗಳು ಹಾಗೂ ಧರಣಿಗಳ ಮೂಲಕ ಅಖಿಲ್ ಗೊಗೋಯ್ ನೇತೃತ್ವದ KMSS ಸಂಘಟನೆ ಒಡ್ಡಿದ ಪ್ರತಿರೋಧದ ಬೇಡಿಕೆಗಳಿಗೆ ಹಲವು ಬಾರಿ ಸರ್ಕಾರಗಳು ಮಣಿಯಬೇಕಾಯಿತು.

ಕೋಮುವಾದಿ ಮನೋಧೋರಣೆಯಿಂದ ಅಸ್ಸಾಮಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ನೆಸಿಲಿರುವ ಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಅಮಾನವೀಯ ಕ್ರಮವನ್ನು ಉಗ್ರವಾಗಿ ಪ್ರತಿಭಟಿಸಿದ್ದರಿಂದ ಕಾಜಿರಂಗ್, ಡೋಯಾಂಗ್, ತೆಂಗಾನಿ ಮತ್ತು ಅಮ್‌ಚಾಂಗ್ ಪ್ರದೇಶಗಳಲ್ಲಿ ನೆಲೆಸಿರುವ 20,000ಕ್ಕೂ ಹೆಚ್ಚಿನ ಬುಡಕಟ್ಟು ಜನರಿಗೆ ಸರ್ಕಾರ ಭೂ ಹಿಡುವಳಿಯ ಹಕ್ಕುಪತ್ರ ನೀಡಬೇಕಾಯಿತು. ಅಲ್ಲಿ ಹಲವೆಡೆ ಒಕ್ಕಲೆಬ್ಬಿಸುವಿಕೆಯನ್ನು ನಿಲ್ಲಿಸಲೂ KMSS ಸಂಘಟನೆಗೆ ಸಾಧ್ಯವಾಗಿತ್ತು. ಭ್ರಷ್ಟ ಗ್ರಾಮ ಪಂಚಾಯತಿಗಳ ವಿರುದ್ಧ KMSS ಸಂಘಟನೆ ನಡೆಸಿದ ಚಳವಳಿಗಳಿಂದಾಗಿ ಹಲವು ಗ್ರಾಮ ಮುಖಂಡರು ಮತ್ತು ಸರ್ಕಾರಿ ಅಧಿಕಾರಿಗಳು ಜೈಲು ಸೇರಬೇಕಾಯ್ತು.

ಅಸ್ಸಾಮಿನ ಡಿಬ್ರುಗರ್ ಜಿಲ್ಲೆಯ ಡಿಕೋಮಿನ್ ಪ್ರದೇಶದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್‌ನ ಬಳಕೆಯಿಲ್ಲದೆ ತ್ಯಜಿಸಲಾಗಿದ್ದ ತೈಲಬಾವಿಯಲ್ಲಿ ಅಗ್ನಿಪ್ರಮಾದ ಸಂಭವಿಸಿದಾಗ 45 ದಿನಗಳ ಕಾಲ ಇನ್ನಿಲ್ಲದಂತೆ ಹೊತ್ತುರಿದ ಬೆಂಕಿಯನ್ನು ಹತೋಟಿಗೆ ತರಲು ವಿದೇಶಗಳಿಂದ ಪರಿಣಿತರನ್ನು ಸರ್ಕಾರ ಕರೆಸಬೇಕಾಯಿತು. ನವೆಂಬರ್ 2006ರಲ್ಲಿ ಇದೇ ಸಂಸ್ಥೆ ಬ್ರಹ್ಮಪುತ್ರ ನದಿಯ ತೀರ ಪ್ರಾಂತ್ಯದಲ್ಲಿ ತೈಲ ನಿಕ್ಷೇಪಗಳ ಹುಡುಕಾಟಕ್ಕಾಗಿ ಸೀಸ್ಮಿಕ್ ಸಮೀಕ್ಷೆ ನಡೆಸಲು ಮುಂದಾದಾಗ KMSS ಸಂಘಟನೆ ಇದನ್ನು ಪ್ರತಿಭಟಿಸಿತು. ಸೂಕ್ಷ್ಮ ಪರಿಸರವಿರುವ ಡಿಬ್ರು ಸಾಯ್‌ಕೋವ ಸಂರಕ್ಷಿತ ಪ್ರದೇಶದ ನೈಸರ್ಗಿಕ ಸಂಪನ್ಮೂಲ ಅನ್ವೇಷಣೆಯನ್ನು ವಿರೋಧಿಸಿ KMSS ಸಂಘಟನೆ ಪತ್ರಿಕಾಗೋಷ್ಠಿಯನ್ನು ನಡೆಸಿತು. ಅಲ್ಲಿ ಸೂಕ್ಷ್ಮ ಪರಿಸರಕ್ಕೆ ಮತ್ತು ಜನಸಮುದಾಯಕ್ಕೆ ಆಗುವ ತೊಂದರೆಯನ್ನು ಎಚ್ಚರಿಸಿತ್ತು. ಸಂಘಟನೆ ಎಚ್ಚರಿಸಿದಂತೆ ದುರದೃಷ್ಟವಶಾತ್ ಅದೇ ಪ್ರದೇಶದಲ್ಲಿ ಇತ್ತೀಚೆಗೆ ತೈಲಬಾವಿಯು ಅಗ್ನಿ ಪ್ರಮಾದಕ್ಕೆ ತುತ್ತಾಗಿ ಅಪಾರ ಜನ, ಜಾನುವಾರು ಪರಿಸರ ಹಾನಿಗೆ ಕಾರಣವಾಯಿತು.

KMSS ಸಂಘಟನೆಯು ಮಾರ್ಗೆರಿಟಾ ಪ್ರದೇಶದ ಕಲ್ಲಿದ್ದಲು ಮಾಫಿಯಾವನ್ನು ವಿರೋಧಿಸುವಲ್ಲಿ, ಕಾನೂನುಬಾಹಿರ ಟೋಲ್‌ಗೇಟ್ ನಿರ್ಮಾಣದ ವಿರುದ್ಧ, ಆದಿವಾಸಿ ಮತ್ತು ಬುಡಕಟ್ಟು ಜನರ ಜೀವನಗಳಿಗೆ ಕುತ್ತುತರುವ ಕಾರ್ಪೊರೇಟ್ ಲಾಭಕೋರ ಹಿತಾಸಕ್ತಿಗಳನ್ನು ವಿರೋಧಿಸುತ್ತಾ ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲೂ ಅಖಿಲ್ ಅವರು ಭೂ ಹಗರಣಗಳನ್ನು ಬಯಲು ಮಾಡುತ್ತಾ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ರಾಜ್ಯವ್ಯಾಪಿ ಚಳವಳಿಯನ್ನು ಕಟ್ಟಿದರು. ಇತ್ತೀಚಿನ ಅವರ ಬಂಧನದ ನಂತರ ಅವರ ಮನೆಯ ಮೇಲೆ ದಾಳಿ ನಡೆಸಿದ NIA ಅಧಿಕಾರಿಗಳು ರಾಜಕೀಯ ನಾಯಕರ, ಲಾಭಕೋರ ಉದ್ಯಮಿಗಳ ಹೆಸರಿನ ಕಡತಗಳನ್ನು ಹುಡುಕಲು ಇನ್ನಿಲ್ಲದಂತೆ ಪ್ರಯತ್ನಿಸಿದರು.

ಅಖಿಲ್ ಗೊಗೋಯ್‌ರಿಗೆ ರಾಷ್ಟ್ರೀಯ ಪ್ರಾಮುಖ್ಯತೆ ತಂದುಕೊಟ್ಟದ್ದು ಅವರು ಬೃಹತ್ ಅಣೆಕಟ್ಟುಗಳ ವಿರುದ್ಧ ಅಸ್ಸಾಮಿನಲ್ಲಿ ನಡೆಸಿದ ಆಂದೋಲನದಿAದ. NHPC (ನ್ಯಾಶನಲ್ ಹೈಡ್ರೋ ಪವರ್ ಕಾರ್ಪೊರೇಶನ್) ಸಂಸ್ಥೆ 2000ಮೆಗಾವ್ಯಾಟ್ ವಿದ್ಯುಚ್ಚಕ್ತಿ ಉತ್ಪಾದಿಸುವ ಉದ್ದೇಶದಿಂದ ಸುಬಾನ್ ಸಿರಿ ನದಿಯಲ್ಲಿ ಅಣೆಕಟ್ಟು ಕಟ್ಟಲು 2007ರಲ್ಲಿ ಮುಂದಾದಾಗ ದೊಡ್ಡಮಟ್ಟದ ಆಂದೋಲನ ರೂಪಿಸಿದ ಅಖಿಲ್ ಗೊಗೋಯ್ ಅವರು 2011ರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ತಡೆ ತರುವಲ್ಲಿ ಯಶಸ್ವಿಯಾದರು. ಈ ಅವಧಿಯಲ್ಲಿ ರಾಷ್ಟçಮಟ್ಟದ ಚಳವಳಿಗಳನ್ನು ರೂಪಿಸುತ್ತಿದ್ದ ಮೇಧಾ ಪಾಟ್ಕರ್, ಸಂದೀಪ್ ಪಾಂಡೆ ಹಾಗೂ NAPM (ನ್ಯಾಶನಲ್ ಅಲಾಯನ್ಸ್ ಫಾರ್ ಪೀಪಲ್ಸ್ ಮೂವ್‌ಂಟ್) ಸಂಘಟನೆಯ ಸಂಪರ್ಕಕ್ಕೆ ಬಂದರು.

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತರಾದ ಸಂದೀಪ್ ಪಾಂಡೆಯವರು ಹೇಳುವಂತೆ “ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಅಭಿವೃದ್ಧಿ ನೀತಿಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ ಸರ್ಕಾರಗಳ ವಿರುದ್ಧ, ಭ್ರಷ್ಟಾಚಾರವನ್ನು ಪಕ್ಷ ರಾಜಕೀಯದಲ್ಲಿ ಅನಿವಾರ್ಯ ಎಂದು ಒಪ್ಪಿಕೊಳ್ಳುವ ಢೋಂಗಿತನದ ವಿರುದ್ಧ ಹೋರಾಡುತ್ತಿರುವ ಅತ್ಯಂತ ಪ್ರಮುಖ ಮುಖಂಡ ಅಖಿಲ್ ಗೊಗೋಯ್. ಜನಪರ ಆಂದೋಲನಗಳನ್ನು ರೂಪಿಸುತ್ತಿರುವುದಕ್ಕಾಗಿ ಸರ್ಕಾರದ ಭದ್ರತಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿ, ನಕ್ಸಲೈಟ್ ಹಣೆಪಟ್ಟಿ ಕಟ್ಟಿಸಿಕೊಂಡು ಬಂಧನಕ್ಕೆ ಒಳಗಾಗುವ ಅಖಿಲ್, ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿಯನ್ನು ಮಾನವ ಹಕ್ಕುಗಳಿಗಾಗಿ ಹೋರಾಡುವ ಪರಿಣಾಮಕಾರಿ ಸಂಘಟನೆಯಾಗಿ ರೂಪಿಸಿದ್ದಾರೆ. ಹೋರಾಟದಿಂದ ಹೋರಾಟಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳತ್ತಲೇ ಸಾಗಿರುವ ಮತ್ತು ಏಒSS ಸಂಘಟನೆ ಭ್ರಷ್ಟ ಮತ್ತು ಶಕ್ತಿಶಾಲಿ ಹಿತಾಸಕ್ತಿಗಳಿಗೆ ಎದೆನಡುಕ ಹುಟ್ಟಿಸಿರುವ ಅಖಿಲ್‌ರನ್ನು ನಿಯಂತ್ರಿಸಲು ರಾಜಕೀಯ ಪಕ್ಷಗಳು ಪದೇ ಪದೇ ಬೆದರಿಕೆ ಮತ್ತು ಆಮಿಷವೊಡ್ಡುವ ತಂತ್ರಕ್ಕೆ ಮೊರೆಹೋಗಿವೆ” ಎನ್ನುತ್ತಾರೆ.

ಭಾರಿ ಬಹುಮತದೊಂದಿಗೆ 2016 ಚುನಾವಣೆಯಲ್ಲಿ ಗೆದ್ದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅಸ್ಸಾಮಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈಶಾನ್ಯ ಭಾರತದ ಜನರ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಪೌರತ್ವ ತಿದ್ದುಪಡಿ ಮಸೂದೆೆಯನ್ನು ಸರ್ಕಾರ ಜಾರಿಗೊಳಿಸಲು ಯತ್ನಿಸಿದಾಗ ಇಡೀ ದೇಶ ಎಚ್ಚೆತ್ತುಕೊಳ್ಳುವಂತೆ ಉಗ್ರ ಹೋರಾಟ ರೂಪಿಸಿದ್ದು ಅಖಿಲ್ ಗೊಗೋಯ್ ನೇತೃತ್ವದ KMSS ಸಂಘಟನೆ. ಹಿಂದೂ ರಾಷ್ಟ್ರವನ್ನು ಕಟ್ಟುವ ಘಾತಕ ಅಜೆಂಡಾದ ಪ್ರೇರಣೆಯಿಂದ ಪ್ರಾರಂಭವಾದ ಪೌರತ್ವ ತಿದ್ದುಪಡಿ ಪ್ರಕ್ರಿಯೆ ಈಶಾನ್ಯ ಭಾರತದಲ್ಲಿ ತೋರಿಕೆಗಾದರೂ ಇರುವ

ಸ್ವಾಯತ್ತತೆಯ ವಿರುದ್ಧದ ದಾಳಿಯಾಗಿದೆ. ಇದು ಏಕೆಂದರೆ, ಈಶಾನ್ಯ ರಾಜ್ಯದಲ್ಲಿ ರಾಷ್ಟ್ರೀಯತೆ ಮತ್ತು ವಲಸೆಯ ಐತಿಹಾಸಿಕ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲದೆ ಹೋಗಿರುವಾಗ ನಾಮಕಾವಸ್ಥೆಯ ಸ್ವಾಯತ್ತತೆಯನ್ನೂ ಮುಗಿಸುವ ಈ ಯೋಜನೆ ಅಲ್ಲಿನ ಜನರಲ್ಲಿ ಸಹಜವಾಗಿ ಆಕ್ರೋಶ ತರಿಸಿತ್ತು.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವದ ವ್ಯಾಖ್ಯಾನವನ್ನೇ ಬದಲಿಸಲು ಹೊರಟ ಈ ಪ್ರಯತ್ನವನ್ನು ಅಖಿಲ್ ಗೊಗೋಯ್ ವಿರೋಧಿಸಿದಾಗ ಭಾರತದ ಇತರ ಪ್ರದೇಶಗಳಲ್ಲಿ ಜನರಿಗೆ ಈ ಪ್ರಕ್ರಿಯೆಯನ್ನು ಇತರ ಪ್ರದೇಶಗಳಲ್ಲಿ ಜಾರಿಗೊಳಿಸುವ ಹುನ್ನಾರದ ಕಲ್ಪನೆ ಹೆಚ್ಚಾಗಿ ಇರಲಿಲ್ಲ.

ಅಪಾರ ಜನಬೆಂಬಲದಿಂದ ಮುನ್ನಡೆದ ಹೋರಾಟ 2014ರಲ್ಲಿ ರಾಜ್ಯಸಭೆಯ ಸದಸ್ಯರನ್ನು ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಸಂಘಟಿಸುವ ಪ್ರಯತ್ನ ಮಾಡಿತು. KMSSನ ಈ ಪ್ರಯತ್ನದಿಂದಾಗಿ ಪೌರತ್ವ ತಿದ್ದುಪಡಿ ಮಸೂದೆ 2018ರಲ್ಲಿ ಸಂಸತ್ತಿನ ಎರಡೂ ಮನೆಗಳಲ್ಲಿ ಜಾರಿಯಾಗಲಿಲ್ಲ.

ಆದರೆ, ಉಗ್ರ ವಿರೋಧದ ನಡುವೆಯೂ 2019ರಲ್ಲಿ ಪೌರತ್ವ ತಿದ್ದುಪಡಿ ಸಂಸತ್ತಿನಲ್ಲಿ ಜಾರಿಯಾಗಿ ಕಾಯ್ದೆಯಾಗಿ ಬದಲಾದಾಗ, ಅಸ್ಸಾಂ ರಾಜ್ಯದಲ್ಲಿ ಮತ್ತೆ ಹೋರಾಟ ಭುಗಿಲೆದ್ದು ಕುದಿಯತೊಡಗಿತು. ಪ್ರತಿರೋಧದ ತೀವ್ರತೆಯನ್ನು ತೊಡೆದುಹಾಕಲು ಸರ್ಕಾರವು KMSS ಸಂಘಟನೆಯ ಕಾರ್ಯಕರ್ತರನ್ನು ಮತ್ತು ಮುಖ್ಯವಾಗಿ ಅಖಿಲ್‌ರನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಕೈ ಹಾಕಿತು.

ಕಳೆದ ಒಂದು ವರ್ಷದ ಅವಧಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳನ್ನು, ಪತ್ರಕರ್ತರನ್ನು ಸರ್ಕಾರವು ಬಂಧಿಸುತ್ತಲೇ ಇದೆ. ಅಖಿಲ್ ಮತ್ತು KMSSನ ಕಾರ್ಯಕರ್ತರು NIA (ರಾಷ್ಟ್ರೀಯ ಭದ್ರತಾ ಸಂಸ್ಥೆ)ಯ ವಿಚಾರಣೆಗೆ ಒಳಗಾಗಿ, ಬಂಧನಕ್ಕೆ ಒಳಗಾಗಿ ನಂತರ ಬಿಡುಗಡೆಯೂ ಆಗಿದ್ದರು.

NIAಯು 90 ದಿನಗೊಳಗಾಗಿ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾಗಿದ್ದರಿಂದ ಅಖಿಲ್‌ರನ್ನು ಬಿಡುಗಡೆ ಮಾಡುವ ಅನಿವಾರ್ಯತೆ ತಲೆದೋರಿತು. ಬಿಡುಗಡೆಯನ್ನು ತಪ್ಪಿಸಲು ಹಳೆಯ ಕೇಸುಗಳನ್ನು ಮರು ವಿಚಾರಣೆಗೆ ಎತ್ತಿಕೊಂಡ ಸರ್ಕಾರ ಜೈಲಿನಿಂದ ಜೈಲಿಗೆ ಅಖಿಲ್‌ರನ್ನು ವರ್ಗಾಯಿಸುತ್ತಲೇ ಇದೆ. ಆದರೆ ಇಲ್ಲಿಯವರೆಗೂ NIAUE ಆಗಲೀ ರಾಜ್ಯ ಸರ್ಕಾರಕ್ಕಾಗಲೀ ಅಖಿಲ್ ವಿರುದ್ಧ ಹೂಡಿದ ಯಾವ ಮೊಕದ್ದಮೆಗಳನ್ನು ಸಾಬೀತು ಪಡಿಸಲಾಗಿಲ್ಲ. ಜುಲೈ ೭ರಂದು ಅಖಿಲ್ ಅವರು ಕೋವಿಡ್ ಸೋಂಕಿತರಾಗಿರುವುದು ಪತ್ತೆಯಾದಾಗ ಅವರನ್ನು ತಕ್ಷಣದ ಬಿಡುಗಡೆಗಾಗಿ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಲು ಒತ್ತಾಯಿಸಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಸರ್ಕಾರ ಚಿಕಿತ್ಸೆ ಕೊಡಲು ಒಪ್ಪಿದರೂ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡು ಈಗಲೂ ಬಂಧನದಲ್ಲಿದ್ದಾರೆ. ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ KMSS ಸಂಘಟನೆಯ ಹೋರಾಟ ಮುಂದುವರೆಯುತ್ತಲೇ ಇದೆ.

ಕೃಪೆ: ಅಖಿಲ್ ಗೊಗೋಯ್ ಡಿಫೆನ್ಸ್ ಕಮಿಟಿ
ಕನ್ನಡಕ್ಕೆ: ಹರಿತಾ


ಇದನ್ನೂ ಓದಿ: ಅಸ್ಸಾಂ ಚುನಾವಣೆ: ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ. ಅಖಿಲ್ ಗೊಗೊಯ್ ಸಿಎಂ ಅಭ್ಯರ್ಥಿ!

LEAVE A REPLY

Please enter your comment!
Please enter your name here