| ನಾನುಗೌರಿ ಡೆಸ್ಕ್ |
2014ರಲ್ಲಿ ಅಂತೂ ಇಂತೂ ಆಂಧ್ರ ಪ್ರದೇಶದಿಂದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಯಿತು. ಅತಿ ಹೆಚ್ಚು ಆದಾಯ ತರುವ ಹೈದರಾಬಾದ್ ನಗರವೂ ಕೂಡ ತೆಲಂಗಾಣ ಪಾಲಾಯ್ತು. ಆಗ ತಕ್ಷಣ ಕೇಳಿಬಂದ ಹಕ್ಕೊತ್ತಾಯವೇ ಆಂಧ್ರಕ್ಕೆ ವಿಶೇಷ ಸ್ಥಾನಮಾನ. ಅದಕ್ಕಾಗಿ ಟಿಡಿಪಿಯ ಚಂದ್ರಬಾಬು ನಾಯ್ಡು ದೊಡ್ಡ ಮಟ್ಟದಲ್ಲಿ ಒತ್ತಡ ತಂದಿದ್ದರು. ಅದಕ್ಕೆ ಪೂರಕವಾಗಿ, ಈ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಗೆದ್ದು ಅಧಿಕಾರ ಹಿಡಿದರೆ ಖಂಡಿತ ಆಂಧ್ರಕ್ಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದರು. ಆ ವಿಡಿಯೋ ನೋಡಿ
ಆದರೆ ಆಗಿದ್ದೆ ಬೇರೆ. ಕೇಂದ್ರದಲ್ಲಿ ಮೋದಿ ಭರ್ಜರಿ ಜಯ ಸಾಧಿಸಿದರೆ, ಆಂಧ್ರದಲ್ಲಿ ಜಗನ್ ಕೂಡ ಭಾರೀ ಜಯಗಳಿಸಿದರು. ಆದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ಆಗ್ರಹ ಮಾತ್ರ ಮೂಲೆಗೆ ಸರಿಯಿತು.
ಆಂಧ್ರ ಪ್ರದೇಶ ಮತ್ತು ಹೀಗಿನ ತೆಲಂಗಾಣ ಸೇರಿ ದೊಡ್ಡ ರಾಜ್ಯವಾಗಿತ್ತು. ಆದರೆ ತೆಲಂಗಾಣ ಪ್ರಾಂತ್ಯಕ್ಕೆ ಸತತವಾಗಿ ಅನ್ಯಾಯವಾಗಿದೆ ಎಂದು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ಸ್ವಾತಂತ್ರ್ಯ ನಂತರದಿಂದಲೂ ತೀವ್ರ ಹೋರಾಟ ನಡೆದಿತ್ತು. ಹಲವು ಸಾವು ನೋವುಗಳ ನಂತರ 2014ರಲ್ಲಿ ಅದರ ಪ್ರತ್ಯೇಕ ರಾಜ್ಯದ ಕನಸು ನನಸಾಯಿತು. ಆಗ ಆಂಧ್ರ ಪ್ರದೇಶವು ತೀರಾ ಹಿಂದುಳಿದಿದ್ದು ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಲಾಯಿತು.
ಇದಕ್ಕಾಗಿ ಚಂದ್ರಬಾಬು ನಾಯ್ಡು ಮತ್ತು ಜಗನ್ ಮೋಹನ್ ರೆಡ್ಡಿ ಇಬ್ಬರೂ ಪ್ರತ್ಯೇಕವಾಗಿ ದನಿಯೆತ್ತಿದರು. ಚಂದ್ರಬಾಬು ನಾಯ್ಡು ಅಂತೂ, ಇದಕ್ಕಾಗಿ ಮೋದಿಯೊಡನೆ ಜಗಳ ಮಾಡಿ ಎನ್‍ಡಿಎ ಮೈತ್ರಿಕೂಟ ಬಿಟ್ಟು ಹೊರಬಂದರು ಮತ್ತು ಯುಪಿಎಗೆ ಹತ್ತಿರವಾದರು. ಜಗನ್ ಮೋಹನ್ ದೆಹಲಿಯಲ್ಲಿ ದೊಡ್ಡ ಹೋರಾಟವನ್ನು ನಡೆಸಿದರು.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸಿಗುವುದರಲ್ಲಿ ಈ ಚುನಾವಣೆ ಬಹಳ ಮುಖ್ಯವಾಗಿತ್ತು. ಈಗ ಆಂಧ್ರದ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 175 ಸ್ಥಾನಗಳಲ್ಲಿ ಜಗನ್ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ 151ನ್ನು ಗೆದ್ದುಕೊಂಡರೆ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಕೇವಲ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಪವನ್ ಕಲ್ಯಾಣ್‍ರ ಜನಸೇನ 1 ಸ್ಥಾನದಲ್ಲಿ ಜಯಿಸಿದೆ. ಇನ್ನು ಲೋಕಸಭಾ ಕ್ಷೇತ್ರಗಳಿಗೆ ಬಂದರೆ ಒಟ್ಟು 25 ಕ್ಷೇತ್ರಗಳಲ್ಲಿ 22ನ್ನು ಜಗನ್ ಮತ್ತು 3ನ್ನು ಚಂದ್ರಬಾಬು ನಾಯ್ಡು ಗೆದ್ದಿದ್ದಾರೆ.
ಈಗ ಆಂಧ್ರಕ್ಕೆ ವಿಶೇಷ ಸ್ಥಾನಮಾನವನ್ನು ಅಧಿಕಾರಯುತವಾಗಿ ಕೇಳಲು ಬರುವುದಿಲ್ಲ, ಬೇಡಿಕೊಳ್ಳಬಹುದಷ್ಟೇ ಎಂದು ಜಗನ್ ಹೇಳಿದ್ದಾರೆ. “ಎನ್‍ಡಿಎ ಗೆ 350 ಸ್ಥಾನಗಳು ಸಿಕ್ಕಿಬಿಟ್ಟಿವೆ, 250 ಸಿಕ್ಕರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ, ಈಗ ನಾವು ಅಧಿಕಾರಯುತವಾಗಿ ಏನನ್ನು ಕೇಳಲು ಬರುವುದಿಲ್ಲ, ಹಾಗಾಗಿ ಮನವಿ ಮಾಡಬಹದಷ್ಟೇ, ಈ ವಿಚಾರ ಪ್ರಸ್ತಾಪಿಸಿದ್ದೇನೆ. ಮೋದಿ ನಂತರ ಅಮಿತ್ ಷಾ ರವರೆ ಪ್ರಭಾವಿ ವ್ಯಕ್ತಿ ಹಾಗಾಗಿ ಅವರ ಮುಂದೆ ನಮ್ಮ ಸಮಸ್ಯೆ ಇಡಲು ಹೋಗಿದ್ದೆ” ಎಂದು ಜಗನ್ ನಿನ್ನೆ ಅವಲತ್ತುಕೊಂಡಿದ್ದಾರೆ.
ಅಂದರೆ ಒಂದು ರಾಜ್ಯ ನಿರ್ದಿಷ್ಟ ಕಾರಣಕ್ಕಾಗಿ ಹಿಂದುಳಿದಿರುವುದರಿಂದ ನೈಸರ್ಗಿಕವಾಗಿ/ಸಹಜವಾಗಿ ಸಿಗಬೇಕಿದ್ದ ವಿಶೇಷ ಸ್ಥಾನಮಾನವನ್ನು ಪ್ರತಿಭಟಿಸಿ ಕೇಳುವಂತಿಲ್ಲ ಕೇವಲ ಮನವಿ ಮಾಡಬೇಕೆಂಬ ಅಭಿಪ್ರಾಯಕ್ಕೆ ಜಗನ್ ಬಂದಿದ್ದಾರೆ ಅಂದರೆ ನಮ್ಮ ಪ್ರಜಾಪ್ರಭುತ್ವ ಯಾವ ಮಟ್ಟದಲ್ಲಿದೆ ಊಹಿಸಿ. ತನ್ನ ಮೇಲೆ ವಿಶ್ವಾಸವಿಟ್ಟು ಮತಹಾಕಿದ ಮತದಾರರಿಗೆ ಜಗನ್ ಕೊಡುವುದಾದರೂ ಏನನ್ನು? ಸಹಜವಾಗಿಯೇ ನೀಡಬೇಕಿದ್ದ ಸ್ಥಾನಮಾನವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ತನಗೆ ಅಪಾಯ ಬಂದಾಗ, ನೀವು ಬೆಂಬಲ ಕೊಟ್ಟರೆ ಮಾತ್ರ ಕೊಡುತ್ತೇನೆ ಎಂದರೆ ಇದು ಮಕ್ಕಳಾಟವೇ? ಅಲ್ಲಿನ ಜನರ ಗೋಳು ಇವರಿಗೆ ಅರ್ಥವಾಗುವುದಿಲ್ಲವೇ?
ಆಂಧ್ರ ಕತೆ ಇದಾದರೆ, ಇನ್ನು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನಕ್ಕಾಗಿ ದನಿ ಎತ್ತಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೋತಿದೆ. ಇದರರ್ಥ ಇನ್ನು ಮುಂದೆ ರಾಜ್ಯಗಳ ಅಧಿಕಾರ ವ್ಯಾಪ್ತಿ ಮೊಟಕುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಎನ್‍ಡಿಎ ಗೆ ಈ ಪರಿಯ ಬಹುಮತ ಬಂದಿರುವುದು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಮಾರಕ. ಅದರಲ್ಲೂ ದಕ್ಷಿಣದ ಬಹುತೇಕ ರಾಜ್ಯಗಳು ಹೆಚ್ಚು ತೆರಿಗೆ ಕಟ್ಟಿದರೂ ಸಹ ಇವಗಳಿಗೆ ಕೇಂದ್ರದಿಂದ ಬರುವ ಅನುದಾನ ತೀರಾ ಕಡಿಮೆ. ಕರ್ನಾಟಕ ಬಿಟ್ಟರೆ ಉಳಿದೆಲ್ಲಾ ಕಡೆ ಬಿಜೆಪಿ ಸೋತಿರುವುದರಿಂದ ಇನ್ನು ಮುಂದೆ ಇನ್ನಷ್ಟು ಅನುದಾನ ಕಡಿತವಾಗುವ ಸಂಭವವಿದೆ. ಈ ಪಕ್ಷಪಾತಕ್ಕೆ ಕೊನೆ ಇಲ್ಲವೇ?
ಆದರೆ ಕರ್ನಾಟಕದ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ 6 ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಒದಗಿಸುವ 371ಜೆ ಗೆ ಯುಪಿಎ ಸರ್ಕಾರ ಅನುಮೋದನೆ ನೀಡಿತ್ತು ಎಂಬುದನ್ನು ಈ ಸಮಯದಲ್ಲಿ ಸ್ಮರಿಸಬಹುದು.


