| ಕೆ.ಭೀಮನಗೌಡ ಕಂಪ್ಲಿ |
ಆಂಧ್ರಪ್ರದೇಶದ 175 ವಿಧಾಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಈಗಾಗಲೇ ಎರಡೂ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ಸಲ ಎಂದಿನಂತೆ ಚುನಾವಣಾ ಕಣ ರಂಗೇರಿದೆ.
ಕಳೆದ ಬಾರಿ ಬಹುಮತ ಸ್ಥಾನ ಪಡೆದು ಸರ್ಕಾರ ರಚಿಸಿದ್ದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಈ ಒಂದೇ ಅವಧಿಗೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಕಳೆದ ಬಾರಿಯ (2014) ಚುನಾವಣೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ತೆಲುಗುದೇಶಂ ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಕೇವಲ 5 ಲಕ್ಷ ಮತಗಳ ಅಲ್ಪ ಅಂತರದಿಂದ (2014ರಲ್ಲಿ ತೆಲುಗುದೇಶಂ ಗಳಿಸಿದ ಒಟ್ಟು ಮತಗಳು 1 ಕೋಟಿ 35 ಲಕ್ಷ, ಅದೇ ವೈ.ಎಸ್.ಆರ್. ಕಾಂಗ್ರೆಸ್‍ಗೆ ಸಿಕ್ಕಿದ್ದು 1 ಕೋಟಿ 30 ಲಕ್ಷ ) ಅಧಿಕಾರ ಹಿಡಿದಿದ್ದ ಚಂದ್ರಬಾಬುನಾಯ್ಡು ನಂತರದ ದಿನಗಳಲ್ಲಿ ಸಾಲಮನ್ನಾಕ್ಕೆ ಚಿತ್ರ-ವಿಚಿತ್ರ ಷರತ್ತುಗಳನ್ನು ವಿಧಿಸುವ ಮೂಲಕ ರೈತರನ್ನು ಸತಾಯಿಸಿ, ಶೇಕಡಾ 50ರಷ್ಟು ರೈತರಿಗೂ ಸಾಲಮನ್ನಾದ ಪ್ರಯೋಜನ ಸಿಗದಂತೆ ಮಾಡಿದ್ದರು. ಈಗ ಅದೇ ರೈತ ಸಮುದಾಯ ಟಿ.ಡಿ.ಪಿ. ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಕಾಯುತ್ತಿದೆ.
ವಿಶಾಲಾಂಧ್ರದ ವಿಭಜನೆಯಿಂದಾಗಿ ತನ್ನ ರಾಜಧಾನಿ ಹೈದರಾಬಾದನ್ನು ಕಳೆದುಕೊಂಡಿದ್ದ ಆಂಧ್ರಪ್ರದೇಶವು ನೂತನ ರಾಜಧಾನಿಯನ್ನು ನಿರ್ಮಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಅಮರಾವತಿಯಲ್ಲಿ ನೂತನ ರಾಜಧಾನಿಯನ್ನು ಸಿಂಗಾಪುರಕ್ಕಿಂತಲೂ ಭವ್ಯವಾಗಿ ನಿರ್ಮಿಸುವುದಾಗಿ ಬುರುಡೆ ಬಿಟ್ಟಿದ್ದ ಚಂದ್ರಬಾಬುನಾಯ್ಡುಗೆ ಐದು ವರ್ಷ ಕಳೆದರೂ ಇದುವರೆಗೂ ಒಂದೇ ಒಂದು ಕಟ್ಟಡವನ್ನೂ ಪೂರ್ಣಗೊಳಿಸಲಾಗಿಲ್ಲ.
2014ರ ಚುನಾವಣೆಯಲ್ಲಿ ಭುಗಿಲೆದ್ದಿದ್ದ ಮೋದಿ ಅಲೆಯ ಸಂಪೂರ್ಣ ಪ್ರಯೋಜನ ಪಡೆಯಲಿಚ್ಛಿಸಿದ್ದ ಚಂದ್ರಬಾಬು ಬಿಜೆಪಿಯೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಹಲವು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದ್ದರು.
ನಂತರ ಕೇಂದ್ರದ ಮೋದಿ ಸರ್ಕಾರದಲ್ಲಿ ತನ್ನ ಪಕ್ಷದ ಅಶೋಕ್ ಗಜಪತಿರಾಜು ಹಾಗೂ ಸುಜನಾ ಚೌಧುರಿ ಎಂಬ ಸಂಸದರಿಗೆ ಸಚಿವ ಸ್ಥಾನಗಳನ್ನು ಕೊಡಿಸಿದ್ದರು. ಆದರೆ ಹಿಂದೆ ದೇವೇಗೌಡ ಹಾಗೂ ವಾಜಪೇಯಿ ಸರ್ಕಾರಗಳಲ್ಲಿ ಒತ್ತಡ ತಂತ್ರ ಅನುಸರಿಸಿ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದ ನಾಯ್ಡುವಿನ ತಂತ್ರ ಈ ಬಾರಿ ನಡೆಯಲಿಲ್ಲ. ಜೊತೆಗೆ ನೋಟ್‍ಬ್ಯಾನ್ ಹಾಗೂ ಜಿ.ಎಸ್.ಟಿ. ಯಂತಹ ಜನವಿರೋಧಿ ಕ್ರಮಗಳಿಂದಾಗಿ ಭುಗಿಲೆದ್ದ ಜನಾಕ್ರೋಶವನ್ನು ತಣಿಸಲು ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು, ಈಗ ಮೋದಿ ಹಾಗೂ ಬಿಜೆಪಿಯನ್ನು ವಾಚಾಮಗೋಚರವಾಗಿ ಬೈಯುತ್ತಿದ್ದಾರೆ.
ಇತ್ತ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಶೇಕಡಾವಾರು ಅಂತರದಿಂದ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂಡಬೇಕಾಗಿ ಬಂದಿದ್ದ ಯನುಮಲ ಸಂದಿಂಟಿ ಜಗನ್‍ಮೋಹನ್ ರೆಡ್ಡಿ ಕಳೆದ ಐದು ವರ್ಷಗಳಿಂದಲೂ ಒಂದಿಲ್ಲೊಂದು ಹೋರಾಟಗಳ ಮೂಲಕ ಜನರ ಮಧ್ಯೆಯೇ ಸಂಚರಿಸುತ್ತಿದ್ದು ಜನತೆಯ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ತನ್ನ ಪಕ್ಷದಿಂದ ಆಯ್ಕೆಯಾಗಿದ್ದ 63 ಶಾಸಕರ ಪೈಕಿ 25 ಶಾಸಕರನ್ನು ಆಮಿಷಗಳನ್ನೊಡ್ಡಿ ಚಂದ್ರಬಾಬು ನಾಯ್ಡು ಟಿಡಿಪಿಗೆ ಪಕ್ಷಾಂತರ ಮಾಡಿಸಿದ್ದಾಗ್ಯೂ ಕೂಡಾ, ಶಾಸಕರ ಸಂಖ್ಯೆ ಕಡಿಮೆಯಾದರೂ ಸಹ ತನ್ನ ನಿರಂತರ ಪ್ರವಾಸ ಹಾಗೂ ಹೋರಾಟಗಳ ಮೂಲಕ ಕಾರ್ಯಕರ್ತರ ಸಂಖ್ಯೆ ವೃದ್ಧಿಸಿಕೊಳ್ಳುವ ಜಾಣನಡೆಯನ್ನು ಜಗನ್ ಅನುಸರಿಸಿದರು.
ಇನ್ನು ಈ ಎರಡೂ ಪಕ್ಷಗಳ ಮಧ್ಯೆ ತನ್ನ ವಿಲಕ್ಷಣ ವರ್ತನೆಗಳಿಂದ ಪ್ರಸಿದ್ಧನಾದ ಪವನ್ ಕಲ್ಯಾಣ್ (ಈತ ನಟ ಚಿರಂಜೀವಿಯ ತಮ್ಮ) ಎಂಬ ನಟನ ಜನಸೇನಾ ಎಂಬ ಪಕ್ಷ ಕೂಡಾ ಸಿ.ಪಿ.ಎಂ, ಸಿಪಿಐ ಹಾಗೂ ಬಿಎಸ್‍ಪಿ ಪಕ್ಷಗಳೊಂದಿಗೆ ಮಿನಿ ಮೈತ್ರಿಕೂಟವನ್ನು ರಚಿಸಿಕೊಂಡು ತನ್ನ ಮೊದಲ ಚುನಾವಣೆಯನ್ನು ಎದುರಿಸುತ್ತಿದೆ. 2014ರಲ್ಲಿ ಈ ಪವನ್ ಕಲ್ಯಾಣ್ ಟಿಡಿಪಿ-ಬಿಜೆಪಿ ಮೈತ್ರಿಕೂಟಕ್ಕೆ ತನ್ನ ಬೆಂಬಲ ಘೋಷಿಸಿದ್ದರು.
ಈ ಬೆಂಬಲಕ್ಕೆ ಪ್ರತಿಫಲವಾಗಿ ಈತನಿಗೆ ಬಿಜೆಪಿಯಿಂದ ಆಕರ್ಷಕ ಪ್ಯಾಕೇಜ್ ನೀಡಲಾಗಿತ್ತು ಎನ್ನಲಾಗಿದೆ. ಆಂಧ್ರದಲ್ಲಿ ಅಸ್ತಿತ್ವದಲ್ಲಿಯೇ ಇರದ ಬಿಎಸ್‍ಪಿಗೆ ಈ ಸಲ 23 ಸ್ಥಾನಗಳನ್ನು ನೀಡಿರುವುದು, ತನ್ನ ಮಿತ್ರ ಪಕ್ಷಗಳಿಗೆ ವೈ.ಎಸ್.ಆರ್. ಕಾಂಗ್ರೆಸ್‍ನ ಹಾಲಿ ಎಂಎಲ್‍ಎಗಳ ಕ್ಷೇತ್ರಗಳನ್ನೇ ಬಿಟ್ಟುಕೊಟ್ಟಿರುವುದು- ಈ ಜನಸೇನಾ ಪಕ್ಷವು ತೆಲುಗುದೆಶಂ ಪಕ್ಷದ ‘ಬಿ’ ಟೀಮ್ ಎನ್ನುವ ಟೀಕೆಗಳಿಗೆ ಕಾರಣವಾಗಿದೆ.
ಆಂಧ್ರದ ಇದುವರೆಗಿನ ಚುನಾವಣೆಗಳಲ್ಲಿ ‘ಜಾತಿ’ ಪ್ರಬಲ ಅಂಶವಾಗಿದೆ. ಈ ಬಾರಿ ಚಂದ್ರಬಾಬು ನಾಯ್ಡುವಿನ ಟಿಡಿಪಿಯು ಕಮ್ಮ ಜಾತಿಯನ್ನು ನಂಬಿಕೊಂಡಿದ್ದರೆ., ಜಗನ್‍ರೆಡ್ಡಿಯ ವೈ.ಎಸ್.ಆರ್. ಕಾಂಗ್ರೆಸ್ ತನ್ನ ರೆಡ್ಡಿ ಜಾತಿಯ ಮತಗಳನ್ನು ನೆಚ್ಚಿಕೊಂಡಿದೆ. ಇನ್ನು ಪವನ್ ಕಲ್ಯಾಣ್‍ರ ಜನಸೇನಾ ತನ್ನದೇ ಕಾಪು (ಬಲಿಜ) ಸಮುದಾಯದ ಭರವಸೆಯಿಂದ ಪ್ರಥಮ ಬಾರಿ ಕಣಕ್ಕಿಳಿದಿದೆ. ಆದರೆ ಈ ಮೂರು ಪಕ್ಷಗಳ ಪೈಕಿ ಇದುವರೆಗೆ ಒಮ್ಮೆಯೂ ಬಿಜೆಪಿಯ ಜೊತೆ ಕೈಜೋಡಿಸದೇ ಅಂತರ ಕಾಯ್ದುಕೊಂಡಿರುವ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಬಗ್ಗೆ ಅಲ್ಪಸಂಖ್ಯಾತರು ಹಾಗೂ ದಲಿತರು ಹೆಚ್ಚು ಭರವಸೆಯನ್ನಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದಲೇ ಇದುವರೆಗೂ ನಡೆಸಲಾದ ಬಹುತೇಕ ಚುನಾವಣಾ ಸಮೀಕ್ಷೆಗಳಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷವೇ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆಂಧ್ರ ವಿಧಾನಸಭೆಯ 175 ಸ್ಥಾನಗಳಲ್ಲಿ 120 ರಿಂದ 130 ಸ್ಥಾನ ಪಡೆಯುವ ಮೂಲಕ ಮೂರನೇ ಎರಡಕ್ಕಿಂತಲೂ ಹೆಚ್ಚು ಶಾಸಕರನ್ನು ಹೊಂದಿ ವೈ.ಎಸ್.ಜಗನ್‍ಮೋಹನ್‍ರೆಡ್ಡಿ ಮುಖ್ಯಮಂತ್ರಿಯಾಗುವುದು ಖಚಿತವೆನ್ನಲಾಗಿದೆ. ಇನ್ನು ಲೋಕಸಭೆಯ ಒಟ್ಟು 25 ಸ್ಥಾನಗಳ ಪೈಕಿ 21 ರಿಂದ 23 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಾರೆನ್ನಲಾಗಿದೆ.
ಕರ್ನೂಲು, ಅನಂತಪುರ, ಕಡಪ, ಚಿತ್ತೂರು ಹಾಗೂ ದಕ್ಷಿಣ ಕರಾವಳಿಯ ನೆಲ್ಲೂರು, ಪ್ರಕಾಶಂ ಜಿಲ್ಲೆಗಳನ್ನೊಳಗೊಂಡ ಗ್ರೇಟರ್ ರಾಯಲಸೀಮಾ ಪ್ರದೇಶದಲ್ಲಿ ವೈ.ಎಸ್.ಆರ್.ಸಿ ಯ ಹಿಡಿತ ಬಲವಾಗಿದ್ದು, ಇಲ್ಲಿನ 79 ಶಾಸಕ ಸ್ಥಾನಗಳ ಪೈಕಿ 70 ನ್ನು ಜಗನ್ ಪಕ್ಷ ಪಡೆಯುವ ಸಾಧ್ಯತೆ ಇದೆ.
ಇನ್ನು ಉತ್ತರ ಕರಾವಳಿಯ ಗುಂಟೂರು, ಕೃಷ್ಣಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ, ವಿಜಯನಗರ ಹಾಗೂ ಶ್ರೀಕಾಕುಳಂ ಜಿಲ್ಲೆಗಳ ಪೈಕಿ ಗುಂಟೂರು ಹಾಗೂ ಕೃಷ್ಣಾ ಜಿಲ್ಲೆಗಳಲ್ಲಿ ತೆಲುಗು ದೇಶಂ ಹಾಗೂ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಉಳಿದ ಜಿಲ್ಲೆಗಳಲ್ಲಿ ಜನಸೇನಾ ಪಕ್ಷವನ್ನು ಒಳಗೊಂಡು ತ್ರಿಕೋನ ಸ್ಪರ್ಧೆ ನಡೆಯಲಿದೆ.
ಈ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗಳು ಅಪ್ರಸ್ತುತವೆನ್ನುವ ಮಟ್ಟಿಗೆ ಮೂಲೆಗುಂಪಾಗಿವೆ.
ಇತ್ತೀಚೆಗೆ ನಡೆದ ಜಗನ್ ಚಿಕ್ಕಪ್ಪ ಹಾಗೂ ಮಾಜಿ ಸಂಸದ ವೈ.ಎಸ್.ವಿವೇಕಾನಂದರೆಡ್ಡಿಯವರ ಕೊಲೆಯಿಂದಾಗಿ ಸ್ವಲ್ಪ ಮಟ್ಟಿನ ಅನುಕಂಪದ ಅಲೆಯೂ ಜಗನ್‍ನ ನೆರವಿಗೆ ಬಂದಿದೆ.
ತನ್ನ ಪಕ್ಷದ ಪರವಾಗಿ ಯಾವ ಅಂಶವೂ ಕೆಲಸ ಮಾಡದಿರುವುದನ್ನು ಗಮನಿಸಿ ಹತಾಶನಾಗಿರುವ ಚಂದ್ರಬಾಬು ನಾಯ್ಡು ಕಡೆಕಡೆಗೆ ‘ವೈ.ಎಸ್.ಆರ್. ಕಾಂಗ್ರೆಸ್‍ಗೆ ಮತ ಹಾಕಿದರೆ ಪರೋಕ್ಷವಾಗಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಆಂಧ್ರದಲ್ಲಿ ಆಳ್ವಿಕೆ ನಡೆಸುತ್ತಾರೆ’ ಹಾಗೂ ‘ತನ್ನ ಚಿಕ್ಕಪ್ಪ ವಿವೇಕಾನಂದರೆಡ್ಡಿಯ ಕೊಲೆಯಲ್ಲಿ ಜಗನ್ ಪಾತ್ರವಿದೆ’ ಎಂಬಂತಹ ಹತಾಶ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ತೆಲಂಗಾಣ : ಟಿ.ಆರ್.ಎಸ್. ಪಾಲಿಗೆ….
ತೆಲಂಗಾಣ ರಾಜ್ಯದಲ್ಲಿ ಒಟ್ಟು 17 ಲೋಕಸಭಾ ಸ್ಥಾನಗಳಿದ್ದು ಕಳೆದ ಚುನಾವಣೆಯಲ್ಲಿ ಟಿ.ಆರ್.ಎಸ್. 11 ಸ್ಥಾನಗಳನ್ನು ಗಳಿಸಿತ್ತು. ಈ ಸಲ ಒವೈಸಿಯ ಎಂ.ಐ.ಎಂ. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕೆ.ಚಂದ್ರಶೇಖರ್‍ಗೆ 15 ಸ್ಥಾನಗಳಲ್ಲಿ ಗೆಲ್ಲುವ ಹುಮ್ಮಸ್ಸು. ಸಮೀಕ್ಷೆಗಳು ಕೂಡಾ ಅದನ್ನೇ ಹೇಳುತ್ತಿವೆ. ಕೇವಲ 5 ತಿಂಗಳ ಹಿಂದೆ ನಡೆದ ಅವಧಿ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ 2/3ಕ್ಕಿಂತಲೂ ಹೆಚ್ಚಿನ ಸ್ಥಾನ ಗಳಿಸಿದ ಕೆ.ಸಿ.ಆರ್. ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ತೆಲಂಗಾಣದಲ್ಲಿ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್‍ನ ಶಾಸಕರು ಒಬ್ಬೊಬ್ಬರಾಗಿ ಟಿ.ಆರ್.ಎಸ್.ಗೆ ಸೇರ್ಪಡೆಯಾಗುತ್ತಿದ್ದಾರೆ.
ಇತ್ತ ಆಂಧ್ರಪ್ರದೇಶದಲ್ಲಿ ಜಗನ್‍ಮೋಹನ್ ರೆಡ್ಡಿಯ ವೈ.ಎಸ್.ಆರ್. ಪಕ್ಷಕ್ಕೆ ಬೆಂಬಲ ಸೂಚಿಸಿರುವ ಕೆ.ಸಿ.ಆರ್, ಚುನಾವಣೆಗಾಗಿ ಜಗನ್‍ಗೆ ಹಣಕಾಸು ನೆರವನ್ನು ನೀಡಿದ್ದಾರೆನ್ನಲಾಗುತ್ತಿದೆ. ಅವಿಭಜಿತ ಆಂಧ್ರಪ್ರದೇಶದ ಒಟ್ಟು 42 ಲೋಕಸಭಾ ಸ್ಥಾನಗಳ ಪೈಕಿ ಆಂಧ್ರದಿಂದ ವೈ.ಎಸ್.ಆರ್.ನ 20 ಹಾಗೂ ತೆಲಂಗಾಣದಿಂದ ಟಿ.ಆರ್.ಎಸ್.ನ 15- ಹೀಗೆ ಒಟ್ಟು 35 ಸಂಸದರೊಂದಿಗೆ ದೆಹಲಿಗೆ ಹೋಗಿ ಫಲಿತಾಂಶದ ನಂತರ ನಿರ್ಮಾಣ ಆಗಬಹುದಾದ ಅತಂತ್ರ ಲೋಕಸಭೆಯಲ್ಲಿ ಒಕ್ಕೂಟರಂಗ (ಫೆಡರಲ್ ಫ್ರಂಟ್) ಸರ್ಕಾರ ರಚಿಸುವ ಕನಸನ್ನು ಕೆ.ಸಿ.ಆರ್. ಕಾಣುತ್ತಿದ್ದಾರಂತೆ. ಹಾಗೊಂದು ವೇಳೆ ಸಮೀಕ್ಷೆಗಳ ಪ್ರಕಾರವೇ ನಿರೀಕ್ಷಿತ ಫಲಿತಾಂಶ ಬಂದರೆ ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸಂಸದರೇ ನಿರ್ಣಾಯಕರಾದರೂ ಅಚ್ಚರಿ ಪಡಬೇಕಿಲ್ಲ.


