ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ನಾಪತ್ತೆಯಾಗಿರುವ ಯುವತಿಯನ್ನು ಕೇರಳದ ಕೋಯಿಕ್ಕೋಡ್ ನಿವಾಸಿ, ಎರ್ನಾಕುಲಂನ ಐಟಿ ಉದ್ಯೋಗಿ ಶರಣ್ಯಾ (35) ಎಂದು ಗುರುತಿಸಲಾಗಿದೆ. ಅವರು ಕಕ್ಕಬ್ಬೆಗೆ ಪ್ರವಾಸಕ್ಕೆಂದು ಬಂದಿದ್ದರು. ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು. ಮೂರು ದಿನಗಳ ಹಿಂದೆ ಬೆಳಿಗ್ಗೆ 8:30ಕ್ಕೆ ತಡಿಯಂಡಮೋಳ್ ಬೆಟ್ಟದ ಚಾರಣಕ್ಕೆ ಹೊರಟಿದ್ದರು. ಅರಣ್ಯ ಇಲಾಖೆಯ ನಿಯಮದಂತೆ ಒಬ್ಬರೇ ಚಾರಣಕ್ಕೆ ಹೋಗಲು ಅವಕಾಶವಿಲ್ಲದ ಕಾರಣ, ಅಲ್ಲಿಗೆ ಬಂದಿದ್ದ ಮತ್ತೊಂದು ತಂಡದೊಂದಿಗೆ ಅವರನ್ನು ಕಳುಹಿಸಿಕೊಡಲಾಗಿತ್ತು ಎಂದು ವರದಿಯಾಗಿದೆ.
ಮಧ್ಯಾಹ್ನ 1:30ಕ್ಕೆ ಬೆಟ್ಟದಿಂದ ವಾಪಸ್ ಬರಬೇಕಿದ್ದ ಶರಣ್ಯಾ, ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಅವರನ್ನು ಸಂಪರ್ಕಿಸಲು ಹೋಂಸ್ಟೇ ಮಾಲೀಕರು ಕರೆ ಮಾಡಿದ್ದಾರೆ. ಆರಂಭದಲ್ಲಿ ಸಂಪರ್ಕಕ್ಕೆ ಸಿಗದ ಶರಣ್ಯಾ, ನಂತರ ಕರೆ ಸ್ವೀಕರಿಸಿ ತಾನು ದಾರಿ ತಪ್ಪಿದ್ದೇನೆ ಎಂದು ತಿಳಿಸಿದ್ದಾರೆ. ಬಳಿಕ, ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಅಗಿನಿಂದಲೂ ಅವರು ನಾಪತ್ತೆಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ನಿವಾಸಿಗಳು ಬೆಟ್ಟದ ಸುತ್ತಮುತ್ತ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ. ದಟ್ಟ ಅರಣ್ಯ ಮತ್ತು ಸಂಕೀರ್ಣ ಹಾದಿಗಳಿರುವ ಕಾರಣ ಶೋಧ ಕಾರ್ಯಕ್ಕೆ ಅಡೆತಡೆ ಉಂಟಾಗುತ್ತಿದೆ. ಪ್ರಸ್ತುತ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ಇಳಿದಿದ್ದು, ಯುವತಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Courtesy : eedina.com


