ತಮಿಳುನಾಡಿನ ಚೆನ್ನೈನಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಅತಿ ಹಿಂದುಳಿದ ಜಾತಿಗೆ (ಒಬಿಸಿ) ಸೇರಿದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಆದಿ ದ್ರಾವಿಡ (ಎಸ್‌ಸಿ) ಸಮುದಾಯದ ಯುವಕನನ್ನು ಪತ್ನಿ ಸಹೋದರನೆ ಹತ್ಯೆ ಮಾಡಿದ್ದಾನೆ.
ಶಂಕಿತ ಮರ್ಯಾದೆಗೇಡು ಹತ್ಯೆಯ ಪ್ರಕರಣದಲ್ಲಿ 26 ವರ್ಷದ ದಲಿತ ಯುವಕನನ್ನು ಚೆನ್ನೈನಲ್ಲಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸೋದರ ಸೇರಿದಂತೆ ಐವರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ.
ಹತ್ಯೆಯಾದ ದಲಿತ ಯುವಕನು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್ ಎಂದು ಗುರುತಿಸಲಾಗಿದೆ. ನಗರದ ಪಲ್ಲಿಕರಣೈ ಬಳಿ ಶನಿವಾರ ಈ ಘಟನೆ ನಡೆದಿದೆ; ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಚೆನ್ನೈನ ಪಲ್ಲಿಕರಣೈನಲ್ಲಿರುವ ಖಾಸಗಿ ಬಾರ್‌ನಲ್ಲಿ ಪ್ರವೀಣ್‌ನನ್ನು ಅವನ ಹೆಂಡತಿಯ ಸಹೋದರ ಮತ್ತು ಅವನ ಸ್ನೇಹಿತರು ಕೊಲೆ ಮಾಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಪ್ರವೀಣ್ ಮತ್ತು ಶರ್ಮಿ ಅವರು ನವೆಂಬರ್ 2023ರಲ್ಲಿ ವಿವಾಹ ನೋಂದಾಯಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಏಕೆಂದರೆ, ಅವರ ಕುಟುಂಬಗಳು ಅವರ ಅಂತರ್ಜಾತಿ ಸಂಬಂಧವನ್ನು ಒಪ್ಪಿರಲಿಲ್ಲ. ಪ್ರವೀಣ್ ಪರಿಶಿಷ್ಟ ಜಾತಿಯಡಿ ಬರುವ ಆದಿ ದ್ರಾವಿಡರ್ ಸಮುದಾಯಕ್ಕೆ ಸೇರಿದವರಾಗಿದ್ದರೆ, ಶರ್ಮಿ ಒಬಿಸಿ ಅಡಿಯಲ್ಲಿ ಬರುವ ಯಾದವ ಜಾತಿಗೆ ಸೇರಿದವರು.
ಶರ್ಮಿಯ ಸಹೋದರ ದಿನೇಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪಲ್ಲಿಕರಣೈನಲ್ಲಿರುವ ಖಾಸಗಿ ಬಾರ್‌ಗೆ ಭೇಟಿ ನೀಡಿದ್ದರು, ಅಲ್ಲಿ ಪ್ರವೀಣ್ ಕೂಡ ಇದ್ದರು. ಗುಂಪು ಪ್ರವೀಣ್ ಬಳಿಗೆ ಬಂದಿತು ಮತ್ತು ವಾಗ್ವಾದ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ದಿನೇಶ್ ಮತ್ತು ಆತನ ಸ್ನೇಹಿತರು ತಮ್ಮೊಂದಿಗೆ ತಂದಿದ್ದ ಚಾಕುಗಳನ್ನು ಹೊರತೆಗೆದು ಪ್ರವೀಣ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
Caste killing in #Chennai's Pallikarani: Praveen belonging to the #ScheduledCaste was killed by his wife's brother and atleast 4 other men. His 19-year-old wife Sharmi-mourns. She belongs to the Yadava caste.#news pic.twitter.com/As3njzn6Cm
— Nidharshana Raju (@NidharshanaR) February 25, 2024
ತೀವ್ರವಾಗಿ ಗಾಯಗೊಂಡ ಪ್ರವೀಣ್‌ನನ್ನು ಕ್ರೋಂಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಎಸ್ 10 ಪಲ್ಲಿಕರನೈ ಪೊಲೀಸ್ ಠಾಣೆಯಲ್ಲಿ ದಿನೇಶ್ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲ ಐವರು ಆರೋಪಿಗಳನ್ನು ಫೆಬ್ರವರಿ 25 ರಂದು ಮಂಬಕ್ಕಂ ಬಳಿ ಪೊಲೀಸರು ಬಂಧಿಸಿದ್ದರು.
ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಐವರು ಆರೋಪಿಗಳಾದ ಸ್ಟೀಫನ್ ಕುಮಾರ್, ಜೋತಿ ಲಿಂಗಂ, ಶ್ರೀರಾಮ್, ಅಶೋಕ್, ವಿಷ್ಣು ರಾಜ್ ಮತ್ತು ದಿನೇಶ್ ಅವರನ್ನು ಬಂಧಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಪ್ರವೀಣ್ ಶರ್ಮಿಳಾಳನ್ನು ಆಕೆಯ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಶನಿವಾರ ಊಟ ಖರೀದಿಸಲು ಪ್ರವೀಣ್ ಮನೆಯಿಂದ ಹೊರಬಂದಿದ್ದರು, ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ಶರ್ಮಿಳಾ ಅವರ ಸಹೋದರ ದಿನೇಶ್ ಮತ್ತು ಇತರ ನಾಲ್ವರು ಆರೋಪಿಗಳು ಆತನನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರವೀಣ್ ಅವರ ತಂದೆ ಗೋಪಿ, ‘ನನ್ನ ಮಗ ಊಟ ಖರೀದಿಸಲು ಹೊರಗೆ ಹೋಗಿದ್ದ; ಎರಡು ಗಂಟೆಯಾದರೂ ಅವನು ಹಿಂತಿರುಗದಿದ್ದಾಗ, ನಾನು ಚಿಂತೆ ಮಾಡಲು ಪ್ರಾರಂಭಿಸಿದೆ. ನನ್ನ ಸೊಸೆ ಅಳಲು ಪ್ರಾರಂಭಿಸಿದಾಗ ಮಾತ್ರ, ಏನೋ ಆಗಿದೆ ಎಂದು ನನಗೆ ಅರ್ಥವಾಯಿತು. ಕೊಲೆಯಲ್ಲಿ ಭಾಗಿಯಾದ ಅವರೆಲ್ಲರಿಗೂ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ. ನನ್ನ ಸೊಸೆಗಾಗಿ ಸರ್ಕಾರ ಏನಾದರೂ ಮಾಡಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ; ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿಲ್ಲ: ಬಿಜೆಪಿಯ ಸುಳ್ಳನ್ನು ಬಯಲು ಮಾಡಿದ ಅರ್ಚಕರ ಒಕ್ಕೂಟ


