ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇಬ್ಬರು ಹಾಲಿ ಶಾಸಕರು, ಹಲವು ಮಾಜಿ ಶಾಸಕರು ಮತ್ತು ರಾಜ್ಯ ಮಹಿಳಾ ಘಟಕದ ಮುಖ್ಯಸ್ಥೆ ರಿತು ಜೈಸ್ವಾಲ್ ಸೇರಿದಂತೆ 27 ಮಂದಿಯನ್ನು ಆರ್‌ಜೆಡಿ ಸೋಮವಾರ ಪಕ್ಷದಿಂದ ಉಚ್ಚಾಟಿಸಿದೆ.
“ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಅಧಿಕೃತ ಮಾಹಿತಿಯ ಆಧಾರದ ಮೇಲೆ 27 ಮಂದಿಯನ್ನು ಆರು ವರ್ಷಗಳ ಕಾಲ ಆರ್‌ಜೆಡಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ” ಎಂದು ಆರ್‌ಜೆಡಿಯ ರಾಜ್ಯಾಧ್ಯಕ್ಷ ಮಂಗನಿ ಲಾಲ್ ಮಂಡಲ್ ಸೋಮವಾರ ಸಂಜೆ ಬಿಡುಗಡೆ ಮಾಡಿದ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ.
ಉಚ್ಚಾಟಿತರಲ್ಲಿ ಹಾಲಿ ಶಾಸಕರಾದ ಛೋಟೆ ಲಾಲ್ ರೈ, ಮೊಹಮ್ಮದ್ ಕಮ್ರಾನ್ ಒಳಗೊಂಡಿದ್ದಾರೆ. ರೈ ಪ್ರಸ್ತುತ ಪಾರ್ಸಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಗೋವಿಂದಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಮ್ರಾನ್ ಅವರನ್ನು ಈ ಬಾರಿ ಕೈಬಿಡಲಾಗಿದೆ.
ಮಾಜಿ ಶಾಸಕರಾದ ರಾಮ್ ಪ್ರಕಾಶ್ ಮಹ್ತೋ, ಅನಿಲ್ ಸಹಾನಿ, ಸರೋಜ್ ಯಾದವ್, ಗಣೇಶ್ ಭಾರ್ತಿ ಮತ್ತು ಅನಿಲ್ ಯಾದವ್ ಉಚ್ಚಾಟಿತರಲ್ಲಿ ಸೇರಿದ್ದಾರೆ. ಗಮನಾರ್ಹವಾಗಿ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ರಿತು ಜೈಸ್ವಾಲ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ರಿತು ಅವರು ಪರಿಹಾರ್ ಕ್ಷೇತ್ರದಿಂದ ಆರ್‌ಜೆಡಿಯ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದಾರೆ.
ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿಯ ತೇಜಸ್ವಿ ಯಾದವ್ ಸೋಮವಾರ ಸಂಜೆ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿ, ಛತ್ ಪೂಜೆಗಾಗಿ ಮನೆಗೆ ಬಂದಿರುವ ವಲಸಿಗರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ ನಂತರವೇ ರಾಜ್ಯದಿಂದ ಹಿಂತಿರುಗಬೇಕೆಂದು ಮನವಿ ಮಾಡಿದ್ದಾರೆ. “ಮುಂದಿನ ಛತ್ ವೇಳೆಗೆ ಯಾರೂ ಉದ್ಯೋಗ, ಶಿಕ್ಷಣ ಅಥವಾ ಚಿಕಿತ್ಸೆಗಾಗಿ ಬಿಹಾರದಿಂದ ಹೊರಗೆ ಹೋಗಬೇಕಾಗಿಲ್ಲ ಎಂದು ನಾನು ಭರವಸೆ ನೀಡುತ್ತೇನೆ” ಎಂದಿದ್ದಾರೆ.
ಹಬ್ಬಕ್ಕಾಗಿ ಊರಿಗೆ ಮರಳುತ್ತಿರುವ ವಲಸಿಗರು ರೈಲುಗಳನ್ನು ಹತ್ತುವಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ ತೇಜಸ್ವಿ ಯಾದವ್, ಕೇಂದ್ರ ರೈಲ್ವೆ ಸಚಿವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 12,000 ವಿಶೇಷ ರೈಲುಗಳ ವ್ಯವಸ್ಥೆ ಮಾಡುವ ಸಚಿವರ ಹಿಂದಿನ ಹೇಳಿಕೆಯನ್ನು ಅಣಕಿಸಿದ್ದಾರೆ.
“ಎಲ್ಲಿ ಸಚಿವ ರೈಲುಗಳು? ಬಿಹಾರದ ಜನತೆ ತುಂಬಿ ತುಳುಕುತ್ತಿರುವ ರೈಲುಗಳಲ್ಲಿ, ಶೌಚಾಲಯಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ. ಬಿಹಾರದ ಜನತೆಗೆ ಅವಮಾನ ಮಾಡಿದ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಕ್ಷಮೆ ಯಾಚಿಸಬೇಕು” ಎಂದು ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.
“ಮಹಾಘಟಬಂಧನದ ಜಂಟಿ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡುತ್ತೇವೆ. ರಾಹುಲ್ ಗಾಂಧಿ ಜೊತೆ ಜಂಟಿ ಚುನಾವಣಾ ಪ್ರಚಾರ ಮಾಡುತ್ತೇವೆ” ಎಂದು ತೇಜಸ್ವಿ ಯಾದವ್ ಘೋಷಿಸಿದ್ದಾರೆ.
‘ನಮಗೆ ಪಿತೂರಿಯ ಶಂಕೆಯಿದೆ’: ತಮಿಳುನಾಡು ಎಸ್‌ಐಆರ್ ವಿರುದ್ದ ಸರ್ವಪಕ್ಷ ಸಭೆ ಕರೆದ ಡಿಎಂಕೆ ಮೈತ್ರಿಕೂಟ


