ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ಮುಂದುವರಿಸಿದ್ದಾರೆ. ಈ ಕಾಯ್ದೆಗಳ ಪರಿಣಾಮ ಈಗಾಗಲೇ ಬೀರಲಾರಂಭಿಸಿದೆ. ಕಾರ್ಪೊರೇಟ್ ಶಕ್ತಿಗಳು ಕೃಷಿ ಮೇಲೆ ಹಿಡಿತ ಸಾಧಿಸಲು ಆರಂಭಿಸಿದ್ದು, ಹಿಮಾಚಲ ಪ್ರದೇಶದ ಸೇಬು ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.
ಬಂಡವಾಳಶಾಹಿಗಳ ಬದಲು ಸರ್ಕಾರವೇ ಕೋಲ್ಡ್ ಸ್ಟೋರೇಜ್ ಸ್ಥಾಪಿಸಬೇಕು ಎಂದು ಸೇಬು ಬೆಳೆಗಾರರು ಒತ್ತಾಯಿಸುತ್ತಿದ್ದಾರೆ. ಮುಕ್ತ ಆರ್ಥಿಕ ನೀತಿಯಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ಹಿಮಾಚಲ ಪ್ರದೇಶದ ಪ್ರಮುಖ ಬೆಳೆಯಾದ ಸೇಬುವಿನ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ.
ಈ ಗುಡ್ಡಗಾಡು ರಾಜ್ಯದಲ್ಲಿ ಮುಕ್ತ ಮಾರುಕಟ್ಟೆ ಮಾದರಿಯಲ್ಲಿ ಸುಮಾರು ಐದು ಸಾವಿರ ಕೋಟಿ ರೂ. ಸೇಬು ವ್ಯವಹಾರ ನಡೆಯುತ್ತಿದೆ. ಆದರೆ ಸೇಬು ಮಾರುಕಟ್ಟೆಗೆ ಅದಾನಿ ಗ್ರೂಪ್ ಕಾಲಿಟ್ಟ ಮೇಲೆ ದೊಡ್ಡ ಮಟ್ಟದ ಹಿನ್ನೆಡೆಯಾಗಿದೆ. ಒಂದು ಕೆ.ಜಿ. ಎ ಗ್ರೇಡ್ ಪ್ರೀಮಿಯಮ್ ಸೇಬಿಗೆ ಕಳೆದ ವರ್ಷ 88 ರೂ.ಗಳನ್ನು ಪಡೆಯುತ್ತಿದ್ದ ರೈತರು, ಈಗ 72 ರೂಪಾಯಿ ಪಡೆಯುವಂತಾಗಿದೆ.
ವಿವಾದಾತ್ಮಕ ಕೃಷಿ ಕಾಯ್ದೆಗಳ ಮೂಲಕ ಕೃಷಿ ಮಾರುಕಟ್ಟೆಯ ಮೇಲೆ ಬಂಡವಾಳಶಾಹಿಗಳ ಏಕಸ್ವಾಮ್ಯತ್ವಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದರಿಂದ ಪಂಜಾಬ್ ಮತ್ತು ಹರಿಯಾಣದಲ್ಲಿ ಅದಾನಿ ಆಸ್ತಿಗಳಿಗೆ ರೈತರು ಮುತ್ತಿಗೆ ಹಾಕಿದ್ದಾರೆ. ಈಗ ಹಿಮಾಚಲ ಪ್ರದೇಶದ ಸೇಬು ಬೆಳೆಗಾರರು, “ಅದಾನಿಯವರ ಕಾರ್ಯವೈಖರಿ ಹಾನಿಕಾರಕವಾಗಿದೆ” ಎನ್ನುತ್ತಿದ್ದಾರೆ.
ರೋಹ್ರು ಮೂಲದ ‘ಹಿಮಾಲಯನ್ ಸಮುದಾಯಕ್ಕಾಗಿ ತೋಟಗಾರಿಕೆ ಮತ್ತು ಕೃಷಿ ಅಭಿವೃದ್ಧಿ’ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ಡಿಂಪ್ಲೆ ಪಂಜ್ಟ ಅವರು ‘ದಿ ವೈರ್’ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದು, “2011ರಲ್ಲಿ ಅದಾನಿ ಕಂಪನಿಯವರು ಎ ಗ್ರೇಡ್ ಗುಣಮಟ್ಟದ ಸೇಬಿಗೆ 65 ರೂಪಾಯಿಗಳನ್ನು ನೀಡುತ್ತಿದ್ದರು. ಒಂದು ದಶಕದ ನಂತರದಲ್ಲಿ ಅವರು 7 ರೂ.ಗಿಂತ ಹೆಚ್ಚು ನೀಡುತ್ತಿಲ್ಲ” ಎಂದಿದ್ದಾರೆ.
“ನಾವು ಅಷ್ಟಕ್ಕೆ ಮಾತ್ರ ಅರ್ಹರಾಗಿದ್ದೇವೆ. ದಿನದಿಂದ ದಿನಕ್ಕೆ ಉತ್ಪಾದನಾ ವೆಚ್ಚದಿಂದ ರೈತರು ಕುಗ್ಗುತ್ತಿರುವಾಗ ಸರ್ಕಾರದ ಸಹಕಾರದಿಂದ ಬಂದ ಕಂಪೆನಿಯು, ನಿರಂತರವಾಗಿ ಖರೀದಿ ಬೆಲೆಯನ್ನು ಕಡಿಮೆ ಮಾಡುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಪಂಜ್ಟ.
“ಪ್ಯಾಕೇಜಿಂಗ್ ವೆಚ್ಚವನ್ನೂ ಸೇರಿದಂತೆ ಒಂದು ಬಾಕ್ಸ್‌ಗೆ 250 ರೂ.ಗಳು ಉತ್ಪಾದನಾ ವೆಚ್ಚ ರೈತರಿಗೆ ತಗುಲುತ್ತಿತ್ತು. ಈಗ ಉತ್ಪಾದನಾ ವೆಚ್ಚ 600 ರೂ.ಗಳಾಗಿದೆ. ಆದರೆ ಹಿಂತಿರುಗುವ ಹಣ ಮಾತ್ರ ದಶಕದ ಹಿಂದೆ ಇದ್ದಷ್ಟೇ ಈಗಲೂ ಇದೆ” ಎನ್ನುತ್ತಾರೆ ಅವರು.
ಮತ್ತೊಂದು ಸಮಸ್ಯೆಯೇನೆಂದರೆ ಅದಾನಿ ಗುಂಪಿನವರು ಒಂದು ಸೀಸನ್‌ನಲ್ಲಿ ಒಂಬತ್ತು ಅಥವಾ ಹತ್ತು ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 25 ಕೆ.ಜಿ. ಸೇಬುಗಳು ಇರುತ್ತವೆ) ಕೊಳ್ಳುತ್ತಾರಷ್ಟೇ. ಇದು ರಾಜ್ಯದ ಒಟ್ಟು ಸೇಬು ಉತ್ಪಾದನೆಯಲ್ಲಿ ಶೇ. 3-4ರಷ್ಟು ಉತ್ಪನ್ನವನ್ನೂ ಮೀರುವುದಿಲ್ಲ. ಅದಾನಿ ಕಂಪನಿಯು ಮಾರುಕಟ್ಟೆಯನ್ನೂ ಅಸ್ಥಿರಗೊಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪಂಜ್ಟ.
ಇದನ್ನೂ ಓದಿ: ಗುಜರಾತ್‌ನಲ್ಲಿ ಹೆರಾಯಿನ್ ವಶ: ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?- ಕಾಂಗ್ರೆಸ್


