Homeಮುಖಪುಟವಿಶ್ವ ಪುಸ್ತಕ ದಿನ; ಸಾರ್ವಜನಿಕ ಗ್ರಂಥಾಲಯಗಳು: ಎಲ್ಲ ಶೋಷಿತ ಸಮುದಾಯಗಳನ್ನು ತಲುಪಿವೆಯೇ?

ವಿಶ್ವ ಪುಸ್ತಕ ದಿನ; ಸಾರ್ವಜನಿಕ ಗ್ರಂಥಾಲಯಗಳು: ಎಲ್ಲ ಶೋಷಿತ ಸಮುದಾಯಗಳನ್ನು ತಲುಪಿವೆಯೇ?

- Advertisement -
- Advertisement -

ಮೈಸೂರಿನ ಸೈಯದ್ ಇಸಾಕ್ ಅವರು ಕಳೆದ ಎರಡು ವಾರದಿಂದ ಸುದ್ದಿಯಲ್ಲಿದ್ದಾರೆ. ಪುಸ್ತಕ ಪ್ರೇಮಿ ಸೈಯದ್‌ರವರು ತಮ್ಮ ಸ್ವಂತ ಪರಿಶ್ರಮದಿಂದ ಸಾರ್ವಜನಿಕರಿಗಾಗಿಯೇ ಶಾಂತಿನಗರದಲ್ಲಿ ಹತ್ತು ವರ್ಷಗಳಿಂದ ಗ್ರಂಥಾಲಯವನ್ನು ನಡೆಸುತ್ತಿದ್ದರು. ತಮ್ಮ ಮನೆಯ ಸಮೀಪದಲ್ಲಿಯೇ ಮರಗಳಿಂದ ಆವೃತ್ತವಾಗಿರುವ ತಂಪು ಜಾಗದಲ್ಲಿ ಕಟ್ಟಿಗೆ, ತೆಂಗಿನ ಗರಿ ಹಾಗೂ ತಗಡಿನ ಶೀಟುಗಳಿಂದ ಈ ಗ್ರಂಥಾಲಯವನ್ನು ಕಟ್ಟಿದ್ದರು. ಮಳೆ ಸುರಿಯುವಾಗ ಸೋರದಿರಲೆಂದು ಛಾವಣಿಯ ಮೇಲೆ ಪ್ಲಾಸ್ಟಿಕ್ ಹೊದಿಸಿದ್ದರು. ಆಧುನಿಕ ಸೌಕರ್ಯಗಳಿಲ್ಲದ ಇಂತಹ ಹರುಕು ಮುರುಕು ಗ್ರಂಥಾಲಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಯಾರೋ ದುಷ್ಕರ್ಮಿಗಳಿಂದ ಈ ಗ್ರಂಥಾಲಯ ಬೆಂಕಿಗೆ ಆಹುತಿಯಾದ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾಯಿತು. ಪುಸ್ತಕಗಳು ಸುಟ್ಟು ಬೂದಿಯಾಗಿ ಅಳಿದುಳಿದ ಪುಟಗಳಲ್ಲಿ ಅಂಬೇಡ್ಕರ್, ಲೋಹಿಯಾ, ಕುವೆಂಪು ಅವರ ಹೆಸರುಗಳಿದ್ದವು; ಅಲ್ಲಿ ಖುರಾನ್, ಬೈಬಲ್, ಭಗವದ್ಗೀತೆಗಳ ನೂರಾರು ಪ್ರತಿಗಳಿದ್ದವು; ಓದುಗರಿಗಾಗಿಯೇ ಹಲವು ದಿನಪತ್ರಿಕೆಗಳನ್ನು ತರಿಸಲಾಗುತ್ತಿತ್ತು. ಈ ಗ್ರಂಥಾಲಯದಿಂದ ಅಲ್ಲಿಯ ಓದುಗರು ಒಂದಿಷ್ಟು ಪ್ರಯೋಜನ ಪಡೆದುಕೊಂಡಿದ್ದರು.

ಸೈಯದ್ ಅವರ ಸಾರ್ವಜನಿಕ ಗ್ರಂಥಾಲಯ ದಹನದ ಸುದ್ದಿಯು ಏಪ್ರಿಲ್ 9ರ ಬೆಳಿಗ್ಗೆಯಿಂದಲೇ ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಯಿತು. ಈ ಸುದ್ದಿಯು ದಿನಪತ್ರಿಕೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಿಪ್ರವಾಗಿಯೇ ಹರಿದಾಡಿತು. ಸಂವೇದನಾಶೀಲ ಜನರಿಂದ ಈ ದುಷ್ಕೃತ್ಯಕ್ಕೆ ತೀವ್ರವಾದ ವಿಷಾದ, ಖಂಡನೆ ವ್ಯಕ್ತವಾಯಿತು. ಪುಸ್ತಕಗಳು ಭಸ್ಮವಾಗಿರುವ ಸೈಯದ್ ಅವರ ನೋವಿಗೆ ಅಸಂಖ್ಯಾತರು ಹೃದಯವಂತಿಕೆಯಿಂದ ಮಿಡಿದು ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದ ಸೈಯದ್ ಅವರು ಅದೇ ಜಾಗದಲ್ಲಿ ಗ್ರಂಥಾಲಯವನ್ನು ಪುನರ್ ನಿರ್ಮಿಸುವುದರ ಬಗ್ಗೆ ಮತ್ತೆ ಮತ್ತೆ ಮಾತಾಡಿದ್ದಾರೆ. 63 ವರ್ಷದ ಸೈಯದ್ ತೆರೆಯ ಮರೆಯಲ್ಲಿದ್ದುಕೊಂಡು, ತಮ್ಮ ಪಾಡಿಗೆ ತಾವು ಓದುವ ಹವ್ಯಾಸವನ್ನು ಬೆಳೆಸುತ್ತಿದ್ದರು. ಶಾಂತಿನಗರದ ಪುಟ್ಟ ಜಾಗದಲ್ಲಿಯೇ ಪುಸ್ತಕಗಳ ಜಗತ್ತನ್ನು ತೆರೆದಿಟ್ಟಿದ್ದರು.

PC : Public TV

ಮೈಸೂರಿನಲ್ಲಿ ವಾಸವಾಗಿರುವ ಖ್ಯಾತ ಸರೋದ್ ವಾದಕರಾದ ರಾಜೀವ ತಾರಾನಾಥ ಅವರು ಸೈಯದ್ ಅವರ ಗ್ರಂಥಾಲಯದ ಪುನರ್ ನಿರ್ಮಾಣಕ್ಕೆ ಐವತ್ತು ಸಾವಿರ ರೂಪಾಯಿಗಳನ್ನು ಹಾಗೂ ಪುಸ್ತಕಗಳನ್ನು ಕೊಡುವುದಾಗಿ ಹೇಳಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಮುಜಾಫರ್ ಅಸಾದಿಯವರು ದೇಶವಿದೇಶಗಳಿಂದ ಪುಸ್ತಕಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂದಾಜು ಹತ್ತು ಸಾವಿರ ಪುಸ್ತಕಗಳು ಸಂಗ್ರಹವಾಗುವ ಸಾಧ್ಯತೆ ಇರುವುದಾಗಿ ಹೇಳಿಕೊಂಡಿದ್ದಾರೆ. ಮೈಸೂರಿನ ಕೇಂದ್ರ ಗ್ರಂಥಾಲಯದ ಮುಖ್ಯಸ್ಥರು ಹಾಗೂ ಮೈಸೂರಿನ ಮುಡಾ ಕಮಿಷನರ್ ಅವರು ಸುಟ್ಟು ಹೋದ ಗ್ರಂಥಾಲಯಕ್ಕೆ ಭೇಟಿ ನೀಡಿದ್ದಾರೆ. ಅದೇ ಜಾಗದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡದ ಕಾಮಗಾರಿಯನ್ನು ಶುರು ಮಾಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಸುಸಜ್ಜಿತ ಕಟ್ಟಡ ಎದ್ದು ನಿಲ್ಲುವ ಸಕಲ ಸಿದ್ಧತೆಗಳು ನಡೆಯುವಂತೆ ತೋರುತ್ತಿವೆ.

ಸೈಯದ್ ಅವರ ಗ್ರಂಥಾಲಯ ಭಸ್ಮಗೊಳ್ಳಲು ವ್ಯಕ್ತಿಯೊಬ್ಬ ಬೀಡಿ ಹಚ್ಚಿ ನಿರ್ಲಕ್ಷ್ಯದಿಂದ ಎಸೆದ ಬೆಂಕಿಕಡ್ಡಿಯೇ ಕಾರಣವೆಂಬ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಏಪ್ರಿಲ್ 18ರ ಪ್ರಜಾವಾಣಿಯಲ್ಲಿ ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಕೂಡ. ಗ್ರಂಥಾಲಯ ಮರು ನಿರ್ಮಿಸಲು ಆನ್‌ಲೈನ್‌ನಲ್ಲಿ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಆರಂಭಿಸಿದ್ದ ಇನ್ಫೊಸಿಸ್ ಸಾಫ್ಟ್‌ವೇರ್ ಎಂಜಿನಿಯರ್ ಫತೇನ್ ಮಿಸ್ಬಾ ಅವರು 29 ಲಕ್ಷ ಹಣವನ್ನು ಸಂಗ್ರಹಿಸಿದ್ದಾರೆ. ಈ ಅಭಿಯಾನವನ್ನು ಮಿಸ್ಬಾ ಅವರು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಏನಾದರಾಗಲಿ, ಅಲ್ಲಿ ಗ್ರಂಥಾಲಯ ನಿರ್ಮಾಣವಾಗಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ.

ಸೈಯದ್ ಅವರಿಗೆ ಯಾವುದೇ ಕಾಯಂ ಉದ್ಯೋಗವಿಲ್ಲ. ಪಾಯಿಖಾನೆಯ ಪೈಪುಗಳು ಕಟ್ಟಿಕೊಂಡಾಗ ಅವುಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ. ಆ ಕೆಲಸದಿಂದ ಸಿಗುವ ಅಲ್ಪ ಹಣದಲ್ಲಿ ಗ್ರಂಥಾಲಯದ ಮೇಲ್ ಹೊದಿಕೆಗಾಗಿ ಶೀಟುಗಳನ್ನು ಕೊಂಡಿದ್ದಾರೆ. ಮನೆಯಲ್ಲಿ ಅವರ ಹೆಂಡತಿ ಬೀಡಿ ಕಟ್ಟುವ ಕೆಲಸವನ್ನು ಮಾಡುತ್ತಾರೆ. ಈ ನಾಗರಿಕ ಸಮಾಜ ಯಾವ ಕೆಲಸವನ್ನು ಅಶುದ್ಧ, ಹೀನ, ತುಚ್ಛವೆಂದು ಕಂಡಿದೆಯೋ ಅದನ್ನು ಸೈಯದ್‌ರವರು ಜೀವನೋಪಾಯಕ್ಕಾಗಿ ಮಾಡುತ್ತ ಬಂದಿದ್ದಾರೆ. ಈ ಮೊದಲು ಅವರು ಹಲವು ವರ್ಷಗಳ ಕಾಲ ಬ್ರಾಹ್ಮಣ ಮತ್ತು ಒಕ್ಕಲಿಗರ ಮನೆಗಳಲ್ಲಿ ಜೀತ ಮಾಡಿದ್ದಾರೆ. ಆರ್ಥಿಕವಾಗಿ ಅವರು ಬಡತನದಲ್ಲಿದ್ದಾರೆ. ಆದರೆ ತಮ್ಮ ಬದುಕನ್ನು ತೇದುಕೊಂಡು ಸಾರ್ವಜನಿಕ ಗ್ರಂಥಾಲಯ ನಡೆಸುವುದರಲ್ಲಿ ಹೃದಯ ಸಿರಿವಂತಿಕೆಯನ್ನು ಮೆರೆದಿದ್ದಾರೆ. ತಮ್ಮ ಕೌಟುಂಬಿಕ ಜೀವನಕ್ಕೆ ಯಾವುದೇ ಬಗೆಯ ಆರ್ಥಿಕ ಭದ್ರತೆಯಿಲ್ಲದಿದ್ದರೂ ಜ್ಞಾನ ಎಲ್ಲರಿಗೂ ಸಿಗುವಂತಾಗಲಿ ಎಂಬ ಉದಾರತ್ವ ಅವರಲ್ಲಿದೆ. ಹೊಸ ಕಟ್ಟಡದಲ್ಲಿ ಗ್ರಂಥಾಲಯ ಶುರುವಾದರೆ ತಾನು ಮತ್ತೊಂದು ಕಡೆಯಲ್ಲಿ ಗ್ರಂಥಾಲಯ ಆರಂಭಿಸುವುದಾಗಿ ಹೇಳುತ್ತಾರೆ. ತಾನು ಓದು ಬರಹ ಕಲಿಯಲು ಸಾಧ್ಯವಾಗದಿದ್ದರೂ ಜನರು ಓದಿ ಪ್ರಜ್ಞಾವಂತರಾಗಬೇಕೆಂಬುದು ಅವರ ಆಶಯವಾಗಿದೆ.

ಸೈಯದ್ ಇಸಾಕ್ ಅವರು ಕನ್ನಡ ಪುಸ್ತಕ, ನಾಡು, ನುಡಿಯ ಬಗ್ಗೆ ತಮ್ಮ ಗ್ರಂಥಾಲಯದ ಸುತ್ತಮುತ್ತ ’ಕನ್ನಡ ನಾಡು; ಚಿನ್ನದ ಬೀಡು’, ’ಒಂದು ಗ್ರಂಥಾಲಯ ನೂರು ದೇವಾಲಯಕ್ಕೆ ಸಮ’, ’ನಮ್ಮ ನಾಡು ಕನ್ನಡ ನಾಡು ಉದಯವಾಗಲಿ’ ಎನ್ನುವ ಹೇಳಿಕೆಗಳನ್ನು ಬರೆದು ಹಾಕಿದ್ದರು; ತಮಗೆ ಡಾ. ರಾಜಕುಮಾರ್ ಹಾಗೂ ಅವರ ಸಿನಿಮಾಗಳೇ ಗ್ರಂಥಾಲಯ ನಡೆಸುವುದಕ್ಕೆ ಪ್ರೇರಣೆ ಎಂದು ಹೇಳಿದ್ದಾರೆ. ಎಷ್ಟೋ ಜನರು, ಸೈಯದ್ ಅವರು ಮುಸಲ್ಮಾನರಾಗಿದ್ದರೂ ಎಷ್ಟೊಂದು ಒಳ್ಳೆಯ ಕನ್ನಡ ಮಾತಾಡುತ್ತಾರೆ ಎಂದಿದ್ದಾರೆ. ಇಂತಹ ಹಲವು ಕಾರಣಕ್ಕಾಗಿ ಸೈಯದ್ ಅವರನ್ನು ಪ್ರಶಂಸಿಸಲಾಗುತ್ತಿದೆ; ಈ ಹಿನ್ನೆಲೆಯಲ್ಲಿ ಹಲವು ಕನ್ನಡಪರ ಸಂಘಟನೆಗಳು ಅವರನ್ನು ಖುದ್ದಾಗಿ ಭೇಟಿ ಮಾಡಿವೆ; ಆರ್ಥಿಕವಾಗಿ ಸಹಾಯವನ್ನೂ ಮಾಡಿವೆ. ಆದರೆ ಯಾವುದೇ ಧರ್ಮದ ವ್ಯಕ್ತಿಯೊಬ್ಬ ಕನ್ನಡಪರ ಅಭಿಮಾನವನ್ನು ಹೊಂದಿದ್ದಾನೆಯೇ ಎಂಬುದನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡು ನೋಡುವುದು ಸರಿಯೇ?

ಈ ನೆಲದಲ್ಲಿ ವಾಸುತ್ತಿರುವ ಮುಸ್ಲಿಮರಾಗಲಿ, ಕ್ರಿಶ್ಚಿಯನ್‌ರಾಗಲಿ, ದಲಿತರಾಗಲಿ, ಯಾರೇ ಆಗಲಿ, ಮೊದಲು ಅವರನ್ನು ಸಂವಿಧಾನದ ಪ್ರಕಾರ ಈ ದೇಶದ ಪ್ರಜೆಗಳೆಂದು ನೋಡಬೇಕಾಗುತ್ತದೆ. ಇಂದಿಗೂ ಸಮಾಜದಲ್ಲಿ ಮುಸ್ಲಿಮರ ಬಗ್ಗೆ ದ್ವೇಷವನ್ನೇ ತುಂಬಲಾಗುತ್ತಿದೆ. ಅವರಿಗೆ ಮುಸ್ಲಿಮೇತರ ಬಡಾವಣೆಗಳಲ್ಲಿ ಮುಸ್ಲಿಮರೆಂಬ ಏಕೈಕ ಕಾರಣಕ್ಕೆ ಬಾಡಿಗೆಗೆ ಮನೆ ಕೊಡುವುದಿಲ್ಲ. ಮುಸ್ಲಿಮರು ವಾಸಿಸುವ ಬಡಾವಣೆಯನ್ನು ’ಪಾಕಿಸ್ತಾನ’ ಎಂದು ಕರೆಯಲಾಗುತ್ತದೆ. ದೈನಂದಿನ ಸಹಜವಾದ ಯಾವುದೋ ಮಾತುಕತೆಯಲ್ಲಿ ತೊಡಗಿದ್ದಾಗ ’ನಾವೇನು ಪಾಕಿಸ್ತಾನದವರಂತೆ ಭಯೋತ್ಪಾದಕರಲ್ಲ ಎಂಬ ಬೀಸು ಹೇಳಿಕೆಯನ್ನು ಕೊಡಲಾಗುತ್ತದೆ. ಮುಸ್ಲಿಮರ ಬಗೆಗಿನ ಇಂತಹ ಸಣ್ಣತನ ಮತ್ತು ಪೂರ್ವಗ್ರಹಪೀಡಿತ ಮನಸ್ಥಿತಿ ಬದಲಾಗಬೇಕಿದೆ. ಇಂತಹ ಸಾಮಾಜಿಕ ತಾರತಮ್ಯತೆಯನ್ನು ಈಗಲೂ ಜೀವಂತವಾಗಿಟ್ಟಿರುವವರು ಸುಶಿಕ್ಷಿತ ನಾಗರಿಕರೇ ಆಗಿದ್ದಾರೆ. ಮನುಷ್ಯರನ್ನು ಅವರವರ ಜಾತಿ ಮತ್ತು ಧರ್ಮಗಳ ಮೂಲಕ ಗುರುತಿಸುವುದು ಕಾನೂನಿನ ಪ್ರಕಾರ ಅಪರಾಧವೇ ಆಗುತ್ತದೆ.

ಮನುಷ್ಯತ್ವವೇ ಬತ್ತಿ ಬರಡಾಗಿರುವ ಇಂದಿನ ಕಾಲಮಾನದಲ್ಲಿ ಪುಸ್ತಕಗಳು ಹೇಳಿಕೊಡುವ ನೀತಿಪಾಠಗಳಿಂದ ಮನುಷ್ಯ ಕಲಿಯುವುದು ಬಹಳಷ್ಟಿದೆ. ಆದ್ದರಿಂದ ಪುಸ್ತಕಗಳೆಂದರೆ ಕೇವಲ ಅಕ್ಷರಗಳಿಂದ ತುಂಬಿಹೋಗಿರುವ ನಿರ್ಜೀವ ವಸ್ತುಗಳಲ್ಲ. ಅತ್ಯುತ್ತಮ ಚಿಂತನೆಗಳಿರುವ ಒಂದು ಪುಸ್ತಕವು ಅಜ್ಞಾನವನ್ನೇ ಬಡಿದೆಚ್ಚರಿಸುವ ಜೀವಂತ ಚೈತನ್ಯವೇ ಆಗಿರುತ್ತದೆ. ಜ್ಞಾನದ ಕಣಜಗಳಾದ ಉತ್ತಮ ಪುಸ್ತಕಗಳನ್ನು ಸುಡುವುದು ಅಕ್ಷಮ್ಯ ಅಪರಾಧವೇ ಆಗುತ್ತದೆ. ಆಕಸ್ಮಿಕ ಅನಾಹುತಗಳಿಂದ ಪುಸ್ತಕಗಳು ಸುಟ್ಟು ಹೋದಾಗಲೂ ಅದು ಸಾಮಾಜಿಕ ನಷ್ಟವೇ. ಪುನಃ ಪುಸ್ತಕಗಳನ್ನು ಸಂಗ್ರಹ ಮಾಡಬಹುದು. ಆದರೆ ಎಷ್ಟೋ ಅಪರೂಪದ ಪುಸ್ತಕಗಳು ಸಿಗುವುದಿಲ್ಲ; ಒಂದು ಕಾಲದಲ್ಲಿ ಮುದ್ರಣಗೊಂಡ ಪುಸ್ತಕಗಳ ಪ್ರತಿಗಳು ಮಾರಾಟವಾಗಿ ಹೋಗಿರುತ್ತವೆ; ಗ್ರಂಥಾಲಯ ಸೇರಿಕೊಂಡಿರುತ್ತವೆ. ಅವು ಸಿಗುವುದೇ ದುರ್ಲಭವಾಗಿ ಬಿಟ್ಟಿರುತ್ತದೆ; ಅವು ಪುನರ್‌ಮುದ್ರಣ ಆಗಿರುವುದಿಲ್ಲ. ಎಷ್ಟೋ ಪ್ರಕಾಶನ ಸಂಸ್ಥೆಗಳು ಪುಸ್ತಕ ಪ್ರಕಟನೆಯ ತಮ್ಮ ಸೇವೆಯನ್ನು ಮುಗಿಸಿರುತ್ತವೆ; ಇನ್ನು ಕೆಲವು ನಷ್ಟದಿಂದ ಮುಚ್ಚಿ ಹೋಗಿರುತ್ತವೆ.

ಒಂದು ಪ್ರದೇಶದಲ್ಲಿ ಪ್ರಕಟವಾದ ಪುಸ್ತಕಗಳು ಮತ್ತೊಂದೆಡೆ ಓದಲು ಲಭ್ಯವಾಗುವುದಿಲ್ಲ. ಉಡುಪಿ ಮಂಗಳೂರು ಭಾಗದಲ್ಲಿ ಐವತ್ತು ವರ್ಷಗಳ ಹಿಂದೆ ಪ್ರಕಟವಾಗಿರುವ ಪುಸ್ತಕಗಳು ಬೆಂಗಳೂರು ಕಡೆಯಲ್ಲಿ ಈಗ ಸಿಗುವುದಿಲ್ಲ. ಶಿವರಾಮ ಕಾರಂತ ಅವರ ಮೊದಲ ಮುದ್ರಣದ ಎಷ್ಟೋ ಕೃತಿಗಳು ಈಗ ಉಪಲಬ್ಧವಿಲ್ಲ. ಆದ್ದರಿಂದ ಗ್ರಂಥಾಲಯವೆಂದರೆ ಎಲ್ಲ ಪ್ರದೇಶದ ಅಸಂಖ್ಯಾತ ಹೂವುಗಳಿಂದ ಕೂಡಿದ ಸುಂದರ ಉದ್ಯಾನವನ ಇದ್ದಂತೆ; ಗ್ರಂಥಾಲಯವೆಂದರೆ ಹಲವು ಹಳ್ಳ ಕೊಳ್ಳ, ಕೆರೆ, ಬಾವಿ, ಕಾಲುವೆ, ನದಿಗಳ ಹನಿಹನಿ ನೀರನ್ನು ಒಂದೆಡೆ ಸಂಗ್ರಹ ಮಾಡಿ ಜ್ಞಾನದ ದಾಹವನ್ನು ತೀರಿಸುವ ಸರೋವರ ಇದ್ದಂತೆ. ಇಂದಿನ ಸಂದರ್ಭದಲ್ಲಿ ಗ್ರಂಥಾಲಯಗಳು ಸಮಾಜದ ಎಲ್ಲ ದಮನಿತ ವರ್ಗದವರಿಗೂ ನಿಲುಕುವ ಹಾಗೆ ಅಭಿಯಾನವನ್ನೇ ಶುರುಮಾಡಬೇಕಾಗುತ್ತದೆ. ದೇವಸ್ಥಾನಗಳಂತೆ ಗ್ರಂಥಾಲಯಗಳಿಗೆ ಮಡಿ ಮೈಲಿಗೆ ಇರುವುದಿಲ್ಲವಾದ್ದರಿಂದ ಅವು ಸಾಮಾಜಿಕ ಸೌಹಾರ್ದತೆಯನ್ನು ಬೆಸೆಯುವ ತಾಣಗಳಾಗಿವೆ. ಸಮಾನತೆಯನ್ನು ಬೋಧಿಸುವ ವಿದ್ಯಾಕೇಂದ್ರಗಳಾಗಿವೆ.

PC : Just Kannada

ಸಾಮಾನ್ಯವಾಗಿ ಗ್ರಂಥಾಲಯಗಳು ನಗರಗಳ ಹೃದಯ ಭಾಗದಲ್ಲಿಯೇ ಕೇಂದ್ರೀಕೃತವಾಗಿರುತ್ತವೆ. ಹೊಸ ಹೊಸ ಬಡಾವಣೆಗಳು ತಲೆ ಎತ್ತಿ ನಗರಗಳು ಬೆಳೆಯುತ್ತಲೇ ಇರುತ್ತವೆ. ಅಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಸರ್ಕಾರ ಗಮನ ಹರಿಸಬೇಕಾಗುತ್ತದೆ. ಈ ದೇಶದಲ್ಲಿ ಒಂದು ಸಣ್ಣ ಪ್ರಮಾಣದ ಗ್ರಂಥಾಲಯಗಳಿಲ್ಲದ ಇನ್ನೂ ಎಷ್ಟೋ ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಂಥಾಲಯ ನಿರ್ಮಿಸುವುದು ಮೂಲಭೂತ ಸೌಕರ್ಯ ಎಂದು ಎಲ್ಲಿಯವರೆಗೆ ಪರಿಭಾವಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಆ ಪ್ರದೇಶವು ಸರ್ವಾಂಗೀಣ ಅಭಿವೃದ್ಧಿಯಾಗುವುದಿಲ್ಲ. ಯಾಕೆಂದರೆ ಒಂದು ಪ್ರದೇಶದ ಅಭಿವೃದ್ಧಿಗೂ ಮತ್ತು ಅಲ್ಲಿ ಶಿಕ್ಷಣಕ್ಕೆ ನೀಡಲಾಗಿರುವ ಮೊದಲ ಆದ್ಯತೆಗೂ ಸಂಬಂಧವಿರುತ್ತದೆ.

ಇಂದು ಅಭಿವೃದ್ಧಿಯಾಗದಿರುವ ಪ್ರದೇಶಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ದಲಿತರು, ಮುಸ್ಲಿಮರು ವಾಸಿಸುತ್ತಿರುತ್ತಾರೆ. ಇಂತಹ ಪ್ರದೇಶಗಳಲ್ಲಿ ಗ್ರಂಥಾಲಯ ಸ್ಥಾಪಿಸುವುದರಿಂದ ಅಲ್ಲಿಯ ಯುವಜನಾಂಗವನ್ನು ಜ್ಞಾನದೆಡೆಗೆ ನಡೆಯುವಂತೆ ಮಾಡಬಹುದು. ಮಕ್ಕಳಿಗೆ ತಮ್ಮ ಬಾಲ್ಯದಲ್ಲಿಯೇ ಓದುವ ಹವ್ಯಾಸ ಮೈಗೂಡುವಂತೆ ಮಾಡಿದರೆ ಅವರಲ್ಲಿ ಜ್ಞಾನದ ಹಸಿವು ತೀವ್ರಗೊಳ್ಳುತ್ತದೆ. ಒಮ್ಮೆ ಓದುವ ಹುಚ್ಚು ಅಂಟಿಕೊಂಡರೆ ಅದು ಜೀವನದುದ್ದಕ್ಕೂ ಪೊರೆಯುತ್ತದೆ; ಹೊಸ ತಿಳಿವನ್ನು ನೀಡುತ್ತದೆ; ಅತ್ಯುತ್ತಮ ಓದು ಏನನ್ನಾದರೂ ಬರೆಯಲು ಪ್ರೇರೇಪಿಸುತ್ತದೆ; ಒಂದು ಪುಸ್ತಕದ ಓದು ಮತ್ತೊಂದು ಕೃತಿಯ ಓದಿಗೆ ದಾರಿ ತೋರಿಸುತ್ತದೆ; ಒಂದು ನವೀನ ಚಿಂತನೆ ಮತ್ತೊಂದು ಚಿಂತನೆಗೆ ತುಯ್ಯುವಂತೆ ಮಾಡುತ್ತದೆ; ನಿರಂತರ ಓದು, ಅಧ್ಯಯನಗಳೇ ಗಂಭೀರ ಸಂಶೋಧನೆಗೆ ಅಡಿಪಾಯವಾಗುತ್ತದೆ; ಇಂತಹ ಓದುಗಳೇ ಬೌದ್ಧಿಕ ವಿಕಾಸ ಹಾಗೂ ಚಿಂತನಶೀನ ಮನಸ್ಸನ್ನು ಬೆಳೆಸುತ್ತದೆ.

PC : Edex live

ಸಾಮಾಜಿಕ ಬದಲಾವಣೆಯನ್ನು ತರುವುದರಲ್ಲಿ ಶಿಕ್ಷಣವು ಪ್ರಬಲ ಅಸ್ತ್ರವಾಗಿದೆ. ಈ ಶಿಕ್ಷಣವು ಎಲ್ಲ ಸಮುದಾಯಗಳಿಗೂ ಸಿಗುವಂತಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿವೆ. ಸರ್ಕಾರಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ. ಶಿಕ್ಷಣದ ವಾಣಿಜ್ಯೀಕರಣ ಮತ್ತು ವ್ಯಾಪಾರೀಕರಣದಿಂದ ದೊಡ್ಡ ಹೊಡೆತ ಬೀಳುವುದು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಎಂಬುದನ್ನು ಮರೆಯುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಶಿಕ್ಷಣ, ಉನ್ನತ ಶಿಕ್ಷಣ, ಜ್ಞಾನ, ತಂತ್ರಜ್ಞಾನ-ಎಲ್ಲವು ಕೂಡ ಉಳ್ಳವರ ಸೊತ್ತಾಗುತ್ತಿವೆ; ಇದರಿಂದಾಗಿ ಇಂದಿಗೂ ಬಡತನದಲ್ಲಿ ಬೇಯುತ್ತಿರುವ ದುರ್ಬಲ ಸಮುದಾಯಗಳು ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತವಾಗುತ್ತಿವೆ. ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕ ಗ್ರಂಥಾಲಯಗಳು ಹಿಂದುಳಿದ ಪ್ರದೇಶಗಳಲ್ಲಿ ಸ್ಥಾಪನೆಯಾಗುವುದು ಮೂಲಭೂತ ಅಗತ್ಯವೇ ಆಗಿದೆ. ಇದರಿಂದ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಾಗದ ದುರ್ಬಲ ಸಮುದಾಯದ ವಿದ್ಯಾರ್ಥಿಗಳು ಜ್ಞಾನದ ಫಲಾನುಭವಿಗಳಾಗುತ್ತಾರೆ.

ವೈಚಾರಿಕತೆಯ ದುರಂತವೆಂದರೆ ನಮ್ಮಲ್ಲಿ ಹೊಸದಾಗಿ ನಿರ್ಮಾಣವಾಗುವ ಕೇರಿಗೊಂದು, ಓಣಿಗೊಂದು, ಬಡಾವಣೆಗೊಂದು ರಾತ್ರೋರಾತ್ರಿ ದೇವರುಗಳು ಮತ್ತು ದೇವಸ್ಥಾನಗಳು ಉದ್ಭವಿಸುತ್ತವೆ. ಅದೇ ಗ್ರಂಥಾಲಯಗಳೇಕೆ ನಿರ್ಮಾಣವಾಗುವುದಿಲ್ಲ? ಅಷ್ಟರಮಟ್ಟಿಗೆ ಆಧುನಿಕ ಯುಗದಲ್ಲಿ ಅಜ್ಞಾನ, ಮೌಢ್ಯತೆಗಳು ಕೂಡ ಮುಂದುವರೆಯುತ್ತಿವೆ. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಒಂದು ಚಿಕ್ಕದಾದರೂ ಗ್ರಂಥಾಲಯ ಇರುವಂತಾಗಬೇಕು. ಜನಸಾಮಾನ್ಯರಿಂದ ಚುಣಾವಣೆಯಲ್ಲಿ ಮತಗಳನ್ನು ಪಡೆದುಕೊಂಡು ವಿರಾಜಮಾನರಾಗಿ ಮೆರೆಯುವ ಜನಪ್ರತಿನಿಧಿಗಳು ಆ ಜನಸಮುದಾಯಗಳ ಮನೋವಿಕಾಸಕ್ಕಾಗಿ ಎಷ್ಟು ಗ್ರಂಥಾಲಯಗಳನ್ನು ಮಂಜೂರು ಮಾಡಿದ್ದಾರೆ? ಆದರೆ ಈಗ ಸಮಾನತೆಯ ಕಡೆಗೆ ಚಲಿಸಲು ಬರಿ ಅನ್ನ, ಬಟ್ಟೆ, ವಸತಿಗಳಿಂದ ಸಾಧ್ಯವಿಲ್ಲ; ಅಕ್ಷರ, ಪುಸ್ತಕ, ಜ್ಞಾನ, ಓದು, ಬರಹ, ಹೋರಾಟ, ಸಂಘರ್ಷ ಅನಿವಾರ್ಯವೇ ಆಗುತ್ತದೆ. ಎಲ್ಲ ಶೋಷಿತ ಸಮುದಾಯಗಳಿಗೆ ಗ್ರಂಥಾಲಯಗಳು ತಲುಪಿದೆಯೇ? ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ.

ಡಾ. ಸುಭಾಷ್ ರಾಜಮಾನೆ

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ


ಇದನ್ನೂ ಓದಿ: ‘ಒಂದು ದಹನದ ಕಥೆ!’ – ಸುರೇಶ ಎನ್ ಶಿಕಾರಿಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...