ಭರತ್ ಹೆಬ್ಬಾಳ |
ಆಧುನಿಕ ಸರ್ವಾಧಿüಕಾರದ ಒಂದು ಗುಣವೆಂದರೆ ಅಲ್ಲಿ ಬರುವ ಬಹುತೇಕ ಸರ್ವಾಧಿüಕಾರಿಗಳು 1) ಆಳುವ ವರ್ಗಕ್ಕೆ ಲಾಭದಾಯಕವಾದ ಆರ್ಥಿಕತೆಯನ್ನು ಜನರ ಮೇಲೆ ಹೇರುತ್ತಾನೆ 2) ಧರ್ಮದ ರಾಜಕೀಯ ಮಾಡುತ್ತಿರುತ್ತಾನೆ 3) ನಿರ್ದಿಷ್ಟ ಧರ್ಮ/ಜಾತಿಯ ವಿರುದ್ದ ದ್ವೇಷ ಕಕ್ಕುತ್ತಾನೆ ಮತ್ತು 4) ಕಮ್ಯೂನಿಸ್ಟ್ ವಿರೋಧಿ ಧೋರಣೆ ಉಳ್ಳವನಾಗಿರುತ್ತಾನೆ. ನಿರ್ದಿಷ್ಟ ಜನರ ಮೇಲೆ ದ್ವೇಷ ಹರಡುವುದು, ಕಮ್ಯೂನಿಸಮ್ ಮತ್ತು ಕಮ್ಯೂನಿಸ್ಟ್ರನ್ನು ಇಲ್ಲದಾಗಿಸುವ ಪ್ರಚಾರ, ನಾಗರೀಕ ಹಕ್ಕುಗಳ ದಮನ, ಪ್ರತಿಭಟನೆಗಳನ್ನು ಕಾನೂನು ಬಾಹಿರ ಮಾಡುವುದು, ಪೊಲೀಸ್ ಮತ್ತು ಮಿಲಿಟರೀ ಪ್ರಭುತ್ವ ಸಾಧಿಸುವುದು, ಅಸಂವಿಧಾನಿಕ ಬಲಪಂಥೀಯ ಹತ್ಯಾ ಪಡೆಗಳನ್ನು ಬೆಳೆಸುವುದು ಮತ್ತು ನವಉದಾರವಾದಿ ಆರ್ಥಿಕ ನೀತಿಗಳನ್ನು ಚಾಚು ತಪ್ಪದೆ ಅನುಷ್ಟಾನಕ್ಕೆ ತಂದು ಜನರ ಮೇಲೆ ಹೇರುವುದು.
ಇದೇ ರೀತಿಯಲ್ಲಿ 1976ರಿಂದ 1983ರವರೆಗೂ “ಕೊಳಕು ಯುದ್ದ” ಎಂದು ಕರೆಯಲ್ಪಡುವ ಅಜೆರ್ಂಟೀನಾದ ಮಿಲಿಟರೀ ಸರ್ವಾಧಿüಕಾರದ ಕಾರ್ಯಾಚರಣೆಗಳಲ್ಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಕಾಣೆಯಾದರು. “ಭಯೋತ್ಪಾದಕರೆಂದರೆ ಬರಿ ಗನ್ನು ಮತ್ತು ಬಾಂಬು ಇಟ್ಟುಕೊಂಡಿರುವವರಷ್ಟೇ ಅಲ್ಲ, ಸಮಾಜದಲ್ಲಿ ಪಾಶ್ಚಾತ್ಯ ಮತ್ತು ಕ್ರೇಸ್ತ ಧರ್ಮೇತರ ಕಲ್ಪನೆಗಳನ್ನು, ವಿಚಾರವನ್ನು ಹರಡುವವನು” ಎಂದು ಮಿಲಿಟರಿ ಸರ್ವಾಧಿಕಾರಿ ಜೋರ್ಜ್ ರಾಫಿಯೆಲ್ ವೈಡ್ಲಾ ಅಮೆರಿಕಾ ಜೊತೆಗೂಡಿ ಅಜೆರ್ಂಟೀನ್ನಿಯನ್ನರ ಮಾರಣ ಹೋಮವನ್ನೇ ಮಾಡಿದನು.
ಅಮೆರಿಕ ಮತ್ತು ಸೋವಿಯಟ್ ಒಕ್ಕೂಟದ ನಡುವಣ ಶೀತಲ ಸಮರದ ಸಮಯದಲ್ಲಿ ಕ್ಯೂಬನ್ ಕ್ರಾಂತಿಯ ನಂತರ ದಕ್ಷಿಣ ಅಮೆರಿಕಾದ್ಯಂತ ಹಾರಾಡುತ್ತಿದ್ದ ಎಡಪಂಥೀಯ ವಿಚಾರಧಾರೆಗಳನ್ನು ಹೊಸಕಿ ಹಾಕಲು ಅಮೆರಿಕ ಬಳಸಿದ ಈ ರೀತಿಯ ಕಾರ್ಯಾಚರಣೆಯ ಹೆಸರೇ “ಆಪರೇಶನ್ ಕೊಂಡೋರ್”. ಇದರ ಮುಖ್ಯ ಧ್ಯೇಯವೇ ಅಮೆರಿಕಾದ ಬಂಡವಾಳಶಾಹಿ ಹೂಡಿಕೆಗಳ ರಕ್ಷಣೆ ಮತ್ತು ಅದಕ್ಕೆ ವಿರುದ್ಧವಾಗಿದ್ದ ಸಮಾನತಾವಾದ, ಸಹಿಷ್ಣುತಾವಾದ, ಸಮಾಜವಾದ, ಕಮ್ಯೂನಿಸಮ್ ಇಲ್ಲದಾಗಿಸುವುದು. ಎಳೆಯ ಮಕ್ಕಳನ್ನು ಬಿಡದೆ, ಎಡಪಂಥೀಯ ವಿಚಾರಧಾರೆ ಹೊಂದಿದ್ದ ವಿದ್ಯಾರ್ಥಿ ಯುವಜನರು, ಕಾರ್ಮಿಕ ನಾಯಕರು, ಮಾನವ ಹಕ್ಕುಗಳ ಹೋರಾಟಗಾರರು, ಸಾಹಿತಿಗಳು ಒಟ್ಟಾರೆ ಮನುಷ್ಯಮುಖಿ ಎಡಪಂಥೀಯ ಚಿಂತನೆಗಳುಳ್ಳವರೆಲ್ಲರನ್ನು ಬಂಧಿಸಿ, ಹಿಂಸಿಸಿ, ರಾಜಕೀಯ ಹತ್ಯೆಗಳ ಮೂಲಕ ದಮನಿಸಲಾಯಿತು. ಪ್ರಭುತ್ವದ ಈ ಭಯೋತ್ಪಾದನೆ ಶಕ್ತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಕಾಣೆಯಾದವರನ್ನೆಲ್ಲಾ ಅಮೆರಿಕ ನೀಡಿದ ಹೆಲಿಕಾಪ್ಟರ್ ಮತ್ತು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಅಟ್ಲ್ಯಾಂಟಿಕ್ ಮಹಾಸಾಗರದಲ್ಲಿ ಎಸೆಯಲಾಗುತ್ತಿತ್ತು ಎಂದು ಹೊರಬಿದ್ದಿರುವ ದಾಖಲೆಗಳು ಹೇಳುತ್ತವೆ.
ವಿಪರ್ಯಾಸವೆಂದರೆ ಇದೇ ಮಿಲಿಟರೀ ಸರ್ವಾಧಿಕಾರದಲ್ಲಿ ಬಹುದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿದ್ದರೂ ಅಜೆರ್ಂಟೀನಾ 1978ರಲ್ಲಿ ಫುಟ್‍ಬಾಲ್ ವಲ್ರ್ಡ್‍ಕಪ್‍ನ ಆತಿಥೇಯ ವಹಿಸಿ ವಲ್ರ್ಡ್ ಕಪ್ ಗೆದ್ದುಕೊಂಡಿತು ಕೂಡ! ಪ್ರಭುತ್ವದ ಇಷ್ಟು ದೊಡ್ಡ ಪ್ರಮಾಣದ ಭಯೋತ್ಪಾದನೆಯನ್ನೂ ಮೀರಿ ಅಜೆಂಟೀನಾದ ಜನತೆ ಬಹುದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ಒಡ್ಡಿತು ಮತ್ತು ಕ್ರಮೇಣ ಪ್ರಜಾಪ್ರಭುತ್ವಕ್ಕೆ ಹಿಂದಿರುಗಿತು.
ಐ.ಎಮ್.ಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಮತ್ತು ವಲ್ರ್ಡ್ ಬ್ಯಾಂಕ್‍ಗಳು ‘ಆರ್ಥಿಕ ಸಲಹೆ’ಗಳ ಮೂಲಕ ಅತಿ ಹೆಚ್ಚು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಉತ್ತೇಜಿಸಿದವು. ವಾಸ್ತವದಲ್ಲಿ ಇವು ದೇಶ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ, ದೇಶಗಳ ಸಾರ್ವಭೌಮತ್ವವನ್ನೇ ನಾಶ ಮಾಡುವ ಶಕ್ತಿಯುಳ್ಳ ಆಳುವ ವರ್ಗದ ಅಂತರ್ರಾಷ್ಟ್ರೀಯ ಬಂಡವಾಳಶಾಹಿ ಆರ್ಥಿಕ ಒಕ್ಕೂಟಗಳು. ಮಿಲಿಟರೀ ಸರ್ವಾಧಿಕಾರದಲ್ಲಿ ಇಂತಹ ಸಂಸ್ಥೆಗಳ ಸಲಹೆಗಳ (ಸ್ಟ್ರಕ್ಚರಲ್ ಅಡ್ಜಸ್ಟ್‍ಮೆಂಟ್ ಪ್ರೋಗ್ರಾಮ್ಸ್) ಮೇರೆಗೆ ತಂದ ಆರ್ಥಿಕ ಬದಲಾವಣೆಗಳು, ಖಾಸಗೀಕರಣಗಳು, ನವ ಉದಾರವಾದಿ ನೀತಿಗಳ ಪರಿಣಾಮವಾಗಿ 1975ರಲ್ಲಿ 8 ಬಿಲಿಯನ್ ಡಾಲರ್ ಇದ್ದ ಅರ್ಜೆಂಟೀನಾದ ಸಾಲ 1985ರಷ್ಟಿಗೆ 45 ಬಿಲಿಯನ್ ಡಾಲರ್ ಆಗಿರುತ್ತದೆ. 1983ರಲ್ಲಿ ಮಿಲಿಟರೀ ಸರ್ವಾಧಿಕಾರದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಫಾನ್ಸಿನ್ ಗೆದ್ದು ಅಧ್ಯಕ್ಷರಾಗುತ್ತಾರೆ ಆದರೆ ಏನು ಬದಲಾವಣೆಗಳನ್ನು ತರದೆ ಇರುವ ಯಥಾಸ್ಥಿತಿ ವಾದವನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. 1990ರಲ್ಲಿ ಬಿಗಡಾಯಿಸುತ್ತಿರುವ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅಲ್ಫಾನ್ಸಿನ್ ಅಧಿಕಾರ ತ್ಯಜಿಸುತ್ತಾರೆ.
ನವ-ಪೆರನಿಸಮ್ ಮೂಲಕ ‘ಎಲ್ಲರಿಗೂ ನ್ಯಾಯ’ದ ಆಶ್ವಾಸನೆಯಿಂದ ಅಧ್ಯಕ್ಷ ಸ್ಥಾನಕ್ಕೇರಿದ ಕಾರ್ಲೋಸ್ ಮೆನಿಮ್ ಐ.ಎಮ್.ಎಫ್‍ನ ಇನ್ನಷ್ಟು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದ. 8 ಘಂಟೆಯ ದುಡಿಯುವ ಸಮಯವನ್ನು ಹೆಚ್ಚುವರಿ ವೇತನವಿಲ್ಲದೆ 12 ಗಂಟೆಗೆ ವಿಸ್ತರಿಸಿದ. ಕಠಿಣವಾದ ಕಾರ್ಮಿಕ ನೀತಿಗಳನ್ನು ಅನುಷ್ಟಾನಕ್ಕೆ ತಂದ, ನೀರು ಅಡುಗೆ ಅನಿಲ, ವಿಮಾನ ನಿಲ್ದಾಣಗಳು, ದೂರ ಸಂಪರ್ಕ, ಅಂಚೆ ಇನ್ನೂ ಇತರೆ ಸಾರ್ವಜನಿಕ ಮಾಲೀಕತ್ವದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ. ಜನ ಕಲ್ಯಾಣಕ್ಕಾಗಿ ಇದ್ದ ರಾಜ್ಯ ವೆಚ್ಚವನ್ನು ಇಳಿಸಿದ. ಇಂತಹ ಕ್ರಮಗಳಿಂದ ಅಮೆರಿಕ ಮತ್ತು ಐ.ಎಮ್.ಎಫ್ ಶ್ಲ್ಯಾಘನೆಗೆ ಪಾತ್ರನಾಗಿದ್ದ. ಇವೆಲ್ಲವೂ ಪ್ರಜಾಪ್ರಭುತ್ವದ ಹೆಸರಿನಲ್ಲಿ. 1990ರಿಂದ 1999ರವರೆಗೂ ಅಜೆರ್ಂಟೀನಾದಲ್ಲಿ ನಿರುದ್ಯೋಗ ದ್ವಿಗುಣಗೊಳ್ಳುತ್ತದೆ, ಅಸಮಾನತೆ ಮತ್ತು ಬಡತನ ಹೆಚ್ಚುತ್ತಾ ಹೋಗುತ್ತದೆ. ದುಡಿಯುವ ವರ್ಗ ತಲೆಯತ್ತದೆ ದುಡಿದರೆ ಸಂಬಳ, ಇಲ್ಲದೆ ಹೋದಲ್ಲಿ ನಿರುದ್ಯೋಗ. ಈ ರೀತಿಯ ವ್ಯವಸ್ಥೆಯ ಅಜೆರ್ಂಟಿನವನ್ನು ಮಾರುಕಟ್ಟೆ ಸ್ನೇಹಿ, ಹೂಡಿಕೆದಾರರ ಸ್ವರ್ಗ ಎಂದು ಬಣ್ಣಿಸಲಾಗಿತ್ತು. ನವಉದಾರೀಕರಣದಿಂದ, ವಿದೇಶಿ ಹೂಡಿಕೆಗಳಿಂದ ಬಂದ ಹಣ ಆ ಬಂಡವಾಳಶಾಹಿ ಹೂಡಿಕೆದಾರರ ತೆರಿಗೆ ವಿನಾಯ್ತಿ ಮತ್ತು ಇನ್ನಿತರೆ ಸವಲತ್ತುಗಳನ್ನು ನೀಡುವುದರಲ್ಲೇ ಮುಗಿದು ಹೋಗಿತ್ತು.
ಡಾಲರ್ ಏರಿಕೆಯಿಂದ ಅಜೆರ್ಂಟೀನಾದ ಪೇಸೊ ಕೂಡ ಸ್ವಲ್ಪ ಮಟ್ಟಿಗೆ ಏರಿದರೂ ಜಾಗತಿಕವಾಗಿ ಊಹಾತ್ಮಕ ಹೂಡಿಕೆ ವಹಿವಾಟಿನ ಏರುಪೇರಿನಿಂದ ಅಜೆರ್ಂಟೀನಾದ ವಿದೇಶಿ ಹೂಡಿಕೆ ಕೂಡ ಕಡಿಮೆಯಾಗುತ್ತಾ ಹೋಗಿ ಕೊನೆಗೆ 1999ರಲ್ಲಿ ಆರ್ಥಿಕ ಕುಸಿತ ಕಂಡು ಐ.ಎಮ್.ಎಫ್‍ನಿಂದ ಮತ್ತೆ 40 ಬಿಲಿಯನ್ ಡಾಲರ್ ಸಲ ಪಡೆಯುತ್ತದೆ ಮತ್ತು ಅದಕ್ಕಾಗಿ ಇನ್ನೂ ಹಲವು ಖಾಸಗೀಕರಣ ಉದಾರೀಕರಣದ ಆರ್ಥಿಕ ನೀತಿಗಳನ್ನು ಅನುಸರಿಸಿ ರಾಜ್ಯದ ವೆಚ್ಚವನ್ನು ಇಳಿಸುವಂತಾಗಿ ಅಜೆರ್ಂಟೀನಾ ಆರ್ಥಿಕ ಇಳಿತಕ್ಕೆ (ರಿಸೆಶನ್) ಒಳಗಾಗುತ್ತದೆ. ಐ.ಎಮ್.ಎಫ್‍ನ ಇನ್ನಷ್ಟು ‘ಸಲಹೆಗಳಿಂದ’ ಆರ್ಥಿಕ ಇಳಿತ ತೀವ್ರಗೊಳ್ಳುತ್ತದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಕಾರ್ಲೋಸ್ ಮೆನಿಮ್ ಬದಲಿಗೆ 1999ರಲ್ಲಿ ಫನ್ಯಾರ್ಂಡೊ ದೆ ಲ ರೂವ ಅಧ್ಯಕ್ಷರಾಗುತ್ತಾರೆ. ದೆ ಲ ರೂವ ‘ವ್ಯವಸ್ಥಿತ ಮತ್ತು ಪ್ರಾಮಾಣಿಕ ಅಜೆರ್ಂಟೀನಾ’ ಘೋಷಣೆಯಲ್ಲಿ ಅದಿಕಾರಕ್ಕೇರಿರುತ್ತಾರೆ. ಆದರೆ ಸಾಲದ ಸುಳಿಯಿಂದ ತತ್ತರಿಸುತಿದ್ದ ಅಜೆರ್ಂಟೀನಾ ಎರಡೇ ವರ್ಷಗಳಲ್ಲಿ ದೇಶ ಕಂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತದೆ. ಅಜೆರ್ಂಟೀನಾದ ಕಾಸಾದ ಪೇಸೊ ನೆಲಕಚ್ಚುತ್ತದೆ. ಜನ ರಾಷ್ಟ್ರದೆಲ್ಲೆಡೆ ತಮ್ಮ ಹೂಡಿಕೆ ಮತ್ತು ಉಳಿತಾಯವನ್ನು ಬಾಂಕುಗಳಿಂದ ತೆಗೆಯಲು ಶುರು ಮಾಡುತ್ತಾರೆ. ಸರ್ಕಾರ ಸಂಪೂರ್ಣ ಬ್ಯಾಂಕಿಂಗ್ ಕುಸಿತವನ್ನು ತಡೆಯಲು ಗ್ರಾಹಕರು ಹಣ ತೆಗೆಯುವುದನ್ನು ತಡೆಯುವ ಕ್ರಮಗಳಿಗೆ ಮುಂದಾಗುತ್ತದೆ. ತಿಂಗಳಿಗೆ 1000 ಡಾಲರ್ನಷ್ಟೇ ತೆಗೆಯಾಬಹುದೆಂದು ನಿಬರ್ಂಧ ಹೇರುತ್ತಾರೆ. ರಾಷ್ಟ್ರಾದ್ಯಂತ ಅಂಗಡಿ ಲೂಟಿ, ದಂಗೆ ಗಲಭೆಗಳು ಜರಗುತ್ತವೆ. 2001 ನವೆಂಬರ್ ಹೊತ್ತಿಗೆ ಐ.ಎಮ್.ಎಫ್ ವಿಧಿಸುವ ಆರ್ಥಿಕ ದಿಗ್ಬಂಧನವನ್ನು ಇನ್ನೂ ಅನುಸರಿಸಲು ಸಾಧ್ಯವೇ ಇಲ್ಲದಿರುವಾಗ ದೆ ಲ ರೂವ ರಾಜೀನಾಮೆ ನೀಡಿ ಅಧಿಕಾರ ತೊರೆಯುತ್ತಾರೆ. ಇಡೀ ಅಜೆರ್ಂಟೀನಾ ಜನತೆ ಸರ್ಕಾರದ ವಿರುದ್ದ ಬೀದಿಗಿಳಿಯುತ್ತಾರೆ. ಅಸಮಾನತೆ, ಬಡತನ, ನಿರುದ್ಯೋಗ, ಕೈಗೆಟುಕದ ಶಿಕ್ಷಣ, ಆರೋಗ್ಯ ಮತ್ತು ಏರುತ್ತಿರುವ ಬೆಲೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮಾಡಿ ಅಜೆರ್ಂಟಿನವನ್ನು ವಾರಗಟ್ಟಲೆ ಸ್ತಬ್ದರಾಗಿಸುತ್ತಾರೆ.
ಮುಂದಿನ ಸಂಚಿಕೆಯಲ್ಲಿ: ಅಜೆರ್ಂಟೀನಾ
ಮತ್ತು ಸಾಲ


