ಪಿ.ಕೆ.ಮಲ್ಲನಗೌಡರ್ |

ಕಳೆದ 10 ದಿನಗಳಿಂದ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಅನೈತಿಕ ಅಸಹ್ಯ ರಾಜಕಾರಣದಲ್ಲಿ ತೊಡಗಿದ್ದರೆ, ನಮ್ಮ ದೃಶ್ಯ ಮಾಧ್ಯಮಗಳು ಅತಿರೇಕದ ಕವರೇಜ್ ನೀಡುವ ಮೂಲಕ ಸಂಭ್ರಮಿಸಿವೆ. ರಾಜಕೀಯ ಪಕ್ಷಗಳು ಮತ್ತು ಮೀಡಿಯಾಗಳಿಗೆ ತಾವೊಂದು ಅಸಹ್ಯ ಆಟದಲ್ಲಿ ಭಾಗಿಯಾಗಿದ್ದೇವೆ ಎಂಬ ಪಾಪ ಪ್ರಜ್ಞೆಯಂತೂ ಕಾಡುತ್ತಲೇ ಇಲ್ಲ.
ಮೊದಲಿನಿಂದಲೂ ಕನ್ನಡದ ಬಹುಪಾಲು ದೃಶ್ಯ ಮಾಧ್ಯಮಗಳಿಗೆ ಬಿಜೆಪಿಯನ್ನು ಈ ಸಲ ಅಧಿಕಾರದಲ್ಲಿ ನೋಡುವ ಹೆಬ್ಬಯಕೆಯಿತ್ತು. ಅದು ಈಡೇರದೇ ಹೋದಾಗ, ಮೇ 2-3ನೇ ವಾರದಲ್ಲಿ ಬಿಜೆಪಿ ನಡೆಸಲು ಯತ್ನಿಸಿದ ಆಪರೇಷನ್ ಕಮಲವನ್ನು ರೋಚಕವಾಗಿ ತೋರಿಸಿದವು ಈ ತರಹದ ಮಾಧ್ಯಮಗಳು. ಜನರಲ್ಲಿ ಇಂತಹ ನೀತಿಗೆಟ್ಟ ರಾಜಕಾರಣದ ಬಗ್ಗೆ ಅಸಹ್ಯ ಹುಟ್ಟಿಸುವಂತೆ ವರದಿ ಮಾಡುವ ಬದಲು, ಬಿಜೆಪಿಗೆ ನ್ಯಾಯಯುತವಾಗಿ ಅಧಿಕಾರ ಸಿಗಬೇಕಿತ್ತು, ಈಗ ಅದು ಆಪರೇಷನ್ ಕಮಲ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂಬಂತೆ ಬಿಂಬಿಸಲು ಯತ್ನಿಸಲಾಯಿತು.
ಈಗ ಕಳೆದ ಹತ್ತು ದಿನಗಳಿಂದ ಇಂಥಾ ಮಾಧ್ಯಮಗಳು ಆಪರೇಷನ್ ಕಮಲ ನಡೆದೇ ಹೋಯಿತು, ಬಿಜೆಪಿ ಸರ್ಕಾರ ಬಂದೇ ಬಿಟ್ಟಿತು ಎಂಬ ಧಾಟಿಯಲ್ಲಿ ಸಂಭ್ರಮಿಸಿದವು. ಐಷಾರಾಮಿ ರೆಸಾರ್ಟ್‍ಗಳಲ್ಲಿ ಶಾಸಕರನ್ನು ಕೂಡಿ ಹಾಕುವ ಕ್ರಿಯೆಯೇ ನಮ್ಮ ಪ್ರಜಾಪ್ರಭುತ್ವಕ್ಕೆ ಕಳಂಕ ಎಂಬ ಸತ್ಯವನ್ನು ಮರೆಮಾಚಿದ ಅವು, ರಾಜಕಾರಣದಲ್ಲಿ ಇವೆಲ್ಲ ಕಾಮನ್, ಸಹಜ ಎಂಬಂತೆ, ಬಿಜೆಪಿ ತಂತ್ರ-ಕುತಂತ್ರಗಳನ್ನು ಸಾಹಸ ಎಂಬಂತೆ ಕವರೇಜ್ ನೀಡಿದವು. ಅಧಿಕಾರ ಹಿಡಿಯುವ ಬಿಜೆಪಿಯ ಅಪ್ರಜಾತಾಂತ್ರಿಕ ನಡೆಯಲ್ಲಿ ಪರೋಕ್ಷವಾಗಿ ಈ ಮಾಧ್ಯಮಗಳು ಪಾಲುದಾರರಾಗಿಬಿಟ್ಟವು.
ವಿಜಯ ಸಂಕೇಶ್ವರರ ದಿಗ್ವಿಜಯ ಚಾನೆಲ್ಲಂತೂ ಸಂಪೂರ್ಣ ಬ್ರಾಹ್ಮಣೀಕರಣಗೊಂಡಿದ್ದು, ಅದು ಸದಾ ಮೈತ್ರಿ ಸರ್ಕಾರದ ಸಣ್ಣಪುಟ್ಟ ಗೊಂದಲಗಳನ್ನು ಬೃಹದಾಕಾರ ಮಾಡಿ ತೋರಿಸುತ್ತಲೇ ತನ್ನ ಬಿಜೆಪಿ ನಿಷ್ಠೆಯನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ರಾಜೀವ ಚಂದ್ರಶೇಖರವರ ಸುವರ್ಣ ನ್ಯೂಸ್ ಚಾನೆಲ್ಲೂ ಕೂಡ ದಿಗ್ವಿಜಯದಂತೆ ಬಹುರಂಗವಾಗಿ ಬಿಜೆಪಿ ಪರವಿದೆ. ಪಬ್ಲಿಕ್‍ನವರು ತಾವು ತಟಸ್ಥ ಎಂಬಂತೆ ತೋರಿಸಲು ಎಷ್ಟೇ ಹೆಣಗಾಡಿದರೂ, ಅವರೂ ಕೂಡ ಬಿಜೆಪಿಗೆ ರಾಜ್ಯದಲ್ಲಿ ಹೇಗಾದರೂ ಅಧಿಕಾರ ಸಿಗಲೇಬೇಕು ಎಂಬ ಮನಸ್ಸಿನವರೇ. ಟಿವಿ9, ಬಿಟಿವಿ ಕೂಡ ಬಿಜೆಪಿಯ ಆಪರೇಷನ್ ಕಮಲದಲ್ಲಿ ಅನೈತಿಕತೆಯನ್ನು ಕಂಡೇ ಇಲ್ಲ.
ಶುಕ್ರವಾರ ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ವಿಶೇಷ ಸಭೆಗೆ ನಾಲ್ವರನ್ನು ಬಿಟ್ಟು ಎಲ್ಲ ಶಾಸಕರು ಹಾಜರಾದ ಮೇಲೆ, ಆ ನಾಲ್ವರಲ್ಲಿ ಇಬ್ಬರು ಗೈರಿಗೆ ಅನುಮತಿ ಪಡೆದಿದ್ದು ಗೊತ್ತಾದ ಮೇಲೆ ನಮ್ಮ ಬಹುಪಾಲು ಚಾನೆಲ್‍ಗಳಿಗೆ ಒಂದರ್ಧ ಗಂಟೆ ನಿರಾಶೆಯಾದಂತೆ ಕಂಡು ಬಂತು. ಆದರೆ ಯಾವಾಗ ಕಾಂಗ್ರೆಸ್‍ನವರು ಅಂದೇ ಸಂಜೆ ರೆಸಾರ್ಟ್ ಕಡೆ ಹೊರಟರೋ, ಬಿಜೆಪಿಗೆ ಇನ್ನೂ ಅವಕಾಶ ಇದೆ ಎಂದೇ ಈ ಚಾನೆಲ್‍ಗಳು ಭಾವಿಸಿದವು.
ಈಗ ಆಪರೇಷನ್ ಕಮಲ ಜಾರಿಯಲ್ಲಿದೆ ಎಂಬುದನ್ನು ಜನರಿಗೆ ಮುಟ್ಟಸಿದ್ದಕ್ಕಾಗಿ ಈ ಚಾನೆಲ್‍ಗಳಿಗೆ ಥ್ಯಾಂಕ್ಸ್ ಹೇಳಬೇಕು, ನಿಜ. ಆದರೆ ಇಂತಹ ಒಂದು ದಂಧೆಯೇ ಅನೈತಿಕ ಎಂದು ಬಿಂಬಿಸಲು ಒಲ್ಲದ ಅವು ಅಸಹ್ಯತನದ ಪರಮಾವಧಿ ತಲುಪಿವೆ.

ಕೋಟಿಗಳ ಆಮಿಷದ ವಿಜೃಂಭಣೆ
ಬಿಜೆಪಿ ಸಂಪರ್ಕದಲ್ಲಿ 12ರಿಂದ 15 ಕಾಂಗ್ರೆಸ್ ಶಾಸಕರಿದ್ದು, ಅವರೆಲ್ಲ ಹಂತಹಂತವಾಗಿ ಬಿಜೆಪಿ ಪಾಳಯಕ್ಕೆ ಬರಲಿದ್ದಾರೆ ಎಂದೆಲ್ಲ ತೋರಿಸುತ್ತ ಬರಲಾಯಿತು. ಇತರ ಕೆಲವು ಕಾಂಗ್ರೆಸ್ ಶಾಸಕರು ಇದರಿಂದ ಪ್ರೇರಿತರಾಗಿ ಬಿಜೆಪಿಯ ಕಡೆ ಬರಬಹುದೆಂಬ ಲೆಕ್ಕಚಾರವೂ ಇದರಲ್ಲಿ ಇತ್ತು. ಒಬ್ಬ ಶಾಸಕನಿಗೆ ಸಚಿವ ಸ್ಥಾನದ ಜೊತೆಗೆ ಮೂವತ್ತರಿಂದ ಅರವತ್ತು ಕೋಟಿ ಆಮಿಷ ಒಡ್ಡಿದ್ದು ಅಸಹ್ಯ, ಅಶ್ಲೀಲ ಎಂಬಂತೆ ಕವರೇಜ್ ಮಾಡಬೇಕಾದ ಮಾಧ್ಯಮಗಳು ಇದನ್ನು ಸಾಹಸ ಎಂಬಂತೆ ವಿಜೃಂಭಿಸಿದವು.
ಹರಿಯಾಣ ರಾಜ್ಯದ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್‍ನ ಕೋಣೆಯ ಬಾಡಿಗೆ, ಊಟ ತಿಂಡಿಯ ಖರ್ಚುಗಳ ವಿವರ ನೀಡುವಾಗಲೂ ಅಲ್ಲಿ ನಿರೂಪಕರಿಗೆ ಇಂಥದ್ದನ್ನೆಲ್ಲ ಪ್ರಶ್ನಿಸಬೇಕೆಂಬ ಯಾವ ಭಾವವೂ ಇರಲಿಲ್ಲ. ಸುವರ್ಣ ನ್ಯೂಸ್‍ನ ದೆಹಲಿ ವರದಿಗಾರ ಪ್ರಶಾಂತ್ ನಾತು ಗುರುಗ್ರಾಮದ ರೆಸಾರ್ಟು ಮುಂದೆ ನಿಂತು, ಆ ರೆಸಾರ್ಟಿನ ವೈಭವವನ್ನು ವರ್ಣಿಸಿದ್ದೇ ವರ್ಣಿಸಿದ್ದು. ಒಂದು ರೂಮ್ ಬಾಡಿಗೆ 25 ಸಾವಿರ ಎಂದೂ, ಊಟ, ತಿಂಡಿಯ ಖರ್ಚು ಒಬ್ಬೊಬ್ಬರಿಗೆ ದಿನಕ್ಕೆ ಹತ್ತು ಸಾವಿರ ರೂ ಎಂದು ನಾತು ಹೇಳುತ್ತಿದ್ದರೆ, ಇತ್ತ ನಿರೂಪಕ ಅಜಿತ್ ಇದನ್ನು ಅಸಹ್ಯ ಎಂದು ಭಾವಿಸದೇ, ಐಷಾರಾಮಿತನವನ್ನೇ ವಿಜೃಂಭಿಸುವ ಧಾವಂತ ತೋರುತ್ತಿದ್ದರು.

ಬರ ಮರೆತು ರೆಸಾರ್ಟಿನ ಪ್ರವರ!
ರಾಜ್ಯದಲ್ಲಿ ಈಗ 160ಕ್ಕೂ ಹೆಚ್ಚು ತಾಲೂಕುಗಳು ಬರಪಿಡೀತವಾಗಿವೆ. ಈ ಬಗ್ಗೆ ಎಂದೂ ಗಂಭೀರ ವರದಿ ಮಾಡದ ಚಾನೆಲ್‍ಗಳಿಗೆ ಯಡಿಯೂರಪ್ಪ ಬರ ಕಾಮಗಾರಿಗಳತ್ತ ಗಮನ ಹರಿಸದ ಈ ಸರ್ಕಾರ ದಿಕ್ಕು ದೆಸೆಯಿಲ್ಲದ್ದು ಎಂದು ಟೀಕಿಸಿದ್ದು ವೇದವಾಕ್ಯದಂತೆ ಕಂಡಿತು. ಆದರೆ ರೆಸಾರ್ಟಿನಲ್ಲಿದ್ದ ಬಿಜೆಪಿ ಶಾಸಕರಿಗೆ ಸಂಬಂಧಿಸಿದ 86 ಕ್ಷೇತ್ರಗಳಲ್ಲಿ ಬರಗಾಲ ಇರುವುದು ನಮ್ಮ ಚಾನೆಲ್‍ಗಳಿಗೆ ಮುಖ್ಯ ಅನಿಸಲೇ ಇಲ್ಲ. ಇಲ್ಲಿ ಸಚಿವ ಸಂಪುಟದ ಉಪಸಮಿತಿ ಬರಗಾಲ ಅಧ್ಯಯನದಲ್ಲಿ ತೊಡಗಿದಾಗ ಹಾಜರು ಇರಬೇಕಿದ್ದ ಸ್ಥಳೀಯ ಶಾಸಕರು ಗುರುಗ್ರಾಮದ ರೆಸಾರ್ಟಿನಲ್ಲಿ ಮಜಾ ಮಾಡುತ್ತಿರುವುದು ನಿರೂಪಕರಿಗೆ, ವಿಶ್ಲೇಷಕರಿಗೆ ಮುಖ್ಯ ಅನಿಸಲೇ ಇಲ್ಲ. ಇದಕ್ಕೆ ತಕ್ಕಂತೆ ಕಾಂಗ್ರೆಸ್ ಕೂಡ ರೆಸಾರ್ಟಿಗೆ ಜೋತು ಬಿದ್ದುದು ಕೂಡ ನಮ್ಮ ಮೀಡಿಯಾಗಳ ಪಾಲಿಗೆ ಸಹಜ ನಡೆಯೇ ಆಗಿತ್ತು. ಜೆಡಿಎಸ್‍ನ ಕೆಲವರು ತಾವೂ ಬಿಜೆಪಿಯ ಕೆಲವು ಶಾಸಕರನ್ನು ಖರೀದಿಸಲಿದ್ದೇವೆ ಎಂಬುದು ಪ್ರತಿತಂತ್ರದಂತೆ ಕಂಡಿತೇ ವಿನಃ ಇದರಲ್ಲೂ ಯಾವ ಅನೈತಿಕತೆಯೂ ಇವರಿಗೆ ಗೋಚರಿಸಲೇ ಇಲ್ಲ!
ಎಲ್ಲವನ್ನೂ ಅತಿರೇಕವಾಗಿ ತೋರಿಸಿದ್ದಲ್ಲದೇ, ಇದೆಲ್ಲವೂ ರಾಜಕೀಯ ತಂತ್ರಗಾರಿಕೆ ಎಂಬಂತೆ ತೋರಿಸುವ ಮೂಲಕ ಕರ್ನಾಟಕ ರಾಜ್ಯದ ಮತದಾರರ ಮಾನವನ್ನೂ ಈ ಮೀಡಿಯಾಗಳು ಹರಾಜು ಹಾಕಿಬಿಟ್ಟವು ಅನಿಸುತ್ತಿದೆ. ಹಲವಾರು ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‍ಗಳೂ ಕೂಡ ಇದೇ ಧಾಟಿಯಲ್ಲಿ ವರ್ತಿಸಿದ್ದೂ ಅಸಹ್ಯವಾಗಿತ್ತು.

ವರ್ಷದಿಂದಲೇ ಬಿಜೆಪಿ ಪರ ತುತ್ತೂರಿ
2018ರ ಮೇ ಚುನಾವಣೆಗೂ ಎಂಟು ತಿಂಗಳು ಮೊದಲೇ ಅವೆಲ್ಲ ಬಿಜೆಪಿಯ ಪರ ತುತ್ತೂರಿ ಊದತೊಡಗಿದ್ದವು. ಕವರೇಜ್‍ನಿಂದ ಹಿಡಿದು, ವಿಶ್ಲೇಷಣೆಯಲ್ಲೂ ಅವು ಬಿಜೆಪಿ ಪರ ‘ಅಲೆ’ ಸೃಷ್ಟಿಸುವ ಅನೈತಿಕ ಒಪ್ಪಂದವನ್ನೂ ಮಾಡಿಕೊಂಡಿದ್ದವು. ಅದಕ್ಕೆ ತಕ್ಕಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶದ ಬಹುಪಾಲು ಮಾಧ್ಯಮಗಳನ್ನು ಖರೀದಿಸಿರುವ ಸುದ್ದಿಯೂ ಹಬ್ಬಿತ್ತಲ್ಲ? ನಮ್ಮ ಬಹುಪಾಲು ಮಾಧ್ಯಮಗಳ ವರ್ತನೆಯೂ ಹಾಗೇ ಇತ್ತು. ಕೇಂದ್ರದ ಬಿಜೆಪಿಯ ಸರ್ಕಾರದ ವೈಫಲ್ಯಗಳನ್ನು, ಒಡೆದಾಳುವ ನೀತಿಯನ್ನು ಮತ್ತು ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿದ್ದ ಅಮಾನವೀಯ ದಾಳಿಗಳನ್ನು ನಿಷ್ಠುರವಾಗಿ ವಿಮರ್ಶೆ ಮಾಡುತ್ತಿದ್ದ ಕೆಲವು ಇಂಗ್ಲಿಷ್ ಮತ್ತು ಹಿಂದಿ ಚಾನೆಲ್‍ಗಳ ಮಾಲಿಕರ ಮೇಲೆ ಐಟಿ ದಾಳಿ ನಡೆಯುವಂತೆಯೂ ಮಾಡಲಾಗಿತ್ತು. ಅದಕ್ಕೆ ಬಗ್ಗದೇ ಇದ್ದಾಗ ಚಾನೆಲ್ ಮಾಲಿಕರನ್ನು ವಾಮಮಾರ್ಗಗಳಿಂದ ಬೆದರಿಸಿ, ನಿಷ್ಠುರ, ಪ್ರಾಮಾಣಿಕ ಪತ್ರಕರ್ತರು ಆ ಚಾನೆಲ್‍ಗಳನ್ನು ತೊರೆಯುವಂತೆ ಮಾಡಲಾಯಿತು. ಇನ್ನೊಂದು ಕಡೆ ತಮ್ಮ ಪರವಿರುವ ಚಾನೆಲ್‍ಗಳಿಗೆ ಯಥೇಚ್ಛವಾಗಿ ಸರ್ಕಾರಿ ಜಾಹಿರಾತುಗಳನ್ನು ನೀಡಿದ್ದಲ್ಲದೇ, ಪ್ಯಾಕೇಜ್ ರೂಪದಲ್ಲಿ ಹಣ ಸಂದಾಯವನ್ನು ನೀಡಿರುವ ಸಂಶಯಗಳೂ ತೇಲಾಡಿದ್ದವು. ನಮ್ಮ ಬಹುಪಾಲು ಮಾಧ್ಯಮಗಳ ವರ್ತನೆ ಇಂತಹ ಆರೋಪಗಳಿಗೆ ಪುಷ್ಠಿ ಕೊಡುವಂತೆಯೇ ಇತ್ತು.
ಮೇ 15ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪೂರ್ತಿಯಾಗಿ ಹೊರಬೀಳುವ ಮುನ್ನವೇ ಆಪರೇಷನ್ ಕಮಲ ಎಂಬ ದಂಧೆಗಿಳಿದ ಬಿಜೆಪಿ, ಈಗಲೂ, ಈ ಹೊತ್ತಿನಲ್ಲೂ ಹೇಗಾದರೂ ಮಾಡಿ ಸರ್ಕಾರ ಕೆಡವುವ ಹವಣಿಕೆಯಲ್ಲಿದೆ. ಬೆಳಗಾವಿಯ ಅಧಿವೇಶನ ಕೂಡ ಅದರ ಪಾಲಿಗೆ ಇಂತಹ ವ್ಯಾಪಾರದ ಮಾತುಕತೆಗೆ ಒದಗಿದ ‘ಸುವರ್ಣ’ ಅವಕಾಶವೇ ಆಗಿತ್ತಲ್ಲವೇ? ಮೊಗಸಾಲೆಯಲ್ಲಿ ಈ ದಂಧೆಯ ಬಗ್ಗೆ ಮಾತಾಡಲೆಂದೇ ಹಲವರನ್ನು ನಿಜೆಪಿ ನಿಯೋಜಿಸಿತ್ತು ಕೂಡ! ಜನರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಬೇಕಿದ್ದ ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗಲೂ ನಾಲಾಯಕ್ಕು ಎಂಬುದನ್ನು ಜನರ ಮುಂದೆ ಇಡುವ ಬದಲು, ಬಿಜೆಪಿಯ ದುಷ್ಟ ಹುನ್ನಾರಗಳನ್ನು, ಕುದುರೆ ವ್ಯಾಪಾರದ ದಂದೆಯನ್ನು ಬಹುಪಾಲು ಮಾಧ್ಯಮಗಳು ಸಂಭ್ರಮಿಸಿಯೇ ವರದಿ ಮಾಡಿದವು.
2014ರ ಮೇನಲ್ಲಿ ರಾಜ್ಯ ಚುನಾವಣಾ ಫಲಿತಾಂಶ ಬಂದ ತುಸು ಹೊತ್ತಿನಲ್ಲೇ, ‘ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಏರಲು ನಾವು ಬಿಡಲ್ಲ’ ಎಂದು ಸಾರ್ವಜನಿಕವಾಗಿಯೇ ಆಪರೇಷನ್ ಕಮಲಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತೇಜನ ನೀಡಿದಾಗಲೂ ನಮ್ಮ ಮಾಧ್ಯಮಗಳಿಗೆ ಇದರಲ್ಲಿ ಯಾವ ಅನೈತಿಕತೆಯೂ ಕಂಡಿರಲಿಲ್ಲ.
ಒಟ್ಟಿನಲ್ಲಿ ಬಹುಪಾಲು ದೃಶ್ಯ ಮಾಧ್ಯಮಗಳು ಆಪರೇಷನ್ ಕಮಲದಲ್ಲಿ ಪರೋಕ್ಷವಾಗಿ ತಾವೂ ಭಾಗಿ ಎಂಬಂತೆ ವರ್ತಿಸುತ್ತಿರುವುದು ನಾಚಿಕೆಗೇಡು ಅಲ್ಲವೇ?

2008ರಿಂದಲೇ ಆಪ್ ಕಮಲದ ಪರ!

‘ಆಪರೇಷನ್ ಕಮಲ’ ಎಂಬ ಶಾಸಕರ ಖರೀದಿ ಮತ್ತು ಉಪಚುನಾವಣೆಗಳಲ್ಲಿ ಅವರನ್ನು ವಾಮಮಾರ್ಗಗಳ ಮೂಲಕ ಗೆಲ್ಲಿಸುವ ಅನೈತಿಕ ವ್ಯಾಪಾರವನ್ನು 2008ರಲ್ಲಿ ಬಿಜೆಪಿ ಆರಂಭಿಸಿದಾಗಲೂ ನಮ್ಮ ಬಹುಪಾಲು ಟಿವಿ ಮಾಧ್ಯಮಗಳಿಗೆ ಇದೊಂದು ಪ್ರಜಾಪ್ರಭುತ್ವ ವಿರೋಧಿ ಹುನ್ನಾರ ಎಂದು ಅನಿಸಿರಲೇ ಇಲ್ಲ. ಈಗಲೂ ಅವಕ್ಕೆ ಹಾಗೆ ಅನಿಸಿಯೇ ಇಲ್ಲ. ಆರೋಗ್ಯಕರ ಪ್ರಜಾಪ್ರಭುತ್ವದ ಆಶಯಗಳನ್ನೆಲ್ಲ ಧ್ವಂಸ ಮಾಡಿದ ಈ ನೀತಿಗೆಟ್ಟ ಚಟುವಟಿಕೆ ಈಗ ಬಿಜೆಪಿಯ ಅಧಿಕಾರ ಹಿಡಿಯುವ ಅಸ್ತ್ರಗಳಲ್ಲಿ ಒಂದಾಗಿದೆ. ಇದಕ್ಕೆ ನಮ್ಮ ಬಹುಪಾಲು ಮಾಧ್ಯಮಗಳ ಬೆಂಬಲವೂ ಇದೆ ಎಂಬುದು ಜನಕ್ಕೆ ನಿಧಾನಕ್ಕಾದರೂ ಗೊತ್ತಾಗುತ್ತ ಬರುತ್ತಿದೆ.
2008ರ ವಿಧಾನಸಭೆ ಚುನಾವಣೆಯಲ್ಲಿ 110 ಸೀಟು ಗಳಿಸಿ, ಬಹುಮತಕ್ಕೆ ಮೂರು ಸೀಟುಗಳ ಕೊರತೆ ಎದುರಿಸಿದ್ದ ಬಿಜೆಪಿಗೆ ಆಗ ಜನಾರ್ಧನರೆಡ್ಡಿ-ರಾಮುಲು ಎಂಬ ಅದಿರುದೊಂಗರು ನೆರವಿಗೆ ಬಂದರು. ಕಾಂಗ್ರೆಸ್‍ನ ಮೂವರು ಮತ್ತು ಜೆಡಿಎಸ್‍ನ ನಾಲ್ವರು ಶಾಸಕರನ್ನು ಖರೀದಿಸಿ, ರಾಜಿನಾಮೆ ಕೊಡಿಸಲಾಯಿತು. ಉಪ ಚುನಾವಣೆಗಳಲ್ಲಿ ಇದರಲ್ಲಿ ಐವರನ್ನು ಗೆಲ್ಲಿಸಿಕೊಂಡು ಬಹುಮತ ಸಾಧಿಸಲಾಯ್ತು. ಪಕ್ಷಾಂತರ ನಿಷೇಧ ಕಾಯ್ದೆಯ ಆಶಯಗಳನ್ನೆಲ್ಲ ಧ್ವಂಸ ಮಾಡಿದ ಅಪಕೀರ್ತಿ ಹೊಂದಿರುವ ಬಿಜೆಪಿಗೆ ಈ ಬಗ್ಗೆ ಯಾವ ನಾಚಿಕೆಯೂ ಇಲ್ಲ. ನಮ್ಮ ಬಹುಪಾಲು ಮಾಧ್ಯಮಗಳಿಗೆ ಇದು ರಾಜಕೀಯ ತಂತ್ರವಾಗಿಯಷ್ಟೇ ಕಂಡಿದೆ. 2009ರಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಎಲ್ಲ ರಾಜ್ಯಗಳ ಬಿಜೆಪಿ ಮುಖಂಡರಿಗೆ ‘ಆಪರೇಷನ್ ಕಮಲ’ದ ಬಗ್ಗೆ ತಿಳುವಳಿಕೆ ನೀಡಲಾಯಿತು. ಅದನ್ನು ಸಾಧಿಸುವ ಬಗೆಯನ್ನು ಉದಾಹರಣೆಗಳ ಸಮೇತ ವಿವರಿಸಲಾಯಿತು. ಹೀಗೆ ಬಹಿರಂಗವಾಗಿ ಆಪರೇಷನ್ ಕಮಲವನ್ನು ಬೆಂಬಲಿಸಿದ ರಾಷ್ಟ್ರೀಯ ಪಕ್ಷವು ಹಲವು ರಾಜ್ಯಗಳಲ್ಲಿ ಈ ವ್ಯಾಪಾರದ ಮೂಲಕವೇ ಅಧಿಕಾರ ಹಿಡಿದಿರುವುದೂ ಕೂಡ ನಮ್ಮ ಮಾಧ್ಯಮಗಳಿಗೆ ನೈತಿಕ ಸಿಟ್ಟನ್ನು ಉಂಟುಮಾಡಿಲ್ಲ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here