ಭಾರತೀ ದೇವಿ.ಪಿ |

ಬಹುತ್ವದ ನಾಡಾದ ಭಾರತದಲ್ಲಿ ನಮ್ಮ ನಡುವಣ ಹಲವು ಕಲೆಗಳು ನಮಗೆ ಕಾಣಿಸುವುದು ಧಾರ್ಮಿಕ ಪರಿವೇಷದೊಳಗೇ. ಯಕ್ಷಗಾನ, ಹರಿಕಥೆ, ಭಜನೆ, ಶಾಸ್ತ್ರೀಯ ಸಂಗೀತ ಹೀಗೆ ಕಲೆಗಳನ್ನು ಹಿಂದಿನಿಂದಲೂ ಒಂದು ತತ್ವದ ವಾಹಕವಾಗಿ ಬಳಸಿಕೊಂಡು ಬರಲಾಗಿದೆ. ಕಲೆ ಅನ್ನುವುದು ಯಾವಾಗಲೂ ಶುದ್ಧಾಂಗ ಕಲೆಯಾಗಿ ಇರುವುದು ಅಸಾಧ್ಯ. ಅದು ಶುದ್ಧಕಲೆಯಂತೆ ಕಾಣಿಸುತ್ತಿರುವ ಸಂದರ್ಭದಲ್ಲೂ ಹೀಗೆ ಇರುವ ಮೂಲಕವೇ ಏನೋ ಒಂದನ್ನು ಬೆಂಬಲಿಸುತ್ತಿರುತ್ತದೆ. ಅಲ್ಲದೇ, ಕಲೆ ಒದಗಿಸುವ ಆಹ್ಲಾದ, ಅರಿವಿನ ಆಚೆಗೂ ಯಾವುದೇ ವಿಚಾರದ ಸಂವಹನಕ್ಕೆ ಕಲೆ ಮಾಧ್ಯಮವಾಗಿ ಬಳಕೆಯಾಗುವುದು ನಮ್ಮ ನಡುವೆ ಅಪರೂಪದ ಮಾತೇನಲ್ಲ. ಕಲೆ ಯಾವ ವಿಚಾರವನ್ನು ಸಂವಹನ ಮಾಡುತ್ತಿದೆ ಎಂಬುದನ್ನು ವಿಮರ್ಶಿಸಿ ತಪ್ಪು-ಒಪ್ಪುಗಳ ಚರ್ಚೆ ಮಾಡುವುದು ಅಗತ್ಯ. ಆದರೆ ನಮ್ಮ ಚರ್ಚೆ ಅಷ್ಟಕ್ಕೇ ಸೀಮಿತವಾಗದೇ ಎಲ್ಲ ವಿಚಾರಗಳಾಚೆ ಒಂದು ಮಾಧ್ಯಮವಾಗಿ ಕಲೆಯ ಸಾಧ್ಯತೆಯ ಶೋಧ ನಡೆಸುವುದು ಮುಖ್ಯ ಎನಿಸುತ್ತದೆ.
ಹರಿಕಥೆ ಜನರ ನಡುವಣ ಒಂದು ಕಲೆ. ಭಾಗವತ ಪಂಥದ ಭಾಗವಾಗಿ, ಭಕ್ತಿ ಪರಂಪರೆಯ ಧಾರೆಯಾಗಿ, ಧಾರ್ಮಿಕ ತತ್ವಗಳ ವಾಹಕವಾಗಿ, ಜನರ ನಾಡಿಮಿಡಿತವನ್ನು ತಟ್ಟುವ ಪ್ರಕಾರವಾಗಿ ಹರಿಕಥೆ ಸಮುದಾಯಗಳ ಮಧ್ಯೆ ಬೆಳೆದಿದೆ. ಕಥನ, ಹಾಡು, ತತ್ವ ವಿವೇಚನೆಗಳು ಮಿಳಿತಗೊಂಡು ಈ ಪ್ರಕಾರ ಜನಾಕರ್ಷಕವಾಗಿದ್ದು ಪರಿಣಾಮಕಾರಿಯಾಗಿ ವಿಚಾರವನ್ನು ತಲುಪಿಸುತ್ತದೆ. ಇಂತಹ ಆಕರ್ಷಕ ಪ್ರಕಾರವನ್ನು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಭಾರತದಾದ್ಯಂತ ಗುರುತಿಸಬಹುದು. ಕಥಾಕೀರ್ತನ, ಸಂಕೀರ್ತನ, ಅಭಂಗ ಸಂಕೀರ್ತನ, ಕಥಾ ಕಾಲಕ್ಷೇಪ, ಹರಿಕಥೆ, ಶಿವಕಥೆ ಹೀಗೆ ಹಲವು ಹೆಸರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇವಸ್ಥಾನಗಳು ಮುಂತಾದ ಧಾರ್ಮಿಕ ಕೇಂದ್ರಗಳು, ಸಮುದಾಯಗಳು ಈ ಕಲೆಯನ್ನು ಪೋಷಿಸುತ್ತಾ ಬಂದಿರುವ ಬಗೆಯನ್ನೂ ಗಮನಿಸಬಹುದು. ಇದರ ಬಗ್ಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ.
ಇಂದು ಯಕ್ಷಗಾನದಂತಹ ಕೆಲವು ಕಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಲೆಗಳು ಹಿಂದೆ ತಮಗೆ ಇದ್ದ ಅಪಾರ ಸಂಖ್ಯೆಯ ಪ್ರೇಕ್ಷಕ, ಶ್ರೋತೃ ವರ್ಗವನ್ನು ಕಳೆದುಕೊಂಡಿವೆ. ಇದಕ್ಕೆ ಆರ್ಥಿಕ ಕಾರಣಗಳಿದ್ದಂತೆ ಸಾಮಾಜಿಕ ಕಾರಣಗಳೂ ಇವೆ. ಹಿಂದೆ ಜಾತ್ರೆ, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಇರುತ್ತಿದ್ದ ಕಲೆಗಳ ಜಾಗದಲ್ಲಿ ಆರ್ಕೆಸ್ಟ್ರಾ, ನೃತ್ಯಗಳು ಬಂದಿವೆ. ಮನೆಗಳಲ್ಲಿ ಟಿ.ವಿ ಆಗಮಿಸಿದೆ. ಇದು ಮೇಲುನೋಟಕ್ಕೆ ಎಲ್ಲರಿಗೂ ಕಾಣುತ್ತಿರುವ ಸ್ಥಿತ್ಯಂತರವಾದರೆ, ಕಲೆಗಳು ಪಡೆದಿರುವ ವಿಸ್ತರಣೆ ಮತ್ತು ಕಲೆಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗಿದೆ. ಇಂದಿನ ಲೌಕಿಕ ಅಗತ್ಯಗಳಿಗೆ ತಕ್ಕಂತೆ ಕಲೆಗಳನ್ನು ವಾಹಕವಾಗಿ ಬಳಸುತ್ತಿರುವ ಬಗೆ ಒಂದೆಡೆಯಾದರೆ ತಮ್ಮ ಅಜೆಂಡಾಗಳನ್ನು ಸಾರಲು ಕಲೆಗಳನ್ನು ಬಳಸಿಕೊಳ್ಳುತ್ತಿರುವ ಅಪಾಯ ಇನ್ನೊಂದೆಡೆ.
ಹರಿಕಥೆ, ಶಿವಕಥೆಗಳ ಕಲಾತ್ಮಕ ವಿನ್ಯಾಸ ಇಂದು ಕೇವಲ ಧಾರ್ಮಿಕ ಕಥನಗಳನ್ನು ಹೇಳುವ ಚೌಕಟ್ಟಿಗಷ್ಟೆ ಸೀಮಿತವಾಗಿ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಾಮಾಜಿಕ ಸಂಗತಿಗಳನ್ನು ಹೇಳುವುದಕ್ಕೆ ಬಳಕೆ ವಿಸ್ತರಣೆಗೊಂಡಿರುವ ಬಗೆಯನ್ನು ಗಮನಿಸಬಹುದು. ಮಹಾರಾಷ್ಟ್ರದಲ್ಲಿ ಇದೇ ಹಾಡು, ಕಥನ, ತತ್ವ ಚಿಂತನೆಯ ವಿನ್ಯಾಸದಲ್ಲಿ ಅಂಬೇಡ್ಕರ್ ಜೀವನಗಾಥೆಯನ್ನು ನಿರೂಪಿಸುವ ಬಗೆ ಮನಮುಟ್ಟುವಂತೆ ಕಾಣಿಸಿಕೊಳ್ಳುತ್ತದೆ. ಇದನ್ನು ಭಾರತದ ಮಹತ್ವದ ಚಿತ್ರನಿರ್ಮಾಣಕಾರ ಆನಂದ ಪಟವರ್ಧನ್ ಅವರು ತಮ್ಮ ‘ಜೈಭೀಮ್ ಕಾಮ್ರೇಡ್’ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕತೆಗಳನ್ನು ಈ ವಿನ್ಯಾಸಕ್ಕೆ ಅಳವಡಿಸಿ ಪ್ರಸ್ತುತಪಡಿಸಿರುವ ಬಗೆ ಕಾಣಸಿಗುತ್ತದೆ. ಇನ್ನು ಈ ಬಗೆಯ ವಿಸ್ತರಣಗಳು ಒಂದುಕಡೆಯಾದರೆ ಇನ್ನೊಂದೆಡೆ ಕಲೆಗಳು ಕಾರ್ಪೊರೇಟೀಕರಣಗೊಂಡ ಬಗೆಯೂ ಗಮನಿಸಬೇಕಾದ ಸಂಗತಿ. ಕಲೆಯನ್ನು ಇಂದಿನ ಜನರ ಅಗತ್ಯಗಳಿಗೆ ಒಗ್ಗಿಸಿಕೊಳ್ಳುವ ಬಗೆ, ಮಾರುಕಟ್ಟೆ ನೀತಿಗಳಿಗೆ ಹೊಂದುವಂತೆ ಪ್ರಸ್ತುತಪಡಿಸುವ ಬಗೆ ಸಾಕಷ್ಟು ಬದಲಾವಣೆ, ವಿಸ್ತರಣೆಗೆ ಕಾರಣವಾಗಿದೆ. ಕ್ಯಾಸೆಟ್, ಸಿಡಿಗಳ ಅಗತ್ಯಕ್ಕನುಗುಣವಾಗಿ ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ರೀತಿಯಿಂದ ಹಿಡಿದು ವಿಷಯದ ಆಯ್ಕೆಯವರೆಗೂ ಇದು ಕೆಲಸ ಮಾಡಿದೆ. ಇನ್ನು, ಪ್ರಭುತ್ವಗಳು ತಮ್ಮ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಕಲೆಗಳನ್ನು ಬಳಸಿಕೊಳ್ಳುವುದನ್ನೂ ನೋಡಬಹುದಾಗಿದೆ. ಸ್ವಚ್ಛ ಭಾರತ, ಕುಟುಂಬ ಯೋಜನೆ ಹೀಗೆ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಜನರ ಗಮನ ಸೆಳೆಯುವಂತೆ ಈ ಕಲಾವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವುಗಳಾಚೆಗೆ ತುಂಬಾ ಅಪಾಯಕಾರಿ ಬೆಳವಣಿಗೆಯೆಂದರೆ ಕೋಮುವಾದಿ ಅಜೆಂಡಾಗಳನ್ನು ಜನಕ್ಕೆ ಹತ್ತಿರವಾದ ಕಲೆಗಳೊಳಗೆ ತುರುಕುವುದು. ತಾರತಮ್ಯದ ಎಳೆಗಳನ್ನು ಹೊಂದಿರುವ ಧಾರ್ಮಿಕ ಕಥನಗಳೊಳಗೆ ಬಹಳ ಸುಲಭವಾಗಿ ಇಂತಹ ವಿಚಾರಗಳನ್ನು ತುರುಕಬಹುದು. ಇತರ ಕಲೆಗಳೂ ಈ ಹಿಡಿತದಿಂದ ಪಾರಾಗಿಲ್ಲ. ಇದು ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆಗಿರುವುದನ್ನು ಗಮನಿಸಬಹುದು.
ಹರಿಕಥೆಯ ರೀತಿಯಲ್ಲಿ ಜನಸಮೀಪವಾದ ಕಲೆಗಳಿಗಿರುವ ಬಹುದೊಡ್ಡ ಶಕ್ತಿಯೆಂದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗು ಮಾಡಿಕೊಳ್ಳುವ ಸಾಮಥ್ರ್ಯ. ಹರಿಕಥೆ ಮತ್ತು ಅದಕ್ಕೆ ಸಂವಾದಿಯಾದ ಕಲೆಗಳನ್ನು ಪ್ರದರ್ಶನ ಮಾಡುವವರಲ್ಲಿ ಎಲ್ಲ ಸಮುದಾಯಗಳ ಪ್ರಾತಿನಿಧ್ಯವೂ ಗೋಚರಿಸುತ್ತದೆ. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಅವು ಜನಪದ ಮಟ್ಟುಗಳಿಗೆ ಹತ್ತಿರವಾದ ಸಂಗೀತದ ಮೂಲಕ, ಜನಭಾಷೆಯ ಮೂಲಕ ಸಂವಾದಕ್ಕಿಳಿಸುತ್ತವೆ. ಇಂತಹ ಪ್ರಕಾರಗಳನ್ನು ಉಳಿಸಿಕೊಳ್ಳುವ, ಈ ಮೂಲಕ ಜನಪರ ವಿಚಾರಗಳನ್ನು ಹಬ್ಬುವ ಸಾಧ್ಯತೆ ಬಗ್ಗೆ ಚಿಂತಿಸಬೇಕಾಗಿದೆ.
ಈಗ ನಮ್ಮ ಮುಂದಿರುವ ಸವಾಲೆಂದರೆ, ಈ ಕಲಾವಿನ್ಯಾಸದೊಳಗಿನ ಹಲವು ವಿಚಾರಗಳನ್ನು ಒಪ್ಪದೇ ಇರುವ ಸಂದರ್ಭದಲ್ಲೂ ಒಂದು ಪ್ರಕಾರವಾಗಿ ಇದು ಜನರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದು. ವೈಚಾರಿಕವಾಗಿ ಚಿಂತಿಸುತ್ತಿರುವ ಸಂದರ್ಭದಲ್ಲೇ ಕಲೆಗಳ ಬಹುಮುಖ ಸಾಧ್ಯತೆಗಳನ್ನು ಕಡೆಗಣಿಸದೇ ಅವುಗಳನ್ನು ಹೇಗೆ ಜನರನ್ನು ಬೆಸೆಯುವ ಕೊಂಡಿಯಾಗಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇದಕ್ಕೆ ಈಗಾಗಲೇ ಹಲವು ಮಾದರಿಗಳು ನಮ್ಮ ಮುಂದೆ ಇವೆ. ‘ಸಮುದಾಯ’ ಸಂಘಟನೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಯತ್ನ ಮಾಡಿದೆ, ಮಾಡುತ್ತಿದೆ. ಮಹಾರಾಷ್ಟ್ರದ ಕಬೀರ್ ಕಲಾಮಂಚ್ ಹಾಡು, ನಾಟಕ, ಕಥನಗಳ ನಿರೂಪಣೆಗಳ ಮೂಲಕ ಜನರನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ತಟ್ಟಿದ ಬಗೆ ನಮ್ಮ ಮುಂದಿದೆ. ರಂಗಭೂಮಿಯೂ ಹರಿಕಥೆ, ತಕ್ಷಗಾನ, ಬಾವುಲ್, ಪಾಂಡ್ವಾನಿ ಮೊದಲಾದ ಪ್ರಕಾರಗಳನ್ನು ನಿರೂಪಣೆಯಲ್ಲಿ ವೈವಿಧ್ಯತೆ ಸಾಧಿಸಿಕೊಳ್ಳುವ ದಾರಿಯಲ್ಲಿ ಬಳಸಿಕೊಳ್ಳುತ್ತಾ ಬಂದುದಕ್ಕೆ ಹಲವು ಉದಾಹರಣೆಗಳಿವೆ. ಈ ದಿಸೆಯಲ್ಲಿ ಹರಿಕಥೆಯ ಕಲಾವಿನ್ಯಾಸವನ್ನು ಇರಿಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಬಹುದು. ಜನಪರ ಚಳುವಳಿ, ಚಿಂತನೆ ಕಟ್ಟುವಲ್ಲಿ ಇದೂ ಒಂದು ದಾರಿಯಾಗಬಹುದು.
ಹರಿಕಥೆಯ ಪುನರುಜ್ಜೀವನಕ್ಕಾಗಿ ರೂಪುಗೊಂಡಿರುವ ಕಥಾ ಕೀರ್ತನ ಪರಿಷತ್ ಇದೆ; ಸಂಗೀತ ನೃತ್ಯ ಅಕಾಡೆಮಿ ಇದೆ. ಮಾತ್ರವಲ್ಲ ಇತರ ಯಾವುದೇ ಸಂಘಟನೆಯ ಮೂಲಕವಾಗಲೀ, ವೈಯಕ್ತಿಕ ನೆಲೆಯಲ್ಲಾಗಲೀ ಈ ಬಗೆಯ ಯತ್ನಕ್ಕೆ ಮನಸ್ಸು ಮಾಡಬಹುದಾಗಿದೆ. ಕೇವಲ ಧಾರ್ಮಿಕ ವಲಯದಲ್ಲಿ ಇಂತಹ ಕಲೆಗಳಿಗೆ ಪೋಷಣೆ ನೀಡುವುದರಾಚೆಗೆ ಸಾಮಾಜಿಕ ನೆಲೆಗಳನ್ನೂ ಒಳಗೊಂಡು ಪ್ರಜಾಸತ್ತಾತ್ಮಕವಾಗಿ ಚಿಂತಿಸುವ ಅಗತ್ಯವಿದೆ. ಕಲೆಗಳ ಉಳಿವು, ಪೋಷಣೆ, ಜನಪರ ಚಿಂತನೆಯ ಪ್ರಸಾರ ಈ ಎಲ್ಲವುಗಳ ದೃಷ್ಟಿಯಿಂದಲೂ ಇದು ಮುಖ್ಯವೆನಿಸುತ್ತದೆ.

(ಚರ್ಚೆಯ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಹಂಚಿಕೊಂಡ ವಿಚಾರಗಳಿಗೆ ಋಣಿ)

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here