ಡಾ. ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ ಅಕ್ಕಿ |

ಹಿಜಡಾ ವ್ಯಕ್ತಿಗಳು ಪಿತೃಪ್ರಾಧಾನ್ಯತೆಯನ್ನು ಧಿಕ್ಕರಿಸುತ್ತಾರೆ ಹಾಗೂ ಅದರೊಂದಿಗೆ ವರ್ಗ ಮತ್ತು ಜಾತಿಯ ರೂಢಿಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ಉಲ್ಲಂಘಿಸುತ್ತಾರೆ. ತಮ್ಮ ತಮ್ಮ ಜಾತಿ ಮತ್ತು ವರ್ಗಗಳ ಪರಂಪರೆಗಳನ್ನು ಮುರಿದು, ಎಲ್ಲರೂ ಒಂದೆಡೆಗೆ ಬಂದು, ಒಂದು ಸಮುದಾಯವಾಗಿ ಜೊತೆಯಾಗಿ ದುಡಿದು, ಜೀವಿಸುವ ಇವರನ್ನು ಒಂದರ್ಥದಲ್ಲಿ ನಿಜವಾದ ಕಮ್ಯೂನಿಸ್ಟರು ಎನ್ನಬಹುದು. ಒಬ್ಬ ಹೊಸ ಹಿಜಡಾ ವ್ಯಕ್ತಿ ಸಮುದಾಯವನ್ನು ಸೇರಿಕೊಂಡಾಗ, ಅವಳು ತನ್ನ ಹೆಸರು, ಆಸ್ತಿ, ಶಿಕ್ಷಣ, ಜಾತಿ ಮತ್ತು ಧರ್ಮ ಈ ಎಲ್ಲ ಸಂಬಂಧಗಳನ್ನು ಕಳಚಿಕೊಳ್ಳುತ್ತಾಳೆ. ಕೆಲವು, ಹಿಜಡಾ ವ್ಯಕ್ತಿಗಳು ತಾವು ಬೆಳೆದು ಬಂದ ಜಾತಿ ಮತ್ತು ವರ್ಗದ ಗುರುತನ್ನು ಉಳಿಸಿಕೊಂಡರೂ, ತಮ್ಮ ವ್ಯವಹಾರಿಕ ಆಚರಣೆಯಲ್ಲಿ ಸಮುದಾಯದ ಇತರ ಹಿಜಡಾ ವ್ಯಕ್ತಿಗಳಂತೆ ಅವರ ಸಾಂಪ್ರದಾಯಿಕ ವೃತ್ತಿಗಳಾದ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಲ್ಲಿಯೇ ತೊಡಗಿರುತ್ತಾರೆ ಹಾಗೂ ಸಮುದಾಯವನ್ನು ಸೇರಿದ ನಂತರ ಅವರೆಲ್ಲರ ಜೊತೆಯಲ್ಲೇ ಜೀವಿಸಿ, ಅವರೆಲ್ಲರ ಆರ್ಥಿಕ ಸ್ಥಿತಿಯನ್ನೂ ಹಂಚಿಕೊಳ್ಳುತ್ತಾರೆ.
ಸಮುದಾಯದಲ್ಲಿರುವ ಜೇಷ್ಠತೆ(ಸೀನಿಯಾರಿಟಿ)ಯ ಕಾರಣದಿಂದಾಗಿ ದುಡಿಮೆಯ ಶ್ರೇಣೀಕರಣ ಸೃಷ್ಟಿಯಾಗುತ್ತದೆ. ಆದರೆ ಅದರೊಂದಿಗೆ, ಒಂದು ಕುಟುಂಬದಲ್ಲಿರಬಹುದಾದ ಸಮಸ್ಯೆಗಳನ್ನು ಒಳಗೊಂಡ ಒಂದು ಬೆಂಬಲ ರಚನೆ ಹಾಗೂ ಅದರೊಂದಿಗೆ ಸಮಸ್ಯಾತ್ಮಕವಾದ ಪರ್ಯಾಯ ಕುಟುಂಬವನ್ನು ಈ ಸಮುದಾಯ ನೀಡುತ್ತದೆ. ಕುಟುಂಬ ರಚನೆಯಲ್ಲಿ ಇರಬಹುದಾದ ಸಮಸ್ಯೆಗಳಾದ ಒತ್ತಾಯ ಮತ್ತು ಬೆಂಬಲ ಇವರೆಡೂ ಒಟ್ಟಿಗೇ ಇರುತ್ತವೆ. ತಮ್ಮ ಟ್ರಾನ್ಸ್‍ಜೆಂಡರ್ ಮಕ್ಕಳನ್ನು ತಪ್ಪಾಗಿ ಅರ್ಥೈಸಿ, ಅವರನ್ನು ಹೊರದಬ್ಬಿದ ಕುಟುಂಬಗಳಿಗೆ ಪರ್ಯಾಯವಾಗಿ ಇನ್ನೊಂದು ಕುಟುಂಬವನ್ನು ಸೃಷ್ಟಿಸಲು ರಚಿಸಲಾದ ವ್ಯವಸ್ಥೆ ಇದಾಗಿದೆ. ಹಾಗೂ ಒಂದು ಫ್ಯೂಡಲ್(ಊಳಿಗಮಾನ್ಯ) ಸಮಾಜದ ವ್ಯವಸ್ಥೆಯ ಘಟಕವಾದ ಕುಟುಂಬ ಮತ್ತು ಅದರ ಸಮುದಾಯಗಳು ಹೇಗೆ ಫ್ಯೂಡಲ್ ರಚನೆಯನ್ನು ಹೊಂದಿರುತ್ತವೋ ಅದೇ ರೀತಿಯ ಫ್ಯೂಡಲ್ ವ್ಯವಸ್ಥೆ ಹಿಜಡಾ ಸಮುದಾಯದಲ್ಲೂ ಪುನರಾವರ್ತನೆಯಾಗಬಹದು.
ಇದನ್ನು ಮಾಕ್ರ್ಸಿಸ್ಟ್ ಮಹಿಳಾವಾದಿ ದೃಷ್ಟಿಕೋನದಿಂದ ನೋಡಿದಲ್ಲಿ, ಈ ವ್ಯವಸ್ಥೆಯು ಜಾತಿ, ವರ್ಗ, ಲಿಂಗಾಧಾರಿತ ಸಾಮಾಜಿಕ ಪಾತ್ರಗಳನ್ನು ಮುರಿದು, ಪರ್ಯಾಯ ರಚನೆಯನ್ನು ಸೃಷ್ಟಿಸುತ್ತದೆ; ಇತರ ಅನೇಕ ಪರ್ಯಾಯಗಳಂತೆ ಇಲ್ಲಿಯೂ ನಾವು ಬೆಳೆಯುತ್ತಿರುವಾಗ ಸಾಮಾನ್ಯವಾಗಿ ನೋಡಿದ ಅಧಿಕಾರದ ರಚನೆಗಳು ಪುನರಾವರ್ತನೆಯಾಗದೇ ಒಂದು ನ್ಯಾಯಸಮ್ಮತವಾದ ಕುಟುಂಬ ಹಾಗೂ ದುಡಿಮೆಯ ರಚನೆಯನ್ನು ಮರುರಚಿಸುವ ಪ್ರಯತ್ನ ಕಾಣಿಸುತ್ತದೆ.
ಇಂದಿನ ದಿನಗಳಲ್ಲಿ, ಅನೇಕ ದೀರ್ಘಕಾಲದ ಹೋರಾಟಗಳ ನಂತರ, ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ತಾವು ಆಯ್ಕೆ ಮಾಡಿದ ಅಥವಾ ಒಲವು ತೋರುವ ಜೆಂಡರ್‍ಅನ್ನು ಗುರುತಿಸುವ ಸರಕಾರಿ ಗುರುತಿನ ಚೀಟಿಗಳನ್ನು ಪಡೆಯುತ್ತಿದ್ದಾರೆ. ಆದರೆ, ಜನ್ಮ ಪ್ರಮಾಣಪತ್ರ ಅಥವಾ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುವ ಸಂಸ್ಥೆಗಳಲ್ಲಿ, ಆ ಪ್ರಮಾಣಪತ್ರಗಳಲ್ಲಿ ವ್ಯಕ್ತಿಗಳ ಹೆಸರು ಅಥವಾ ಜೆಂಡರ್‍ನಲ್ಲಿ ಬದಲಾವಣೆ ಮಾಡುವ ಸಂಸ್ಥೆಗಳು ಇನ್ನೂ ವಿರಳ. ಆ ಕಾರಣದಿಂದಾಗಿ, ತಾವು ತಮಗೆ ನೀಡಿದ ಜೆಂಡರ್‍ಗಿಂತ ಭಿನ್ನವಾಗಿ ಕಾಣಿಸುವ ಕಾರಣದಿಂದ ಅನುಭವಿಸುವ ಕೀಟಲೆ, ಪೀಡೆಗಳ ಹೊರತಾಗಿಯೂ ಶಾಲೆ ಅಥವಾ ಕಾಲೇಜು ಶಿಕ್ಷಣ ಮುಗಿಸಿದ ಕೆಲವು ಹಿಜಡಾ ವ್ಯಕ್ತಿಗಳು ತಮಗೆ ವಹಿಸಿದ ಜೆಂಡರ್‍ಗಿಂತ ಭಿನ್ನವಾಗಿ ಕಾಣಿಸುತ್ತಾರೆ. ಹೀಗಾಗಿ ಅವರು ಪಡೆದಿರುವ ಪ್ರಮಾಣಪತ್ರಗಳು ಅನುಪಯುಕ್ತವಾಗುತ್ತವೆ.
ಟ್ರಾನ್ಸ್‍ಜೆಂಡರ್ ಸಮುದಾಯದ ಪ್ರತಿನಿಧಿಗಳು ಸಲ್ಲಿಸುವ ಹಕ್ಕೊತ್ತಾಯಗಳಲ್ಲಿ ತಮ್ಮ ಗುರುತಿನ ದಾಖಲೆಗಳಿಗೆ ಹೊಂದುವಂತೆ ಶೈಕ್ಷಣಿಕ ಸಂಸ್ಥೆಗಳು ತಮ್ಮ ಹೆಸರು ಮತ್ತು ಜೆಂಡರ್ ಅನ್ನು ಬದಲಾಯಿಸಬೇಕೆಂಬ ಬೇಡಿಕೆ ಇಡುವುದು ವಿರಳವಾಗಿರುವುದು ನೀವು ನೋಡಿರಬಹುದು. ಇದಕ್ಕೆ ಕಾರಣ, ಟ್ರಾನ್ಸ್ ಮಹಿಳೆಯ ರಾಜಕೀಯ ಅರ್ಥವ್ಯವಸ್ಥೆ ಎರಡು ಅಧಿಕಾರದ ವ್ಯವಸ್ಥೆಗಳ ಮಧ್ಯೆ ರಚಿಸಲಾಗಿದೆ, ಒಂದು ಫ್ಯೂಡಲ್ ವ್ಯವಸ್ಥೆ ಇನ್ನೊಂದು ವಸಾಹತುಶಾಹಿ ವ್ಯವಸ್ಥೆ.
ಚಿಕ್ಕ ವಯಸ್ಸಿನ ಟ್ರಾನ್ಸ್‍ಮಹಿಳೆಯರು ಯಾವ ಮಟ್ಟಿಗೆ ಸ್ತ್ರೀಯರಂತೆ ಇರುತ್ತಾರೆಂದರೆ, ತುಂಬಾ ಚಿಕ್ಕ ವಯಸ್ಸಿನಿಂದಲೇ ಹಿಂಸೆ ಮತ್ತು ಪಿತೃಪ್ರಧಾನ ಸಮಾಜದ ಅಸಮ್ಮತಿಯನ್ನು ಅನುಭವಿಸುತ್ತಾರೆ. ತಮಗೆ ವಹಿಸಿದ ಜೆಂಡರ್ ಅನ್ನು ಬಿಂಬಿಸದ ಮಕ್ಕಳನ್ನು ಗುರಿಯಾಗಿಸುವ ರಾಕ್ಷಸರಿಂದ ಈ ಮಕ್ಕಳು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಹಿಂಸೆಯನ್ನು ಅನುಭವಿಸುತ್ತಾರೆ. ಅವರು ತಮಗೆ ವಹಿಸಿದ ಜೆಂಡರ್‍ನಂತೆ ಇಲ್ಲದಿರುವುದು ಸ್ಪಷ್ಟವಾದಂತೆಲ್ಲ ಅಥವಾ ಇಂತಹ ವ್ಯಕ್ತಿಗಳ ಗುಂಪಿನ ಭಾಗಿಯಾದಾಗ ವ್ಯಾಪಕವಾದ ತಾರತಮ್ಯ ಎದುರಿಸುತ್ತಾರೆ. ಮೊದಲನೆಯದಾಗಿ ಶಿಕ್ಷಣದ ಅವಕಾಶ ಪಡೆಯುವುದರಲ್ಲಿ ತಾರತಮ್ಯ ಎದುರಿಸುತ್ತಾರೆ, ಆದರೆ ವಿದ್ಯುಕ್ತವಾಗಿ ಶಿಕ್ಷಣವನ್ನು ಪಡೆದವರೂ ತಮ್ಮ ಶೈಕ್ಷಣಿಕ ಹಿನ್ನೆಲೆಗೆ ಸಾಟಿಯಲ್ಲದ ನಿರುದ್ಯೋಗ ಹಾಗೂ ತಾರತಮ್ಯ ಅನುಭವಿಸಬೇಕಾಗುತ್ತದೆ.
ಇಲ್ಲಿಯ ಅರೆ ಫ್ಯೂಡಲ್ ಮತ್ತು ಅರೆವಸಾಹತುಶಾಹಿ ಸಂದರ್ಭ ಬ್ರಾಹ್ಮಣ್ಯ ಪಿತೃಪ್ರಧಾನ್ಯತೆಯದ್ದು ಹಾಗೂ ವಸಾಹತುಶಾಹಿ ದಾಳಿಗೆ ಪ್ರತಿಕ್ರಿಯೆಯಾಗಿ ಒಂದು ಧರ್ಮದ ರಚನೆಯಾಗಿದೆ. ಬ್ರಾಹ್ಮಣ್ಯತೆಯ ಪಿತೃಪ್ರಾಧಾನ್ಯ ವ್ಯವಸ್ಥೆಯ ರಚನೆಯಲ್ಲಿ, ಎಲ್ಲ ಜನರಿಗೆ ಒಂದು ಜಾತಿ ಮತ್ತು ಅದಕ್ಕನುಗುಣವಾಗಿ ದುಡಿಮೆಯ ನಿರ್ದಿಷ್ಟವಾದ ವಿಧಾನಗಳನ್ನು ನೀಡಿದೆ. ಹಿಜಡಾ ವ್ಯಕ್ತಿಗಳನ್ನು ಜಾತಿ ಮತ್ತು ಲಿಂಗದ ಒಂದು ನಿರ್ದಿಷ್ಟವಾದ ಸಂಗಮ/ಕೂಟವೆಂದು ಬ್ರಾಹ್ಮಣ್ಯತೆಯ ಪಿತೃಪ್ರಾಧಾನ್ಯ ವ್ಯವಸ್ಥೆ ನೋಡುತ್ತದೆ. ಅದಕ್ಕನುಗುಣವಾಗಿ ಈ ಬ್ರಾಹ್ಮಣೀಯ ಪಿತೃಪ್ರಧಾನ್ಯ ವ್ಯವಸ್ಥೆ ಹಿಜಡಾ ವ್ಯಕ್ತಿಗಳನ್ನು ಎರಡು ರೀತಿಯ ದಿನಗೂಲಿ ದುಡಿಮೆಯಲ್ಲಿ ಇಟ್ಟಿದೆ; ಒಂದು ಭಿಕ್ಷಾಟನೆ ಇನ್ನೊಂದು ಲೈಂಗಿಕ ವೃತ್ತಿ. ಇನ್ನು ಇತರೆ ತುಳಿತಕ್ಕೊಳಪಟ್ಟ ಜಾತಿಗಳಂತೆ, ಹಿಜಡಾ ವ್ಯಕ್ತಿಗಳಿಗೆ ನೀಡಿದ ದುಡಿಮೆಗಳನ್ನು ಕೀಳು ಅಥವಾ ಹೊಲಸು ಎಂದು ಈ ವ್ಯವಸ್ಥೆ ಪರಿಗಣಸಿದೆ ಹಾಗೂ ಅವರ ಸಾಮಾಜಿಕ ಅವಹೇಳನೆಯನ್ನು ಸಮರ್ಥಿಸಿಕೊಳ್ಳಲು ಈ ರಚನೆಯನ್ನು ನಿರ್ಮಿಸಿದೆ.
ಇದೇ ಸಮಯದಲ್ಲಿ ಹಿಜಡಾ ವ್ಯಕ್ತಿಗಳು ಬೇರಾವುದೇ ದುಡಿಮೆಯ ಕ್ಷೇತ್ರಗಳಲ್ಲಿ ಪ್ರವೇಶಿಸಲು ಪ್ರಯತ್ನಿಸಿದರೆ ಅಲ್ಲಿ ಅವರು ಮುಚ್ಚಿದ ಬಾಗಿಲನ್ನೇ ಎದುರಿಸಬೇಕಾಗುತ್ತದೆ. ಹಿಜಡಾ ವ್ಯಕ್ತಿಗಳ ಜೀವನವನ್ನು ನಿರ್ಬಂಧಿಸುವ ಹಾಗೂ ಅವರ ಸಾಮಾಜಿಕ, ರಾಜಕೀಯ ಆರ್ಥಿಕ ವ್ಯವಸ್ಥೆಯ ಫ್ಯೂಡಲ್ ಆಯಾಮ ಇದಾಗಿದೆ.
ಸಮಾಜದಲ್ಲಿ ಹಿಜಡಾ ವ್ಯಕ್ತಿಗಳ ಸ್ಥಾನದ ವಸಾಹತುಶಾಹೀ ಚೌಕಟ್ಟು ಬ್ರಿಟಿಷ್ ಕೊಲೋನಿಯಲ್ ಕ್ರಿಮಿನಲ್ ಆಕ್ಟ್‍ನಿಂದ ಪ್ರಾರಂಭವಾಗುತ್ತದೆ. ಇಡೀ ಹಿಜಡಾ ಸಮುದಾಯವನ್ನು ಈ ಕಾಯಿದೆಯ ಅಡಿಯಲ್ಲಿ ಕ್ರೋಢೀಕರಿಸಲಾಗಿತ್ತು. ಇದರಿಂದಾಗಿ ಇಡೀ ಸಮುದಾಯವನ್ನು ಅಪರಾಧೀ ಪಂಗಡ ಎಂದು ವರ್ಗೀಕರಿಸಿ, ಯಾವುದೇ ಅಪರಾಧದ ಸಂಶಯದ ಆಧಾರದ ಮೇಲೆ ಬಂಧನ, ಪ್ರತಿಬಂಂಧಕ ಬಂಧನಗಳಂತಹ ಶಿಕ್ಷೆಗಳನ್ನು ಇವರಿಗೆ ವಿಧಿಸಬಹುದಾಗಿತ್ತು. ಇದಕ್ಕೆ ಪೂರಕವಾಗಿ ಭಾರತಕ್ಕೆ ಭೇಟಿ ನೀಡಿದ ಅನೇಕ ಬ್ರಿಟಿಷ್ ಪ್ರವಾಸಿಗಳ ಉಲ್ಲೇಖಗಳು ಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಸಮಾಜ ಒಪ್ಪಿಕೊಳ್ಳುವ ಜೆಂಡರ್‍ಗಳಿಗೆ ಅನುಗುಣವಾಗಿರದ ವ್ಯಕ್ತಿಗಳಿಗೆ ಮುಕ್ತ ಪ್ರವೇಶ ಇರುವುದನ್ನು ನೋಡಿ ಆ ಪ್ರವಾಸಿಗರು ಅಸಹ್ಯ ಪಟ್ಟಿರುವುದನ್ನು ಕೆಲವು ಉಲ್ಲೇಖಗಳಲ್ಲಿ ಕಾಣಬಹುದು.
ಇಂದಿನ ದಿನಗಳಲ್ಲೂ ಬ್ರಿಟಿಷ್ ಆಡಳಿತದ ಅನೇಕ ವಿಧಾನಗಳು ಮುಂದುವರೆಯುತ್ತಿರುವುದಷ್ಟೇ ಅಲ್ಲ, ಇಂದಿನ ಅರೆ-ವಸಾಹತುಶಾಹಿ ಚೌಕಟ್ಟಿನಲ್ಲಿ ಹಿಜಡಾ ವ್ಯಕ್ತಿಗಳ ಬಂಧನ ಮತ್ತು ಇತರೆ ಕ್ರಮಗಳು ವಾಡಿಕೆಯಾಗಿವೆ. ಭಾರತೀಯ ದಂಡ ಸಂಹಿತೆಯ 377 ಸೆಕ್ಷನ್ ಅಡಿಯಲ್ಲಿ ‘ಪ್ರಕೃತಿಯ ನಿಯಮಕ್ಕೆ ವಿರುದ್ಧ’ ಎಂದು ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದ ಹಿಜಡಾ ವ್ಯಕ್ತಿಗಳನ್ನು ಪೋಲೀಸ್ ವ್ಯವಸ್ಥೆ ನಿಯಮಿತವಾಗಿ ಗುರಿಯಾಗಿಸುತ್ತಿತ್ತು.
ಬುದ್ಧಿಸಂನಿಂದ ಎದುರಾದ ಸವಾಲನ್ನು ಎದುರಿಸಲು, ತಮ್ಮ ಅಧಿಪತ್ಯವನ್ನು ಉಳಿಸಿಕೊಳ್ಳಲು ಬ್ರಾಹ್ಮಣ್ಯವು ಯಾವ ರೀತಿಯಲ್ಲಿ ಪ್ರಾಣಿಹತ್ಯೆ, ದನದ ಮಾಂಸವನ್ನು ವರ್ಜಿಸಿ ಸಂಪೂರ್ಣವಾಗಿ ಶಾಖಾಹಾರಿಗಳಾದರೋ ಅದೇ ರೀತಿಯಲ್ಲಿ ಅಂತರ್ರಾಷ್ಟ್ರೀಯ ಮಾನವಹಕ್ಕುಗಳ ಚೌಕಟ್ಟಿನಲ್ಲಿ ತಮ್ಮ ಮೇಲರಿಮೆಯನ್ನು ಸಮರ್ಥಿಸಿಕೊಳ್ಳಲು ವಸಾಹತುಶಾಹೀ ವಿಧಾನಗಳು ಮಾರ್ಪಾಡಾಗಿವೆ. ಹಾಗಾಗಿ ಇಂದು, ಟ್ರಾನ್ಸ್‍ಜೆಂಡರ್ ಸಮುದಾಯವನ್ನು ಅಪರಾಧೀಕರಿಸಿ, ಅತ್ಯಂತ ಕಠಿಣ ಕಾನೂನುಗಳನ್ನು ರೂಪಿಸಿದ ಬ್ರಿಟಿಷರ ವಸಾಹತುಶಾಹೀ ಆಳ್ವಿಕೆಯನ್ನು ಮರೆತು, ಇಂದು ಅಂತರಾಷ್ಟ್ರೀಯ ಎನ್.ಜಿ.ಓ.ಗಳು ಮತ್ತು ಫಂಡರ್‍ಗಳು ತಮ್ಮನ್ನು ತಾವು ಈ ಸಮುದಾಯದ ಸಂರಕ್ಷಕರಂತೆ ಬಿಂಬಿಸಿಕೊಳ್ಳುತ್ತಿವೆ. ನಿರ್ದಿಷ್ಟವಾಗಿ, ಎಚ್.ಐ.ವಿ.ಗೆ ಸಂಬಂಧಿಸಿದ ಅಂತರಾಷ್ಟ್ರೀಯ ಫಂಡಿಂಗ್ ಎಜೆನ್ಸಿಗಳು ಟ್ರಾನ್ಸ್‍ಜೆಂಡರ್ ವ್ಯಕ್ತಿಗಳ ಈ ಒಂದು ಆಯಾಮದ ಮೇಲೆ ಮಾತ್ರ ಕೇಂದ್ರೀಕರಿಸುತ್ತವೆ. ಈ ವಸಾಹತುಶಾಹೀ ಚೌಕಟ್ಟು ಟ್ರಾನ್ಸ್‍ಜೆಂಡರ್ ವ್ಯಕ್ತಿಗಳಿಗೆ ಒಂದು ಸುರಕ್ಷಿತ ಜಾಗದಲ್ಲಿ ಕೆಲಸ ಮಾಡಲು ಅತ್ಯಂತ ಕಡಿಮೆ ಸಂಖ್ಯೆಯ ಉದ್ಯೋಗಗಳನ್ನು ನೀಡುತ್ತದೆ. ಆದರೆ ಈ ವಸಾಹತುಶಾಹೀ ವ್ಯವಸ್ಥೆ ಹೇಗಿದೆಯೆಂದರೆ, ವಸಾಹತುಕರಣಗೊಂಡ ರಾಷ್ಟ್ರಗಳಿಂದ ಕಸಿದುಕೊಂಡ ಮತ್ತು ಇಂದಿಗೂ ಕಸಿದುಕೊಳ್ಳುತ್ತಿರುವ ಭಾರಿ ಮೊತ್ತದಲ್ಲಿ ಒಂದು ಚಿಕ್ಕ ಅಂಶವನ್ನು ಚಾರಿಟೇಬಲ್ ಕೊಡುಗೆಯಾಗಿ ಅರ್ಪಿಸುತ್ತಾರೆ- ಆ ಮೊತ್ತ ವಸಾಹತುಶಾಹಿ ವ್ಯವಸ್ಥೆ ನಿರ್ಮಿಸಿದ ಅಸಮಾನತೆಗಳನ್ನು ಅಳಿಸಿಹಾಕುವುದಕ್ಕೆ ತುಂಬಾ ಕಡಿಮೆಯಾಗಿದ್ದರೂ ವಸಾಹತುಕರಣಗೊಂಡ ಬಡರಾಷ್ಟ್ರಗಳಲ್ಲಿ ದಿನಗೂಲಿ ಮಾಡುವ ಬಡಜನರಿಗೆ ಅಮೂಲ್ಯವೆನಿಸುವಷ್ಟು ದೊಡ್ಡದಾಗಿರುತ್ತದೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ, ಇಂತಹ ಯೋಜನೆಗಳು ಅಂತರಾಷ್ಟ್ರೀಯ ವೀಕ್ಷಕರಿಗಾಗಿ ಇರುವುದರಿಂದ, ಈ ಎನ್.ಜಿ.ಒ.ಗಳು ಕೆಲಸಕ್ಕೆ ತೆಗೆದುಕೊಂಡ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳನ್ನು ಅವರ ಒಂದು ಕರುಣಾಜನಕ ಚಿತ್ರಣವನ್ನು ಬಿಂಬಿಸಲು ಬಳಸಲಾಗುತ್ತದೆ. ಹಾಗಾಗಿ, ಲೈಂಗಿಕ ವೃತ್ತಿಯನ್ನು ಬಿಟ್ಟುಕೊಡಲು ಬೇಕಾಗುವಷ್ಟು ಆದಾಯವನ್ನು ಇಂತಹ ಎನ.ಜಿ.ಒ.ಗಳಲ್ಲಿ ಉದ್ಯೋಗ ಮಾಡುವ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಹೊಂದಿರುವುದಿಲ್ಲ. ಆದರೆ, ಹಿಜಡಾ ಸಮುದಾಯದ ವ್ಯಕ್ತಿಗಳಿಗೆ ಎನ್.ಜಿ.ಒ.ಗಳಿಂದ ಬರುವ ಸಂಬಳ ಹಾಗೂ ಒಂದು ಕಛೇರಿಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಗೌರವಗಳು ಅಮೂಲ್ಯವಾಗುತ್ತವೆ. ಇದರೊಂದಿಗೆ, ಎನ್.ಜಿ.ಒ.ಗಳು ಕೊಡುವ ಕಾಂಡೋಮ್‍ಗಳನ್ನು ಲೈಂಗಿಕ ವೃತ್ತಿಯಲ್ಲಿರುವವರಿಗೆ ವಿತರಿಸುವುದರಿಂದ ಅಲ್ಲಿ ಕೆಲಸ ಮಾಡುವವರು ಸಮುದಾಯಕ್ಕೆ ಉಪಯುಕ್ತವಾಗುತ್ತಾರೆ. ಆದರೆ, ಭಾರತದ ಪ್ರತಿಯೊಂದು ನಗರದಲ್ಲಿ ಸಾವಿರಾರು ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಇರುವಾಗ ಎನ್.ಜಿ.ಒ.ಗಳಲ್ಲಿ ಕೆಲವೇ ಕೆಲವು ಉದ್ಯೋಗಗಳು ಇರುವುದರಿಂದ ಎನ್.ಜಿ.ಒ.ಗಳು ತಮ್ಮ ಆಚರಣೆಗೆ ಒಪ್ಪದ ವ್ಯಕ್ತಿಗಳನ್ನು ತಮಗಿಷ್ಟ ಬಂದಂತೆ ಕೆಲಸದಿಂದ ಕಿತ್ತುಹಾಕಬಹುದು ಹಾಗೂ ಅಂತರಾಷ್ಟ್ರೀಯ ಫಂಡಿಂಗ್ ಮುಂದುವರೆಸಲು ತಾವೇ ಸಮುದಾಯದ ಧ್ವನಿ ಎಂದು ಬಿಂಬಿಸುವುದಕ್ಕಾಗಿ ಸಮುದಾಯದ ರಾಜಕೀಯ ಕಥನವನ್ನು ನಿರ್ಣಯಿಸುತ್ತಾರೆ.
ಹಾಗಾಗಿ ಹಿಜಡಾ ಸಮುದಾಯದ ರಾಜಕೀಯ ಧ್ವನಿಯು ಅವರ ಜನ್ಮದ ಕುಟುಂಬ, ಎನ್.ಜಿ.ಒ.ಗಳು ಹಾಗೂ ತಮ್ಮಷ್ಟಕ್ಕೆ ತಾವಿರುವ ಮತ್ತು ವ್ಯಾಪಕವಾಗಿರುವ ಸಾಮಾಜಿಕ, ಆರ್ಥಿಕ ಅಧಿಕಾರ ರಚನೆ ವಿಶೇಷವಾಗಿ ಪೋಲೀಸ್ ರಾಜ್ಯದ ವಿರುದ್ಧ ಧ್ವನಿಯೆತ್ತದ ಅವರು ಆಯ್ಕೆ ಮಾಡಿದ ಕುಟುಂಬಗಳಿಂದ ನಿರ್ಬಂಧಿತವಾಗುತ್ತದೆ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here