ಅಂದು ಒಂದು ಬಿಸಿಗಾಳಿ ತುಂಬಿದ ಬಲೂನ್ ಕೆಳಗೆ ನಿಂತಿರುವ ಜನ ಕತ್ತೆತ್ತಿ ಅದರ ಹಾರಾಟವನ್ನು ನೋಡುತ್ತಿದ್ದರೆ. ಇಲ್ಲಿ ಅವರ ಜೇಬುಗಳಿಗೆ ಕತ್ತರಿ ಬೀಳುತ್ತಿರುತ್ತೆ. ಆ ಬಲೂನು ಐದು ವರ್ಷಗಳಿಗೊಮ್ಮೆ ಕೆಳಗಿಳಿದು ಬಂದು ಯಾರಾದರೂ ಒಳಕ್ಕೆ ಬರಬಹುದೆಂದು ಆಹ್ವಾನಿಸುತ್ತದೆ. ಆದರೆ ನಮ್ಮ ಜನರ್ಯಾರಿಗೂ ಆ ಸಾಮಥ್ರ್ಯವಿಲ್ಲದಿರುವುದರಿಂದ ಮತ್ತೆ ಹಳಬರನ್ನೇ ಹತ್ತಿಸಿಕೊಂಡು ಮೇಲಕ್ಕೆ ಹಾರುತ್ತದೆ. (ನಮ್ಮ ಜನರ ಜೇಬುಗಳಿಗೆ ಕತ್ತರಿ ಬೀಳುವುದಂತೂ ಮುಂದುವರೆಯುತ್ತದೆ)
ಇಲ್ಲಿ ಮಾತನಾಡುತ್ತಿರುವುದದು ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಎನ್ನುವುದು ಯಾರಿಗಾದರೂ ಅರ್ಥವಾಗುವಂತದ್ದು. ಈ ಮಾತುಗಳನ್ನು ಆಡಿರುವುದು ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿದ್ದ ಪ್ರಮುಖ ಇಂಗ್ಲೀಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ. 1930ರಲ್ಲಿ ಪ್ರಕಟವಾದ ತನ್ನ ‘ದಿ ಆಪಲ್ ಲಾಟ್’ ಎನ್ನುವ ವಿಡಂಬನಾ ನಾಟಕಕ್ಕೆ ತಾನೇ ಬರೆದ ಸುದೀರ್ಘ ಮುನ್ನುಡಿಯಲ್ಲಿ ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಕುರಿತು ಆಡಿದ ಮಾತುಗಳಿವು.

ಜಾರ್ಜ್ ಬರ್ನಾರ್ಡ್ ಷಾ

ಇಪ್ಪತ್ತೊಂದನೆ ಶತಮಾನದ ಈ ದಿನಗಳಿಗೂ ಈ ಮಾತುಗಳು ಹೇಗೆ ಅನ್ವಯಿಸುತ್ತದೆ ಎನ್ನುವುದೇ ಸೋಜಿಗ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಸಿಕ್ಕ ಅಧಿಕಾರವನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕೆಂದು ಉತ್ತರದಲ್ಲಿ ರಾಮನನ್ನು, ದಕ್ಷಿಣದಲ್ಲಿ ಅಯ್ಯಪ್ಪನನ್ನು ಬಳಸಿಕೊಳ್ಳುತ್ತಲೇ ಸಾಮಾನ್ಯ ಜನತೆಗೆ ತನ್ನ ದೇಶಪ್ರೇಮದ ಬಗ್ಗೆ ಮಂಕು ಬೂದಿ ಎರಚುತ್ತ ಚುನಾವಣೆಗಳ ಸಿದ್ದತೆಯಲ್ಲಿದೆ. ಜನರು ಇಂಥಾ ರಾಜಕಾರಣದ ಪ್ರಹಸನದ ಅಂಕಗಳನ್ನು ವೀಕ್ಷಿಸುತ್ತ ಮನರಂಜನೆ ಪಡೆಯುತ್ತಿದ್ದಾರೆ.
ಆ ನಾಯಕರು ತಾವು ಮಾತ್ರ ದೇಶಭಕ್ತರು ತಮ್ಮನು ವಿರೋಧಿಸುವವರು ದೇಶದ್ರೋಹಿಗಳು ಎಂದು ಬಿಂಬಿಸುತ್ತಾ ಆಗಾಗ ವೀರಾವೇಶದ ಮಾತುಗಳನ್ನೂ, ಆ ಮಾತುಗಳನ್ನಾಡುವ ಭರದಲ್ಲಿ ಹಾಸ್ಯಸ್ಪದ ಸುಳ್ಳುಗಳನ್ನೂ ಜನರಿಗೆ ಮೊಗೆಮೊಗೆದು ಹಂಚುತ್ತಿದ್ದಾರೆ. ಇದುವರೆಗು ಒಬ್ಬರ ವಿರುದ್ಧ ಒಬ್ಬರು ಕತ್ತಿಮಸೆಯುತ್ತಿದ್ದ ಆ ಪಕ್ಷದ ರಾಜಕೀಯ ವಿರೋಧಿಗಳು ಈಗ ಒಟ್ಟಾಗಿ ಕೈಕೈ ಜೋಡಿಸಿ ಮುಂದಿನ ಚುನಾವಣೆಗಳಲ್ಲಿ ಈ ಅಧಿಕಾರಸ್ಥರು ಧೂಳೀಪಟವಾಗುವುದರಲ್ಲಿ ಅನುಮಾನವಿಲ್ಲವೆಂದು ಡಂಗೂರ ಸಾರುತ್ತಿದ್ದಾರೆ.
ಇನ್ನ ರಾಜ್ಯ ಮಟ್ಟದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಕ್ರುದ್ಧರಾದ ದೇಶಭಕ್ತ(!) ನಾಯಕರುಗಳು ಸರ್ಕಾರವನ್ನು ಹೇಗಾದರೂ ಬೀಳಿಸಿ ಗದ್ದುಗೆ ಏರಬೇಕೆಂದು ಹವಣಿಸಿ ಪ್ರಜಾಪ್ರಭುತ್ವವೇ ತಲೆತಗ್ಗಿಸುವಂತೆ ಆಡಬಾರದ ಆಟ ಆಡುತ್ತಿದ್ದಾರೆ. ಅದಕ್ಕಾಗಿ ಸಾಮ, ದಾನ, ಭೇದ, ದಂಡೋಪಾಯಗಳೆಲ್ಲವನ್ನು ಪ್ರಯೋಗಿಸುತ್ತಿದ್ದರೂ ಆ ಪ್ರಯತ್ನಗಳು ಕೈಗೂಡದೆ ಹತಾಶರಾಗಿದ್ದಾರೆ. ಇಂಥ ನಾಟಕದ ದೃಶ್ಯಗಳಲ್ಲಿ ಇದುವರಿಗೂ ರಾಜಕೀಯ ರಂಗದಿಂದಲೇ ಮಾಯವಾಗಿದ್ದ ಮಾಜಿ ಮುಖ್ಯಮಂತ್ರಿಗಳು, ಒಂದು ರಿಪಬ್ಲಿಕ್‍ನ ಧಣಿಗಳು ಮರು ಪ್ರವೇಶ ಮಾಡಲು ಹಾತೊರೆಯುತ್ತಿದ್ದಾರೆ. ಆಳುವ ಪಕ್ಷದ ಕೆಲವರು ತಾವು ಹುಟ್ಟಿರುವುದೇ ಮಂತ್ರಿಯಾಗಬೇಕೆಂದು ಅದಾಗದಿದ್ದರೆ ತಮಗೆ ಅಸ್ತಿತ್ವವಿಲ್ಲವೇನೋ ಎಂಬುವಂತೆ ನರಳಾಡುತ್ತಿದ್ದಾರೆ. ಮಂತ್ರಿಗಿರಿಗಾಗಿ ಎಲ್ಲ ರೀತಿಯ ತಿಪ್ಪರಲಾಗಗಳನ್ನೂ ಹಾಕುತ್ತಿದ್ದಾರೆ.
ಈ ನಾಟಕಗಳ ನಡುವೆ ಇವರನ್ನು ಆರಿಸಿದ ಜನ ಏನು ಮಾಡುತ್ತಿದ್ದಾರೆ? ಈ ಪ್ರಹಸನಗಳಲ್ಲಿ ಮೂಕಪ್ರೇಕ್ಷಕರಾಗಿರುವುದು ಬಿಟ್ಟರೆ ಬೇರೇನೂ ಪಾತ್ರವಿಲ್ಲ ಅವರಿಗೆ.
ಉತ್ತರ ಕರ್ನಾಟಕದ ಜನ ಕೆಲಸವನ್ನರಸಿ ಕಿಕ್ಕಿರಿದ ಬಸ್ಸು, ರೈಲು, ಟೆಂಪೋಗಳಲ್ಲಿ ದೂರದ ಊರುಗಳಿಗೆ ಹೊರಟರೆ ಅವರ ಪ್ರತಿನಿಧಿಗಳು ಐಷಾರಾಮಿ ಬಸ್ಸುಗಳಲ್ಲಿ ಪಂಚಾತಾರಾ ಹೊಟೇಲುಗಳು, ರೆಸಾರ್ಟುಗಳ ಕಡೆಗೆ ನುಗ್ಗುತ್ತಿದ್ದಾರೆ. ಸಾಮಾನ್ಯ ಜನರ ಜೇಬುಗಳಿಗೆ ಮಾತ್ರವಲ್ಲ ಅವರ ಜೀವಗಳಿಗೇ ಕತ್ತರಿ ಪೆಟ್ಟುಗಳು ಬೀಳುತ್ತಿದ್ದರೂ ನಮ್ಮದು ಮಹಾನ್ ಪ್ರಜಾಪ್ರಭುತ್ವವೆಂದು ಪರಾಕು ಹೇಳುವವರಿಗೇನು ಕಡಿಮೆ ಇಲ್ಲ.
ಇಂಥ ಪ್ರಭೃತಿಗಳ ಸಂಖ್ಯೆಯೇ ಹೆಚ್ಚಾಗಿರುವುದನ್ನು ನೋಡಿ ಮುನಿಸಿಕೊಂಡು ಮತದಾನವೇ ಮಾಡುವುದಿಲ್ಲ ಎನ್ನುವವರನ್ನು ಈ ಪರಾಕು ವೀರರು ನಾಲಾಯಕ್ಕುಗಳು ಎಂದು ಮೂದಲಿಸುತ್ತಾರೆ. ಹೌದು, ಮತದಾನ ನಮ್ಮೆಲ್ಲರ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದು. ಸಮರ್ಥರನ್ನು ಆರಿಸಲು ಅದು ಅಸ್ತ್ರವೂ ಹೌದು. ಆದರೆ ಪ್ರಶ್ನೆಯೇನೆಂದರೆ ಯಾವ ಸಮರ್ಥರಿಗೆ ಯಾವ ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿವೆ. ಟಿಕೇಟು ವಿತರಣೆ ಎನ್ನುವುದೇ ದೊಡ್ಡ ದಂಧೆಯಾಗಿ ಹೋಗಿದೆ. ಸರಿ, ಆ ಅಸ್ತ್ರವನ್ನು ಬಳಸಿಕೊಂಡು ಮತದಾನ ಮಾಡಿದ್ದರಿಂದಲೇ ಅಲ್ಲವೇ ಈಗಿನ ಜನಪ್ರತಿನಿಧಿಗಳು ಆಯ್ಕೆಯಾಗಿರೋದು. ಹಾಗೆ ಆಯ್ಕೆಯಾದವರು ಮಾಡುತ್ತಿರುವುದೇನು? ಅದೇ ರೆಸಾರ್ಟ್ ರಾಜಕಾರಣ, ಅದೇ ಅಧಿಕಾರ ಹಪಾಹಪಿ, ಅದೇ ಕಾಲೆಳೆದಾಟ, ಅದೇ ಕೋಮುವಿಧ್ವಂಸ!
ಪ್ರಜೆಯೇ ಪ್ರಭು ಎನ್ನುತ್ತದೆ ನಮ್ಮ ಪ್ರಜಾಪ್ರಭುತ್ವ. ಆದರೆ ಯಾವತ್ತಾದರು ಪ್ರಜೆ ಪ್ರಭುವಾಗಿ ಹಕ್ಕು ಚಲಾಯಿಸುವ ಅವಕಾಶ ಕೂಡಿಬಂದಿದೆಯಾ? ಎಲೆಕ್ಷನ್ ಸಮಯದಲ್ಲೂ ಆತ ಹಣ, ಹೆಂಡದ ಋಣಕ್ಕೆ ವರ್ತಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಚುನಾವಣೆ ಅನ್ನುವುದೇನಿದ್ದರು ನಮ್ಮದಲ್ಲ, ಅದು ಆ ರಾಜಕಾರಣಿಗೂ ಈ ರಾಜಕಾರಣಿಗೂ ನಡುವೆ ನಡೆಯುವ ಭರ್ಜರಿ ಪೈಪೋಟಿ. ನಮ್ಮದೇನಿದ್ದರು ಆ ಪೈಪೋಟಿಯಲ್ಲಿ ಒಂದಷ್ಟು ಫಾಯಿದೆ ಮಾಡಿಕೊಂಡರೆ ಮುಗಿಯಿತು ಎನ್ನುವ ಮನಸ್ಥಿತಿಗಳಿಗೆ `ಮತದಾನ ನಮ್ಮ ಹಕ್ಕು’ ಎನ್ನುವ ಉಪದೇಶವೂ ನೋಟಿನ ರೂಪದಲ್ಲಿಯೇ ಕಾಣಿಸಿದರೂ ಅಚ್ಚರಿಯಿಲ್ಲ.
ಪ್ರಜಾಪ್ರಭುತ್ವ ಮತ್ತು ಮತದಾನದ ಸುತ್ತ ಇಂಥಾ ಚರ್ಚೆಗಳು ಶುರುವಾಗುತ್ತಿರೋದನ್ನು ಮತ್ತು ಅದು ಈಗಿರುವ ಭ್ರಷ್ಟ ರಾಜಕಾರಣ ವ್ಯವಸ್ಥೆಗೆ ಮಾರಕವಾಗಬಲ್ಲಷ್ಟು ಶಕ್ತವಾಗಿರುವುದನ್ನು ಸುಮ್ಮನಾಗಿಸಲು `ನೋಟಾ’ ಎನ್ನುವ ಲಾಲಿಪಪ್ಪನ್ನು ಜನರ ಕೈಗಿಡಲಾಗಿದೆ. ಅದು ಲಾಲಿಪಪ್ ಅಲ್ಲದೆ ಮತ್ತೇನೂ ಅಲ್ಲ. ಮತದಾನದ ವಿರುದ್ಧ ಮುನಿಸಿಕೊಂಡವರನ್ನು ತೆಪ್ಪಗಾಗಿಸುವ ತಂತ್ರದಂತೆ ಅದು ಬಳಕೆಯಾಗುತ್ತಿದೆ. ದೇಶದ ಇತಿಹಾಸದಲ್ಲೇ ಆ `ನೋಟಾ’ ರಾಜಕಾರಣಿಗಳ ಅಬ್ಬರದ ನಡುವೆ ಪ್ರಜೆಗಳನ್ನು ಹೀರೋ ಆಗಿಸಿದ ಒಂದೇಒಂದು ನಿದರ್ಶನವಿಲ್ಲ. ಆ ಕುರಿತು ಸ್ಪಷ್ಟ ಮಾರ್ಗಸೂಚಿಗಳು ಸರ್ಕಾರಗಳ ಬಳಿ ಇಲ್ಲ, ಜರನಲ್ಲಿ ಅವು ಜಾಗೃತಿಯನ್ನೂ ಮೂಡಿಸುತ್ತಿಲ್ಲ. `ಮತದಾನ ನಮ್ಮ ಹಕ್ಕು’ ಎನ್ನುವ ಮೂಲಕ ಪ್ರಸ್ತುತ ಚುನಾವಣಾ ವ್ಯವಸ್ಥೆಯ ವಿರುದ್ಧ ಜನರೊಳಗಿನ ಬಂಡಾಯ ಪ್ರಜ್ಞೆಯನ್ನು ಹತ್ತಿಕ್ಕುವ ಪ್ರಯತ್ನ ಒಂದು ಹುನ್ನಾರಕ್ಕಿಂತ ಕಡಿಮೆಯೇನಿಲ್ಲ ಅನಿಸುತ್ತದೆ.
ಅಪರೂಪಕ್ಕೆ ಯಾರಾದರೂ ಪ್ರಾಮಾಣಿಕರು ಸ್ವರ್ಧಿಸಿದರೆ ಅವರಿಗೆ ನೂರೋ, ಇನ್ನೂರೊ, ಹೆಚ್ಚೆಂದರೆ ಕೆಲವು ಸಾವಿರವೋ ಮತಗಳು ಮಾತ್ರ ಬೀಳುತ್ತವೆ. ಎಷ್ಟೋ ಕಡೆ ಈ ಪ್ರಾಮಾಣಿಕರಿಗಿಂತ `ನೋಟಾ’ ಮತಗಳೇ ಹೆಚ್ಚಿರುತ್ತವೆ. ಹಾಗಾದರೆ ಈ `ನೋಟಾ’ ಏನನ್ನು ಸಾಧಿಸಹೊರಟಿದೆ? ಅನ್ನೋ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಇದು ಕೇವಲ ಚುನಾವಣೆಯ ಸಂಗತಿ ಅಷ್ಟೇ. ಜನರನ್ನು ಹೀಗೆ `ನೈತಿಕ’ ನೆಪಗಳ ಮೂಲಕವೇ ಧ್ವಂಸ ಮಾಡಲು ಈ ರಾಜಕಾರಣಿಗಳು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ.
ಅದೇ ಕಾರಣಕ್ಕೆ `ಪ್ರಜಾಪ್ರಭುತ್ವ ಲೊಳಲೊಟ್ಟೆ’ ಎನ್ನುವ ಮಾತು ಈಗಾಗಲೇ ಜನರ ನಡುವೆ ಪ್ರಚಲಿತವಾಗಿದೆ. ಅಪ್ಪಿತಪ್ಪಿ ಈ ಮಾತು ನಿಜವಾಗಿಬಿಟ್ಟರೆ ದೇಶ ಹಲವು ಶತಮಾನಗಳ ಆಳಕ್ಕೆ ಕುಸಿಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ‘ನಾವು ದೇಶಕ್ಕಾಗಿ’ ಎದ್ದು ನಿಂತು ಸುಳ್ಳುರನ್ನೂ ಭ್ರಷ್ಟರನ್ನೂ ಮೂಲೆಗೆ ತಳ್ಳಿ ನಿಜವಾದ ಪ್ರಜಾತಂತ್ರದ ಸ್ಥಾಪನೆಗೆ ಕೈ ಹಾಕಬೇಕಿದೆ. ಆ ದಿಕ್ಕಿನಲ್ಲಿ ಯುವಜನರ ಪಾತ್ರ ದೊಡ್ಡದು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here