ಬೆಂಗಳೂರಿನ ಶಿವಾನಂದ ಉಕ್ಕಿನ ಮೇಲ್ಸೇತುವೆಯ ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ‘40% ಕಮಿಷನ್ ಮೇಲ್ಸೇತುವೆ’ ಎಂಬ ಬ್ಯಾನರ್ ಹಾಕಿ ಉದ್ಘಾಟಿಸುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ನಗರ ಆಪ್ ಅಧ್ಯಕ್ಷ ಮೋಹನ್ ದಾಸರಿಯವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಈ ಸ್ಟೀಲ್ ಮೇಲ್ಸೇತುವೆಯ ಅಂದಾಜು ಕಾಮಗಾರಿ ವೆಚ್ಚ 19 ಕೋಟಿಗೆ ಆರಂಭಗೊಂಡು ಇಂದು 7 ವರ್ಷಗಳ ನಂತರ 39ಕೋಟಿ ವೆಚ್ಚಕ್ಕೆ ಮುಗಿದಿದೆ. ಅಷ್ಟಾಗಿಯೂ ಸಹ ಅತ್ಯಂತ ಕಳಪೆ ಕಾಮಗಾರಿಯ ಮೂಲಕ ಇಂದು ಬಿಜೆಪಿ ಸರಕಾರ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವು ಕಾಮಗಾರಿಗಳ ವೆಚ್ಚವನ್ನು 3 – 4 ಪಟ್ಟು ಹೆಚ್ಚಿಸುವುದಲ್ಲದೆ, ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿದೆ. ಪ್ರತಿ ಕಾಮಗಾರಿಯಲ್ಲಿ 40% ಕಮಿಷನ್ ಹೊಡೆಯುವ ಮೂಲಕ ಕಳಪೆ ಕೆಲಸ ಮಾಡುತ್ತಿದೆ. ಇಂತಹ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಜನರ ಗಮನಕ್ಕೆ ಬಂದಿದ್ದು ಅವರೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಪಕ್ಷದ ಉಪಾಧ್ಯಕ್ಷ ವಿಜಯ್ ಶರ್ಮಾ, ಮುಖಂಡರುಗಳಾದ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಚನ್ನಪ್ಪಗೌಡ ನಲ್ಲೂರು, ಶಾಶಾವಲಿ, ಉಷಾ ಮೋಹನ್, ಸುಹಾಸಿನಿ ಫಣಿರಾಜ್, ಗೋಪಿನಾಥ್ ಸೇರಿದಂತೆ ಅನೇಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಇದನ್ನೂ ಓದಿ: ಪ್ರಯಾಣಕ್ಕೂ ಮುನ್ನ ಯೋಚಿಸಿ: ಬುಕ್ ಮಾಡಿದ ಟ್ರೈನ್ ಟಿಕೆಟ್ ರದ್ದುಗೊಳಿಸಿದರೆ ಜಿಎಸ್‌ಟಿ ಭಾರ!


