ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ( ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಜನವರಿ 18ರಿಂದ 22ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸಿಐಟಿಯು ಸಂಘಟನೆಯಲ್ಲಿ ದೇಶಾದ್ಯಂತ ಒಟ್ಟು 62 ಲಕ್ಷ ಪ್ರತಿನಿಧಿಗಳಿದ್ದಾರೆ. ಅವರಲ್ಲಿ ವಿವಿಧ ಭಾಗದಿಂದ ಸುಮಾರು 1500 ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ವೇಳೆ ಕಾರ್ಮಿಕರ ಸಮಸ್ಯೆಗಳು, ಕಾರ್ಮಿಕ ವಿರೋಧಿ ಸರ್ಕಾರದ ನೀತಿಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಮಿಕರ, ರೈತ, ಕೃಷಿ ಕಾರ್ಮಿಕರ ಆದಾಯ ಮಟ್ಟ ಕುಸಿಯುತ್ತಿದೆ. ಈ ಮೂರು ವರ್ಗಗಳನ್ನು ಒಗ್ಗೂಡಿಸಿ ಜನರ ಹಿತ ಕಾಪಾಡುವ ಆರ್ಥಿಕ ನೀತಿ ಜಾರಿಗೆ ಬರಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ.
ಹಿಂದಿನಿಂದಲೂ ದೇಶದಲ್ಲಿ ಅನೇಕ ಕಾರ್ಮಿಕ ವಿರೋಧಿ ನೀತಿಗಳು ಬಂದಿದ್ದವು. ಅದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ನಿರಂತರ ಹೋರಾಟದಿಂದ ಬಂಡವಾಳಿಗರ ಪರವಾದ ನೀತಿಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಮೀನಾಕ್ಷಿ ಸುಂದರಂ ಹೇಳಿದರು.
ಇದೇ ವೇಳೆ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ ಮಾತನಾಡಿ, ಕೊರೊನಾ ಸಮಯದಿಂದ ಕಾರ್ಮಿಕರ ಪರಿಸ್ಥಿತಿ ಜೀವನ ಮಟ್ಟ ಬಹಳ ಕುಸಿದಿದೆ. ಅವರಿಗೆ ಭದ್ರತೆ ಇಲ್ಲದಂತಾಗಿದೆ. ಕಾರ್ಮಿಕರಿಗೆ ಸವಲತ್ತುಗಳನ್ನು ನೀಡದೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಸಮ್ಮೇಳನಕ್ಕೆ ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪಂಬಿಸ್ ಕಿರ್ತಿಸಿಸ್ ಆಗಮಿಸಲಿದ್ದಾರೆ. ಇನ್ನು ಜ.19 ರಂದು ಕ್ಯೂಬಾ ಕ್ರಾಂತಿಕಾರಿ ಚೆಗುವಾರ ಮಗಳು ಅಲಿಡಾ ಗೆವಾರ ಹಾಗೂ ಮೊಮ್ಮಗಳು ಅಲಿಡಾ ಮಾರ್ಚ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗು ನಾಗರಿಕ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಕೊನೆಯ ದಿನ ಜ. 22 ರಂದು ಮಧ್ಯಾಹ್ನ 1 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಮಿಕರ ಬೃಹತ್ ಬಹಿರಂಗ ಸಭೆ ನಡೆಯಲಿದ್ದು 2 ಲಕ್ಷ ಜನರು ಭಾಗವಹಿಸುವ ನೀರಿಕ್ಷೆಯಿದೆ.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆಎನ್ ಉಮೇಶ್, ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ಎಸ್ ಸುನಾಂದಾ, ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಲಿನಿ ಮೇಸ್ತಾ ಉಪಸ್ಥಿತರಿದ್ದರು.


