1949 ನವೆಂಬರ್ 25 ಸಂವಿಧಾನ ರಚನಾಸಭೆಯ ಕಡೆಯ ದಿನದ ಚರ್ಚೆ ಅತ್ಯಂತ ಮಹತ್ವಪೂರ್ಣವಾದದ್ದು. “ಧರ್ಮದೆಡಗಿನ ಭಕ್ತಿಯು ಮುಕ್ತಿಯನ್ನು ತಂದು ಕೊಡಬಹುದು. ಆದರೆ ರಾಜಕೀಯ ಭಕ್ತಿ, ವ್ಯಕ್ತಿ ಪೂಜೆ ಪ್ರಜಾಪ್ರಭುತ್ವದ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಕ್ರಮೇಣ ನಿರಂಕುಶ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ”. ಹಾಗೆಯೇ ಮಾಧ್ಯಮಗಳ ಕುರಿತು ವಿಶೇಷವಾಗಿ ಹೇಳಬೇಕಾದ್ದು ಏನೂ ಇಲ್ಲ. ಸಾಮಾನ್ಯ ಪ್ರಜೆಗೆ ಲಭಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾಧ್ಯಮಕ್ಕೂ ಅನ್ವಯವಾಗುತ್ತದೆ. ಸಂವಿಧಾನದ ವಿಧಿ 19(2) ರಲ್ಲಿ ಕಾಣಿಸಿರುವ ನಿಭಂದನೆಗಳು ಎಲ್ಲರಿಗೂ ಅನ್ವಯವಾಗಲಿವೆ ಎಂಬ ಮಾತುಗಳನ್ನು ಅಂಬೇಡ್ಕರ್ ಅವರು ಹೇಳಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಅವರ ಸಾಗಬೇಕಾದ ಹಾದಿಯನ್ನು ಬೊಟ್ಟು ಮಾಡಿ ತೋರಿದ್ದರು.
ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಕುರಿತು ಪ್ರಜೆಗಳಿಗೆ ಅಪಾರವಾದ ನಂಬಿಕೆಯಿದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೇ ಭಾವಿಸಲಾದ ಮಾಧ್ಯಮಗಳು ಬೊಗಳುವುದನ್ನು ಬಿಟ್ಟು ಆಳ್ಮೆಗಾರರ ತಲೆಕಾಯುವ ಸಾಕುನಾಯಿಯಾದರೆ ಮತ್ಯಾವ ಕಾವಲುಗಾರನನ್ನು ಹುಡುಕಿ ತರಬೇಕು. ದೇಶವೊಂದು ಕರೋನಾದಂತಹ ಅಸಾಧಾರಣ ಪಿಡುಗನ್ನು ಮಣಿಸಲು ಪ್ರಯತ್ನಿಸುವ ಸನ್ನಿವೇಶದಲ್ಲಿ ಮಾಧ್ಯಮಗಳು ತುಳಿದಿರುವ ಹಾದಿಯನ್ನು ನೋಡಿದಾಗ ಈ ಕೆಳಗಿನ ಸಂಗತಿ ನೆನಪಿಗೆ ಬರುತ್ತದೆ.
ವಯಕ್ತಿಕ ಬದುಕಿಗೋ, ಕೌಟುಂಬಿಕ ನೆಮ್ಮದಿಗೋ ಅಥವಾ ಸಾಮಾಜಿಕ ನೆಮ್ಮದಿಗೋ ಕಂಟಕನಾದವನ ಕುರಿತು ದೂಷಿಸುವಾಗ ‘ದೊಡ್ಡ ರೋಗ’ ಬಂದು ಒರಗಿ ಹೋಗಲಿ ಎಂದು ಹೇಳುವುದು ಜನಪದದಲ್ಲಿದೆ.
ಮನೆಯ ನೆಮ್ಮದಿಗೆ ಬೇಡವೆನಿಸಿದ ಸಂಗತಿಗಳನ್ನು ಎತ್ತಿ ತಲೆಬುಡವಿಲ್ಲದೇ ಚರ್ಚಿಸಿ ಆರ್ಭಟಿಸಿ ನಿತ್ಯನಿರಕವನ್ನು ಉಂಟುಮಾಡುವ ಕುಟುಂಬದ ಸದಸ್ಯನ ಅಥವಾ ಇತರರ ಆರ್ಭಟ ಕುರಿತು ಹೇಳುವಾಗಲೂ ಏನ್ ‘ದೊಡ್ಡ ರೋಗ’ ಇವನಿಗೆ ಎಂದು ಪ್ರಾಸಂಗಿಕವಾಗಿ ಹೇಳುವುದು ವಾಡಿಕೆಯಲ್ಲಿದೆ.
ಈ ದೊಡ್ಡ ರೋಗವೆಂದರೆ ಏನು ಎಂಬುದರ ಕುರಿತು ಜನಪದದಲ್ಲಿ ಅಧ್ಯಯನಗಳು ನೆಡದ ಬಗ್ಗೆ ಮಾಹಿತಿ ಲಭ್ಯವಿಲ್ಲ. ದೊಡ್ಡ ರೋಗವೆಂದರೆ ಮದ್ದು ಸಿಗದ, ವಾಸಿಯಾಗದ ಕಾಯಿಲೆ. ವೈದ್ಯಶಾಸ್ತ್ರ ಪರಿಣಿತರ ಅರಿವಿಗೆ ನಿಲುಕದ ಕಾಯಿಲೆ, ಅದರ ಸ್ವರೂಪವೇನು ಮತ್ತು ಉಂಟು ಮಾಡುವ ಪರಿಣಾಮಗಳೇನು ಎಂಬುದಲ್ಲ. ದೊಡ್ಡ ರೋಗವೆಂಬುದು ಪೀಡಕನ ಕೆಟ್ಟ ಮನಸ್ಥಿತಿಯನ್ನು ಸೂಚಿಸುವ ಗುಣವಾಚಕ.
ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ.
ಈ ದೂಷಣೆಯ ಹಿಂದೆ ಕಂಟಕಪ್ರಾಯನಾದವನನ್ನು ಹೋಗಲಾಡಿಸುವುದಕ್ಕಿಂತಲೂ ಎದೆಯೊಳಗಿನ ಸಂಕಟವನ್ನು ಹೊರಗೆ ಹಾಕಿ ಎದೆಗೂಡನ್ನು ಹಗುರ ಮಾಡಿಕೊಳ್ಳುವ ಭಾವವೇ ಹೆಚ್ಚು. ಸಂಕಟಗಳ ಹೊರತಾಗಿಯೂ ನಮ್ಮ ಸಮಾಜ ತೊಂದರೆಗೆ ಕಾರಣನಾದ ವ್ಯಕ್ತಿಯ ಸಾವನ್ನು ಬಯಸುವುದಿಲ್ಲ. ಪೀಡಕನು ತನ್ನ ಧೋರಣೆಯನ್ನು ಬದಲಿಸಿದರೆ ಅವನನ್ನು ಮನ್ನಿಸುವ ದೊಡ್ಡ ಗುಣವೂ ಈ ಮಣ್ಣಿನೊಳಗೆ ಮಿಳಿತವಾಗಿದೆ. ಇಂತಹ ಸಾತ್ವಿಕ ಕೋಪವನ್ನು ನಮ್ಮ ಸಮಾಜವು ತಲತಲಾಂತರದಿಂದ ಸಲಹಿಕೊಂಡು ಬಂದಿದೆ.
ಈ ಮೇಲಿನದ್ದು ಕೌಟುಂಬಿಕ ಹಿನ್ನೆಲೆಯ ಚಿತ್ರಣವಾದರೆ.
ನಂಜುಪೂರಿತ ಮಾತುಗಳನ್ನಾಡಿ, ಸಮಾಜದ ನೆಮ್ಮದಿಗೆ ಧಕ್ಕೆ ತರುವ, ಟಿವಿ ನಿರೂಪಕರ, ರಾಜಕೀಯ ಮುಂದಾಳುಗಳ, ಧಾರ್ಮಿಕ ನಾಯಕರ ಚಿತ್ರಣವೇನೂ ಬೇರೆಯಲ್ಲ! ಈ ಪಾತ್ರಗಳೆಲ್ಲವೂ ಕುಟುಂಬದ ನೆಮ್ಮದಿ ಕಲಕುವವನ ಪಾತ್ರಕ್ಕಿಂತ ಭಿನ್ನವಾಗಿಲ್ಲ. ಜನರ ಬವಣೆಗಳನ್ನು ಎತ್ತಿ ತೋರಿ ಆಳ್ಮೆಗಾರರ ಕಣ್ಣ ತೆರಸಬೇಕಾದವರೇ ಆಳ್ಮೆಗಾರರಿಗೆ ಜೋಗುಳವಾಡಿದರೆ, ಧಮನಿತರು ಯಾರ ಮೊರೆಯೋಗಬೇಕು ಎಂಬ ಪ್ರಶ್ನೆಗೆ ಉತ್ತರವಿದೆಯೇ!
ದೇಶದ ಹೊಸ್ತಿಲನ್ನು ದಾಟಿ ಒಳನುಸುಳುಕೋರನಂತೆ ಬಂದೆರಗಿದ ಸಾಂಕ್ರಾಮಿಕ ಪಿಡುಗು ಯಾವುದೇ ಮತ, ಜಾತಿ ಭೇದವಿಲ್ಲದೆ ಎಲ್ಲರ ಎದೆಗೂಡೊಳಗೆ ಸೇರಲು ಹವಣಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಒಂದೆಡೆ ಆಳ್ಮೆಗಾರರನ್ನು ಅಗತ್ಯಕ್ಕಿಂತಲೂ ಹೆಚ್ಚು ವೈಭವೀಕರಿಸಿ ಮೈಮರೆಯಲು ಬಿಡುವುದು. ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಸೊಂಕಿಗೆ ಒಂದು ಜನಾಂಗವನ್ನು ತಳಕು ಹಾಕುವುದು.
ಧರ್ಮ, ಜನಾಂಗ, ಜಾತಿ, ಲಿಂಗಾಧಾರಿತ ದೂಷಣೆಗಳೂ ಮತ್ತು ತಾರತಮ್ಯಗಳು ಬೆಳಕಿಗೆ ಬಂದೊಡನೆಯೇ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಆಳ್ಮೆಗಾರರರು ತಮ್ಮ ಅಧಿಕಾರವನ್ನು ಬಳಸಿ ಪ್ರಜಾಸತ್ತೆಯ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು. ಕಷ್ಟ ಕಾಲದಲ್ಲಿ ದನಿಯಿಲ್ಲದವರ, ಧಮನಿತರ ಪರವಾಗಿ ನಿಲ್ಲದೇ ಹೋಗುವ ಆಳ್ಮೆಗಾರರ ಸಾಮಾಜಿಕ ಬದ್ಧತೆಯೂ ಪ್ರಶ್ನಾರ್ಹವಾದದ್ದು.
ಇಂತಹ ಮನಸ್ಥಿತಿಯನ್ನು ಕುರಿತು ನೆನದಾಗಲೆಲ್ಲ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ
ಎಂಬ ಅಣ್ಣನ ಕುಹಕ ನೆನಪಿಗೆ ಬರುತ್ತದೆ.
ವಸ್ತುನಿಷ್ಠ ಮತ್ತು ರಚನಾತ್ಮಕ ವಿಮರ್ಶೆಯನ್ನು ಕೈಬಿಟ್ಟು ಸರ್ಕಾರದ ಧ್ವನಿವರ್ಧಕವಾದ ಮಾಧ್ಯಮಗಳಿಗೆ ಅಂದು ಸಂವಿಧಾನ ರಚನಾ ಸಭೆಯಲ್ಲಿ ಉಲ್ಲೇಖಿಸಿದಂತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಸ್ವೇಚ್ಛಾಚಾರದ ಬಳಕೆ ಒಳಿತಿಗಿಂತಲೂ ಕೆಡುಕನ್ನು ಮಾಡಬಲ್ಲದು ಎಂಬ ಅಂಬೇಡ್ಕರ್ ಅವರ ನಿಲುವು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ತನ್ನ ಪಾಲಿನ ನೈತಿಕ ಹೊಣೆಗಾರಿಕೆಯನ್ನು ಮನಗಾಣದೇ, ಅಂಕೆ ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬಳಸುವ ಮಾಧ್ಯಮಗಳು ಮತ್ತು ಪ್ರಜೆಗಳ ಮಹಾಮೌನವೇ ಪ್ರಜಾಪ್ರಭುತ್ವದ ಮಹಾಪಾತಕಿಗಳು. ಇದನ್ನು ಅರಿಯದೇ ಹೋದರೆ ನಾವೆಲ್ಲರೂ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆಯಾಗಬಲ್ಲೆವು! .
ಕೆ.ಬಿ.ಕೆ.ಸ್ವಾಮಿ
(ಲೇಖಕರು ಯುವ ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವುಗಳು)


