Homeಮುಖಪುಟಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ - ಹುಲಿಕುಂಟೆ ಮೂರ್ತಿ

ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ

ಕರ್ನಾಟಕದ ನೆಲ ರೂಪಿಸಿಕೊಂಡಿರುವ ದಲಿತ ಅಸ್ಮಿತೆಯು ಹೊಲೆಯರಿಲ್ಲದೆ ಮಾದಿಗರನ್ನು ಹಾಗೂ ಮಾದಿಗರಿಲ್ಲದೆ ಹೊಲೆಯರನ್ನೂ ಕಲ್ಪಿಸಿಕೊಳ್ಳಲು ಬರುವುದಿಲ್ಲ.

- Advertisement -
- Advertisement -

ಎರಡು ದಶಕಗಳಿಗೂ ಮಿಕ್ಕಿದ ಮೀಸಲಾತಿ ವರ್ಗೀಕರಣದ ಹೋರಾಟಕ್ಕೆ ಇದೀಗ ಹೊಸ ಹೊರಳು ದಕ್ಕಿದೆ. ಕರ್ನಾಟಕದ ಹೊಲೆಯ- ಮಾದಿಗ ಮತ್ತು ಇತರ ಸಮುದಾಯಗಳ ಹಂಚಿ ಉಣ್ಣುವ ಕನಸಿಗೆ ರೆಕ್ಕೆ ಬಂದಿದೆ. ದಲಿತರ ಇಪ್ಪತ್ತೆರಡು ವರ್ಷಗಳ ಹಕ್ಕೊತ್ತಾಯದ ಕಾರಣಕ್ಕೆ ಕರ್ನಾಟಕ ಸರ್ಕಾರ ನೇಮಿಸಿದ್ದ ಮೂರ್ನಾಲ್ಕು ಸಮಿತಿಗಳಲ್ಲಿ ಜಸ್ಟೀಸ್ ಸದಾಶಿವ ಅವರ ನೇತೃತ್ವದ ಆಯೋಗ ಸಲ್ಲಿಸಿದ ಒಳ ಮೀಸಲಾತಿಯ ವರದಿಗೆ ಸುಪ್ರೀಂ ಕೋರ್ಟಿನ ಆದೇಶದಿಂದ ಇದೀಗ ಜೀವ ಬಂದಿದೆ.

ಶತಮಾನಗಳ ಗಾಯವನ್ನು ಬಾಬಾ ಸಾಹೇಬರ ಸಂವಿಧಾನ ಮಾಯಿಸುತ್ತದೆ ಎಂದು ನಂಬಿದ ದಲಿತರಿಗೆ ಬರೆಯ ಮೇಲೆ ಬರೆ ಬೀಳುತ್ತಲೇ ಇವೆ. ಸಾಮುದಾಯಿಕ ಆತ್ಮಜ್ಞಾನದ ಒಳಗಣ್ಣಿನ ಜ್ಞಾನಧಾರೆಗಳು ಬತ್ತಿಹೋಗಿ, ಜಲ ಸಂಸ್ಕೃತಿಯ ತಾಯಿಬೇರಿಗೆ ಬೆಂಕಿ ತಗುಲಿದೆ. ಶತಮಾನಗಳ ಹಿಂದಿನ ಕೊಲೆಗಳು, ಅತ್ಯಾಚಾರಗಳು ಮರುಕಳಿಸುತ್ತಿವೆ. ಸಮಕಾಲೀನ ಬಿಕ್ಕಟ್ಟುಗಳಿಗೆ ಮೈಕೊಟ್ಟು ಅಭ್ಯಾಸವಿಲ್ಲದ ದಲಿತ ಯುವವರ್ಗ ಹೊಸಕಾಲದ ಹೊಡೆತಗಳಿಗೆ ಬೆಚ್ಚಿಬಿದ್ದಿದೆ. ಈ ಸಂದರ್ಭದಲ್ಲಿ ಒಳಮೀಸಲಾತಿಯ ಕೂಗು ಜೋರಾಗಿರುವುದಕ್ಕೂ, ದಲಿತ ಸಮುದಾಯದ ನಿರ್ಣಾಯಕ ಹೋರಾಟಕ್ಕೂ ನೇರಾನೇರ ಸಂಬಂಧವಿದೆ.

ಜಸ್ಟೀಸ್ ಸದಾಶಿವ ವರದಿ ತಯಾರಾದ ದಿನದಿಂದಲೂ ಒಳಮೀಸಲಾತಿಯ ಹೋರಾಟವನ್ನು ದಲಿತರೊಳಗಿನ ಎಡಗೈ ಪಂಗಡವೆಂದು ಗುರುತಿಸಿಕೊಂಡಿರುವ ಮಾದಿಗ ಸಮುದಾಯ ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ದಲಿತರ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಾದಿಗ ಸಮುದಾಯ ಸಹಜವಾಗಿ ಒಳ ಮೀಸಲಾತಿಯ ಪರವಾದ ಹೋರಾಟಕ್ಕೆ ನಿಂತಿದೆ. ಆರ್ಥಿಕವಾಗಿ ಹೊಲೆಯ ಸಮುದಾಯಕ್ಕಿಂತಲೂ ಬಹಳ ಹಿಂದೆ ಇರುವ ಮಾದಿಗ ಸಮುದಾಯ ಸದಾಶಿವ ಆಯೋಗದ ವರದಿಯು ತನ್ನನ್ನು ಉಳಿಸುವ ಸಂಜೀವಿನಿ ಎಂದೇ ಭಾವಿಸಿದೆ. ಈ ಭಾವನೆ ಸತ್ಯವೂ ಆಗಿದೆ. ಪ್ರಭುತ್ವದ ಒಡೆದು ಆಳುವ ನೀತಿಯಿಂದಾಗಿ ಹೊಲೆಯ ಮಾದಿಗ ಸಮುದಾಯಗಳ ನಡುವೆ ಎದ್ದಿದ್ದ ಗೋಡೆಯನ್ನು ಇಪ್ಪತ್ತು ವರ್ಷಗಳಿಂದಲೂ ಕೆಡವುತ್ತಲೇ ಬಂದಿರುವ, ದಲಿತ ಸಂಘರ್ಷ ಸಮಿತಿಯ ತಾತ್ವಿಕತೆಯಲ್ಲಿ ನಂಬಿಕೆಯಿಟ್ಟಿರುವ ಎರಡೂ ಸಮುದಾಯಗಳ ನಾಯಕರು ಹೊಸ ಕಾಲದ ಕವಲುಗಳಿಗೆ ಕಿವಿಕೊಡದೆ ತಮ್ಮೊಳಗೇ ಕಟ್ಟಿಕೊಂಡ ಈ ಹೋರಾಟದ ಅಲೆ ಇದೀಗ ಇಡೀ ದೇಶಕ್ಕೇ ಮಾದರಿಯಾಗಲಿದೆ. ರಾಜಕೀಯ ಹಿತಾಸಕ್ತಿಗಳಿಗೆ ಬಗ್ಗುವ, ಆ ಮೂಲಕ ಸಮುದಾಯಗಳ ನೈಜ ಹಿತಾಸಕ್ತಿಯನ್ನು ಹಿನ್ನೆಲೆಗೆ ಸರಿಸುವ ಪ್ರಯತ್ನಗಳು ಈ ಹೋರಾಟವನ್ನು ದಿಕ್ಕುತಪ್ಪಿಸಲು ಸಾಧ್ಯವಾಗದೇ ಹೋಗಿದ್ದು ದಲಿತರ ಬದುಕಿನ ಆಶಾಕಿರಣವೆಂದೇ ಭಾವಿಸಬೇಕಿದೆ.

ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಮೀಸಲಾತಿ ವರ್ಗೀಕರಣದ ಮಹತ್ವ:

ಬಾಬಾ ಸಾಹೇಬರ ಕನಸಿನ ಸಂವಿಧಾನ ಅಂಚಿನ ಸಮುದಾಯಗಳನ್ನು ಮೇಲೆತ್ತಲು ಮೀಸಲಾತಿಯ ಮೀಟುಗೋಲುಗಳನ್ನು ನೀಡಿದ್ದು ಬಹಳ ಸಶಕ್ತವಾದ ಕಾರ್ಯ ನಿರ್ವಹಿಸಿತು ಎಂದು ಹೇಳಲಾಗದಿದ್ದರೂ ದಲಿತ ಸಮುದಾಯ ಕೊಂಚ ಮಟ್ಟಿಗೆ ಉಸಿರಾಡಲು ಸಾಧ್ಯವಾಯಿತು; ಆದರೆ, ಆಳುವ ವರ್ಗಗಳು ಒಲ್ಲದ ಮನಸ್ಸಿನಿಂದ ಜಾರಿಗೆ ತಂದ ಸಾಂವಿಧಾನಿಕ ಹಕ್ಕುಗಳು ದಲಿತರೊಳಗೇ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳನ್ನು ಸೃಷ್ಟಿಸಿ ‘ತಿಂದವನೇ ತಿನ್ನಲು ಯತ್ನಿಸುವ ಕಾಳ’ ಅನ್ನುವ ರೀತಿಯ ಪ್ರಮಾದಗಳಿಗೆ ಎಡೆಮಾಡಿಕೊಟ್ಟವು. ಇದರ ಪರಿಣಾಮವಾಗಿ ಅರವತ್ತು ವರ್ಷಗಳಲ್ಲಿ ಆಗಬೇಕಿದ್ದ ಬದಲಾವಣೆಯ ಪ್ರಮಾಣ ತೀರಾ ಕೆಳಮಟ್ಟದಲ್ಲಿ ಕಾಣುವಂತೆ ಆಯಿತು. ಈ ಪ್ರಮಾದಗಳನ್ನು ಒಳ ಮೀಸಲಾತಿ ಸರಿ ಪಡಿಸಿಬಿಡಬಹುದೆಂಬ ಭ್ರಮೆಯೇನೂ ಬೇಡವಾದರೂ ರಾಜ್ಯದ ಎರಡು ಅಸ್ಪೃಶ್ಯ ಸಮುದಾಯಗಳ ನಡುವಿನ ಸಾಂಸ್ಕೃತಿಕ ಸಾವಯವ ಬಾಂಧವ್ಯ ಗಟ್ಟಿಗೊಳ್ಳಲಿಕ್ಕಾದರೂ ಇದು ಸಾಧ್ಯವಾಗಬೇಕಿದೆ. ಈಗಿರುವ ಒಟ್ಟು ಹದಿನೈದು ಶೇಕಡಾವರು ಮೀಸಲಾತಿಯಲ್ಲಿ ನಾಲ್ಕು ಶೇಕಡಾ ಜನಸಂಖ್ಯೆಯಲ್ಲಿರುವ ಸ್ಪೃಶ್ಯ ದಲಿತ ಸಮುದಾಯಗಳು ಹೆಚ್ಚು ಪಾಲನ್ನು ಬಳಸಿಕೊಂಡಿರುವುದು ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯೇ ಆಗಿದೆ. ಅಂದರೆ ಒಬ್ಬರನ್ನು ತುಳಿದು ಬದುಕುವ ಬ್ರಾಹ್ಮಣ್ಯದ ಅವಕಾಶವಾದಿತನ ಈ ಸಮುದಾಯಗಳ ನಡುವೆಯೂ ಕೆಲಸ ಮಾಡಿದೆ. ಈ ಅಸಮಾನ ಹಂಚಿಕೆಗೆ ಅಸ್ಪೃಶ್ಯ ಜಾತಿಗಳ ಶೈಕ್ಷಣಿಕ ಮಟ್ಟವೂ ಕಾರಣವಿರಬಹುದು; ಆದರೆ, ಆ ಶೈಕ್ಷಣಿಕ ಅವಕಾಶಗಳೂ ಸದರಿ ಸಮುದಾಯಗಳಿಗೆ ಎಟುಕದೇ ಇರುವುದು ಕೂಡ ಈ ಬ್ರಾಹ್ಮಣ್ಯದ ಅವಕಾಶಾದಿತನದ ಫಲವೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ದಲಿತ ಸಂಘಟನೆಗಳ ಶಕ್ತಿ ಮತ್ತು ಮಿತಿ:

ಈಗ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಅಷ್ಟೂ ಸಮುದಾಯಗಳಲ್ಲಿ ಹೊಲೆಯ ಮಾದಿಗರ ಸಂಖ್ಯೆ ದೊಡ್ಡದಿದ್ದರೂ, ಆ ಸಮುದಾಯಗಳಲ್ಲಿ ಶಾಲೆಯ ಮುಖ ನೋಡದ ಹಾಗೂ ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಈ ಪ್ರಮಾಣ ಮಾದಿಗರಲ್ಲಿ ಹೆಚ್ಚಿದೆ. ಶೈಕ್ಷಣಿಕ ಅರ್ಹತೆಗಳು ಮೀಸಲಾತಿಯ ಫಲಾನುಭವಿಗಳನ್ನು ಸೃಷ್ಟಿಸುವ ನಮ್ಮ ಸಂವಿಧಾನದ ಚಿಕಿತ್ಸಕ ದೃಷ್ಟಿಕೋನ ನಮ್ಮ ಸಮುದಾಯಗಳಿಗೆ ಮತ್ತವುಗಳ ಮುಂದಾಳುಗಳಿಗೆ ಇನ್ನೂ ಅರ್ಥವಾಗದಿರುವುದು ದುರಂತವೇ ಸರಿ. ವೃತ್ತಿ ಕೌಶಲ್ಯ, ರಾಜಕಾರಣ ಮುಂತಾದ ವಲಯಗಳಲ್ಲಿ ದಲಿತರು ಸ್ಪರ್ಧೆಗೆ ಇಳಿಯಬೇಕಾದರೆ ಅವರ ಶೈಕ್ಷಣಿಕ ಹಿನ್ನೆಲೆ ಅಥವಾ ಆರ್ಥಿಕ ಹಿನ್ನೆಲೆ ಮುಖ್ಯವಾಗುತ್ತದೆ. ಇಂಥಾ ಕಡೆಗಳಲ್ಲಿ ಬಲಿಷ್ಟ ಕೌಟುಂಬಿಕ ಹಿನ್ನೆಲೆಯಿರುವವರು ಮುನ್ನೆಲೆಗೆ ಬಂದುಬಿಡುತ್ತಾರೆ. ಆಗ ಮೀಸಲಾತಿಯ ಉಪಯೋಗ ಅನಾಯಾಸವಾಗಿ ಅವರಿಗೇ ದಕ್ಕುತ್ತದೆ. ಎಪ್ಪತ್ತರ ದಶಕದಲ್ಲಿ ದಲಿತರ ಮೇಲೆ ನಡೆಯುವ ಜಾತಿ ದೌಜ್ರ್ಯನ್ಯಗಳ ವಿರುದ್ಧ ಪ್ರತಿಭಟಿಸಲು ಹುಟ್ಟಿಕೊಂಡ ದಲಿತ ಸಂಘಟನೆಗಳು ತಮ್ಮ ಸಮುದಾಯಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಹಾಗು ದಲಿತ ಯುವಜನರಲ್ಲಿ ವೃತ್ತಿ ಕೌಶಲ್ಯವನ್ನು ಬೆಳೆಸುವ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಮಾಡಲು ಒತ್ತುಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಏಕಕಾಲಕ್ಕೆ ದಲಿತರ ನಿರುದ್ಯೋಗ ಸಮಸ್ಯೆಯೊಂದಿಗೆ ಬಡತನ, ಅನಕ್ಷರತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಬಹುದಿತ್ತು. ಆದರೆ ಹಾಗೆ ಆಗಲಿಲ್ಲ; ಹಾಗೆ ಆಗುವುದೂ ಸಾಧ್ಯವಿರಲಿಲ್ಲ ಎಂಬುದು ಬೇರೆ ಮಾತು. ಯಾಕೆಂದರೆ, ಸಾಂವಿಧಾನಿಕ ಹಕ್ಕುಗಳನ್ನು ಅರ್ಥೈಸಿಕೊಂಡ ದಲಿತ ಯುವ ಸಮುದಾಯ ಕಾಲಾಂತರದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ದೌರ್ಜನ್ಯಗಳಿಗೆ ಎದೆಕೊಟ್ಟು ನಿಲ್ಲಬೇಕಾಯಿತು. ಸಮುದಾಯವನ್ನು ಭೌತಿಕವಾಗಿ ಉಳಿಸುವ ನಿಟ್ಟಿನಲ್ಲಿ ಅವರು ಹೋರಾಟ ರೂಪಿಸಬೇಕಾದುದ್ದರಿಂದ ತಕ್ಷಣಕ್ಕೆ ದಲಿತರ ಮೇಲೆ ನಡೆಯುತ್ತಿದ್ದ ಹಲ್ಲೆಗಳನ್ನು ತಡೆಗಟ್ಟಲು ಪರಿಪಾಟಲು ಪಡಬೇಕಾಯಿತು ಮತ್ತು ಈ ಕಾರಣದಿಂದ ಅದೇ ಸಾಂವಿಧಾನಿಕ ಕಾನೂನುಗಳಿಗೆ ಕೊರಳೊಡ್ಡಬೇಕಾಯಿತು. ಈ ಕಾರಣದಿಂದಾಗಿ ದಲಿತ ಸಂಘರ್ಷ ಸಮಿತಿಯ ಆಶಯವೂ ಆಗಿದ್ದ ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡಲಾಗಲಿಲ್ಲ. ಕರ್ನಾಟಕದಲ್ಲಿ ನಡೆದ ದಲಿತ ಹೋರಾಟಗಳಿಗೆ ಅಂಬೇಡ್ಕರ್ ಚಿಂತನೆಗಳು ದಕ್ಕಲು ಸಮಯ ತೆಗೆದುಕೊಂಡಿದ್ದರಿಂದ, ಅದೇ ಸಮಯಕ್ಕೆ ಕಮ್ಯುನಿಷ್ಟ್ ಸಿದ್ಧಾಂತಗಳು ದಲಿತ ಹೋರಾಟಗಳಿಗೆ ಸ್ಪೂರ್ತಿಯಾದುದ್ದರಿಂದ ಈ ಪ್ರಮಾದ ಉಂಟಾಯಿತು.

ಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

ಜೊತೆಗೂಡಿ ಹೋರಾಟ:

ದಲಿತ ಸಮುದಾಯ ಈಗಲೂ ಎದುರುಗೊಳ್ಳುತ್ತಿರುವ ಮಾನಸಿಕ ಹಾಗೂ ದೈಹಿಕ ಮಟ್ಟದ ಹಲ್ಲೆಗಳನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ನಿಲ್ಲಿಸಿಬಿಡಲು ಅಸ್ಪೃಶ್ಯ ಸಮುದಾಯಗಳು ಮುಂದಾಗಬೇಕು. ಅದಕ್ಕಾಗಿ ‘ದಲಿತ್ ಮ್ಯಾನಿಫೆಸ್ಟೋ’ ರೂಪಿಸಿ ರಾಜಕೀಯ ಪಕ್ಷಗಳಿಗೆ ದಲಿತ ಸಮುದಾಯವನ್ನು ಬಿಟ್ಟು ರಾಜಕಾರಣ ಮಾಡಲಾಗದ ಅನಿವಾರ್ಯತೆ ಸೃಷ್ಟಿಸಬೇಕು. ಸದಾಶಿವ ಆಯೋಗದ ವರದಿ ಜೊತೆಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅಷ್ಟೂ ಜಾತಿಗಳ ಸಾಮಾಜಿಕ, ಆರ್ಥಿಕ ಬೆಳವಣಿಗೆ ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಕಲೆಹಾಕಿ ಜಾತಿವಾರು ಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚುವ ಬಗ್ಗೆ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನ ಹೋರಾಟವು ದಲಿತರ ಅಸ್ಮಿತೆಯನ್ನೇ ಇಲ್ಲವಾಗಿಸಿದ ಮೀಸಲಾತಿ ವಿರೋಧಿ ಆಂದೋಲನವಾಗಿ ಮಾರ್ಪಡುವ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕಿದ್ದು, ಎಲ್ಲಾ ಸಮುದಾಯಗಳ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಹೊಲೆಯ ಮಾದಿಗರಲ್ಲಿರುವ ಬೆಳಕೇ ಕಾಣದ ಉಪ ಪಂಗಡಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೊರಚ, ಕೊರಮ ಥರದ ಸ್ಪೃಶ್ಯವಾದರೂ ಸಂಕಷ್ಟದಲ್ಲಿರುವ ಸಮುದಾಯಗಳ ಸಾಮಾಜಿಕ ಒಳಗೊಳ್ಳುವಿಕೆಯ ಸಾಧ್ಯತೆಗಳನ್ನು ದಲಿತ ಹೋರಾಟದ ಮುಂದಾಳತ್ವ ವಹಿಸಿರುವ ಮುನ್ನೆಲೆಯ ಸಮುದಾಯಗಳಿಗೆ ಅರ್ಥವಾಗುವಂತೆ ಹಾಗೂ ಆ ಸಮುದಾಯಗಳಿಗೆ ಅನ್ಯಾಯವಾಗದಂತೆ ಅರ್ಥಮಾಡಿಸುವ ಪ್ರಯತ್ನವಾಗಬೇಕು. ಇದರ ಜತೆಜತೆಗೆ ಜಾರಿಯಾಗಬೇಕಿರುವ ಸದಾಶಿವ ಆಯೋಗದ ವರದಿಯನ್ನು ಹೊಲೆಮಾದಿಗೇತರ ಸಮುದಾಯಗಳ ಆಶಯದಂತೆ ಚರ್ಚೆಗೊಳಪಡಿಸಿ ಜಾರಿಯ ನಂತರದ ಸಾಧಕ ಬಾಧಕಗಳನ್ನು ಮನಗಾಣಬೇಕು. ಸದ್ಯ ಈ ಕೆಲಸವನ್ನು ಮಾದಿಗ ಸಮುದಾಯದ ಬುದ್ಧಿಜೀವಿಗಳು ಮಾಡುತ್ತಿದ್ದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳದ ಹಾಗೆ ಕೆಲವು ಹಿತಾಸಕ್ತಿಗಳು ತಡೆಯುತ್ತಿರುವುದರಿಂದ, ಹೊಲೆ ಮಾದಿಗರಿಬ್ಬರೂ ಹಿಂದೆ ಸರಿಯದೆ ‘ಅರ್ಥ ಮಾಡಿಸುವ’ ಪ್ರಯತ್ನವನ್ನು ಮುಂದುವರಿಸಬೇಕು.

ಹೊಲೆಯ ಮಾದಿಗ ಸಮುದಾಯಗಳು ನಾಡಿನ ದಲಿತ ಹೋರಾಟಗಳ ಹಾದಿಯಲ್ಲಿ ಗಟ್ಟಿಹೆಜ್ಜೆ ಇಟ್ಟಿರುವಿದರಿಂದ ಸ್ಪೃಶ್ಯ ಸಮುದಾಯಗಳ ನಾಯಕರು ಅವರಿಬ್ಬರ ಮಾತುಗಳಿಗೆ ಹೆಚ್ಚು ಮಾನ್ಯತೆ ಕೊಡಬೇಕಿದೆ. ಇನ್ನೂ ಅರೆಪ್ರಜ್ಞಾವಸ್ಥೆಯಲ್ಲಿರುವ ಹತ್ತಾರು ಸಮುದಾಯಗಳಿಗೆ ಒಳಮೀಸಲಾತಿಯ ಲಾಭ ಸಿಗುವಂತೆ ಮಾಡಬೇಕಾದ ಜವಾಬ್ದಾರಿ ಈಗ ಮುಂದೆ ನಿಂತಿರುವ ಹೋರಾಟಗಾರರ ಮೇಲಿದೆ. ಎಸ್ಸಿ ಮೀಸಲಾತಿಯಲ್ಲಿ ಅತಿ ಹೆಚ್ಚು ಸೌಲಭ್ಯ ಪಡೆದಿರುವ ಹೊಲೆಯ ಸಮುದಾಯ ಈಗಲಾದರೂ ಮಾದಿಗರೊಂದಿಗೆ ಕಲೆತು ಸಮುದಾಯಗಳ ಅಭಿವೃದ್ಧಿಗೆ ದುಡಿಯದಿದ್ದರೆ ಒಂದೊತ್ತಿನ ಕೂಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ, ಹೊಲೆಯ ಮಾದಿಗ ಸಮುದಾಯಗಳ ಬಗ್ಗೆ ಹಿರಿಯ ದಲಿತ ನಾಯಕರು ಆಡುತ್ತಿರುವ ‘ಸಂಬಂಧ’ದ ಮಾತುಗಳು ಅಷ್ಟು ತೆಳುವಾದುವಲ್ಲ; ಎಷ್ಟೇ ಕಷ್ಟ ಬಂದರೂ ಅವರ ಆಶಯದಂತೆ ನಾವೆಲ್ಲರೂ ಬದುಕಲೇಬೇಕು. ಕರ್ನಾಟಕದ ನೆಲ ರೂಪಿಸಿಕೊಂಡಿರುವ ದಲಿತ ಅಸ್ಮಿತೆಯು ಹೊಲೆಯರಿಲ್ಲದೆ ಮಾದಿಗರನ್ನು ಹಾಗೂ ಮಾದಿಗರಿಲ್ಲದೆ ಹೊಲೆಯರನ್ನೂ ಕಲ್ಪಿಸಿಕೊಳ್ಳಲು ಬರುವುದಿಲ್ಲ; ಈ ಎರಡೂ ಸಮುದಾಯಗಳು ಪಾರಂಪರಿಕ ಪಣಕಟ್ಟುಗಳ ನಿರರ್ಥಕ ವ್ಯಾಜ್ಯಗಳನ್ನು ಬದಿಗೊತ್ತಿ ಸಮಕಾಲೀನ ತಲ್ಲಣಗಳಿಗೆ ಎದುರುಗೊಳ್ಳಬೇಕಾದರೆ ಒಳ ಮೀಸಲಾತಿಯು ಜಾರಿಯಾಗಬೇಕಿದೆ. ಅದು ಸದಾಶಿವ ಆಯೋಗದ ವರದಿಯಿಂದಲೋ ಮತ್ತೊಂದರಿಂದಲೋ ಅಂತೂ ಆಗಲೇಬೇಕಿದೆ ಎಂಬುದನ್ನು ಎರಡೂ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಅರ್ಥ ಮಾಡಿಕೊಂಡಿವೆ.

ದಶಕಗಳಿಂದ ದೇಶವನ್ನಾಳಿದ ಪ್ರಭುತ್ವಗಳು ರಾಜಕೀಯ ಮೀಸಲಾತಿಯ ಕಾರಣಕ್ಕೆ ದಲಿತರಿಗೆ ಹಕ್ಕು ನೀಡಿದವು ಅನ್ನುವುದಕ್ಕಿಂತ ಬಳಸಿಕೊಂಡವು ಅನ್ನುವುದೇ ಸರಿಯಾಗುತ್ತದೆ. ದೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯಗಳು ಈ ಪ್ರಭುತ್ವಗಳನ್ನು ನಿಭಾಯಿಸುವ ಕೀಲಿಕೈಗಳನ್ನು ತಮ್ಮದಾಗಿಸಿಕೊಂಡಿಲ್ಲದ ಕಾರಣದಿಂದ ಇಂದಿಗೂ ಬೀದಿಯಲ್ಲಿ ನಿಂತು ವ್ಯಥೆ ಪಡುವಂತಾಗಿದೆ. ಈಗಲಾದರೂ ವಶೀಲಿ ಬಾಜಿ ರಾಜಕಾರಣವನ್ನು ಬಿಟ್ಟು ಸಮರ್ಥ ರಾಜಕಾರಣಕ್ಕೆ ಈ ಸಮುದಾಯಗಳು ಮುಂದಾಗದಿದ್ದರೆ ಯಾವ ಆಯೋಗದ ವರದಿಗಳೂ ನಮ್ಮನ್ನು ಕಾಯಲಾರವು.

  • ಹುಲಿಕುಂಟೆ ಮೂರ್ತಿ

    (ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.)


ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...