Homeಅಂಕಣಗಳುಹಲಸಿನ ಬಜ್ಜಿ, ಬೋಂಡ, ವಡೆ, ದೋಸೆ, ಇಡ್ಲಿ, ಕಜ್ಜಾಯ, ಒಬ್ಬಟ್ಟು, ಹಪ್ಪಳ ಸವಿದಿದ್ದೀರಾ?

ಹಲಸಿನ ಬಜ್ಜಿ, ಬೋಂಡ, ವಡೆ, ದೋಸೆ, ಇಡ್ಲಿ, ಕಜ್ಜಾಯ, ಒಬ್ಬಟ್ಟು, ಹಪ್ಪಳ ಸವಿದಿದ್ದೀರಾ?

ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲ ತಾಕತ್ತು ಹಲಸಿಗಿದೆ ಎನ್ನುತ್ತದೆ ಅಮೆರಿಕನ್ ಜಾಕ್‌ ಫ್ರೂಟ್‌ ಸಂಶೋಧನೆ

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-13

ನಮ್ಮ ತೋಟದಲ್ಲಿ ನಾಲ್ಕು ದೊಡ್ಡ ಹಲಸಿನ ಮರಗಳಿವೆ. ಅವು ಅವರಷ್ಟಕ್ಕವೆ ಹುಟ್ಟಿ ಬೆಳೆದ ಮರಗಳು ಎಂದು ನಾನು ಹೇಳುತ್ತಿದ್ದೆ, ಇಲ್ಲ ನಾನು ಬೆಳೆಸಿದ್ದು ಎಂದು ನಮ್ಮಪ್ಪ ವಾದಿಸುತ್ತಿತ್ತು. ಅದು ಆದದ್ದು ಹೀಗೆ. ತಮ್ಮಷ್ಟಕ್ಕೆ ಹುಟ್ಟಿದ ಈ ಹಲಸಿನ ಗಿಡಗಳನ್ನು ಕಿತ್ತು ಹಾಕದೆ ಹಾರೈಕೆ ಮಾಡಿ ಉಳಿಸಿದ್ದು ನಮ್ಮಪ್ಪನೇ ಎಂಬುದು ನಿಜ. ಹೀಗೆ ಹುಟ್ಟಿದ ಎಲ್ಲ ಗಿಡಗಳನ್ನು ತೋಟದೊಳಗೆ ಬಿಟ್ಟುಕೊಂಡರೆ ತೋಟ ತೋಟವಾಗಿ ಉಳಿಯುವುದಿಲ್ಲ ಕಾಡಾಗಿ ಪರಿವರ್ತನೆಯಾಗಿ ಫಸಲು ಸೊನ್ನೆಯಾಗುತ್ತದೆ, ನಮ್ಮ ಹಿಡುವಳಿಗಳೇನು ಹತ್ತಾರು ಎಕರೆಯವಲ್ಲವಲ್ಲ, ದಕ್ಷಿಣ ಕರ್ನಾಟಕದ ಬಹುತೇಕ ರೈತರ ಜಮೀನುಗಳ ಗುಂಟೆ ಲೆಕ್ಕದವು, ಆದ್ದರಿಂದ ಯಾವ ಗಿಡ ಮರಗಳನ್ನು ಎಲ್ಲಿ ಬಿಟ್ಟು ಬೆಳೆಸಬೇಕು ಎಂಬ ವಿವೇಕ ರೈತರಿಗಿರಬೇಕು. ಆ ಬಗೆಯ ನಮ್ಮಪ್ಪನ ವಿವೇಕದ ಫಲವೇ ಈ ನಾಲ್ಕು ಹಲಸಿನ ಮರಗಳು.

ನಾನು ಹಲಸಿನ ಹಣ್ಣಿನ ವ್ಯಾಮೋಹದಲ್ಲಿ ನನ್ನಪ್ಪನ ಶಿಷ್ಯ. ಹಲಸಿನ ಹಣ್ಣು ತಿನ್ನುವುದರಲ್ಲಿ, ಮರ ಹತ್ತಿ ಕೀಳುವುದರಲ್ಲಿ ಅಪ್ಪನ ಉತ್ಸಾಹ ಉಳಿಸಿಕೊಂಡಿರುವೆ. ಬಾಲ್ಯ ಕಾಲದಲ್ಲಿ ನನಗೆ ಒಳ್ಳೆಯ ಹಿರಿಯ ಸ್ನೇಹಿತರಿದ್ದರು. ಆಗ ಅವರ ಜೊತೆ ಸೇರಿ ಹೊಲಗಳಲ್ಲಿಯೂ ಇದ್ದ ಸಾಲು ಸಾಲು ಹಲಸಿನ ಮರಗಳಲ್ಲಿ ಕದ್ದು ಹಲಸಿನ ಕಾಯಿ ಕೀಳುವುದನ್ನು ರೂಢಿ ಮಾಡಿಕೊಂಡೆ. ಹೀಗೆ ಹಲಸಿನ ಮರಗಳಲ್ಲಿ ಹಣ್ಣಾದ ಫಸಲು ಕಿತ್ತು ತಿನ್ನುವುದು ಕಳ್ಳತನವಾಗಿರದೆ ನೈತಿಕ ಕಾಯಕವೆಂದೇ ಒಪ್ಪಿಕೊಂಡಿದ್ದ ಕಾಲವದು.

ಈ ಪರಂಪರೆಯಲ್ಲಿ ಬಲು ಚುರುಕಾಗಿ ಕೆಲಸ ಮಾಡಿದ ಕಾರಣ ಬಹುಬೇಗ ನಾನು ಸದರಿ ನೈತಿಕ ಕಾಯಕದಲ್ಲಿ ಮುಂಚೂಣಿಗೆ ಬಂದೆ. ಮರದ ಕೆಳಗೇ ನಿಂತು ಬಲಿತ ಕಾಯಿ ಯಾವುದು, ಹುಳಿಗಾಯಿ ಯಾವುದು, ಹಣ್ಣಾದ ಕಾಯಿ ಯಾವುದು ಎಂಬುದನ್ನು ಹೇಳಬಲ್ಲವನಾಗಿದ್ದೆ. ಈ ಕಾರಣದಿಂದ ನಮ್ಮೂರಿನ ಸಾರಿಗೆ ಹೊಲದ ಸಾಲು ಮರಗಳ ಹಣ್ಣಿನ ರುಚಿ ನೋಡುವುದು ನಮಗೆ ಸಾಧ್ಯವಾಯಿತು. ಕಾಯಿ ಕಿತ್ತರೆ ಮಾತ್ರ ಅದು ಕಳ್ಳತನದ ವ್ಯಾಪ್ತಿಗೆ ಬರುತ್ತಿತ್ತು. ಅದಕ್ಕೊಂದು ಉಪಾಯ ಕಂಡುಕೊಂಡಿದ್ದೆವು. ಬಲಿತ ಹಲಸಿನ ಕಾಯಿಗಳನ್ನು ಮರದಲ್ಲಿರುವಂತೆಯೇ ತೊಟ್ಟು ನುಲುಚಿ ಬರುತ್ತಿದ್ದೆವು. ಮೂರು ನಾಲ್ಕು ದಿನಗಳ ನಂತರ ಆ ಮರಕ್ಕೆ ಭೇಟಿ ಕೊಟ್ಟರೆ ಆ ಬಲಿತ ಕಾಯಿಗಳು ಬೇರೆ ದಾರಿ ಇಲ್ಲದೆ ಹಣ್ಣಾಗಿರುತ್ತಿದ್ದವು. ಸಲೀಸಾಗಿ ಅವು ನಮ್ಮ ಪಾಲಾಗುತ್ತಿದ್ದವು. ಈ ಕಸುಬಿಗೆ ಪ್ರಸನ್ನದೇವನೆಂಬ ಪ್ರಚಂಡ ಗೆಳೆಯ ಮೂಲ ಗುರುವಾಗಿ ಒದಗಿ ಬಂದದ್ದು ನಮ್ಮ ಪುಣ್ಯವೇ ಸರಿ.

ಹಲಸಿನ ಮರವನ್ನು ಹತ್ತುವುದು ಸುಲಭ ಕಾಯಕವಾಗಿರಲಿಲ್ಲ. ನಾಲ್ಕಾರು ಅಡಿ ಎತ್ತರದ ಕಾರೆ ಮುಳ್ಳು, ಜಾಲಿ ಮುಳ್ಳುಗಳ ಮಂಟಪವನ್ನೇ ಹಲಸಿನ ಮರದ ಬುಡದಲ್ಲಿ ಒಟ್ಟಿರುತ್ತಿದ್ದರು. ಅದೊಂದು ಅಭೇಧ್ಯವಾದ ಮುಳ್ಳಿನ ಕೋಟೆಯೇ ಆಗಿರುತ್ತಿತ್ತು. ಆದರೇನು ನಾವು ಮುಳ್ಳಿನ ಮಂಟಪದ ತಂಟೆಗೇ ಹೋಗುತ್ತಿರಲಿಲ್ಲ. ಪಿರಮಿಡ್‌ ರಚಿಸಿ ಜೋಲುಗೊಂಬೆಗಳನ್ನು ನೆಟಕಿಸಿಕೊಂಡು ಆರಾಮಾಗಿ ಮರ ಹತ್ತುತ್ತಿದ್ದೆವು ಸುಲಭವಾಗಿ ಕೆಲಸ ಗೆಲ್ಲುತ್ತಿದ್ದೆವು. ನನಗೆ ಮರ ಹತ್ತುವುದನ್ನು ಹೇಳಿಕೊಟ್ಟ ನಮ್ಮ ದೊಡ್ಡ ಹಲಸಿನ ಮರವನ್ನು ನೆನಪಿಸಿಕೊಳ್ಳಬೇಕು. ಅದನ್ನು ಮರ ಎನ್ನುವುದಕ್ಕಿಂತ ಮರದ ಊರು ಎನ್ನುವುದೇ ಒಳ್ಳೆಯದು. ವರ್ಷಕ್ಕೆ ಸಾವಿರಾರು ಕಾಯಿಗಳನ್ನು ಬಿಡುತ್ತಿದ್ದ ಈ ಮರದ ಕಾಂಡಕ್ಕೆ ನೀರಿಳಿದು ಅಂತ್ಯ ಕಂಡಿತು. ಅದರ ವಯಸ್ಸು ಸುಮಾರು ನೂರು ಇರಬೇಕೆಂದು ಅಪ್ಪನ ಅಂದಾಜು.

PC : Prajavani

ನಾಲ್ಕು ಹೊಸ ಹಲಸಿನ ಮರಗಳೀಗ ಬಗೆ ಬಗೆಯ ರುಚಿಯ ಹಣ್ಣುಗಳನ್ನು ನೀಡುತ್ತಿವೆ. ಒಂದೊಂದಕ್ಕು ಒಂದು ಹೆಸರಿಟ್ಟಿದ್ದೇವೆ.

ಅಪ್ಪನ ಮರ: ಒಂದು ಕಾಲದಲ್ಲಿ ನಂಬರ್‌ ಒನ್‌ ರುಚಿಯ ಮರವಿದು. ನೀರು ಜಾಸ್ತಿಯಾದ ಕಾರಣ ರುಚಿ ಕಡಿಮೆಯಾಗಿದೆ. ಬೀಜಗಳು ಅಷ್ಟಕ್ಕಷ್ಟೆ. ನೀಳವಾದ, ತಿಳಿ ಕೆಂಪು ಬಣ್ಣದ ದಪ್ಪ ದಪ್ಪ ಕಾಯಿಗಳನ್ನು ಬಿಡುವ ಈ ಮರ ಜೂನ್ ಮತ್ತು ಡಿಸೆಂಬರ್‌ ತಿಂಗಳುಗಳಲ್ಲಿ ವರ್ಷದಲ್ಲಿ ಎರಡು ಬೀಡು ಹಣ್ಣು ಕೊಡುತ್ತದೆ. ಸಾಮಾನ್ಯವಾಗಿ ಹಲಸಿನ ಮರಗಳು ವರ್ಷಕ್ಕೆ ಒಂದೇ ಬೀಡು ಫಸಲು ಕೊಡುತ್ತವೆ. ಇಪ್ಪತ್ತು ಅಡಿ ಕಾಂಡವುಳ್ಳ  ಈ ಮರಕ್ಕೆ ವರ್ಷಕ್ಕೆ ಒಮ್ಮೆಯಾದರೂ ಕರಡಿಗಳು ಕಷ್ಟಪಟ್ಟು ಹತ್ತಿ ಇಳಿಯುತ್ತವೆ. ಹತ್ತಾರು ಕಾಯಿಗಳನ್ನು ಉದುರಿಸಿ ಒಂದೇ ಒಂದು ಹಣ್ಣು ತಿಂದು ಇಳಿಯುವುದು ರೂಢಿ ಮಾಡಿಕೊಂಡಿವೆ.

ಅವ್ವನ ಮರ: ಇದು ದುಂಡು ಕಾಯಿಗಳನ್ನು ಬಿಡುವ ಮರ. ಇನ್ನು ಹುಳಿಗಾಯಿಯಾಗುವುದೇ ತಡ ಅಳಿಲುಗಳು ರುಚಿ ನೋಡುತ್ತವೆ. ಆಮೇಲೆ ನಮ್ಮ ಸರದಿ. ಬಹುಬೇಗ ಮರದ ಎಲ್ಲಾ ಕಾಯಿಗಳು ಒಟ್ಟಿಗೆ ಹಣ್ಣಾಗಿ ಖಾಲಿಯಾಗಿಬಿಡುವುದು ಇದರ ಲಕ್ಷಣ. ಹಳದಿ ತೊಳೆ, ಜೇನಿನ ಜೊತೆ ಜೇನಾಗಿ ಬೆರೆಯುವ ಗುಣವುಳ್ಳ ಮರ, ಜೊಲ್ಲು ಸುರಿಸುವಂತೆ ಮಾಡುವ ಶಕ್ತಿಯುಳ್ಳ ಈ ಹಣ್ಣಿಗೆ ಗೆಳೆಯರಿಂದ ಅಪಾರ ಬೇಡಿಕೆ ಇದೆ.

ಅಣ್ಣನ ಮರ: ಮೊದಮೊದಲು ಹಣ್ಣುಗಳು ಹುಳಿತು, ಕೊಳೆತು ಉದುರುತ್ತಿದ್ದವು. ಕೊನೆ ಸ್ಥಾನದಲ್ಲಿದ್ದ ಮರವೀಗ ಹೇಗೋ ಚೇತರಿಸಿಕೊಂಡು ಈಗ ಒಳ್ಳೆ ಹಣ್ಣು ಕೊಡುತ್ತಿದೆ. ಹಲಸಿನ ಮರಗಳಿಗೆ ಯಾರೂ ಔಷಧಿ ಹೊಡೆಯುವುದಿಲ್ಲ, ರಾಸಾಯನಿಕ ಗೊಬ್ಬರದ ಮಾತೇ ಇಲ್ಲ. ಪೂರ್ಣ ಪ್ರಮಾಣದ ವಿಷರಹಿತ ಹಣ್ಣು ಈ ಹಲಸು.

ಕೆಂಪು ತೊಳೆಯ ಈ ಹಣ್ಣನ್ನು ರುಚಿ ನೋಡಿದ ಎಲ್ಲರೂ ಹೊಗಳತೊಡಗುತ್ತಾರೆ. ಈ ಮರದ ಬಲಿತ ಕಾಯಿಗಳನ್ನು ನೇರವಾಗಿ ನೆಲಕ್ಕೆ ಕೆಡವುವಂತಿಲ್ಲ. ಹಾಗೇನಾದರೂ ಮಾಡಿದರೆ ಹಣ್ಣೆಲ್ಲ ಹಳದಿ ರೂಪ ತಾಳಿ ಕಹಿಯಾಗಿಬಿಡುತ್ತವೆ. ಅದಕ್ಕೆ ಈ ಮರದಡಿಯಲ್ಲಿ ಯಾವಾಗಲೂ ತೆಂಗಿನ ಗರಿಗಳ ಹಾಸಿಗೆ ಸದಾ ಸಿದ್ದವಾಗಿರುತ್ತದೆ. ಕಾಯಿಗಳನ್ನು ಕಿತ್ತು ಅದರ ಮೇಲೆ ಹಾಕಿದರಾಯಿತು.

ಕಾಂಡದಿಂದಲೇ ಮೊಗ್ಗುಡೆದು ಕಾಯಿ ಕಟ್ಟುವ ಹಲಸಿನ ಮರವನ್ನು ಆಗಿಂದಾಗ್ಗೆ ಪ್ರೂನ್‌ ಮಾಡಿ ಕಾಂಡಕ್ಕೆ  ಬಿಸಿಲು ಬೀಳುವಂತೆ ಮಾಡುವುದರಿಂದ ಒಳ್ಳೆ ಫಸಲು ಪಡೆಯುವುದು ಸಾಧ್ಯವೆಂದು ಕಂಡುಕೊಂಡಿದ್ದೇವೆ. ಆ ಪ್ರಯೋಗವನ್ನು ಈ ಮರದಿಂದಲೇ ನಾನು ಆರಂಭಿಸಿದ್ದು.

ಮಗಳ ಮರ: ಇದರ ರುಚಿಯನ್ನು ಬಹಳ ಜನರಿಂದ ಬಚ್ಚಿಡಲಾಗಿದೆ. ಇದು ಬಿಡುವ ಕಾಯಿಗಳ ದಪ್ಪ ಮಾವಿನ ಕಾಯಿಯಷ್ಟಿರುವುದು, ಖರ್ಜೂರದಂತಾ ಇದರ ರುಚಿ, ಒಮ್ಮೆ ರುಚಿ ನೋಡಿದವರು ಇದನ್ನೇ ಕೇಳುವುದು ಬಚ್ಚಿಡುವುದಕ್ಕೆ ಕಾರಣಗಳು. ತೆಂಗಿನ ಕಾಯಿಯ ತುರಿ, ಜೇನು ಬೆರೆಸಿ ತಿಂದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ತೋಟದೊಳಗಿರುವ ಈ ಮರ ಬಿಡುವ ಕಾಯಿಗಳ ಸಂಖ್ಯೆ ಕಡಿಮೆ. ಯಾವುದೇ ಹಣ್ಣಿನ ಮರಗಳಿಗೆ ನೂರಕ್ಕೆ ನೂರಷ್ಟು ಬಿಸಿಲು ಬೇಕು. ಆಗ ಮಾತ್ರ ಪೂರ್ಣ ಫಸಲು ಅಸಲಿ ರುಚಿ ನಿರೀಕ್ಷಿಸಬಹುದು.

ಆದ್ದರಿಂದಲೇ ನಾನು ಈ ತೋಟದೊಳಗಿನ ಮರಗಳ ಬಗೆಗೆ ಎಷ್ಟೇ ಮೆಚ್ಚುಗೆಯ ಮಾತುಗಳನ್ನು ಬರೆದರೂ ಹೊಲಗಳಲ್ಲಿನ  ಬಿಸಿಲ ಮಕ್ಕಳು ಮರಗಳ ರುಚಿಗೆ ಇವು ಸಾಟಿಯಾಗಲಾರವು. ತೋಟದ ಸಾಲುಗಳಲ್ಲಿ ತೆಂಗು ಅಡಕೆಗಳ ಮಧ್ಯೆ ಇರುವ ಹಲಸಿನ ಮರಗಳು ನೀರಾವರಿಗೆ ಒಳಪಡುವುದರಿಂದ ಹಣ್ಣಿನ ರುಚಿ ಬಣ್ಣಗಳು ಹದಗೆಟ್ಟೇ ಕೆಡುತ್ತವೆ. ಹಣ್ಣಿಗೆ ಸೂರ್ಯ ಬಲು ಪ್ರೀತಿ.

ನಾನು ಹಲಸು ಪ್ರಿಯನಾಗಿದ್ದದ್ದು ನಿಜ. ಆದರೆ ಹುಚ್ಚು ಹತ್ತಿಸಿದ್ದು ಮಾತ್ರ ಅಡಿಕೆ ಪತ್ರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಸಂಪಾದಕ ಶ್ರೀ ಪಡ್ರೆ ಸುಮಾರು ಇಪ್ಪತ್ತು ಸಂಚಿಕೆಗಳನ್ನು ಹಲಸಿಗೆ ಮೀಸಿಲಿಟ್ಟು ಕರ್ನಾಟಕ ಮತ್ತು ಜಗತ್ತಿನ ವಿವಿದೆಡೆಗಳಲ್ಲಿ ಹಲಸಿನ ಬಳಕೆ ಕುರಿತು ನೂರಾರು ಲೇಖನಗಳನ್ನು ಪ್ರಕಟಿಸಿದರು. ನಾವು ಏನಾದರೂ ಮಾಡಬೇಕೆಂಬ ಹಂಬಲದ ಪರಿಣಾಮವೆ ನಮ್ಮೂರಿನಲ್ಲಿ ಮಾಡಿದ ಹಲಸಿನ ಮೇಳ.

PC : treehugger

ಹಲಸಿನ ಹುಚ್ಚರಾಗಿ ಪರಿವರ್ತನೆಗೊಂಡು ಹಲಸನ್ನು ಜನಪ್ರಿಯಗೊಳಿಸಲು ಕಂಕಣಬದ್ಧರಾಗಿ ಹಲಸಿನ ಹತ್ತಾರು ಸಿಹಿ ಮತ್ತು ಖಾರದ ತಿನಿಸುಗಳನ್ನು ತಯಾರಿಸುವಲ್ಲಿ ಪರಿಣತಿ ಪಡೆದ ಸಖರಾಯಪಟ್ಟಣದ ಶಿವಣ್ಣ ದಂಪತಿಗಳನ್ನು ಈ ಮೇಳಕ್ಕೆ ಕರೆದು ಹಲಸಿನ ಮೌಲ್ಯವರ್ಧನೆ ಮಾಡುವುದು ಹೇಗೆಂದು ಪ್ರಾತ್ಯಕ್ಷಿಕೆ ಏರ್ಪಡಿಸಿದೆವು. ಸುತ್ತಮುತ್ತಲ ಊರಿನ ಗ್ರಾಮಸ್ಥರು ಹಲಸಿನ ಹಣ್ಣು ಮತ್ತು ಕಾಯಿಗಳನ್ನು ತಂದು ಪೇರಿಸಲಾಗಿ ಬಂದ ಐದುನೂರಕ್ಕೂ ಹೆಚ್ಚು ಜನ ವಿವಿಧ ರುಚಿಯ ಹಲಸಿನ ಹಣ್ಣನ್ನು ಸವಿದರು. ಇದೇನೋ ಮಾಮೂಲು ಎನ್ನಬಹುದು, ಆದರೆ ಹಲಸಿನ ಕಾಯಿಯ (ತೊಳೆ) ಬಜ್ಜಿ, ಬೋಂಡ, ವಡೆ, ದೋಸೆ, ಇಡ್ಲಿ ನಮ್ಮ ಪ್ರದೇಶದ ಜನಕ್ಕೆ ಮಾಮೂಲಿನ ಪರಿಕರಗಳಾಗದೆ ವಿಶೇಷ ಬೋಜ್ಯಗಳಾಗಿದ್ದವು. ಇವುಗಳ ರುಚಿ ನೋಡಿದ ಜನರು ಮಾಡುವ ವಿಧಾನವನ್ನು ನೋಡಲು ಶಿವಣ್ಣ ದಂಪತಿಗಳನ್ನು ಮುತ್ತಿಕೊಂಡು ಕಲಿಯುವ ಉತ್ಸಾಹ ತೋರಿದರು.

ಮೂರು ಸ್ಟವ್‌ ಗಳ ಮೇಲೆ ಈ ಪರಿಕರಗಳು ತಯಾರಾಗುತ್ತಿದ್ದರೆ ಅದೊಂದು ಆಕರ್ಷಣೀಯ ಅಷ್ಟೆ ಅಲ್ಲ ರುಚಿಕರ ನೋಟವಾಗಿ ತೋರುತ್ತಿತ್ತು. ಹಣ್ಣಿನಿಂದ ಮಾಡಿದ ಕಜ್ಜಾಯ, ಒಬ್ಬಟ್ಟು, ಜಾಮ್‌ ಗಮನ ಸೆಳೆದವು. ಕೆಲವು ಪರಿಕರಗಳ ಮಾರಾಟ ವ್ಯವಸ್ಥೆಯೂ ಇದ್ದುದರಿಂದ, ಹಲಸಿನ ಕಾಯಿಯಿಂದ (ತೊಳೆ) ಉದ್ದಿನ ಬೇಳೆ ಬಳಸದೇ ಮಾಡಿದ ಹಪ್ಪಳದ ವಿಸಿಷ್ಟ ರುಚಿ ನೋಡಿದ ಜನ ರೊಚ್ಚಿಗೆದ್ದು ಕೊಂಡರು. ಹಲಸಿನ ಮೇಳದ ಹಿಂದಿನ ದಿನ ಹಲಸಿನ ಕಾಯಿಯನ್ನು (ತೊಳೆ) ಅಕ್ಕಿಯೊಂದಿಗೆ ರುಬ್ಬಿ ದೋಸೆ ಮಾಡಬೇಕೆಂದು ನಾವೆಲ್ಲ ತಾಕೀತು ಮಾಡಿ ಪುಸಲಾಯಿಸಿದ ಕಾರಣ ಹಲಸಿನ ಮೇಳದ ದಿನ ಎಲ್ಲರ ಮನೆಯಲ್ಲು ಹಲಸಿನ ದೋಸೆ ತೆಂಗಿನಕಾಯಿ ಚಟ್ನಿ ಸಿದ್ದವಾಗಿದ್ದವು. ಎಲ್ಲರ ಮನೆಯ ದೋಸೆಯು ತೂತೇ ಎನ್ನುವಂತಾಗಿ ಅವರು ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಯಿತು. ಈ ಎಲ್ಲ ಬಗೆಯ ಹಲಸಿನ ತಿಂಡಿ ತಿನಿಸುಗಳನ್ನು ತಿಂದ ಜನರು, ಹಸಿ ಅವರೆ ಕಾಳು ಮತ್ತು ಹಲಸಿನ ಮುಸುಕಿನ ಸಾರು ಮುದ್ದೆಯ ಊಟವನ್ನೂ ಮಾಡಿದ್ದು ಹಲಸಿನ ಸಾರಿನ ರುಚಿಗೆ ಸಾಕ್ಷಿಯಾಗಿತ್ತು. ಹೆಂಗಸರ ನಾಯಕತ್ವದಲ್ಲಿ ನಡೆದ ಈ ಹಲಸು ಹಬ್ಬದಲ್ಲಿ ಜೀವ ತುಂಬಿ ಬಂದಿತ್ತು.

ಹಲಸಿನ ಬಗೆಗೆ ಈಗ ಪ್ರಪಂಚದಾದ್ಯಂತ ಬಹುಜನರು ತಲೆಕೆಡಿಸಿಕೊಂಡು ಅದರ ಬಳಕೆಯತ್ತ ಗಮನ ಹರಿಸುತ್ತಿದ್ದಾರೆ. ಸಂಶೋಧನೆಗಳೂ ಅಷ್ಟೆ ಬಲು ಜೋರಾಗಿ ನಡೆಯುತ್ತಿವೆ. ಕ್ಯಾನ್ಸರ್‌ ವಿರುದ್ಧ ಹೋರಾಡಬಲ್ಲ ತಾಕತ್ತು ಹಲಸಿಗಿದೆ ಎನ್ನುತ್ತದೆ ಅಮೆರಿಕನ್ ಜಾಕ್‌ ಫ್ರೂಟ್‌ ಸಂಶೋಧನೆ. ಡೌನ್‌ ಟು ಅರ್ಥ್‌ ಪತ್ರಿಕೆ ತನ್ನ ಪೂರ್ಣ ಸಂಚಿಕೆಯೊಂದನ್ನು ಮೀಸಲಿಟ್ಟು ಈ ಹಣ್ಣನ್ನು ಜಾಕ್‌ ಆಫ್‌ ಆಲ್‌ ಫ್ರೂಟ್ಸ್‌ ಎಂದು ಕರೆದು ಅದರ ಗುಣಗಾನ ಮಾಡಿತು. ಶ್ರೀಪಡ್ರೆಯವರ ಪ್ರಕಾರ ಹಲಸಿನ ಮರವೇ ಕಲ್ಪವೃಕ್ಷ. ಅದಕ್ಕೆ ಅವರು ಶ್ರೀಲಂಕಾ, ಮಲೇಶಿಯ, ಪಿಲಿಪೈನ್ಸ್‌ ದೇಶಗಳಲ್ಲಿ ಹಲಸನ್ನು ಅದಕು ಇದಕು ಯದಕು ಬಳಸುವ ಕುರಿತು ನೂರಾರು ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. ಕರ್ನಾಟಕದಲ್ಲು ಹಲಸಿನ ತೋಟಗಳು ಮೇಲೇಳುತ್ತಿವೆ.

ಜಗತ್ತಿನಲ್ಲಿ ಈಗ ಲಭ್ಯವಾಗುತ್ತಿರುವ ರಾಸಾಯನಿಕ ರಹಿತ ಹಣ್ಣಿದು. ದುರಂತವೆಂದರೆ ಹಳ್ಳಿಗರೂ ಈ ಹಣ್ಣನ್ನು ಉದಾಸೀನ ಮಾಡಿ ಕೆಟ್ಟಿದ್ದರು. ಈಗ ಮತ್ತೆ ಎಚ್ಚೆತ್ತು ಹಲಸು ಬಳಸುತ್ತಿದ್ದಾರೆ. ಬಿಂಕ ತೋರಿದವರು ಸುಂಕ ಕಟ್ಟಬೇಕಾಗುತ್ತದೆ. ಅಂಟು ಎಂದು ಹಲಸನ್ನು ಹೀಗಳೆದವರು, ಕೆಟ್ಟಳಸಿನಕಾಯಿ ಎಂದು ಜರಿದವರು, ಇದನ್ನು ಹೊಟ್ಟೆ ನೋವಿನ ಹಣ್ಣು ಎಂದು ದೂರಿದವರು, ಈಗ ಹಲಸು ಚಿನ್ನದ ಬಣ್ಣದ ಅಮೃತ ಸಮಾನ ಹಣ್ಣು ಎಂದು ಹಾಡಿ ಹೊಗಳುತ್ತಿದ್ದಾರೆ. ಹಲಸಿನ ಮೇಳಗಳ ಮೂಲಕ ರಾಜ್ಯದಾದ್ಯಂತ ಹಲಸಿನ ಹಣ್ಣು ಮತ್ತು ಅದರ ನೂರಾರು ಪರಿಕರಗಳನ್ನು ತಿನ್ನುವ ಸ್ಪರ್ಧೆ ಏರ್ಪಟ್ಟಿದೆ. ಹಸಿದು ಹಲಸು ತಿನ್ನುವ ನುಡಿಗಟ್ಟು ಹಸಿವಿಗೆ ಹಲಸು ಮದ್ದು ಎಂದು ಸಾರುತ್ತಿದೆ. ಅದಕ್ಕೆ ಶ್ರೀಲಂಕಾ ರಸ್ತೆ ಪಕ್ಕ, ಆಫೀಸು, ಸ್ಕೂಲು, ಕಾಲೇಜು ಆವರಣಗಳಲ್ಲೆಲ್ಲ ಹಲಸಿನ ಮರಗಳನ್ನು ಬೆಳೆದು “ಎಂಥಾ ಬರಗಾಲ ಬಂದರೂ ನಾವು ಹಸಿವಿನಿಂದ ಸಾಯುವುದಿಲ್ಲ“ ಎಂದು ಘೋಷಿಸುತ್ತದೆ. ಹಲಸೇ ಅಲ್ಲಿ ರಾಷ್ಟ್ಟೀಯ ಮರ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಲೇಖನ ತುಂಬಾ ಚೆನ್ನಾಗಿದೆ. ಬಾಯಲ್ಲಿ ನೀರೂರಿತು. ಆದರೆ, ಕ್ಯಾನ್ಸರ್ ಕುರಿತ ಮಾತಿನಲ್ಲಿ ಅಷ್ಟಾಗಿ ನಂಬಿಕೆ ಬರಲಿಲ್ಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...