Homeಅಂಕಣಗಳುನಾಗಸುಧೆ ಜಗಲಿಯಿಂದಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

ಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

'ಮೀನುಪೇಟೆಯ ತಿರುವು' ಕವನ ಸಂಕಲನದ ಲೇಖಕಿ 'ರೇಣುಕಾ ರಮಾನಂದ'ರವರ ಕುರಿತು 'ಪ್ರಕಾಶ ಕಡಮೆ'ಯವರ ನಾಗಸುಧೆ ಜಗಲಿಯಿಂದ ಅಂಕಣ...

- Advertisement -
- Advertisement -

ಕಲಿವ ಮಗಳಿಗಿಂತ ಕಲಿಸುವ ಅಪ್ಪನಿಗೇ ಉಮೇದಿ
ಎಂದೇನೂ ಮುಸಿಮುಸಿ ನಗಬೇಡಿ
ಹಾಲುಗುಂಬಳದಂತಹ ಕರುಳುಕುಡಿಗೆ
ಒಳಪೆಡ್ಲು ಕಲಿಸುವುದನ್ನು
ನೀವೊಮ್ಮೆ ಅನುಭವಿಸಿಯೇ ತೀರಬೇಕು
ಅದಕ್ಕೇ ಹೇಳುವುದು
ಎಲ್ಲ ಅಪ್ಪಂದಿರಿಗೆ
ಕುಡಿಬಾಳೆ ಎಲೆಯಂತಹ
ಮುದ್ದಾದ
ಮಗಳೊಬ್ಬಳಿರಬೇಕು..

ಎಂಬ ಮಾನವೀಯ ಮನಸ್ಸಿನ, ಜನಪರ ನಿಲುವಿನ, ತಂದೆ-ಮಗಳ ನಿತ್ಯ ಬದುಕಿನ ಸತ್ಯವನ್ನು ಕಣ್ಣಾರೆ ಕಂಡು ಸಾಮಾನ್ಯ ಸಂಗತಿಗಳನ್ನೂ ಕಾವ್ಯವಾಗಿಸುವ ಶಾಲಾ ಮಕ್ಕಳೊಡನೆ ಬೆರೆತು ಮಗುಮನ-ನಗುಮನ ಪಡೆದ ರೇಣುಕಾ ರಮಾನಂದ, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೆಟಗೇರಿ ಎಂಬ ಸಣ್ಣ ಹಳ್ಳಿಯವರು. ರೇಣುಕಾ ಈಗ ಕನ್ನಡದಲ್ಲಿ ಬರೆಯುತ್ತಿರುವ ಸೂಕ್ಷ್ಮ ಸಂವೇದನೆಯ, ಮಣ್ಣಿನ ವಾಸನೆಯ, ಕಾಡೊಡಲು-ಕಡಲೊಡಲಿನ ಮತ್ತು ಮೀನು ಪೇಟೆಯ ತಿರುವಿನ ಬರಹಗಾರ್ತಿ. ಇವರ ಕವಿತೆಗಳೇ ಹೀಗೆ ; ಕಡಲಿನ ಅಬ್ಬರದ ತೆರೆಗಳಂತೇ ಕಂಡರೂ ಒಳಗೊಳಗೇ ಶಾಂತವಾಗುವ ನೊರೆಗಳಂತೆ ನೀರಲಿ ಬೆರೆತು ಮತ್ತೆ ಸಾಗರದಲೊಂದಾಗುವದು. ಇವರ ಕವಿತೆಗಳಲ್ಲಿ ಅಕ್ಷರದ ಸತ್ವಗಳಂತೇ ಮಾನವೀಯತೆ ಇದೆ, ಪ್ರೀತಿ-ಪ್ರೇಮಗಳಿವೆ, ಉತ್ಕಟವಾದ ಜೀವನಾನುಭವವಿದೆ, ಮಗು ಮನಸ್ಸಿನೊಂದಿಗೆ ಮಹಿಳಾ ಅಭಿವ್ಯಕ್ತಿಯ ಮುಕ್ತದಾರಿಯ ಮಗ್ಗುಲನ್ನು ಚಿಂತಿಸುವ ಕವಲು ದಾರಿಯಿದೆ. ಈ ಎಲ್ಲಾ ಸತ್ವಯುತವಾದ ಸಾಲುಗಳಿಂದಲೇ ಇವರ ಮೊದಲ ಕವನ ಸಂಕಲನ “ಮೀನುಪೇಟೆಯ ತಿರುವು” ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದುಕೊಂಡಿದೆ.

ತಮ್ಮ ಏಳನೆಯ ವಯಸ್ಸಿನಲ್ಲಿಯೇ ಆಕಸ್ಮಿಕ ಆಘಾತದಿಂದ ನಿಧನ ಹೊಂದಿದ ಅಣ್ಣ ಗಜಾನನನ ಅಗಲಿಕೆ ಅರಗಿಸಿಕೊಳ್ಳಲಾಗದ ರೇಣುಕಾ, ಮುಂದಿನ ದಿನಗಳಲ್ಲಿ ತಾನೋರ್ವ ಉತ್ತಮ ಶಿಕ್ಷಕಿ ಹಾಗೂ ಬರಹಗಾರ್ತಿ ಆಗುವೆ ಎಂದು, ಎಂದೂ ಕನಸು ಕಂಡವರಲ್ಲ. ಆದರೆ ಶಿಕ್ಷಕಿಯಾಗಿ ಮಕ್ಕಳ ಮನದೊಳಗೆ ನೆಲೆನಿಂತು, ಆ ಖುಷಿಯನ್ನು ತನ್ನದಾಗಿಸಿಕೊಳ್ಳಲು, ಅಂಕೋಲೆಯ ಪ್ರತಿಷ್ಠಿತ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ಆ ವರ್ಷ ಪಿಯುಸಿಯಲ್ಲಿ ಕ್ಲಾಸಿಗೇ ಪ್ರಥಮರಾಗಿ ಉತ್ತೀರ್ಣರಾದ ರೇಣುಕಾ, ಇನ್ನಿತರ ಸ್ವ-ಹಿತಾಸಕ್ತಿಯ ಹತ್ತು ಹಲವು ಬದುಕುವ ಹಾದಿಗಳನ್ನು ಬದಿಗಿಟ್ಟು ಪ್ರಾಥಮಿಕ ಶಾಲಾ ಶಿಕ್ಷಕಿಯ ಹುದ್ದೆಯನ್ನು ಇಷ್ಟಪಟ್ಟು ಆಯ್ದುಕೊಂಡದ್ದಂತೂ ನೂರಕ್ಕೆ ನೂರು ಸತ್ಯ.

ಸಾಹಿತ್ಯವು ಇವರಿಗೆ ಕೌಟುಂಬಿಕವಾಗಿ ಬಂದ ಬಳುವಳಿ ಏನಲ್ಲಾ. ಬಡತನ ಇಲ್ಲದಿದ್ದರೂ ಸೀದಾ ಸಾದಾ ಮನೆಯಲ್ಲಿ ಹುಟ್ಟಿದ ರೇಣುಕಾ, ಓದಿನ ಹುಚ್ಚು ಮೊದಲಿನಿಂದಲೂ ರೂಢಿಸಿಕೊಂಡಿದ್ದರು. ಪಿಯುಸಿ ಹಂತದಲ್ಲಿ ಆಗಾಗ ಕವಿತೆ ಬರೆಯುತ್ತಿದ್ದ ಇವರಿಗೆ ಬರವಣಿಗೆಯ ಅಭಿರುಚಿ ಮತ್ತು ಪ್ರೋತ್ಸಾಹಕ್ಕೆ ಕಾರಣ ಕಾರವಾರದಿಂದ ಹೊರಡುವ “ಕರಾವಳಿ ಮುಂಜಾವು” ದಿನಪತ್ರಿಕೆ. ಒಂದು ದೃಷ್ಟಿಯಿಂದ ನೋಡಿದರೆ ಇವರು ಬರೆದದ್ದು ಕಡಿಮೆಯೇ ; “ವಿರಳ ಬರಹಗಾರ್ತಿ” ಎಂದೇ ಹೇಳಬಹುದು. ಆದರೆ ಬರೆದ ಅಕ್ಷರಗಳೆಲ್ಲವೂ ಕೀರ್ತಿ ತಂದುಕೊಟ್ಟಿತು ಎಂಬ ಪಿಸುಮಾತಿಗೆ ಇವರ ಮುಖದ ತುಂಬೆಲ್ಲಾ ಅಕ್ಷರಗಳೇ ಕುಣಿದಾಡುವುದು. 2017 ರಲ್ಲಿ ಮೊದಲ ಪುಸ್ತಕ “ಮೀನು ಪೇಟೆಯ ತಿರುವು” ಪ್ರಕಟವಾದರೂ ತಮ್ಮ ಬಿಡಿ-ಬಿಡಿಯಾದ ಕಥೆ-ಕವನಗಳ ಮುಖಾಂತರ ನಾಡಿನಾದ್ಯಂತ ಹೆಸರುಗಳಿಸಿ, ಕೀರ್ತಿಯು ನೆರೆಯ ರಾಜ್ಯಗಳ ಕನ್ನಡಾಭಿಮಾನಿಗಳ ಗಮನವನ್ನೂ ಸೆಳೆಯಿತು. ಮೈಸೂರು ಅಸೋಸಿಯೇಷನ್ ಮುಂಬೈ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜೀವನ ಪ್ರಕಾಶನ ಚಿಕ್ಕಬಳ್ಳಾಪುರ ಏರ್ಪಡಿಸಿದ್ದ ಯುಗಾದಿ ಕಾವ್ಯ ಸ್ಪರ್ಧೆಯಲ್ಲಿ ಮೊದಲನೆಯ ಬಹುಮಾನ, ಎರಡು ಸಾರಿ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ ಹೀಗೆ ಹತ್ತು ಹಲವು. ಕವಿತೆಯಂತೆ ಕಥೆಯೂ ಇವರ ಕೈ ಹಿಡಿಯಿತು. ಕಾರವಾರದ ಕರಾವಳಿ ಮುಂಜಾವಿನ ಕಥೆಗೆ ಮೊದಲ ಬಹುಮಾನ, ತುಷಾರ ಮತ್ತು ಕಾವ್ಯಾಂಜಲಿ ಕ್ಯಾಲಿಫೋರ್ನಿಯಾ ಕಥಾ ಬಹುಮಾನ, ಮುಂಬೈನ ಗೋಕುಲ ವಾಣಿ ಕಥಾ ಬಹುಮಾನ, ಗುಲ್ಬರ್ಗ ವಿಶ್ವವಿದ್ಯಾಲಯದ ಕಥಾ ಬಹುಮಾನ.. ಹೀಗೇ.

ಸದ್ಯ ಅಂಕೋಲಾ ತಾಲೂಕಿನ ಬೆಳಸೆ ಎಂಬಲ್ಲಿ ಆಗೇರ ಕೇರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿರುವ ರೇಣುಕಾ ರಮಾನಂದ, ಈಗಾಗಲೇ ತಮ್ಮ ಸೇವೆಯನ್ನು ಮುಂಡಗೋಡಿನ ಅತ್ತೀವೇರಿ, ಅಂಕೋಲಾದ ಸರಳೇಬೈಲ್, ಹಡಾವ, ಮರಕಾಲ್‌ಗಳಲ್ಲಿ ಸಲ್ಲಿಸಿರುವರು. ಈ ಎಲ್ಲವೂ ಉತ್ತರಕನ್ನಡ ಜಿಲ್ಲೆಯ ಕಾಡು ಮತ್ತು ಹಳ್ಳಿಗಾಡು ಪ್ರದೇಶಗಳೇ. ವಿದ್ಯಾರ್ಥಿಗಳಂತೂ ತೀರಾ ಹಿಂದುಳಿದ ಹಾಲಕ್ಕಿ ಒಕ್ಕಲಿಗರು ಮತ್ತು ಆಗೇರರೇ. ಪಾಲಕರ ದೈನಂದಿನ ಬದುಕೇ ತತ್ವಾರವಾದ ಮೇಲೆ ಮಕ್ಕಳಿಗೆ ಎಲ್ಲಿಯ ಶಿಕ್ಷಣ ? ಪಾಲಕರೊಂದಿಗೆ ಮಕ್ಕಳೂ ಕೂಲಿನಾಲಿಗೆ ಹೋಗಲೇಬೇಕಾದ ಪರಿಸ್ಥಿತಿ. ಇಂತಹ ಸಂದರ್ಭಗಳಲ್ಲಿ ಪಾಲಕರ ಮನ ಒಲಿಸಿ ಮಕ್ಕಳನ್ನು ಶಾಲೆಗೆ ಕರೆ ತರುವುದೇ ಸಮಸ್ಯೆಯಾಗಿರುತ್ತದೆ. ಇಂತಹ ಹಳ್ಳಿಗಾಡಿನ ಶಾಲೆಗೆ ಬಂದರೂ ಅಲ್ಲಿ ಮೂಲಭೂತ ಸೌಕರ್ಯಗಳದೇ ಕೊರತೆ. ಇವರು ಕಾರ್ಯ ನಿರ್ವಹಿಸಿದ ಬಹುತೇಕ ಎಲ್ಲಾ ಶಾಲೆಯ ಪರಿಸ್ಥಿತಿ ಒಂದೇ. ಮಕ್ಕಳ ಮೆದು ಮನಸಿಗೆ ಮುದ ನೀಡಿದ ರೇಣುಕಾ ತನ್ನ ಅಪಾರ ಸ್ನೇಹಿತರೊಂದಿಗೆ ಜಾಲತಾಣದ ಮೂಲಕ ಕೆಲ ವಿಷಯವನ್ನು ಹಂಚಿಕೊಂಡಾಗ ಕೆಲ ಸುಂದರ ಮನಸ್ಸುಗಳು ತಾವಾಗಿಯೇ ಮುಂದೆ ಬಂದು ಈ ಬೆಳೆಯುವ ಎಳೆಯ ಮಕ್ಕಳಿಗೆ / ಶಾಲೆಗೆ ಸಹಾಯದ ಅಭಯ ನೀಡಿದರು.

ಮಕ್ಕಳಿಗೆ ಸ್ಕೂಲ್ ಬ್ಯಾಗ್, ಛತ್ರಿ, ನೋಟಬುಕ್, ಕಂಪಾಸ್, ನೀರಿನ ಫಿಲ್ಟರ್, ಕಪಾಟು, ಪೀಠೋಪಕರಣ, ದೊಡ್ಡ ಪ್ರಮಾಣದ ಆಟಿಕೆ ಸಾಮಗ್ರಿಗಳು ಇವುಗಳಲ್ಲಿ ಅತೀ ಮುಖ್ಯವಾದುದು. ಪುಣೆಯ ನಂದಿತಾ ಕಾಮತ್, ಸೌದಿ ಅರೇಬಿಯಾದ ರಫಿಕ್ ಶೇಖ್, ಅಂಜಲಿ ರಾಮಣ್ಣ, ಸುನಂದಾ ಮತ್ತು ಪ್ರಕಾಶ್ ಕಡಮೆ, ಅಮೇರಿಕೆಯ ಸರಿತಾ ನವಲಿ, ಮಣಿಪಾಲದ ಜ್ಯೋತಿ ಗುರುಪ್ರಸಾದ್ ಉಡುಪಿಯ ವನಿತಾ ಡಿ.ಎಸ್. ಹಾಗೂ ಹೆಸರು ಹೇಳಲಿಚ್ಚಿಸದ ಇನ್ನೂ ಕೆಲ ದಾನಿಗಳ ಉಪಕಾರವನ್ನು ನೆನೆವಾಗಲಂತೂ ರೇಣುಕಾ ರಮಾನಂದರ ಕಣ್ಣಂಚು ತುಂಬುವುದು ; ಇದೆಲ್ಲಾ ಬಡ ಮುದ್ದು ಮಕ್ಕಳಿಗಾಗಿ ಮತ್ತು ಶಾಲೆಯ ಅಭಿವೃದ್ಧಿಗೆ. ಒಮ್ಮೊಮ್ಮೆ ಆರಾಮಾಗಿ ಕುಳಿತು ಸರಕಾರೀ ವೇತನ ಪಡೆಯುವ ನನಗೆ ಇಷ್ಟೆಲ್ಲಾ ಬೇಕಾಗಿತ್ತೇ ಎನಿಸಿದರೂ ಬದುಕಿನಲಿ ಎಲ್ಲರಂತೆ ಜೀವಿಸುವ ಬದಲು ಏನಾದರೂ ವೈಶಿಷ್ಟ್ಯ ಪೂರ್ಣ ಕೆಲಸ ಮಾಡುವ ದೃಢ ನಿರ್ಧಾರದ ರೇಣುಕಾರು ನಿಜವಾಗಿಯೂ ಅಭಿನಂದನಾರ್ಹರೇ.

ಚನ್ನಪಟ್ಟಣದ ಪಲ್ಲವ ಪ್ರಕಾಶನದಿಂದ ಹೊರಬಂದ ‘ಮೀನು ಪೇಟೆಯ ತಿರುವು’ ಇದು ಇವರ ಪ್ರಥಮ ಮತ್ತು ಮಹತ್ವಾಕಾಂಕ್ಷೆಯ ಕವನ ಸಂಕಲನ. 124 ಪುಟಗಳ ಈ ಹೊತ್ತಿಗೆಯಲ್ಲಿ ಲವಲವಿಕೆಯ ತಾಜಾತನದಿಂದ ಕೂಡಿದ 47 ಕವಿತೆಗಳಿವೆ. ಜಯಂತ್ ಕಾಯ್ಕಿಣಿಯವರು ‘ಒಳಪೆಡ್ಲಿನಿಂದ ಸೀಟಿಗೆ’ ಎಂದು ಮುನ್ನುಡಿ ಬರೆಯುತ್ತಾ “ಕವಿತೆ ಕೇವಲ ಪ್ರತಿಸ್ಪಂದನವಾಗದೇ ಇಲ್ಲಿಯ ಅನೇಕ ಸಾಲುಗಳು, ಅಸಂಖ್ಯ ಬಟ್ಟೆ ಒಗೆಸಿಕೊಂಡ ದೋಭಿಘಾಟಿನ ಹಾಗೆ ಫಳಫಳ ಹೊಳೆಯುತ್ತದೆ. ಅಪ್ಪಟ ದೇಸಿ ಕವಿ ರೇಣುಕಾ ಮಳೆ ನೀರು ತುಂಬಿ ನಿಂತ ಗದ್ದೆಗಳಲ್ಲಿ ಸಸಿಗಳನ್ನು ನೆಟ್ಟಿಮಾಡಿದಂತೆ ಸಹಜವಾಗಿಯೂ, ಶಿಸ್ತುಬದ್ಧವಾಗಿಯೂ, ಗೊಂಚಲಾಗಿಯೂ, ನಾಜೂಕಾಗಿಯೂ, ಹಸಿರುಕ್ಕುವಂತೆಯೂ, ಫಲವತ್ತಾಗಿಯೂ ಕಾವ್ಯ ಕೃಷಿ ಮಾಡುವ ಹಸನಾದ ಮನಸ್ಸುಳ್ಳವರು. ಇದಕ್ಕೆಲ್ಲಾ ಮೂಲ ಕಾರಣ ರೇಣುಕಾರ ಅದಮ್ಯ ಉಮೇದಿಯೇ ಆಗಿದೆ. ಒಳಪ್ಯಾಡ್ಲಿನಿಂದ ಮೆಲ್ಲನೆ ಸೀಟಿಗೇರೆತ್ತಿರುವ ಇವರ ಕಾವ್ಯ ಪಯಣದ ಉಮೇದಿಗೆ ಹೊಸ ಹೊಸ ತಿರುವುಗಳನ್ನು, ಸೇತುವೆಗಳನ್ನು, ಘಟ್ಟಗಳನ್ನು ಹಾರೈಸುತ್ತೇನೆ” ಎಂದು ಮನದಾಳದಿಂದ ಹರಿಸಿರುವರು.

ಜಯಂತ್ ಕಾಯ್ಕಿಣಿಯವರೊಂದಿಗೆ ರೇಣುಕಾರವರು

ಹೋಗುತ್ತಿದ್ದಾರೆ ಹುಡುಗರು ಕಾಲೇಜಿಗೆ
ಮತ್ತಿವರು ಹುಡುಗಿಯರು ಬೆಟ್ಟಕ್ಕೆ
ಅವರು ತೂಗಿದ್ದಾರೆ ಪುಸ್ತಕದ ಬ್ಯಾಗು
ಜೊತೆಗೆ ಐಡೆಂಟಿಟಿ ಕಾರ್ಡು
ಇವರಲ್ಲೂ ಇದೆ ಸಾಣೆ ಹಿಡಿಯದೆಯೂ
ಬರೀ ಕೊಯ್ತಕ್ಕೆ ಫಳಗುಡುವ ಕತ್ತಿ
ಬಿಗಿತಕ್ಕೊಂದು ಬಳ್ಳಿ
ಹಿಂದೆಯೂ ಇದ್ದದ್ದು
ಮುಂದೆಯೂ ಬರುವದು
ಬಲು ಮಂಜೂರು ಮಜಬೂತು ಆಸ್ತಿ

ಎನ್ನುತ್ತಾ ಗಂಡು ಮತ್ತು ಹೆಣ್ಣಿನ, ಕೂಲಿಯಾಳು ಮತ್ತು ವೈಟ್ ಕಾಲರಿನ ತಾರತಮ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ, ಇದು ಅನಾದಿಕಾಲದಿಂದಲೂ ನಡೆದು ಬಂದಿರುವ ದುಷ್ಟ ಪದ್ಧತಿಯಾಗಿದ್ದು, ಎರಡೂ ಕೆಲಸ ಕಾರ್ಯಗಳೂ ಒಂದೇ ನಾಣ್ಯದ ಎರಡು ಮುಖಗಳು. ಜಗದಲಿ, ಬದುಕಿನಲಿ ಸಮಾನ ಮನೋಭಾವನೆ ಬೆಳೆಯಬೇಕು. ಹೆಣ್ಣಿನ ಹಾಗೂ ಕೂಲಿಯಾಳಿನ ಕೆಲಸಗಳ ಮೆಲೇಯೇ ಜಗದ ನೆಲೆಗಟ್ಟು ನಿಂತಿದೆ, ಎನ್ನುತ್ತಾ,

ಉಪ್ಪು ಹುಳಿ ಖಾರ ಒಗ್ಗೂಡಿಸಲು
ಹೋಗಬೇಕಿದೆ
ಮತ್ತೆ ಮತ್ತೆ ಬೆಟ್ಟಕ್ಕೆ

ಎಂದು ದೈನಂದಿನ ಬದುಕಿನ ದಾರುಣ ಸ್ಥಿತಿಗತಿ, ತಲ್ಲಣಗಳ ಚಿತ್ರಗಳನ್ನು ರೇಣುಕಾ ಮನದಾಳದಿ ಚಿತ್ರಿಸಿರುವರು.

ಇಂತಹ ಸಾಲುಗಳಿಂದಾಗಿಯೇ ರೇಣುಕಾರ ಈ ಸಂಕಲನದ ಕವಿತೆಗಳು, ಹಸ್ತಪ್ರತಿಯಲ್ಲಿರುವಾಗಲೇ ಮುಂಬೈನ ಸುಶೀಲಾ ಶೆಟ್ಟಿ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾದ ನಂತರ, ಪುಸ್ತಕ ರೂಪಕ್ಕೆ ಬಂದ ಮೇಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಸೇಡಂ ನ ‘ಅಮ್ಮ’ ಪ್ರಶಸ್ತಿ, ಹಾಸನದ ಕಾವ್ಯ ಮಾಣಿಕ್ಯ ಪುರಸ್ಕಾರ, ಹರಿಹರದ ಹರಿಹರ ಶ್ರೀ ಪ್ರಶಸ್ತಿ, ಕ.ಸಾ.ಪ ದ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ ಹಾಗೂ ಇನ್ನಿತರ ಕೆಲ ಪುರಸ್ಕಾರಗಳೂ ಇವರ ಪುಸ್ತಕವನ್ನು ಹುಡುಕಿಕೊಂಡು ಬಂದಿರುತ್ತದೆ.

ಪ್ರಕಾಶ ಕಡಮೆ, ಸುನಂದಾ ಕಡಮೆ ಮತ್ತು ರೇಣುಕಾರವರು

ಕೋವಿಡ್‌ನ ದುರಿತ ಸಂದರ್ಭದಲ್ಲಿ ರೇಣುಕಾ ರಮಾನಂದ “ವಿಜಯ ಕರ್ನಾಟಕ” ದಿನ ಪತ್ರಿಕೆಯಲ್ಲಿ, ವಿದ್ಯಾರ್ಥಿಗಳೊಂದಿಗಿನ ಪ್ರೀತಿಯ ಸಂಪರ್ಕದ ಕುರಿತಾಗಿ ಬರೆದ ಲೇಖನ ‘ಖಾಲಿ ಶಾಲೆಯ ಅಂಗಳದಿಂದ’ ಓದಿದ ಅಂದಿನ ಶಿಕ್ಷಣ ಸಚಿವರಾದ ಮಾನ್ಯಶ್ರೀ ಸುರೇಶ ಕುಮಾರ, ತಕ್ಷಣ ರೇಣುಕಾರಿಗೆ ಫೋನ್ ಮಾಡಿ ಖುಷಿಯನ್ನು ವ್ಯಕ್ತಪಡಿಸಿ ತಮ್ಮ ಫೇಸ್ಬುಕ್ ಮತ್ತು ಟ್ವಿಟರ್‌ನಲ್ಲಿ ಅದನ್ನು ಹಂಚಿ ಕೊಂಡಾಗ ‘ಅಕ್ಷರಗಳಿಗೂ ಇಷ್ಟೊಂದು ಶಕ್ತಿ ಇದೆಯೆ’ ಎಂದು ಆಶ್ಚರ್ಯ ಚಕಿತರಾಗಿ, ಕಾಲೇಜಿನ ದಿನಗಳಲ್ಲಿ ಅಕ್ಷರದ ದೀಕ್ಷೆ ಕೊಟ್ಟ ಗುರುಗಳನ್ನು ಮನಸಾ ವಂದಿಸಿದೆ ಎನ್ನುವಾಗ ಇವರಲ್ಲಿ ಕೃತಜ್ಞತಾ ಭಾವ ತುಂಬಿ ತುಳುಕುತ್ತಿತ್ತು. ಆ ಕ್ಷಣ ಅವರ ವೃತ್ತಿ ಜೀವನದಲ್ಲಿ ಮರೆಯಲಾರದ ಸಂದರ್ಭವಾದ್ದರಿಂದ, ತನಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಕಣ್ಣರಳಿಸುವರು.

ಕವಿತೆಯ ಕಾರಣಕ್ಕೆ ಕೇರಳದ ಚೆಂಗಾನೂರಿನಲ್ಲಿ ನಡೆದ ಸೌತ್ ಇಂಡಿಯನ್ ರೈಟರ್ಸ ಎನ್ಸೆಂಬಲ್ (ಎಸ್ ಐ ಡಬ್ಲೂ ಇ) ಪಂಪಾ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಕವಿತೆ ಓದಿದ ಆ ಕ್ಷಣ ಮತ್ತು, ಭಾರತದ ಹದಿನೈದು ಭಾಷೆಗಳ ಇಪ್ಪತ್ತೆಂಟು ಕವಿಗಳ 250 ಕವಿತೆಗಳು ಕವಿಯ ಮೂಲ ಭಾಷೆಯ ಕೈಬರಹ, ಅವರದ್ದೇ ವಾಚನದ ವೀಡಿಯೋ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ, ಶೆಟಗೇರಿಯ ರೇಣುಕಾ ರಮಾನಂದರ ಕನ್ನಡ ಕವಿತೆಗಳೂ ಸೇರ್ಪಡೆಯಾಗಿದ್ದು ಇವರ ಕಾವ್ಯ ಬದುಕಿನ ಮರೆಯಲಾಗದ ಸಂಗತಿ. ಇವರ ಕೆಲ ಕವಿತೆಗಳು ತೆಲಗು, ಮರಾಠಿ, ಕೊಂಕಣಿ ಮತ್ತು ಇಂಗ್ಲೀಷ್‌ಗೂ ಅನುವಾದ ಕಂಡಿದ್ದು ಕಥೆ ಕವಿತೆಗಳಂತೆ ಪ್ರಬಂಧ ಬರಹಗಳೂ ರೇಣುಕಾಗೆ ಸಿದ್ಧಿಸಿದೆ.

ರೇಣುಕಾ ರಮಾನಂದ್‌ರವರ ಕುಟುಂಬ

ಹೆಸರಿಗೇ ಅಂಟಿಕೊಂಡ ರಮಾನಂದ, ಮಗಳು ಪ್ರಾರ್ಥನಾ ಮತ್ತು ಮಗ ತ್ರಿಭುವನರೊಂದಿಗಿನ ತುಂಬು ಸಂಸಾರದ ರೇಣುಕಾರನ್ನು ಶುಭ ಕೋರಿ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಹೊಸ ಹೊಸ ಪುಸ್ತಕಗಳೂ ಬರಲಿ ಹಾಗೂ ನಿಮ್ಮ ಶೈಕ್ಷಣಿಕ ಸೇವೆಯನ್ನು ಘನ ಸರ್ಕಾರ ಗಮನಿಸಲಿ ಎಂದು ಹಾರೈಸುವೆ.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಇಂದಿಗೂ ನಾನು ರೇಣುಕಾರವರ ಕವನಗಳನ್ನು ಓದುತ್ತಿದ್ದೇನೆ. ಪ್ರತೀ ಬಾರಿ ಓದಿದಾಗಲೂ ಏನೋ ಹೊಸತನ ಕವಿತೆಯಲ್ಲಿ. ಅವರ ಕವಿತೆಗಳು ಅಂದು ಇಂದು ಮುಂದೂ ಜನಮಾನಸದಲ್ಲಿ ಅಜರಾಮರ.

    ತಾವು ತುಂಬಾ ಚೆಂದ ವಿಮರ್ಶೆ ಮಾಡಿದ್ದೀರಿ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...