Homeಅಂಕಣಗಳುಕಳೆದುಹೋದ ದಿನಗಳುಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -12

ಒಂದೇ ಸಮನೆ ಏರುಗತಿಯಲ್ಲಿದ್ದ ಕಾಫಿ ಬೆಲೆ ಇಳಿಯತೊಡಗಿತ್ತು. ಕಾಫಿ ಬೆಲೆ ಏರುತ್ತಲೇ ಇದ್ದಾಗ ನೂರಾರು ಜನ ಸಣ್ಣ ಸಣ್ಣ ವ್ಯಾಪಾರದಾರರೂ ಹುಟ್ಟಿಕೊಂಡಿದ್ದರು. ಬೆಳೆಗಾರರರಿಗೆ ಮುಂಗಡ ಕೊಡುವವರು, ಸಾಲ ಕೊಡುವವರು, ಮನೆ ಬಾಗಿಲಿಗೇ ಬಂದು ಕಾಫಿಯನ್ನು ಕೊಳ್ಳುವವರು ಎಲ್ಲರೂ ಇದ್ದರು. ಬ್ಯಾಂಕುಗಳು ಕೂಡಾ ಕೇಳಿದಷ್ಟು ಸಾಲ ಕೊಟ್ಟವು. ಹಲವಾರು ಜನರು ಕೊಟ್ಟವರಿಂದೆಲ್ಲ ಕೊಟ್ಟಷ್ಟು ಸಾಲ ಪಡೆದವರೂ ಇದ್ದರು.

ಆದರೆ ಕೆಲವರು ನತದೃಷ್ಟರು ಇದ್ದರು. ಅವರು ಕಾಫಿಗೆ ಉತ್ತಮ ಬೆಲೆ ಬಂತೆಂದು ಸಾಲ ಮಾಡಿ ಹೊಸದಾಗಿ ತೋಟ ಮಾಡಿದರು. ಹಳೆಯ ತೋಟಗಳನ್ನು ಅಭಿವೃದ್ಧಿಪಡಿಸಿದರು. ಈಗ ಫಸಲು ಕೈಗೆ ಹತ್ತುವ ವೇಳೆ ಬೆಲೆ ಇಳಿಯತೊಡಗಿತ್ತು. ಅಂತವರು ಮುಂದೇನು ಎಂಬ ಚಿಂತೆಗೊಳಗಾದರು.

ಯಾಲಕ್ಕಿ ತೋಟ

ಅನೇಕ ದೊಡ್ಡ ಕಂಪನಿಗಳ ಏಜೆಂಟರುಗಳಿದ್ದರು. ಕೊಮಾರ್ಕ್ ಪರವಾಗಿಯೂ ಹಲವರಿದ್ದರು. ಇವರಲ್ಲಿಯೂ ಕೆಲವರು ನಾನಾ ರೀತಿಯ ವ್ಯವಹಾರಗಳನ್ನು ಮಾಡುತ್ತಿದ್ದರು. ಬೆಳೆಗಾರನೊಬ್ಬ ಕಾಫಿ ತಂದರೆ ಕೊಮಾರ್ಕ್ ಸಂಸ್ಥೆಗೆಂದು ಖರೀದಿಸಿದಂತೆ ಮಾಡಿ ಬೇರೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆಗೆ ಕೊಡುತ್ತಿದ್ದರು. ಕೆಲವು ಸಲ ಬೆಳೆಗಾರರಿಗೂ ಸ್ವಲ್ಪ ಹೆಚ್ಚಿಗೆ ನೀಡುತ್ತಿದ್ದರು. ಸದ್ಯದ ಲಾಭಕ್ಕೆ ಅವರೂ ಸುಮ್ಮನಾಗುತ್ತಿದ್ದರು. ಈ ನಡುವಿನ ಲಾಭ ಆ ಏಜೆಂಟನದಾಗುತ್ತಿತ್ತು. ಇದರಿಂದಲೂ ಕೊಮಾರ್ಕ್ ಸಂಸ್ಥೆಗೆ ನಷ್ಟವಾಗತೊಡಗಿತು. ಇಂಥ ಹಲವಾರು ಅವ್ಯವಹಾರಗಳು ನಡೆದವು. ಬೆಲೆಗಳು ಇಳಿಯತೊಡಗಿದಾಗ ಇಂತಹ ಹಲವಾರು ಜನ ವ್ಯಾಪಾರಿ, ಏಜೆಂಟರುಗಳು ಬೆಳೆಗಾರರರಿಗೆ ಲಕ್ಷಾಂತರ ರೂಗಳಿಗೆ ಕೈಯೆತ್ತಿ ಊರು ಬಿಟ್ಟರು. ಕೆಲವರು ಜೀವವನ್ನೇ ಬಿಟ್ಟರು.

ಬೆಳೆಗಾರರಲ್ಲಿ ಹೆಚ್ಚಿನವರಿಗಂತೂ ಯಾವುದೇ ರೀತಿಯ ಮಾರುಕಟ್ಟೆ ಜ್ಞಾನವಾಗಲೀ, ಅನುಭವವಾಗಲಿ ಇಲ್ಲದಿದ್ದುದರಿಂದ, ನಮಗೆ ಕಾಫಿ ಬೋರ್ಡೇ ಒಳ್ಳೆಯದಿತ್ತು. ಇವರೆಲ್ಲ ಸೇರಿ ಹಾಳುಮಾಡಿದರು ಎಂದು ತಮ್ಮನ್ನು ಬಿಟ್ಟು ಬೇರೆ ಎಲ್ಲರನ್ನು ಬೈಯುತ್ತ ಕೂತರು.

ಖಾಸಗಿ ಕಂಪೆನಿಗಳು ವ್ಯಾಪಾರವನ್ನು ಮುಂದಕ್ಕೆ ಹಾಕುತ್ತಿದ್ದವು. ಇಲ್ಲವೇ ಹಣವನ್ನು ಕೊಡುವುದನ್ನು ಮುಂದೂಡುತ್ತಿದ್ದವು. ಆದರೆ ಸಹಕಾರಿ ಸಂಸ್ಥೆಯಾದ ಕೊಮಾರ್ಕ್ ಹಾಗೆ ಮಾಡಲೇ ಇಲ್ಲ. ಖರೀದಿಯನ್ನು ನಿರಂತರವಾಗಿ ಮುಂದುವರೆಸಿತ್ತು.

ಕೃಷಿ ಉತ್ಪನ್ನಕ್ಕೆ ಏಕಾಏಕಿ ಬೆಲೆ ಬಂದು ಈ ರೀತಿಯ ಏರುಪೇರುಗಳಾದಾಗ ಕೃಷಿಕರ ಬದುಕಿನಲ್ಲಿ ಆಗುವ ಪರಿಣಾಮಗಳು ಹೆಚ್ಚಿನ ಸಂದರ್ಭಗಳಲ್ಲಿ ಕೆಟ್ಟದ್ದೇ ಆಗಿರುತ್ತದೆ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಹಿಂದೊಮ್ಮೆ ಯಾಲಕ್ಕಿ ಬೆಳೆಯಲ್ಲಿಯೂ ಇದೇ ರೀತಿ ಆಗಿತ್ತು. ಆಗಿನ ಒಂದು ಘಟನೆಯನ್ನು ಇಲ್ಲಿ ಹೇಳಿದರೆ  ಪರಿಸ್ಥಿತಿ ಅರ್ಥವಾಗಬಹುದು.

ನಮ್ಮ ತಾಲ್ಲೂಕಿನ ಕೆಲವು ಭಾಗಗಳು ಕಾಫಿ ಬೆಳೆಗೆ ಸೂಕ್ತವಲ್ಲ. ಹೇಮಾವತಿ ನದಿಯ ಪಶ್ಚಿಮ ಭಾಗವಾಗಿರುವ ಮಂಜ್ರಾಬಾದ್ ಪ್ರದೇಶ ಹಿಂದಿನಿಂದಲೂ ಯಾಲಕ್ಕಿ ಬೆಳೆಗೆ ಪ್ರಸಿದ್ಧ. ರಾಜರುಗಳ ಕಾಲದಲ್ಲಿಯೂ ವಿದೇಶಗಳಲ್ಲಿ ಕೂಡಾ ಈ ಪ್ರದೇಶದ ಯಾಲಕ್ಕಿಗೆ ವಿಶೇಷ ಮನ್ನಣೆ. ಇಲ್ಲಿ ಮಳೆಯೂ ಹೆಚ್ಚು, ಹಾಗೂ ದಟ್ಟ ಅರಣ್ಯದ ನೆಲ.

ಕಾಫಿ ಬೆಳೆ ನಾಡಿನಲ್ಲಿ ಹಬ್ಬುತ್ತ ಬಂದಂತೆ ಇಲ್ಲಿಯೂ ಕಾಫಿ ಬೆಳೆಗೆ ಪ್ರಯತ್ನಿಸಿದರು. ಆದರೆ ಇಲ್ಲಿನ ಹೆಚ್ಚಿನ ಮಳೆ ಮತ್ತು ವಾತಾವರಣಕ್ಕೆ ಅರೆಬಿಕಾ ಕಾಫಿಗಿಂತ ರೊಬಸ್ಟ ತಳಿಯೇ ಸೂಕ್ತ.

ಹಲವು ವರ್ಷಗಳಿಂದ ಯಾಲಕ್ಕಿಯ ಬೆಲೆ ಒಂದೇ ರೀತಿಯಲ್ಲಿ ಇತ್ತು. ಆದರೆ ಕೃಷಿ ಖರ್ಚುಗಳು ಏರುತ್ತ ಹೋಗಿದ್ದವು. ಹಲವು ಹೊಸ ರೀತಿಯ ರೋಗಗಳು ಯಾಲಕ್ಕಿ ಬೆಳೆಗೆ ಬಂದ್ದರಿಂದಲೂ ಬೆಳೆ ಕಡಿಮೆಯಾಗಿ ಆದಾಯ ಖರ್ಚಿಗೇ ಸಾಲದ ಪರಿಸ್ಥಿತಿ ಬಂದಿತ್ತು. 1980ರ ಸುಮಾರಿಗೆ ಯಾಲಕ್ಕಿ ಬೆಲೆ ಕಿಲೋ ಒಂದಕ್ಕೆ ನೂರು ರೂಪಾಯಿ ಒಳಗೇ ಇತ್ತು. ಆಗ ರೈತ ಚಳುವಳಿಯ ಸಮಯದಲ್ಲಿ ಮಲೆನಾಡಿನ ಭಾಗದ ರೈತ ನಾಯಕರು ಯಾಲಕ್ಕಿಗೆ ಕಿಲೊ ಒಂದಕ್ಕೆ ಇನ್ನೂರು ರೂ ಸಿಗಬೇಕು ಎಂದು ಹೇಳುತ್ತಿದ್ದರು. ಆದರೆ 1984ರ ವೇಳೆಗೆ ಯಾರೂ ಊಹಿಸದ ರೀತಿಯಲ್ಲಿ ಯಾಲಕ್ಕಿ ಬೆಲೆ 700 ರೂಗಳ ವರೆಗೆ ಏರಿತು. ಆಗ ಕೆಲವರು ಗಡಿಬಿಡಿಯಲ್ಲಿ ಮತ್ತೆ ಯಾಲಕ್ಕಿ ಗಿಡ ಹಾಕಲು ಪ್ರಾರಂಭಿಸಿದರು. ಆಡು ಮಾತಿನಲ್ಲಿ ಹೇಳುವುದಾದರೆ “ಮನೆ ಹೆಂಚಿನ ಮೇಲೂ ಯಾಲಕ್ಕಿ ಗಿಡ ನೆಟ್ರು”.

ಯಾಲಕ್ಕಿಗೆ ಊಹೆಗೂ ಮೀರಿದ  ಬೆಲೆ ಬಂದಿದ್ದರಿಂದ ಆಗಲೂ ಹೀಗೇ ಆಯಿತು ಕೆಲವರು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರು. ಇನ್ನುಕೆಲವರು ಒಳ್ಳೊಳ್ಳೆಯ ಮನೆಗಳನ್ನು ಕಟ್ಟಿದರು. ಜೀಪುಗಳನ್ನು ಕೊಂಡುಕೊಂಡರು. ಮುಂದೆ ಆಪತ್ತು ಬಂದರೆ ಇರಲಿ ಎಂದು ಉಳಿತಾಯವನ್ನೋ, ಬೇರೆಕಡೆ ಹೂಡಿಕೆಯನ್ನೋ ಮಾಡಿದವರು ಬಹಳ ಕಡಿಮೆ.

ಆ ಸಮಯದಲ್ಲಿ ಒಬ್ಬ ಗಾರೆ ಮೇಸ್ತ್ರಿ ಹೇಳಿದ ಕಥೆಯಿದು.

ನಮ್ಮ ತಾಲ್ಲೂಕಿನ ಹೆಚ್ಚು ಯಾಲಕ್ಕಿ ಬೆಳೆಯುವ ಹೆತ್ತೂರು ಪ್ರದೇಶದ ಕಥೆಯಿದು. ಅಲ್ಲಿ ಒಬ್ಬ ಬೆಳೆಗಾರರು ದೊಡ್ಡದೊಂದು ಮನೆ ಕಟ್ಟಿಸಿದರು. ಸುಮಾರು ಇಪ್ಪತ್ತು ಚದರದ ತಾರಸಿ ಮನೆ. ಮನೆಯ ಕೆಲಸ ಮಾಡಿದ ಮೇಸ್ತ್ರಿಗೂ ಚೆನ್ನಾಗಿಯೇ ಸಂಬಳ ಕೊಟ್ಟರು.

ಕಾಫಿಯ ನಡುವೆ ಯಾಲಕ್ಕಿ ಮಿಶ್ರ ಬೆಳೆ

ನಾಲ್ಕು ವರ್ಷ ಕಳೆದಿತ್ತು. ಯಾಲಕ್ಕಿ ಬೆಲೆ ಮತ್ತೆ ನೆಲಕಚ್ಚಿತ್ತು. ಈ ಗಾರೆ ಮೇಸ್ತ್ರಿಗೂ ಎಲ್ಲೂ ಕೆಲಸ ಇರಲಿಲ್ಲ.  ಹಳೆಯ ಬೆಳೆಗಾರರನ್ನು ನೆನಪು ಮಾಡಿಕೊಂಡು ಅವರನ್ನು ಮಾತಾಡಿಸಿದ ಹಾಗೂ ಆಯಿತು ಜೊತೆಗೆ ಏನಾದರೂ ಕೆಲಸ ಇದ್ದರೆ ಕೊಟ್ಟಾರೆಂದು ಆ ಬೆಳೆಗಾರರ ಮನೆಗೆ ಗಾರೆ ಮೇಸ್ತ್ರಿ ಹೋದ.

ಮಳೆಗಾಲ ಮುಗಿದಿತ್ತಷ್ಟೆ. ಅವರ ಮನೆ ಅಂಗಳದಲ್ಲೆಲ್ಲ ಹುಲ್ಲು ಬೆಳೆದಿತ್ತು. ಮಳೆಯಿಂದ ಮನೆಯ ಬಣ್ಣವೂ ಮಾಸಿತ್ತು. ಸುತ್ತ ಮತ್ತೆಲ್ಲ ಹಾಳುಬಿದ್ದಂತೆ ತೋರುತ್ತಿತ್ತು. ಜಗಲಿಯ ಮೂಲೆಯಲ್ಲಿ ಒಬ್ಬಾತ ಗಡ್ಡದ ವ್ಯಕ್ತಿ, ಹಳೆಯ ಲುಂಗಿ ಉಟ್ಟುಕೊಂಡು ಬೀಡಿ ಸೇದುತ್ತ ಕುಳಿತಿದ್ದ.

ಮನೆಯ ಅಂಗಳದಲ್ಲಿ ನಿಂತು ಮೇಸ್ತ್ರಿ ಆ ವ್ಯಕ್ತಿಯಲ್ಲಿ. “ಗೌಡ್ರು ಮನೇಲಿಲ್ವ”? ಎಂದ.

“ಯಾರು ಬೇಕಾಗಿತ್ತು”? ಎಂದು ಆ ವ್ಯಕ್ತಿ ಬೀಡಿ ಎಸೆದು ಎದ್ದು ಬಂದರು.

ಅವರೇ ಮನೆ ಯಜಮಾನ, “ಗೌಡರು” !

ಅವರ ಪರಿಸ್ಥಿತಿ ಅಲ್ಲಿಗೆ ಬಂದಿತ್ತು. ಮೇಸ್ರ್ತಿಗೆ ಊಟ ಹಾಕಿಸಿ “ಇವಾಗ ಯಾವುದೂ ಚೆನ್ನಾಗಿ ನಡೀತಿಲ್ಲ ಇನ್ಯಾವಾಗಾದ್ರೂ ಬಾ ನೋಡಣ” ಎಂದು ಕಳುಹಿಸಿಕೊಟ್ಟರು.

ಬೆಲೆಯ ಅತಿಯಾದ ಏರಿಳಿತ ಹೆಚ್ಚಾಗಿ ಇಂತದ್ದೇ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಕಾಫಿಯಲ್ಲೂ ಇದೇ ಆಯಿತು.

ಮಲೆನಾಡಿನಲ್ಲಿ ಶುಂಠಿ ಬೆಳೆ

ಕಾಫಿಯ ಬೆಲೆ ನಿರಂತರವಾಗಿ ಇಳಿಯತೊಡಗಿದಾಗ ಬೆಳೆಗಾರರರೂ ಅನಿವಾರ್ಯವಾಗಿ ಬೇರೆ ಬೆಳೆಗಳತ್ತ  ಗಮನ ಹರಿಸಲೇ ಬೇಕಾಯಿತು. ಮಲೆನಾಡಿನ ಪಾರಂಪರಿಕ ಬೆಳೆಯಾದ ಯಾಲಕ್ಕಿಯ ಬೆಲೆಯೂ ನೆಲಕಚ್ಚಿತ್ತು. ಜೊತೆಗೆ ಕೊಕ್ಕೆ ಕಂದು ರೋಗವೆಂಬ ಹೊಸ ರೋಗವೊಂದು ಯಾಲಕ್ಕಿ ಬೆಳೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿತ್ತು. ಈ ಹಿಂದೆ ಯಾಲಕ್ಕಿಗಿದ್ದ ಹಲವು ಬಾಧೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದಿದ್ದರು. ಬಹಳ ವರ್ಷಗಳಿಂದಲೂ ಇರುವ ‘ಕಟ್ಟೆರೋಗ’ ಅಥವಾ ‘ಮೊಸಾಯಿಕ್ ರೋಗ’ ಬಂದರೆ ಫಸಲು ಕಮ್ಮಿಯಾಗುತ್ತ ಹೋಗಿ ಗಿಡಗಳು ಸಾಯುತ್ತಿದ್ದವೇ ವಿನಃ ಒಮ್ಮೆಗೇ ನಾಶವಾಗುತ್ತಿರಲಿಲ್ಲ. ಆದರೆ ಹೊಸದಾಗಿ ಬಂದ ಕೊಕ್ಕೆ ಕಂದು ರೋಗದ ಗಿಡಗಳಲ್ಲಿ ಸುಳಿಗಳು ಮುರುಟಿಕೊಂಡು ಗಿಡ ಬೆಳವಣಿಗೆಯನ್ನೇ ಕಾಣದೆ ಫಸಲೇ ಬರುತ್ತಿರಲಿಲ್ಲ.

ಯಾಲಕ್ಕಿ ಕಟ್ಟರೋಗ ಮತ್ತು ಕೊಕ್ಕೆ ಕಂದು ರೋಗ
ಕಟ್ಟೆ ರೋಗ ಪೀಡಿತವಾಗುತ್ತಿರುವ ತೋಟ

ಕಾಫಿಯ ಜೊತೆಗಾರ ಬೆಳೆಯಾದ ಮೆಣಸಿನ ಬೆಲೆಯೂ ಕನಿಷ್ಟ ಮಟ್ಟದಲ್ಲಿತ್ತು. ಆ ಸಮಯದಲ್ಲಿ ಮಲೆನಾಡನ್ನು ಪ್ರವೇಶ ಮಾಡಿದ್ದು ಎರಡು ಹೊಸ ಬೆಳೆಗಳು. ಈ ಎರಡೂ ಬೆಳೆಗಳು ಕೇರಳದ ಮೂಲಕ ಇಲ್ಲಿಗೆ ಬಂದವು. ಅವೆಂದರೆ ಶುಂಠಿ ಮತ್ತು ವೆನಿಲ್ಲಾ.

ಈಗ ಅಪರೂಪವಾಗಿರುವ ವೆನಿಲ್ಲಾ

ವೆನಿಲ್ಲಾ ಒಂದು ಹಂತದಲ್ಲಿ ಹಲವರಿಗೆ ಅದೃಷ್ಟದ ಬೆಳೆಯಾಗಿ ನಾಲ್ಕೈದು ವರ್ಷಗಳ ಕಾಲ ವಿಜೃಂಭಿಸಿ ಮರೆಯಾಯಿತು. ಶುಂಠಿ ಅನೇಕರಿಗೆ ಜೀವನೋಪಾಯವನ್ನೂ, ಕೆಲವರಿಗೆ ಅದೃಷ್ಟವನ್ನೂ ತಂದಿತು. ಇದೊಂದು ಜೂಜಿನ ಬೆಳೆಯಂತಾಗಿ ಕೆಲವರು ಕೈಸುಟ್ಟುಕೊಂಡರು. ಇನ್ನು ಕೆಲವರು ಪ್ರಾಣವನ್ನೇ ಕಳೆದುಕೊಂಡರು.

ಇದೆಲ್ಲದರ ಜೊತೆಯಲ್ಲಿ ಈಗಲೂ ಮಲೆನಾಡಿನಲ್ಲಿ ಅಲ್ಲಲ್ಲಿ ಮಾಡುತ್ತಿರುವ, ಅಪಾರ ಪ್ರಮಾಣದ ರಾಸಾಯನಿಕ ಮತ್ತು ಕೃಷಿವಿಷಗಳನ್ನು ಬಳಸಿ ಬೆಳೆಯುವ ಶುಂಠಿ ಬೆಳೆ ಮಲೆನಾಡಿನ ಜೀವ ವೈವಿಧ್ಯಕ್ಕೆ ಮಾಡಿದ- ಮಾಡುತ್ತಿರುವ ಹಾನಿಯೂ ಅಪಾರವಾದುದು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)

ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕಾಫಿ ವಲಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು: ಪ್ರಸಾದ್ ರಕ್ಷಿದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...