Homeಅಂಕಣಗಳುನಾಗಸುಧೆ ಜಗಲಿಯಿಂದಔಷಧಿಗಳೊಂದಿಗೆ 'ಅಕ್ಷರ'ದ ಚುಚ್ಚುಮದ್ದನ್ನೂ ನೀಡುವ 'ವಸುಂಧರೆ'

ಔಷಧಿಗಳೊಂದಿಗೆ ‘ಅಕ್ಷರ’ದ ಚುಚ್ಚುಮದ್ದನ್ನೂ ನೀಡುವ ‘ವಸುಂಧರೆ’

ವೈದ್ಯೆಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಬರಹಗಾರ್ತಿಯಾಗಿ ಜನಪರವಾಗಿ ದುಡಿಯುತ್ತಿರುವ ಡಾ.ವಸುಂಧರಾ ಭೂಪತಿಯವರ ಕುರಿತು ಪ್ರಕಾಶ ಕಡಮೆಯವರ ಲೇಖನ..

- Advertisement -
- Advertisement -

ನಿನ್ನೆಯವರೆಗೂ ಹೆಣ್ಣು
ಮನೆಯ ಮಡಿಕೆ ಕುಡಿಕೆ
ಬಾಗಿಲಸಂದಿಯ ಕಸಬರಿಗೆ
ಮೆಟ್ಟಿಲ ಮೇಲೆ ಬಿದ್ದಿರುವ ಕಾಲೊರೆಸು
ಕೊಟ್ಟಿಗೆಯಲಿ ಕೊರಳಾಡಿಸುವ ಹಸು

ಎಂದು ಹೆಣ್ಣಿನ ದಾರುಣತೆಯ ಕುರಿತು ಕವಿತೆ ಬರೆಯುತ್ತಾ, ಈ ಎಲ್ಲಾ ಸಂಕಷ್ಟಗಳಿಗೊಂದು ಪರಿಹಾರಕ್ಕೆ ಜಾಗ್ರತೆಯಿಂದ ಕಾರ್ಯತತ್ಪರರಾಗುವ ಡಾ. ವಸುಂಧರಾ ಭೂಪತಿಯವರು ಹುಟ್ಟಿದ್ದು ರಾಯಚೂರಿನಲ್ಲಿ. ತಂದೆ ಪ್ರಗತಿಪರ ಚಿಂತಕ ಮತ್ತು ಕೃಷಿ ವಿಜ್ಞಾನಿಗಳು. ಮನೆ ತುಂಬಾ ಪುಸ್ತಕದ ರಾಶಿ; ಓದಿನ ಹಸಿವು. ತಾವು ಓದಿದ ಪುಸ್ತಕದ ಕುರಿತು ಮಕ್ಕಳಿಗೂ ತಿಳಿ ಹೇಳುತಿದ್ದರಿಂದ ಪುಸ್ತಕಗಳು ಮತ್ತು ಓದೇ ವಸುಂಧರಾರಿಗೂ ಉಸಿರಿನಷ್ಟೇ ಆಪ್ತವಾಗತೊಡಗಿತು. ಅಂದು ಅಪ್ಪ ನೆಟ್ಟ ಓದಿನ ಬೀಜ ಮುಂದಿನ ದಿನಗಳಲ್ಲಿ ವೃಕ್ಷವಾಗಿ ಬದುಕಿಗೆ ಬೆಳಕಾಗತೊಡಗಿತು.

ವೈದ್ಯಕೀಯ ವ್ಯಾಸಂಗ ಮುಗಿದೊಡನೆ ಬಳ್ಳಾರಿಯ ಸಂಡೂರಿನ ತೋರಣಗಲ್ಲಿನಲ್ಲಿ ಎರಡು ವರ್ಷಗಳ ಸೇವೆಯ ನಂತರ ಬೆಂಗಳೂರಿಗೆ ಬಂದು ಮೂರು ದಶಕಕ್ಕೂ ಹೆಚ್ಚಿನ ಸಮಯವನ್ನು ಆಯುರ್ವೇದ ವೈದ್ಯೆಯಾಗಿ ದೀನ, ದಲಿತ, ದುರ್ಬಲ ಹಾಗೂ ಮಹಿಳೆಯರಿಗಾಗಿ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಇಂದಿಗೂ ಆ ಭಾಗದ ಜನಪ್ರಿಯ-ಜನಾನುರಾಗಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ವಸುಂಧರಾರು ವೃತ್ತಿ-ಪ್ರವೃತ್ತಿಯಲ್ಲಿ ಸಮತೋಲನ ಸಾಧಿಸಿ ಬದುಕಿನಲ್ಲಿ ಸೈ ಎನಿಸಿಕೊಂಡವರು.

ಪುಸ್ತಕ ಮತ್ತು ಸ್ಟೆತೋಸ್ಕೋಪು ಇವರಿಗೆ ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನ ಮಾನಸಿಕ ಖುಷಿ ಮತ್ತು ನೆಮ್ಮದಿಗಳೇ ಆರೋಗ್ಯದ ಗುಟ್ಟು ಎಂದು ಮನಗಂಡ ಇವರು, ಇದಕ್ಕೆ ಮೂಲ ಮಂತ್ರ ಓದು ಮತ್ತು ಬರಹ ಎಂದು ತಿಳಿದು ಸಾಹಿತ್ಯ ಕ್ಷೇತ್ರದಲ್ಲಿ ತಾವೂ ಬೆಳೆದರು, ಅನೇಕ ಕಿರಿಯರನ್ನೂ ಬೆಳೆಸಿದರು. ರೋಗಿ ಗುಣಮುಖನಾದಾಗ ಸಿಗುವ ಖುಷಿಯೇ ಒಂದು ಬರಹ ಬರೆದು ಮುಗಿಸಿದ ನಂತರ ಸಿಗುವ ಆನಂದ ಇವೆರಡೂ ಸರಿ ಸಮ ಎನ್ನುವಾಗ ಇವರ ಮೊಗದಲಿ ಹೂನಗೆ ಅರಳುವದು. ಬರಹ ಮತ್ತು ಆಲೋಚನೆಗಳು ಒಂದೇ ಇದ್ದರಷ್ಟೇ ಬದುಕು ಸಾರ್ಥಕ ಎಂದು ನಂಬಿದ ಇವರು ಬರೆದಂತೇ ಬದುಕುತ್ತಿದ್ದುದರಿಂದ ಅಭಿನಂದನಾರ್ಹರು. ಸೃಜನಶೀಲ ಸಾಹಿತ್ಯದ ಮೂಲಕವೇ ಸೃಜನೇತರ ವಿಷಯಗಳನ್ನೂ ಜನರಿಗೆ ತಲುಪಿಸಬೇಕಾದದ್ದು ಬರಹಗಾರರ ಕರ್ತವ್ಯ ಎಂದು ನಂಬಿದ ವಸುಂಧರಾ, ವೈದ್ಯರು ಬರೆಯುವ ಔಷಧಿಯ ಚೀಟಿಯಲ್ಲಿ ಪುಸ್ತಕದ ಹೆಸರನ್ನೂ ನಮೂದಿಸಬೇಕು ಎಂದು ಪ್ರತಿಪಾದಿಸುತ್ತಾ, ಇದರಿಂದಾದರೂ ಸಾಮಾನ್ಯ ಜನರಲ್ಲೂ ಓದಿನ ಆಸಕ್ತಿ ಹೆಚ್ಚಬಹುದು ಎಂದು ನಂಬಿದವರು ಇವರು.

ಡಾ.ವಸುಂಧರಾ ಭೂಪತಿಯವರು ಕನ್ನಡ ನಾಡು ಕಂಡ ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ವೈದ್ಯೆಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಎಲ್ಲಕಿಂತ ಹೆಚ್ಚಾಗಿ ಬರಹಗಾರ್ತಿಯಾಗಿ ಕನ್ನಡದ ಮನಸ್ಸುಗಳ ಮನೆ ಮಾತಾಗಿರುವರು. ಕತೆ, ಕವನ, ನಾಟಕ, ವೈದ್ಯಕೀಯ ಸಾಹಿತ್ಯ, ಅಂಕಣ ಬರಹ, ಗ್ರಂಥ ಸಂಪಾದನೆ ಹೀಗೆ ಇದುವರೆಗೆ 70 ಕೃತಿಗಳನ್ನು ಕನ್ನಡಮ್ಮನ ಮಡಿಲಿಗೆ ಅರ್ಪಿಸಿರುವರು. ಎಲ್ಲಕಿಂತ ಹೆಚ್ಚಾಗಿ ವೈದ್ಯಕೀಯ ಸಾಹಿತ್ಯವೇ ಇವರಿಗೆ ಹೆಸರು ತಂದು ಕೊಟ್ಟಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಇವರ ಕೆಲ ಪುಸ್ತಕಗಳು ಅನುವಾದಗೊಂಡಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಇವರ ಬರಹಗಳು ಪಠ್ಯವಾಗಿದೆ. ಇವರ ಪುಸ್ತಕಗಳು ಜನರಲ್ಲಿ ಆರೋಗ್ಯದ ಕುರಿತಂತೆ ಅರಿವು ತಂದುಕೊಡುತ್ತಿದೆ. ‘ವೈದ್ಯಲೋಕ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. “ಮನೆಯಂಗಳದಲಿ ಔಷಧಿವನ” “ಹೂವು ಮತ್ತು ಆರೋಗ್ಯ” “ಲೈಂಗಿಕತೆ ಮತ್ತು ಆಯುರ್ವೇದ” “ಮಹಿಳೆ ಮತ್ತು ಮೌಢ್ಯ” “ಜೀವಸೆಲೆ” “ಮನೆ ಔಷಧಿ” ಇವು ಇವರ ಜನಪ್ರಿಯ ಕೃತಿಗಳಾಗಿರುತ್ತದೆ. ಒಬ್ಬ ವ್ಯಕ್ತಿಯ ಬದುಕಲ್ಲಿ 70 ಪುಸ್ತಕಗಳು ಎಂದರೆ ನಿಜವಾಗಿಯೂ ದೊಡ್ಡ ಸಾಧನೆಯೆ. ಮುಂದಿನ ದಿನಗಳಲ್ಲಿ ಇವರ ಪ್ರಗತಿಪರ ಚಿಂತನೆಯ, ಜನಪರ ನಿಲುವಿನ ಮತ್ತು ಜನಸಾಮಾನ್ಯರ ಓದುಗರಿಗಾಗಿ ನೂರಾರು ಪುಸ್ತಕಗಳು ಬೆಳಕು ಕಾಣಲೆಂದು ಹಾರೈಸುವ.

ಡಾ. ವಸುಂಧರಾ ಭೂಪತಿಯವರು ಅನೇಕ ಸಾಹಿತ್ಯಿಕ, ಸಾಮಾಜಿಕ ಮತ್ತು ವೈದ್ಯಕೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದ್ದು ಗದ್ದಲವಿಲ್ಲದೇ ಜನಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುತ್ತಾರೆ. ಹೆಣ್ಣು ಭ್ರೂಣ ಹತ್ಯೆ ನಿಷೇಧ ಸಮಿತಿಯ ಸದಸ್ಯೆಯಾಗಿ, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಕರ್ನಾಟಕ ಸರಕಾರದ ಉನ್ನತ ಮಟ್ಟದ ತಜ್ಞರ ಸಮಿತಿಯ ಸದಸ್ಯೆಯಾಗಿ, ಸತತ ಎರಡು ಅವಧಿಗೆ ಚುನಾಯಿತರಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಮತ್ತು ರಾಜೀವ ಗಾಂಧಿ ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರ ಜ್ಞಾನ ಅಕಾಡೆಮಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಜನಪ್ರಿಯತೆ ಗಳಿಸಿರುತ್ತಾರೆ.

ಮನುಷ್ಯತ್ವ ಮತ್ತು ಮಾನವೀಯ ಸಂಬಂಧವನ್ನು ನಂಬಿರುವ ಇವರು ಈ ಕುರಿತಾಗಿಯೂ ಕ್ರಿಯಾಶೀಲರಾಗಿರುವರು. 2012 ರಲ್ಲಿ ಜಪಾನಿನ ಹಿರೋಷಿಮಾದಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಇವರು ಪ್ರತಿನಿಧಿಸಿದ್ದರು. ಬಹ್ರೇನ್ ನಲ್ಲಿ ಜರುಗಿದ ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ, ಅಬುಧಾಬಿಯಲ್ಲಿ ಜರುಗಿದ 15 ನೆಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ಅಮೇರಿಕೆಯ ನ್ಯೂಜೆರ್ಸಿಯಲ್ಲಿಯ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಿ ಹೊರ ದೇಶಗಳಲ್ಲಿಯೂ ಕನ್ನಡದ ಕಂಪನ್ನು ಇಂಪಾಗಿಸಿದವರು ಇವರು.

ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವದು ಮತ್ತು ಆ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿ ಪ್ರಸಾರಕ್ಕಾಗಿ ಅನೇಕ ಹೊಸ ಯೋಜನೆಗಳನ್ನು ಕೈಗೊಂಡಿದ್ದು ಬದುಕಿನ ಮರೆಯಲಾರದ ಕ್ಷಣ ಎನ್ನುವಾಗ ಇವರಲ್ಲಿ ಧನ್ಯತಾ ಭಾವ ಎದ್ದು ಕಾಣುವುದು. ಪ್ರಕಾಶಕರ ಪ್ರಥಮ ಸಮ್ಮೇಳನ, ಮಹಿಳೆಯರಿಗಾಗಿ ‘ಲೋಕ ಕಾಣದ ಲೋಕ’ ಆಡಿಯೋ ಮತ್ತು ಆನ್‌ಲೈನ್ ಪುಸ್ತಕ, ‘ಸಿರಿಗನ್ನಡ ಮಹಿಳೆ’ ‘ಮನೆಮನೆಗೆ ಪುಸ್ತಕ’ ಇವು ಇವರ ಈ ಅಧಿಕಾರಾವಧಿಯ ಪ್ರಮುಖ ಕನ್ನಡ ಚಟುವಟಿಕೆಗಳಲ್ಲಿ ಅತೀ ಮುಖ್ಯವಾದುದು. ಮನೆ-ಮನೆಯ ಪುಸ್ತಕವಂತೂ ಅತೀ ಯಶಸ್ವಿ ಕಂಡ ಕಾರ್ಯಕ್ರಮ. ಇದರ 8 ನೆಯ ಕಾರ್ಯಕ್ರಮ “ನಾಗಸುಧೆ ಜಗಲಿ”ಯಲ್ಲಿ ಮತ್ತು 25 ನೇ ಕಾರ್ಯಕ್ರಮ ಅಮೇರಿಕೆಯ ನ್ಯೂಜರ್ಸಿಯಲ್ಲಿ ನಡೆದುದನ್ನು ನಾನೇ ಬೆರಗಿನಿಂದ ಕಂಡು ಪುಳಕಿತನಾಗಿದ್ದೇನೆ. ವಿಜ್ಞಾನ ಮುಂದುವರೆದು ‘ಈ’ ಪುಸ್ತಕ ಜನರ ಮನಸ್ಸನ್ನು ಕ್ರಮೇಣ ಆಕ್ರಮಿಸುತ್ತಿದ್ದರೂ, ಮುದ್ರಿತ ಪುಸ್ತಕವೇ ಆಪ್ತ; ಕಣ್ಣಿಗೂ ಹಿತ ಮತ್ತು ಪ್ರತೀ ಪುಟದಲ್ಲೂ ಅಕ್ಷರದೊಂದಿಗೆ ಹೊಸ ಹಾಳೆಯ ಘಮ ಇರುತ್ತದೆ ಎನ್ನುವ ಇವರು ಸಂಗೀತ ಮತ್ತು ನಾಟಕದ ಮೂಲಕ ಮಾನಸಿಕ ಕಾಯಲೆಗಳನ್ನೂ ಗುಣಪಡಿಸಬಹುದು ಎಂದು ನಂಬಿದವರು.

ತೋರಣಗಲ್ಲಿನಲ್ಲಿ ವೈದ್ಯಕೀಯ ವೃತ್ತಿಯ ಸಂದರ್ಭದಲ್ಲಿ ಜನಸಾಮಾನ್ಯರು ಅನುಭವಿಸುವ ಬಡತನವನ್ನು ಕಣ್ಣಾರೆ ಕಂಡು ಮರುಗಿದರು. ಪೌಷ್ಟಿಕ ಆಹಾರ ಮತ್ತು ಹಣ್ಣು ಹಂಪಲ ತಿನ್ನಲು ಸಲಹೆ ನೀಡಿದಾಗ “ಹಣ್ಣೆಂದರೆ ಹುಣಸೆ ಹಣ್ಣಷ್ಟೇ ಗೊತ್ತು ನಮಗೆ” ಎಂಬ ಮಾತಿನಿಂದ ಜನರು ಅನುಭವಿಸುತ್ತಿರುವ ‘ನೋವು’ ಮನಗಂಡು ಅಂದೇ ಅಂಥವರ ಸಹಾಯಕ್ಕೆ ತಮ್ಮನ್ನು ಅರ್ಪಿಸಿಕೊಂಡ ಕಥೆಯನ್ನು ಇಂದಿಗೂ ಸ್ವಾರಸ್ಯಕರವಾಗಿ ಮನನೊಂದು ಹೇಳಿಕೊಳ್ಳುವಾಗ ‘ಬಡ ಭಾರತ’ದ ನೆನಪಾಗುವದು. ನುಗ್ಗೇ ಸೊಪ್ಪಿನ ಮಹತ್ವವನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ, ಊರಲ್ಲೊಂದು ಬೇವಿನ ಗಿಡವಿದ್ದರೆ ಅದೇ ಹಳ್ಳಿಯ ಆಸ್ಪತ್ರೆ ಎನ್ನುವ ಅವರ ಮಾತಿನಲ್ಲಿ ಎಷ್ಟೊಂದು ಸತ್ಯಾಂಶ ತುಂಬಿದೆ!

ಇವರ ಸಾಮಾಜಿಕ, ಸಾಹಿತ್ಯಿಕ, ವೈದ್ಯಕೀಯ ಮತ್ತು ಸಂಘಟನಾ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ, ಪರಿಶೀಲಿಸಿ ‘ಯುನಿಸೆಫ್ ಪತ್ರಿಕೋದ್ಯಮ’ ಪ್ರಶಸ್ತಿ, ‘ಶ್ರೇಷ್ಠ ಲೇಖಕಿ’ ಪುರಸ್ಕಾರ, ‘ಅಕಲಂಕ’ ಪ್ರಶಸ್ತಿ, ‘ಶ್ರೇಷ್ಠ ವಿಜ್ಞಾನ ಸಂವಹನಕಾರ’ ಪ್ರಶಸ್ತಿ, ‘ರಾಜ್ಯ ಪರಿಸರ ಪ್ರಶಸ್ತಿ’ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ’, ‘ವೈದ್ಯ ಸಾಹಿತ್ಯ ಪ್ರಶಸ್ತಿ’, ‘ವಿಶ್ವೇಶ್ವರಯ್ಯ ಪ್ರಶಸ್ತಿ’, ‘ಕೆಂಪೇಗೌಡ ಪ್ರಶಸ್ತಿ’, ‘ಸೀತಾಸುತ ಸಾಹಿತ್ಯ ಪ್ರಶಸ್ತಿ’ಗಳಂತಹ ಎಷ್ಟೋ ಮನ ತುಂಬಿದ ಸನ್ಮಾನಗಳು ಇವರಿಗೆ ಸಂದಿದೆ.

ಅಕ್ಷರ ಮತ್ತು ಆರೋಗ್ಯದ ಕುರಿತು ಮಾತನಾಡುತ್ತಾ “ನಮ್ಮ ದೇಶ ಬಹು ಸಂಸ್ಕೃತಿಯನ್ನೊಳಗೊಂಡಿದ್ದಾಗಿದ್ದು ಬಹಳ ಕಾಲದವರೆಗೆ ಇಲ್ಲಿಯ ಬಹು ಸಮಾಜಗಳು ಅಕ್ಷರದಿಂದ ವಂಚಿತರಾಗಿದ್ದವು. ಈ ಸಮುದಾಯಗಳು ಶಿಕ್ಷಣಕ್ಕೆ ತೆರೆದುಕೊಂಡದ್ದೇ ಕಳೆದ ಶತಮಾನದ ಪ್ರಾರಂಭದ ಘಟ್ಟದಲ್ಲಿ. ಮೌಢ್ಯ, ಕಂದಾಚಾರ ಹೀಗೆ ಇತ್ಯಾದಿ ಹಲವು ಬಗೆಯ ಆಚರಣೆಗಳಿಂದ ಇಂದಿಗೂ ಈ ಸಮುದಾಯಗಳು ಹೊರಬಂದಿಲ್ಲ. ಮುಂದುವರಿದ ಸಮಾಜಗಳಲ್ಲೂ ಈ ಬಗೆಯ ಮೌಢ್ಯಾಚರಣೆಗಳು ಸಾಮಾನ್ಯವೆಂಬಂತೆ ಆಚರಣೆಯಲ್ಲಿದೆ. ಈ ಸಮುದಾಯಗಳು ಶಿಕ್ಷಣಕ್ಕೆ ತೆರೆದುಕೊಂಡು ಶತಮಾನಗಳು ಕಳೆದರೂ ಅವರ ಆಲೋಚನೆ, ಚಿಂತನೆಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಯದಿರುವದು ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವನ್ನು ತೋರುತ್ತಿದೆ. ಹೀಗಾಗಿ ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ ಮತ್ತು ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ ಹಾಗೂ ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವದು ಕಂಡುಬರುತ್ತದೆ” ಎನ್ನುತ್ತಾರೆ. ಮನುಷ್ಯನ ಜೀವನದಲ್ಲಿ ಆರೋಗ್ಯವೇ ಭಾಗ್ಯ ಎಂಬ ಯುಕ್ತಿಯನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ. ಆದರೆ ಆ ಭಾಗ್ಯ ದುಬಾರಿಯಾಗದಿರಲು ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಿದೆ. ಶುಚಿತ್ವ, ಆಹಾರ ಸೇವನೆಯಲ್ಲಿ ನಿಯಮಿತ ಪದ್ಧತಿ. ಸ್ವಚ್ಛತೆಯ ಎಚ್ಚರ, ಶುದ್ಧ ನೀರಿನ ಬಳಕೆ ಅತೀ ಅವಶ್ಯಕ” ಎಂದಿರುವರು. ಇದರಿಂದಾಗಿಯೇ ಡಾ. ವಸುಂಧರಾ ಭೂಪತಿ ಎಂದರೆ “ಔಷಧಿಗಳೊಂದಿಗೆ ಅಕ್ಷರದ ಚುಚ್ಚುಮದ್ದನ್ನೂ ನೀಡುವ ವಸುಂಧರೆ” ಎಂಬ ಮಾತು ಜನಜನಿತವಾಗಿದೆ.

ಡಾ. ವಸುಂಧರಾ ಭೂಪತಿಯವರ ವೃತ್ತಿ-ಪ್ರವೃತ್ತಿಯಲ್ಲಿಯ ಸಮನ್ವಯತೆಯಂತೇ ಬದುಕು-ಬರಹದಲ್ಲಿಯೂ ಸಹ. ಅಂದಿನ ವಿಧಾನ ಸಭೆಯ ಸದಸ್ಯರಾಗಿದ್ದ ಪ್ರಗತಿಪರ ವಿಚಾರಧಾರೆಯ, ಮನುಷ್ಯ ಪ್ರೀತಿಯ ಭೂಪತಿಯವರೊಡನೆ ಇವರದು ಪ್ರೇಮ ವಿವಾಹ. “ಓಲ್ಗಾ ಗಂಗಾ” ಪುಸ್ತಕವೇ ನಮ್ಮಿಬ್ಬರನ್ನೂ ಜೊತೆಯಾಗಿಸಿತು ಎನ್ನುವಾಗ ಇಂದಿಗೂ ಇವರು ಶೋಡಸಿಯಾಗಿ ನಾಚಿ ನೀರಾಗುವರು. ಭೂಪತಿಯವರ ಆಕಸ್ಮಿಕ ಅಗಲಿಕೆಯಿಂದ ಈಗೀಗ ಚೇತರಿಸಿಕೊಳ್ಳುತ್ತಿರುವ ಡಾ. ವಸುಂಧರಾ ಅವರು ಭೂಪತಿಯವರ ಎಲ್ಲಾ ಕನಸುಗಳನ್ನೂ “ಯು. ಭೂಪತಿ ಸ್ಮಾರಕ ಟ್ರಸ್ಟ್”ನ ಮೂಲಕ ನೆರವೇರಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಸಂಗೀತ ಮತ್ತು ನಾಟಕ ಕ್ಷೇತ್ರದಲಿ ಹೆಸರು ಮಾಡಿದ ಅಭಿಮನ್ಯು ಮತ್ತು ವಕೀಲರಾದ ಸಿದ್ಧಾರ್ಥ್ ಎಂಬೆರಡು ಮಕ್ಕಳು ಮತ್ತು ಸೊಸೆಯಂದಿರಾದ ದಿವ್ಯಾ ಮತ್ತು ಅನುಪಮಾರವರೊಂದಿಗೆ ತುಂಬು ಸಂಸಾರ ಮತ್ತು “ಸಿದ್ಧಾರ್ಥ ಆಯುರ್ವೇದಿಕ್ ಕ್ಲಿನಿಕ್” ನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ವಸುಂಧರಾ ಭೂಪತಿಯವರ ಕನಸುಗಳೆಲ್ಲಾ ನೆರವೇರಲಿ ಎಂದು ಹಾರೈಸಿ “ನಾಗಸುಧೆ”ಯಿಂದ ಅವರನ್ನು ಅಭಿನಂದಿಸುವೆನು.

ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....