Homeಮುಖಪುಟನಾಳೆ ವಿಶ್ವ ಕುಂದಾಪುರ ದಿನಾಚರಣೆ: ಕುಂದಗನ್ನಡ ಒಂದು ಹರ್‌ಕಟ್ ಭಾಷಿ ಅಲ್ಲ

ನಾಳೆ ವಿಶ್ವ ಕುಂದಾಪುರ ದಿನಾಚರಣೆ: ಕುಂದಗನ್ನಡ ಒಂದು ಹರ್‌ಕಟ್ ಭಾಷಿ ಅಲ್ಲ

ಆಸಾಡಿ ಒಡ್ರ್ ಹೊಡೆಯುವ ಈ ಕಾಲ ಊಳಿಗಮಾನ್ಯ ಪಾಳೇಗಾರಿ ವ್ಯವಸ್ಥೆಯ ಲೋಪಗಳನ್ನೂ, ನಿಸರ್ಗದ ಸವಾಲುಗಳನ್ನೂ ತೆರೆದು ತೋರುವ ಕಾಲವೂ ಹೌದು...

- Advertisement -
- Advertisement -

ಭಾಷೆ ಎಂಬುದು ಯಾವುದೇ ಸಮುದಾಯ ಇಲ್ಲವೇ ನೆಲದ ಅಸ್ಮಿತೆಯ ಭಾಗ. ಭಾಷೆಯನ್ನು ಬಿಟ್ಟು ನಮ್ಮನ್ನು ನಾವು ಗುರುತಿಸಿಕೊಳ್ಳಲಾಗದು. ಅದಕ್ಕೆ ಕಾರಣ ಭಾಷೆ ಕೇವಲ ವ್ಯಾವಹಾರಿಕ ಮಾಧ್ಯಮ ಅಲ್ಲ. ಅದು ನಮ್ಮ,ಕಸುಬು, ಕೌಶಲ, ನಂಬಿಕೆಗಳಿಂದ ಹದಗೊಳ್ಳುವ ಬದುಕಿನ ನಡುವಿಂದ ಸಾಧ್ಯವಾದ ಅನುಭವ, ತಿಳುವಳಿಕೆಯನ್ನು ಜೀವಂತವಾಗಿಸುವ, ಸಾಗಿಸುವ ಜೀವಂತರೂಪ. ಭಾಷೆ ಎಂಬುದು ನಮ್ಮಿಂದ ನಾವು ಜೀವಂತಗೊಳ್ಳುವ ಬಗೆಯೂ ಹೌದು. ಭಾರತವೆಂಬುದು ಭಾಷೆಗಳ ನೆಲ. ಇದು ಸುಮಾರು 19,560 ಬೇರೆ ಬೇರೆ ಭಾಷೆಗಳಿರುವ ಬಹುಭಾಷೆಗಳ ನೆಲ. ಅಂದರೆ ಅಷ್ಟೊಂದು ಅಸ್ಮಿತೆಗಳ ಬಹುರೂಪವೇ ಈ ನೆಲದ ಸಹಜಚಹರೆ. ಆದರೆ ಪ್ರಜಾಸತ್ತೆಯನ್ನು ಬದುಕುತ್ತಿದ್ದೇವೆ ಎಂದು ಹೇಳಿಕೊಳ್ಳುವ ದೇಶದಲ್ಲಿ ಈ ಎಲ್ಲ ಚಹರೆಗಳಿಗೂ ಸಮಾನ ಅವಕಾಶ, ಮಾನ್ಯತೆ ಇದೆಯೇ? ಇಲ್ಲ. ಇವುಗಳಲ್ಲಿ 22 ಭಾಷೆಗಳಷ್ಟೇ ಸಾಂವಿಧಾನಿಕ ಸ್ಥಾನಮಾನವಾದ ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಇದರ ಜೊತೆಗೆ ಕೆಲವು ಭಾಷೆ ಎನಿಸಿದರೆ, ಹಲವನ್ನು ಉಪಭಾಷೆಯೆಂದು ಗುರುತಿಸಿಕೊಂಡು ಬರಲಾಗುತ್ತಿದೆ. ಈ ಉಪಭಾಷಾ ಪಟ್ಟವೆಂಬುದು ಅಮುಖ್ಯ, ಅಪ್ರಧಾನ ಎಂಬ ದನಿಯಲ್ಲಿ ಅಂಚಿಗೆ ಸರಿಸುವ ನಡೆಯೂ ಹೌದು. ಈ ಎಲ್ಲವೂ ಅಧಿಕಾರದ ಆವರಣದಲ್ಲಿ ನಡೆಯುವ ಸರಿಸುವಿಕೆ.

ಭಾಷೆ ಮತ್ತು ಅದನ್ನು ಬದುಕುವ ಜನ ಈ ಅಧಿಕಾರದ ಆಯ್ಕೆ ನಿರಾಕರಣೆಯ ಹಂಗಿಲ್ಲದೆ ತಮ್ಮ ತಮ್ಮ ಭಾಷೆಗಳನ್ನು ಬದುಕುತ್ತಿರುವುದು ನಿಜ. ಆದರೂ ಅಧಿಕಾರದ ಪರಿಣಾಮಗಳು ಸಮುದಾಯ ಮತ್ತು ಭಾಷೆ ಎರಡನ್ನೂ ಅಳಿಸಿ ಹಾಕುತ್ತಿರುವ ಕಾಲಮಾನದ ಅರಿವು ನಮಗಿದೆ. ಪ್ರತಿ ದಿನವೂ ಪ್ರಪಂಚದ ಭಾಷೆಗಳಲ್ಲಿ ಸಾವಿನ ಸೂತಕ ನಡೆಯುತ್ತಲೇ ಇದೆ ಎನ್ನಲಾಗಿದೆ. ಆದ್ದರಿಂದ ಭಾಷೆ ಅವಿನಾಶಿ ಅಲ್ಲ. ಅದಕ್ಕೆ ಸಾವಿನ, ನಿರ್ನಾಮವಾಗುವ ಆತಂಕವೂ ಇದೆ. ಆದರೆ ಇದು ಭಾಷೆಯ ಅತಂಕವಲ್ಲ, ಭಾಷಿಕರ ಆತಂಕ. ಭಾಷೆ ಸಾಯುವುದು ಅಂದರೆ ಭಾಷೆಯ ಕ್ರಿಯಾಶೀಲ ಆವರಣಗಳ ಕಣ್ಮರೆ, ಅದರ ಬಳಕೆಯ ಸ್ವರೂಪದ ಕುಗ್ಗುವಿಕೆ. ಹೀಗಾಗದೆ ಭಾಷೆ ಉಳಿಯಬೇಕಾದರೆ ಅದು ಜೀವಂತಗೊಳ್ಳುವ ಕ್ರಿಯಾತ್ಮಕ ಆವರಣಗಳಾದ ಕಸುಬು, ಕೌಶಲ್ಯ, ಆಚರಣೆ, ಅನುಸರಣೆಗಳು ಸಚೇತನಗೊಳ್ಳಬೇಕಾಗುತ್ತದೆ. ಇದಕ್ಕೆ ಭಾಷಿಕರ ಎಚ್ಚರ ಮತ್ತು ಸಂಘಟನೆಯ ಜೊತೆಗೆ ಆ ಭಾಷಿಕರ ಕಸುಬು, ಕೌಶಲ್ಯಗಳು ಹೊಸಕಾಲದ ಸವಾಲಿನಲ್ಲೂ ಬದುಕುಳಿಯುವ ಅವಕಾಶ ಸಾಧ್ಯವಾಗಬೇಕಿದೆ. ಹಾಗಾಗಿ ಭಾಷೆಯೊಂದು ಅದನ್ನು ಆಡುವವರಿಲ್ಲದ ಕಾರಣಕ್ಕಷ್ಟೇ ಸಾಯುವುದಲ್ಲ, ಅದನ್ನು ಬದುಕುವ ಜನ ಆ ಭಾಷಿಕ ಬದುಕನ್ನು ಬದುಕದೆಯೂ ಅದು ಸೊರಗಿ ಕರಗಬಹುದು. ಈ ಬದುಕು ಬದುಕುವುದಕ್ಕೆ ಬೇಕಾದ ಆವರಣವನ್ನು ಒದಗಿಸುವುದರಲ್ಲಿ ಆಳುವವರ, ಸರ್ಕಾರದ ಗಮನ ಸೆಳೆಯುವ ಅಗತ್ಯ ಖಂಡಿತಾ ಇದೆ. ಆದರೆ ಇದು ಹೇಗಾಗಬೇಕು? ಭಾಷೆಯ ಕುರಿತಾದ ಅಭಿಮಾನಕ್ಕೆ ಭಾಷೆಯ ಶ್ರೀಮಂತಿಕೆಯನ್ನು ಗುರುತಿಸುವುದಕ್ಕೆ ಇರುವ ದಾರಿಗಳು ಯಾವುವು? ಕೆಲವು ಭಾಷೆಗಳಿಗೆ ಸಂಬಂಧಿಸಿದಂತೆ ಅದು ಹೇಗೆ ನಡೆಯುತ್ತಿದೆ? ಕುಂದಗನ್ನಡಕ್ಕೆ ಸಂಬಂಧಿಸಿದಂತೆ ಸದ್ಯ ನಡೆಯುತ್ತಿರುವ ಚರ್ಚೆ, ಅದರ ಸೌಂದರ್ಯದ ಕುರಿತಾಗಿ ನಡೆಯುತ್ತಿರುವ ಪ್ರಸಾರ, ಪ್ರಚಾರಗಳು ಯಾವ ಬಗೆಯಲ್ಲಿವೆ? ಕುಂದಗನ್ನಡ ಅಂದರೆ ಏನು? ಅದು ಹಾಸ್ಯದ ಸರಕೇ?

ಕುಂದಗನ್ನಡದ ನೆಲ ಬಹುರೂಪಗಳ ಸಂಧಿಭೂಮಿ. ಇದು ತುಳುವಿನ ಸೆರಗು, ಕನ್ನಡ ಸೀಮೆಯ ಎಳೆಗಳ ಜೊತೆಗೆ ಬೇರೆ ಬೇರೆ ಹೊಕ್ಕುಬಳಕೆಗಳಿಗೆ ಅಂಟಿಕೊಂಡ ವಿಶಿಷ್ಟ ಭಾಷಾಸೀಮೆ. ʼಅಕ್ಕಚ್ಚಿನ ಕೊಣ್ಣಿʼಯ ಹಾಗೆ ʼಕಡಲ ಕರೆಯಿಂದ ಗಟ್ಟದ ಬರೆʼವರೆಗೆ ಕರಾವಳಿ, ಅರಾವಳಿಗಳು ಬೆರಕೆಯಾದ ನೆಲ. ಇಲ್ಲಿನ ಭಾಷೆ ಇಂದಿಗೆ ಕುಂದಾಪುರ ಎನ್ನುವ ಆಳುವ ಕೇಂದ್ರದ ಹೆಸರಲ್ಲಿ ಕುಂದಗನ್ನಡ ಅಂತಲೇ ಗುರುತಿಸಲ್ಪಡುತ್ತಿದೆ. ಇದನ್ನು ಕೋಟ ಕನ್ನಡ ಎಂದೂ ಕರೆದುದಿದೆ. ಆದರೆ ಈ ಗುರುತುಗಳು ಸರಿಯೋ ತಪ್ಪೋ ಅಂತೂ ಬಳಕೆಯಲ್ಲಿದೆ. ಆದರೆ ಹೀಗೆ ಗುರುತಿಸಲಾಗುವ ಕನ್ನಡಪ್ರದೇಶ ಕುಂದಾಪುರ ಎನ್ನುವ ಕಂದಾಯ ತಾಲೂಕು ಅಲ್ಲ. ಇದರ ವ್ಯಾಪ್ತಿ ಅದಕ್ಕಿಂತ ಹೆಚ್ಚು. ಇದು ಬೌಗೋಳಿಕವಾಗಿ ನಾವು ಗಮನಿಸಬೇಕಾದುದು. ಇದನ್ನು ಎದುರಾಗಿ ಭಾಷೆಯನ್ನು ಉಳಿಸಿಕೊಳ್ಳುವ ಬೇರೆ ಬೇರೆ ಯತ್ನಗಳು ಇವತ್ತು ಜೀವಂತಗೊಳ್ಳಬೇಕಿದೆ.

ಜನಬದುಕಿನ ಸ್ವರೂಪಗಳು ಚಲನೆಗೆ ಒಳಗಾಗುತ್ತಲೇ ಪ್ರತೀ ಭಾಷೆಯೂ ಬದಲಾವಣೆಗೆ ಒಳಗಾಗುತ್ತದೆ. ಯಾವುದೂ ಬದಲಾಗದೇ ಉಳಿಯುತ್ತದೆ ಎಂದಾಗಲೀ, ಉಳಿಯಬೇಕು ಎಂದಾಗಲೀ ಆಲೋಚಿಸುವುದು ದಡ್ಡತನ ಮತ್ತು ಮೂಲಭೂತವಾದಿತನ ಎರಡೂ ಆಗುತ್ತದೆ. ಆದರೆ ಕುಂದಾಪುರ ಹೇಗೆ ಬದಲಾಗುತ್ತಿದೆ? ಇಲ್ಲಿನ ಪದಸಂಪತ್ತು ಅವುಗಳು ಆಗುಗೊಳ್ಳುತ್ತಿದ್ದ ಆವರಣಗಳ ಜೊತೆಗೇ ಖಾಲಿಯಾಗಿ ಕರಗುತ್ತಿವೆ ನಿಜ ಆದರೆ ಖಾಲಿಯಾಗುತ್ತಿರುವ ಅವಕಾಶವನ್ನು ಯಾವುದು ತುಂಬಿಕೊಳ್ಳುತ್ತಿದೆ? ಹಾಗೆ ತುಂಬಿಕೊಳ್ಳುತ್ತಿರುವ ಹೊಸ ಸಂಗತಿಗಳು ಯಾರ ನೆಲೆಗಳನ್ನು ಹೇಗೆ ಅಳಿಸಿ ಹಾಕುತ್ತಿವೆ? ನಾವು ಕಳೆದುಕೊಳ್ಳುತ್ತಿರುವುದು ಏನನ್ನು? ಈ ಕುರಿತು ನಾವು ತಾಳುತ್ತಿರುವ ಎಚ್ಚರ ಯಾವ ಬಗೆಯಲ್ಲಿದೆ? ನಾವು ನಿಜಕ್ಕೂ ಏನನ್ನು ಮರೆಯುತ್ತಿದ್ದೇವೆ? ಕುಂದಗನ್ನಡವನ್ನು ನಾವು ಎಲ್ಲಿ ಹುಡುಕಿಕೊಳ್ಳುತ್ತಿದ್ದೇವೆ? ಯಾರು ನಮ್ಮನ್ನು ಮುನ್ನಡೆಸುತ್ತಿದ್ದಾರೆ? ಆ ಹಿತಾಸಕ್ತಿಗಳು ಯಾವುವು? ನಿಜಕ್ಕೂ ನಾವು ಕುಂದಗನ್ನಡವನ್ನು ಸಶಕ್ತವಾಗಿಸಲು ಮಾಡಬೇಕಾದುದೇನು? ಈ ಕುರಿತು ನಾವು ಅಗತ್ಯವಾಗಿ ಚಿಂತಿಸಬೇಕಿದೆ. ಇದು ಭಾಷೆ ಅಲ್ಲ ಬದುಕು ಎಂಬುದು ಅರ್ಥವಾಗಬೇಕಿದೆ. ಹಾಗೆಯೇ ಯಾರ ಬದುಕು? ಈ ಮೂಲಭೂತ ಪ್ರಶ್ನೆಗೂ ಉತ್ತರವನ್ನು ಕಂಡುಕೊಳ್ಳಬೇಕಿದೆ. ಯಾಕೆಂದರೆ ʼನಿರ್ವಸಾಹತೀಕರಣʼಗೊಳ್ಳದೆ ಕುಂದಗನ್ನಡವೋ, ಯಾವುದೇ ಒಂದು ಸ್ಥಳೀಯ ಭಾಷಾರೂಪವೋ ತನ್ನ ನಿಜವನ್ನು ಕಾಣಲಾರದು. ಹಾಗಾಗಿ ಭಾಷೆಯನ್ನು ಅಪಹಾಸ್ಯದ ಸರಕಾಗಿ ಕಾಣದೆ, ಅಗ್ಗದ ಜನಪ್ರಿಯತೆಯ ಹಪಾಹಪಿಗೆ ಬೀಳದೆ ಗಂಭೀರವಾಗಿಯೇ ಯೋಚಿಸಬೇಕಾಗಿದೆ. ಕುಂದಗನ್ನಡವನ್ನು ಅದರ ಒಳಗಿಂದಲೇ ನೋಡಬೇಕಿದೆ. ಅದು ಕ್ಷಣಿಕ ಸಂಭ್ರಮವೋ, ಇನ್ನಾರಿಗೋ ಅರ್ಥವಾಗದ ಒಂದು ಪದ ಇರುವ ರೋಮಾಂಚನವೋ ಅಷ್ಟೇ ಆಗಬಾರದು. ಈ ಯೋಚನೆ ಕುಂಬಾರರ ಆವಿ, ಕಮ್ಮಾರರ ಕುಲುಮೆ, ಹೂಂಟಿಯ ಹೋಳಿಗಳಿಂದಲೇ ಹುಟ್ಟಿ ಬರಬೇಕಿದೆ. ಯಾಕೆಂದರೆ ಚನ್ನಾಗಿ ತಿಂದುಂಡು ವೀಳ್ಯ ಮೆಲ್ಲುತ್ತಾ ಪುರುಸೊತ್ತಿಗೆ ಆಡುವ ʼಹರಕಟ್ ಭಾಷೆʼ ಕುಂದಗನ್ನಡ ಅಲ್ಲ.

ನನಗೆ ಈ ಪ್ರಶ್ನೆ ಬಹಳ ದಿನದಿಂದ ಕಾಡುತ್ತಲೇ ಇದೆ. ಈ ದಿಸೆಯಲ್ಲಿ ಒಂದಿಷ್ಟು ಪ್ರಯತ್ನಗಳನ್ನೂ ನಾನು ಮಾಡಿದ್ದಿದೆ. ಹಾಗಾಗಿ ನನಗೆ ರಾಷ್ಟ್ರೀಯ ಹೆದ್ದಾರಿ, ಅಂಗಡಿಯ ಚಿಂತಾಲಿನಲ್ಲಿ, ನಿಮಿತ್ತದ ಕವಡೆಯಲ್ಲಿ ಎಂದೂ ಕುಂದಗನ್ನಡ ಕಾಣಿಸದು. ಉದಾಹರಣೆಗೆ ಉಗ್ರ್ಬೆಪ್ಪ್, ಚೌಳ್ಚಪ್ಪಿ, ಬಿಸಿ, ಕೊದಿ, ಕೊದಿಗೆಂಡ – ಅನುಭವದ ಆಳದಿಂದ ಹುಟ್ಟಿದ ಇದನ್ನು ಯಾವ ತಕ್ಕಡಿ ತೂಗೀತು? ಯಾವ ಕವಡೆ ವಿವರಿಸೀತು? ಆದ್ದರಿಂದ ಕುಂದಗನ್ನಡದ ಹುಡುಗರು ಬತ್ತಿ ಹೋಗುತ್ತಿರುವ ಬದುಕಿನಲ್ಲಿ ಕಳಚಿಹೋಗುತ್ತಿರುವ ನಮ್ಮದೇ ಹಿರೀಕರನ್ನು ಹತ್ತಿರದಿಂದ ಕಂಡು ಕಲಿಯಬೇಕಾದುದು ಸಾಕಷ್ಟಿದೆ. ಹೌದು ಈ ಭಾಷಿಕರ ಕಸುಬು ಕೌಶಲ್ಯದ ಆವರಣಗಳು ಹಳೆಯರೂಪದಲ್ಲಿ ಖಂಡಿತಾ ಉಳಿಯಲಾರವು. ಆದರೆ ನಮ್ಮ ಹಿರೀಕರ ತಲೆಮಾರು ಕಟ್ಟಿ ಬೆಳೆಸಿದ ಭಾಷೆ ಆ ಆವರಣವನ್ನು ದಾಟಿಯೂ ನಮ್ಮ ಪಾಲಿಗೆ ವಿವೇಕವಾಗಿ, ನಮ್ಮ ಚರಿತ್ರೆಯನ್ನು ನೆನಪಿಸುವ ಸರಕಾಗಿ ಒದಗಿಬರುವ ಮೂಲಕ ನಮ್ಮೊಳಗಿನ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಬಲ್ಲದು. ದೇವರು, ಧರ್ಮ, ಮತ-ಪಂಥಗಳ ಕುರಿತಾಗಿ ಇಂದು ವಿಜೃಂಭಿಸುತ್ತಿರುವ ನಮ್ಮ ಕರುಳಿನ ಜೊತೆಗೆ ನಂಟಿಲ್ಲದ ಅನೇಕ ಸಂಕಥನಗಳನ್ನು ಕಳಚಿಟ್ಟು ನಾವು ನಾವಾಗಲು ನೆರವಾದೀತು. ತಾಯಿಮೂಲದ ಬಳಿಯ ಬಗೆಗೆ, ತಾಯಿಮೂಲದ ದೈವದ ಬಗೆಗೆ, ರಸ ಇಲ್ಲವೇ ನೀರನ್ನೇ ದೈವವಾಗಿ ಗುರುತಿಸುವ ರಸಪರಂಪರೆಯ ಬಗೆಗೆ ನಮ್ಮ ತಿಳುವಳಿಕೆ ಗಟ್ಟಿಯಾಗಲು ಸಾಧ್ಯವಾದೀತು. ತುಂಬಿದ ತಂಬಿಗೆ, ಎದ್ದುನಿಂತ ಹುತ್ತ, ಹಾಲು ಬರುವ ಮರಗಳು ನಮಗೆ ಯಾಕೆ ಪವಿತ್ರವಾದವು ಎಂಬುದರ ಎಳೆಗಳನ್ನು ಹುಡುಕಿಕೊಳ್ಳಲು ಪ್ರೇರಣೆಯಾದೀತು. ಸ್ವರ್ಗ-ನರಕಗಳ ಗೋಜಿಲ್ಲದೆ ಮಾತಿನ ಕಿಲುಬನ್ನೂ ಕಳೆದುಕೊಂಡು ಶುದ್ಧವಾಗಿ ನಾವು, ನಮ್ಮ ಹಿರೀಕರು ಹೋಗಿ ಸೇರಬಹುದಾದುದು ನಮ್ಮದೇ ದೈವದ ಮನೆಗಳಿಗೆ. ಹೀಗೆ ಸೇರುವಲ್ಲಿ ಅಗತ್ಯ ಇರುವುದು ಹುಟ್ಟಿದ್ದಕ್ಕೆ ಒಂದು ಮದಿ ಸತ್ತದ್ದಕ್ಕೆ ಒಂದು ಬೊಜ್ಜ ಎನ್ನುವ ಎರಡೇ ಸಂಸ್ಕಾರಗಳು. ಹಾಗಿದ್ದರೆ ನಮ್ಮ ಈ ಲೋಕಮೀಮಾಂಸೆ ಮುಂದಿಡುವ ಮೌಲ್ಯ ಪರಿಭಾಷೆಯಲ್ಲಿ ಬದುಕು ಅಂದರೆ ಸಿಗುವ ವಿವರಣೆ ಯಾವ ಬಗೆಯದು ಎಂಬುದನ್ನು ಯೋಚಿಸಲು ಸಾಧ್ಯವಾದೀತು. ಇದಕ್ಕೆ ನಾವು ಭಾಷೆಯ ಮೇಲೆ ಬಂದು ಕುಳಿತ ಬಂದಳಕಗಳನ್ನು ಬದಿಗಿಟ್ಟು ಮಾವಿನ ಮರದ ಬೇರನ್ನೇ ಹುಡುಕಬೇಕು. ಅಗ್ಗದ ಅಗ್ರಗೊಂಯ್ಕ, ಗೆಂಟುಗೊಂಯ್ಕಗಳನ್ನಲ್ಲ.

ನಮ್ಮ ವರ್ತಮಾನ ಹೇಗಿದೆ ಎಂದರೆ ʼಇದ್ ಇರು ಪುರು ಇದ್ದ್ ಕಾಲ ಅಲ್ಲʼ ನಾವು ಹೊಳಿ ಹೊಂಯ್ಗಿ ಎಲ್ಲ ಬಾಚಿ ಬರಗಿ, ಗುಡ್ಡಿ ಎಲ್ಲ ಹಯ್ಡಿ, ಸೆಣ್ಣದ್ ಒಂದ್ ಮರನ್ ಮುಂಡೂ ಇಪ್ಪಕ್ ಬಿಡ್ದೆ ಬೇರೆಲ್ಲ ಹೈಯ್ಡಿ ಬೆಂಕಿ ಹಾಕಿತ್. ನಾಗನಬಲ್ಲಿ ತೆಗದ್ ಗೊಡ್ಡ್ ಗೋಪ್ರ್ ಮಾಡಿ, ಕೆರಿ, ಬಾಮಿ, ನೆಡಿಅಂಚ್ ಒಡಿಅಂಚ್ ಒಂದನ್ನೂ ಉಳ್ಸ್ದೆ ಗೆದ್ದಿ ಎಲ್ಲ ಹಡು ಹಾಕಿ, ನೇಲ್ ನೊಗ ಅಟ್ಟಕ್ ಹಾಕಿ, ಗೋರಿ, ಹಾರಿ , ಕೊಡ್ರಿ, ಕಾವು ಎಲ್ಲ ಬಿಟ್ಟ್ ಪ್ಯಾಂಟ್ ಹಾಕುಕ್ ಕಲ್ತದ್ದೇ ಹೊದ್ದ್ ಮುಲ್ಲಿ ಕೊಚ್ಚುದ್ ಅಂದ್ರ್ ಎಂತಾ ಅಂದೇಳಿ ಕೇಂಬಂಗಾಯ್ತ್. ಅಕ್ಕಿ ಕಡು ಕಲ್ಲ್ , ಬತ್ತತೊಳು ಒರ್ಲ್ ಒಣ್ಕಿ ಎಲ್ಲ ಒರ್ಲಿ ಹಿಡ್ದ್ ಮುಲ್ಲಿಗ್ ಸೇರಿದೊ. ಗೆದ್ದೆಗ್ ಹಳು ಬೆಳ್ಸಿ, ಹಪ್ಳ, ಉಪ್ಪಿನ್ ಕಾಯಿ ಎಲ್ಲದನ್ನೂ ಬಿಟ್ಟ್ ಅಂಗ್ಡಿ ಅಕ್ಕಿ ಬಂಗ್ಡಿಮೀನಿಗ್ ಬಂದ್ ನಿತ್ತಿತ್. ಅದಷ್ಟೇ ಅಲ್ಲ ನೀರ್ ನಿದಿ ಬೆಚ್ಚಿ ನೀನೇ ಕಾಯಿ ಅಂತಿದ್ದ್ ಸ್ವಾಮಿಗ್ ಅಡುದ್ ಇರ್ಲಿ, ಪಿಂಯೊ ಪಿಂಯೊ ಅಂಬ್ ಕೋಳಿಮರಿ ಹಿಡ್ಕಂಡ್ ಹೋಯ್ ಹಾಡಿಹಕ್ಲೆಗ್ ಕೊಯ್ದ್ ಅಲ್ಲೇ ಹೊಡಿ ಹಾಕಿ, ಹುಗ್ಗಿ ಮಾಡಿ ಬಡ್ಸಿ ತಿಂತಿದ್ದ್ ಕೀಳಿಗ್ ಅಡುದ್ ಇರ್ಲಿ ಎಲ್ಲಾ ಹಾಡಿಗ್ ಹರ್ಸಿ ಆಯ್ತ್. ಸೆಣ್ಹೊಸ್ತ್ (ಚವ್ತಿ), ಜಕಣಿ, ಹತ್ರೊದಿ, ಆರೂಢ್, ಹಿಂಡಿ ಅರುದ್, ಅಜ್ಜಿ, ಅಸಾಡಿ, ಕ್ಯಾನಿಗೆಂಡಿ, ಎರ್ತ, ಕೇಲಿಗ್ ಅಕ್ಕಿ ಎಲ್ಲ ಎಲ್ಲೋ ಗಟ್ಟ ಹತ್ತಿದೊ. ಓಡ್ದ್ವಾಸಿ, ಮಣ್ಣಿ, ಕಿಚ್ಚಡಿ, ಕುಕ್ಕಿಕಡ್ಬ್, ಉಂಡ್ಲಕಾಯಿ, ಹೆಲ್ಸಿನ್ ಇಡ್ಲಿ, ಮುಣ್ಕ, ಉರ್ಗನ್ ಬಜ್ಜಿ, ಚಕ್ತಿಬಜ್ಜಿ, ಉಪ್ಪಿನಹೊಡಿ, ಕೆಸಿನ್ ಮ್ಯಾರ್ಲೊ, ಕಚ್ಚುಕೊ, ಪರಾತೊ, ತಾಳ್ಳ್,, ಹಣ್ಚೋಳಿ ಎಲ್ಲ ಹಳುಹತ್ತಿಯಾಯ್ತ್. ಹಣ್ಬ್ ಪಾಣಾರಾಟೋ, ಕೊಡ್ನೀರ್ ನಾಪತ್ತಿಯಾಯಿ ಕತಿ, ವೃತೋ, ಚತುರ್ಥಿ, ಉತ್ಸವೊ ಎಲ್ಲಾ ಸುರುವಾಯಿ ಮಕ್ಕಳ್ ರಸೀದಿ ಪುಸ್ತಕ ಹಿಡ್ಕಂಡ್ ಊರೂರ್ ಹರೂಕ್ ಸುರುಮಾಡಿದೊ. ಕಾಯ್ಲಿ ಬಂದ್ ಮಕ್ಕಳನ್ ಕೊರೇತಿ ಕೈಗ್ ಕೊಟ್ ಅವ್ಳ್ ಮಟ್ಟೆಗ್ ಕೂರ್ಸಿ ಕೊರ್ಗ, ಕೊರೇತಿ ಅಂದೇಳಿಯೇ ಹೆಸರಿಟ್ಟ್ ಮಕ್ಕಳನ್ ಬದ್ಕ್ಸಂತಿದ್ದರ್. ಈಗ ಅದೆಲ್ಲ ಬಿಟ್ಟ್ ಅಷ್ಟಮಂಗ್ಳೊ, ಆರೂಢೋ ಅಂದೇಳಿ ಜೀರ್ಣೋದ್ಧಾರದಂಗೆ ಜೀರ್ಗಿ ಆಯ್ರ್. ನಮ್ ತಾಯ್ವಾರ್ ದೈಯ್ ದೇವರೆಲ್ಲಾ ನಮ್ ಕೈಬಿಟ್ಟ್ ಹೋಯ್ ಕಾಲವೇ ಆಯ್ತ್. ನಮ್ ಮಕ್ಕಳ್ ಕಂಡರ್ ಕೊಟ್ಟ್ ಪಟೋ, ಯಾರೋ ಹೊರ್ಸದ್ ದ್ವಜೋ ಹಿಡ್ಕಂಡ್ ಹಾದಿಗೆಟ್ ಇಸ್ರೂಪ್ ಮಾಡ್ಕಂಡ್ ಹೆರಿ,ಗುರು ಅಂಬರನ್ನೆಲ್ಲ ಮುಲ್ಲಿಗ್ ಹಾಕಿ ಮೂಲೆಗ್ ಕೂರ್ಸಿದೊ. ಬಬ್ಬರ್ಯ ಬರ್ಬರಿಕಾ ಆಯ್, ಕಲ್ಕುಟ್ಕ ಪಾಶಾಣಮೂರ್ತಿ ಆಯ್ ಗೋಳಿಕಟ್ಟಿ ಸಂಕ್ರನಾರಾಯ್ಣೊ ಆಯ್ ಆನಗಳ್ಳಿ ಗಜಪುರ ಆಪದ್ರಂಗ್ ಇತ್ತ್. ನಮಗ್ ಚದರಾಳನ್ ಕೋಲ್ ಗೊತ್ತಿಲ್ಲೆ, ನೀರೋಂಟಿ ಬೇರ್ ಗೊತ್ತಿಲ್ಲೆ, ಜ್ವಾಳಿಕೊಡಿ, ನೇರ್ಲ್ ಕೆಸ್ಕರ್, ಶಳ್ಳಿಕೊಡಿ ಅಂದ್ರ್ ಎಂತ ಅಂದೇ ಗೊತ್ತಿಲ್ಲೆ. ಹೂಡ್ ಅಂದ್ರ್ ಎಂತ? ಹೂಂಟ್ ಅಂದ್ರ್ ಏನ್? ಗಜ ಅಂದ್ರ್ ಎಂತ ಅಂದೇಳಿಯೆ ನಮಗ್ ಗೊತ್ತಿಲ್ಲೆ. ನೇಲೇ ಇಲ್ಲೆ, ನೊಗ ಮತ್ತಿಲ್ಲೆ. ಹಾಂಗಾಯ್ ಮಂಡ್ಕೀಲ್, ಹತ್ತಿ, ಕುದ್ರಿ, ಮೇಳಿ, ಹೀಸ್, ಕುರ್ನಿಕೀಲ್, ಹೆಡೆ, ಮಣಿ, ಜೊತ್ಕ, ತಳ್ಕಿ ಹೂಡ್, ಗೋರಿ, ಹೊಲಗೋರಿ ಎಲ್ಲ ನಾಪತ್ತಿ. ಸಾಲ್, ಕತ್ರಿಸಾಲ್, ಹೋಳಿ, ಎಡ್ದ-ಬಲ್ದ, ಮೋಳುದ್, ಎಬ್ಬುದ್, ಒಳಾಲ್, ಜಲ್ಲಿ, ಕಳಿಹಾಕುದ್, ಅರ್ಕ್ಲ್ಹೂಂಟಿ- ಹೊಡಿಹೂಂಟಿ,-ನೀರ್ಹೂಂಟಿ, ತೌಡ್ಸಾಲ್, ಒಟ್ಟೋಳಿ, ಎಡ್ದಂಡಿ ಇವೆಲ್ಲ ಎಷ್ಟೋ ಬದ್ಯಗ್ ಕಾಂಬ್ಕೂ ಇಲ್ಲೆ, ಕೇಂಬ್ಕೂ ಇಲ್ಲೆ. ನಟ್ಟ್ ನೆಟ್ಟಗಾಯ್, ಚಿಗ್ರಿ, ಹೊಡೆಯಾಯಿ, ಕದ್ರ್ ಜುಗ್ದ್, ಹಾಲ್ನುಂಗಿ, ಕೊಡ್ಬತ್ತ ಹಣ್ಣಾಯಿ, ಕೆಯ್ ಕೊಯ್ಲಾಯಿ,, ಮದ್ಮಳ್ (ಅಜ್ಜ-ಅಜ್ಜಿ) ಅರಿ ಇಟ್ಟ್ ಅದ್ರ್ ಮೇಲೆ ಅರಿ ಹಾಕಿ ಹೊರಿಕಟ್ಟಿ ಹೊತ್ತ್ ತಂದ್ ಜಪ್ಪಿ ಆನಿಹೊತ್ರ್ ಕಾಯ್ ಒಡ್ದ್ ಹೊಲಿರಾಶಿ ಹಾಕಿ ಹೊಲೇಟ್ ಹಿಡ್ದ್ ಹೊಲಿಮೇಲ್ ಒಂದ್ ಮುಳ್ ಚೌಂತಿಕಾಯಿ ಇಡುದ್, ಕದ್ರ್, ಕುಸ್ಬ ಹೆಕ್ಕುದ್, ಕುತ್ರಿ ತಿರಿ ಕಟ್ಟುದ್ ಇವತ್ತೆಲ್ಲಿತ್? ಎತ್ತಿನ್ ಗಾಡ್ಯೂ ಇಲ್ಲೆ ಬಿರಿಕುಂಟಿ, ಬಂಡಿಪೈಟ್, ಮುಖಿಹಾರುದ್ ಅಂದ್ರೂ ಗೊತ್ತಿಲ್ಲೆ. ನಾಲ್ಕ್ ಎಂಟ್ ಜನ ಪಾತ್ರ್ಗಳ್ ಕೊಣಿತಿದ್ ದೈಯ್ದ್ ಮನಿ ದಕ್ಕಿಬಲಿ ಎಲ್ಲ ಹೊಡಿದಕ್ಕಿ ಬಲಿ ಆತಿದ್ದೋ, ಆರೆ ಊರಿಗ್ ಮೂರ್ ನಾಗನ್ ಪಾತ್ರಗಳ್, ಲೆಕ್ಕಿಲ್ದೆ ನಾಗಮಂಡ್ಲೊ, ಆಶ್ಲೇಷೊ, ಹಾಲಿಟ್ಟ್ ಹೆಚ್ಚೇ ಆತಿದ್ದೊ. ದೈಯ್ದ್ ಮನೆಗೆ ನೇತಾಡ್ತಿದ್ದ್ ತೊಟ್ಲ್ ಮಗು, ಹೂಗಂಬಲ್ ಹುಸಿ ಕೊಟ್ ಅಲ್ಲೇ ಸುದಾರ್ಸ್ತಿದ್ ಕಟ್ಕಳ್ಲಿ ಎಲ್ಲ ಬದಲಾಯ್ ಅವೆಲ್ಲಾ ಸಾವ್ರಾರ್ ರೂಪಾಯಿ ಬಿಳ್ದ್ ಮಾಡು ಪೂಜೆಪುನಸ್ಕಾರ ಆತಿದ್ದೋ. ಕುಂದಾಪ್ರ್ ಬದಲಾತಿದ್ದ್ ಹೌದಲ್ದಾ? ಪಡಾವ್ ಯಾರಿಗೆ ಪರ್ದಾಟೊ ಯಾರಿಗೆ ಅಂದೇಳಿ ಹದ್ರಿ ಕಾಣ್ದಿದ್ರೆ ಕುಂದಾಪುರದಂಗೆ ಎಲ್ಲಾ ಚಂದ್ವೇ. ಒಂದ್ ಮರೀಬ್ಯಾಡಿ ಕುಂದಾಪುರ್ ಕನ್ನಡೋ ಅಂದ್ರೆ ಹಾಸಿಗಾರ್ರ್ ಭಾಷಿ ಅಲ್ಲ. ಅದನ್ ಯಾರೋ ಸಿನಿಮಾದರ್ ಬಯಲಾಟದರ್ ಹ್ಯಾಂಗೇ ಬಳಸಲಿ. ನಾವು ನಮ್ಮ ಅಬ್ಬಿನ್ ಹಗುರ ಮಾಡುಕಾಗ. ಮನಸ್ಸಿದ್ರೆ ಮುಂದಿನ ಮಕ್ಕಳ್ ಈ ಬಾಷಿ ಬಗ್ಗೆ, ಬದ್ಕಿನ್ ಬಗ್ಗೆ ಒಂಚೂರ್ ಒಳಗ್ ಹೋಯ್ ಕಾಣಿ. ಈ ಭಾಷೆ ಬರಿಯ ಚಂದ ಮಾತ್ರ ಅಲ್ಲ.

ಕುಂದಗನ್ನಡವನ್ನು ಪ್ರೀತಿ ಮತ್ತು ಪ್ರಾಮಾಣಿಕ ಕಾಳಜಿಯಿಂದ ಗಮನಿಸಿದಲ್ಲಿ ನಮ್ಮ ತಲೆಮಾರಿನಿಂದ ಬಂದ ತಿಳುವಳಿಕೆಯನ್ನು ಈ ಭಾಷೆ ಹೇಗೆ ಹೊತ್ತು ನಿಂತಿದೆ? ಅದೆಷ್ಟು ತೂಕದ್ದು ಅಂತ ಅರ್ಥವಾಗುತ್ತದೆ. ಇನ್ನೂ ಒಂದು ಮಾತು ಅದೇನೆಂದರೆ ನಾನು ಕೇಳಿದ ಮೇರೆಗೆ ಕೊಂಕಣಿಯಲ್ಲಿ ನಾಗಡೋ ಬೇತಾಳನ ಕಟ್ಟು ಅಂತ ಒಂದು ಕಟ್ಟಿದೆಯಂತೆ. ಅದರ ಪ್ರಕಾರ ಒಬ್ಬ ಕೊಂಕಣಿ ಭಾಷಿಕ ಇನ್ನೊಬ್ಬ ಕೊಂಕಣಿ ಭಾಷಿಕ ಎದುರಾದಾಗ ಕೊಂಕಣಿಯಲ್ಲಿಯೇ ಮಾತಾಡಬೇಕು ಎನ್ನುವ ಅಲಿಖಿತ ನಿಯಮ ಅದು. ನಮ್ಮ ಕುಂದಗನ್ನಡದ ಮಕ್ಕಳು ಸದ್ಯ ಅದನ್ನು ಬಹುಮಂದಿ ಪಾಲಿಸುತ್ತಿದ್ದಾರೆ. ಭಾಷೆಯನ್ನು ಉಳಿಸುವುದಕ್ಕೆ ನಾವು ಎಚ್ಚರದಿಂದ ಆದನ್ನು ಪಾಲಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹೇಗೆ ಗಿರಿಯಿಂದ ಸೋಸಿಬರುವ ನೀರಿನ ಸಹಜರುಚಿಗಾಗಿ ಗಿರಿಯಬಳಿಗೇ ಹೋಗುತ್ತೇವೆ ಅಂತೆಯೇ ಕುಂದಗನ್ನಡದ ನಿಜವಾರಸುದಾರರು ಯಾರು ಎಂಬುದನ್ನು ಸರಿಯಾಗಿ ಗುರುತಿಸಿಕೊಳ್ಳಬೇಕಿದೆ. ಅದನ್ನು ಅಕ್ಷರದಲ್ಲಿ ಹುಡುಕುವ ಬದಲು ಅಕ್ಕರೆಯಲ್ಲಿ ಕಂಡುಕೊಳ್ಳಬೇಕಿದೆ. ಭಾಷೆ ಎಂದರೆ ಬರಹವಲ್ಲ, ಬರೆದವರಲ್ಲಿ ಭಾಷೆ ಹುಡುಕಬಾರದು.

ಅಗಸ್ಟ್ ಎಂಟು ವಿಶ್ವಕುಂದಾಪುರ ದಿನವಂತೆ. ಆಸಾಡಿ ಕುಂದಾಪುರದ ಜನಸಾಮಾನ್ಯರ ಪಾಲಿಗೆ ಸಂಕಟದ ಕಾಲ. ಈ ತಿಂಗಳು ಆರಂಭವಾಗುತ್ತಲೇ ಕಾರು ತಿಂಗಳ ಕೊನೆಯ ಸಂಕ್ರಾಂತಿಯಂದೇ ನಮ್ಮ ದೈವಗಳು ಕುಬೇರನ ಮನೆಯಲ್ಲಿ ಸಾಲ ತೀರಿಸಲು ಚೀಣಿಯರ ಹಡಗು ಏರಿ ಕಟ್ಟಿಗೆ ಕಡಿಯಲು ಹೋಗುತ್ತವೆ ಅಂತೆ. ಹಾಗಾಗಿ ಇದು ದೈವದೇವರೂ ಕೈಹಿಡಿಯದ ಕಾಲ. ಇನ್ನು ಸಹಜವಾಗಿಯೇ ಬಡತನ, ಮಳೆ,ಯ ಅಬ್ಬರಗಳ ಜೊತೆಗೆ ಪ್ರಕೃತಿಯಲ್ಲಿಯೂ ಹಣ್ಣು, ಕಾಯಿಗಳು ಹೆಚ್ಚೇನೂ ಸಿಗದ ಬ್ಯಾಸ್ಟಿಯ(ಬರ) ಕಾಲ. ಈ ಅವಧಿಯಲ್ಲಿ ಬರುವ ಅಸಾಡಿಹಬ್ಬ ಇಂತಹದ್ದೊಂದು ಹಸಿವಿನ ಕತೆಯನ್ನೇ ಹೊತ್ತುಬರುತ್ತದೆ. ದೊಡ್ಡ ಒಡಿಯರ್ ಸತ್ತಿರೆ ದೊಡ್ಡ ಕಡ್ಬ್ ತಿಂಬ್ಕಾತಿತ್ ಎಂಬ ಆ ದಲಿತ ಆಳುಮಗನ ಮಾತು ಪ್ರಾಯಶಃ ದೇವನೂರ ಮಹಾದೇವ ಅವರ ಒಡಲಾಳದಲ್ಲಿ ಗೌಡರ ಹಟ್ಟಿಯ ಎಮ್ಮೆ ಕೋಣಗಳ ಗಾತ್ರನೋಡಿ ತಮ್ಮ ಕೇರಿಯ ಹಸಿವಿನೊಂದಿಗಿಟ್ಟು ಮಾತಾಡುವ ಸಾಕವ್ವನ ಮಕ್ಕಳ ಮಾತುಕತೆಯನ್ನು, ಕುಂವೀರಭದ್ರಪ್ಪನವರ ದೇವರ ಹೆಣ ಕತೆಯ ಹಸಿವಿನ ಮಾತುಗಳನ್ನು ನೆನಪಿಸುತ್ತದೆ. ಯಾಕೆಂದರೆ ವಿಚಿತ್ರ ಎಂಬಂತೆ ಈ ಮೂರೂ ಪ್ರಕರಣಗಳು ಸಾವಿನಲ್ಲಿ ಹಸಿವನ್ನು ಪರಿಹರಿಸಿಕೊಳ್ಳುವ ಕನಸು ಕಾಣುತ್ತವೆ. ಭಾಷೆ ಯಾವುದೇ ಇರಲಿ ಬದುಕು ಮತ್ತು ಹಸಿವುಗಳು ಹೇಗೆ ಒಂದಾಗುತ್ತವೆ ನೋಡಿ? ಹಾಗೆಯೇ ಇನ್ನೂ ಒಂದು ಸಂಗತಿ ಎಂದರೆ ಆಸಾಡಿ ತಿಂಗಳು ಕಾಯಿಲೆ ಕಸಾಲೆಯ ಭಯ ಇರುವ ಕಾಲವೂ ಹೌದು. ಹಾಗಾಗಿ ಈ ಕಾಲದಲ್ಲಿ ಅನೇಕ ಕಡೆ ಮಾರಿಹಬ್ಬಗಳಾಗುತ್ತವೆ. ಆಸಾಡಿ ಮಾರಿ ಎಲ್ಲರಿಗೂ ಪರಿಚಿತ. ಇನ್ನೂ ಒಂದು ಸಂಗತಿ ಎಂದರೆ ಇಲ್ಲಿಯ ಮೇಲ್ಜಾತಿಗಳ ಮದುವೆಗೆ ನಿಷಿದ್ಧವಾದ ಈ ತಿಂಗಳಲ್ಲಿಯೇ ಪಾಪ ಜೀತಕ್ಕಿದ್ದ ದಲಿತ ಸಮುದಾಯಗಳ ಮದುವೆ ನಡೆಯುತ್ತಿದ್ದ ಬಗೆಗೆ ಹಾಡುಗಳು ಸಿಗುತ್ತವೆ. ಆದ್ದರಿಂದ ಆಸಾಡಿ ಒಡ್ರ್ ಹೊಡೆಯುವ ಈ ಕಾಲ ಊಳಿಗಮಾನ್ಯ ಪಾಳೇಗಾರಿ ವ್ಯವಸ್ಥೆಯ ಲೋಪಗಳನ್ನೂ, ನಿಸರ್ಗದ ಸವಾಲುಗಳನ್ನೂ ತೆರೆದು ತೋರುವ ಕಾಲವೂ ಹೌದು. ಆಸಾಡಿಯಲ್ಲಿ ಹುಟ್ಟಿದ ಮಕ್ಕಳ ತಂಟೆ, ರಗಳೆ ಜಾಸ್ತಿಯಂತೆ. ಹಾಗಾಗಿ ಆಗ ಹುಟ್ಟಿದ ಮಕ್ಕಳನ್ನು ʼಆಸಾಡಿ ಅಲೆʼ ಎಂದೂ ಕರೆಯುವುದಿದೆ. ಗೊತ್ತಿಲ್ಲ ಆದರೆ ಮಕ್ಕಳ ಹುಟ್ಟು ಆಸಾಡಿಯಲ್ಲಿ ಕಡಿಮೆ ಏನಿಲ್ಲ. ನಾನೂ ಅಸಾಡಿಯಲ್ಲೇ ಹುಟ್ಟಿದವನು.

  • ಡಾ ಜಯಪ್ರಕಾಶ್ ಶೆಟ್ಟಿ ಹೆಚ್ ಕುಂದಾಪುರ

(ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರು. ಇವರ ‘ನೆಲದ ನೆನಪು’ ಕೃತಿಯು ‘2014ನೇ ಸಾಲಿನ ಜಾನಪದ ಅಕಾಡೆಮಿಯ ಸಂಕೀರ್ಣ ವಿಭಾಗದ ಪುಸ್ತಕ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.)


ಇದನ್ನೂ ಓದಿ: ಅಗಲಿ ಹೋದ ಪ್ರೀತಿಯ ಕರುಳು ಜೋಗುರಾ ನೆನಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...