ಎಪ್ರಿಲ್ ತಿಂಗಳು ಬಂತೆಂದರೆ ಸಾಕು, ಮಕ್ಕಳ ಶಾಲಾ ದಾಖಲಾತಿಯ ಗದ್ದಲ ಪ್ರಾರಂಭವಾಗುತ್ತದೆ. ಒಂದೆಡೆ ಹೆತ್ತವರಿಗೆ ಖುಷಿ, ಜೊತೆಗೆ ಯಾವ ಶಾಲೆಗೆ ಸೇರಿಸಬೇಕೆನ್ನುವ ಗೊಂದಲ. ಇನ್ನೊಂದೆಡೆ ಶಾಲಾ ಶುಲ್ಕದ ತಲೆಬಿಸಿ ಇವೆಲ್ಲವೂ ಇತ್ತೀಚೆಗೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ನಾನೂ ಕೂಡಾ ಹೊರತಾಗಿಲ್ಲ. ನನ್ನಮ್ಮನಿಗೆ ಇದರ ಚಿಂತೆಯಿರಲಿಲ್ಲ. ನನ್ನ ಪುಟ್ಟ ಹಳ್ಳಿಯಲ್ಲಿ ಸರಕಾರಿ ಶಾಲೆ ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಈಗ ಹಾಗಲ್ಲ, ಹೆಜ್ಜೆಗೊಂದರಂತೆ ಪ್ರಿ-ಕೆಜಿ ಶಾಲೆಗಳು ತಮ್ಮ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿರುತ್ತವೆ. ಒಂದೆರಡು ಹಲ್ಲುಗಳು ಇಣುಕಿದರೆ ಸಾಕು, ಈ ಸ್ಕೂಲ್‌ಗಳು ಅಮ್ಮನ ಮಡಿಲಿನಿಂದ ಮಕ್ಕಳನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತವೆ.
ಹಿಂದೆಲ್ಲಾ ಮಕ್ಕಳಿಗೆ ಐದು ವರ್ಷವಾಗುತ್ತಲೇ ಅಂಗನವಾಡಿಗೆ ಸೇರಿಸಿ, ಆರು ವರ್ಷ ತುಂಬಿದಾಗ ಶಾಲೆಗೆ ದಾಖಲಿಸುವ ಪರಿಪಾಠವಿತ್ತು. ಅಲ್ಲಿಯವರೆಗೆ ಅಮ್ಮನ ಸೆರಗು ಹಿಡಿದು ನೇತಾಡುತ್ತಲೇ ಕಾಲಕಳೆಯುತ್ತಿದ್ದರು. ಅಂಗನವಾಡಿಗೂ ಹೋಗುತ್ತಿದ್ದುದು ಆಗೊಮ್ಮೆ ಈಗೊಮ್ಮೆ. ಮನೆಗೆಲಸಕ್ಕಾಗಿ ಯಂತ್ರಗಳಿಲ್ಲದ ಕಾಲದಲ್ಲಿ ಅಮ್ಮಂದಿರು ಸ್ವಯಂ ಯಂತ್ರಗಳಾಗಿ ದುಡಿಯುತ್ತಿದ್ದರು. ಬಿಡುವಿಲ್ಲದ ದಿನಚರಿಯ ನಡುವೆಯೂ, ವಯಸ್ಸಿಗೆ ಒಂದು ವರ್ಷದ ಅಂತರವಿರುತ್ತಿದ್ದ ಐದಾರು ಮಕ್ಕಳಿಗೂ ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದರು. ಮಕ್ಕಳ ಜೊತೆ ಮುಕ್ತವಾಗಿ ಮಾತನಾಡುತ್ತಾ, ಕಥೆ ಹೇಳುತ್ತಾ, ಜೊತೆ ಸೇರಿ ಆಟವಾಡುತ್ತಾ ಮುಗ್ಧ ಮನಸ್ಸುಗಳ ನಡುವಿನ ಕೊಂಡಿಯನ್ನು ಭದ್ರಗೊಳಿಸುತ್ತಿದ್ದರು. ಎಷ್ಟು ಕಿರಿಕಿರಿಯುಂಟಾದರೂ ಒಂದು ಹಂತದವರೆಗೆ ಅವರನ್ನು ದೂರವಿರಿಸುವ ಪ್ರಯತ್ನ ಮಾಡುತ್ತಿರಲಿಲ್ಲ.
ಮಕ್ಕಳಿಗೆ ನೀಡಬೇಕಾದ ಸಮಯವು ಅವರ ಹಕ್ಕಾಗಿರುತ್ತದೆ. ಈಗ ನಮ್ಮಲ್ಲಿ ಧಾರಾಳ ಸಮಯವಿದೆ. ಆದರೆ ಒಂದಿಷ್ಟು ಹೊತ್ತು ಮಕ್ಕಳ ಜೊತೆ ಕಳೆಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಒಂದಿಬ್ಬರು ಮಕ್ಕಳು ಇರುವುದಾದರೂ ಸಂಭಾಳಿಸುವುದು ಬಹಳ ಕಷ್ಟ ಎನ್ನುವುದು ಬಹುತೇಕ ತಾಯಂದಿರು ಆಗಾಗ ಹೇಳುತ್ತಿರುವ ಮಾತು. ಇದಕ್ಕೆ ಪರಿಹಾರವನ್ನು ಪ್ರಿ-ಕೆಜಿ ಸ್ಕೂಲ್‌ಗಳು ನೀಡಿವೆ. ಅದರಂತೆ ತಮ್ಮ ಪುಟಾಣಿ ಮಕ್ಕಳನ್ನು ಪ್ರಿ-ಕೆಜಿ ಸ್ಕೂಲ್‌ಗಳ ಬಾಗಿಲಿಗೆ ನೂಕಿ ಬಿಡುತ್ತಾರೆ. ಒಂದಿಷ್ಟು ಹೊತ್ತು ಮಕ್ಕಳೊಡನೆ ಬೆರೆತು ನೋಡಿ, ಅವರ ಸೃಜನಶೀಲ ಮನಸ್ಸು ನಮ್ಮಲ್ಲಿ ಅಚ್ಚರಿಯುಂಟುಮಾಡುತ್ತದೆ. ತುಂಟಾಟಗಳು ದಿನದ ಜಂಜಾಟಗಳಿಗೆ ನಿರಾಳತೆಯನ್ನು ಒದಗಿಸುತ್ತದೆ. ಹಠ, ಕೀಟಲೆ, ಚೇಷ್ಟೆ ಇವೆಲ್ಲಾ ಮಕ್ಕಳಲ್ಲಿರುವ ಸಹಜ ಗುಣಗಳು. ಅವುಗಳ ಅಭಿವ್ಯಕ್ತಿ ಕೂಡಾ ಅವರ ಹಕ್ಕಾಗಿರುತ್ತದೆ. ಅದಕ್ಕಾಗಿ ಪುಟ್ಟ ಮಕ್ಕಳನ್ನು ಅಮ್ಮನ ಮಡಿಲಿಂದ ದೂರವಿಡುವುದು ಎಷ್ಟು ಸರಿ?
ಬಾಲ್ಯವೆಂಬುದು ಮಕ್ಕಳ ಹಕ್ಕು. ಅದನ್ನವರು ಸಹಜವಾಗಿಯೇ ಆಸ್ವಾಧಿಸಬೇಕು. ಅದನ್ನು ಕಸಿಯುವ ಹಕ್ಕು ಹೆತ್ತವರಿಗೂ ಇಲ್ಲ. ಒಂದು ವರ್ಷ ಬಳಪ ಬಳಸದೆ ಆಡುತ್ತಾ, ನಲಿಯುತ್ತಾ ಕಲಿಯುವುದು, ಪರ್ಯಾವರಣ ನಡಿಗೆ (ನೇಚರ್ ವಾಕ್), ಇಂಗ್ಲಿಷ್ ಕಲಿಕೆ ಇತ್ಯಾದಿ ಬಣ್ಣ ಬಣ್ಣಗಳ ಆಮಿಷಗಳ ಮೂಲಕ ಮೂವತ್ತು ಸಾವಿರದಿಂದ ಎಪ್ಪತ್ತು ಸಾವಿರದವರೆಗೂ ಈ ಪ್ರಿ ಕೆ.ಜಿ.ಸ್ಕೂಲ್‌ಗಳು ಶುಲ್ಕ ಪೀಕಿಸುತ್ತವೆ. ಶ್ರೀಮಂತರಷ್ಟೇ ಅಲ್ಲ, ಮಧ್ಯಮ ವರ್ಗದ ಹೆತ್ತವರೂ ಅವರ ಆಮಿಷಕ್ಕೆ ಬಲಿ ಬೀಳುತ್ತಾರೆ. ಹೇಗಾದರೂ ಸಾಲ, ಸೋಲ ಮಾಡಿ ಹಣ ಹೊಂದಿಸಿ ಅಲ್ಲಿಗೆ ದಾಖಲಿಸುತ್ತಾರೆ. ಉಳ್ಳವರಿಗೆ ಇದು ಪ್ರತಿಷ್ಟೆಯಾದರೆ ಮಧ್ಯಮ ವರ್ಗದವರಿಗೆ ಪ್ರಿ ಕೆ.ಜಿ.ಸ್ಕೂಲ್‌ಗಳಿಗೆ ಕಳಿಸದಿದ್ದರೆ ಎಲ್ಲಿ ತಮ್ಮ ಮಕ್ಕಳು ಹಿಂದುಳಿದು ಬಿಡುತ್ತಾರೋ ಎಂಬ ಆತಂಕ. ಒಂದರ್ಥದಲ್ಲಿ ಇವೆಲ್ಲವೂ ಎದೆಹಾಲಿಗೆ ಇಂಗ್ಲಿಷ್ ಬೆರೆಸುವ ವ್ಯಾಮೋಹ. ಇಂಗ್ಲಿಷ್ ಕಲಿಯುವುದು ತಪ್ಪಲ್ಲ. ಆದರೆ ಅತಿಯಾದ ಇಂಗ್ಲಿಷಿನ ವ್ಯಾಮೋಹದಿಂದಾಗಿ ಮಾತೃಭಾಷೆಯೇ ಸರಿಯಾಗಿ ಮಾತನಾಡಲು ಬಾರದ ಎಷ್ಟೋ ಮಕ್ಕಳಿದ್ದಾರೆ. ಸಂವಹನದ ತೊಡಕಿನಿಂದಾಗಿ ಮನೆಯಲ್ಲಿ ಹಿರಿಯರೊಂದಿಗೆ ವ್ಯವಹರಿಸಲು ಬಾರದೇ ಸಂಬಂಧಗಳು ಶಿಥಿಲಗೊಳ್ಳುತ್ತವೆ.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಲಕ್ಷ ಸುರಿದರೂ ತಾಯಿಗಿಂತ ಮಿಗಿಲಾದ ಗುರುವನ್ನು ಈ ಪ್ರಿ ಕೆ.ಜಿ. ಶಾಲೆಗಳು ಒದಗಿಸಲು ಸಾಧ್ಯವೇ..? ಮನೆಯ ಹೊರಗಡೆ ಆಡಲು ಬಿಟ್ಟಾಗ ಬೀಳುತ್ತಾ, ಏಳುತ್ತಾ ಆಡುವಾಗ ಕಣ್ಣಿಗೆ ಕಾಣಿಸುವ ಆಕಾಶ, ಪ್ರಾಣಿ ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಮರಗಿಡಗಳು, ಗಾಳಿ – ಬೆಳಕು, ಮೋಡ ಇವುಗಳಿಗೆಲ್ಲಾ ನೇಚರ್ ವಾಕ್ ಎಂಬ ಹೆಸರನ್ನಿಟ್ಟು ಮಾಡುವ ವ್ಯಾಪಾರಕ್ಕೆ ದುಡ್ಡು ಸುರಿಯಬೇಕೇ..? ಪ್ರಕೃತಿಯ ಬಗ್ಗೆ ಮಕ್ಕಳಿಗೆ ವಿಶೇಷ ಕುತೂಹಲವಿರುತ್ತದೆ. ಅವರದೇ ಆದ ಆಲೋಚನೆಗಳು, ಕಲ್ಪನೆಗಳು ಇರುತ್ತವೆ. ಇದನ್ನು ಪ್ರಿ.ಕೆ.ಜಿ.ಸ್ಕೂಲ್‌ಗಳು ಇಲ್ಲವಾಗಿಸುತ್ತವೆ. ತಾಯಿಯ ಸೆರಗು ಹಿಡಿದು ಬಾಲದಂತೆ ಹಿಂಬಾಲಿಸುವಾಗ ಕಲಿಯುವ ವಸ್ತುಗಳ ಹೆಸರು, ಹಣ್ಣು-ತರಕಾರಿಗಳ ಹೆಸರು, ಬಣ್ಣಗಳು ಇತ್ಯಾದಿಗಳನ್ನೆಲ್ಲಾ ಅರಿತುಕೊಳ್ಳಲು ಪ್ರಿ ಕೆ.ಜಿ.ಸ್ಕೂಲ್‌ಗಳು ಬೇಕೇ..?
ಮಕ್ಕಳ ಮನಸ್ಸೆಂಬುದು ಬಹಳ ಸೂಕ್ಷ್ಮ. ಈ ವಿಚಾರವನ್ನು ಅಮ್ಮಂದಿರು ನೆನಪಿಟ್ಟುಕೊಳ್ಳಲೇಬೇಕು. ನಾವು ಹೇಳಿದಂತೆಲ್ಲಾ ಅವರು ಕೇಳದಿರಬಹುದು. ಆದರೆ ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನಮಗರಿವಿಲ್ಲದೇ ಅನುಸರಿಸುತ್ತಾರೆ. ಅವರ ಕಲಿಕೆ ಪ್ರಾರಂಭವಾಗುವುದೇ ಇಲ್ಲಿಂದ. ಇದು ಅವರ ಸರ್ವತೋಮುಖ ಬೆಳವಣಿಗೆಗೆ ಗಟ್ಟಿ ಅಡಿಪಾಯ ಹಾಕುತ್ತದೆ. ಹಾಗಿರುವಾಗ ನಾವಿಡುವ ಪ್ರತೀ ಹೆಜ್ಜೆಯೂ ಜಾಗರೂಕತೆಯಿಂದ ಕೂಡಿರಬೇಕು. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ದೂರ ಮಾಡಿದರೆ ಅವರು ಇದೆಲ್ಲದರಿಂದಲೂ ವಂಚಿತರಾಗುತ್ತಾರೆ. ಮಕ್ಕಳ ಸ್ವಭಾವವೇ ಹಾಗೆ. ಪ್ರತಿಯೊಂದನ್ನು ತಾಯಿಯಲ್ಲಿ ಪ್ರಶ್ನಿಸುತ್ತಲೇ ಇರುತ್ತಾರೆ. ಒಂದಕ್ಕೆ ಉತ್ತರಿಸಿದರೆ ಇನ್ನೊಂದು, ಅದಕ್ಕೆ ಉತ್ತರಿಸಿದರೆ ಮತ್ತೊಂದು, ಮಗದೊಂದು ಪ್ರಶ್ನೆಗಳು. ಉತ್ತರಿಸಿ ಸಾಕು ಸಾಕಾಗುವಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತಾರೆ. ಒಂದು ವೇಳೆ ಅತೀ ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಿ ಕೆ.ಜಿ.ಸ್ಕೂಲ್‌ಗಳಿಗೆ ಕಳಿಸಿದರೆ ಅವರ ಆ ಪ್ರಶ್ನಿಸುವ ಸ್ವಭಾವವೇ ಕುಂಠಿತಗೊಂಡು ಕ್ರಮೇಣ ನಿಂತು ಹೋಗುತ್ತದೆ, ಶಿಸ್ತಿನ ಹೆಸರಲ್ಲಿ ಮಾಯವಾಗುತ್ತದೆ. ಅಲ್ಲಿರುವ ಅಷ್ಟೂ ಮಕ್ಕಳು ಪ್ರಶ್ನೆಗಳನ್ನು ಕೇಳುತ್ತಾ, ಮಾತನಾಡುತ್ತಾ ಇದ್ದರೆ ಶಿಕ್ಷಕಿಯಾದರೂ ಏನು ಮಾಡಲಾದೀತು..?
ತಾಯಿಯೊಬ್ಬಳು ತನ್ನ ಮಗುವಿನ ಮನಸ್ಸನ್ನು ಅರ್ಥೈಸಿದಂತೆ ಬೇರೆ ಯಾರೇ ಆದರೂ ಅರ್ಥೈಸಲು ಸಾಧ್ಯವೇ..? ಎಳವೆಯಲ್ಲಿ ಕಲಿತದ್ದು ಬಂಡೆಯ ಮೇಲೆ ಕೆತ್ತಿದಂತೆ. ದೊಡ್ಡವರಾದ ಮೇಲೆ ಕಲಿತದ್ದು ನೀರಿನ ಮೇಲೆ ಬರೆದಂತೆ. ಹಾಗೆಂದು ಮಕ್ಕಳ ಇತಿಮಿತಿಗಳನ್ನು ಕಡೆಗಣಿಸಿ ಪುಟ್ಟ ಮೆದುಳಿಗೆ ಸಿಕ್ಕಿದ್ದೆಲ್ಲವನ್ನೂ ತುಂಬಲು ಹೋದರೆ ಅದು ಅವರ ಮನಸ್ಸಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುವುದನ್ನು ಮರೆಯಬಾರದು.
ಹಿಂದೊಮ್ಮೆ ನನ್ನ ಮಾತೃಭಾಷೆ ಬ್ಯಾರಿಯಲ್ಲಿ ಪ್ರಿ ಕೆಜಿ ಸ್ಕೂಲ್‌ಗಳ ಬಗ್ಗೆ ಲೇಖನ ಬರೆದಾಗ ಹಲವು ಅಮ್ಮಂದಿರು ನನ್ನ ಮೇಲೆ ಕಿಡಿಕಾರಿದರು ಹಾಗೂ ಪ್ರಿ ಕೆಜಿ ಸ್ಕೂಲ್ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದರು. ಹಲವು ಪ್ರಿ.ಕೆ.ಜಿ.ಸ್ಕೂಲ್‌ಗಳ ಆಡಳಿತ ಮಂಡಳಿಗೂ ತಲುಪಿಸಿದ್ದರು. ನಾನು ಈಗಲೂ ನನ್ನ ಅದೇ ಪ್ರತಿಪಾದನೆಗೆ ಬದ್ಧಳಾಗಿದ್ದೇನೆ. ಪ್ರಿ.ಕೆಜಿ ಸ್ಕೂಲ್‌ಗಳ ಉದ್ದೇಶ ತಮ್ಮ ಖಜಾನೆ ತುಂಬಿಸುವುದಷ್ಟೇ ಹೊರತು ನಮ್ಮ ಮಕ್ಕಳನ್ನು ಉದ್ಧಾರ ಮಾಡಲಂತೂ ಅಲ್ಲ.
ಇದನ್ನೂ ಓದಿ: ಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ – ಕೆ.ಪಿ.ಸುರೇಶ


