ಜೀವನ ಕಲೆಗಳು: ಅಂಕಣ-27
ತಂಡ ಕಟ್ಟುವ ಕಲೆ
ತಂಡವನ್ನು ಕಟ್ಟುವ ಕಲೆ ಮತ್ತು ತಂಡದಂತೆ ಕೆಲಸ ಮಾಡುವ ಕಲೆಗಳು ಎರಡೂ ಬೇರೆ ಬೇರೆ. ಇವೆರಡನ್ನೂ ಗಲಿಬಿಲಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾವುದೇ ಒಂದು ಕಾರ್ಯಕ್ಕೆ, ಯೋಜನೆ ಹಾಕುವಾಗ ಅದಕ್ಕೆ ಬೇಕಾದ ಸರಿಯಾದ ಜನರನ್ನು ಹುಡುಕಿ, ತೆಗೆದು, ಗುಂಪುಗೂಡಿಸುವುದು ತಂಡ ರಚನೆ. ಆದರೆ ನಂತರ ಈ ಗುಂಪನ್ನು ಒಂದು ತಂಡದಂತೆ ಕೆಲಸಕ್ಕಿಳಿಸಿ, ಯೋಜನೆಯನ್ನು ಸಾರ್ಥಕಗೊಳಿಸುವುದು ಆ ತಂಡದ ನಾಯಕರ ಕೆಲಸ. ಕೆಲವು ವಿಷಯದಲ್ಲಿ ಸಮಾನತೆ ಇದ್ದರೂ ಸಹ ಪ್ರಕ್ರಿಯೆಯಲ್ಲಿ ಕೆಲವು ವ್ಯತ್ಯಾಸಗಳೂ ಇರುತ್ತವೆ.

ಶೈಕ್ಷಣಿಕ ಮನಃಶಾಸ್ತ್ರಜ್ಞ ಬ್ರೂಸ್ ಟಕ್ಮಾನ್ ಪ್ರಕಾರ ತಂಡ ರಚನೆಯಲ್ಲಿ ಐದು ಅಭಿವೃದ್ಧಿ ಪ್ರಕ್ರಿಯೆಗಳಿವೆ. ಇದನ್ನು ಅವರು ಫಾರ್ಮಿಂಗ್, ಸ್ಟಾರ್ಮಿಂಗ್, ನಾರ್ಮಿಂಗ್, ಪರ್ಫಾರ್ಮಿಂಗ್ ಮತ್ತು ಅಡ್ಜರ್ನಿಂಗ್, (forming, storming, norming, performing, and adjourning) ಎನ್ನುತ್ತಾರೆ.
· ರಚನೆ (ಫಾರ್ಮಿಂಗ್) ಹಂತದಲ್ಲಿ ಸರಿಯಾದ ಜನರನ್ನು ತಂಡಕ್ಕೆ ಆಯ್ದುಕೊಳ್ಳುವುದು. ಇದು ತಂಡರಚನಾಕಾರರ ಕೆಲಸ.
· ಸ್ಟಾರ್ಮಿಂಗ್ (ಬ್ರೇನ್ ಸ್ಟಾರ್ಮಿಂಗ್) ಹಂತದಲ್ಲಿ ಒಟ್ಟಾಗಿ ಕಲೆತು ತಂಡದ ಬಗ್ಗೆ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ಕೊಡುವುದು.
· ನಾರ್ಮಿಂಗ್ ಹಂತದಲ್ಲಿ ತಂಡದ ಕೆಲಸ ಮತ್ತು ನಿಯಮಾವಳಿಯನ್ನು ರೂಪಿಸಿ, ಎಲ್ಲರಿಗೂ ಸರಿಯಾಗಿ ತಿಳಿಯುವಂತೆ ಹೇಳುವುದು.
· ಪರ್ಫೊರ್ಮಿಂಗ್ ಹಂತದಲ್ಲಿ ತಂಡವು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು.
· ಕೊನೆಯದಾಗಿ ಅಡ್ಜರ್ನಿಂಗ್ ಹಂತದಲ್ಲಿ ಕೆಲಸ ಮುಗಿದ ನಂತರ ತಂಡವನ್ನು ಬರ್ಖಾಸ್ತ್ ಮಾಡುವುದು.
ನಿಮಗೆಲ್ಲಾ ತಿಳಿದಿರುವಂತೆ ಯಾವುದಾದರೂ ನೈಸರ್ಗಿಕ ವಿಕೋಪ ಅಥವಾ ಕಠಿಣವಾದ ಕೆಲಸವನ್ನು ಕೂಡಲೇ ಮಾಡಬೇಕಾಗಿ ಬಂದಾಗ ಜನರಿಗೂ ಮತ್ತು ಸರಕಾರಕ್ಕೂ ಭಾರತೀಯ ಸೇನೆ ನೆನಪಾಗುತ್ತದೆ. ಏಕೆ ಗೊತ್ತೆ? ಅದರಲ್ಲಿರುವ ಶಿಸ್ತು ಮತ್ತು ಛಲ. ಸೈನಿಕರು ಯಾವ ಸಮಯದಲ್ಲೂ ಇದು ನಮ್ಮ ಕೆಲಸವಲ್ಲ, ಈಗ ಚಹಾ ಸಮಯ, ಮುಂತಾದ ಕ್ಷುಲ್ಲಕ ಕಾರಣ ನೀಡುವುದಿಲ್ಲ. ಅವಶ್ಯಕತೆ ಬಿದ್ದಲ್ಲಿ ತಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಿ, ಹೇಳಿದ ಕೆಲಸ ಮಾಡಿ ಮುಗಿಸುತ್ತಾರೆ. ಸೈನ್ಯದ ಇನ್ನೊಂದು ಬಹಳ ಗಮನೀಯ ಗುಣ ಅಂದರೆ ಇಲ್ಲಿ ಜಾತಿ ಬೇಧವಿಲ್ಲ. ಮೇಲಧಿಕಾರಿ ಅಥವಾ ಕೆಳ ಹಂತದ ಸೈನಿಕ ಇಬ್ಬರಿಗೂ ಎಂದೂ ಕೆಲಸದ ಮಧ್ಯೆ ಜಾತಿಯ ಪ್ರಶ್ನೆ ಉದ್ಭವವಾಗುವುದಿಲ್ಲ. ಕೆಲಸದಲ್ಲಿ ಅವನ ರೆಜಿಮೆಂಟ್ ಅವನ ಜಾತಿಯಾಗುತ್ತದೆ. ಆದ್ದರಿಂದ ಇಂತಹ ಚಿಂತನೆಯುಳ್ಳ ಜನರನ್ನು ನಿಮ್ಮ ತಂಡಕ್ಕೆ ಸೇರಿಸಿಕೊಂಡಲ್ಲಿ ಏನೇ ಕೆಲಸವಿರಲಿ, ನಿಮ್ಮ ತಂಡ ಮಾಡಲು ಸಾಧ್ಯವಾಗುತ್ತದೆ.
ತಂಡ ಕಟ್ಟಲು ಮುಖ್ಯವಾಗಿ ನಮಗೆ ಬೇಕಾಗಿರುವುದು ಮುನ್ನೋಟ, ದೂರದೃಷ್ಟಿ (ವಿಷನ್): ನಾವು ಏತಕ್ಕಾಗಿ ಈ ತಂಡ ರಚಿಸುತ್ತಿದ್ದೇವೆ, ಇದರಿಂದ ಸಾಧಿಸಬೇಕಾಗಿರುವುದು ಏನು ಎಂಬ ಮಾಹಿತಿ ನಮ್ಮಲ್ಲಿರಬೇಕು.
ಎರಡನೆಯದು ತಂಡದಲ್ಲಿ ಸಾಮರಸ್ಯ, ಸೌಹಾರ್ದತೆ ಇರಬೇಕು, ಇಲ್ಲದಿದ್ದಲ್ಲಿ ತಂಡ ಏಕ ದಿಸೆಯಲ್ಲಿ ಸಾಗಲು ಸಾಧ್ಯವಿಲ್ಲ.
ಮೂರನೆಯದು ಗುರಿಯ ಕೇಂದ್ರೀಕರಣ (ಫೋಕಸ್). ಇಡೀ ತಂಡ ತನ್ನ ಗಮನವನ್ನು ಒಂದೇ ಗುರಿಯತ್ತ ಕೇಂದ್ರೀಕರಿಸಿ, ಅದರತ್ತ ಒಂದೇ ಗತಿಯಲ್ಲಿ ಸಾಗಬೇಕು.
ನಾಲ್ಕನೆಯದು ಕೆಲಸದ ಪ್ರತಿ ಸಂಪೂರ್ಣ ಸಮರ್ಪಣೆ. ಇದನ್ನು ಬಿಟ್ಟು ಇನ್ನೇನನ್ನೂ ಯೋಚಿಸುವಂತಿಲ್ಲ.
ಐದನೆಯದು ಸಮರ್ಪಕ ಸಂವಹನ. ತಂಡದ ರಚನಾಕಾರರ, ನಾಯಕರ ಮತ್ತು ಪರಸ್ಪರ ಸದಸ್ಯರ ಮಧ್ಯೆ ಸಂವಹನೆ ಸಮರ್ಪಕವಾಗಿರಬೇಕು.
ಹೊಂದಿಕೊಳ್ಳುವಿಕೆ: ಅವಶ್ಯಕತೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಕೆಲಸಕ್ಕೆ ಹೊಂದಿಕೊಳ್ಳುವಿಕೆ ಇರಬೇಕು.
ಪ್ರತಿಭೆ: ತಂಡದಲ್ಲಿ ಕೆಲಸಕ್ಕೆ ಬೇಕಾದ ಪ್ರತಿಭೆ ಇರಬೇಕು. ಕ್ರಿಕೆಟ್ ಆಟಗಾರರನ್ನು ಸೇರಿಸಿಕೊಂಡು ಫುಟ್ಬಾಲ್ ಪಂದ್ಯಕ್ಕೆ ಸ್ಪರ್ದಿಸಲಾಗುವುದಿಲ್ಲ.
ಮಾಪನ: ಪ್ರತ್ಯೇಕವಾಗಿ ತಂಡದ ಸದಸ್ಯರ ಮತ್ತು ಒಟ್ಟಾಗಿ ತಂಡದ ಪ್ರದರ್ಶನವನ್ನು ಅಳೆಯುವ ಮಾಪನ/ಸಾಧನ ಇರಬೇಕು.
ಅನುಭವ: ತಂಡ ರಚಿಸುತ್ತಿರುವವರಿಗೆ ತಂಡ ರಚನೆಯ ಅನುಭವವಿರಬೇಕು. ಇಲ್ಲದಿದ್ದಲ್ಲಿ ಇದು ಪರೀಕ್ಷೆ, ಮರುಪರೀಕ್ಷೆ (ಟ್ರಯಲ್ ಎಂಡ್ ಎರರ್) ಪ್ರಯತ್ನವಾಗುತ್ತದೆ. ಸಮಯ ಮತ್ತು ಪರಿಶ್ರಮ ವ್ಯರ್ಥವಾಗುತ್ತದೆ.
ತಂಡ ರಚನೆಗೆ ಬೇಕಾದ ಕಲೆಗಳು:
· ಸಂವಹನ ಕಲೆ*
· ಸಮಸ್ಯೆಗಳ ಪರಿಹಾರದ ಕಲೆ*
· ನಾಯಕತ್ವದ ಕಲೆ*
· ತಂಡದಂತೆ ಕೆಲಸ ಮಾಡುವ ಕಲೆ*
· ಪ್ರೇರೇಪಿಸುವ ಕಲೆ%
· ಅಧಿಕಾರ/ಜವಾಬ್ದಾರಿ ವಹಿಸಿವ ಕಲೆ%
· ಪ್ರತ್ಯಾದಾನದ ಕಲೆ%
(*ಈ ಕಲೆಗಳ ಬಗ್ಗೆ ಪ್ರತ್ಯೇಕವಾಗಿ, ವಿವರವಾಗಿ ಬರೆದಿರುತ್ತೇನೆ ಮತ್ತು % ಬೇರೆ ಕಲೆಗಳ ಭಾಗವಾಗಿರುತ್ತದೆ.)
ತಂಡ ಕಟ್ಟುವ ಸಲುವಾಗಿ:
1. ತಂಡದ ನಾಯಕರನ್ನು ನೇಮಿಸಬೇಕು. ನಾಯಕರ ಮೇಲೆ ತಂಡದ ಸದಸ್ಯರಿಗೆ ಸಂಪೂರ್ಣ ವಿಶ್ವಾಸವಿದ್ದಲ್ಲಿ ಅವರು ನಾಯಕರ ಅನುಪಸ್ಥಿತಿಯಲ್ಲೂ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಾರೆ.
2. ತಂಡದ ಪ್ರತಿಯೊಬ್ಬ ಸದಸ್ಯರ ಜೊತೆಯೂ ಒಳ್ಳೆಯ ಸೌಹಾರ್ದಯುತ ಬಾಂಧವ್ಯ ಬೆಳೆಸಿ.
3. ತಂಡದ ಸಂವಹನೆಯ ರೂಪು ರೇಷೆಗಳನ್ನು ಚರ್ಚಿಸಿ. ಪ್ರಕ್ರಿಯೆ ಸುಲಲಿತಗೊಳಿಸಿ.
4. ಒಂದು ತಂಡದಂತೆ ಕೆಲಸಮಾಡುವ ಅಭ್ಯಾಸವನ್ನು ಸದಸ್ಯರಲ್ಲಿ ಬೆಳೆಯುವಂತೆ ಮಾಡಿ.
5. ತಂಡದಲ್ಲಿ ಸದಸ್ಯರ ನಡತೆಯ ನಿಯಮಾವಳಿ ಎಲ್ಲರಿಗೂ ತಿಳಿಯುವಂತೆ ಸ್ಪಷ್ಟಗೊಳಿಸಿ.
6. ತಂಡದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ತನ್ನ ಕೆಲಸ/ಸಮಯ ಬಹಳ ಸ್ಪಷ್ಟವಾಗಿ ತಿಳಿದಿರಬೇಕು. ಜೊತೆಗೆ ಬೇರೆಯವರ ಕೆಲಸ/ಸಮಯ ಏನು ಎಂಬುದರ ಅರಿವೂ ಇರಬೇಕು.
7. ತಂಡದಲ್ಲಿ ಸಾಮರಸ್ಯವಿರಬೇಕು, ಇಂದಿನ ದೈನಂದಿನ ಜೀವನದಲ್ಲಿ ಒಡಕು ಹುಟ್ಟಿಸುವ ಅಂಶಗಳಾದ ಜಾತಿ, ಧರ್ಮ, ಆಹಾರ, ವೇಷ-ಭೂಷದಂತಹ ವಿಷಯಗಳು ಮತ್ತು ವೈಯುಕ್ತಿಕ ಅಂಶಗಳಾದ ಅಹಂಕಾರ, ಮತ್ಸರ ಮುಂತಾದವು ತಂಡವನ್ನು ಕಾಡುತ್ತಿದ್ದಲ್ಲಿ ತಂಡದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ.
ತಂಡರಚನೆಗೆ ಅನುಕೂಲವಾಗುವಂತಹ ಹಲವಾರು ಒಳಾಂಗಣ ಮತ್ತು ಹೊರಾಂಗಣ ಆಟಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಇದನ್ನು ಆಡುವ ಮೂಲಕ ಬೇರೆ ಬೇರೆ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದಿರುವ ಸದಸ್ಯರಲ್ಲಿ ವೈವಿಧ್ಯತೆಯಲ್ಲಿ ಐಕ್ಯತೆ ಎಂಬಂತೆ “ನಾವು ಒಂದೇ ತಂಡ” ಎಂಬ ಭಾವನೆ ಬೆಳೆದು, ಅವರು ತಂಡಕ್ಕೋಸ್ಕರ ಕೆಲಸ ಮಾಡುವಂತೆ ಪ್ರೇರೇಪಣೆಗೆ ಒಳಗಾಗುತ್ತಾರೆ. ಇಂತಹ ಆಟಗಳನ್ನು ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಆಡುತ್ತಿರುತ್ತಾರೆ ಆದರೆ ಅವರಿಗೆ ಆಟಕ್ಕೂ ನಿಜ ಜೀವನಕ್ಕೂ ಇರುವ ಹೋಲಿಕೆ/ಸಂಬಂಧ ಅಥವಾ ಪ್ರಯೋಜನ ತಿಳಿದಿರುವುದಿಲ್ಲ.
ತಂಡರಚನೆ ಬಹಳ ಸುಧೀರ್ಘವಾದ ವಿಷಯ. ನಾನು ಕೇವಲ ಪಕ್ಷಿನೋಟ ಮಾತ್ರ ನೀಡಿದ್ದೇನೆ. ಇಂದಿನ ದಿನಗಳಲ್ಲಿ ತಂಡ ರಚನೆಯ ತಂತ್ರಾಂಶವಷ್ಟೇ ಅಲ್ಲ, ಮೊಬೈಲ್ ಆಪ್ ಕೂಡಾ ಬಂದಿವೆ. ಇವು ತಂಡರಚನೆಯ ಎಲ್ಲಾ ಪ್ರಕ್ರಿಯೆಯನ್ನು ಸ್ವಯಂಚಾಲತೀಕರಣಗೊಳಿಸಿವೆ. ನೀವೂ ನಿಮ್ಮ ತಂಡ ರಚಿಸಿಕೊಳ್ಳಿ.


