ಅರುಣ್ ಫೆರೇರ ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರು ಲೇಖಕರು, ವಕೀಲರು, ವ್ಯಂಗ್ಯಚಿತ್ರಕಾರ, ಚಳುವಳಿಗಾರ, ಉತ್ತಮ ಕತೆಗಾರ ಮತ್ತು ಅದ್ಭುತ ವ್ಯಕ್ತಿತ್ವದ ಸ್ನೇಹಿತ. ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದ ಜೈಲಿನ ಅನುಭವಗಳ ಕುರಿತಾದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್”ನ ಕತೃ ಅರುಣ್ ಫೆರೇರ. ಸಮಾಜದಂಚಿನಲ್ಲಿರುವ ಜನರಿಗೆ ಉಚಿತವಾಗಿ ಕಾನೂನು ಸಹಾಯಗಳನ್ನು ಒದಗಿಸುವ ಸಂಘಟನೆಯಾದ ’ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್’ನ (IAPL) ಪ್ರಮುಖ ಸದಸ್ಯರು. ತುರ್ತು ಪರಿಸ್ಥಿತಿಯ ದಮನ ಕಾರ್ಯಗಳ ನಂತರದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸ್ಥಾಪಿತವಾದ ’ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್’ನ (ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಮಿತಿ) ಸದಸ್ಯರೂ ಹೌದು.
2007ರ ಮೇ ತಿಂಗಳಿನಲ್ಲಿ ಅರುಣ್ ಫೆರೇರರನ್ನು ಅಕ್ರಮವಾಗಿ ಬಂಧಿಸಿ, ಹಿಂಸಿಸಲಾಯಿತು. ತದನಂತರ ಅವರಿಗೆ ’ನಕ್ಸಲೈಟ್’ ಎಂಬ ಹಣೆಪಟ್ಟಿ ಹಚ್ಚಿ ಕಠಿಣಾತಿ ಕಠಿಣ ಯುಎಪಿಎ ಕಾಯ್ದೆಯಡಿ ಆರೋಪಪಟ್ಟಿ ದಾಖಲಿಸಲಾಯಿತು. ಪೋಲೀಸರು ಅರುಣ್ ರವರನ್ನು ದೈಹಿಕವಾಗಿ ಹಿಂಸೆಗೆ ಒಳಪಡಿಸಿದ್ದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅವರ ದುರ್ಬಲ ಶರೀರದ ಫೋಟೋಗಳು ಧೃಡಪಡಿಸಿದವು.
ಸುಳ್ಳು ಕೇಸುಗಳಡಿಯಲ್ಲಿ ಬಂಧನಕ್ಕೊಳಪಡಿಸಿ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಗಾತಿಗಳಿಂದ ದೂರವಾಗಿಸಿದ ಘಟನೆಗಳು ಮೂಡಿಸಿದ ಆಘಾತವನ್ನು ಅರುಣ್ ರವರ ಸರಳ ನಗು ಮತ್ತು ವ್ಯಕ್ತಿತ್ವವು ಮರೆಮಾಚುತ್ತಿತ್ತು. 2007ರಲ್ಲಿ ಬಂಧನವಾದ ನಂತರ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಜರ್ಜರಿತ ವ್ಯಕ್ತಿಯೇ ಈ ನಗುಮುಖದ ಮನುಷ್ಯ ಎಂಬುದನ್ನು ಅರಿಯುವುದೇ ಹಲವರಿಗೆ ಕಷ್ಟವಾಗಿರಬಹುದು.
2010ರ ಸೆಪ್ಟೆಂಬರ್ ತಿಂಗಳಿನಲ್ಲಿ ನಾಗಪುರದ ನ್ಯಾಯಾಲಯ ಅರುಣ್‌ರವರನ್ನು ದೋಷಮುಕ್ತರನ್ನಾಗಿಸಿ ಖುಲಾಸೆಗೊಳಿಸುತ್ತದೆ. ಜೈಲಿನ ಆವರಣದಿಂದ ಹೊರಬಂದ ಅರುಣ್‌ರವರನ್ನು ಸಾದಾ ಉಡುಪಿನಲ್ಲಿದ್ದ ಪೋಲೀಸರು ಮತ್ತೆ ಬಂಧಿಸುತ್ತಾರೆ. ಅರುಣ್‌ರವರ ಬರುವಿಕೆಗೆ ಕಾಯುತ್ತಿದ್ದ ಕುಟುಂಬದವರನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಅವರಿಗೆ ದಕ್ಕುವುದಿಲ್ಲ. ಅರುಣ್ ಜೈಲಿನಲ್ಲಿದ್ದ ಸಮಯದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಅವರ ಮೇಲೆ ಕೇಸ್ ದಾಖಲಿಸಿಬಿಡುತ್ತಾರೆ! ಒಟ್ಟು ನಾಲ್ಕು ವರ್ಷ ಎಂಟು ತಿಂಗಳು ಜೈಲುವಾಸವನ್ನನುಭವಿಸಿದ ಅರುಣ್ 2012ರ ಜನವರಿಯಲ್ಲಿ ಸ್ವತಂತ್ರರಾಗುತ್ತಾರೆ. ಆ ಸಮಯದಲ್ಲಿ ನಾರ್ಕೋಅನಾಲಿಸಿಸ್ ಪರೀಕ್ಷೆ ಕಾನೂನಿಗೆ ಹೊರತಾದುದಾಗಿರಲಿಲ್ಲ. ಪೋಲೀಸರು ಅರುಣ್ ರವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದರು. ಚಳುವಳಿಗಾರರು ನಾರ್ಕೋಅನಾಲಿಸಿಸ್ ಪರೀಕ್ಷೆಯನ್ನು ವಿರೋಧಿಸುವ ಕಾರ್ಯದಲ್ಲಿ ತೊಡಗಲು ಅರುಣ್‌ರವರ ಪ್ರಕರಣ ಕಾರಣವಾಯಿತೆಂದರೆ ತಪ್ಪಲ್ಲ.
ವರುಷಗಳ ಕಾಲ ಜೈಲಿನಲ್ಲಿ ಕಳೆದರೂ ಸಹಿತ, ಬಿಡುಗಡೆಯಾದ ನಂತರ ಅರುಣ್ ಸಿದ್ಧಾರ್ಥ ಕಾಲೇಜಿನಲ್ಲಿ 2015 ರಲ್ಲಿ ತಮ್ಮ ಲಾ ಪದವಿಯನ್ನು ಪೂರ್ತಿಗೊಳಿಸಿ 2016ರಿಂದ ವಕೀಲರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ತಮ್ಮ ರಾಜಕೀಯ ಮತ್ತು ಚಳುವಳಿಯನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಕೀಲರ ಅವಶ್ಯಕತೆ ಇರುವ, ವಕೀಲರ ದೊಡ್ಡ ಮೊತ್ತದ ಫೀಸನ್ನು ಕಟ್ಟಲು ಅಶಕ್ತರಾಗಿರುವ ಜನರನ್ನು ಪ್ರತಿನಿಧಿಸುತ್ತಾರೆ ಅರುಣ್ ಫೆರೇರ.

ಜೈಲಿನಲ್ಲಿದ್ದ ದಿನಗಳ ಅನುಭವಗಳ ಕುರಿತು ಅರುಣ್ ಬರೆದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್” ಭಾರತದಲ್ಲಿ ಜೈಲಿನನುಭವಗಳ ಕುರಿತು ಬಂದ ಪುಸ್ತಕಗಳಲ್ಲೇ ಮಹತ್ವದ್ದು. ಈ ಪುಸ್ತಕವು ಜೈಲಿನಲ್ಲಿನ ಕ್ರೂರ ವಾಸ್ತವಗಳನ್ನು ಬಹಳ ಸೂಕ್ಷ್ಮವಾಗಿ ಭಾರತೀಯರಿಗೆ ಪರಿಚಯಿಸಿತು. ಬಂಧನ ದಿನಗಳಲ್ಲಿನ ಚಿತ್ರಹಿಂಸೆ, ವರುಷಗಳ ಕಾಲ ಸುಳ್ಳು ಕೇಸುಗಳನ್ನಾಕಿ ಹಿಂಸಿಸುವ ಪರಿ ಮತ್ತು ನೆಲದ ಕಾನೂನನ್ನು ಹಾಡಹಗಲಿನಲ್ಲೇ ಮೀರಿನಿಲ್ಲುವ ವ್ಯವಸ್ಥೆಯ ಕುರಿತು ಅರುಣ್ ಬರೆದರು. ಕ್ರೂರತೆಯ ವಿರುದ್ಧ ಸಿಡಿದೆದ್ದು ಮುಷ್ಕರಕ್ಕಿಳಿಯುವ ಖೈದಿಗಳು, ಭರವಸೆ ಕಳೆದುಹೋಗದಂತೆ ಕಾಪಿಡುವ ಪುಟ್ಟ ಸಮಾಧಾನಗಳ ಕುರಿತು ಬರೆದರು. ಕುಖ್ಯಾತ ’ಅಂಡಾ’ ಕೊಠಡಿಯೊಳಗಿನ ಒಂಟಿ ಜೈಲು ವಾಸದ ಕುರಿತು ಬರೆಯುತ್ತಾ ಅರುಣ್ “ಭಯಹುಟ್ಟಿಸುವ ಅಂಡಾ ಸೆಲ್ಲಿನ ವಾತಾವರಣಕ್ಕಿಂತ ಹೆಚ್ಚಾಗಿ ಮನುಷ್ಯರ ಸಂಪರ್ಕವೇ ಇರದಿರುವುದು ಉಸಿರುಗಟ್ಟಿಸುತ್ತದೆ. ಅಂಡಾ ಸೆಲ್ಲಿನೊಳಗಿದ್ದಾಗ ಹದಿನೈದು ಘಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯ ಆ ಕೊಠಡಿಯೊಳಗೆ ನೀವು ಒಬ್ಬರೇ ಕಳೆಯುತ್ತೀರಿ. ನೀವು ನೋಡುವ ಇನ್ನಿತರೆ ಮನುಷ್ಯರೆಂದರೆ ಕಾವಲುಗಾರರು ಮತ್ತು ಅತಿ ಅಪರೂಪಕ್ಕೆ ನಿಮ್ಮ ವಿಭಾಗದಲ್ಲಿರುವ ಇನ್ನಿತರೆ ಖೈದಿಗಳು. ಅಂಡಾ ಸೆಲ್ಲಿನಲ್ಲಿ ಕೆಲವು ವಾರಗಳನ್ನು ಕಳೆದರೆ ಮನುಷ್ಯ ಕುಸಿದುಬಿಡುತ್ತಾನೆ” ಎನ್ನುತ್ತಾರೆ.
’ಕಲರ್ಸ್ ಆಫ್ ಕೇಜ್’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅರುಣ್ “ನಾನೊಬ್ಬ ಚಳುವಳಿಗಾರನಾದರೆ ಏನಾಯಿತು? ಶಂಕಿತ ಮಾವೋವಾದಿಗಳ ಅಥವಾ ಭಯೋತ್ಪಾದಕರ ಪ್ರಕರಣಗಳನ್ನು ನಿಭಾಯಿಸದರೇನಾಯಿತು? ಒಬ್ಬ ವಕೀಲನಾಗಿ ಶಂಕಿತರ ಕೇಸುಗಳನ್ನು ನಾನು ತೆಗೆದುಕೊಂಡರೇನಾಯಿತು? ಈ ಕಾರಣಗಳಿಂದಾಗಿ ನನ್ನನ್ನೂ ಅದೇ ಪ್ರಕರಣಗಳಲ್ಲಿ ಸುಳ್ಳು ಸುಳ್ಳೇ ಸಿಕ್ಕಿಸುವ ಸವಲತ್ತು ಈ ವ್ಯವಸ್ಥೆಗೆ ಸಿಕ್ಕಿದ್ದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.
ದುರದೃಷ್ಟವಶಾತ್ ಈ ಬಾರಿ ಅರುಣ್ ಫೆರೇರರನ್ನು ಸ್ಪಷ್ಟವಾಗಿ ಈ ಕಾರಣಗಳಿಗಾಗಿಯೇ ಬಂಧಿಸಿದ್ದಾರೆ, ಕಾನೂನಾತ್ಮಕ ಸಹಾಯ ಪಡೆಯಲು ಸಾಧ್ಯವಾಗದೆ ಭಾರತದ ಜೈಲುಗಳಲ್ಲಿ ಕೊಳೆಯುತ್ತಿರುವ ಜನರ ಹಕ್ಕುಗಳ ಕುರಿತಾಗಿ ಮಾತನಾಡಿದ ಕಾರಣಕ್ಕೆ ಅರುಣ್ ಫೆರೇರರನ್ನು ಬಂಧಿಸಿದ್ದಾರೆ.
ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ
ಅನುವಾದ: ಡಾ. ಕೆ ಆರ್ ಅಶೋಕ್
ಇದನ್ನೂ ಓದಿ; ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ


