Homeಮುಖಪುಟಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ಮಂಡೇಲಾ ಅವರನ್ನು ಬಂಧಿಸಿಟ್ಟಿದ್ದ ದ್ವೀಪದ ಸೆರೆಮನೆಯಲ್ಲಿ, ಹೊಯ್ದಾಡುವ ಕಡಲು ಬಿಟ್ಟರೆ ಏನೂ ಕಾಣುತ್ತಿರಲಿಲ್ಲ. ಆದರೆ ಕಾಲುಶತಮಾನ ಸೆರೆಯಲ್ಲಿಟ್ಟರೂ ಅವರ ಕನಸನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ.

- Advertisement -
- Advertisement -

ಜಗತ್ತಿನ ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿ ಒಂದಾದ ಅಮೆರಿಕದಲ್ಲಿ ಸ್ವಾತಂತ್ಯ್ರ ದೇವಿ ಪ್ರತಿಮೆ ಖ್ಯಾತವಾಗಿದೆ. ಅದು ಇಂಗ್ಲೆಂಡಿನ ವಸಾಹತುಶಾಹಿ ರಾಜಕೀಯ ಬಂಧನದಿಂದ ದೇಶವು ವಿಮೋಚನೆಗೊಂಡ ಪ್ರತೀಕ. ಆದರೆ ಈ ಪ್ರತಿಮೆ ಸ್ಥಾಪಿಸುವ ಕಾಲಕ್ಕೆ ಅಮೆರಿಕದ ಬಿಳಿಯರು ಆಫ್ರಿಕದಿಂದ ಸೆರೆಹಿಡಿದು ತಂದ ಕಪ್ಪುಜನರನ್ನು ಗುಲಾಮರಾಗಿ ಇಟ್ಟುಕೊಂಡಿದ್ದರು. ಅವರಿಗೆ ಮತದಾನದ ಹಕ್ಕು ಸಿಕ್ಕಿದ್ದು 1965ರಲ್ಲಿ. ಈಗಲೂ ಅಮೆರಿಕ, ತನ್ನ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ, ಜಗತ್ತಿನ ಅತಿಹೆಚ್ಚು ಸೆರೆಮನೆ ಮತ್ತು ಸೆರೆಯಾಳನ್ನು ಇರಿಸಿಕೊಂಡಿರುವ ದೇಶ. ಅಲ್ಲಿರುವ ಹೆಚ್ಚಿನ ಕೈದಿಗಳು ಕಪ್ಪುಜನರು. ಈಚೆಗೆ ಬಿಳಿಯ ಪೋಲಿಸನು ಕಪ್ಪು ವ್ಯಕ್ತಿಯ ಕೈಕಟ್ಟಿ ಕುತ್ತಿಗೆಯ ಮೇಲೆ ಮೊಣಕಾಲೂರಿ ಸಾಯಿಸಿದ್ದು, ವರ್ಣಭೇದದ ಸಾಮಾಜಿಕ ಸೆರೆಮನೆ ಇನ್ನೂ ಇದೆಯೆಂಬುದಕ್ಕೆ ಸಾಕ್ಷಿ.

ಇಂತಹ ವೈರುಧ್ಯಗಳು ಎಲ್ಲ ದೇಶಗಳಲ್ಲೂ ಬೇರೆಬೇರೆ ಸ್ವರೂಪದಲ್ಲಿದೆ. ಧಾರ್ಮಿಕ ಸಂಪ್ರದಾಯವು ತಮ್ಮಿಚ್ಛೆಯಂತೆ ಬದುಕಲು ಅಡ್ಡಿಯಾಗಿವೆ ಎಂದು ಬಂಡೇಳುವ ಸವಲತ್ತುಳ್ಳ ವರ್ಗಕ್ಕೆ, ತಮ್ಮ ವರ್ಗ ಜಾತಿ ಪುರುಷವಾದಗಳು ಬಡವರನ್ನು ದಲಿತರನ್ನು ಮಹಿಳೆಯರನ್ನು ಬಂಧಿಸಿರುವ ಬಗ್ಗೆ ಸಂವೇದನೆ ಇರುವುದಿಲ್ಲ. ಬಹುಸಂಖ್ಯಾತವಾದದ ಆಳಿಕೆಯ ದೇಶದಲ್ಲಿ, ತಮ್ಮ ನಾಗರಿಕ ಹಕ್ಕುಗಳ ಬಗ್ಗೆ ಕಳವಳಿಸುವ ಮುಸ್ಲಿಂ ಗಂಡಸರಿಗೆ, ತಮ್ಮದೇ ಮಹಿಳೆಯರು ಬಂಧಿಗಳಾಗಿರುವ ಬಗ್ಗೆ ಪರಿವೆ ಇರುವುದಿಲ್ಲ. ತಮ್ಮ ದೇಶಗಳಲ್ಲಿ ವ್ಯಕ್ತಿ ಸ್ವಾತಂತ್ಯ್ರಗಳ ಬಗ್ಗೆ ಹೋರಾಡುತ್ತಿದ್ದ ಯೂರೋಪಿನ ನಾಗರಿಕ ಸಮಾಜದ ಎಷ್ಟೊ ಚಿಂತಕರಿಗೆ, ತಮ್ಮ ದೇಶದ ಪ್ರಭುತ್ವಗಳು ಆಫ್ರಿಕಾ ಏಶ್ಯಾ ಲ್ಯಾಟಿನ್ ಅಮೆರಿಕ ದೇಶಗಳನ್ನು ಆಕ್ರಮಿಸಿಕೊಂಡು, ಬಯಲು ಸೆರೆಮನೆಯಲ್ಲಿಟ್ಟಿವೆ ಎಂಬುದು ಸಮಸ್ಯೆಯಾಗಿ ತೋರಲಿಲ್ಲ.

ಈ ವೈರುಧ್ಯವು ಅಪರಾಧ, ಕಾಯಿದೆ, ನ್ಯಾಯಾಂಗ, ವಿಚಾರಣೆ, ಶಿಕ್ಷೆ, ಸೆರೆಮನೆ ಮುಂತಾದವು, ಏಕಪಕ್ಷೀಯವಾಗಿ ಗ್ರಹಿಸಬೇಕಾದ ನಿರಪೇಕ್ಷ ಸಂಗತಿಗಳಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಸೆರೆಮನೆ ಎನ್ನುವುದು ಅಪರಾಧ ಮತ್ತು ಶಿಕ್ಷೆ ಕುರಿತು ಪ್ರಭುತ್ವ ಮತ್ತು ನಾಗರಿಕ ಸಮಾಜಗಳು ರೂಪಿಸಿಕೊಂಡಿರುವ ದೃಷ್ಟಿಕೋನ ಕುರಿತ ಒಂದು ಮೂರ್ತ ಹೇಳಿಕೆ. `ಕಳ್ಳರು ಕೊಲೆಗಾರರು ವಂಚಕರು ನಾಗರಿಕ ಸಮಾಜದಿಂದ ಬೇರೆ ಮತ್ತು ದೂರವಾಗಿರಬೇಕು; ಅವರನ್ನು ಶಿಕ್ಷಿಸಿದರೆ ಅಂತಹ ಅಪರಾಧಗಳು ಹೆಚ್ಚದಂತೆ ಭಯವೊಂದು ಸೃಷ್ಟಿಯಾಗುತ್ತದೆ. ಆಗ ನಾಗರಿಕ ಸಮಾಜ ನೆಮ್ಮದಿಯಾಗಿರುತ್ತದೆ’- ಇದು ಜೈಲಿನ ಪರಿಕಲ್ಪನೆಯ ಹಿಂದಿನ ಪ್ರಭುತ್ವದ ತರ್ಕ. ಪ್ರಶ್ನೆಯೆಂದರೆ, ಅಪರಾಧ ಎಂದರೆ ಯಾವುದು ಮತ್ತು ಯಾವುದಲ್ಲ? ಇದನ್ನು ನಿರ್ಣಯ ಮಾಡುವವರು ಯಾರು? ಈ ಪ್ರಶ್ನೆಯು, ಮತಧರ್ಮದ ಹೆಸರಲ್ಲಿ ಜನರನ್ನು ಕೊಂದವರು ಧರ್ಮರಕ್ಷಕರಾಗಿ ಮೆರೆಯುವ; ರಾಷ್ಟ್ರೀಯತೆಯ ಹೆಸರಲ್ಲಿ ಕೆಲವು ಸಮುದಾಯ ಇಲ್ಲವೇ ಪ್ರಾಂತ್ಯಗಳ ಸಹಜ ಹಕ್ಕುಗಳನ್ನು ಮೊಟಕುಗೊಳಿಸುವ; ನಾಗರಿಕ ಹಕ್ಕು ಸ್ವಾತಂತ್ಯ್ರಗಳಿಗೆ ದನಿಯೆತ್ತಿದ್ದವರನ್ನು ಸೆರೆಗಟ್ಟುವ ಸನ್ನಿವೇಶಗಳಲ್ಲಿ, ಮುಖ್ಯವಾಗುತ್ತದೆ.

ಹೀಗಾಗಿ ಸೆರೆಮನೆಯ ಸ್ಥಾಪಿತ ಮತ್ತು ಜನಪ್ರಿಯ ವ್ಯಾಖ್ಯೆಗೆ ಇನ್ನೊಂದು ಮುಖವಿದೆ. ಅದನ್ನು ಕಾಣಬೇಕಾದರೆ, ಪ್ರಭುತ್ವದ ಕಣ್ಣಿಂದ ನೋಡುವುದಲ್ಲ. ಸೆರೆಮನೆಯ ಒಳಗಿರುವ ಕಣ್ಣಿಂದ ಪ್ರಭುತ್ವ, ಅದು ರೂಪಿಸಿದ ಕಾನೂನು, ನ್ಯಾಯಾಲಯ, ಧರ್ಮ, ನಾಗರಿಕ ಸಮಾಜಗಳತ್ತ ನೋಡಬೇಕು. ಆಗ ಅಪರಾಧ-ಶಿಕ್ಷೆಯ ಅರ್ಥಗಳೇ ಬೇರೆಯಾಗುತ್ತವೆ. ಸೆರೆಮನೆಯಲ್ಲಿ ಇರುವವರೆಲ್ಲ ಅಪರಾಧಿಗಳಲ್ಲ. ತಮ್ಮ ಸಮಾಜದ ನಾಡಿನ ಬಿಡುಗಡೆಗಾಗಿ ದನಿಯೆತ್ತಿದ ಕನಸುಗಾರರೂ ಅಲ್ಲಿದ್ದಾರೆ; ಸಮಾಜ ಕಂಟಕರು ಸೆರೆಮನೆಯ ಹೊರಗಿದ್ದಾರೆ; ಅವರ ಕೈಯಲ್ಲಿ ಅಧಿಕಾರವಿದೆ ಎಂದು ಗೋಚರವಾಗುವುದು. ಪ್ರಜಾಪ್ರಭುತ್ವ, ನ್ಯಾಯಾಲಯ, ಸಂಸತ್ತು, ಕಾನೂನು ಮತ್ತು ನಾಗರಿಕ ಸಮಾಜವೆಂದು ನಾವು ಕಟ್ಟಿಕೊಂಡಿರುವ ಪವಿತ್ರೀಕರಣಗೊಂಡ ಸಂಗತಿಗಳ ಪೊಳ್ಳುತನವೂ ಕಾಣುವುದು. ಹೀಗಾಗಿ ಸೆರೆಮನೆಗಳು, ನಮ್ಮ ಡೆಮಾಕ್ರಸಿಯ ಜೀವಂತಿಕೆಯನ್ನು ಹಾಗೂ ನಾಗರಿಕ ಸಮಾಜದ ಸ್ಪಂದನಶೀಲತೆಯನ್ನು ಅಳೆವ ಮಾನದಂಡವಾಗಬಲ್ಲವು.

ಈ ವೈರುಧ್ಯವು ಅಪರಾಧಿ ಮನೋಭಾವದ ವ್ಯಕ್ತಿ, ಪಕ್ಷ, ಸಿದ್ಧಾಂತಗಳು ಅಧಿಕಾರ ಹಿಡಿದಾಗೆಲ್ಲ ಮತ್ತಷ್ಟು ಆಳವಾಗಿ ಪರಿಣಮಿಸುತ್ತದೆ. ಚರಿತ್ರೆಯಲ್ಲಿ ಫ್ಯಾಸಿಸ್ಟರು, ಧರ್ಮಾಂಧರು, ವರ್ಣಭೇದವಾದಿಗಳು ಅಧಿಕಾರ ಹಿಡಿದಾಗಲೆಲ್ಲ ಹೀಗಾಗಿದೆ. ಕಮ್ಯುನಿಸ್ಟರೆಂದು ಹೇಳಿಕೊಂಡು ಕಮ್ಯುನಿಸಂನ ಮೂಲಭೂತ ತಿರುಳಿಗೆ ವಿರುದ್ಧವಾಗಿ ಆಳಿದ ಸರ್ವಾಧಿಕಾರಿಗಳು ಬಂದಾಗಲೂ ಹೀಗಾಗಿದೆ. ವಸಾಹತುಶಾಹಿ ಆಳ್ವಿಕೆಗಳಲ್ಲಿ ಇದಾಗಿದೆ. ಅನೇಕ `ಪ್ರಜಾಪ್ರಭುತ್ವ’ ಎಂದು ಕರೆದುಕೊಳ್ಳುವ ರಾಷ್ಟ್ರಗಳಲ್ಲಿ ಈಗಲೂ ಆಗುತ್ತಿದೆ.

ಕಾರಾಗೃಹ, ಸೆರೆಮನೆ, ತುರಂಗ ಎಂದೆಲ್ಲ ಹೆಸರಿದ್ದರೂ ಜೈಲು ಎಂಬ ಶಬ್ದವೇ ಕನ್ನಡದಲ್ಲಿ ಚಾಲ್ತಿಯಲ್ಲಿದೆ. ರಾಜದ್ರೋಹ ಎಂಬ ಹೆಸರಿನ ಕರಾಳ ಕಾನೂನು ರೂಪಿಸಿ, ಬಲಿಷ್ಠವಾದ ಕಲ್‌ಕಟ್ಟಡಗಳನ್ನು ಕಟ್ಟಿ, ತಮ್ಮ ವಿರುದ್ಧ ದನಿಯೆತ್ತಿದವರನ್ನೆಲ್ಲ ಜೈಲಿಗೆ ತಳ್ಳಿದವರು ಆಂಗ್ಲರೇ ಆಗಿದ್ದರಿಂದ, ಈ ಶಬ್ದಕ್ಕೆ ಚಾರಿತ್ರಿಕ ಹಿನ್ನೆಲೆಯೂ ಇದೆ. ಆದರೆ ಜೈಲು ಶಬ್ದದಲ್ಲಿಲ್ಲದ ಅರ್ಥಚ್ಛಾಯೆ ಕನ್ನಡದ ಸೆರೆಮನೆ ಕಾರಾಗೃಹಗಳಲ್ಲಿದೆ. ಕೈದಿಗಳಿಗೆ ಊಟ ವಸತಿ ಕೊಡುವ ಕಾರಣಕ್ಕೆ ಜೈಲೂ `ಮನೆ’ ಅಥವಾ `ಗೃಹ’ವೇ. ಆದರೆ ಅದು ವ್ಯಕ್ತಿಯನ್ನು ಮನೆಯಿಂದ ಮನೆಯವರಿಂದ ಸಮಾಜದಿಂದ ಬೇರೆಮಾಡುತ್ತದೆ, ದೂರಗೊಳಿಸುತ್ತದೆ. ಎಂತಲೇ ಜೈಲನ್ನು ಕಟ್ಟುವ ಜಾಗ ಊರಾಚೆ, ದೂರ ದ್ವೀಪಗಳಲ್ಲಿ ಅಥವಾ ಹೆಪ್ಪುಗಟ್ಟುವ ಚಳಿ ಪ್ರದೇಶದಲ್ಲಿರುತ್ತದೆ. ಇದರ ಇರಾದೆ ಚಳುವಳಿಗಾರ ಕೈದಿಗಳನ್ನು ಸಮಾಜದಿಂದ ದೈಹಿಕವಾಗಿ ದೂರವಿಡುವುದು ಮಾತ್ರವಲ್ಲ; ಸಮಾಜದ ಜತೆ ಅವರಿಗಿರುವ ಜೀವಂತ ಸಂಬಂಧವನ್ನು ಕತ್ತರಿಸುವುದು. ಅವರನ್ನು ಏಕಾಂಗಿಗೊಳಿಸಿ ಚೈತನ್ಯ ಕುಗ್ಗಿಸುವುದು. ಅವರ ಕನಸನ್ನು ಭಗ್ನಗೊಳಿಸುವುದು.

ಪ್ರಭುತ್ವಕ್ಕೆ ಚಳುವಳಿಗಾರರನ್ನು ಚಿಂತಕರನ್ನು ಜೈಲಿಗೆ ಹಾಕುವ ಉದ್ದೇಶ ಅವರನ್ನು ಮಾತ್ರ ಶಿಕ್ಷಿಸುವುದಲ್ಲ. ಅವರಂತೆ ಚಿಂತನೆ ಮಾಡುವ ಬೆಂಬಲಿಸುವ ಎಲ್ಲರನ್ನೂ ಎಚ್ಚರಿಸುವುದು. ಭೂಮಾಲೀಕರು ಒಬ್ಬ ಜೀತದಾಳಿಗೆ ಕಂಬಕ್ಕೆ ಕಟ್ಟಿ ಹೆಚ್ಚಾಗಿ ಬಡಿಯುವುದು, ಉಳಿದವರಿಗೆ ಎಚ್ಚರಿಕೆ ರವಾನಿಸಲು. ಪ್ರಭುತ್ವಕ್ಕೆ ನಿಜವಾದ ಗುರಿ ಜೈಲಿನಾಚೆ ಇರುವ ನಾಗರಿಕ ಸಮಾಜವೇ ಆಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಲೇಖಕ-ಪತ್ರಕರ್ತ-ಮಾನವಹಕ್ಕು ಕಾರ್ಯಕರ್ತ-ಚಿಂತಕರ ಕೊಲೆಗಳ ಹಿಂದೆಯೂ ಇದೇ ತರ್ಕ ಕೆಲಸ ಮಾಡಿದೆ. ಜೈಲಿನ ಅನುಭವ ಕಥನಗಳಲ್ಲಿ ಕಂಡುಬರುವ ಘಾತಕ ವಿಷಯವೆಂದರೆ, ವ್ಯಕ್ತಿಗೆ ಕೊಡಲಾಗುವ ದೈಹಿಕ ಹಿಂಸೆಯದಲ್ಲ. ಅನಿಶ್ಚಿತ ಅವಧಿಯವರೆಗೆ ವ್ಯಕ್ತಿಯನ್ನು ಕೊಳೆಯಲು ಬಿಡುವುದು. ಅಪರಾಧವೇನೆಂದು ತಿಳಿಸಿದರೆ, ಶಿಕ್ಷೆಯ ಪ್ರಮಾಣ ಖಚಿತವಾದರೆ, ಬಿಡುಗಡೆಯ ದಿನವನ್ನು ಗುರಿಯಾಗಿಟ್ಟುಕೊಂಡು ಕಾಲಕಳೆಯಬಹುದು. ಅದು ಬೆಳಕಿನ ಭರವಸೆಯಲ್ಲಿ ಕತ್ತಲಸುರಂಗದಲ್ಲಿ ನಡೆದಂತೆ. ಆದರೆ ವಿಚಾರಣೆಯಿಲ್ಲದೆ ಸುಮ್ಮನೆ ಕೂಡಿಹಾಕುವುದು ನಿಜವಾದ ಯಾತನೆ. ಎಂತಲೇ ವಿಚಾರಣಾಧೀನ ಕೈದಿಗಳು ಹುಚ್ಚರಾಗುವರು, ಆತ್ಮಹತ್ಯೆ ಮಾಡಿಕೊಳ್ಳುವರು. ಯಾವುದಾದರೂ ಸರಿ, ತೀರ್ಪುಕೊಡಿ ಎಂದು ನ್ಯಾಯಾಲಯದಲ್ಲಿ ಚಪ್ಪಲಿ ತೂರುವವರ ಹಿಂದೆಯೂ ಈ ಅನಿಶ್ಚಿತತೆ ತಂದ ಹತಾಶೆಯೇ ಇರುವುದು.

ಜೈಲೆಂದರೆ, `ಅಪರಾಧಿ’ ಎಂದು ಕರೆಯಲಾದವರನ್ನು ಕೂಡಿಹಾಕಿರುವ ಎತ್ತರದ ಗೋಡೆಯುಳ್ಳ, ಸುತ್ತೆಲ್ಲ ಕಾವಲುಗಾರರ ಪಹರೆಯಿರುವ ಕಟ್ಟಡ ಎಂಬುದು ಅರ್ಧಸತ್ಯ. ಬೇರೆಬೇರೆ ಬಗೆಯ ಸೆರೆಮನೆಗಳು ಸಮಾಜದಲ್ಲಿವೆ ಎನ್ನುವುದು ಇನ್ನರ್ಧ ಸತ್ಯ. ರೈತರಿಗೆ ಮುಕ್ತ ಮಾರುಕಟ್ಟೆಯ ನಿಯಮಗಳು, ಮಹಿಳೆಯರಿಗೆ ಪುರುಷವಾದಿ ಮೌಲ್ಯಗಳ ವಿವಾಹ ಕುಟುಂಬಗಳು, ದಲಿತರಿಗೆ ಜಾತಿವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತವಾದಿ ರಾಷ್ಟ್ರಿಯತೆ, ಮಕ್ಕಳಿಗೆ ಅವರ ಮೇಲೆ ಹೇರಲಾದ ಶಿಕ್ಷಣ, ಲೇಖಕರಿಗೆ ಸಾಂಪ್ರದಾಯಿಕ ಸಾಹಿತ್ಯದ ನಿಯಮಗಳು, ಜೈಲಂತೆ ತೋರುತ್ತವೆ. ಆದರೆ ಇಂತಹ ಬಹುರೂಪೀ ಸೆರೆಮನೆಗಳನ್ನು ಒಡೆದು ಹೊರಬಂದು ಹೊಸ ಕಾವ್ಯ, ಹೊಸ ಸಮಾಜ, ಹೊಸ ಬದುಕು, ಹೊಸನಾಡು ಕಟ್ಟುವ ಕೆಲಸವು ಕೂಡ ಜೀವಂತ ಸಮಾಜದಲ್ಲಿ ನಡೆದಿರುತ್ತದೆ. ಯಾರು ಯಾವ ಬಗೆಯ ಬಂಧನವನ್ನು ಹೇಗೆ ಮುರಿಯುತ್ತಾರೆ ಎನ್ನುವುದರ ಮೇಲೆ ಅವರ ಸ್ವಾತಂತ್ಯ್ರದ ಮತ್ತು ಪರ್ಯಾಯ ಸೃಷ್ಟಿಯ ಸ್ವರೂಪ ನಿಶ್ಚಿತವಾಗುತ್ತದೆ.

ರೈತರಿಗೆ ಮುಕ್ತ ಮಾರುಕಟ್ಟೆಯ ನಿಯಮಗಳು, ಮಹಿಳೆಯರಿಗೆ ಪುರುಷವಾದಿ ಮೌಲ್ಯಗಳ ವಿವಾಹ ಕುಟುಂಬಗಳು, ದಲಿತರಿಗೆ ಜಾತಿವ್ಯವಸ್ಥೆ, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತವಾದಿ ರಾಷ್ಟ್ರಿಯತೆ, ಮಕ್ಕಳಿಗೆ ಅವರ ಮೇಲೆ ಹೇರಲಾದ ಶಿಕ್ಷಣ, ಲೇಖಕರಿಗೆ ಸಾಂಪ್ರದಾಯಿಕ ಸಾಹಿತ್ಯದ ನಿಯಮಗಳು, ಜೈಲಂತೆ ತೋರುತ್ತವೆ.

ಸಂವೇದನಶೀಲ ಸಾಹಿತ್ಯ ಕೃತಿಗಳು, ಬಲಿಷ್ಠರ ಪರವಾದ ಅಪರಾಧ ಮತ್ತು ಶಿಕ್ಷೆಯ ವ್ಯಾಖ್ಯೆಯ ಪರಿಣಾಮಗಳನ್ನು, ಅದರ ಭಾಗವಾದ ಪ್ರಭುತ್ವ ಜೈಲು ನ್ಯಾಯಾಲಯಗಳ ಟೊಳ್ಳುತನವನ್ನು ಕಾಣಿಸುತ್ತಲೇ ಚರಿತ್ರೆಯುದ್ದಕ್ಕೂ ಬಂದಿವೆ. ಮುಮ್ಮಡಿಯವರ ಕಾಲದ ರಾಜಕೀಯ ಅರಾಜಕತೆಯನ್ನು ಬಿಂಬಿಸುವ ‘ಮಾಡಿದ್ದುಣ್ಣೊ ಮಹಾರಾಯ’ ಕಾದಂಬರಿಯ ಕೊನೆಯ ದೃಶ್ಯ ನೆನಪಾಗುತ್ತದೆ. ಅದರಲ್ಲಿ ಸಿರಿವಂತರ ಮನೆಯನ್ನು ದೋಚುತ್ತಿದ್ದ ವೃತ್ತಿಪರ ಕಳ್ಳನೊಬ್ಬ ತನ್ನ ಪ್ರಾಮಾಣಿಕ ಮತ್ತು ಮಾನವೀಯ ವರ್ತನೆಯಿಂದ ಬಿಡುಗಡೆಯಾಗಿ ಹೊರಬರುತ್ತಿದ್ದರೆ; ದೊರೆಗೆ ನಿಷ್ಠವಾಗಿದ್ದ ದೊಡ್ಡದೊಡ್ಡ ಅಧಿಕಾರಿಗಳೂ ಧಾರ್ಮಿಕ ನಾಯಕರೂ ಮಾಡಬಾರದ ಅನ್ಯಾಯ ಮಾಡಿದ್ದಕ್ಕೆ ಜೈಲಿನೊಳಗೆ ಪ್ರವೇಶಿಸುವರು.

ಜೈಲುಗಳು ಅನೇಕ ಕನಸುಗಾರರನ್ನು ಕೊಂದಿವೆ, ದಿಟ. ಆದರೆ ಎಲ್ಲರನ್ನು ಅಲ್ಲ. ಮಂಡೇಲಾ ಅವರನ್ನು ಬಂಧಿಸಿಟ್ಟಿದ್ದ ದ್ವೀಪದ ಸೆರೆಮನೆಯಲ್ಲಿ, ಹೊಯ್ದಾಡುವ ಕಡಲು ಬಿಟ್ಟರೆ ಏನೂ ಕಾಣುತ್ತಿರಲಿಲ್ಲ. ಆದರೆ ಕಾಲುಶತಮಾನ ಸೆರೆಯಲ್ಲಿಟ್ಟರೂ ಅವರ ಕನಸನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅವರ ಕನಸಿನ ಭಾಗವಾಗಿ ಜೈಲಿನ ಹೊರಗೆ ತಪಿಸುವ ಜನಸಾಗರವಿತ್ತು. ತನ್ನ ಹೋರಾಟಕ್ಕೆ ಘನ ಉದ್ದೇಶವಿದ್ದಾಗ, ಅದಕ್ಕೆ ಬೆಂಬಲವಾಗಿ ಸಮಾಜವೂ ಮಿಡಿಯುತ್ತಿದ್ದಾಗ, ಜೈಲು ವ್ಯಕ್ತಿಯ ಆತ್ಮಸ್ಥೈರ್ಯ ಕುಂದಿಸುವುದಿಲ್ಲ. ದೊಡ್ಡ ಧ್ಯೇಯಕ್ಕಾಗಿ ಜೈಲಿಗೆ ಹೋಗುವುದು ಹೊಸಶಕ್ತಿ ಪಡೆದುಕೊಳ್ಳುವ ಕ್ರಿಯೆಯೇ. ಆಗ ಜೈಲು ವ್ಯಕ್ತಿತ್ವವನ್ನು ಕಟೆವ ಶಿಲ್ಪಿಯಾಗುತ್ತದೆ. ಗಾಂಧಿ ಮಂಡೇಲಾ ಹೋರಾಟಕ್ಕೆ, ಕೀನ್ಯಾ ಚಿಂತಕ ಗೂಗಿಯವರ ಬರೆಹಕ್ಕೆ, ತಾತ್ವಿಕ ಖಚಿತತೆ ಒದಗಿದ್ದು ಸೆರೆಮನೆಗಳಿಂದ. ಆದರೆ ದಮನಿತ ಸಮಾಜದ ಒಳಿತಿಗಾಗಿ ಪ್ರಭುತ್ವವನ್ನು ಎದುರುಹಾಕಿಕೊಂಡು ಜೈಲುಪಾಲಾದ ಚೈತನ್ಯಶೀಲ ವ್ಯಕ್ತಿಗಳು ಸೆರೆಮನೆಯಲ್ಲಿ
ದೈಹಿಕ-ಮಾನಸಿಕ ಕಷ್ಟ ಅನುಭವಿಸುವುದು ದಿಟ. ಆದರೆ ಆಗ ಜೈಲಿನ ಹೊರಗಿದ್ದೂ ಅಪರಾಧಿಯ ಸ್ಥಾನದಲ್ಲಿ ಪ್ರಭುತ್ವ, ನ್ಯಾಯಾಲಯ ಕಾಯಿದೆಗಳು ನಿಲ್ಲುತ್ತವೆ; ಅವಕ್ಕಿಂತಲೂ ನಿರ್ಲಿಪ್ತವಾಗಿರುವ ನಾಗರಿಕ ಸಮಾಜ ಅಪರಾಧಿಯಾಗುತ್ತದೆ.

ಬೆಂಗಳೂರಿನ ಹಳೇ ಸೆಂಟ್ರಲ್‌ಜೈಲು ನೆನಪಾಗುತ್ತಿದೆ. ಅಲ್ಲೀಗ ಜೈಲನ್ನು ಕೆಡವಿ ಸ್ವಾತಂತ್ಯ್ರ ಉದ್ಯಾನವನ ಮಾಡಲಾಗಿದೆ. ಅದರ ಮುಂದೆ ಸಾಮಾಜಿಕ ಜೈಲುಗಳಿಂದ ಹೇಗೆ ಬಿಡಿಸಿಕೊಂಡು ಜನ ನಿರಂಕುಶಮತಿಗಳಾಗಬೇಕು ಅನಿಕೇತನವಾಗಬೇಕು ಎಂದು ಹೇಳಿದ ಕುವೆಂಪು ಪ್ರತಿಮೆಯಿದೆ. ಇದು ಅರ್ಥಪೂರ್ಣವಾಗಿದೆ. ಆದರೆ ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಚಿಂತಕರು ಕೊಲೆಯಾಗುತ್ತ, ಜೈಲುಪಾಲಾಗುತ್ತ ಇರುವುದನ್ನು ನೋಡುವಾಗ, ಕವಿಯ ಆಶಯಗಳು ಪ್ರತಿಮೆಯ ಕೆಳಗಿನ ಫಲಕದಲ್ಲಷ್ಟೆ ಉಳಿಯಲಿದೆಯೇ ಎಂಬ ಆತಂಕ ಕಾಡುತ್ತದೆ. ನೈತಿಕ ಪತನಹೊಂದಿದ ಪ್ರತಿರೋಧದ ಬೆನ್ನೆಲುಬಿಲ್ಲದ ನಾಗರಿಕ ಸಮಾಜದಲ್ಲಿ ಇಂತಹ ಆತಂಕಗಳು ನಿಜವೂ ಆಗುತ್ತವೆ. ಆಗ ಜೈಲುಗಳು ನಿರಾಂತಕವಾಗಿ ಜನರನ್ನು ತುಂಬಿಸಿಕೊಳ್ಳುತ್ತವೆ.

– ರಹಮತ್ ತರೀಕೆರೆ
ರಹಮತ ತರೀಕೆರೆ ಕನ್ನಡ ನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕಗಳನ್ನು ರಚಿಸಿದ್ದಾರೆ. ತರೀಕೆರೆ ಅವರ ವಿಮರ್ಶಾ ಸಂಕಲನ ‘ಕತ್ತಿಯಂಚಿನ ದಾರಿ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪಿತೃಪ್ರಧಾನ ಪ್ರಭುತ್ವದಲ್ಲಿ ಜಡ್ಡುಗಟ್ಟಿದ ಸಮಾಜಕ್ಕೆ ಸವಾಲೆಸೆದ ಶೋಮಾ ಸೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...