ಲೋಕಸಭೆ ಚುನಾವಣೆಯ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದೇಶದ ಜನರಿಗೆ ಭರಪೂರ ಭರವಸೆಯನ್ನು ನೀಡುವ “ಕೇಜ್ರಿವಾಲ್ ಕಿ ಗ್ಯಾರಂಟಿ” ಯೋಜನೆಯನ್ನು ಘೋಷಿಸಿದ್ದಾರೆ.
ಭಾನುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಮ್ಮ ’10 ಗ್ಯಾರಂಟಿ’ಗಳನ್ನು ಘೋಷಿಸಿದ್ದಾರೆ. ದೇಶಾದ್ಯಂತ 24 ಗಂಟೆಗಳ ಕಾಲ ಉಚಿತ ವಿದ್ಯುತ್, ಉಚಿತ ಶಿಕ್ಷಣ ಮತ್ತು ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಮತ್ತು ಭಾರತದ ಗಡಿಯಲ್ಲಿ ಚೀನಾ ವಶಪಡಿಸಿಕೊಂಡಿದೆ ಎನ್ನಲಾದ ಭೂಮಿಯನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದಾರೆ.
ಈ ಖಾತರಿಗಳ ಬಗ್ಗೆ ಇತರ ಇಂಡಿಯಾ ಬ್ಲಾಕ್ ಪಾಲುದಾರರೊಂದಿಗೆ ಚರ್ಚಿಸಿಲ್ಲ, ಆದರೆ ಯಾರಿಗೂ ಯಾವುದೇ ತಕರಾರು ಇಲ್ಲ ಎಂದು ಭಾವಿಸಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದ ನಂತರ, ಈ ಭರವಸೆಗಳನ್ನು ಕಾರ್ಯಗತಗೊಳಿಸುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ ಕೇಜ್ರಿವಾಲ್ ಹೇಳಿದ್ದಾರೆ.
“ಕೇಜ್ರಿವಾಲ್ ಕಿ ಗ್ಯಾರಂಟಿ”ಯಡಿಯಲ್ಲಿನ 10 ಗ್ಯಾರೆಂಟಿಗಳು
ವಿದ್ಯುಚ್ಛಕ್ತಿ ಖಾತ್ರಿ: ದೇಶದಾದ್ಯಂತ ಮೊದಲ 200 ಯೂನಿಟ್ ವಿದ್ಯುತ್ ಉಚಿತದೊಂದಿಗೆ 24-ಗಂಟೆಗಳ ಕಾಲ ವಿದ್ಯುತ್ ಸರಬರಾಜು.
ಶಿಕ್ಷಣ ಖಾತ್ರಿ: ಎಲ್ಲರಿಗೂ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುವ ಮತ್ತು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಭರವಸೆ.
ಆರೋಗ್ಯ ಖಾತ್ರಿ: ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಭರವಸೆ.
ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಮಿಯನ್ನು ಮುಕ್ತಗೊಳಿಸುವ ಗ್ಯಾರಂಟಿ: ಭಾರತದ ಭೂಮಿಯನ್ನು ಚೀನಾದಿಂದ ಮುಕ್ತಗೊಳಿಸಲಾಗುವುದು, ಸೇನೆಗೆ ಮುಕ್ತ ಕಾರ್ಯ ನಿರ್ವಹಣೆಗೆ ಅವಕಾಶ ನೀಡುವ ಭರವಸೆ.
ಅಗ್ನಿವೀರ್ ಯೋಜನೆ ರದ್ದುಗೊಳಿಸುವ ಗ್ಯಾರಂಟಿ: ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ಅಗ್ನಿವೀರ್ ಯೋಜನೆ ರದ್ದುಗೊಳಿಸುವ ಗ್ಯಾರೆಂಟಿ.
MSPಯ ಖಾತರಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಗ್ಯಾರೆಂಟಿ.
ರಾಜ್ಯದ ಸ್ಥಾನಮಾನದ ಭರವಸೆ: ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನದ ಭರವಸೆ.
ಉದ್ಯೋಗ ಖಾತ್ರಿ: ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ.
ಭ್ರಷ್ಟಾಚಾರದ ವಿರುದ್ಧ ಕ್ರಮ: ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಭರವಸೆ.
GST ಮೇಲೆ ಗ್ಯಾರಂಟಿ: ಸರಕು ಮತ್ತು ಸೇವಾ ತೆರಿಗೆಯನ್ನು (GST) ಸರಳಗೊಳಿಸುವ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಉಪಸ್ಥಿತರಿದ್ದರು. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಶುಕ್ರವಾರ ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಮಧ್ಯಂತರ ಜಾಮೀನಿನ ಮೇಲೆ ಕೇಜ್ರಿವಾಲ್ ಬಿಡಗಡೆಯಾಗಿದ್ದರು. ನಿನ್ನೆ ದೆಹಲಿಯ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಮೋದಿ ‘ಒಂದು ರಾಷ್ಟ್ರ, ಒಂದು ನಾಯಕ’ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ, ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 2 ತಿಂಗಳಲ್ಲಿ ಯೋಗಿ ಆದಿತ್ಯನಾಥ್‌ನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ಹೇಳಿದ್ದರು.
ಇದನ್ನು ಓದಿ: ಮೋದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸದಿದ್ದರೆ ದೇಶವು ‘ಕರಾಳ ದಿನ’ಗಳನ್ನು ನೋಡಲಿದೆ: ಉದ್ಧವ್ ಠಾಕ್ರೆ


