ಬಹುನಿರೀಕ್ಷಿತ ಫಿಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಕತಾರ್‌ನಲ್ಲಿ ಆರಂಭಗೊಂಡಿದೆ. ಈ ಬಾರಿ ಏಷ್ಯಾ ದೇಶಗಳು ಲೀಗ್ ಹಂತದಲ್ಲಿ ಗೆಲುವಿನ ಖಾತೆ ತೆರೆಯುವ ಮೂಲಕ ಸಾಧನೆಗೈದಿವೆ. ಸೌದಿ ಅರೇಬಿಯಾ ದೇಶವು (2-1) ಎರಡು ಬಾರಿ ವಿಶ್ವಕಪ್ ಗೆದ್ದಿರುವ ಅರ್ಜೆಂಟೀನಾ ತಂಡವನ್ನು ಮಣಿಸಿದರೆ, ಜಪಾನ್ ದೇಶವು (2-1) ನಾಲ್ಕು ಬಾರಿ ಚಾಂಪಿಯನ್ ಜರ್ಮಿನಿಯನ್ನು ಸೋಲಿಸಿ ಸಂಭ್ರಮಿಸಿದೆ. ಆದರೆ ಫೈನಲ್‌ವರೆಗೆ ಸಾಗಬೇಕಾದ ದಾರಿ ಬಹಳ ದೂರವಿದೆ. ಹಾಗಾಗಿ ವಿಶ್ವಕಪ್ ಪುಟ್ಬಾಲ್ ಟೂರ್ನಿಯ ವಿವಿಧ ಹಂತಗಳ ಬಗ್ಗೆ ತಿಳಿಯೋಣ.
ಪ್ರಶಸ್ತಿಗಾಗಿ ಸೆಣಸಲಿರುವ 32 ದೇಶಗಳು
ವಿಶ್ವದಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಪುಟ್ಬಾಲ್ ಕ್ರೀಡೆಯಲ್ಲಿ ವಿಶ್ವಕಪ್ ಅತಿ ದೊಡ್ಡ ಟೂರ್ನಿಯಾಗಿದೆ. ಹಲವು ದೇಶಗಳು ಈ ಟೂರ್ನಿಯಲ್ಲಿ ಆಡಲು ಬಯಸಿದರೂ ಅಂತಿಮ ಸುತ್ತಿಗೆ ಕೇವಲ 32 ದೇಶಗಳಿಗೆ ಮಾತ್ರ ಅವಕಾಶವಿರುತ್ತದೆ. ಅದಕ್ಕೂ ಮೊದಲು ಮೂರು ವರ್ಷಗಳ ಕಾಲ ವಿಶ್ವದ ಎಲ್ಲಾ ಭಾಗಗಳ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಗೆದ್ದು ಅರ್ಹತೆ ಪಡೆದವರನ್ನು ಮಾತ್ರ ಅಂತಿಮ ಸುತ್ತಿನಲ್ಲಿ ಆಡಿಸಲಾಗುತ್ತದೆ. ಆತಿಥ್ಯ ವಹಿಸುವ ದೇಶಗಳು ಸಹಜವಾಗಿ ಅರ್ಹತೆ ಪಡೆಯುತ್ತವೆ.
ಲೀಗ್ ಹಂತ
ಅಧಿಕೃತ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಲೀಗ್ ಹಂತದಲ್ಲಿ 32 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ 8 (ಎ ಯಿಂದ ಹೆಚ್ ವರೆಗೆ) ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಪ್ರತಿ ತಂಡಕ್ಕೂ ಮೂರು ಪಂದ್ಯಗಳನ್ನು ಆಡುವ ಅವಕಾಶವಿರುತ್ತದೆ. ಈ ಹಂತದಲ್ಲಿ ಪ್ರತಿ ಗೆಲುವಿಗೆ 3 ಅಂಕ, ಡ್ರಾ ಆದರೆ ಎರಡು ತಂಡಕ್ಕೆ ತಲಾ ಒಂದು ಅಂಕ ಮತ್ತು ಸೋಲಿಗೆ 0 ಅಂಕ ಇರುತ್ತದೆ. ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳನ್ನು ಮುಂದಿನ ನಾಕೌಟ್ ಹಂತಕ್ಕೆ (16ರ ಹಂತ) ಅರ್ಹತೆ ಪಡೆಯುತ್ತವೆ. ಪ್ರತಿ ಗುಂಪಿನಿಂದ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಲಾ ಎರಡು ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.
ಒಂದು ವೇಳೆ ಯಾವುದೇ ಗುಂಪಿನ ಅಂಕ ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದ ತಂಡಗಳು ಸಮಾನ ಅಂಕ ಪಡೆದರೆ (ಡ್ರಾ ಸಂದರ್ಭಗಳಲ್ಲಿ ಇದರ ಸಾಧ್ಯತೆ ಹೆಚ್ಚು) ಗುಂಪು ಹಂತದಲ್ಲಿ ತಂಡಗಳ ಗೆಲುವಿನ ಗೋಲಿನ ಅಂತರ ಅಥವಾ ಅತಿ ಹೆಚ್ಚು ಗೋಲು ಗಳಿಸಿದ ತಂಡ ಅಥವಾ ಆ ಎರಡು ತಂಡಗಳ ನಡುವಿನ ಇದುವರೆಗಿನ ಪಂದ್ಯಗಳಲ್ಲಿ ಅತಿ ಹೆಚ್ಚು ಗೆದ್ದಿರುವ ತಂಡ 16ರ ಹಂತಕ್ಕೆ ಅರ್ಹತೆ ಗಿಟ್ಟಿಸುತ್ತದೆ.

ನಾಕೌಟ್ (16ರ ಹಂತ)
16ರ ಹಂತದಲ್ಲಿ ಸಿಂಗಲ್ ಎಲಿಮಿನೇಷನ್ ಪಂದ್ಯಗಳು ಇರುತ್ತವೆ. ಒಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಮತ್ತೊಂದು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಸ್ಪರ್ಧಿಸುತ್ತದೆ. ಗೆದ್ದವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ ಸೋತ ತಂಡ ಟೂರ್ನಿಯಿಂದ ಹೊರಬೀಳುತ್ತದೆ. ಪಂದ್ಯ ಡ್ರಾ ಆದರೆ ವಿಜೇತ ತಂಡವನ್ನು ಗುರುತಿಸಲು ಹೆಚ್ಚಿನ ಸಮಯ ನೀಡಲಾಗುತ್ತದೆ ಅಥವಾ ಪೆನಾಲ್ಟಿ ಶೂಟೌಟ್ ನಡೆಸಲಾಗುತ್ತದೆ. ಹೀಗೆ 4 ಗುಂಪಿನಿಂದ 8 ತಂಡಗಳು ಕ್ವಾರ್ಟರ್ ಫೈನಲ್ ತಲುಪುತ್ತವೆ.
ಕ್ವಾರ್ಟರ್ ಫೈನಲ್
ಇಲ್ಲಿಯೂ ಸಹ ಸಿಂಗಲ್ ಎಲಿಮಿನೇಷನ್ ಪಂದ್ಯಗಳು ಇರುತ್ತವೆ. 8 ತಂಡಗಳಿಗೆ ನಾಲ್ಕು ಪಂದ್ಯಗಳು ನಡೆದು ಗೆದ್ದವರು ಸೆಮಿಫೈನಲ್ ತಲುಪುತ್ತಾರೆ. ಸೋತ ತಂಡ ಹೊರನಡೆಯುತ್ತದೆ.
ಸೆಮಿಫೈನಲ್
ನಾಲ್ಕು ತಂಡಗಳ ಎರಡು ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ. ಗೆದ್ದ ಎರಡು ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯುತ್ತವೆ. ಸೋತ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ಒಂದು ಪಂದ್ಯ ನಡೆಯುತ್ತದೆ.
ಫೈನಲ್
ಅಂತಿಮವಾಗಿ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತದೆ. ಪ್ರಸ್ತುತ ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಡಿಸೆಂಬರ್ 18 ರಂದು ನಡೆಯಲಿದೆ.
ಇದುವರೆಗೂ ನಡೆದ 21 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಬ್ರೆಜಿಲ್ ದೇಶವು ಎಲ್ಲಾ ವಿಶ್ವಕಪ್‌ಗಳಲ್ಲಿಯೂ ಅರ್ಹತೆ ಪಡೆದು ಆಡಿದೆ. ಅಲ್ಲದೆ 5 ಬಾರಿ ಚಾಂಪಿಯನ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಉಳಿದಂತೆ ಜರ್ಮನಿ ಮತ್ತು ಇಟಲಿ ತಂಡಗಳು ತಲಾ ನಾಲ್ಕು ಬಾರಿ ಚಾಂಪಿಯನ್ ಆಗಿವೆ. ಹಾಲಿ ಚಾಂಪಿಯನ್ ಫ್ರಾನ್ಸ್, ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳು ತಲಾ ಎರಡು ಬಾರಿ ಚಾಂಪಿಯನ್ ಆಗಿವೆ. ಇಂಗ್ಲೆಂಡ್ ಮತ್ತು ಸ್ಪೇನ್ ತಲಾ ಒಮ್ಮೆ ಟ್ರೋಫಿ ಎತ್ತಿ ಹಿಡಿದಿವೆ.
ಇದನ್ನೂ ಓದಿ: ಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ


