ದಾವಣಗೆರೆಯ ದಲಿತ ಮುಖಂಡರು, ಮಾಜಿ ಶಾಸಕರು ಆದ ದಿವಂಗತ ಡಾ. ಬಿ.ಎಂ. ತಿಪ್ಪೇಸ್ವಾಮಿ ಹಾಗೂ ಅವರ ಕುಟುಂಬದ ಮೂರು ಸದಸ್ಯರ ಸಮಾಧಿಗಳನ್ನು ಅತಿಕ್ರಮಣಕಾರರು ಧ್ವಂಸಗೊಳಿಸಿ, ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ದಾವಣಗೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬಹೃತ್ ಪ್ರತಿಭಟನೆ ನಡೆಸಲಾಯಿತು.
ನೂರಾರು ಪ್ರತಿಭಟನಾಕಾರರು ಸಮಾಧಿ ಸ್ಥಳದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಸಿ ಕಚೇರಿವರೆಗೆ ಸಾಗಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿಯವರ ಪುತ್ರಿಯಾದ ಲೇಖಕಿ ಬಿ.ಟಿ ಜಾಹ್ನವಿಯವರು ಮಾತನಾಡಿ “ನೊಂದವರಿಗೆ ನ್ಯಾಯ ನೀಡಲು ಬದಲು ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯವೆಸಗಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೆಂಬರ್ 21 ಈ ಘಟನೆ ನಡೆದಾಗ ಮಾಹಿತಿ ತಿಳಿದು ನಾನು ಜಾಗಕ್ಕೆ ಬರುವಷ್ಟರಲ್ಲಿ ಎಲ್ಲಾ ಸಮಾಧಿಗಳನ್ನು ಧ್ವಂಸಗೊಳಿಸಿಬಿಟ್ಟಿದ್ದರು. ಸ್ಥಳದಲ್ಲಿ ಗಣೇಶ್ ಹುಲುಮನೆ ಎಂಬುವವರಿದ್ದರು. ಏಕೆ ನಮ್ಮ ತಂದೆಯವರ ಸಮಾಧಿ ಹೊಡೆದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರು. ಅದರ ಮಾರನೇಯ ದಿನ ಎಸ್‌ಪಿಯವರನ್ನು ಭೇಟಿಯಾಗಿ ದೂರು ನೀಡಿದ್ದೇವೆ. ಆದರೂ ಆರೋಪಿಗಳನ್ನು ಬಂಧಿಸಿಲ್ಲ, ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಅವರ ಬಳಿ 1955ರ ಕಾಲದಿಂದಲೂ ದಾಖಲೆಗಳಿವೆ ಎನ್ನುತ್ತಿದ್ದಾರೆ. ಆದರೆ ಇದು ಸಿವಿಲ್ ವಿಷಯವಾಗಿದ್ದು ನಾವು ಕೋರ್ಟ್‌ನಲ್ಲಿ ಅದನ್ನು ಪರಿಹರಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ನಮ್ಮ ತಂದೆಯವರು ಸೇರಿ ನಮ್ಮ ಕುಟುಂಬದ ನಾಲ್ವರ ಸಮಾಧಿಗಳಿವೆ. ಇಷ್ಟು ಸಮಾಧಿಗಳನ್ನು ನಾವು 1990ರಿಂದ ಕಟ್ಟುವಾಗ ಅವರು ದಾಖಲೆಗಳಿದ್ದರೂ ಏಕೆ ಸುಮ್ಮನಿದ್ದರು? ಈ ಜಮೀನಿನ ಖಾತೆ ನಮ್ಮ ಅಣ್ಣನ ಹೆಸರಿನಲ್ಲಿದೆ. ನಾವು ಇದುವರೆಗೂ ಕಂದಾಯ ಸಹ ಕಟ್ಟುತ್ತಿದ್ದೇವೆ. 2012ರವರೆಗೂ ಪಹಣಿ ಸಹ ಅವರ ಹೆಸರಿನಲ್ಲಿತ್ತು. ಆದರೆ 2013ರಲ್ಲಿ ಪಹಣಿಯನ್ನು ರವಿಕುಮಾರ್ ಎಂಬುವವರ ಹೆಸರಿಗೆ ಹೇಗೆ ಮಾಡಲಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಇದನ್ನು ಪರೀಶಿಲೀಸಬೇಕು, ನಕಲಿ ದಾಖಲೆ ಸೃಷ್ಟಿಸಿದವರು ಮತ್ತು ಅದರಲ್ಲಿ ಭಾಗಿಯಾದ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕೆಂದು ಅವರು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್ ದ್ವಾರಕನಾಥ್‌ರವರು ಮಾತನಾಡಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಒಂದು ಬಲಿಷ್ಠ ಸರ್ಕಾರವಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಈ ದುರ್ಘಟನೆಗೆ ಸರ್ಕಾರವೇ ನೇರ ಹೊಣೆಯಾಗಿದೆ. ಸಮಾಧಿ ಧ್ವಂಸಮಾಡಿ ಮೂರು ದಿನವಾದರೂ ಇದುವರೆಗೂ ಆರೋಪಿಗಳ ಬಂಧನವಾಗಿಲ್ಲ. ಇದು ಏಕೆ ಎಂದು ಅರ್ಥವಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲನೇಯದಾಗಿ ಆರೋಪಿಗಳ ಬಂಧನವಾಗಬೇಕು, ಇದೇ ಜಾಗದಲ್ಲಿ ಡಾ.ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದವರ ಸಮಾಧಿ ಮರು ನಿರ್ಮಾಣ ಮಾಡಬೇಕು ಮತ್ತು ಇಂತಹ ತಪ್ಪಿಗಾಗಿ ನಾಡಿನ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ದಲಿತ ನಾಯಕ, ಮಾಜಿ ಶಾಸಕರಾದ ಡಾ.ಬಿ.ಎಂ ತಿಪ್ಪೇಸ್ವಾಮಿ ಸಮಾಧಿ ಧ್ವಂಸ: ಪುತ್ರಿ, ಲೇಖಕಿ ಜಾಹ್ನವಿ ಆರೋಪ