ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಅಸ್ಸಾಂನ ನುಮಾಲಿಗಡ್ ರಿಫೈನರಿ ಲಿಮಿಟೆಡ್(ಎನ್ಆರ್‌ಎಲ್)ನ 61.5% ಪಾಲನ್ನು ಮಾರಾಟ ಮಾಡಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (AIL), ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್(EIL) ಮತ್ತು ಅಸ್ಸಾಂ ಸರ್ಕಾರಕ್ಕೆ ಒಟ್ಟು 9,876 ಕೋಟಿ ರೂ.ಗೆ ಕಂಪೆನಿಯು ತನ್ನ ಪಾಲನ್ನು ಮಾರಾಟ ಮಾಡಿದೆ.
ಇದರಲ್ಲಿ 54.16% ಪಾಲನ್ನು ಆಯಿಲ್ ಇಂಡಿಯಾ ಕಂಪೆನಿ, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ 4.4% ಹಾಗೂ ಉಳಿದ 3.2% ಪಾಲನ್ನು ಅಸ್ಸಾಂ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ನುಮಾಲಿಗಡ್ ರಿಫೈನರಿ ಲಿಮಿಟೆಡ್‌ನ ಮಾರಾಟ ಮಾಡುವ ಮೂಲಕ ಭಾರತದ ಎರಡನೇ ಅತಿದೊಡ್ಡ ತೈಲ ಕಂಪನಿಯ ಖಾಸಗೀಕರಣ ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ: ಅಸ್ಸಾಂ ವಿಧಾನಸಭಾ ಚುನಾವಣೆ: ಮೈತ್ರಿಗಳ ಕದನ
ಮಾರಾಟ ಖರೀದಿ ಒಪ್ಪಂದವನ್ನು ಮಾರ್ಚ್ 25, 2021 ರಂದು ನಡೆಸಲಾಗಿದೆ ಎಂದು ಬಿಪಿಸಿಎಲ್ ಹೇಳಿದ್ದು, “ಅಂದು ಒಐಎಲ್ ಮತ್ತು ಇಐಎಲ್‌ಗೆ ಎನ್ಆರ್‌ಎಲ್‌ನ 43.05 ಕೋಟಿ ರೂ.ಗಳ ಷೇರುಗಳನ್ನು 9,375.96 ಕೋಟಿ ರೂ.ಗಳ ಮಾರಾಟಕ್ಕೆ ಮಾಡಲು ಸಹಿ ಮಾಡಲಾಗಿದೆ” ಎಂದು ತಿಳಿಸಿದೆ.
ಉಳಿದ 2.29 ಕೋಟಿ ಷೇರುಗಳನ್ನು ಅಸ್ಸಾಂ ಸರ್ಕಾರಕ್ಕೆ 499.99 ಕೋಟಿ ರೂ.ಗೆ ವರ್ಗಾಯಿಸಲಾಗಿದೆ.
ಎನ್‌ಆರ್‌ಎಲ್ ಮಂಡಳಿಯಲ್ಲಿ ಪ್ರಸ್ತುತ ಬಿಪಿಸಿಎಲ್ ನಾಮನಿರ್ದೇಶನ ಮಾಡಿದ ನಿರ್ದೇಶಕರು ರಾಜೀನಾಮೆ ನೀಡಲಿದ್ದು, ಈ ಮಾರಾಟದೊಂದಿಗೆ ನಿರ್ದೇಶಕರನ್ನು ನೇಮಿಸುವ ಬಿಪಿಸಿಎಲ್‌ನ ಹಕ್ಕುಗಳು ಇಲ್ಲವಾಗುತ್ತದೆ. ಎನ್‌ಆರ್‌ಎಲ್ ಅಸ್ಸಾಂನಲ್ಲಿ ವಾರ್ಷಿಕ 3 ಮಿಲಿಯನ್ ಟನ್ ತೈಲ ಸಂಸ್ಕರಣಾಗಾರವನ್ನು ನಿರ್ವಹಿಸುತ್ತಿದೆ.
ಎನ್‌ಆರ್‌ಎಲ್ ಮಾರಾಟದ ನಂತರ, ಮುಂಬೈ, ಕೊಚ್ಚಿ (ಕೇರಳ), ಮತ್ತು ಬಿನಾ (ಮಧ್ಯಪ್ರದೇಶ) ದಲ್ಲಿನ ಮೂರು ತೈಲ ಸಂಸ್ಕರಣಾಗಾರಗಳನ್ನೂ ಬಿಪಿಸಿಎಲ್ ಮಾರಾಟ ಮಾಡುತ್ತದೆ.
ಏಪ್ರಿಲ್ (2021-22) ರಿಂದ ಪ್ರಾರಂಭವಾಗುವ ಹಣಕಾಸು ವರ್ಷದ ಮೊದಲಾರ್ಧದ ವೇಳೆಗೆ ಬಿಪಿಸಿಎಲ್ ತನ್ನ ಖಾಸಗೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸೂಚಿಸಿತ್ತು.
ಇದನ್ನೂ ಓದಿ: ಮಹಿಳೆಯರ ದೇಹದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ


