ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ಸದರ್ ಪೊಲೀಸ್ ಠಾಣೆ ಬಳಿಯ ಅಧಿಕೃತ ಪೊಲೀಸ್ ವಸತಿ ಸಮುಚ್ಚಯದಲ್ಲಿಯೇ ತನ್ನ ನಾಲ್ಕು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಅಸ್ಸಾಂ ಪೊಲೀಸ್ ಪೇದೆಯೊಬ್ಬರನ್ನು ಸೋಮವಾರ ಬಂಧಿಸಲಾಗಿದೆ.
ಆರೋಪಿ ಪೊಲೀಸ್ ಪೇದೆಯನ್ನು ಬಿಕಿ ಚೇಟಿಯಾ ಎಂದು ಗುರುತಿಸಲಾಗಿದ್ದು, ಈತ ತನ್ನ ಸರ್ವಿಸ್ ರಿವಾಲ್ವರ್ ಬಳಸಿ ಪತ್ನಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಯ ನಡುವೆ ಕೌಟುಂಬಿಕ ಕಲಹವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಆರೋಪಿ ಬಹುಶಃ ಮದ್ಯದ ಅಮಲಿನಲ್ಲಿದ್ದರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನೂ ಓದಿ: ಕಂಬಾಲಪಲ್ಲಿ ದಲಿತರ ಹತ್ಯಾಕಾಂಡಕ್ಕೆ 22 ವರ್ಷ: ನ್ಯಾಯಕ್ಕಾಗಿ ಕಾಯುತ್ತಲೇ ಮೃತರಾದ ಸಂತ್ರಸ್ತರ ಸಂದರ್ಶನ
“ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಬಿಕಿ ಚೇತಿಯಾ ತನ್ನ ಹೆಂಡತಿಯನ್ನು ಕೊಂದಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಗುಂಡು ತಗುಲಿ ಗಂಭಿರ ಸ್ಥಿತಿಯಲ್ಲಿದ್ದ ಆರೋಪಿಯ ಪತ್ನಿ ಜಯಶ್ರೀ ಚೇಟಿಯಾ ಅವರನ್ನು ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ವೈದ್ಯರು ಎಷ್ಟು ಪ್ರಯತ್ನಪಟ್ಟರೂ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ.
ಆರೋಪಿ ಪೊಲೀಸ್ ಪೇದೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನೂರಾರು ಸ್ಥಳೀಯರು ಇಂದು ಬೆಳಗ್ಗೆ ದಿಬ್ರುಗಢ ಪೊಲೀಸ್ ಠಾಣೆಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಕೊಲೆಯ ಹಿಂದಿನ ಖಚಿತ ಉದ್ದೇಶ ತಿಳಿಯಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಕ್ಷೇತ್ರಗಳ ಪೂರ್ವ ಸಮೀಕ್ಷೆ; ಹಳಿಯಾಳ-ಜೋಯಿಡಾ: ತಡವಾದ ಅಭಿವೃದ್ಧಿ; ಸಾಮ್ರಾಜ್ಯ ಉಳಿಸಿಕೊಳ್ಳುವರಾ ದೇಶಪಾಂಡೆ?


