ಅಸ್ಸಾಂ ರಾಜ್ಯದ ದಿಮಾ ಹಸಾವೊ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಶಂಕಿತ ಉಗ್ರರು ಏಳು ಟ್ರಕ್‌ಗಳ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರ ಪರಿಣಾಮವಾಗಿ ಐದು ಜನರು ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಮೆಂಟ್ ಹೊತ್ತೊಯ್ಯುವ ಆರು ಲಾರಿಗಳು ಮತ್ತು ಕಲ್ಲಿದ್ದಲು ತುಂಬಿದ್ದ ಒಂದು ಲಾರಿಯನ್ನು ಡಿಎನ್‌ಎಲ್‌ಎನ ಉಗ್ರರು ತಡೆದ್ದಾರೆ. ನಂತರ ಅದರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಗುವಾಹಟಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯನ್ನು ತಪ್ಪಿಸಿ ಕನಿಷ್ಠ ಏಳು ಚಾಲಕರು ಮತ್ತು ಟ್ರಕ್‌ಗಳ ಸಹಾಯಕರು ಹತ್ತಿರದ ಕಾಡಿನೊಳಗೆ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಜಯಂತ್ ಸಿಂಗ್ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ಪಡೆಗಳು ಮತ್ತು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಉಗ್ರರು ಸುಟ್ಟಿದ್ದ ಟ್ರಕ್‌ಗಳಿಂದ ಐದು ಚಾಲಕರ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಯೋಜನೆ ಮತ್ತು ದೆಹಲಿಯ ಮೂಲಕ ಭಾರತವನ್ನು ವಶಪಡಿಸಿಕೊಳ್ಳುವ ಬಿಜೆಪಿ ಸರ್ಕಾರದ ಆಕ್ರಮಣಕಾರಿ ತಂತ್ರ
ಘಟನೆ ಹಿನ್ನಲೆಯಲ್ಲಿ ಗುವಾಹಟಿಯಿಂದ ಸುಮಾರು 300 ಕಿಮೀ ಆಗ್ನೇಯದಲ್ಲಿರುವ ಗುಡ್ಡಗಾಡು ಜಿಲ್ಲೆಯಲ್ಲಿ ಉಗ್ರರನ್ನು ಹಿಡಿಯಲು ಭದ್ರತಾ ಪಡೆಗಳು ಭಾರೀ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿವೆ.
ಲಾರಿಗಳು ಹತ್ತಿರದ ಸಿಮೆಂಟ್ ಉತ್ಪಾದನಾ ಘಟಕಕ್ಕೆ ಕಲ್ಲಿದ್ದಲು ಮತ್ತು ಇತರ ವಸ್ತುಗಳನ್ನು ಸಾಗಿಸುತ್ತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ಉತ್ತರ ಕ್ಯಾಚಾರ್ ಜಿಲ್ಲೆಯ ಭಾಗವಾಗಿದ್ದ ‘ದಿಮಾ ಹಸಾವೊ’ ಜಿಲ್ಲೆಯು ಬೆಟ್ಟಗಳಿಂದ ಆವೃತ್ತವಾಗಿರುವ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜಿಲ್ಲೆಯು ಈ ಹಿಂದೆ ಉಗ್ರಗಾಮಿ ಚಟುವಟಿಕೆಗಳ ಕೇಂದ್ರವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ, ಯಾವುದೇ ದೊಡ್ಡ ಹಿಂಸಾಚಾರ ವರದಿಯಾಗಿರಲಿಲ್ಲ.
ಮೇ ತಿಂಗಳಲ್ಲಿ, ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಧನ್ಸಿರಿ ಪ್ರದೇಶದಲ್ಲಿ ನಡೆದ ಎನ್ಕೌಂಟರ್ ಸಮಯದಲ್ಲಿ ಭದ್ರತಾ ಪಡೆಗಳು ಆರು DNLA ಉಗ್ರರನ್ನು ಹೊಡೆದುರುಳಿಸಿದ್ದವು. ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಡಿಎನ್ಎಲ್ಎ ಉಗ್ರರು ಈ ಪ್ರದೇಶದಲ್ಲಿ ಗ್ರಾಮಸ್ಥನನ್ನು ಕೊಂದ ನಂತರ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ದಿಮಾ ಹಸಾವೊ ಜಿಲ್ಲೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಈ ಸಂಘಟನೆ ಸುಲಿಗೆ ಮತ್ತು ಅಪಹರಣವನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಉಗ್ರರ ಸಂಘಟನೆಯ ಹಲವು ಉನ್ನತ ನಾಯಕರನ್ನು ಭದ್ರತಾ ಪಡೆಗಳು ಈ ಹಿಂದೆ ಬಂಧಿಸಿತ್ತು.
2018 ರಲ್ಲಿ ರಚನೆಯಾದ ಡಿಎನ್ಎಲ್ಎ ಉಗ್ರರ ಗುಂಪು ದಿಮಾ ಹಸಾವೊ ಮತ್ತು ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ಹಾಗೂ ನೆರೆಯ ನಾಗಾಲ್ಯಾಂಡ್ ರಾಜ್ಯದಲ್ಲಿ ಸಕ್ರಿಯವಾಗಿದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಬಹುಜನ ಭಾರತ: ಅರುಣಾಚಲದ ಮೇಲೆ ಚೀನಾ ಕಣ್ಣು?


