Homeಅಂಕಣಗಳುಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

ಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

- Advertisement -
- Advertisement -

ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ’ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರ, ಧರ್ಮಾಂಧರ, ಭಯೋತ್ಪಾದಕರ, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು.

ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು.

ಎರಡನೆಯ ವಿಶ್ವಯುದ್ಧದ ನಂತರ ಸೂಪರ್ ಪವರ್‌ಗಳ ನಡುವಣ ಶೀತಲಯುದ್ಧಕ್ಕೆ ಬಲಿಯಾಯಿತು ಈ ದೇಶ. ರಷ್ಯಾ ಅಮೆರಿಕೆಯ ನಡುವಣ ಮೇಲಾಟದ ವಸಾಹತು ಆಯಿತು. ಪರಿಣಾಮವಾಗಿ ಧರ್ಮಾಂಧರು-ಭಯೋತ್ಪಾದಕರು ತಲೆಯೆತ್ತಿದರು. ಎಲ್ಲೆಡೆ ಪುರುಷಾಧಿಪತ್ಯದ ಕ್ರೌರ್ಯಕ್ಕೆ ಸಿಲುಕಿರುವ ಮಹಿಳೆಯ ಸ್ಥಿತಿ ಈ ನೆಲದಲ್ಲಿ ದುಸ್ಥಿತಿಯ ತಳಾತಳವನ್ನು ಮುಟ್ಟಿತು.

ಸೋವಿಯತ್ ಆಕ್ರಮಣದ ವಿರುದ್ಧ ಮುಜಾಹಿದೀನ್ ಧರ್ಮಾಂಧ ಶಕ್ತಿಗಳನ್ನು ಅಮೆರಿಕ ಮತ್ತು ಪಾಕಿಸ್ತಾನ ಎತ್ತಿಕಟ್ಟಿ ಬೆಳೆಸಿದವು. ಅಮೆರಿಕನ್ ಆಕ್ರಮಣದ ವಿರುದ್ಧ ಪಾಕಿಸ್ತಾನದ ಗುಪ್ತ ಕುಮ್ಮಕ್ಕಿನೊಂದಿಗೆ ತಲೆಯೆತ್ತಿದ್ದು ತಾಲಿಬಾನ್. ತಾಲಿಬಾನ್ ಎಂದರೆ ಪಶ್ತೋ ಭಾಷೆಯಲ್ಲಿ ವಿದ್ಯಾರ್ಥಿಗಳು ಎಂದರ್ಥ. 1990ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಹೊಮ್ಮಿದ ಧಾರ್ಮಿಕ ಆಂದೋಲನವಿದು. ಸೌದಿ ಅರೇಬಿಯಾದ ಹಣದ ನೆರವಿನಿಂದ ನಡೆದ ಸುನ್ನಿ ಇಸ್ಲಾಮ್ ಕಟ್ಟರ್‌ವಾದವನ್ನು ಬೋಧಿಸುವ ಮಠ. ತನ್ನ ಮೂಲ ಅರ್ಥವನ್ನು ಕಳೆದುಕೊಂಡ ತಾಲಿಬಾನ್ ಪದ ಕಾಲಕ್ರಮೇಣ ಗಳಿಸಿಕೊಂಡ ಕುಖ್ಯಾತ ಅರ್ಥವ್ಯಾಪ್ತಿಯೇ ಬೇರೆ.

1996-2001ರ ಅವಧಿಯತಾಲಿಬಾನ್ ಆಡಳಿತ ಮತ್ತು ಆನಂತರ ಪದಚ್ಯುತಿಯ 20 ವರ್ಷಗಳ ಕಾಲ ನಡೆಸಿದ ಬರ್ಬರ ದಾಳಿಗಳ ದುಃಸ್ವಪ್ನಗಳಿಂದ ಆಪ್ಘನ್ ಜನತೆ ಭಯಭೀತಗೊಂಡಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಮುಂತಾದ ಸಾರ್ವಜನಿಕ ಬದುಕಿನಿಂದ ಅದೃಶ್ಯರಾಗಿ ನಾಲ್ಕು ಗೋಡೆಗಳ ನಡುವೆ ಬದುಕಬೇಕಿರುವ ಮಹಿಳೆಯರ ಸ್ಥಿತಿ ದಾರುಣ.

ಶರಿಯಾ ಕಾನೂನುಗಳ ಪ್ರಕಾರ ಸಾರ್ವಜನಿಕ ಮರಣದಂಡನೆ ನೀಡುವ, ಅಂಗಾಂಗಗಳನ್ನು
ಕತ್ತರಿಸುವ ಶಿಕ್ಷೆಗಳು, ಗಂಡಸರು ಗಡ್ಡ ಬೆಳೆಸಬೇಕೆಂಬ ನಿರ್ಬಂಧ ಹೇರಲಾಯಿತು. ಸಿನೆಮಾ, ಟೀವಿ, ಸಂಗೀತವನ್ನು ನಿಷೇಧಿಸಲಾಯಿತು. ಉಡುಗೆತೊಡುಗೆಗಳ ವಿಧಿ ನಿಷೇಧಗಳೂ ಜಾರಿಗೆ ಬಂದವು. ಅಡಿಯಿಂದ ಮುಡಿತನಕ ಬಲವಂತದ ಬುರ್ಖಾ ಧಾರಣೆ, ಗಂಡಸು ಜೊತೆಗಿಲ್ಲದೆ ಹೊಸ್ತಿಲು ದಾಟಕೂಡದು ಮುಂತಾದ ಹತ್ತು ಹಲವು ಅಮಾನವೀಯ ನಿರ್ಬಂಧಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಲಾಯಿತು. ಹತ್ತು ವರ್ಷ ದಾಟಿದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ನಿಷಿದ್ಧವೆಂದು ಸಾರಲಾಯಿತು. ಮಾನವೀಯ ಹಕ್ಕುಗಳನ್ನು ತುಳಿಯಲಾಯಿತು. ಸಾಂಸ್ಕೃತಿಕ ಬರ್ಬರತೆ ಮೆರೆಯಿತು. ಅಂತಾರಾಷ್ಟ್ರೀಯ ಆಕ್ರೋಶವನ್ನೂ ಲೆಕ್ಕಿಸದೆ ಬಾಮಿಯಾ ಕಣಿವೆಯಲ್ಲಿ ಕೊರೆಯಲಾಗಿದ್ದ ಆರನೆಯ ಶತಮಾನದ ಬೃಹತ್ ಬುದ್ಧ ಪ್ರತಿಮೆಗಳನ್ನು ಫಿರಂಗಿಗಳಿಂದ ಸಿಡಿಸಿ ನಾಶಮಾಡಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಮುಸಲ್ಮಾನರು ನಿರಂತರ ಹತ್ಯೆಗೆ ಈಡಾದರು. ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಗಳು ನಿರಂತರವಾದವು. ಅವರ ಪ್ರಮಾಣ ನಶಿಸುತ್ತಲೇ ಹೋಯಿತು.

ಇದೀಗ ಪುನಃ ಆಡಳಿತ ಸೂತ್ರ ಹಿಡಿದಿರುವ ತಾಲೀಬಾನ್ ಇಸ್ಲಾಮಿಕ್ ಕಾನೂನುಗಳ ಚೌಕಟ್ಟಿನಲ್ಲೇ ಆಡಳಿತ ನಡೆಸುವುದಾಗಿ ಸಾರಿದೆ. ಆದರೆ ಹಳೆಯ ಅನುಭವಗಳ ಮೇರೆಗೆ ಮೆದು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದಿದೆ. ವರ್ಚಸ್ಸು ಸುಧಾರಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಕ್ಷಮಾದಾನ, ಮೀಡಿಯಾ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡತೊಡಗಿದೆ. ಆದರೆ ಬಾಯಲ್ಲಿನ ಬೆಣ್ಣೆಗಿಂತ ಬಗಲಲ್ಲಿನ ದೊಣ್ಣೆಯೇ ಸತ್ಯವೆಂಬುದು ಹಳೆಯ ಅನುಭವ.

ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಅಪ್ಘಾನಿಸ್ತಾನವನ್ನು ಧರ್ಮಾಂಧತೆಯ ಸಂಕೋಲೆಗಳಲ್ಲಿ ಮತ್ತಷ್ಟು ಬಿಗಿಯಾಗಿ ಬಂಧಿಸಿದ್ದು ಅಮೆರಿಕ ಮತ್ತು ಪಾಕಿಸ್ತಾನ. ವಿಶೇಷವಾಗಿ ಪಾಕಿಸ್ತಾನದ ಬೆಂಬಲವಿಲ್ಲದೆ ಹೋಗಿದ್ದರೆ ತಾಲಿಬಾನ್‌ಗಳ ಈಗಿನ ಗೆಲುವು ಇಷ್ಟು ಸಲೀಸಾಗಿರುತ್ತಿರಲಿಲ್ಲ. ಆಫ್ಘನ್‌ತಾಲಿಬಾನ್ ಮುಖವಾಡ ತೊಟ್ಟ ಪಾಕಿಸ್ತಾನಿ ಆಕ್ರಮಣವಿದು ಎಂಬ ಸತ್ಯ ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗತೊಡಗಿದೆ. ತಾಲೀಬಾನನ್ನು ಅದು ಹುಟ್ಟಿದಾಗಿನಿಂದ ಸತತ ಪೊರೆಯುತ್ತ ಬಂದಿರುವ ದೇಶವಿದು.

ವಿಶ್ವದ ಶೇ.90ರಷ್ಟು ಅಫೀಮು- ಹೆರಾಯಿನ್ ಮಾದಕ ವಸ್ತುಗಳ ತವರು ಅಫ್ಘಾನಿಸ್ತಾನ. ಈ ಅಫೀಮು ದೈತ್ಯನ ಮೀರಿಸುವ ಮತ್ತೊಬ್ಬ ಮಾದಕದ್ರವ್ಯ ಎದುರಾಳಿ ಅಫ್ಘಾನಿಸ್ತಾನದಲ್ಲೇ ಮೈ ತಳೆಯುತ್ತಿದ್ದಾನೆ. ಅವನ ಹೆಸರು ಮೆಥಾಂಫೆಟಾಮೈನ್ (Methamphetamine). ನೇರವಾಗಿ ಮನುಷ್ಯ ದೇಹದ ನರಮಂಡಲ ವ್ಯವಸ್ಥೆಯ ಕೇಂದ್ರಕ್ಕೇ ಲಗ್ಗೆ ಹಾಕಿ ಮರಗಟ್ಟಿಸುವ ಮಾದಕದ್ರವ್ಯ. ಪರಮ ಅಂಟಿನ ನಂಟು. ಚಟ ಅಂಟಿದರೆ ಮರಣವೇ ಬಿಡುಗಡೆಯ ಬಾಗಿಲು. ಮೆಥ್, ಬ್ಲೂ, ಐಸ್, ಕ್ರಿಸ್ಟಲ್-ಗ್ಲ್ಯಾಸ್ ಎಂದೂ ವ್ಯಸನಲೋಕದಲ್ಲಿ ಜನಜನಿತ.
ಅಫ್ಘಾನ್ ಅಫೀಮು ಉದ್ಯಮದ ಸೊಂಟ ಮುರಿಯುವ ಅಮೆರಿಕೆಯ ಪಣ ಈಡೇರಲಿಲ್ಲ. ಬದಲಾಗಿ 2001-2018ರ ನಡುವಣ ಅವಧಿಯಲ್ಲಿ ಈ ಉದ್ಯಮ ನಾಲ್ಕು ಪಟ್ಟು ಹೆಚ್ಚಿತು. ಇದೀಗ ಭಯಾನಕ ಮೆಥ್ ಆಯಾಮವೂ ಸೇರಿಕೊಂಡಿದೆ. ಹಲವು ಪ್ರತಿಕೂಲಗಳ ಕಾರಣ ಈ ವಲಯದ ಮೆಥ್ ಉತ್ಪಾದನಾ ಕೇಂದ್ರ ಇರಾನಿನಿಂದ ಅಫ್ಘಾನ್‌ಗೆ ವರ್ಗವಾಯಿತು.

2018ರಲ್ಲಿ ವಿಪರೀತ ಉತ್ಪಾದನೆಯ ಕಾರಣ ಅಫೀಮು ದರ ಭಾರೀ ಕುಸಿತಎದುರಿಸಿತು. ಪರ್ಯಾಯ ಆದಾಯದ ದಾರಿಯಾಗಿ ತೆರೆದುಕೊಂಡದ್ದು ಮೆಥ್ ಉತ್ಪಾದನೆ. ಈ ಉತ್ಪಾದನೆಗೆ ಬೇಕಿರುವ ಮುಖ್ಯ ರಾಸಾಯನಿಕ ಎಫಿಡ್ರೈನ್. ಅಫ್ಘಾನಿಸ್ತಾನದಲ್ಲಿ ತಂತಾನೇ ಕಳೆಯಾಗಿ ಬೆಳೆಯುವ ಸಸ್ಯ ಎಫಿಡ್ರಾದಿಂದ ಹೇರಳ ಪ್ರಮಾಣದ ಎಫಿಡ್ರೈನ್ ಉತ್ಪಾದಿಸಬಹುದು. ಎಫಿಡ್ರೈನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವ ಗೊಡವೆಯೇ ಇಲ್ಲ. ಈ ಕಾರಣದಿಂದಾಗಿ ಆಫ್ಘನ್ ಮೆಥ್ ಮಾರಾಟ ದರಗಳು ಅತಿ ಅಗ್ಗವೆನಿಸಿದವು. ಶತಕೋಟಿ ಡಾಲರುಗಳ ಮೌಲ್ಯದ ಮೆಥ್ ತಯಾರಿಸುವ ಪ್ರಯೋಗಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆಯೆತ್ತಿದವು. ಅಫೀಮು ಹೆರಾಯಿನ್ ಜೊತೆಗೆ ಮೆಥ್ ಎಂಬ ಈ ಘೋರ ದ್ರವ್ಯ ಅಫ್ಘಾನಿಸ್ತಾನದಿಂದ ಹೊರಬಿದ್ದು ವಿಶ್ವದ ನಾನಾ ದೇಶಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಅಮೆರಿಕನ್ ಪಡೆಗಳ ನಿರ್ಗಮನ ಈ ’ಉದ್ಯಮ’ಕ್ಕೆ ರೆಕ್ಕೆಗಳನ್ನು ಹಚ್ಚುವುದು ನಿಶ್ಚಿತ.

ಅಫೀಮಿನ ಜೊತೆಜೊತೆಗೆ ಎಫಿಡ್ರಾ ಮತ್ತು ಮೆಥ್ ಮೇಲಿನ ತೆರಿಗೆಯ ಮೂಲಕ ತಾಲೀಬಾನ್ ಅಪಾರ ಆದಾಯವನ್ನು ಸಂಗ್ರಹಿಸುತ್ತಿದೆ. ಪೆಟ್ರೋಲಿಯಂ ಇಂಧನಗಳು, ಸರಕು ಸಾಗಾಣಿಕೆಯ ಮೇಲೆ ತೆರಿಗೆ
ಹೇರಿಕೆ ಹಾಗೂ ಅಮೂಲ್ಯ ಖನಿಜಗಳ ಗಣಿಗಾರಿಕೆ ಕೂಡತಾಲಿಬಾನ್‌ಗೆ ಭಾರೀ ಆದಾಯ ಮೂಲಗಳಾಗಿವೆ. ಇದೆಲ್ಲ ಆದಾಯದ ಗುರಿ ಶಸ್ತ್ರಾಸ್ತ್ರ ಖರೀದಿ ಮತ್ತು ಶರಿಯಾ ಆಡಳಿತ ಜಾರಿ.

ಖುರಾನಿನ ಪ್ರಕಾರ ಅಮಲು ಅಥವಾ ನಶೆಯ ಪದಾರ್ಥಗಳ ಸೇವನೆ ನಿಷಿದ್ಧ. ಆದರೆ ಶರಿಯಾ ಕಾನೂನಿನ ಮಾತಾಡುವತಾಲಿಬಾನ್‌ಗೆ ಅದರ ಪರಿವೆಯಿಲ್ಲ. ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯಲು ಹೇಸಿಗೆಯಿಲ್ಲ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪೀಡಿಸುವ ಮನುವಾದಿಗಳು ಮತ್ತು ಧರ್ಮಾಂಧ ತಾಲಿಬಾನಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಕ್ಕಾಗಿಯೋ, ಇಸ್ಲಾಮಿನ
ಸಮರ್ಥನೆಗಾಗಿಯೋ ಇಂತಹ ಮತಾಂಧ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವುದು ತರವಲ್ಲ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...