ವಂದನಾ ಕಟಾರಿಯಾ ಎಂಬ ಒಲಿಂಪಿಕ್ಸ್ ಹಾಕಿ ದಲಿತ ಪ್ರತಿಭೆಯನ್ನು ಜಾತಿವಾದಿ ಶಕ್ತಿಗಳು ಅವಹೇಳನಕ್ಕೆ ಗುರಿ ಮಾಡಿದವು. ಈ ಅವಮಾನ ಮೊದಲನೆಯದಲ್ಲ, ಕೊನೆಯದೂ ಆಗುವ ಸೂಚನೆಯಿಲ್ಲ. ಅದ್ಭುತ ಆಟದ ಮೂಲಕವೇ ಅವಹೇಳನಕ್ಕೆ ಜವಾಬು ನೀಡಿದ ವಂದನಾ ಹಿಂದೆ ತಿರುಗಿ ನೋಡಿದರೆ ತಾವು ಒಬ್ಬೊಂಟಿಯಲ್ಲ ಎಂಬುದು ಗೊತ್ತಾಗುತ್ತದೆ. ಅವಹೇಳನವನ್ನು ಪ್ರತಿಭೆಯಿಂದ ಗೆಲ್ಲುವ ಸಿರಿವಂತ ಪರಂಪರೆಯೊಂದು ಆಕೆಯ ಬೆನ್ನಿಗಿದೆ.

ಶತಮಾನದ ಹಿಂದೆ ಪಲ್ವಂಕರ್ ಬಾಲೂ ಎಂಬ ಅಸ್ಪೃಶ್ಯ ಜಾತಿಗೆ ಸೇರಿದ ಕ್ರೀಡಾಳು ಒಬ್ಬರಿದ್ದರು. ಅವರೇ ಭಾರತದ ಮೊಟಮೊದಲ ಮಹಾನ್ ಕ್ರಿಕೆಟ್ ಆಟಗಾರನೆಂದು ಬಣ್ಣಿಸುತ್ತಾರೆ ಜನಪರ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ.

ಭಾರತ ಮೊದಲ ಅಧಿಕೃತ ಕ್ರಿಕೆಟ್ ಟೆಸ್ಟ್ ಆಡಿದ್ದು 1932ರಲ್ಲಿ. ದೇಶದ ಕ್ರಿಕೆಟ್ ಇತಿಹಾಸವನ್ನು ಬಹುತೇಕ ಇತಿಹಾಸಕಾರರು ಅಲ್ಲಿಂದ ದಾಖಲಿಸುತ್ತ ಬಂದಿದ್ದಾರೆ.

1932ರ ಹಿಂದಿನ ಕ್ರಿಕೆಟ್ ಕ್ರೀಡೆಯ ಇತಿಹಾಸ ತೀವ್ರ ಅವಗಣನೆಗೆ ಈಡಾಗಿದೆ. ಹೀಗಾಗಿ ಪಲ್ವಂಕರ್ ಬಾಲೂ ಅವರ ಮಹಾನತೆ ಕೂಡ ಇತಿಹಾಸದ ಅಂಧಕಾರದ ಆಳದಲ್ಲಿ ಹೂತು ಹೋಗಿದೆ. ಒಂದೊಮ್ಮೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಪಾಲಿನ ’ಹೀರೋ’ ಆಗಿದ್ದ ಬಾಲೂ ಅವರನ್ನು ದಲಿತ ಬುದ್ಧಿಜೀವಿ ವರ್ಗ ಲಕ್ಷಿಸಿದಂತಿಲ್ಲ.

ಉತ್ತರ ಗೋವಾದ ಪಲ್ವನ್ ಗ್ರಾಮ ಮೂಲದ ಚಮ್ಮಾರ ಕುಲದವರು ಬಾಲೂ. 1875ರಲ್ಲಿ ಹುಟ್ಟಿದ್ದು ಕನ್ನಡನಾಡಿನ ಧಾರವಾಡದಲ್ಲಿ. ತಂದೆಗೆ ಪುಣೆಯಲ್ಲಿ ಸೇನಾ ನೆಲೆಯಲ್ಲಿ ಉದ್ಯೋಗ. ಸೇನಾ ಅಧಿಕಾರಿಗಳು ಆಡಿ ಎಸೆದ ಹಳೆಯ ದಾಂಡು, ಚೆಂಡು, ವಿಕೆಟುಗಳನ್ನಿಟ್ಟುಕೊಂಡು ಕ್ರಿಕೆಟ್ ಕಲಿತರು ಬಾಲೂ ಮತ್ತು ಅವರ ತಮ್ಮ ಶಿವರಾಮ್. ಸ್ಥಳೀಯ ಪಾರ್ಸಿ ಕ್ರಿಕೆಟ್ ಕ್ಲಬ್‌ನಲ್ಲಿ ಪಿಚ್ ಗುಡಿಸಿ ರೋಲರ್ ಎಳೆವುದು ಮತ್ತು ಆಗಾಗ ಬೌಲ್ ಮಾಡುವುದು ಬಾಲೂಗೆ ಸಿಕ್ಕ ಮೊದಲ ಚಾಕರಿ. ಸಂಬಳ ತಿಂಗಳಿಗೆ ಮೂರು ರುಪಾಯಿ. ಅಲ್ಲಿಂದ ಐರೋಪ್ಯರ ತಂಡಕ್ಕೆ ಇದೇ ಸೇವೆ. ಕಾಲಕ್ರಮೇಣ ಬಾಲೂ ಅವರ ಎಡಗೈ ಸ್ಪಿನ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿದಾತ ಆ ಕಾಲದ ಪ್ರಮುಖ ಇಂಗ್ಲಿಷ್ ಕ್ರಿಕೆಟಿಗ ಜೆ.ಜಿ.ಗ್ರೇಗ್.

PC : Rediffmail

ಐರೋಪ್ಯರ ತಂಡಕ್ಕೆ ಸವಾಲೆಸೆಯುವ ಸ್ಥಳೀಯರು ಹಿಂದೂ ಕ್ಲಬ್ ಕಟ್ಟಿಕೊಂಡಿದ್ದರು. ಚುಚ್ಚುಮಾತಿನ ಗ್ರೇಗ್ ಶಿಫಾರಸು ಕೆಲಸ ಮಾಡಿತ್ತು. ಬಾಲೂಗೆ ಆಟಗಾರನಾಗಿ ಹಿಂದೂ ಕ್ಲಬ್‌ಗೆ ಪ್ರವೇಶ ದೊರೆತಿತ್ತು. ಆದರೆ ಷರತ್ತುಗಳಿದ್ದವು. ಮೈದಾನದಲ್ಲಿ ಬಾಲೂ ಮುಟ್ಟಿದ ಚೆಂಡನ್ನು ಸವರ್ಣೀಯ ಹಿಂದೂ ಆಟಗಾರರೂ ಮುಟ್ಟುತ್ತಿದ್ದರು. ಆದರೆ ಆಟದ ಅಂಗಳದಾಚೆಗೆ ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಬಾಲೂಗೆ ಪೆವಿಲಿಯನ್ ಪ್ರವೇಶ ನಿಷಿದ್ಧ. ಚಹಾ ವಿರಾಮದಲ್ಲಿ ಹೊರಗೆ ನಿಂತೇ ಚಹಾ ಸೇವಿಸಬೇಕಿತ್ತು, ಅದೂ ಕುಡಿದ ನಂತರ ಎಸೆಯಬಹುದಾದ ಮಣ್ಣಿನ ಕುಡಿಕೆಯಲ್ಲಿ. ಇತರರಿಗೆ ಪಿಂಗಾಣಿ ಬಟ್ಟಲುಗಳು. ಬಾಲೂ ಮುಖ ಕೈ ತೊಳೆಯಬೇಕಿದ್ದರೆ ಮೈದಾನದ ಅಂಚಿಗೆ ಅಸ್ಪೃಶ್ಯ ಆಳೊಬ್ಬ ನೀರು ಒಯ್ದು ಹನಿಸುತ್ತಿದ್ದ. ಬಾಲೂ ಊಟವೂ ಪ್ರತ್ಯೇಕ. ಬೇರೆಯದೇ ಮೇಜು.

ಆದರೆ ಬಾಲೂ ಈ ತರತಮವನ್ನು ನುಂಗಿಕೊಂಡೇ ವಿಕೆಟ್ ಕಬಳಿಸುವ ಶ್ರೇಷ್ಠ ಆಟಗಾರನಾಗಿ ರೂಪುಗೊಂಡರು. ಏಳು ವಿಕೆಟ್ ಪಡೆದ ಸತಾರಾದ ಪಂದ್ಯವೊಂದರ ನಂತರ ಬಾಲೂವನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗಿತ್ತು. ಮತ್ತೊಮ್ಮೆ ವಿದ್ವಾಂಸ, ಸಮಾಜಸುಧಾರಕ ಮಹಾದೇವ ಗೋವಿಂದ ರಾನಡೆ ಅವರೇ ಹೂಮಾಲೆ ತೊಡಿಸಿ ಸನ್ಮಾನಿಸಿದ್ದರು. ಇನ್ನೊಂದು ಸಮಾರಂಭದಲ್ಲಿ ಖುದ್ದು ಬಾಲಗಂಗಾಧರ ತಿಲಕರೇ ಮೆಚ್ಚಿ ಮಾತಾಡಿದರು. ಹಿನ್ನೆಲೆಯಲ್ಲಿ ಜ್ಯೋತಿಬಾ ಫುಲೆ ಅವರ ಸತ್ಯಶೋಧಕ ಸಮಾಜ ಅಸ್ತಿತ್ವಕ್ಕೆ ಬಂದಿತ್ತು.

ಪುಣೆಯ ಜಾತಿವಾದಿ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ಬಾಲೂ ಕುಟುಂಬ ಸಮೇತ ಬಾಂಬೆಗೆ ತೆರಳಿದರು. ಅವರ ಪ್ರತಿಭೆ ಗರಿಕಟ್ಟಿತ್ತು. ಪರಮಾನಂದದಾಸ್ ಜೀವನದಾಸ್ ಹಿಂದು ಜಿಮ್‌ಖಾನಾಗೆ ಆಡಿದರು. ಅಂದಿನ ಬಾಂಬೆಯ ಪ್ರಮುಖ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಾವಳಿಗಳಲ್ಲಿ ಹೇರಳ ವಿಕೆಟ್ ಉರುಳಿಸಿದರು. ಭಾರತದ ವಿಲ್ಫ್ರೆಡ್ ರೋಡ್ಸ್ ಎಂದು ಕರೆಯಿಸಿಕೊಂಡರು. ನವಾನಗರದ ಜಾಮ್ ಸಾಹೇಬ್ ಎಂದು ಹೆಸರಾಗಿದ್ದ ಯುವರಾಜ ಮತ್ತು ಖ್ಯಾತ ಕ್ರಿಕೆಟ್ ಪಟು ರಣಜಿತ್ ಸಿಂಗ್ ಅವರ ವಿಕೆಟ್ ಪಡೆದು ಸೈ ಎನಿಸಿಕೊಂಡರು. 1902-03ರಲ್ಲಿ ಭಾರತ ಪ್ರವಾಸ ಮಾಡಿದ Oxford Authentics ಎಂಬ ಇಂಗ್ಲಿಷ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಐದು ವಿಕೆಟ್‌ಗಳನ್ನು ಎಗರಿಸಿದರು. ರನ್ ಗಳಿಕೆಯಲ್ಲೂ ಮೊದಲಿಗರೆನಿಸಿದರು. ಓವರಿನ ಆರು ಎಸೆತಗಳನ್ನು ಬ್ಯಾಟ್ಸ್‌ಮನ್ ಪಾಲಿಗೆ ಆರು ಭಿನ್ನ ಭಯಾನಕ ಎಸೆತಗಳನ್ನಾಗಿ ರೂಪಿಸಬಲ್ಲ ಸಾಮರ್ಥ್ಯ ಬಾಲು ಅವರದಾಗಿತ್ತು.

ಬಾಲೂ ಅವರನ್ನು ಬಾಂಬೆಯ ಡಿಪ್ರೆಸ್ಡ್ ಕ್ಲಾಸಸ್ ಅಸೋಸಿಯೇಷನ್ ತಮ್ಮವನೆಂದು ಹೆಮ್ಮೆಯಿಂದ ಸನ್ಮಾನಿಸುತ್ತದೆ. ತಮ್ಮೊಡನೆ ಇಂಗ್ಲೆಂಡಿಗೆ ತೆರಳಿದ್ದ ಬ್ರಾಹ್ಮಣ, ಮುಸ್ಲಿಮ್, ಪಾರ್ಸಿ ಆಟಗಾರರು ಮತ್ತು ಯುವರಾಜರಾಗಿದ್ದ ಆಟಗಾರರಗಿಂತ ಉತ್ತಮ ಆಟವಾಡಿದ್ದರು ಬಾಲೂ. ಈ ಸಭೆಯಲ್ಲಿ ಬಾಲೂ ಅವರಿಗೆ ಮಾನಪತ್ರ ನೀಡಿ ಸ್ವಾಗತಿಸಿದವರು ಬಾಬಾಸಾಹೇಬ ಅಂಬೇಡ್ಕರ್.

ಆನಂತರದ ವರ್ಷಗಳಲ್ಲಿ ಬಾಲೂ ಕಾಲಕ್ರಮೇಣ ಹಿನ್ನೆಲೆಗೆ ಸರಿಯುತ್ತಾರೆ. ಅವರ ಇತರೆ ತಮ್ಮಂದಿರಾದ ಗಣಪತ್ ಮತ್ತು ವಿಠ್ಠಲ್ ಪಲ್ವಂಕರ್ ಕ್ರಿಕೆಟ್ ದಿಗಂತದ ತಾರೆಗಳಾಗುತ್ತಾರೆ. 1913ರಲ್ಲಿ ನಾಲ್ಕೂ ಮಂದಿ ಸೋದರರು ಹಿಂದೂ ತಂಡದಲ್ಲಿ ಆಡುತ್ತಾರೆ. ಎಲ್ಲ ದೃಷ್ಟಿಯಿಂದ ಅರ್ಹರಾಗಿದ್ದರೂ ಜಾತಿಯ ಕಾರಣ ಬಾಲೂ ಅವರಿಗೆ ತಂಡದ ನಾಯಕತ್ವ ದಕ್ಕುವುದಿಲ್ಲ. ಹಿಂದೂ ತಂಡಕ್ಕೆ ಬಾಲೂ ಸಲ್ಲಿಸಿದ ಸೇವೆಯನ್ನು ಬಾಂಬೆ ಕ್ರಾನಿಕಲ್ ಪತ್ರಿಕೆ ಕೊಂಡಾಡಿ ಸಂಪಾದಕೀಯ ಬರೆಯುತ್ತದೆ. ನಾಯಕತ್ವ ನೀಡದ ಕುರಿತು ಸಾರ್ವಜನಿಕ ಆಕ್ರೋಶಕ್ಕೆ ಈ ಪತ್ರಿಕೆ ಅಕ್ಷರ ರೂಪ ನೀಡುತ್ತದೆ. ತಮ್ಮ ನಲವತ್ತನಾಲ್ಕನೆಯ ವಯಸ್ಸಿನಲ್ಲೂ ಚೆಂಡನ್ನು ತಿರುಗಿಸುವ ಬಾಲೂ ಕೈಚಳಕ ಕರಗಿರುವುದಿಲ್ಲ.

1920ರ ನಂತರ ಅಂಬೇಡ್ಕರ್ ಇಂಗ್ಲೆಂಡಿನಿಂದ ವಾಪಸಾದ ನಂತರ ದಲಿತ ಜನಸಮುದಾಯಗಳ ಭವಿಷ್ಯ ಕುರಿತು ಚರ್ಚಿಸಲು ಪರಸ್ಪರ ಭೇಟಿಯಾಗುತ್ತಿದ್ದರು. ಒಮ್ಮೆ ಸಮಗಾರರ ಒಕ್ಕೂಟದ ಆಶ್ರಯದಲ್ಲಿ ಅಂಬೇಡ್ಕರ್ ಅವರಿಗೆ ಸನ್ಮಾನ ಮಾಡುವ ಸಮಾರಂಭವೊಂದನ್ನು ಬಾಲೂ ಏರ್ಪಡಿಸಿರುತ್ತಾರೆ ಕೂಡ. 1911ರಲ್ಲಿ ಬಾಲೂ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ನೂರಕ್ಕೂ ಹೆಚ್ಚು ವಿಕೆಟ್ ಪಡೆದು ಹಿಂತಿರುಗಿದ ನಂತರ ಅವರ ಸನ್ಮಾನ ಸಮಾರಂಭದ ಸ್ವಾಗತ ಭಾಷಣ ಮಾಡಿದ್ದವರು ವಿದ್ಯಾರ್ಥಿ ಅಂಬೇಡ್ಕರ್

1935ರಲ್ಲಿ ಬಾಬಾಸಾಹೇಬರು ಪೂನಾ ಒಡಂಬಡಿಕೆಯ ವಿರುದ್ಧ ದನಿ ಎತ್ತುತ್ತಾರೆ. ಅದೇ ವರ್ಷ ಗುಜರಾತಿನಲ್ಲಿ ಅಸ್ಪೃಶ್ಯರ ವಿರುದ್ಧ ಹೀನಾತಿಹೀನ ದಾಳಿಗಳು ನಡೆಯುತ್ತವೆ. ತಮ್ಮ ಅನುಯಾಯಿಗಳೊಡನೆ ಹಿಂದೂ ಧರ್ಮವನ್ನು ತೊರೆದು ಮತಾಂತರ ಹೊಂದುವುದಾಗಿ ಸಾರುತ್ತಾರೆ ಅಂಬೇಡ್ಕರ್. ಈ ಹೆಜ್ಜೆ ಆತ್ಮಹತ್ಯಾಕಾರಿ ಎಂದು ಬಾಲೂ ಪ್ರತಿಕ್ರಿಯಿಸುತ್ತಾರೆ. ಹಿಡಿಯಷ್ಟು ಧರ್ಮಾಂಧ ಹಿಂದೂಗಳ ನಡವಳಿಕೆಯಿಂದ ಕೆರಳಬಾರದೆಂದೂ, ಹರಿಜನರ ಉದ್ಧಾರಕ್ಕೆ ಶ್ರಮಿಸುತ್ತಿರುವ ಮಹಾನ್ ಭಾರತೀಯರ ಮೇಲ್ಪಂಕ್ತಿಯನ್ನು ಅನುಸರಿಸಬೇಕೆಂದೂ, ಅಂಬೇಡ್ಕರ್ ಕುರಿತು ತಾವು ಅಪಾರ ಗೌರವ ಹೊಂದಿರುವುದಾಗಿಯೂ ಹೇಳುತ್ತಾರೆ. ಹಿಂದೂ ಧರ್ಮವನ್ನು ತೊರೆಯುವ ನಿಲುವನ್ನು ಅಂಬೇಡ್ಕರ್ ಸಡಿಲಿಸದೆ ಹೋದಲ್ಲಿ ಹರಿಜನರು ಅದರಲ್ಲೂ ವಿಶೇಷವಾಗಿ ನಾನು ಪ್ರತಿನಿಧಿಸುವ ಚಮ್ಮಾರರು ಧರ್ಮವನ್ನು ಬದಲಿಸಲು ಎಂದೆಂದಿಗೂ ಒಪ್ಪುವುದಿಲ್ಲ ಎಂದು ಬಾಲು 1935ರ ಅಕ್ಟೋಬರ್‌ನಲ್ಲಿ ಸಾರುತ್ತಾರೆ.

ಅಲ್ಲಿಂದಾಚೆಗೆ ಒಂದೂಕಾಲು ವರ್ಷದ ನಂತರ ಬಾಲೂ ಮತ್ತು ಅಂಬೇಡ್ಕರ್ ಬಾಂಬೆ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗುತ್ತಾರೆ. ಬಾಂಬೆ ನಗರದ ಮೂರು ಸೀಟುಗಳಿಗೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಒಂದು ಮೀಸಲು ಕ್ಷೇತ್ರದಲ್ಲಿ ಬಾಲೂ ಕಾಂಗ್ರೆಸ್ ಹುರಿಯಾಳು. ಇವರ ಆಯ್ಕೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲರ ಪಾತ್ರವಿರುತ್ತದೆ. ಬಾಲು ಅವರ ಚಮ್ಮಾರ ಮತಬಾಂಧವರು ಆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಲೆಕ್ಕಾಚಾರ ಪಟೇಲರದಾಗಿತ್ತು. ಬಾಲೂ ಅಪ್ಪಟ ರಾಷ್ಟ್ರವಾದಿಯಾಗಿದ್ದು, ಪೂನಾ ಒಪ್ಪಂದ ಏರ್ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವರು ಎಂಬ ಅಂಶಗಳನ್ನು ಪ್ರಚಾರದಲ್ಲಿ ಧಾರಾಳವಾಗಿ ಬಳಸಲಾಗಿರುತ್ತದೆ. ತಮ್ಮನ್ನು ಅಂಬೇಡ್ಕರ್ ವಿರುದ್ಧ ಹೂಡಲಾಗಿದೆಯೆಂಬ ಸಂಗತಿಯು ನಾಮಕರಣ ಪತ್ರ ಸಲ್ಲಿಕೆಯ ನಂತರವೇ ತಿಳಿಯಿತೆಂದು ಬಾಲೂ ಹೇಳಿಕೊಳ್ಳುತ್ತಾರೆ. ಜನ ತಮಗೇ ಮತ ಹಾಕಿ ಗೆಲ್ಲಿಸುವರೆಂಬ ವಿಶ್ವಾಸವೂ ಅವರದಾಗಿರುತ್ತದೆ.

ಅಂಬೇಡ್ಕರ್ ವಿರುದ್ಧ ಸೆಣೆಸಲು ಬಾಲೂ ಬಯಸಿರುವುದಿಲ್ಲ. ಆದರೆ ಪಲ್ವಂಕರ್ ಸೋದರರ ಕ್ರಿಕೆಟ್ ಭವಿಷ್ಯಕ್ಕಾಗಿ ಶ್ರಮಿಸಿದ್ದ ಹಿಂದೂ ಜಿಮ್‌ಖಾನಾದ ಅಧ್ಯಕ್ಷ ಎಲ್.ಆರ್.ಟೈರ್ಸೀ ಅವರು ಬಾಲೂ ಮನ ಒಲಿಸುತ್ತಾರೆ. ಕಾಂಗ್ರೆಸ್ ಹರಿಜನ ಅಭ್ಯರ್ಥಿಗೇ (ಬಾಲೂ) ಮತ ಹಾಕುವಂತೆ ವಲ್ಲಭ ಭಾಯಿ ಪಟೇಲ್ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಕಡೆಗೆ 2,020 ಮತಗಳ ಅಂತರದಿಂದ ಬಾಲೂ ಸೋಲುತ್ತಾರೆ. ಅಂಬೇಡ್ಕರ್ ಅವರಿಗೆ 13,245 ಮತ್ತು ಬಾಲೂ ಅವರಿಗೆ 11,225 ಮತಗಳು ದೊರೆಯುತ್ತವೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಜೋಗಳೇಕರ್ ಎಂಬ ಕಾರ್ಮಿಕ ನಾಯಕರೊಬ್ಬರು 10 ಸಾವಿರ ಮತಗಳನ್ನು ಗಳಿಸುತ್ತಾರೆ. ಸ್ಪರ್ಧೆಯಿಂದ ನಿವೃತ್ತಿಯಾಗುವಂತೆ ಜೋಗಳೇಕರ್ ಅವರನ್ನು ಒಪ್ಪಿಸಿದ್ದರೆ ಅಂಬೇಡ್ಕರ್ ಸೋಲುತ್ತಿದ್ದರೆಂದು ’ಬಾಂಬೇ ಕ್ರಾನಿಕಲ್’ ಪತ್ರಿಕೆ ಬರೆಯುತ್ತದೆ.

ಈ ಸೋಲಿಗೆ ಮುನ್ನ 1932-33ರಲ್ಲಿ ಬಾಲು ಬಾಂಬೇ ನಗರಸಭೆಗೆ ಕಾರ್ಪೊರೇಟರ್ ಆಗಿ ಉಪಚುನಾವಣೆಯೊಂದರಲ್ಲಿ ಸ್ಪರ್ಧಿಸಿ ಸೋತಿರುತ್ತಾರೆ. ಅದು ಮೀಸಲು ಕ್ಷೇತ್ರ ಆಗಿರುವುದಿಲ್ಲ. ಬಾಲೂ ಹಿಂದೂ ಮಹಾಸಭೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುತ್ತಾರೆ.

PC : Outlook

ಅಸ್ಪೃಶ್ಯ ಜನಸಮುದಾಯಗಳು ಹಿಂದೂ ಧರ್ಮವನ್ನು ತ್ಯಜಿಸಬೇಕೆಂಬ ಅಂಬೇಡ್ಕರ್ ನಿಲುವನ್ನು ಬಾಲೂ ಒಪ್ಪಿರಲಿಲ್ಲ. ಇಬ್ಬರದೂ ಸುದೀರ್ಘ ಸಂಕೀರ್ಣ ಸಂಬಂಧ. ಅಸ್ಪೃಶ್ಯರ ಸಮುದಾಯಗಳಿಗೆ ಗಾಂಧೀ ಮತ್ತು ಇತರೆ ಸಮಾಜ ಸುಧಾರಕರು ನ್ಯಾಯ ಒದಗಿಸಿಕೊಡಬಲ್ಲರು ಎಂಬುದು ಬಾಲೂ ವಿಶ್ವಾಸ. ಇಂತಹ ನ್ಯಾಯ ಸಿಗುವುದೇ ಆದರೆ ಅದು ಹಿಂದೂ ಧರ್ಮದ ಚೌಕಟ್ಟಿನ ಹೊರಗಡೆಯೇ. ಜಾತಿಪದ್ಧತಿ ರಾಜಕೀಯ ಸಂಗತಿಯಾಗಿದ್ದು ಅದನ್ನು ಸಮಾಜಸುಧಾರಣೆಗಳಿಂದ ನಿವಾರಿಸಲು ಬರುವುದಿಲ್ಲ ಎಂಬುದು ಬಾಬಾಸಾಹೇಬರ ನಿಲುವಾಗಿತ್ತು.

1955ರ ಜುಲೈ ತಿಂಗಳಿನಲ್ಲಿ ಬಾಲು ಕಡೆಯುಸಿರೆಳೆಯುತ್ತಾರೆ. ಕೋಚ್‌ಗಳು, ತರಬೇತಿದಾರರು, ಶಿಬಿರಗಳು ಇಲ್ಲದಿದ್ದ ಕಾಲದಲ್ಲಿ ಕೇವಲ ಬ್ರಿಟಿಷರು ಆಡುವುದನ್ನು ನೋಡಿ, ಅವರಿಗಿಂತ ಚೆನ್ನಾಗಿ ಆಡುವುದನ್ನು ಕಲಿತ ಪಲ್ವಂಕರ್ ಸೋದರರು ನಿಜಕ್ಕೂ ಮಹಾನ್ ಭಾರತೀಯರು. 1911ರ ಕಾಲಘಟ್ಟದಲ್ಲೇ ಇಂಗ್ಲೆಂಡ್‌ಗೆ ಹೋಗಿ ನೂರು ವಿಕೆಟ್‌ಗಳನ್ನು ಗಳಿಸಿದ ಬೌಲರ್ ಬಾಲೂ ಪಲ್ವಂಕರ್ ಎಂಬುದನ್ನು ಮರೆಯಕೂಡದು ಎಂದು ವೀಕ್ಷಕ ವಿವರಣೆಕಾರ ತಲ್ಯಾರ್ ಖಾನ್ ಬಣ್ಣಿಸುತ್ತಾರೆ.

ಬಾಲೂ ಅವರಂತಹ ಮತ್ತೊಬ್ಬ ಬೌಲರ್ ನ್ನು ಭಾರತ ಸೃಷ್ಟಿಸುವುದು ಸದ್ಯ ಭವಿಷ್ಯದಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ವಿಜಯ್ ಮರ್ಚೆಂಟ್. ಆ ಕ್ರಿಕೆಟ್ ಸುವರ್ಣಯುಗದ ರಾಷ್ಟ್ರೀಯ ಹೀರೋ ಮತ್ತು ಈ ಆಟದ ಅಸಲಿ ಆಶಯವನ್ನು ಮೈಗೂಡಿಸಿಕೊಂಡಿದ್ದ ಸಜ್ಜನಿಕೆಯ ವ್ಯಕ್ತಿ ಎಂದು ಖಾನ್ ಮತ್ತು ಮಚೆಂಟ್ ಬಾಲೂ ಅವರನ್ನು ಕೊಂಡಾಡುತ್ತಾರೆ.

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಾಮಾಜಿಕ ಬಿಡುಗಡೆಯ ಹೋರಾಟದಲ್ಲಿ ಪಲ್ವಂಕರ್ ಸೋದರರಿಗೆ ಸಿಗಬೇಕಿದ್ದ ಸ್ಥಾನ ಈಗಲೂ ದಕ್ಕಿಲ್ಲ.


ಇದನ್ನೂ ಓದಿ: ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

LEAVE A REPLY

Please enter your comment!
Please enter your name here