ಹೊಸದಿಲ್ಲಿ: ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿನ ಐವತ್ತೊಂಬತ್ತು ಕ್ಷೇತ್ರಗಳಲ್ಲಿ ಇಂದು ಮೂರನೇ ಹಂತದ ಮತದಾನ ಚಲಾವಣೆ ನಡೆಯಲಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಎಲ್ಲ ಕ್ಷೇತ್ರಗಳ ಮತದಾನ ಇಂದು ನಡೆಯಲಿದೆ.
ಉತ್ತರ ಪ್ರದೇಶ: ಎಸ್‌ಪಿ ಭದ್ರಕೋಟೆಯಲ್ಲಿ ಮತದಾನ
ಯುಪಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಂಜಾಬ್‌ನಲ್ಲಿ, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸ್ಪರ್ಧಿಸುತ್ತಿರುವ ಯಾದವ್ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಲ್ಲಿರುವ ಕರ್ಹಾಲ್ ಸ್ಥಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಖಿಲೇಶ್ ವಿರುದ್ಧ ಬಿಜೆಪಿಯು ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಿದೆ. 1992ರಲ್ಲಿ ಪಕ್ಷ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಎಸ್‌ಪಿ ಈ ಕ್ಷೇತ್ರವನ್ನು ಕೇವಲ ಒಂದು ಬಾರಿ ಮಾತ್ರ ಸೋತಿರುವುದು ಗಮನಾರ್ಹ.
2017ರ ವಿಧಾನಸಭಾ ಚುನಾವಣೆಯಲ್ಲಿ ಈ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡರೆ, ಸಮಾಜವಾದಿ ಪಕ್ಷವು 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಎಲ್ಲಾ ಸ್ಥಾನಗಳನ್ನು ಕಳೆದುಕೊಂಡಿದೆ. ಇಂದು ಮತದಾನ ನಡೆಯುವ ಕ್ಷೇತ್ರಗಳು ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿವೆ.
ಪ್ರಮುಖ ಮುಖಗಳು: ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ (ಜಸ್ವಂತ್‌ನಗರ), ಬಿಜೆಪಿಯ ಸತೀಶ್ ಮಹಾನಾ (ಕಾನ್ಪುರದ ಮಹಾರಾಜಪುರ), ರಾಮ್‌ವೀರ್ ಉಪಾಧ್ಯಾಯ (ಹತ್ರಾಸ್‌ನ ಸದಾಬಾದ್), ಅಸಿಮ್ ಅರುಣ್ (ಕನೌಜ್ ಸದರ್) ಮತ್ತು ಕಾಂಗ್ರೆಸ್‌ನ ಲೂಯಿಸ್ ಖುರ್ಷಿದ್ (ಫರೂಕಾಬಾದ್ ಸದರ್) ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಲೂಯಿಸ್ ಖುರ್ಷಿದ್ ಅವರು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ.
ಇದನ್ನೂ ಓದಿರಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?
ದಕ್ಷಿಣ ಯುಪಿಯ ಬುಂದೇಲ್‌ಖಂಡ್ ಪ್ರದೇಶದಲ್ಲಿ, 2017 ರಲ್ಲಿ ಬಿಜೆಪಿ ಎಲ್ಲಾ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದು ಮೊದಲು BSP ಭದ್ರಕೋಟೆಯಾಗಿತ್ತು. ಇಂದು ಮತ ಚಲಾಯಿಸುವ ಮಧ್ಯ ಯುಪಿ ಕ್ಷೇತ್ರಗಳು ಎಸ್‌ಪಿ ಭದ್ರಕೋಟೆಗಳಾಗಿವೆ.
ರಾಜ್ಯದ ದೊಡ್ಡ ನಗರಗಳಲ್ಲಿ ಕಾನ್ಪುರ್ ಒಂದಾಗಿದೆ. ವ್ಯಾಪಾರ ಶಕ್ತಿ ಕೇಂದ್ರವೂ ಹೌದು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿತ್ತು.
ಪಂಜಾಬ್ ಹೈವೋಲ್ಟೇಜ್
ರೈತ ಚಳವಳಿಯ ಮೂಲಕ ಗಮನ ಸೆಳೆದಿರುವ, ಬಿಜೆಪಿಗೆ ಬಹುದೊಡ್ಡ ಹೊಡೆತ ನೀಡಿರುವ ಪಂಜಾಬ್ ರಾಜ್ಯದಲ್ಲಿ ಒಂದೇ ಹಂತದಲ್ಲಿ 117 ಕ್ಷೇತ್ರಗಳ ವಿಧಾನಸಭಾ ಚುನಾವಣೆ ನಡೆಯಲಿದೆ.
2017ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಪಡೆಯುವ ಮೂಲಕ ಎಸ್ಎಡಿ-ಬಿಜೆಪಿ ಒಕ್ಕೂಟದ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು. ಎಎಪಿ 20 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಎಸ್‌ಎಡಿ-ಬಿಜೆಪಿ 18 ಸ್ಥಾನಗಳನ್ನು ಗೆದ್ದಿದ್ದವು. ಎರಡು ಸ್ಥಾನಗಳಲ್ಲಿ ಲೋಕ ಇನ್ಸಾಫ್ ಗೆದ್ದಿತ್ತು.
ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ತಮ್ಮದೇ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ ಸ್ಥಾಪಿಸಿದ್ದು, ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಆಮ್ ಆದ್ಮಿ ಪಕ್ಷವು ದೊಡ್ಡ ಪೈಪೋಟಿಯನ್ನು ನೀಡುತ್ತಿದೆ.
ಪ್ರಮುಖ ಮುಖಗಳು: ಚಮ್ಕೌರ್ ಸಾಹಿಬ್ ಕ್ಷೇತ್ರದಿಂದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಅಮೃತಸರ ಪೂರ್ವ ಕ್ಷೇತ್ರದಿಂದ ಎಸ್‌ಎಡಿಯ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಧುರಿಯಿಂದ ಎಎಪಿಯ ಭಗವಂತ್ ಮಾನ್, ಪಟಿಯಾಲದಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಜಲಾಲಾಬಾದ್ ವಿಧಾನಸಭಾ ಕ್ಷೇತ್ರದಿಂದ ಸುಖಬೀರ್ ಸಿಂಗ್ ಬಾದಲ್, ಲಂಬಿ ಕ್ಷೇತ್ರದಿಂದ ಪ್ರಕಾಶ್ ಸಿಂಗ್ ಬಾದಲ್, ಮಜಿತಾ ಕ್ಷೇತ್ರದಿಂದ ಗನೀವ್ ಕೌರ್ ಮಜಿಥಿಯಾ ಮತ್ತು ಬಟಿಂಡಾ ಕ್ಷೇತ್ರದಿಂದ ಹರ್ಸಿಮ್ರತ್ ಕೌರ್ ಬಾದಲ್ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿರಿ: ಆಶೀಶ್ ಮಿಶ್ರಾಗೆ ಜಾಮೀನು: ಪಂಜಾಬ್‌ಗೆ ಪಿಎಂ ಭೇಟಿ ವೇಳೆ ಪ್ರತಿಭಟನೆಗೆ ಎಸ್‌ಕೆಎಂ ಕರೆ


