Homeಮುಖಪುಟಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಹತ್ರಾಸ್ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ‘ನ್ಯೂಸ್‌ ಲಾಂಡ್ರಿ’ ಸುದ್ದಿ ಜಾಲತಾಣ ಗ್ರೌಂಡ್ ರಿಪೋರ್ಟ್ ಮಾಡಿದೆ. ಇಲ್ಲಿನ ನಿರ್ಣಾಯಕ ಮತದಾರರಾಗಿರುವ ದಲಿತರಿಗೆ ಹತ್ರಾಸ್ ಅತ್ಯಾಚಾರ ಪ್ರಕರಣ ಮರೆಯಲಾಗದ ಘಟನೆಯಾಗಿದೆ.

- Advertisement -
- Advertisement -

“ನಾವು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇವೆ. ಏಕೆಂದರೆ ಅದು ರಾಷ್ಟ್ರೀಯವಾದಿ ಪಕ್ಷವೆಂದು ತೋರಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಯಾವುದೇ ಸಮಸ್ಯೆ ಇಲ್ಲ; ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ನಮ್ಮ ಸಹೋದರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ನಮ್ಮ ಅಸಮಾಧಾನವಿದೆ” ಎಂದು ರವಿ ಕುಮಾರ್ ವಾಲ್ಮೀಕಿ ಅವರು 2020ರ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ ಹೇಳುತ್ತಾರೆ. ಅತ್ಯಾಚಾರಕ್ಕೆ ಒಳಗಾದ ದಲಿತ ಅಪ್ರಾಪ್ತ ಹೆಣ್ಣು ಮಗಳು ಸಾವಿಗೀಡಾದ ಬಳಿಕ, ಆ ಹೆಣ್ಣುಮಗಳ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರಾತ್ರೋ ರಾತ್ರಿ ಮೃತದೇಹವನ್ನು ಸುಡಲಾಗಿತ್ತು.

ಸ್ವೀಪರ್ ಆಗಿರುವ 36 ವರ್ಷದ ರವಿಕುಮಾರ್ ಅವರು, ಹತ್ರಾಸ್ ರೈಲು ನಿಲ್ದಾಣದ ಪಕ್ಕದ ಮೊಹಲ್ಲಾ ಕಾರ್ರ್‌ನಲ್ಲಿರುವ ಬಾಲಕಿಯ ನಿವಾಸದಿಂದ 7 ಕಿಮೀ ದೂರದಲ್ಲಿ ವಾಸಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿರೋಧ ಪಕ್ಷಗಳು ಬಿಜೆಪಿಯ ಮೇಲೆ ತಿರುಗಿಬಿದ್ದಿವೆ. ಆಡಳಿತಾರೂಢ ಬಿಜೆಪಿಯು “ಶಾಂತಿ” ಮತ್ತು “ಸುರಕ್ಷತೆ” ಬಗ್ಗೆ ಮಾತನಾಡುತ್ತಿದೆ.

2020ರ ಪ್ರಕರಣವು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ವಿಶ್ಲೇಷಿಸಲು ‘ನ್ಯೂಸ್‌ಲಾಂಡ್ರಿ’ ಸುದ್ದಿ ಜಾಲತಾಣವು ಇಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸುತ್ತಾಡಿದೆ.

ಇದನ್ನೂ ಓದಿರಿ: ಯುಪಿ ಕೇರಳವಾದರೆ ಅತ್ಯುತ್ತಮ ಶಿಕ್ಷಣ, ಆರೋಗ್ಯ, ಜೀವನಮಟ್ಟ ಸಿಗಲಿದೆ: ಆದಿತ್ಯನಾಥ್‌ಗೆ ಪಿಣರಾಯಿ ತಿರುಗೇಟು

ಜಿಲ್ಲೆಯು ಮೂರು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಹತ್ರಾಸ್ (SC), ಸದಾಬಾದ್ ಮತ್ತು ಸಿಕಂದರಾ ರಾವ್ – ಈ ಕ್ಷೇತ್ರಗಳ ಪೈಕಿ ಹತ್ರಾಸ್ ಮತ್ತು ಸಿಕಂದರಾ ರಾವ್ ಭಾಗದಲ್ಲಿ ದಲಿತರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. 2017ರ ಚುನಾವಣೆಯಲ್ಲಿ, ಬಿಎಸ್‌ಪಿಯ ರಾಮ್‌ವೀರ್ ಉಪಾಧ್ಯಾಯ ಅವರು ಸದಾಬಾದ್‌ನಲ್ಲಿ ಗೆದ್ದಿದ್ದರು. ಉಳಿದ ಎರಡನ್ನು ಬಿಜೆಪಿ ಗೆದ್ದಿತ್ತು. ಉಪಾಧ್ಯಾಯ ಅವರು ಈಗ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದಾರೆ.

ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡ ಪ್ರತಿಪಕ್ಷಗಳಾದ ಎಸ್‌ಪಿ ಮತ್ತು ಆರ್‌ಎಲ್‌ಡಿಯು 2020ರ ಘಟನೆಯನ್ನು ಉಲ್ಲೇಖಿಸಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುತ್ತಿವೆ. ಅದಕ್ಕೆ ಬಿಜೆಪಿ ಬಿರುಸಾಗಿ ಪ್ರತಿಕ್ರಿಯೆ ನೀಡುತ್ತಿದೆ.

ಯೋಗಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮಹಿಳೆಯರು ಆಭರಣದೊಂದಿಗೆ ಹೊರಬರಲು ಸಾಧ್ಯವಿರಲಿಲ್ಲ ಎಂದು ಮಥುರಾ ಶಾಸಕ ಮತ್ತು ಯುಪಿ ಸಚಿವ ಚೌಧರಿ ಲಕ್ಷ್ಮೀನಾರಾಯಣ ಸಿಂಗ್ ಇತ್ತೀಚೆಗೆ ಹೇಳಿದ್ದರು. ಹತ್ರಾಸ್ ಮತ್ತು ಉನ್ನಾವೋ ಪ್ರಕರಣಗಳ ಕುರಿತು ಪ್ರಶ್ನಿಸಿದಾಗ ನ್ಯೂಸ್‌ಲಾಂಡ್ರಿ ಸಂದರ್ಶನವನ್ನು ನಿಲ್ಲಿಸಲು ಪ್ರಯತ್ನಿಸಿದರು. ಬಿಜೆಪಿಯ ದಲಿತ ಮುಖ ಮತ್ತು ಆಗ್ರಾ ದೇಹತ್ ಅಭ್ಯರ್ಥಿ ಬೇಬಿ ರಾಣಿ ಮೌರ್ಯ ಕೂಡ ಹತ್ರಾಸ್ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದ ತಕ್ಷಣ ನ್ಯೂಸ್‌ಲಾಂಡ್ರಿಯ ಸಂದರ್ಶನವನ್ನು ಮೊಟಕುಗೊಳಿಸಿದ್ದರು.

ದಲಿತರಾದ ಜಾತವ್‌ಗಳು ಅತಿ ಹೆಚ್ಚು ಜನಸಂಖ್ಯೆಯಲ್ಲಿರುವ ಹತ್ರಾಸ್ ಜಿಲ್ಲೆಯಲ್ಲಿ, 2020ರ ಪ್ರಕರಣವು ಅನೇಕರನ್ನು ಕಾಡುತ್ತಲೇ ಇದೆ ಎಂದು ಕುಮಾರ್ ಹೇಳುತ್ತಾರೆ. “ಸಂತ್ರಸ್ತೆಯನ್ನು ಪೋಲೀಸರು ಅಂತ್ಯಸಂಸ್ಕಾರ ಮಾಡಿದರು… ಸಮೀಪದಲ್ಲಿ ವಾಸಿಸುವ ವಾಲ್ಮೀಕಿ ಸಮುದಾಯದ ಎಲ್ಲಾ ಸದಸ್ಯರು ಅಲ್ಲಿಗೆ ಹೋಗಿದ್ದರು. ಪೊಲೀಸರು ಎಲ್ಲರನ್ನೂ ಥಳಿಸಿದರು; ನನಗೂ ಪೆಟ್ಟಾಯಿತು” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿರಿ: ಯುಪಿ ಚುನಾವಣೆ: ಕಾಂಗ್ರೆಸ್, ಎಸ್‌ಪಿ ಮೈತ್ರಿಯಾಗಿದ್ದರೇ ಮತವಿಭಜನೆ ತಡೆಯಬಹುದಿತ್ತು- ಮಮತಾ ಬ್ಯಾನರ್ಜಿ

“ನಮ್ಮ ಜನರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಲಾಯಿತು. ಅವರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಇಂದಿಗೂ ಅವರು ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದಾರೆ. ಇದೆಲ್ಲವೂ ನಮಗೆ ತುಂಬಾ ನೋವನ್ನುಂಟು ಮಾಡಿದೆ… ನಮಗೆ ಏನಾಗಿದೆಯೋ ಅದು ಅಕ್ಷಮ್ಯ… ಬಿಜೆಪಿಯ ಕೆಲವು ಕಟ್ಟಾ ಬೆಂಬಲಿಗರನ್ನು ಹೊರತುಪಡಿಸಿ, ನಾವೆಲ್ಲರೂ (ಎಸ್‌ಪಿ ನಾಯಕ) ಅಖಿಲೇಶ್ ಯಾದವ್‌ಗೆ ಮತ ಹಾಕುತ್ತೇವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1,200 ವಾಲ್ಮೀಕಿ ಮತದಾರರನ್ನು ಹೊಂದಿರುವ ಮೊಹಲ್ಲಾ ಕರ್‌ನಲ್ಲಿ, 57 ವರ್ಷದ ರಾಜು ವಾಲ್ಮೀಕಿ ಕೂಡ 2020ರ ಪ್ರಕರಣದತ್ತ ಬೊಟ್ಟು ಮಾಡಿದರು. “ಇಲ್ಲಿನ ಜನರು ಸಾಮೂಹಿಕವಾಗಿ ಬಿಜೆಪಿಗೆ ಮತ ಹಾಕುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಜನರಲ್ಲಿ ಅಸಮಾಧಾನವಿದ್ದು, ಅದರ ಭಾರವನ್ನು ಬಿಜೆಪಿಯೇ ಅನುಭವಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು. ಕೆಲವರಿಗೆ, ಇದು ಕೇವಲ 2020ರ ಪ್ರಕರಣವಲ್ಲ, ಸಬಲೀಕರಣದ ಸಮಸ್ಯೆಯೂ ಹೌದು.

“ನೀವು ಸಂಪಾದಿಸದಿದ್ದರೆ, ಹೇಗೆ ಹಸಿವು ನೀಗುತ್ತೀರಿ? ನಮಗೆ ಮಾತನಾಡುವ ಹಕ್ಕು ಕೂಡ ಇಲ್ಲ. ನಾನು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತೇನೆ. ನಗರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ ನಾನು ಹಳ್ಳಿಗೆ ಕೆಲಸಕ್ಕೆ ಹೋದಾಗ, ನನ್ನ ಬೂಟುಗಳನ್ನು ಹೊರಗೆ ಬಿಡಲು ಹೇಳುತ್ತಾರೆ. ಬೂಟುಗಳಿಲ್ಲದೆ ಎಲೆಕ್ಟ್ರಿಷಿಯನ್ ಹೇಗೆ ಕೆಲಸ ಮಾಡಬಹುದು?” ಎಂದು ಭೂರಾ ಕಾ ನಾಗ್ಲಾದ ನಿವಾಸಿ 22 ವರ್ಷದ ಸನ್ನಿ ಕುಮಾರ್‌ ಕೇಳುತ್ತಾರೆ. ಸನ್ನಿ ಕುಮಾರ್‌‌ ಜಾತವ್ ಸಮುದಾಯದವರಾಗಿದ್ದು, ಈ ಭಾಗದಲ್ಲಿ ಜಾತವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. “ನಾವು ಬೆಹೆನ್‌ಜಿ (ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ) ಅವರ ಮತದಾರರು… ಅವರೂ ನಮ್ಮ ಗ್ರಾಮಕ್ಕೆ ಬಂದಿದ್ದರು” ಎನ್ನುತ್ತಾರೆ ಕುಮಾರ್‌.

ಗ್ರಾಮದ ಇತರರಿಗೆ ಚುನಾವಣೆಯ ವಿಷಯವೇ ಉದ್ಯೋಗ. “ನಾನು ಬಿಎಸ್ಸಿ ಪದವಿ ಪಡೆದಿದ್ದೇನೆ. ನನಗೆ ಕೆಲಸ ಸಿಗುತ್ತಿಲ್ಲ. ಹಾಗಾಗಿ ಬಡಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಎಷ್ಟು ಹುಡುಗರು ತಿರುಗಾಡುತ್ತಿದ್ದಾರೆಂದು ನೀವು ನೋಡುತ್ತೀರಿ. ನಾವು ದಿನಗೂಲಿಗಳಾಗಿದ್ದು, ಈಗ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ” ಎಂದು ಅಮರ್ ಕುಮಾರ್ ಹೇಳಿದ್ದಾರೆ. ಹತ್ರಾಸ್ ಪ್ರಕರಣದ ಬಗ್ಗೆ “ಅಸಮಾಧಾನ” ಇದೆ. ಆದರೆ ಇದು “ಗೌರವದ ವಿಷಯ” ಮತ್ತು ಚುನಾವಣಾ ವಿಷಯವಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ. ಸಂತ್ರಸ್ತ ಬಾಲಕಿ ಮೇಲ್ಜಾತಿಯವರಾಗಿದ್ದರೆ, ಅವರು (ಅಧಿಕಾರಿಗಳು) ಈ ರೀತಿ ವರ್ತಿಸುತ್ತಿರಲಿಲ್ಲ ಎನ್ನುವ ಅಮರ್ ಕುಮಾರ್ ಅವರಿಗೆ ಉದ್ಯೋಗವೇ ಮುಖ್ಯ ಸಮಸ್ಯೆ.

ಇದನ್ನೂ ಓದಿರಿ: ಉತ್ತರ ಪ್ರದೇಶ ಚುನಾವಣೆ ಪೂರ್ವ ವಿಶ್ಲೇಷಣೆ: ಭಾಗ-2; ತಲೆಕೆಳಗಾಗುತ್ತಿರುವ ಕೇಸರಿಕೂಟದ ಲೆಕ್ಕಾಚಾರ

ಹತ್ರಾಸ್ ಕ್ಷೇತ್ರದ ಸಮೀಪದ ಜಾತವ್ ಪ್ರಾಬಲ್ಯದ ತಮಾನಗಢಿ ಗ್ರಾಮದಲ್ಲಿ ಮಾತಿಗೆ ಸಿಕ್ಕ ವಕೀಲ ಕುಲದೀಪ್ ಸಿಂಗ್, “ಈ (2020) ಘಟನೆಯು ಹತ್ರಾಸ್‌ಗೆ ಕಳಂಕದಂತಿದೆ. 2017ರಲ್ಲಿ ಪರಿಸ್ಥಿತಿ ಬದಲಾಗಬಹುದು ಎಂದು ನಾವು ಭಾವಿಸಿ ಬಿಜೆಪಿಗೆ ಮತ ಹಾಕಿದ್ದೇವೆ. ಆದರೆ ನಮಗೆ ಮತ್ತಷ್ಟು ಕಿರುಕುಳ ನೀಡಲಾಯಿತು. ಆಡಳಿತದಲ್ಲಿ ನಮ್ಮ ಮಾತು ಕೇಳುವವರಿಲ್ಲ. ಇದಕ್ಕೆ ವಿರುದ್ಧವಾಗಿ ಯಾರಾದರೂ ದೂರು ನೀಡಲು ಹೋದರೆ, ಅವರನ್ನು ಬೆದರಿಸಿ ಬೆದರಿಕೆ ಹಾಕಲಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನ್ಯೂಸ್‌ಲಾಂಡ್ರಿ ಹತ್ರಾಸ್ ಸಂತ್ರಸ್ತೆಯ ಗ್ರಾಮಕ್ಕೆ ಭೇಟಿ ನೀಡಿದೆ. ಇಲ್ಲಿ ಹೆಚ್ಚಿನ ಜನರು ಮೇಲ್ವರ್ಗದವರಾಗಿದ್ದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಬೆಂಬಲಿಸುತ್ತಾರೆ. 76 ವರ್ಷದ ರಘುವೀರ್ ಸಿಂಗ್ ಮಾತನಾಡುತ್ತಾ “ಅವರು (ಅಪ್ರಾಪ್ತೆಯ ಕುಟುಂಬ) ಹುಡುಗಿಯ ಮದುವೆ ಮಾಡಿದ್ದರೆ, ಹಣವನ್ನು ಖರ್ಚು ಮಾಡಬೇಕಾಗಿತ್ತು … ಆ ಹಣವೂ ಉಳಿತಾಯವಾಗಿದೆ ಮತ್ತು ಅವರು ಸರ್ಕಾರದಿಂದ ಸಾಕಷ್ಟು ಹಣವನ್ನು ಸಹ ಪಡೆದರು. ನಾವು ಯಾವುದರ ಬಗ್ಗೆ ದುಃಖಪಡಬೇಕು? ನಾವು ಯೋಗಿಯವರ ಸರ್ಕಾರವನ್ನು ರಚಿಸುತ್ತೇವೆ… ಯೋಗಿ ಆದಿತ್ಯನಾಥ್ ನಮ್ಮ ಸಮುದಾಯಕ್ಕೆ ಸೇರಿದವರು” ಎಂದಿದ್ದಾರೆ.

ಅಪ್ರಾಪ್ತರ ಶವಸಂಸ್ಕಾರದ ಬಗ್ಗೆ ಕೇಳಿದಾಗ ಸಿಂಗ್, “ಪೊಲೀಸರು ಹಾಗೆ ಮಾಡದಿದ್ದರೆ, ಇಲ್ಲಿ ರಜಪೂತ ಸಮುದಾಯದ ಯಾರೂ ಉಳಿಯುತ್ತಿರಲಿಲ್ಲ. ಅಕ್ಕಪಕ್ಕದ ವಾಲ್ಮೀಕಿಗಳು ಈ ಗ್ರಾಮಕ್ಕೆ ಬಂದಿದ್ದರು. ಯೋಗಿ ಆಡಳಿತವು ಸಂಪೂರ್ಣವಾಗಿ ಸರಿಯಾಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹತ್ರಾಸ್‌ ಕ್ಷೇತ್ರದಿಂದ ಎರಡು ಬಾರಿ ಬಿಎಸ್ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಗೆಂದಾಲಾಲ್ ಚೌಧರಿ ಅವರ ಪುತ್ರ,  ಜಿಲ್ಲಾ ಪಂಚಾಯತ್ ಸದಸ್ಯ ಪಂಕಜ್ ಚೌಧರಿ ಪ್ರತಿಕ್ರಿಯಿಸಿ, “ಮೇಲ್ವರ್ಗದ ಜನರು ಈಗಾಗಲೇ ಅದರ ಬಗ್ಗೆ (2020ರ ಪ್ರಕರಣ) ಮರೆತಿದ್ದಾರೆ. ಇದು ಅವರಿಗೆ ಮುಖ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

“ಹತ್ರಾಸ್ ಮತ್ತು ಭಾರತಕ್ಕೆ ವಿಶ್ವಾದ್ಯಂತ ಅವಮಾನಗಳಾಗಿದ್ದು ಸಾಮೂಹಿಕ ಅತ್ಯಾಚಾರದ ಕಾರಣದಿಂದಾಗಿ ಅಲ್ಲ. ಕೆಟ್ಟ ಆಡಳಿತಾತ್ಮಕ ಕ್ರಮದಿಂದ. ಯಾರು ತಪ್ಪಿತಸ್ಥರು ಎಂಬುದನ್ನು ನಿರ್ಧರಿಸುವುದು ನ್ಯಾಯಾಂಗಕ್ಕೆ ಬಿಟ್ಟದ್ದು… ಆದರೆ ಅಧಿಕಾರದಲ್ಲಿ ಬಿಎಸ್‌ಪಿ ಸರ್ಕಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನಿರ್ಭಯಾಳ ಜಾತಿ ಯಾವುದೆಂದು ನೋಡದೆ ಜನರು ಬೀದಿಗೆ ಬಂದಿದ್ದರು. ಆದರೆ ಇದು ದೆಹಲಿಯಲ್ಲ, ಇದು ಯೂಪಿ” ಎಂದು ಪಂಕಜ್ ಚೌಧರಿ ಹೇಳಿದ್ದಾರೆ.

ಹೆಸರು ಹೇಳಲಿಚ್ಛಿಸದ ರಜಪೂತ ಸಮುದಾಯದ 35 ವರ್ಷದ ರೈತ, “ನಾವು ಬಿಜೆಪಿಗೆ ಮತ ಹಾಕುತ್ತೇವೆ. ಆದರೆ ಸರ್ಕಾರದ ಮೇಲೆ ನನಗೆ ಅಸಮಾಧಾನವಿದೆ. ನನ್ನನ್ನು ಜೈಲಿನಲ್ಲಿ ಇರಿಸಲಾಗಿತ್ತು… ನನ್ನ ಜಮೀನನ್ನು ಬಿಜೆಪಿ ಮುಖಂಡರೊಬ್ಬರ ಆಪ್ತರು ವಶಪಡಿಸಿಕೊಂಡಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಶಾಸಕರ ಬಳಿ ಹೋದೆ, ಯಾರೂ ಕೇಳಲಿಲ್ಲ … ನನ್ನ ಹೆಂಡತಿ ಮತ್ತು ನನ್ನನ್ನು ಜೈಲಿಗೆ ಹಾಕಲಾಯಿತು … ನಾವು ಬಿಜೆಪಿಗೆ ಮತ ಹಾಕುತ್ತೇವೆ … ಇಲ್ಲಿನ ವಾಲ್ಮೀಕಿಗಳೂ ಬಿಜೆಪಿಗೆ ಮತ ಹಾಕುತ್ತಾರೆ” ಎಂದಿದ್ದಾರೆ.

ಆದರೆ, ಹತ್ರಾಸ್‌ನಲ್ಲಿರುವ ಸಂತ್ರಸ್ತೆಯ ಚಿಕ್ಕಪ್ಪ ಬೇಸರಗೊಂಡಿದ್ದಾರೆ. “ನಮಗೆ ಸರಿಯಾದ ಮನೆಯೂ ಇಲ್ಲ. ನಮಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಯಿತು. ಆದರೆ ಅದು ಈಗ ಮುಗಿದಿದೆ. ನಾವು ಒಲೆಯ ಮೇಲೆ ಅಡುಗೆ ಮಾಡುತ್ತೇವೆ. ಹೌದು, ಸರ್ಕಾರ ರೇಷನ್ ನೀಡುತ್ತದೆ, ಆದರೆ ಇದು ಸಾಕೇ? ಸರ್ಕಾರದಿಂದ ನಮಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.

ಹತ್ರಾಸ್‌ನ ಹಲವಾರು ವ್ಯಾಪಾರಿಗಳು 2020ರ ಪ್ರಕರಣವು ದಲಿತ ಸಮುದಾಯಗಳಿಗೆ ಮಾತ್ರ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ. “ನಿರ್ಭಯಾಳ ಜಾತಿ ತಿಳಿಯದೆ ಜನರು ಬೀದಿಗೆ ಬರುವುದಕ್ಕೆ ಇದು ದೆಹಲಿಯಲ್ಲ, ಯುಪಿ” ಎಂದು ಪಂಕಜ್ ಚೌಧರಿ ಅಭಿಪ್ರಾಯಪಡುತ್ತಾರೆ.

ವರದಿ ಕೃಪೆ: ನ್ಯೂಸ್‌ಲಾಂಡ್ರಿ


ಇದನ್ನೂ ಓದಿರಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: ’ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಪುತ್ರಿ ಕವಿತಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...