Homeಮುಖಪುಟಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ ಅಸುರನ್‌...

ಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ ಅಸುರನ್‌…

- Advertisement -

ಅಕಿರ ಕುರುಸೊವಾ ಒಬ್ಬ ಜಪಾನ್ ದೇಶದ ನಿರ್ದೇಶಕ, ತನ್ನ ಕೊನೆ ಕಾಲಘಟ್ಟದಲ್ಲಿ ಆತನ ಆತ್ಮತೃಪ್ತಿಗೆಂದು “ದ ಡ್ರೀಮ್ಸ್” ಅನ್ನೋ ಹಲವು ಚಾಪ್ಟರ್‌ಗಳುಳ್ಳ ಸಿನೆಮಾ ಮಾಡುತ್ತಾನೆ.

ಇದನ್ನ ಯಾವ ಪ್ರೇಕ್ಷಕ ನೋಡದಿದ್ದರೂ ಪರವಾಗಿಲ್ಲ ಅನ್ನುವುದು ಅವನ ಪೂರ್ವನಿಯೋಜಿತ ಗಟ್ಟಿತನವಾಗಿದ್ದರೂ ದ ಡ್ರೀಮ್ಸ್ ಗೆಲ್ಲುತ್ತದೆ.

ಧನಂಜಯ್‌ ಎನ್

ಕಾರಣ ಇಷ್ಟೇ ಡ್ರೀಮ್ಸ್‍ನಲ್ಲಿ ಬರುವ ಸರಿಸುಮಾರು ಎಂಟು ಚಾಪ್ಟರ್‍ಗಳೂ ಸಹ ಎಲ್ಲಾ ಕಾಲಕ್ಕೂ ಸಲ್ಲುವಂಥವು. ಉದಾಹರಣೆಗೆ ಒಂದು ಚಾಪ್ಟರಿನಲ್ಲಿ, ಯುದ್ಧದಲ್ಲಿ ಸತ್ತ ಸೈನಿಕರು ಕಮಾಂಡರ್ ಬಳಿ ದೆವ್ವಗಳಾಗಿ ಬಂದು ಆತನನ್ನ ಪ್ರಶ್ನೆ ಮಾಡುವಾಗ, ಕಮಾಂಡರ್ ಪಾತ್ರವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಲೇ ಕೊನೆಗೊಳ್ಳುತ್ತದೆ.

ಇದೇರೀತಿ ನಮ್ಮ ಭಾರತದ ಮಟ್ಟಿಗೆ ಎಲ್ಲಾ ಕಾಲಕ್ಕೂ ಸಲ್ಲುವ ಸಿನಿಮಾ ಮಾಡಬೇಕು ಅಂತ, ಒಂದು ಕಥಾವಸ್ತುವನ್ನ ಹುಡುಕಿದರೆ ಮೊದಲಿಗೆ ನಮ್ಮ ಕಣ್ಣ ಮುಂದೆ ಬರುವುದು ಈ “ಜಾತೀಯತೆ ಮತ್ತು ಅದರ ನೆರಳು.”

ನಮ್ಮಲ್ಲಿ ಯುದ್ಧಗಳ ಹುಟ್ಟೂ ಕೂಡ, ಈ ಜಾತಿಯ ಗರ್ಭದಲ್ಲೇ ಆಗುವುದೆಂದು ನಿಸ್ಸಂದೇಹವಾಗಿ ಹೇಳಬಹುದು.

ಬಹುಶಃ ಈ ವಸ್ತುವನ್ನ ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ ಕೆಲವೇ ಕೆಲವು ಸಿನೆಮಾಗಳಿಗೆ ಹೊಸ ಸೇರ್ಪಡೆ “ಅಸುರನ್”.

ಹೌದು, ಅಸುರನ್ ಜಾತೀಯತೆ ಮತ್ತದರ ನೆರಳಿನ ಭಯಾನಕ ಪ್ರತಿಫಲವನ್ನು ಹೊಂದಿದ ಚಿತ್ರ.

ಇಲ್ಲಿ ಯುದ್ಧ ಅಂದರೆ ಕೇವಲ ಗಡಿಗಾಗಿ ನಡೆಯುವುದಷ್ಟೇ ಅಲ್ಲ, ಒಬ್ಬ ಮನುಷ್ಯ ಮನುಷ್ಯನಾಗಿಯೇ ಉಳಿದು ತನಗೆ ಸಿಗಬೇಕಾದ ಕನಿಷ್ಟ ಗೌರವ ಮತ್ತು ಬದುಕನ್ನ ಪಡೆಯಲೂ ಸಹ ಯುದ್ಧ ಮಾಡಬೇಕಿದೆ.

ಅಸಮಾನತೆಯಿಂದ ಹುಟ್ಟುವ ಹತಾಶೆ ಯಾವತ್ತಿಗೂ ಮೇಲ್ನೋಟಕ್ಕೆ ಕಾಣುವುದಿಲ್ಲ, ಅದು ನಮ್ಮೆಲ್ಲರ ರಕ್ತದಲ್ಲೇ ಒದ್ದುಗೊಂಡು ಬಂದುಬಿಟ್ಟಿದೆ.

“ನಿನ್ನಲ್ಲಿ ಅಸಮಾನತೆ ಇದೆ” ಅಂತ ನೇರವಾಗಿ ಅಥವಾ ತಮಾಷೆಯಾಗಿ ಕೇಳಿದರೂ ಸಹ, “ಇಲ್ಲವೇ ಇಲ್ಲ” ಎಂಬ ಸಿದ್ಧ ಉತ್ತರವೊಂದನ್ನ ಜತೆಯಲ್ಲಿಟ್ಟುಕೊಂಡೇ ಸಾಗುವ ನಮಗೆ ಈ ಸೂಕ್ಷ್ಮಗಳೆಲ್ಲಾ ಮೇಲ್ನೋಟಕ್ಕೆ ಕಾಣಬೇಕೆಂದು ಬಯಸುವುದು ದೊಡ್ಡ ತಪ್ಪು.

ವೆಟ್ರಿಮಾರನ್‍ರ ಈ ಹಿಂದಿನ ಎಲ್ಲಾ ಸಿನೆಮಾಗಳನ್ನು ಗಮನಿಸಿದರೆ ಆತ ಈ ರೀತಿಯಾದ ಅತೀಸೂಕ್ಷ್ಮ ವಿಚಾರಗಳನ್ನೂ ಸಹ ಪ್ರೇಕ್ಷಕನಿಗೆ ಅಚ್ಚುಕಟ್ಟಾಗಿ ತಲುಪಿಸುವುದರಲ್ಲಿ, ತನ್ನದೇ ಆದ ವಿಶೇಷ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾನೆ.

ಅಸುರನ್ ಸಿನೆಮಾದಲ್ಲಿ ಆ ಎಲ್ಲಾ ಪ್ರಯತ್ನಗಳನ್ನೂ ಮೀರಿ ಮತ್ತೂ ಒಂದು ಮೆಟ್ಟಿಲನ್ನು ಮೆಟ್ಟಿ ನಿಂತಿರುವುದು, ವೆಟ್ರಿಮಾರನ್ ಅಭಿಮಾನಿಗಳಿಗೆ ಒಂದು ಹಬ್ಬ.

ಶೋಷಿತನಿಗೆ ಕಾಣುವ ಸಮಾಜಕ್ಕೂ, ಶೋಷಕನಿಗೆ ಕಾಣುವ ಸಮಾಜಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನ ನೀವು ಒಪ್ಪೋದಾದ್ರೆ, ಧನುಷ್ ಮಾಡಿರೋ ಶಿವಸ್ವಾಮಿ ಪಾತ್ರ ಒಂದು ಕ್ಲಿಯರ್ ಪಿಚ್ಚರ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ.
ಧನುಷ್ ಮತ್ತು ವೆಟ್ರಿಮಾರನ್

ಇಲ್ಲಿ ಎಲ್ಲರೂ ತಮ್ಮ ತಮ್ಮ ಅನುಭವಗಳಿಂದಲೇ ಪಾಠ ಕಲಿಯುವ ಹಾಗೆ ಶಿವಸ್ವಾಮಿಯೂ ಕೂಡ ಶೋಷಿತನಾಗಿ ಬಹಳ ದೊಡ್ಡ ಪಾಠ ಕಲಿತಿದ್ದಾನೆ.

ಜೊತೆಗೆ ತನ್ನ ಮುಂದಿನ ಪೀಳಿಗೆ ಕೂಡಾ ಅದೇ ತಪ್ಪನ್ನ ಮಾಡದಿರಲಿ ಅನ್ನೋ ಅಂಶದ ಜೊತೆಗೆ, ಭಾರತದಲ್ಲಿ ತುಳಸಿಕೊಂಡು ಬೇಯುತ್ತಿರುವ ಅಸಂಖ್ಯ ಶೋಷಿತರಿಗೆ ಒಂದು ಸ್ಪಷ್ಟ ದಾರಿಯನ್ನು, ತನ್ನದೇ ಕಥೆಯ ಮೂಲಕ ನಟನೆಯ ಮೂಲಕ ಕಟ್ಟಿಕೊಡುತ್ತಾನೆ.

“ಮನುಷ್ಯ ಹುಟ್ಟುತ್ತಲೇ ಕ್ರೂರಿ” ಎಂದು ಕನ್ನಡದ ಲೇಖಕ ಪಿ.ಲಂಕೇಶ್ ಅವರಿಂದ ಹಿಡಿದು, ವಿಶ್ವದ ಹಲವು ಚಿಂತಕರುಗಳೆಲ್ಲಾ ಒಂದಲ್ಲಾ ಒಂದು ರೀತಿಯಾಗಿ ನಮಗೆ ಮನವರಿಕೆ ಮಾಡಿಸಿದ್ದಾರೆ.

ಮತ್ತದು, ನಾವು ದಿನನಿತ್ಯ ಎದುರುಗೊಳ್ಳುವ ಹಲವು ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅನುಭವಕ್ಕೆ ಬರುತ್ತಲೇ ಇದೆ. ಕಾರಣ ಎಂಥದ್ದೇ ಇರಲಿ ತನ್ನದೇ ಆಕಾರಗಳನ್ನು ಹೊತ್ತ ಮನುಷ್ಯನನ್ನ ಸ್ವತಃ ಮನುಷ್ಯನಾಗಿದ್ದರೂ ಸಹ ಚಿತ್ರ ವಿಚಿತ್ರವಾಗಿ ಕೊಲ್ಲಬೇಕಾದರೆ ಅಥವಾ ಹಿಂಸಿಸಬೇಕಾದರೆ ನಮ್ಮಗಳ ಕ್ರೂರತ್ವ ನಿಜಕ್ಕೂ ನಮ್ಮ ಪ್ರಜ್ಞೆಗೆ ಬರುತ್ತಿದೆಯೇ ???

ಇದು ಸ್ವಗತವಾಗಿ ನಾವೇ ಹಾಕಿಕೊಳ್ಳಬೇಕಾದ ಪ್ರಶ್ನೆ !!!!

ಚಿತ್ರದಲ್ಲಿ ಬರುವ ಖಳನಾಯಕರೆಲ್ಲಾ ಶೋಷಿತ ಜಾತಿಯ ಹಿನ್ನೆಲೆಯಿಂದ ಬಂದವರಾದ್ದರಿಂದ, ಸಿನೆಮಾದಲ್ಲಿ ಈ ಕ್ರೂರತ್ವದ ಪರಿಚಯ ಚೆನ್ನಾಗಿಯೇ ಆಗುತ್ತದೆ. ಇಲ್ಲಿ ವೈರತ್ವ ಬೆಳೆಸುವ ಆ ದೊಡ್ಡಸ್ಥಿಕೆ ಯಾವುದು ಎನ್ನುವುದಕ್ಕೆ ನಮ್ಮ ನಿಮ್ಮ ಬಳಿ ಉತ್ತರವಿಲ್ಲ, ಅಷ್ಟಕ್ಕೂ… ಅದು, ಕಣ್ಣಿಗೆ ಕಂಡರೆ ತಾನೇ ವಿವರಿಸುವುದಕ್ಕೆ!!!

ಇಲ್ಲಿ ಅಸುರನ್ ಚಿತ್ರಕಥೆ ಖಂಡಿತವಾಗಿ ಆ ವಿವರಣೆಯ ರೂಪ ಪಡೆದಿರುವುದು ಪ್ರತಿಯೊಂದು ದೃಶ್ಯದಲ್ಲೂ ಅನುಭವಕ್ಕೆ ಸಿಗುತ್ತದೆ.

ಅದಕ್ಕೊಂದು ಬಲವಾದ ಉದಾಹರಣೆ, ಹೆಣ್ಣುಮಗಳೊಬ್ಬಳು ಕಾಲಿಗೆ ಚಪ್ಪಲಿ ಹಾಕಿ ಊರೊಳಗಿನ ಶಾಲೆಗೆ ಬಂದದ್ದನ್ನೂ ಸಹಿಸಲಾಗದ ಒಬ್ಬ ಅಬ್ಬೇಪಾರಿ ಜಾತಿಭೂತದವನು ಅವನಿಗೆ ಸಿಕ್ಕಿರುವ ತನ್ನದೇ ಹಿನ್ನೆಲೆಯ ಸಾಮಥ್ರ್ಯದ ಹುಚ್ಚಿನಿಂದ ಆಕೆಯ ಮೇಲೆ ಅವಮಾನಿತ ಹಲ್ಲೆಗೆ ಮುಂದಾಗುತ್ತಾನೆ !

ದೊಡ್ಡಸ್ತಿಕೆಯ ವಿವರಣೆಗೆ ಇದೊಂದು ಅತ್ಯಂತ ಪ್ರಭಾವಿ ದೃಶ್ಯ.

ಜೊತೆಗೆ ಶಿವಸ್ವಾಮಿ ಮಕ್ಕಳಾದ ಸೋಮಸುಂದರನ್ ಮತ್ತು ಚಿದಂಬರನ್, ಈ ಇಬ್ಬರ ಮೇಲೆ ಅದೇ ದೊಡ್ಡಸ್ಥಿಕೆಯ ಪ್ರಯೋಗವಾಗುವುದನ್ನು ಮತ್ತು ಆ ಪ್ರಯೋಗಗಳಿಂದ ಆತನ ಕುಟುಂಬಕ್ಕೆ ತೊಂದರೆಯಾಗುವುದು, ಶಿವಸ್ವಾಮಿಯು ತನ್ನ ಮುಂದಾಲೋಚನೆ ಮತ್ತು ತಾಳ್ಮೆಯಿಂದ ಪ್ರೇಕ್ಷಕನಿಗೆ ಉತ್ತರ ನೀಡುತ್ತಾ ಹೋಗುವುದು ಸಿನೆಮಾದ ಮುಖ್ಯ ಗ್ರಹಿಕೆಗಳಲ್ಲೊಂದು.

ಶೋಷಿತ ಜಾತಿಯಿಂದ ಬಂದವನಿಗೆ ತಾನು ಎಂತಹ ಹೀನ ಮನಸ್ಥಿತಿ ಹೊಂದಿದ್ದರೂ ತನ್ನ ಹಿನ್ನೆಲೆಯವರು ಬಿಟ್ಟುಕೊಡುವುದಿಲ್ಲ!! ಎನ್ನುವ ಸಮಾಜದ ಕೆಟ್ಟ ಮುಖವಾಡವನ್ನೂ ಸಹ ಅವನದೇ ಹಿನ್ನೆಲೆ ಕಥೆಯಲ್ಲಿ ಸೂಕ್ತವಾಗಿ ಬೆರೆಸಿದ್ದಾರೆ.

ಪ್ರಮುಖವಾಗಿ ಶೋಷಕರಿಗೆ ಕಾಣದ ಪ್ರಪಂಚವು ಕೊಂಚವಾದರೂ ಅನುಭವಕ್ಕೆ ಬರಬೇಕು ಎನ್ನುವ ಕಾರಣದಿಂದಲೇ…, ಕರುಳು ಹಿಂಡುವಂಥಾ ಉದಾಹರಣೆಗಳನ್ನ ಮುಂದಿಡುವಂತೆ ಒಂದೆರಡು ದೃಶ್ಯಗಳನ್ನ ಸೃಷ್ಟಿಸಿದ್ದಾರೆ. ನೀವು ಎಂತಹ ತಣ್ಣನೆ ಹೃದಯವನ್ನ ಹೊಂದಿದ್ದರೂ ಸಹ , ತಡೆಯಲಾಗದೆ ಕಣ್ಣು ಮುಚ್ಚಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಮಗನ ಸಾವನ್ನು ಒಪ್ಪಿಕೊಳ್ಳಲೂ ಸಹ ತಿಂಗಳುಗಟ್ಟಲೆ ನೋವು ತಿನ್ನುವ ತಾಯಿ, ಆ ತಾಯಿಯ ಅವಸ್ಥೆ ನೋಡಲಾಗದೇ ವ್ಯವಸ್ಥೆಯ ವಿರುದ್ಧ ತಿರುಗಿಬೀಳುವ ಮಗ, ಸಾಮಾಜಿಕ ಬಂಡವಾಳವನ್ನೆಲ್ಲಾ ತನ್ನದಾಗಿಸಿಕೊಂಡು ಅಧಿಕಾರಕ್ಕಾಗಿ ಮತ್ತಷ್ಟು ಕ್ರೂರಿಗಳಾಗುವ ವರ್ಗಗಳು, ಪಕ್ಕದ ಮನೆಯವನ ನೋವು ನನ್ನದಲ್ಲ ಎಂದು ನೋಡುತ್ತಾ ನಿಲ್ಲುವ ಸಾಮಾನ್ಯರು… !!!

ಆ ಸಾಮಾನ್ಯರಲ್ಲೂ ಅಸಮಾನ್ಯನಂತೆ ತನ್ನ ಹಿಂದುಳಿದವರಿಗೆಲ್ಲಾ ಭವಿಷ್ಯದ ನಾಳೆಯಾಗಿ ನಿಲ್ಲುವ ನಾಯಕ.

ವೆಟ್ರಿಮಾರನ್‍ರ ಸಿನೆಮಾದಲ್ಲಿ ಇಷ್ಟೆಲ್ಲವೂ ಒಂದು ತೂಕವಾದರೆ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತದ್ದೇ ಮತ್ತೊಂದು ತೂಕ. ಮುಖ್ಯವಾಗಿ ರಾತ್ರಿಕತ್ತಲೆಯಲ್ಲಿ ಕಾಡಿನ ಮಧ್ಯದಲ್ಲಿ ತೆಗೆದಿರುವ ದೃಶ್ಯಗಳು, ಹಂದಿ ಬೇಟೆಯಾಡುವಾಗಿನ ಆ ರೋಚಕತೆ, ಮುಖ್ಯಪಾತ್ರಧಾರಿಗಳನ್ನು ಪರಿಚಯಿಸುವಾಗಿನ, ಊರಹೊರಗಿನ ಕೇರಿ, ಸೆಟ್‍ಗಳ ಉಪಯೋಗ, ಎಲ್ಲವನ್ನೂ ಎದುರುನಿಂತು ನೋಡುವ ಹಾಗೆ ತೋರಿಸಿದ್ದಾರೆ.

ಮೂರು ದೃಶ್ಯಗಳಲ್ಲಿ ಬಳಸಿರುವ ಅಸುರನ್ ಸಿನೆಮಾದ ವಿಷಯಾಧಾರಿತ ಸಂಗೀತವು ಪ್ರೇಕ್ಷಕನನ್ನು ಸೀಟಿನ ಮುಂಬದಿಗೆ ಕೂರಿಸಿ ಚಿಂತನೆಯ ದಿಕ್ಕು ಬದಲಾವಣೆಯಾಗದಂತೆ ನೋಡಿಕೊಳ್ಳುತ್ತದೆ.

ಪ್ರತೀ ಬಾರಿಯೂ ಹೇಳುವ ಹಾಗೆಯೇ ದೃಶ್ಯರೂಪಕ್ಕಿರುವ ಅಪಾರ ಶಕ್ತಿಯನ್ನು ಬಳಸಿಕೊಂಡು ಸಮಾಜಕ್ಕೆ ಚಿಂತನೆ ಹುಟ್ಟಿಸುವ ಸಿನೆಮಾಗಳನ್ನು ಕೊಡುತ್ತಿರುವ ಇಂಥಾ ನಿರ್ದೇಶಕರು ನಟರು ಮತ್ತು ತಂಡಕ್ಕೆ, ನಾವೆಲ್ಲರೂ ವಿಶೇಷವಾದ ಗೌರವವನ್ನು ಕೊಡಬೇಕು.

ಆ ಗೌರವ ಇಂಥಾ ಸಿನೆಮಾಗಳನ್ನ ನೋಡಿ ಚರ್ಚಿಸುವುದೇ ಆಗಿದೆಯೆಂದು ಬಿಡಿಸಿ ಹೇಳಬೇಕಿಲ್ಲ.

ಈ ದುರಿತ ಕಾಲದಲ್ಲಿ, ಕೇವಲ ಮನರಂಜನೆಗಾಗಿ ಬರುವ ಸಿನಿಮಾಗಳನ್ನ ಖಡಾಖಂಡಿತವಾಗಿ ತಿರಸ್ಕರಿಸುವಷ್ಟು ವಿರೋಧವನ್ನ ಪ್ರೇಕ್ಷಕ ಬೆಳೆಸಿಕೊಳ್ಳಲಿಲ್ಲ ಎಂದರೆ, ಅದು ನಮಗೆ ನಾವೇ ಮಾಡಿಕೊಳ್ಳುವ ಮೋಸ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial