ಅಟಲ್ ಬಿಹಾರಿ ವಾಜಪೇಯಿಯವರು ನಿರ್ಗಮಿಸಿದ್ದಾರೆ. ಅವರು ಮಾತು ನಿಲ್ಲಿಸಿ ಒಂದು ದಶಕವಾಗುತ್ತಾ ಬಂದಿತ್ತು. ಯಾರನ್ನೂ ಗುರುತಿಸಲಾಗದೆ ಮಗುವಿನಂತೆ ನೋಡುತ್ತಿದ್ದರು. ಎಲ್ಲರೂ ಅವರ ಸ್ಥಿತಿ ಕಂಡು ಮರುಗುತ್ತಿದ್ದರು. ಹಾಲಿ ಬಿಜೆಪಿಯ ಹಲವು ಹಿರಿಯರು ವಾಜಪೇಯಿಯಂತಲ್ಲದಿದ್ದರೂ ಒಂಥರದಲ್ಲಿ ಮೌನಿಗಳಾಗಿದ್ದಾರಂತಲ್ಲಾ.
ವಾಜಪೇಯಿಯವರ ನಿಧನಕ್ಕೆ ತಮ್ಮ ಬತ್ತಳಿಕೆಯಲ್ಲಿನ ಎಲ್ಲಾ ಪದಪುಂಜಗಳಿಗೂ ಸಾಣೆಹಿಡಿದು ಝಳಪಿದ ಮಾಧ್ಯಮದ ಬೃಹಸ್ಪತಿಗಳು ಕಡೆಗೆ `ಅಜಾತಶತೃ’ `ಕವಿಹೃದಯಿ’ ಎಂದೆಲ್ಲಾ ಕರೆದು ಸುಸ್ತಾದವಂತಲ್ಲಾ.
ವಾಜಪೇಯಿ ಅಜಾತಶತ್ರು ನಿಜ. ಆದರೂ, ಅವರು ಶತ್ರುಸೈನ್ಯವನ್ನು ಹೊಂದಿದ್ದರು. ಆ ಸೈನ್ಯದ ಸೇನಾಪತಿ ಮಾತ್ರ ಅಡ್ವಾನಿ. ಸದರಿ ಅಡ್ವಾನಿಯವರು ತಮ್ಮ ಗುರುವರ್ಯನನ್ನು ಪ್ರಧಾನಿಯಾಗಿ ಮಾಡಲು ಶ್ರೀ ರಾಮಚಂದ್ರನನ್ನೇ ಬೀದಿಗೆ ತಂದರು. ಅದರಿಂದಾದ ಸಾವುನೋವುಗಳಿಗೆ ಅದ್ವಾನಿಯೇ ಕಾರಣ, ವಾಜಪೇಯಿ ಅಲ್ಲ ಎಂದು ಹೇಗೆ ಹೇಳುವುದು. ಥೂತ್ತೇರಿ..!
*********
ಅಡ್ವಾನಿ ಈ ಅಜಾತಶತ್ರುವನ್ನು ಪ್ರಧಾನಿಯಾಗಿ ಮಾಡಲು ಸೈನ್ಯ ಸಮೇತರಾಗಿ ಹೊರಟಿದ್ದು ಬಾಬರಿ ಮಸೀದಿ ದಿಕ್ಕಿಗೆ. ನೋಡುನೋಡುತ್ತಿದ್ದಂತೆಯೇ ಮಸೀದಿ ನೆಲಸಮವಾಯ್ತು. ಅದಕ್ಕೆ ಸ್ಫೂರ್ತಿ ಅಜಾತಶತೃ ಕವನ. ಏಕೆಂದರೆ ನಮ್ಮ ಅಜಾತಶತ್ರು ಕವಿ ಬೇರೆ ಆಗಿದ್ದರಿಂದ ಭಾಷಣದಲ್ಲಿನ ಅರ್ಧಭಾಗದಲ್ಲಿ ಕವಿಸಾಲುಗಳಿರುತ್ತಿದ್ದವು. ಬಾಬರಿ ಮಸೀದಿ ಉರುಳಿಸುವುದರಲ್ಲಿ ವಾಜಪೇಯಿ ಕಾವ್ಯ ಎಂತಹ ಸ್ಫೂರ್ತಿ ಕೊಟ್ಟಿತ್ತೆಂದರೆ, ಅವರ ಸಾಲುಗಳನ್ನೇ ತರ್ಜುಮೆ ಮಾಡಿಕೊಂಡ ಚೆಡ್ಡಿಗಳು,
ನೀವು ಬಂದರೆ ಜೊತೆಯಾಗಿ,
ನೀವು ಬಾರದಿರೆ ಬಿಟ್ಟು,
ತಡೆಯ ಬಂದರೆ ಹತ್ತಿಕ್ಕಿ,
ಮಂದಿರವಲ್ಲೇ ಕಟ್ಟುವೆವು
ಭಜನೆಗೆ ಅಲ್ಲೇ ಕೂರುವೆವು
ಕೀರ್ಥನೆ ಅಲ್ಲೇ ಹಾಡುವೆವು
ಪಾಕಶಾಲೆ ಕಡೆ ಓಡುವೆವು
ಎಂದು ಕರೆದುಕೊಂಡು ಅದನ್ನೆ ದೇಶಕ್ಕೆಲ್ಲಾ ಮೆಸೇಜು ಮಾಡಿದವಲ್ಲಾ ಥೂತ್ತೇರಿ…!
********
ನಮ್ಮ ಕವಿಹೃದಯದ ಅಜಾತಶತ್ರು ನೆಹರು ಕಾಲದವರು. ರಾಜೀವ್‍ಗಾಂಧಿ ಪ್ರಧಾನಿಯಾದಾಗಲೂ ವಿರೋಧ ಪಕ್ಷದ ನಾಯಕ. ಆಗ ಭಾರತವನ್ನು ತಿರುಗುತ್ತಾ, ನಮ್ಮ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳು ತುಂಬಾ ಹೀನ ಸ್ಥಿತಿಯಲ್ಲಿವೆ, ಮಕ್ಕಳಿಗೆ ಅಕ್ಷರ ಬರೆದು ತೋರಲು ಬ್ಲಾಕ್ ಬೋರ್ಡುಗಳಿಲ್ಲ. ಇದು ರಾಜೀವ್‍ಗಾಂಧಿಯಂತಹ ನಾಯಕರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ನಂತರ ಸದರಿ ಕವಿಯೇ ಪ್ರಧಾನಿಯಾದರು. ಭಾರತದ ಎಲ್ಲಾ ಹಳ್ಳಿಗಳಲ್ಲಿ ಸುಸಜ್ಜಿತ ಪ್ರೈಮರಿ ಶಾಲೆ ರೂಪುಗೊಳ್ಳುತ್ತವೆಂದು ಕಾಯುತ್ತಿರಬೇಕಾದರೆ, ವಾಜಪೇಯಿ ಪ್ರೊಕ್ರಾನ್ ಸಿಡಿಸಿದರು. ಇದರಿಂದ ಶಾಕಾದ ಲಂಕೇಶ್ `ಮಗ ಎಲ್ಲಾ ಬಿಟ್ಟು ಭಂಗಿ ನೆಟ್ಟ’ ಎಂದು ಬರೆದರಂತಲ್ಲಾ, ಥೂತ್ತೇರಿ…!
********
ನಮ್ಮ ಅಜಾತಶತೃ ವಾಜಪೇಯಿಯವರನ್ನ ಕೆಲವು ಟೀಕಾಕಾರರು ಗೋಮುಖವ್ಯಾಘ್ರ ಎಂದು ಬಣ್ಣಿಸಿದ್ದರು. ಆದರೆ ಆ ವ್ಯಾಘ್ರನಿಗೆ ಹಲ್ಲು
ಉಗುರುಗಳಿರಲಿಲ್ಲ. ಆದರೂ ಅವುಗಳನ್ನು ಬೇರೆಯವರಿಗೆ ಕರ್ಣನಂತೆ ಧಾರೆಯೆರೆದಿದ್ದರು. ಧಾರೆ ಎರೆಸಿಕೊಂಡ ಅಢ್ವಾನಿ ಅವತಾರ ಅಂತ್ಯಗೊಂಡ ನಂತರ ಪ್ರಖರ ಹಲ್ಲು ಉಗುರುಗಳೊಂದಿಗೆ ಕಂಗೊಳಿಸಿದ ಮೋದಿ ಎಂಬ ವ್ಯಾಘ್ರ ವಾಜಪೇಯಿ, ಅಡ್ವಾನಿಗಳ ಸೃಷ್ಟಿಯೇ ಹೊರತು, ಸ್ವಯಂ ಸೃಷ್ಟಿಯಾದುದಲ್ಲವಂತಲ್ಲಾ. ಈಚೆಗೆ ಪ್ರಾಣಿತಳಿ ಶಾಸ್ತ್ರಜ್ಞರು ಒಂದು ಪ್ರಯೋಗ ಮಾಡಿ, ಸಿಂಹ ಮತ್ತು ಹುಲಿಯನ್ನು ಕೂಡಿಸಿ ವಿಶೇಷ ತಳಿ ತೆಗೆದು ಅದಕ್ಕೆ ಲೈಗರ್ ಎಂದು ನಾಮಕರಣ ಮಾಡಿದ್ದಾರೆ. ಆ ಲೈಗರ್ ನೋಡಿದರೆ ಅದರೊಳಗೆ ಸಿಂಹ ಮತ್ತು ಹುಲಿ ಎರಡೂ ಅಡಗಿರುವುದು ಗೋಚರವಾಗುತ್ತದಂತೆ. ಭಾರತ ಕಂಡ ಅಪರೂಪದ ಪ್ರಧಾನಿ ಮೋದಿಯನ್ನು ನೋಡಿದರೆ ಗೋಮುಖವ್ಯಾಘ್ರನಾದ ವಾಜಪೇಯಿ, ವ್ಯಾಘ್ರಮುಖದ ಗೋವಾದ ಅಡ್ವಾನಿ, ಈ ಇಬ್ಬರ ಚಹರೆಗಳೂ ಗೋಚರಿಸುತ್ತಾ ದೇಶಕ್ಕೆ ಆತಂಕ ಉಂಟಾಗಿದೆಯಂತಲ್ಲಾ ಥೂತ್ತೇರಿ..!
********
ಭಾರತದ ಇಡೀ ಸಂಘಪರಿವಾರ ಮತ್ತದರ ನಿರ್ಮಾತೃಗಳೆಲ್ಲಾ ರಾಮಮಂದಿರದ ಬಗ್ಗೆ ಹೋರಾಡುತ್ತಿರುವುದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತಲ್ಲಾ.
ಆ ಇತಿಹಾಸ ಯಾವುದಪ್ಪಾ ಎಂದರೆ, ಭಾರತವನ್ನೇ ಬಾಳೆಯೆಲೆ ಮಾಡಿಕೊಂಡು ಉಂಡ ಜನ ನೆಲೆಸಿದ್ದುದು ದೇವಸ್ಥಾನದ ಒಳಗೆ. ಆ ದೇವಸ್ಥಾನದಲ್ಲಿ ಹಜಾರ, ಗರ್ಭಗುಡಿ, ಪೌಳಿ ಮತ್ತು ಪಾಕಶಾಲೆಗಳಿದ್ದವು. ಮನೋರಂಜನೆಗೆ ಭಜನೆ ಕೀರ್ತನೆ ಜೊತೆಗೆ ಭರತನಾಟ್ಯಗಳು ಜರುಗುತ್ತಿದ್ದವು. ಕೈ ಸಡಿಲಬಿಟ್ಟು ಭೋಜನ ಭಾರಿಸಿದವರು ಸುಧಾರಿಸಿಕೊಳ್ಳಲು ಒಳ ಜಗಲಿ ಇದ್ದವು. ಹೀಗೆ ಮಂದಿರದೊಳಗೇ ಬದುಕಿದ್ದ ಜನ ಬಿಜೆಪಿ ಪಾರ್ಟಿ ಮಾಡಿಕೊಂಡು ಬೀದಿಗೆ ಬಂದಾಗಲೂ ಅವುಗಳ ಬಾಯಿಂದ ಬರುತ್ತಿರುವ ಮಾತೂ ಕೂಡಾ ಮಂದಿರ ನಿರ್ಮಾಣವೇ ಹೊರತು ಭಾರತ ಇಂದು ಹೆದರಿಸುತ್ತಿರುವ ಸಮಸ್ಯೆಗಳಲ್ಲವಂತಲ್ಲಾ ಥೂತ್ತೇರಿ..!
********
ದಿಢೀರನೆ ಕೇರಳದ ಕಡೆ ಅಪ್ಪಳಿಸಿದ ಜಲಪ್ರಳಯವಾದಂತೆ ಹಾಡುಹಗಲು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉದ್ಭವಿಸಿದ ಕುಮಾರಣ್ಣ, ಎಮ್ಮೆ ಕರುವಿನ ಮೇಲೆ ಶಾಲು ಹಾಕಿದಂತೆ ವಸ್ತ್ರ ಧರಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ನುಗ್ಗಿ ಹೋಗುತ್ತಿದ್ದಾರಂತಲ್ಲಾ. ಹೊಸದಾಗಿ ಮುಖ್ಯಮಂತ್ರಿಯಾದವರು ಮೊದಲು ಮಾಡುವ ಕೆಲಸವೇನೆಂದರೆ, ಆಯಾ ಜಿಲ್ಲೆಯ ಆಡಳಿತವನ್ನು ಮೀಟಿಂಗ್ ಕರೆದು ಸಲಹೆಕೊಡುವುದು ಹಾಗೂ ತಾರತಮ್ಯದ ಕಾರಣಕ್ಕೆ ರೊಚ್ಚಿಗೆದ್ದ ಜನಗಳ ಬಳಿಗೋಗಿ ಸಾಂತ್ವನ ಹೇಳುವುದು, ಹಾಗೇ ಬಿತ್ತನೆಗೆ ಭೂಮಿ ರೆಡಿಮಾಡಿಕೊಂಡು ಮಳೆ ಬರದೆ ಕಂಗಾಲಾಗಿರುವ ರೈತನ ಬಳಿಗೋಗುವುದು.. ಇದೆಲ್ಲವನ್ನ ಬಿಟ್ಟು ಕುಮಾರಣ್ಣ ಮಂಡ್ಯದಲ್ಲಿ ನಾಲ್ಕು ಪೈರು ನಾಟಿ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಓಡಿಹೋದದ್ದು ನೋಡಿದ ಯಡ್ಡಿ ಪಟಾಲಂ ಕುಂಡಿ ಬಡಿದುಕೊಂಡು ನಕ್ಕವಂತಲ್ಲಾ, ಥೂತ್ತೇರಿ…!!


