ಅನುದಿನದ ದಂದುಗ: ಜಡ ಬೌದ್ಧಿಕತೆಯನ್ನು ಮೀರುವ ಪ್ರಯತ್ನ

0

‘ಅನುದಿನದ ದಂದುಗ’ ಡಾ. ವಿನಯಾ ಒಕ್ಕುಂದ ಅವರ ಇತ್ತೀಚೆಗೆ ಪ್ರಕಟವಾದ ಕೃತಿ. ಐವತ್ತೊಂದು ಲೇಖನಗಳಿರುವ ಈ ಕೃತಿಯಲ್ಲಿ ಜಾಗತಿಕ ಬಂಡವಾಳವು ಮನುಷ್ಯನ ಅಭಿರುಚಿ ಮತ್ತು ಆಸಕ್ತಿಗಳನ್ನು ತನಗೆ ಬೇಕಾದಂತೆ ಹೇಗೆ ತಿದ್ದಿಕೊಳ್ಳುತ್ತದೆ, ತನಗೆ ಎದುರಾಳಿಯಾಗಬಲ್ಲ ಬೌದ್ಧಿಕ ಜಗತ್ತನ್ನು ಹೇಗೆ ನಿತ್ರಾಣಗೊಳಿಸುತ್ತದೆ, ದನಿಯಿಲ್ಲದ ಸಂಕಟಗಳಿಲ್ಲದ, ಸಾಮಾಜಿಕ ಜವಾಬ್ದಾರಿಯಿಲ್ಲದ ನಿರ್ಜೀವತನದ ಬಗ್ಗೆ, ಒಮ್ಮೊಮ್ಮೆ ಆ ನಿರ್ಜೀವತನದಿಂದಲೇ ಜೀವಂತಿಕೆಯನ್ನು ಕಟ್ಟಿಕೊಳ್ಳಬಲ್ಲ ಶ್ರಮಿಕ ಸಮುದಾಯಗಳ ಜಿಗುಟುತನದ ಬಗ್ಗೆ ಇಲ್ಲಿನ ಲೇಖನಗಳು ಬರೆಯಲ್ಪಟ್ಟಿವೆ. ವ್ಯಕ್ತಿ ಮತ್ತು ಸಮಾಜದ ಸಮಸ್ಯೆಗೆ ಬಾಹ್ಯ ಕಾರಣಗಳಿರುವಂತೆ ಆಂತರಿಕ ಕಾರಣಗಳೂ ಇರುತ್ತವೆ. ಇಂತಹ ಅನಪೇಕ್ಷಿತ ಪರಿಸ್ಥಿತಿ ನಿರ್ಮಾಣದಲ್ಲಿ ಒಬ್ಬ ವ್ಯಕ್ತಿ, ಒಂದು ವ್ಯವಸ್ಥೆ ಅಥವಾ ಒಂದು ದಿನ ಮಾತ್ರ ಕಾರಣವಾಗಿರುವುದಿಲ್ಲ ಎನ್ನುವ ಇಮ್ಮುಖ ಅರಿವಿನ ಮೂಲಕ ಪ್ರತಿ ಸಮಸ್ಯೆಯನ್ನು ಅದರ ಕಾರ್ಯ-ಕಾರಣ ಸಂಬಂಧದಲ್ಲಿ ವಿನಯ ಅವರು ವಿವೇಚಿಸುತ್ತಾರೆ. ತನ್ನೆದುರಿನ ಲೋಕವನ್ನು ತನ್ನೊಳಗಿನ ಲೋಕವನ್ನಾಗಿ ಪರಿವರ್ತಿಸಿಕೊಳ್ಳುವ ಹದಗಾರಿಕೆಯೇ ಇಲ್ಲಿನ ಬರಹಗಳ ಶಕ್ತಿ. ನಾಗರಿಕ ಕಣ್ಣಿಗೆ `ಅಲ್ಪ’ ಎಂದು ಕಾಣುವ, ಉಪೇಕ್ಷಿಸಬಹುದಾದ `ಸಣ್ಣ’ ಸಂಗತಿಗಳನ್ನೇ ಜಗತ್ತಿನ ಬಲುದೊಡ್ಡ ಸಮಸ್ಯೆಗಳೊಂದಿಗೆ ಮುಖಾಮುಖಿ ಮಾಡುವ ಡಾ. ವಿನಯಾ ಅವರ ವಿಧಾನವೇ ವಿಶಿಷ್ಟವಾಗಿದೆ. ದಮನಿತ ಸ್ಥಿತಿಯೊಳಗಿಂದಲೇ ತನ್ನ ಎಲ್ಲ ಅಂತಃಸತ್ವಗಳೊಂದಿಗೆ ಪುಟಿದೆದ್ದು ಬರುವ ಶ್ರಮಿಕರ ಜಿಗುಟುತನವನ್ನು ತೆರೆದುತೋರುವಲ್ಲಿ ಅವರ ಕೊರಳ ಭಾಷೆಗಿಂತ ಕರುಳ ಭಾಷೆ ಯಶಸ್ವಿಯಾಗಿದೆ.
ಮೇಲ್ನೋಟಕ್ಕೆ ಇಲ್ಲಿನ ಬರವಣಿಗೆಗೆ `ಹಣಿ’ಯುವ ಗುಣವಿದ್ದರೂ, ಅದರ ಒಳಧ್ವನಿಯಲ್ಲಿ `ಹೆಣೆ’ಯುವ ಗುಣವಿರುವುದು ವಿಶೇಷ. ವಸಾಹತು ಶಿಕ್ಷಣ, ನಗರೀಕರಣ, ಬಂಡವಾಳ, ಚುನಾವಣಾ ರಾಜಕಾರಣ, ಕೋಮುವಾದ ಮುಂತಾದವುಗಳ ಪ್ರಭಾವದಿಂದ ಬದುಕು ಕಳೆದುಕೊಳ್ಳುವವರಿರುವಂತೆ ಬದುಕು ಕಟ್ಟಿಕೊಳ್ಳುವವರೂ ಇದ್ದಾರೆ. ತೋರಿಕೆಗೆ ಆಧುನಿಕರಾಗಿ ಸ್ವಂತಿಕೆ ಕಳೆದುಕೊಂಡವರಿರುವಂತೆ, ತೋರಿಕೆಗೆ ಅಸಡ್ಡಾಳವಾಗಿ ಕಾಣುವ ಆದರೆ ಸೋಲೊಪ್ಪದ ಹಾಗೂ ಅದಮ್ಯ ಸ್ವಂತಿಕೆಯಿರುವ ಕ್ರಿಯಾಶೀಲರ ಜಗತ್ತನ್ನು ಏಕಕಾಲಕ್ಕೆ ಲೇಖಕರು ಸಮರ್ಥವಾಗಿ ಕಾಣಿಸಬಲ್ಲರು. ಅದಕ್ಕಾಗಿ ವಸಾಹತು ಜಡ ಬೌದ್ಧಿಕ ಪರಿಭಾಷೆಗಳಿಗಿಂತ ಭಿನ್ನವಾಗಿ ಸ್ಥಳೀಯತೆ ಮತ್ತು ಸ್ವಾನುಭವವನ್ನು ನೆಚ್ಚಿಕೊಳ್ಳುತ್ತಾರೆ.
`ತಮ್ಮ ಶಕ್ತಿ ಸಾಮಥ್ರ್ಯಗಳೆಲ್ಲವನ್ನು ದೇಹಾಲಂಕಾರ ಮತ್ತು ಗೃಹಾಲಂಕಾರಗಳಲ್ಲಿಯೇ ಕಳೆದುಕೊಳ್ಳುವ, ಅಕ್ಷರಸ್ಥರಾದರೂ, ಮೌಢ್ಯದಿಂದ ತುಂಬಿರುವ ಹೆಣ್ಣುಗಳಿರುವಂತೆ, ಬದುಕು ಎಷ್ಟೇ ಕ್ರೂರವಾದರೂ ಹರಿದು ಹೊಲಿದು ಕತ್ತರಿಸಿ ಜೋಡಿಸಿ ಪವಣಿಸಿ ಕುಲಾಯಿ ಕಟ್ಟಿ ಕೌದಿ ಮಾಡುವ ಕಲೆಯಿರುವಂತಹ ಕೌಶಲ್ಯಮತಿಗಳೂ ಇದ್ದಾರೆ. ಬದುಕನ್ನು ಚಿಂದಿ ಮಾಡಿದ ದೇವರಿಗೆ `ಇಷ್ಟೇಯಾ ನಿನ್ನ ಕಸು’ (ಪು.16) ಎಂದು ಕೇಳಬಲ್ಲ ಗಟ್ಟಿಗಿತ್ತಿಯರಿವರು.
ನಗರದ ಗಂಡಿನ ಕಣ್ಣಿಗೆ ಕೇಡಾಗಿ ಮತ್ತು ಕಸವಾಗಿ ಕಾಣುವ ಬಂಡವಾಳಶಾಹಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನಾ ವಲಯಗಳು ದುಡಿವ ಹೆಣ್ಣಿನ ಕೈಯಲ್ಲಿ ಹೊಸರೂಪ ತಾಳಿ ಅವರ ಬದುಕನ್ನು ಪೊರೆಯುವ ನಿಜವನ್ನು ಲೇಖಕರು ವಿಶೇಷವಾಗಿ ಕಟ್ಟಿಕೊಡುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳಿಂದ ಹೊಲಗಳಿಗೆ ಬೀಜ ಗೊಬ್ಬರ ತುಂಬಿಕೊಂಡು ಬಂದ ಚೀಲಗಳನ್ನೇ ತೊಳೆದು ಒಣಗಿಸಿ ಮಡಿಚಿಟ್ಟುಕೊಂಡು ಮನೆ ಸೋರಿದರೆ ಹೊಚ್ಚಲು, ಬೀಗರು ಬಂದರೆ ಹಾಸಲು, ಗುಳೆ ಹೋಗುವಾಗ ತಮ್ಮ ಸರಂಜಾಮುಗಳನ್ನು ತುಂಬಿಕೊಳ್ಳಲು, ಹಪ್ಪಳ ಶ್ಯಾವಿಗೆ ಒಣಗಿಸಲು, ಹೊಲದಿಂದ ಹುಲ್ಲು ತರಲು, ಕಾಳು ಕಡಿ ತುಂಬಿಡಲು ಬಳಸುವ ಗುಣವುಳ್ಳವರು. ಎಸೆದಲ್ಲೆ ಬೇರು ಬಿಡುವ, ಎಂಥ ದರ್ದಿನಲ್ಲಿಯೂ ಕನಸು ಕಾಣುವ ಕಸುವುಳ್ಳ, ನಗರದ ಕಲುಷಿತ ಗಾಳಿಯನ್ನೂ ತ್ಯಾಜ್ಯವನ್ನು ಶುದ್ಧೀಕರಿಸಿಕೊಂಡು ಬದುಕು ಕಟ್ಟಿಕೊಳ್ಳುವ ಇಚ್ಛಾಶಕ್ತಿಯುಳ್ಳವರು. ಬಂಡವಾಳವಾದದ ನಿರ್ವೀರ್ಯತೆಗೆ ಬಡ ಹೆಣ್ಣುಮಕ್ಕಳ ಕರ್ತೃತ್ವ ಶಕ್ತಿಯನ್ನೇ ಅಸ್ತ್ರವಾಗಿಸುವ ಸೂಕ್ಷ್ಮತೆ ಇಲ್ಲಿದೆ.
`ಅವ್ನು ಒಂದೀಟು ಚುರುಕಾಗಿದ್ದರೆ ಎರಡೂ ಖೋಲಿಯ ಮನೆಗೆ ಗಿಲಾವು ಮಾಡಿಸಬಹುದಿತ್ತು’(ಪು.28) ಎಂದು ಮರುಗುವ ಪೌರಕಾರ್ಮಿಕಳ ಕಥೆ ಚುನಾವಣಾ ರಾಜಕಾರಣವನ್ನು ಹೆಣ್ಣಿನ `ಸಾಕುತನ’ ಹಾಗೂ ‘ಧಾರಣಶಕ್ತಿ’ಯ ಪ್ರಜ್ಞೆಯ ಮೂಲಕ ಭಿನ್ನವಾಗಿ ನೋಡಲು ಕಲಿಸುತ್ತದೆ.
ಬದುಕಿನ ದಂದುಗಕ್ಕಾಗಿ ವಿವಿಧ ಬಗೆಯ ವೃತ್ತಿಗಿಳಿಯುವ ಹೆಣ್ಣುಗಳ ಕುರಿತು ಡಾ. ವಿನಯಾ ಅವರು ಮಾಡುವ ಚರ್ಚೆ ಸಾಮಾನ್ಯ ಲೋಕದೃಷ್ಟಿಗಿಂತ ಭಿನ್ನವಾದದ್ದು. ಈ ಸಮಸ್ಯೆಯ ಮೂಲವನ್ನು ವ್ಯಕ್ತಿ ಮತ್ತು ವ್ಯವಸ್ಥೆಯ ಆಳದಲ್ಲಿ ಅವರು ಗುರುತಿಸುತ್ತಾರೆ. `ಇಲ್ಲಿನ’ ಹೆಂಗಸರು ಬಡತನಕ್ಕೆ ಭಯಗೊಂಡವರಲ್ಲ. ಬಡತನವೇ ಅವರ ದುಡಿಮೆಯ ತಾಕತ್ತನ್ನು ಉತ್ತೇಜಿಸುವ ಮತ್ತು ಸುಪ್ತಶಕ್ತಿಯನ್ನು ಹೊರದೆಗೆಯುವ ಮೀಟುಕೋಲು(ಪು.42) ಶಿಕ್ಷಣ, ಉದ್ಯೋಗ, ರಾಜಕಾರಣ, ನಾಗರೀಕ ಸೌಲತ್ತುಗಳು, ಹೆಣ್ಣು ಪ್ರಜ್ಞೆಯ ಸಾಮಥ್ರ್ಯದ ಮೇಲೆ ದಾಳಿ ನಡೆಸುವ ಹೊತ್ತಿನಲ್ಲಿಯೇ, ದಮನಿತ ಹೆಣ್ಣುಗಳಲ್ಲಿರುವ ಅನಾದಿ ಸಾಮಥ್ರ್ಯವನ್ನು ಧನಾತ್ಮಕವಾಗಿ ತೋರಿಸುವ ವಿಶಿಷ್ಟ ಶಕ್ತಿ ವಿನಯಾ ಅವರ ಚಿಂತನೆಗಿದೆ.
`ಜೀವಹಾನಿ’ ಮತ್ತು `ದೇಹಹಾನಿ’ ಮೂಲಕ ನಡೆಯುವ ಕ್ರೌರ್ಯಗಳು ಜನಸಂವೇದನೆಗಳನ್ನು ಜಡವಾಗಿಸುತ್ತಿರುವ ವಿಪರ್ಯಾಸಗಳನ್ನು ನಿಷ್ಟುರವಾಗಿ ಚರ್ಚಿಸುತ್ತಾರೆ. ಸಮಾಜದ ಹೊರ ರಚನೆ ಆಧುನಿಕವಾದಷ್ಟು ಒಳರಚನೆ ಮತೀಯವಾಗುತ್ತಿರುವ, ಮೌಢ್ಯವಾಗುತ್ತಿರುವ ಸಂಗತಿಗಳನ್ನು `ಏನಾಗಿದೆ ನನ್ನ ಧಾರವಾಡ’ಕ್ಕೆ `ನಮ್ಮ ಮಕ್ಕಳೇಕೆ ಅತ್ಯಾಚಾರಿಗಳಾಗುತ್ತಿದ್ದಾರೆ’ `ಕೂಡು ಬದುಕು ಮತ್ತು ಕಲ್ಪಿತವೈರ’, `ಮನಸಿನೊಳಗಿನ ಹೂಳನ್ನೇನು ಮಾಡುವುದು’ `ಮೌಢ್ಯವೆಂಬ ನಿರಂತರ ಉತ್ಪಾತ’ ಮುಂತಾದ ಲೇಖನಗಳಲ್ಲಿ ಬಹುವಿಧವಾಗಿ ಚರ್ಚಿಸುತ್ತಾರೆ.
ಮಾರುಕಟ್ಟೆಯ ಅಗತ್ಯಗಳನ್ನೇ ಬದುಕಿನ ನೀತಿಯನ್ನಾಗಿಸುತ್ತಿರುವ ಹುನ್ನಾರಗಳು ಮನುಷ್ಯನ ದೈಹಿಕ ಮತ್ತು ಭಾವನಾತ್ಮಕ ಅಸಹಾಯಕತೆಯನ್ನು ಕೃತಕವಾಗಿ ಉತ್ಪಾದಿಸುತ್ತ ಹೆಣ್ಣು ಗಂಡೆಂಬ ಭೇದವಿಲ್ಲದೇ ಉತ್ಪಾದಿತ ಸತ್ಯಗಳನ್ನು ಹೇರುವ ಮೂಲಕ ಮನುಷ್ಯನ ಸ್ವಂತ ಅಭಿರುಚಿ ಮತ್ತು ಆಲೋಚನೆಗಳನ್ನು ನಾಶ ಮಾಡುತ್ತಿರುವ ಸಂಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಾರೆ. ಯುವ ಮನಸುಗಳು ಹಣದ ಮೋಸಕ್ಕಿಂತ ಆಲೋಚನೆಯ ಮೋಸಕ್ಕೊಳಗಾಗುತ್ತಿರುವ ಅಪಾಯದ ಬಗ್ಗೆ, ನಮ್ಮ ಮಕ್ಕಳ ನಾಲಿಗೆ ರುಚಿಯನ್ನು ಮತ್ತು ಆಲೋಚನಾ ವಿಧಾನವನ್ನೂ ಏಕರೂಪಿಯಾಗಿಸಿದ ಸ್ಥಿತಿ ಕುರಿತು ಡಾ. ವಿನಯ ಅವರ ಮಾಸ್ತರಿಕೆ ಮನಸ್ಸು ಕಳವಳಿಸುತ್ತದೆ.
ಬಂಡವಾಳವಾದವು ಹುಟ್ಟಿಸುತ್ತಿರುವ ಹುಸಿ ಗಂಡುತನವು ಹೆಣ್ಣನ್ನು ನಿಯಂತ್ರಿತ ಮತ್ತು ನಿರ್ಲಕ್ಷಿಸಬಹುದಾದ ಸರಳ ಸಂಗತಿಗಳನ್ನಾಗಿಸುತ್ತಿರುವ, ಲಿಂಗತಾರತಮ್ಯವನ್ನು ಪೋಷಿಸುವಲ್ಲಿ ಮನೆಯೇ ಮೂಲವಾಗುವ ಬಗೆಯನ್ನು ವಿವರಿಸುವ ರೀತಿ ವಿಶಿಷ್ಟವಾದದ್ದು. ಅದಕ್ಕೆ ಅವರು ಕೇಳುವ ಮುಖ್ಯ ಪ್ರಶ್ನೆ ಕಾನೂನುಗಳು ಏನೇ ಮಾಡಿದರೂ `ಮನುಷ್ಯನ ಮನಸ್ಸಿಗೆ ಮೆತ್ತಿದ ಜಿಡ್ಡನ್ನು ತೊಳೆಯುವುದು ಹೇಗೆ’? ನಮ್ಮೆದುರಿನ ಸಮಸ್ಯೆಗಳ ಮೂಲವನ್ನು ಕೇವಲ ಹೊರಾವರಣದಲ್ಲಿ ಹುಡುಕದೇ ಒಳಾವರಣದಲ್ಲಿ ತೋಡಿಕೊಳ್ಳುವ ಭಿನ್ನದಾರಿಯನ್ನು ಲೇಖಕರು ಆಯ್ದುಕೊಳ್ಳುತ್ತಾರೆ.
`ಅನುದಿನದ ದಂದುಗ’ ಕೃತಿ ಇಂಥ ಅಸಂಖ್ಯ ಸಂವೇದನೆ, ಸಂಕಟ, ಧಾರಣಶಕ್ತಿ ಮತ್ತು ಪರ್ಯಾಯಗಳ ಶೋಧಗುಣವುಳ್ಳ ಕೃತಿ. ಇಂಥ ಶೋಧ ಸಾಧ್ಯವಾಗುವುದು `ಸುತ್ತಲ ಸಮಸ್ತವನ್ನು ನನ್ನದು ಎಂದು ಎದೆಗವಚಿಕೊಂಡು ನಡೆಯುವ ತಾಯ್ತನದ ಪ್ರೀತಿಯಲ್ಲಿ.’ ಡಾ.ವಿನಯಾ ಅವರ ಈ ಅಂತಃಕರಣ ಮತ್ತು ಒಳ ಎಚ್ಚರವು ಇಲ್ಲಿನ ಬರಹಗಳಿಗೆ ಬಹುಸತ್ಯವನ್ನು ಕಾಣಿಸುವ ತ್ರಾಣ ನೀಡಿದೆ. ಸಮಕಾಲೀನ ಇಕ್ಕಟ್ಟುಗಳನ್ನು ಎದುರಿಸಲು ಬಂಡವಾಳಶಾಹಿ ಭಾರತವನ್ನು ಶ್ರಮ ಮತ್ತು ಸೃಜನಶೀಲ ಭಾರತವನ್ನಾಗಿ ಪರಿಭಾವಿಸಿಕೊಳ್ಳುವಲ್ಲಿಯೇ ಇಲ್ಲಿನ ಬರಹಗಳÀ ವಿಶೇಷತೆ ಅಡಗಿದೆ.

LEAVE A REPLY

Please enter your comment!
Please enter your name here