Homeಪಿಕೆ ಟಾಕೀಸ್ಪಿಕೆ ಟಾಕೀಸ್: ಗ್ರೀಕ್ ವಿಲಕ್ಷಣ ಅಲೆಯ ಸಿನಿಮಾಗಳ ಪ್ರವರ್ತಕಿ ಅಥಿನಾ ರೇಚಲ್ ಸಂಗಾರಿ

ಪಿಕೆ ಟಾಕೀಸ್: ಗ್ರೀಕ್ ವಿಲಕ್ಷಣ ಅಲೆಯ ಸಿನಿಮಾಗಳ ಪ್ರವರ್ತಕಿ ಅಥಿನಾ ರೇಚಲ್ ಸಂಗಾರಿ

- Advertisement -
- Advertisement -

ಪಿಕೆ ಟಾಕೀಸ್: 04/ ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಅಥಿನಾ ರೇಚಲ್ ಸಂಗಾರಿ

ದಿ ಸ್ಲೋ ಬಿಸಿನೆಸ್ ಆಫ್ ಗೋಯಿಂಗ್ (ಇಂಗ್ಲಿಷ್, 2000): ಸಿನಿಮಾವೆಂದರೆ ಪಾತ್ರಗಳ ನಡುವಿನ ಸಂಘರ್ಷ, ಪರಿಸ್ಥಿತಿಯ ಸಂದಿಗ್ಧತೆ, ಸಿನಿಮಾ ವೀಕ್ಷಣೆಯಲ್ಲಿ ಮುಳುಗಿದಮೇಲೆ ಉದ್ವೇಗ, ಸಿನಿಮಾದ ಕೊನೆಯೇನೆಂಬ ಪ್ರೇಕ್ಷಕನ ಉತ್ಕಂಟ – ಹೀಗೆ ಹಲವು ಸಂಗತಿಗಳನ್ನು ಒಳಗೊಂಡಿರಬಹುದು. ಆದರೆ ಇವ್ಯಾವುವೂ ಇಲ್ಲದೆ, ದಿನಾಲು ಬರೆಯುವ ಆಪ್ತತೆಯ ಡೈರಿಯಂತೆ, ಯಾವುದೇ ರೋಚಕ ತಿರುವುಗಳಿಲ್ಲದ ಪ್ರಬಂಧದಂತೆ, ಪಾತ್ರವೊಂದು ತನ್ನ ಮನಸ್ಸಿನ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಂತೆ ಇದ್ದರೆ?..

ಪೆಟ್ರಾ ಗೋಯಿಂಗ್ ಇಪ್ಪತ್ಮೂರು ವಯಸ್ಸಿನ ಯುವತಿ. ತೂಗು ಕುರ್ಚಿಯೊಂದನ್ನು ಭುಜಕ್ಕೆ ನೇತುಹಾಕಿಕೊಂಡು, ಪ್ರಪಂಚದ ವಿವಿಧ ನಗರಗಳಿಗೆ ಭೇಟಿಯಿತ್ತು, ಕೆಲವು ವ್ಯಕ್ತಿಗಳೊಂದಿಗೆ ಸಂಭಾಷಿಸಿ, ತನಗಾದ ಅನುಭವಗಳನ್ನು ನೆನಪುಗಳ ರೂಪದಲ್ಲಿ ವಿಡಿಯೋಗಳನ್ನು ಮಾಡಿ, ತಾನು ಕೆಲಸಕ್ಕೆ ಮಾಡುವ ಕಂಪನಿಗೆ ನೀಡುವುದೇ ದಿ ಸ್ಲೋ ಬಿಸಿನೆಸ್ ಆಫ್ ಗೋಯಿಂಗ್ ಸಿನಿಮಾದ ಕಥಾ ಸಾರಾಂಶ.

ಸಾಮಾನ್ಯವಾಗಿ ಸಿನಿಮಾ ಮೇಕಿಂಗ್‌ನಲ್ಲಿ ಹಲವಾರು ನಿಯಮಗಳು, ನಿಬಂಧನೆಗಳಿರುತ್ತವೆ. ಉತ್ತಮ ಗುಣಮಟ್ಟದ ಕ್ಯಾಮರಾದಿಂದ ಸ್ಪಷ್ಟ ಚಿತ್ರಗಳನ್ನು ಸೆರೆ ಹಿಡಿಯಬೇಕು. ಕನ್ಸಿಸ್ಟೆನ್ಸಿಗಾಗಿ ಒಂದೇ ರೀತಿಯ ಕ್ಯಾಮರಾವನ್ನು ಸತತವಾಗಿ ಬಳಸಬೇಕು. ಅನಿಮೇಷನ್ ಚಿತ್ರವೇ ಬೇರೆ, ಸಾಕ್ಷ್ಯಚಿತ್ರವೇ ಬೇರೆ ಮತ್ತು ನಟನಟಿಯರು ಚಿತ್ರಕಥೆಗೆ ಅನುವಾಗಿ ನಟಿಸಿ ಮಾಡುವ ಸಿನಿಮಾವೇ ಬೇರೆ. ಸಿನಿಮಾದ ಕಥೆ, ಚಿತ್ರಕಥೆ, ಸ್ಕ್ರೀನ್ ಪ್ಲೇ, ಕೊನೆ, ಮೊದಲು – ಹೀಗಿರುವ ಹಲವಾರು ನಿಬಂಧನೆಗಳನ್ನು ಮುರಿದು, ಹೊಸ ಪ್ರಯೋಗ ಮತ್ತು ನಂಬಿಕೆಯಿಂದ ಕಟ್ಟಿರುವ ಸಿನಿಮಾ ಇದು.

ಒಂದೇ ಒಂದು ಬಾರಿ ನೋಡಿದ ಕೂಡಲೇ ಅರ್ಥವಾಗಬೇಕು, ಅನುಭವಕ್ಕೆ ದಕ್ಕಬೇಕು ಅನ್ನುವಂತಹ ಚಿತ್ರ ಇದಲ್ಲ. ಮೊದಲ ಭಾಗದಲ್ಲಿ ಪೆಟ್ರಾ ನಿದ್ದೆ ಮಾಡಲು ಒದ್ದಾಡಿ, ಫೋನಿನಲ್ಲಿ ತನ್ನ ಮನೆಯ ಕುರಿತು, ಅಲ್ಲಿಗೆ ಹಿಂತಿರುಗಿ ಹೋಗುವ ಕುರಿತು ಆಡುವ ಮಾತುಗಳು, ನಮ್ಮ ಅಸ್ತಿತ್ವದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎಬ್ಬೀಸುತ್ತದೆ. ಪಾತ್ರ ತಾನು ಹೋದ ಜಾಗಕ್ಕೆಲ್ಲ ತೂಗು ಕುರ್ಚಿಯನ್ನು ನೇತುಹಾಕಿಕೊಂಡು ಹೋಗುವುದನ್ನು ಸಾಂಕೇತಿಕವಾಗಿ ನಮ್ಮ ಅಲೆಮಾರಿತನವನ್ನು ತೋರಿಸುತ್ತದೆ. ಒಂದು ಕಡೆ ನಿಲ್ಲಲಾಗದೆ, ಮತ್ತೆಲ್ಲೋ ಹೋಗುತ್ತಾ, ಮನೆಯತ್ತ ಮನಸ್ಸು ತುಡಿಯುತ್ತಾ, ಬದುಕಿನ ಕೊನೆಯಿಲ್ಲದ ಪ್ರಯಣವನ್ನು ರೂಪಕವಾಗಿ ಹೇಳುತ್ತದೆ.

ಮುಖ್ಯ ಪಾತ್ರಧಾರಿ ಪೆಟ್ರಾ ಬರೆಯುತ್ತಿರುವ ಡೈರಿಯಂತೆ ಈ ಸಿನಿಮಾ ಭಾಸವಾಗುತ್ತದೆ. ಪೆಟ್ರಾಳಿಗೆ ನೂಯಾರ್ಕ್, ಹವಾನಾ, ಟೋಕಿಯೋ, ಮೆಕ್ಸಿಕೋ, ಮಾಸ್ಕೋ ಹೀಗೆ ವಿವಿಧ ನಗರಗಳನ್ನು ಸುತ್ತುವುದೇ ಕೆಲಸ. ಪ್ರತಿದಿನವೂ ವಿವಿಧ ರೀತಿಯ ವ್ಯಕ್ತಿಗಳನ್ನು ಭೇಟಿ ಮಾಡಿ ಮಾತನಾಡುವ ದೃಶ್ಯಗಳಲ್ಲಿ ಕೆಲವು ಭಾಗ ಅನಿಮೇಷನ್‌ನಂತಿದ್ದರೆ, ಇನ್ನು ಕೆಲವು ಭಾಗ ಸಾಕ್ಷ್ಯಚಿತ್ರದಂತಿದೆ. ಪ್ರತಿ ನಗರದ ಅನುಭವವೂ ಒಂದೊಂದು ಸಂಚಿಕೆಯಂತೆ, ಹಲವಾರು ಸಂಚಿಕೆಗಳ ಗುಚ್ಛ ಸಿನಿಮಾವಾಗಿ ರೂಪುಗೊಂಡಿದೆ.

ನಿರ್ದೇಶಕಿ ಅಥಿನಾ ತನ್ನ ಮಾಸ್ಟರ್ಸ್ ವ್ಯಾಸಂಗದ ಥೀಸಿಸ್ ಸಿನಿಮಾವಾಗಿ ಇದನ್ನು ಮಾಡಿದ್ದಾರೆ. ಅತಿ ಕಡಿಮೆ ವೆಚ್ಚದಲ್ಲಿ ಹವ್ಯಾಸಿ ನಟ-ನಟಿಯರೊಂದಿಗೆ, ತಮಗೆ ಆಗ ಲಭ್ಯವಿದ್ದ ಯಾವುದೋ ಒಂದು ಕ್ಯಾಮರಾ ಸಹಾಯದಿಂದ ಶೂಟ್ ಮಾಡಿರುವ ಚಿತ್ರವಿದು. ಮಿತ ಸಂಭಾಷಣೆಯಿಂದ ಕೂಡಿ, ಆಂಗಿಕ ಅಭಿನಯದಿಂದಲೇ ಪಾತ್ರಗಳ ಭಾವಗಳನ್ನು ಮೂಡಿಸಿದ್ದು, ವಿವಿಧ ನಗರಗಳ ಹೋಟಲಿನ ರೂಮ್‌ಗಳಲ್ಲಿ ಹೆಚ್ಚು ಚಿತ್ರಣಗೊಂಡಿದೆ. ಕೆಲ ಸಂಚಿಕೆಗಳು ರೋಮ್ಯಾನ್ಸ್‌ನಂತಿದ್ದರೆ, ಇನ್ನು ಕೆಲವು ಹಾಸ್ಯಭರಿತವಾಗಿ, ಯಾವುದೇ ಒಂದು ಪ್ರಕಾರಕ್ಕೆ ಸಿಕ್ಕುವಂತದ್ದಲ್ಲ.

ಸ್ಪಷ್ಟತೆ ಇಲ್ಲದ ಚಿತ್ರಗಳು, ನಿರ್ದಿಷ್ಟತೆ ಇಲ್ಲದಿರುವ ಶೈಲಿ, ಸಾಕ್ಷ್ಯಚಿತ್ರದಂತೆ ಬರುವ ವಾಯ್ಸ್ ಓವರ್, ಅನಿಮೇಷನ್‌ಗಳಿಂದ ಕೂಡಿದ ಸಿನಿಮಾದಲ್ಲಿ ಮೂಡುವ ಅರ್ಥವಿಲ್ಲದಿರುವ ಪ್ರಯಣ, ಯಾವುದು ಕೊನೆ, ಎಲ್ಲಿಗೆ ಮುಂದಿನ ಒತ್ತಾಯದ ಪ್ರಯಾಣ ಎಂಬ ಪ್ರಶ್ನೆ ಮೂಡುವ ಹಲವಾರು ಸಂಗತಿಗಳು ಸ್ಥಿರವಲ್ಲದ ಮನುಷ್ಯನ ಜೀವನಯಾನಕ್ಕೆ ಕನ್ನಡಿ ಹಿಡಿದಂತಿದೆ.

ಸಿನಿಮಾದಲ್ಲಿ ಕಥೆಯನ್ನು ಹುಡುಕದೆ, ಪಾತ್ರಗಳ ನೈಜತೆಯನ್ನು ಪ್ರಶ್ನಿಸದೆ, ಕಥೆಯಲ್ಲಿ ಬಿಗಿದಿರುವ ಒತ್ತಡಗಳಿಗೆ ಸಿಕ್ಕಿಕೊಳ್ಳದೆ, ನೋಡಬೇಕಾದ ಪ್ರಯೋಗಾತ್ಮಕ ದೃಶ್ಯರೂಪ ಇದು.

ಅಟೆನ್ಬರ್ಗ್ (ಗ್ರೀಕ್, 2010): ಡೆವಿಡ್ ಆಟನ್‌ಬ್ರೋ ನಿರೂಪಿಸುವ ಪ್ರಾಣಿ-ಪಕ್ಷಿ, ಪರಿಸರ ಮತ್ತು ಭೂಮಿಯ ಕುರಿತಾದ ಸಾಕ್ಷ್ಯಚಿತ್ರಗಳನ್ನು ಬಳಸಿಕೊಂಡು, ಪ್ರಾಣಿಗಳಂತಿರುವ ಮನುಷ್ಯರ ವರ್ತನೆಗಳನ್ನು ಅನ್ವೇಷಿಸಿರುವ ಚಿತ್ರವಿದು. ಆಟನ್‌ಬ್ರೋರ ಹೆಸರನ್ನು ತಿರುಚಿ, ಈ ಸಿನಿಮಾ ಶೀರ್ಷಿಕೆಯನ್ನು ಹೆಸರಿಸಲಾಗಿದೆ.

ಮೊದಲ ದೃಶ್ಯದಲ್ಲಿ ಯುವತಿಯೊಬ್ಬಳು ಮತ್ತೊಬ್ಬಳಿಗೆ ಮುತ್ತಿಡುವುದನ್ನು ಕಲಿಸುತ್ತಿದ್ದಾಳೆ. ಅದನ್ನು ಕಲಿಯಲು ಕಷ್ಟಪಟ್ಟು ಇಬ್ಬರೂ ಜಗಳವಾಡುತ್ತಿದ್ದಾರೆ. ಗ್ರೀಕ್ ಸಮಾಜದಲ್ಲಿ ಇಪ್ಪತ್ತರ ನಂತರದಲ್ಲೂ ಲೈಂಗಿಕ ಶಿಕ್ಷಣದ ಬಗ್ಗೆ ಇರುವ ಅಭಾವವನ್ನು ಇದು ಸೂಚಿಸುತ್ತಿದೆ. ಹೀಗೆ ಇಪ್ಪತ್ತು ವರ್ಷ ದಾಟಿದ ಯುವತಿಯ ಲೈಂಗಿಕತೆಯ ಮತ್ತು ತನ್ನ ತಂದೆಯ ಅನಾರೋಗ್ಯ, ತನ್ನ ಗೆಳತಿಯ ಜೊತೆಗಿನ ವಿಚಿತ್ರ ನಡಿಗೆ ಈ ಸಿನಿಮಾದ ಕಥಾವಸ್ತು.

ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿರುವ, ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ತಂದೆಯನ್ನು ಮಗಳು, “ನನ್ನನ್ನು ನೀನು ನಗ್ನವಾಗಿ ಕಲ್ಪನೆ ಮಾಡಿಕೊಂಡಿದ್ದಿಯಾ” ಎಂದು ಕೇಳಿದಾಗ, ತಂದೆ, “ಹಾಗೆ ಮಾಡಬಾರದು, ಅದಕ್ಕೆ ನಾವು ಸಸ್ತನಿಗಳು ಯಾವುದೇ ಲೋಪದೋಷಗಳಿಲ್ಲದೆ ಮುಂದುವರೆಯುತ್ತಿದ್ದೇವೆ” ಎನ್ನುತ್ತಾನೆ. ಈ ಸಂಭಾಷಣೆ ಮನುಷ್ಯರು ಕೇವಲ ಸಸ್ತನಿಗಳೆ ಎಂಬ ವಿಶಾಲವಾದ ಪ್ರಶ್ನೆಯನ್ನು ಎತ್ತುತ್ತದೆ.

ಮೊದಮೊದಲು ಯುವತಿಗೆ ತಾನು ಸಲಿಂಗಿಯೋ, ಉಭಯಲಿಂಗಿಯೋ ಅಥವಾ ಯಾವುದೇ ಲೈಂಗಿಕ ಆಕರ್ಷಣೆಗಳಿಲ್ಲದಿರುವವಳೊ ಎಂಬ ಹಲವಾರು ಪ್ರಶ್ನೆಗಳು ಕಾಡುತ್ತಿರುತ್ತವೆ. ಸಿನಿಮಾ ಮುಂದುವರಿದಂತೆ ತನ್ನ ಲೈಂಗಿಕತೆಯ ಕುರಿತು ಅವಳಿಗೆ ಸ್ಪಷ್ಟತೆ ಬರುತ್ತದೆ. ಸಿನಿಮಾದ ಅಂತ್ಯದಲ್ಲಿ, ಸಾಯುತ್ತಿರುವ ತಂದೆಗೂ ಲೈಂಗಿಕ ಕ್ರಿಯೆ ಮುಖ್ಯವೆಂದು, ತನ್ನ ಗೆಳತಿಯನ್ನು ತಂದೆಯೊಂದಿಗೆ ಕಳೆಯಲು ಒಪ್ಪಿಸುವುದು, ಲೈಂಗಿಕತೆ ಕುರಿತು ಆಕೆ ಪಡೆದುಕೊಂಡ ವಿಭಿನ್ನ ದೃಷ್ಟಿಕೋನದ ಪ್ರಶ್ನೆಯನ್ನು ಎತ್ತುತ್ತದೆ.

ಈ ಸಿನಿಮಾದಲ್ಲಿ ಗ್ರೀಸ್‌ನ ಆರ್ಥಿಕ ಹಿಂಜರಿತ ಕುರಿತು, ಸರ್ವಾಧಿಕಾರಿ ಹಿಡಿತದಿಂದ ಹೊರಬಂದ ಗ್ರೀಸ್ ದೇಶವನ್ನು ಕುರಿತು ಹಲವಾರು ಉಲ್ಲೇಖಗಳಿವೆ. ತಂದೆ ಆರ್ಕಿಟೆಕ್ಟ್ ಆಗಿದ್ದವನು ಆಸ್ಪತ್ರೆಯಲ್ಲಿ ಅನಾರೋಗ್ಯದಲ್ಲಿರುವಾಗ, ಮಗಳು ಗೆಳತಿಯೊಂದಿಗೆ, ಯಾವುದೇ ಚಟುವಟಿಕೆಯಿಲ್ಲದೆ ಖಾಲಿ ಬಿದ್ದ ಕಾರ್ಖಾನೆಯ ಅಂಗಳದಲ್ಲಿ ವಿಲಕ್ಷಣವಾಗಿ ಓಡಾಡುವುದನ್ನು (ನಿರ್ದೇಶಕಿಯ ಪ್ರಕಾರ ಸಿಲ್ಲಿ ವಾಕ್) ಹೊಸ ತಲೆಮಾರು ಹಳೆ ಗ್ರೀಸ್‌ಗೆ ಹೊಂದಿಕೊಳ್ಳುವ ಪ್ರಯತ್ನವನ್ನು ತೋರಿಸುತ್ತದೆ. ಒಂದು ಸಂಭಾಷಣೆಯಲ್ಲಿ ತಂದೆ, “ನಾವು ಧ್ವಂಸವನ್ನೇ ಕಟ್ಟುತ್ತಿದ್ದೆವು” ಎಂದಾಗ ಅಳಿದು ಉಳಿದ ಗ್ರೀಸಿನ ಇತಿಹಾಸವನ್ನು ಹೇಳುತ್ತದೆ.

ಸಿನಿಮಾದ ನಿರ್ದೇಶಕಿ ನೀಡಿರುವ ಒಂದು ಸಂದರ್ಶನದಲ್ಲಿ ತಿಳಿಸುವಂತೆ, ಕಾಫಿ ಶಾಪ್‌ನಲ್ಲಿ ಗೆಳತಿಯರಿಬ್ಬರು ಕುಳಿತು, ಅವರ ವ್ಯಕ್ತಿತ್ವಗಳು ಎಲ್ಲಿಗೂ ಸಲ್ಲುತ್ತಿಲ್ಲ, ಇಡೀ ಸಮಾಜ ಅದಕ್ಕೆ ಅವಕಾಶ ನೀಡದೆ ಹೇಗೆ ವಿಭಿನ್ನವಾಗಿದೆ ಎಂದು ಮಾತಾಡಿಕೊಳ್ಳುವುದನ್ನು, ಅವರು ವಿಭಿನ್ನ ರೀತಿಯಲ್ಲಿ, ಅಂದರೆ, ಗೆಳತಿಯರಿಬ್ಬರು ವಿಲಕ್ಷಣವಾಗಿ ಮುಚ್ಚಲ್ಪಟ್ಟ ಕಾರ್ಖಾನೆಯ ಅಂಗಳದಲ್ಲಿ ಮತ್ತು ಇತರೆಡೆ ಓಡಾಡುವುದರ ಮೂಲಕ ಆಂಗಿಕ ಅಭಿನಯದಲ್ಲಿ ಕಟ್ಟಿಕೊಟ್ಟಿದ್ದೇನೆ ಎನ್ನುತ್ತಾರೆ.

ಹೀಗೆ ಹಲವು ಬಾರಿ ಡೆವಿಡ್ ಆಟನ್‌ಬ್ರೋರ ಸಾಕ್ಷಚಿತ್ರಗಳನ್ನು ಪಾತ್ರಗಳು ನೋಡುತ್ತಾ, ಅದರಲ್ಲಿ ಬರುವ ಪ್ರಾಣಿ ಪಕ್ಷಿಗಳನ್ನು ಹಾವಭಾವಗಳನ್ನು ಮತ್ತು ಶಬ್ದಗಳನ್ನು ಆಂಗಿಕವಾಗಿ ಅನುಕರಿಸುತ್ತಾ ಕೊನೆಗೆ ನಾವು ಪ್ರಾಣಿಪಕ್ಷಿಗಳಂತೆಯೇ ಉಳಿದುಬಿಡುತ್ತೇವೇನೋ ಎಂಬುದನ್ನು ವಿಚಿತ್ರವಾಗಿ ಅನ್ವೇಷಿಸಲು ಪ್ರಯತ್ನಿಸಿದ್ದಾರೆ.

ಈ ಸಿನಿಮಾದಲ್ಲಿ ಗ್ರೀಸ್ ಸಿನಿಮಾ ನಿರ್ದೇಶಕ ಯೊರ್ಗೊಸ್ ಲಾಂತಿಮೊಸ್ ನಟಿಸಿರುವುದು ಕೂಡ ವಿಶೇಷವಾದ ಸಂಗತಿ.

ಅಥಿನಾ ರೇಚಲ್ ಸಂಗಾರಿ: ಇಂಡಿಪೆಂಡೆಂಟ್ ಅಥವಾ ಸ್ವತಂತ್ರ ಸಿನಿಮಾಗಳು ಸಾಮಾನ್ಯವಾಗಿ, ಈಗಾಗಲೇ ಸ್ಥಾಪಿತವಾಗಿರುವ ಸಿನಿಮಾ ತಂತ್ರ ಅಥವಾ ಸಿದ್ಧಾಂತಗಳನ್ನು ಮೀರಿ, ಫಿಲ್ಮ್‌ಮೇಕರ್ ತನ್ನ ಮನಸ್ಸಿನಲ್ಲಿರುವುದನ್ನು ಅಥವಾ ಹೊಸದೇನನ್ನೋ ಅಭಿವ್ಯಕ್ತಿಸಲು, ಅದನ್ನು ದೃಶ್ಯರೂಪಕ್ಕೆ ತರುವ ಪ್ರಯೋಗದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಇಲ್ಲಿ ಯಾವುದೇ ರೀತಿಯ ವ್ಯಾಪಾರದ ಒತ್ತಡ ಅಥವಾ ಜನರಿಗೆ ಅತಿ ಸುಲಭವಾಗಿ ಎಲ್ಲವೂ ಅರ್ಥವಾಗಬೇಕೆಂಬ ಉದ್ದೇಶ, ಸಿನಿಮಾವೆಂದರೆ ಇದು ಮಾತ್ರ ಎಂಬ ನಿಯಮಗಳು ಇರುವುದಿಲ್ಲ. ಭಾರಿ ಹಣದ ಹೂಡಿಕೆ ಬೇಕೆಂದಿಲ್ಲ. ವೃತ್ತಿಪರ ನಟ-ನಟಿಯರೇ ಆಗಬೇಕೆಂದಿಲ್ಲ. ಹವ್ಯಾಸಿ ನಟರು, ಸಿನಿಮಾದ ಬಗ್ಗೆ ಉತ್ಸಾಹ ಇರುವ ಸ್ನೇಹಿತರೆಲ್ಲ ಕೂಡಿ ಎಷ್ಟೋ ಬಾರಿ ಸ್ವತಂತ್ರ ಸಿನಿಮಾ ಆಗುತ್ತದೆ.

ಅಥಿನಾ, ನಿರ್ದೇಶಕ ಯೊರ್ಗೊಸ್ ಲಾಂತಿಮೊಸ್ ಮತ್ತಿತರು ಒಗ್ಗೂಡಿ ತಂಡವಾಗಿ ಪರಸ್ಪರರ ಸಿನಿಮಾಗಳಲ್ಲಿ ನಟಿಸುತ್ತಾ, ನಿರ್ಮಾಣದಲ್ಲಿ ಸಹಾಯ ಮಾಡುತ್ತಾ, ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾ ಹಲವಾರು ಸಿನಿಮಾಗಳನ್ನು ಮಾಡಿರುವುದು ಗಮನಾರ್ಹ.

ಯೊಗೊರ್ಸ್ ಲಾಂತಿಮೊಸ್‌ನ ಮೊದಲ ಸಿನಿಮಾವಾದ ಕೆನಿಟ್ಟಾ, ಡಾಗ್‌ಟೂತ್ ಮತ್ತು ಲಾಬ್ಸ್‌ಟರ್‌ನಂತಹ ಸಿನಿಮಾಗಳಲ್ಲಿ ಅಥಿನಾ ಸಹನಿರ್ಮಾಪಕರಾಗಿ ಪಾಲ್ಗೊಂಡಿದ್ದಾರೆ. ಹೀಗೆ ಇವರು ಮಾಡಿರುವ ಕೆಲವು ಚಿತ್ರಗಳನ್ನು, “ಗ್ರೀಕ್ ವಿಯರ್ಡ್ ವೇವ್/ ಗ್ರೀಕ್ ವಿಲಕ್ಷಣ ಅಲೆ” ಎಂದು ಕರೆಯುತ್ತಾರೆ.

ಅಥಿನಾ ಪರ್ಫಾರ್ಮೆನ್ಸ್ ಆರ್ಟ್ಸ್ ವಿಷಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಈ ಕಾರಣದಿಂದಲೇ ಅವರ ಸಿನಿಮಾಗಳಲ್ಲಿ ನಟ-ನಟಿಯರು ದೈಹಿಕವಾಗಿ ಹೆಚ್ಚು ಚಟುವಟಿಕೆಯುಳ್ಳ ಆಂಗಿಕ ಅಭಿನಯಕ್ಕೆ ಹೆಚ್ಚು ಒತ್ತು ನೀಡಲಾಗಿರುತ್ತದೆ. ಕೇವಲ ವಾಚ್ಯವಾಗಿರದೆ ಅಥವಾ ಮೌಖಿಕವಾಗಿ ನಟಿಸದೆ, ಕಾಲು-ಕೈಗಳನ್ನು, ಕತ್ತು ಬೆನ್ನುಗಳನ್ನು ನಟನೆಯ ಸಾಧನಗಳಾಗಿ ಬಳಸುವುದು ನೂತನವೆನಿಸುತ್ತದೆ.

ಇವರ ಮೊದಲ ಫೀಚರ್ ಸಿನಿಮಾ ’ದಿ ಸ್ಲೋ ಬಿಸಿನೆಸ್ ಆಫ್ ಗೋಯಿಂಗ್ 2000ರಲ್ಲಿ ತೆರೆಕಂಡರೂ ಮುಂದಿನ ಚಿತ್ರ ಅಟನ್ಬರ್ಗ್ ಹತ್ತು ವರ್ಷಗಳ ನಂತರ ಬಂದಿದ್ದು. ಮೂರನೇ ಚಿತ್ರ ’ಶಾವಲಿಯೇ’ ಮೂಡಿಬಂದಿದ್ದು 2015ರಲ್ಲಿ. ಹೀಗೆ ಕಡಿಮೆ ಅವಧಿಯಲ್ಲಿ ಹೆಚ್ಚು ಸಿನೆಮಾಗಳನ್ನು ಮಾಡುವ ಒತ್ತಡಕ್ಕೆ ಬೀಳದೆ ಪ್ರಯೋಗಗಳನ್ನು ಮಾಡುವುದರಲ್ಲೇ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿರುವವರು.

’ಶಾವಲಿಯೇ’ ಸಿನಿಮಾದಲ್ಲಿ, ಐಷಾರಾಮಿ ದೋಣಿಯೊಂದರಲ್ಲಿ, ಗಂಡಸರ ಒಂದು ಗುಂಪಿನಲ್ಲಿ ಯಾರು ಶ್ರೇಷ್ಠರು ಎಂಬ ಸ್ಪರ್ಧೆಯನ್ನು ನಡೆಸಿದಾಗ, ಗಂಡಸರ ನಡುವಿನ ಪರಸ್ಪರ ಬೆರೆಯುವಿಕೆ, ಯಾರು ಮೇಲು, ಯಾರು ಕೀಳು, ಸಮಾಜದಲ್ಲಿ ಗಂಡಸಿನ ಮನಸ್ಸಿನಲ್ಲಿರುವ ಪುರುಷಪ್ರಾಧಾನ್ಯತೆಯನ್ನು ಹಿಡಿದಿಡಲು ಮಾಡಿರುವ ಪ್ರಯತ್ನವೇ ಈ ಚಿತ್ರ. ’ಶಾವಲಿಯೇ’ ಫ್ರೆಂಚ್ ಪದದ ಅರ್ಥ ಸ್ಥಿರವಾದ ವ್ಯಕ್ತಿಯೆಂದು.

ಇವರು ಮೂರು ಫೀಚರ್ ಸಿನಿಮಾಗಳ ಜೊತೆ ಅಷ್ಟೇ ವಿಲಕ್ಷಣವಾದ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ಬರವಣಿಗೆ, ನಿರ್ಮಾಣ, ನಿರ್ದೇಶನವೆಂಬ ಭೇದಭಾವವಿಲ್ಲದೆ, ಸಿನಿಮಾವನ್ನು ಏಕಮಾತ್ರ ಕಲೆಯೆಂದು ಗ್ರಹಿಸುತ್ತಾ ಬೇಕಾಗಿರುವುದೆಲ್ಲವನ್ನು ಯಾವುದೇ ಒತ್ತಡಗಳಿಲ್ಲದೆ ಮಾಡುತ್ತಿರುವುದು ಈ ಕಲಾವಿದೆ ಸೃಷ್ಟಿಸಿಕೊಂಡಿರುವ ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ.


ಇದನ್ನೂ ಓದಿ: ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಬದುಕಿನ ಪ್ರೀತಿಯನ್ನು ಅನ್ವೇಷಿಸುವ ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....