Homeಮುಖಪುಟತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಬದುಕಿನ ಪ್ರೀತಿಯನ್ನು ಅನ್ವೇಷಿಸುವ ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್

ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಬದುಕಿನ ಪ್ರೀತಿಯನ್ನು ಅನ್ವೇಷಿಸುವ ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್

- Advertisement -
- Advertisement -

ಪಿಕೆ ಟಾಕೀಸ್ 03 – ಜಾಗತಿಕ ಸಿನಿಮಾ/ ಗ್ರೀಸ್ ಸಿನಿಮಾ/ ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್

ದಿಲಾಸ್ಟ್ ನೋಟ್(2017) : ಜರ್ಮನಿಯ ನಾಜಿಗಳು ಗ್ರೀಸ್ ದೇಶವನ್ನು ಆಕ್ರಮಿಸಿ ಮೂರು ಲಕ್ಷ ಜನರನ್ನು ಕೊಂದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಧ್ವನಿಯೆತ್ತಿದ್ದ ಇಪ್ಪತ್ತೈದು ಸಾವಿರಕ್ಕು ಹೆಚ್ಚಿನ ಎಡಪಂಥೀಯರನ್ನು ಸೆರೆಮನೆಯಲ್ಲಿ ಬಂಧಿಸಲಾಗುತ್ತದೆ. ಬದುಕು, ಸಾವುಗಳ ನಡುವಿನ ಸಂಧಿಗ್ದ ಪರಿಸ್ಥಿತಿಯಲ್ಲಿ ಬಂಧಿಯಾಗಿದ್ದವರ ಬದುಕಿನ ಚಿತ್ರಣವೇ ಈ ಸಿನಿಮಾ.

ಈ ಸಿನಿಮಾ ನೆಪೋಲಿಯಾನ್ ಎಂಬ ಬಂಧಿತನ ದೃಷ್ಟಿಕೋನದಲ್ಲಿದೆ. ಅವನು ಗ್ರೀಕ್ ಮತ್ತು ಜರ್ಮನ್ ಭಾಷೆಗಳ ನಡುವೆ ಪರಸ್ಪರ ತರ್ಜುಮೆ ಮಾಡಬಲ್ಲವನು. ಸಿನಿಮಾದ ಮೊದಲ ಭಾಗದಲ್ಲಿ, ಸೆರೆಮನೆಯಿಂದ ತಪ್ಪಿಸಿಕೊಂಡವರಿಗೆ ನಾಜಿ ಜನರಲ್ ಕೇಳುವ ಪ್ರಶ್ನೆಗಳನ್ನು ಮತ್ತು ಬಂಧಿತರಿಂದ ಬರುವ ಉತ್ತರಗಳನ್ನು, ಆತ ತಲೆ ಬಗ್ಗಿಸಿಕೊಂಡು ತರ್ಜುಮೆ ಮಾಡುವ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ನಾಜಿ ಜನರಲ್ ಹೆಂಗಸೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರೂ, ಏನು ಮಾಡಲಾಗದೆ ಸುಮ್ಮನೆ ನಿಂತಿರುತ್ತಾನೆ.

ಸೆರೆಮನೆಯಲ್ಲಿ ನೀಡುವ ಬ್ರೆಡ್ಡಿನೊಳಗೆ ರಹಸ್ಯವಾಗಿ ಹೊರ ಪ್ರಪಂಚದ ಆಗುಹೋಗುಗಳ ಕುರಿತು ಸುದ್ದಿ ಬರುತ್ತಿರುತ್ತದೆ. ಜರ್ಮನಿಯ ನಾಜಿಗಳು ಸೋಲುತ್ತಾರೆ, ಗ್ರೀಸಿಗೆ ಮುಕ್ತಿ ಸಿಗುತ್ತದೆ ಎಂಬ ಮರೀಚಿಕೆಯ ಆಸೆಯೊಂದರ ಭರವಸೆಯಲ್ಲಿ ಎಲ್ಲರೂ ಬದುಕುತ್ತಿರುತ್ತಾರೆ. ಒಂದು ದೃಶ್ಯದಲ್ಲಿ ನೆಪೋಲಿಯಾನ್ ನಾಜಿ ಜನರಲ್ ಜೊತೆ ಹೊರಗೆ ಸುತ್ತಾಡುತ್ತ ಗ್ರೀಸ್‌ನ ಕೆಲ ಕಟ್ಟಡಗಳ ಮಹತ್ವವನ್ನು ತಿಳಿಸುತ್ತಾನೆ. ಆಗ ಜನರಲ್, ನೆಪೋಲಿಯಾನ್‌ನ್ನು ನೋಡಿದರೆ ತನ್ನ ಸ್ನೇಹಿತನ ನೆನಪಾಗುತ್ತದೆ ಎನ್ನುತ್ತಾನೆ.

PC : Tanweer

ನಾಜಿ ಜನರಲ್ ಮತ್ತು ನೆಪೋಲಿಯಾನ್ ನಡುವೆ ವಾಗ್ವಾದಗಳು ನಡೆದರೂ, ಜನರಲ್ ನೆಪೋಲಿಯಾನ್‌ನನ್ನು ಮೃದುವಾಗಿ ಕಾಣುತ್ತಾನೆ ಮತ್ತು ಯಾವಾಗಲು ಕಡಿಮೆ ಶಿಕ್ಷಿಸುತ್ತಾನೆ. ಇದರಿಂದ ಸೆರೆಮನೆಯಲ್ಲಿನ ಮತ್ತೊಬ್ಬ ಖೈದಿಗೆ ನೆಪೋಲಿಯಾನ್‌ನ ಮೇಲೆ ಸದಾ ಅನುಮಾನ.

ಹೆಂಗಸರ ಮೇಲೆ ನಾಜಿಗಳು ಮಾಡುವ ದೌರ್ಜನ್ಯ, ಮನಸೋ ಇಚ್ಛೆ ಹೊಡೆಯುವುದು, ನಿಯಮ ಮೀರಿದರೆ ಕೊಲ್ಲುವುದು, ಹೀಗೆ ರಾಕ್ಷಸರಂತೆ ವರ್ತಿಸುವ ದಾರುಣವಾದ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.
ನಾಜಿಗಳೇನು ಬೇರೆ ಗ್ರಹದಿಂದ ಬಂದವರಲ್ಲ. ಅವರೂ ಸಮಾಜದ ಭಾಗವಾಗಿದ್ದವರೇ! ಅವರೂ ಎಲ್ಲರಂತೆ ತಮ್ಮ ತಮ್ಮ ಗೆಳೆಯರೊಂದಿಗೆ ಓದಿ, ತಿಂದು, ಕುಡಿದು ಬೆಳೆದವರೇ! ಆದರೂ ಅವರಲ್ಲಿ ಇಷ್ಟು ಕ್ರೌರ್ಯ ಎಲ್ಲಿಂದ ಬರುತ್ತದೆ ಎಂಬುದು ಮಾತ್ರ ಅತ್ಯಂತ ಕ್ರೂರ ವಾಸ್ತವ. ಅದು ಜನಾಂಗೀಯ ದ್ವೇಷವಾಗಿರಬಹುದು ಅಥವಾ ಎಲ್ಲವೂ ಒಂದು ವ್ಯಂಗ್ಯ ಚಿತ್ರದಿಂದಲೋ, ಜೋಕಿನಿಂದಲೋ ಶುರುವಾದದ್ದು, ಅದನ್ನು ವಿರೋಧಿಸುತ್ತಲೇ ಕೊನೆಗೆ ಮನುಷ್ಯನನ್ನು ರಾಕ್ಷಸನನ್ನಾಗಿಸುವ ವಿದ್ಯಮಾನಕ್ಕೆ ಕಾರಣವೇನು?

ನಾಜಿಗಳು 1945ರ ನಂತರ ಇರಲಿಲ್ಲ, ಆದರೆ ನಾಜಿವಾದ ಮಾತ್ರ ಹಲವು ರೂಪಗಳಲ್ಲಿ ಎಲ್ಲೆಲ್ಲಿಯೂ ಉಳಿದಿದೆ. ನಮ್ಮಲ್ಲೂ ಇದೆ. ಯಾವುದೋ ಒಂದು ಜಾತಿ ಮೇಲು ಮತ್ತೊಂದು ಕೀಳು ಎಂಬ ಪೂರ್ವಾಗ್ರಹದ ನಂಬಿಕೆಗಳನ್ನು ಇಂದಿಗೂ ಬಲಪಡಿಸುತ್ತಿರುವುದು, ದಲಿತ, ಹಿಂದುಳಿದವರು ಆಡುವ ಕ್ರಿಕೆಟ್‌ನಲ್ಲಿ ಬೌಂಡರಿ ಲೈನ್ ಕಮ್ಮಿ ಎನ್ನುವ ವಾಟ್ಸಾಪ್ ಜೋಕುಗಳನ್ನು ಫಾರ್‌ವಾರ್ಡ್ ಮಾಡುವುದು, ಆಸ್ಪತ್ರೆ, ಶಿಕ್ಷಣ, ರಸ್ತೆಗಳು ಸರಿಯಾಗದಿದ್ದರೂ ಪರವಾಗಿಲ್ಲ ಅಲ್ಪಸಂಖ್ಯಾತ ಧರ್ಮಕ್ಕೆ ಸೇರಿದವರನ್ನು ನಿರಂತರ ಭಯದಲ್ಲಿ ಇಡುವ ಪ್ರೊಪೊಗಾಂಡಕ್ಕೆ ಮತ ಚಲಾಯಿಸುವ ಪ್ರತಿಯೊಬ್ಬರಲ್ಲೂ ನಾಜಿವಾದವಿದೆ. ಸ್ವಲ್ಪ ಅವಕಾಶ ಸಿಕ್ಕರೂ ರಕ್ತಪಿಪಾಸುಗಳಾಗಿಯೂ ಬಿಡುತ್ತಾರೆ.

ಸಿನಿಮಾದ ಕೊನೆಭಾಗದಲ್ಲಿ ಇನ್ನೂರು ಮಂದಿಯನ್ನು ಕೊಲ್ಲುವ ಆಜ್ಞೆ ಬರುತ್ತದೆ. ಅದರಲ್ಲಿ ನೆಪೋಲಿಯಾನ್‌ನ ಹೆಸರು ಕೂಡ ಇರುತ್ತದೆ. ಕೊಲ್ಲುವ ವಿಷಯ ಎಲ್ಲರಿಗೂ ತಿಳಿದ ನಂತರವೂ, ಅವರ ಕೊನೆಯ ರಾತ್ರಿಯಂದು, ಅವರ ಹಾಡು ಕುಣಿತಗಳ ಜೀವನೋತ್ಸಾಹ, ನಾಜಿಗಳ ಡೈನಿಂಗ್ ಟೇಬಲ್‌ನಲ್ಲಿದ್ದವರನ್ನು ನಾಚಿಸುವಂತಿರುತ್ತದೆ.

ಕೊಲ್ಲಲು ಎಲ್ಲರನ್ನು ಸಾಲಿನಲ್ಲಿ ನಿಲ್ಲಿಸಿರಲು, ನೆಪೋಲಿಯಾನ್‌ನ್ನು ಮಾತ್ರ ಕಾಪಾಡಲು ನಾಜಿ ಜನರಲ್, ಅವನ ಜಾಗಕ್ಕೆ ಬೇರೊಬ್ಬನನ್ನು ಸೂಚಿಸಲು ಕೇಳುತ್ತಾನೆ. ಅದನ್ನು ನಿರಾಕರಿಸಿ ಸಾಯಲು ಮುಂದಾದಾಗ ಅವನ ಧೈರ್ಯವನ್ನು ನೋಡಿ ಏನೂ ಮಾಡಲಾಗದೆ ಜನರಲ್‌ನ ಮುಖದಲ್ಲಿ ಅಸಹಾಯಕತೆ ಕಾಣುವುದು ಸೋಜಿಗ.

ಲಿಟಲ್ ಇಂಗ್ಲೆಂಡ್ (2013)

ಭೋರ್ಗರೆಯುತ್ತಿರುವ ಸಮುದ್ರದ ಅಂಚಿನಲ್ಲಿರುವ, ಕಪ್ಪು ಬೆಟ್ಟವೊಂದರ ಮೇಲೆ ಹೆಂಗಸರ ಗುಂಪೊಂದು, ರಭಸವಾಗಿ ಬೀಸುತ್ತಿರುವ ಗಾಳಿಯಲ್ಲಿ ಬಟ್ಟೆಗಳನ್ನು ಹಾರಿಸುತ್ತಾ, ದೂರದಲ್ಲಿ ಹೋಗುತ್ತಿರುವ ಹಡಗಿನತ್ತ ಕೈಬೀಸಿ ಕಿರುಚುತ್ತಾ, ಕೂಗುತ್ತಾ, ಬೈನಾಕ್ಯುಲರ್‌ನಲ್ಲಿ ನೋಡುತ್ತಿದ್ದಾರೆ.

ಗ್ರೀಸ್‌ನ ಅಂಡ್ರೋಸ್ ಎಂಬ ಪುಟ್ಟ ದ್ವೀಪದಲ್ಲಿ ನಡೆಯುವ ಕಥೆ ಇದು. ಇಲ್ಲಿ ಗಂಡಸರೆಲ್ಲ ಸಮುದ್ರದ ಗಾಳಿಯಂತೆ ಬಂದು ಹೋಗುವವರು ಮಾತ್ರ. ಗಂಡಸರ ನಿರೀಕ್ಷೆಯಲ್ಲಿ ಹೆಂಗಸರು ಮಕ್ಕಳೊಂದಿಗೆ ಮನೆಗಳಲ್ಲಿರುವವರು.

ಒರ್ಸಾ ಇಪ್ಪತ್ತರ ಯುವತಿ. ರಹಸ್ಯವಾಗಿ ಸ್ಪಿರೋಸ್‌ನನ್ನು ಪ್ರೇಮಿಸುತ್ತಾಳೆ. ಸ್ಪಿರೋಸ್ ಕ್ಯಾಪ್ಟನ್ ಆಗುವ ಬಯಕೆಯಲ್ಲಿ ಸಮುದ್ರಕ್ಕೆ ತೆರಳುತ್ತಾನೆ. ಆಕೆಯ ತಾಯಿ ಬೇರೊಬ್ಬ ಕ್ಯಾಪ್ಟನ್‌ಗೆ ಮದುವೆ ಮಾಡಿಸುತ್ತಾಳೆ. ತಂಗಿ ಮೋಸಾ ದ್ವೀಪವನ್ನು ಬಿಟ್ಟು ಹೊರಗೋಗುವ ಕನಸ್ಸಿನಲ್ಲಿರುತ್ತಾಳೆ. ಆದರೆ ತಾಯಿ, ತಿರುಗಿ ಬಂದ ಸ್ಪಿರೋಸ್‌ನಿಗೆ ಮೋಸಾಳನ್ನು ಕೊಟ್ಟು ಮದುವೆ ಮಾಡಿಸುತ್ತಾಳೆ. ಈ ತ್ರಿಕೋನ ಪ್ರೇಮಪ್ರಕರಣ ರಹಸ್ಯವಾಗಿಯೇ ಉಳಿದುಬಿಡುತ್ತದೆ.

PC : Pinterest

ಈ ಬಾರಿ ಜರ್ಮನಿಯ ದಾಳಿಯನ್ನು ಎದುರಿಸಲು ಗಂಡಸರೆಲ್ಲ ಮತ್ತೆ ಸಮುದ್ರಕ್ಕೆ ಇಳಿಯುತ್ತಾರೆ. ಇತ್ತ ಹೆಂಗಸರೆಲ್ಲ ಭಯದಲ್ಲಿಯೇ ಒಂದು ಕಡೆ ಸೇರಿ ಪಿಯಾನೋ ನುಡಿಸುತ್ತಾ, ಕುಡಿದು ತಮ್ಮ ತಮ್ಮ ಗಂಡಂದಿರ ಕುರಿತು, ವಿರಹ ವೇದನೆಗಳನ್ನು ಹಂಚಿಕೊಳ್ಳುತ್ತಾರೆ. ಒಬ್ಬಳು ತನ್ನ ಗಂಡನ ಮುತ್ತಿನ ವಾಸನೆ ಇನ್ನು ಮರೆಯಲಾಗುತ್ತಿಲ್ಲ ಎಂದರೆ, ಮತ್ತೊಬ್ಬಳು, “ಅವನು ತಿರುಗಿ ಬಂದರಷ್ಟೇ ಸಾಕು, ಅವನು ಹಗಲುರಾತ್ರಿ ಎಷ್ಟು ಊಸುಗಳನ್ನು ಬಿಟ್ಟರೂ ಕೋಪ ಮಾಡಿಕೊಳ್ಳುವುದಿಲ್ಲ ಎಂದು ನಗುತ್ತಾ ಹೇಳುತ್ತಾಳೆ. ಇನ್ನೊಬ್ಬಳು “ಬದುಕಿನ ಸಮಯ ಬೇಗನೆ ಸರಿಯುತ್ತಿದೆ” ಅಂದಾಗ, ಉಳಿದ ಹೆಂಗಸರು ನಡೆಸುವ, ’ಯುದ್ಧ ಮತ್ತು ಶಾಂತಿಗಳ ನಡುವೆ, ಪ್ರೇಮ ಸಂಬಂಧ ಮತ್ತು ಹೆರಿಗೆಗಳ ನಡುವೆ, ಹಂಬಲ ಮತ್ತು ಘನತೆಗಳ ನಡುವೆ, ಕೆಲಸ ಮತ್ತು ತಂಗಾಳಿಗಳ ನಡುವೆ’ ಎಂಬ ಸಂಭಾಷಣೆಗಳಲ್ಲಿ ನಿರ್ದೇಶಕ ಅವರ ಸಂಪೂರ್ಣ ಬದುಕನ್ನು ಕಟ್ಟಿಕೊಟ್ಟಿರುತ್ತಾನೆ.

1940ರ ಸಮಯದಲ್ಲಿ ನಡೆಯುವ ಈ ಕಥೆ, ಅಂಡ್ರೋಸ್ ದ್ವೀಪ, ಅಲ್ಲಿನ ಮನೆಗಳು, ಜನರ ಉಡುಪುಗಳು, ವಸ್ತುಗಳು ಹೀಗೆ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಕಟ್ಟಿಕೊಡುತ್ತಾ, ಕಥೆಯಲ್ಲಿ ಮುಳುಗುವಂತೆ ಮಾಡಿದ್ದಾನೆ. ಸಮುದ್ರ ಅಲೆಗಳ ಏರಿಳಿತಗಳನ್ನು ಭಾವನೆಗಳಿಗೆ ರೂಪಕವಾಗಿ ಬಳಸಿರುವುದು ಆಪ್ತವೆನಿಸುತ್ತದೆ. ಸ್ಪಿರೋಸ್ ಮತ್ತು ಅವನ ಹಡಗು ಮುಳಗಿಬಿಡುತ್ತದೆ. ಈ ಸುದ್ದಿಯನ್ನು ಮೋಸಾ ಮತ್ತು ಒರ್ಸಾರ ಮನೆಗೆ ಬಂದು ತಿಳಿಸಿದಾಗ, ಬರಸಿಡಿಲು ಬಡಿದವಳಂತೆ ಅಕ್ಕ ಒರ್ಸಾ ಕಿರುಚಿ, ಎದೆ ಒಡೆದು ಹೋದವಳಂತೆ ಅಳುತ್ತಾಳೆ. ಅಲ್ಲಿಗೆ 15 ವರ್ಷಗಳಿಂದ ಬಚ್ಚಿಟ್ಟಿದ್ದ ರಹಸ್ಯ ಬಯಲಾಗುತ್ತದೆ. ಇತ್ತ ಅದು ಮೋಸಾಳಿಗೆ ತಕ್ಷಣಕ್ಕೆ ಅರ್ಥವಾಗದೆ, ಆಘಾತದಿಂದಲೇ ಅಕ್ಕ ಮತ್ತು ಗಂಡನ ಮೇಲೆ ಕೋಪ ಮತ್ತು ನೋವಿನಲ್ಲಿಯೇ, ಅಕ್ಕನ ಜುಟ್ಟು ಹಿಡಿದು ಹೊಡೆಯುತ್ತಾ, ಬೈದಾಡುತ್ತಾ ಇಬ್ಬರು ಅಳುತ್ತಾರೆ.

ಮುಂದಿನ ನಾಲ್ಕು ವರ್ಷಗಳ ಕಾಲ ಅಕ್ಕ-ತಂಗಿಯರು ಮಾತಾಡುವುದಿಲ್ಲ. ಒರ್ಸಾನ ಗಂಡನಿಗೆ ಈ ವಿಷಯ ತಿಳಿದು ಒರ್ಸಾಳನ್ನು ದ್ವೀಪದಲ್ಲೇ ಬಿಟ್ಟು ಮಕ್ಕಳನ್ನು ಕರೆದುಕೊಂಡು ಹೊರಟುಹೋಗುತ್ತಾನೆ. ಒರ್ಸಾ ಒಂಟಿಯಾಗಿ ತನ್ನ ಪ್ರಿಯಕರ ಸ್ಪಿರೋಸ್ ಬರೆದ ಪತ್ರಗಳನ್ನೇ ಪದೇ ಪದೇ ಓದುತ್ತಾ ಮನೆಯಲ್ಲೇ ಬಂಧಿಯಾಗಿರುತ್ತಾಳೆ. ತಂಗಿ ಮೋಸಾ ಅಕ್ಕನನ್ನು ಭೇಟಿಯಾಗುತ್ತಾಳೆ. ಒರ್ಸಾ ಆರೋಗ್ಯ ಕ್ಷೀಣಿಸಿದೆ, ವಯಸ್ಸಾಗಿರುತ್ತದೆ. ಒರ್ಸಾ ಮತ್ತು ಸ್ಪಿರೋಸ್‌ನ ಪ್ರೀತಿಯನ್ನು ಆ ಪತ್ರಗಳಲ್ಲಿ ನೋಡುತ್ತಾ ಕರುಣೆಯಿಂದ ಒರ್ಸಾನನ್ನು ಅಪ್ಪಿಕೊಳ್ಳುತ್ತಾಳೆ. ಕೊನೆಗೆ ಒರ್ಸಾ ತನ್ನ ಪ್ರೀತಿಯ ನೆನಪಿನಲ್ಲೇ ಕೊನೆಯುಸಿರೆಳೆಯುತ್ತಾಳೆ.

ವಿಚಿತ್ರವೆಂದರೆ ಈ ದ್ವೀಪದಲ್ಲಿರುವ ಗಂಡಸರಿಗೆ ಇಡೀ ಪ್ರಪಂಚವನ್ನೇ ಸುತ್ತಿ ಮನೆಗೆ ಜೀವಂತವಾಗಿ ಬರುವುದೇ ಗುರಿಯಾದರೆ, ಹೆಂಗಸರು ದ್ವೀಪವನ್ನು ದಾಟಲು ಪ್ರಯತ್ನಿಸಿ ದ್ವೀಪದಲ್ಲೇ ತಮ್ಮ ಬದುಕನ್ನು ಮುಗಿಸುತ್ತಿರುತ್ತಾರೆ.

ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್: ಪ್ಯಾಂಟೆಲಿಸ್ ತನ್ನ ಸಿನಿಮಾ ಪ್ರಯಾಣವನ್ನು 1965ರಲ್ಲಿ “ದಿ ಥಿಫ್ ಎನ್ನುವ ಕಿರುಚಿತ್ರದಿಂದ ಪ್ರಾರಂಭಿಸಿದವನು. ಸತತ ಐವತ್ತು ವರ್ಷಗಳ ತನ್ನ ಸಿನಿಮಾ ಯಾತ್ರೆಯಲ್ಲಿ ಹಲವಾರು ಸಾಕ್ಷ್ಯ ಚಿತ್ರಗಳನ್ನು, ಟಿವಿ ಚಿತ್ರಗಳನ್ನು ಮತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾನೆ.

ಪ್ಯಾಂಟೆಲಿಸ್ ಹೆಂಡತಿ ಯೋಆನ್ನಾ ಕರಿಸ್ತಿಯಾನಿ ಅತ್ಯುತ್ತಮ ಬರಹಗಾರ್ತಿ. ಪ್ಯಾಂಟೆಲಿಸ್ ಸಿನಿಮಾಗಳಲ್ಲಿ ಅವರ ಕೊಡುಗೆ ಕೂಡ ಅತಿ ಪ್ರಮುಖವಾದದ್ದು. ಯೋಅನ್ನಾ ಬರೆದ ಕಾದಂಬರಿ ’ಲಿಟಲ್ ಇಂಗ್ಲೆಂಡನ್ನು ಪ್ಯಾಂಟೆಲಿಸ್ ಸಿನಿಮಾವಾಗಿಸಿದ್ದಾನೆ. ಇವನ ಅನೇಕ ಸಿನಿಮಾಗಳಲ್ಲಿ ಯೋಅನ್ನಾರ ಬರವಣಿಗೆಯ ಪಾಲಿದೆ. ಅದು ಸಿನಿಮಾಗಳಲ್ಲಿನ ಬಲಿಷ್ಟ ಹೆಣ್ಣು ಪಾತ್ರಗಳಲ್ಲಿ ಕಾಣಿಸುತ್ತದೆ.

ಪ್ಯಾಂಟೆಲಿಸ್‌ನ ಪಾತ್ರಗಳು ಬದುಕನ್ನು ಪ್ರೀತಿಸುತ್ತವೆ ಮತ್ತು ಆರಾಧಿಸುತ್ತವೆ ಹಾಗೂ ಸ್ವಾತಂತ್ರ್ಯ ಮತ್ತು ಪ್ರೀತಿಯನ್ನು ಬಯಸುತ್ತವೆ. ಇವನ ಎಲ್ಲ ಸಿನಿಮಾಗಳು ಬಹುತೇಕ ಗತಿಸಿದ ಕಾಲಕ್ಕೆ ಸಂಬಂಧಿಸಿರುವಂತವು. ’ಸ್ಟೋನ್ ಈಯರ್ಸ್’(1985) ಎಪ್ಪತ್ತರ ದಶಕದಲ್ಲಿ ಸರ್ವಾಧಿಕಾರಿಯಿಂದ ಶಿಕ್ಷೆಗೆ ಒಳಪಟ್ಟು, ಜನ ಭಯದಿಂದ ಜೈಲಿನಲ್ಲಿ ಕಳೆಯುವ ಸಮಯವನ್ನು ತೋರಿಸುತ್ತದೆ. ಅದೇ ಸಮಯದಲ್ಲಿ ಸ್ವತಃ ಪ್ಯಾಂಟೆಲಿಸ್ ಕೂಡ ಆರು ತಿಂಗಳು ಗ್ರೀಸ್‌ನಿಂದ ಗಡಿಪಾರಾಗಿರುತ್ತಾನೆ.

ಗ್ರೀಸ್‌ನಲ್ಲಿ ಯಾವುದೇ ಸಂತಸದ ಸಂದರ್ಭದಲ್ಲಿ ಜನ ಸೇರಿದರೆ ಸಾಕು ಅಲ್ಲಿ ಸಿರ್ತಾಕಿ ನಡೆಯಲೇ ಬೇಕು. ಸಿರ್ತಾಕಿ ಗ್ರೀಸ್ ದೇಶದ ರಾಷ್ಟ್ರೀಯ ನೃತ್ಯ. ಜನರ ಗುಂಪು ವೃತ್ತಾಕಾರದಲ್ಲಿ ಸೇರಿ ಪರಸ್ಪರ ಕೈ ಹಿಡಿದುಕೊಂಡು ಕುಣಿಯುವುದು, ಕೆಲವೇ ವಾದ್ಯಗಳ ಸಂಗೀತ, ಮಿಕ್ಕವರಲ್ಲೆ ಚಪ್ಪಾಳೆಯ ಸದ್ದಿನ ನಡುವೆ ನಡೆಯುವ ಆ ನೃತ್ಯ ಒಂದು ಅದ್ಬುತ. ಇದುವೇ ನಿಜವಾದ ಗ್ರೀಕರ ಸಂಭ್ರಮ. ಪ್ಯಾಂಟೆಲಿಸ್ ಕ್ಯಾಮರಾವನ್ನು ಕುಣಿಯವರ ನಡುವೆ ಸೇರಿ ಚಿತ್ರಿಸಿದಾಗ, ಪ್ರೇಕ್ಷಕರಿಗೂ ಆ ಸಂತೋಷದಲ್ಲಿ ಭಾಗಿಯಾಗುವ ಅನುಭವವಾಗುತ್ತದೆ.

ಪ್ಯಾಂಟೆಲಿಸ್ ವೊಲ್‌ಗ್ಯಾರಿಸ್

ಪ್ಯಾಂಟೆಲಿಸ್ ಸಿನಿಮಾಗಳ ಕಥಾವಸ್ತುಗಳು, ಮಾನವ ಸಂಬಂಧಗಳ ಸಂಕೀರ್ಣತೆ, ಸಿವಿಲ್ ವಾರ್, ಇತಿಹಾಸ, ಹೆಣ್ಣಿನ ಕಥೆ, ವಿರಹ, ಸ್ವಾತಂತ್ರ್ಯ ಹೀಗೆ ಅನೇಕ ವಿಷಯಗಳನ್ನು ಒಳಗೊಳ್ಳುತ್ತದೆ. ಆದರೂ ಎಲ್ಲ ಸಿನಿಮಾಗಳಲ್ಲೂ ಮುಖ್ಯವಾಗಿ ಗೋಚರಿಸುವುದು ಮನುಷ್ಯರ ಸ್ಥಿತಿ ಮತ್ತು ಮನಸ್ಸಿನ ಸಂದಿಗ್ಧತೆಗಳಿಗೆ ಪ್ರಾಮಾಣಿಕವಾಗಿ ಹಿಡಿದ ಕನ್ನಡಿ. ಪಾತ್ರಗಳಲ್ಲಿನ ಭಾವೋದ್ವೇಗವನ್ನು ಪ್ರೇಕ್ಷಕನೂ ಅನುಭವಿಸುವಂತೆ ಮಾಡುವುದರಲ್ಲಿ ಪ್ಯಾಂಟೆಲಿಸ್ ಚಾಣಾಕ್ಷ್ಯ.

’ದಿ ಲಾಸ್ಟ್ ನೋಟ್ ಸಿನಿಮಾದಲ್ಲಿ ಇನ್ನೂರು ಮಂದಿಗೆ ತಮಗೆ ಬರಲಿರುವ ಸಾವಿನ ಕುರಿತು ತಿಳಿದಾಗ, ಅವರ ಶೂಗಳನ್ನು ಮಿಕ್ಕವರಿಗೆ ಕೊಡುವುದು, ಉಳಿದವರನ್ನು ಅಪ್ಪಿಕೊಂಡು, “ನನ್ನ ಪರವಾಗಿ ಸಮುದ್ರದಲ್ಲಿ ನೀನು ಈಜು, ಪರ್ವತಕ್ಕೆ ನಾನು ಕೇಳಿದೆ ಅಂತ ಹೇಳು” ಎನ್ನುವುದು, ಸ್ವಚ್ಛವಾಗಿ ಕಾಣಲು ಮುಖ ಕ್ಷೌರ ಮಾಡಿಸಿಕೊಳ್ಳುವುದನ್ನು ಕಟ್ಟಿಕೊಡುವ ದೃಶ್ಯಗಳು ನಿರ್ದೇಶಕನಿಗೆ ಬದುಕಿನ ಮೇಲಿರುವ ಪ್ರೀತಿ ಕಾಣಿಸುತ್ತದೆ.

’ಬ್ರೈಡ್ಸ್’ (2004) ಸಿನಿಮಾದಲ್ಲಿ ಹಿಂದುಳಿದ ದೇಶಗಳಲ್ಲಿನ ಯುವತಿಯರು ಹೊಸ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಕೇವಲ ಒಂದು ಫೋಟೋವನ್ನು ಹಿಡಿದು, ಅಮೆರಿಕದಲ್ಲಿರುವವರನ್ನು ಮದುವೆಯಾಗಲು ಪ್ರಯಾಣಿಸುವ ಕಥೆ ಹೊಂದಿದೆ. 1922ರ ಮದುವೆ ವಹಿವಾಟನ್ನು ಬಹಳ ನೈಜವಾಗಿ ತೋರಿಸಿರುತ್ತಾನೆ. ಇಲ್ಲಿಯೂ ಅವರ ಹೆಂಡತಿ ಯೋಅನ್ನಾರ ಬರವಣಿಗೆ ಇರುವುದು ಗಮನಾರ್ಹ.

ಅಣ್ಣ-ತಮ್ಮಂದಿರು ವಿರುದ್ಧ ಪಡೆಗಳಲ್ಲಿದ್ದು ಯುದ್ಧನಿರತರಾಗಿದ್ದರೂ, ಪ್ರೇಮಿಗಳನ್ನು ಸರ್ವಾಧಿಕಾರಿ ಸರ್ಕಾರ ಬೇರ್ಪಡಿಸಿದ್ದರೂ, ಗಂಡ ಹೆಂಡತಿಯರು ವಿರಹ ನೋವಿನಲ್ಲಿದ್ದರೂ, ಸದಾ ಬದುಕನ್ನು ಪ್ರೀತಿಸುವ, ಬದುಕಿನ ಸ್ಫೂರ್ತಿಯ ಚಿಲುಮೆಯನ್ನು ಜೀವಂತವಾಗಿಡುವ ಸಿನಿಮಾಗಳನ್ನು ಚಿತ್ರಿಸುವುದು ಪ್ಯಾಂಟೆಲಿಸ್‌ನ ಹೆಗ್ಗಳಿಕೆ.


ಇದನ್ನೂ ಓದಿ: ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...