Homeಮುಖಪುಟಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

ಸಿಜೆಐ ಮೇಲೆ ದಾಳಿ: ಬಲಪಂಥೀಯ ಪ್ರಚೋದನೆಯ ಫಲಿತಾಂಶ

- Advertisement -
- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ. ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಆಘಾತಕಾರಿ ಘಟನೆ ಸೋಮವಾರ (ಅ.6) ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.

ಸಂವಿಧಾನವನ್ನು ಅನುಸರಿಸುವ ಭಾರತೀಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಹಿಂದುತ್ವ ಬಲಪಂಥೀಯರು, ಧರ್ಮಾಂಧರು ಮತ್ತು ಜಾತಿವಾದಿಗಳು ದಲಿತ ಸಮುದಾಯದ ಸಿಜೆಐ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದಾರೆ.

ಕೆಲ ದುಷ್ಕರ್ಮಿಗಳು ಕಾನೂನಿನ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಿಜೆಐಗೆ ಗುಂಡಿಕ್ಕುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಎಐ ವಿಡಿಯೋಗಳ ಮೂಲಕ ಸಿಜೆಐ ಅವರನ್ನು ಅವಮಾನಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಮತ್ತು ಫೇಸ್‌ಬುಕ್‌ಗಳು ಕೊಲೆ, ಹಲ್ಲೆ, ಅತ್ಮಹತ್ಯೆ ಇತ್ಯಾದಿ ಪದಗಳನ್ನು ಬಳಸಿ ಏನಾದರು ಪೋಸ್ಟ್‌ಗಳನ್ನು ಹಾಕಿದರೆ ನಿಯಮಗಳನ್ನು ಮೀರಿದ ಕಾರಣ ಕೊಟ್ಟು ತಕ್ಷಣ ಅವುಗಳನ್ನು ತೆಗೆದು ಹಾಕುತ್ತವೆ. ಆದರೆ, ಮೇಲೆ ನಾವು ಉಲ್ಲೇಖಿಸಿದ ಪೋಸ್ಟ್‌ಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಸಿಜೆಐ ಮೇಲೆ ಶೂ ಎಸೆಯಲು ಕಾರಣವೇನು?

ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿ ಬರುವ ಮಧ್ಯಪ್ರದೇಶದ ಐತಿಹಾಸಿಕ ತಾಣ ಖಜುರಾಹೊ ದೇವಾಲಯಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ತಿರಸ್ಕರಿಸುವ ವೇಳೆ ಸಿಜೆಐ ಗವಾಯಿ ಅವರು ನೀಡಿರುವ ಮೌಖಿಕ ಹೇಳಿಕೆಯೇ ವಕೀಲ ರಾಕೇಶ್ ಕಿಶೋರ್ ದಾಳಿ ಅವರ ಮೇಲೆ ದಾಳಿ ಮಾಡಲು ಕಾರಣ ಎಂದು ಹೇಳಲಾಗ್ತಿದೆ.

ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಪಿಐಎಲ್‌ ಸಲ್ಲಿಸಲಾಗಿತ್ತು. ಅದನ್ನು ತಿರಸ್ಕರಿಸಿದ್ದ ಸಿಜೆಐ, “ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಪ್ರಚಾರದ ಹಿತಾಸಕ್ತಿ ಇದ್ದಂತಿದೆ. ಭಗ್ನಗೊಂಡ ವಿಷ್ಣು ವಿಗ್ರಹವನ್ನು ದುರಸ್ಥಿಗೊಳಿಸಲು ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಿ ಎಂದಿದ್ದರು.

ಮುಂದುವರಿದು, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಹೋಗಿ ನಿಮ್ಮ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹೊತ್ತಿಸಿದ ಸಿಜೆಐ ಹೇಳಿಕೆ

ಸಿಜೆಐ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್‌ ಆಗಿತ್ತು. ಹಿಂದುತ್ವ ಸಂಘಟನೆಗಳು ಸಿಜೆಐ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿತ್ತು.

ಹೇಳಿಕೆ ವಿವಾದ ಸ್ವರೂಪ ಪಡೆದ ಎರಡು ದಿನಗಳ ನಂತರ ಪ್ರತಿಕ್ರಿಯಿಸಿದ್ದ ಸಿಜೆಐ ಗವಾಯಿ “ನಾನು ಧರ್ಮವನ್ನು ಅವಹೇಳನ ಮಾಡಿಲ್ಲ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಅಜಿತ್ ಭಾರ್ತಿಯ ಪ್ರಚೋದನಕಾರಿ ಅಭಿಯಾನ

ಸಿಜೆಐ ಹೇಳಿಕೆ ವಿವಾದದ ಬೆಂಕಿ ಹೊತ್ತಿಸಿದಾಗ ಅದಕ್ಕೆ ತುಪ್ಪ ಸುರಿದ ಪ್ರಮುಖರಲ್ಲಿ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿಯೂ ಒಬ್ಬ. ಈ ವಿಚಾರದಲ್ಲಿ ಈತನ ಪಾತ್ರ ದೊಡ್ಡದಿದೆ.

ಸೋಮವಾರ (ಅ.6) ಸಿಜೆಐ ಮೇಲೆ ಶೂ ಎಸೆದ ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದ ಅಜಿತ್ ಭಾರ್ತಿ, “ಇಂದು ಸಿಜೆಐ ಗವಾಯಿ ಅವರತ್ತ ವಕೀಲ ಎಸೆದ ಶೂ ಬಹುತೇಕ ತಗುಲಿದೆ. ವಕೀಲ ಗವಾಯಿ ಅವರ ಪೀಠದ ಬಳಿಗೆ ಹೋಗಿ, ತನ್ನ ಶೂ ತೆಗೆದು ಹೊಡೆಯಲು ಮುಂದಾದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ನಂತರ ಹೊರಗಡೆ ಕರೆದೊಯ್ಯುವಾಗ “ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಎಂದು ವಕೀಲರು ಕೂಗಿದ್ದಾರೆ” ಎಂದು ಬರೆದುಕೊಂಡಿದ್ದಾನೆ.

ತನ್ನ ಇನ್ನೊಂದು ಪೋಸ್ಟ್‌ನಲ್ಲಿ ಅಜಿತ್ ಭಾರ್ತಿ ಆಕ್ರಮಣಕಾರಿ ಭಾಷೆ ಬಳಸಿದ್ದು, “ಇದು ಕೇವಲ ಆರಂಭ. ನ್ಯಾಯಾಧೀಶರು ಹಿಂದೂ ವಿರೋಧಿ ಧೋರಣೆ ತೋರಿದರೆ ಮತ್ತು ತಮ್ಮ ಆದೇಶಗಳಲ್ಲಿ ಹಿಂದೂಗಳನ್ನು ಅವಮಾನಿಸುವ ರೀತಿಯಲ್ಲಿ ತಮ್ಮ ಕೆಟ್ಟ ಉದ್ದೇಶಗಳನ್ನು ತೋರಿದರೆ, ಅಂತಹ ನ್ಯಾಯಾಧೀಶರ ವಿರುದ್ಧ ಜನರು ಬೀದಿಗಳಲ್ಲಿಯೂ ಇದೇ ರೀತಿಯಾಗಿ ವರ್ತಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾನೆ.

ಈ ಹಿಂದೆ ಸೆಪ್ಟೆಂಬರ್ 18ರಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದ ಅಜಿತ್ ಭಾರ್ತಿ ಸಿಜೆಐ ಗವಾಯಿ ಅವರನ್ನು “ಹಿಂದೂ ದ್ವೇಷ ಹೊಂದಿರುವ ಕೀಳು ನ್ಯಾಯಾಧೀಶ” ಎಂದು ಕರೆದಿದ್ದ. ಜೊತೆಗೆ, ಹಿರಣ್ಯಕಶಿಪುನ ಕಥೆಯನ್ನು ಉಲ್ಲೇಖಿಸಿ, “ಗವಾಯಿ ಗಮನದಲ್ಲಿಡಿ, ಹಿರಣ್ಯಕಶಿಪು ಕೂಡ ತನ್ನ ಅಹಂಕಾರದಿಂದ ಪ್ರಹ್ಲಾದನಿಗೆ ‘ಈ ಕಂಬದಲ್ಲಿ ವಿಷ್ಣು ಇದ್ದಾನೆಯೇ?’ ಎಂದು ಕೇಳಿದ್ದ. ಅವನಿಗೆ ವರವಿತ್ತು, ಆದರೂ ನರಸಿಂಹ ಭಗವಾನ್ ಅವನನ್ನು ತೊಡೆಯ ಮೇಲಿಟ್ಟು ಉಗುರಿನಿಂದ ಕಿತ್ತು ಹಾಕಿದ್ದ. ನೀನು ಕೇವಲ ಒಬ್ಬ ಅಂಬೇಡ್ಕರವಾದಿ ಮನುಷ್ಯ ಮಾತ್ರ” ಎಂದಿದ್ದ.

ಹಿಂದುತ್ವ ವೆಬ್‌ಸೈಟ್‌ ಒಂದು ಸಿಜೆಐ ಗವಾಯಿ ಅವರಿಗೆ ಇದೇ ರೀತಿಯ ಬೆದರಿಕೆ ಹಾಕಿತ್ತು

ಹಿಂದೂ ಕೆಫೆಯ ಕೌಶಲೇಶ್ ರಾಯ್‌ನಿಂದ ಹಿಂಸಾತ್ಮಕ ಬೆದರಿಕೆ

ಸೆಪ್ಟೆಂಬರ್ 29ರಂದು ಅಜಿತ್ ಭಾರ್ತಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಿಜೆಐ ಗವಾಯಿ vs ಸ್ಲೀಪಿಂಗ್ ಹಿಂದೂಸ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗಿತ್ತು.

ಯೂಟ್ಯೂಬ್ ವಿಡಿಯೋ ವಿವರಣೆಯಲ್ಲಿ (ಡಿಸ್ಕ್ರಿಪ್ಶನ್) “ಪ್ರಶ್ನೆ ಏನೆಂದರೆ, ಸಿಜೆಐ ಗವಾಯಿ ಅವರಂತವರು ತಮ್ಮ ಹಿಂದೂ ವಿರೋಧಿ ಹೇಳಿಕೆಗಳ ಹೊರತಾಗಿಯೂ ಯಾವುದೇ ಪರಿಣಾಮಗಳಿಲ್ಲದೆ ತಪ್ಪಿಸಿಕೊಳ್ಳುವುದು ಏಕೆ?” ಎಂದು ಬರೆಯಲಾಗಿತ್ತು.

ವಿಡಿಯೋದಲ್ಲಿ ಹಿಂದುತ್ವ ಸಂಘಟನೆಯಾದ ‘ಹಿಂದೂ ಕೆಫೆ ಫೌಂಡೇಶನ್‌’ನ ಸಂಸ್ಥಾಪಕ ಕೌಶಲೇಶ್ ರಾಯ್, ಸಿಜೆಐ ಗವಾಯಿ ವಿರುದ್ಧ ಬಹಿರಂಗವಾಗಿ ಹಿಂಸಾಚಾರದ ಬೆದರಿಕೆ ಹಾಕಿದ್ದ.

“ನಾನು ಗಾಂಧಿವಾದಿಯಾಗಿದ್ದೇನೆ, ಆದ್ದರಿಂದ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಒಂದು ವೇಳೆ ನಾನು ಹಿಂಸೆಯನ್ನು ಬೆಂಬಲಿಸಿದ್ದರೆ, ನಾನು ಹೀಗೆ ಹೇಳುತ್ತಿದ್ದೆ: ಸಿಜೆಐ ಗವಾಯಿ ಅವರು ಕೋರ್ಟ್‌ನಲ್ಲಿ ಇರುವಾಗ, ಒಬ್ಬ ಹಿಂದೂ ವಕೀಲ ಅವರ ತಲೆಯನ್ನು ಹಿಡಿದು ಗೋಡೆಗೆ ಬಡಿದು, ತಲೆಯನ್ನು ಎರಡು ತುಂಡು ಮಾಡಬಹುದು. ಆದರೆ ನಾನು ಖಂಡಿತವಾಗಿಯೂ ಹಿಂಸೆಯನ್ನು ಬೆಂಬಲಿಸುವುದಿಲ್ಲ” ಎಂದು ಕೌಶಲೇಶ್ ರೈ ಹೇಳಿದ್ದ.

ಮುಂದುವರಿದು, ” ಹಿಂದೂ ಧರ್ಮದ ಬಗ್ಗೆ ಯಾರು ಏನು ಹೇಳಿದರೂ, ಅವರಿಗೆ ದೊಡ್ಡ ಮಟ್ಟದ ಶಿಕ್ಷೆಯಾಗುವುದಿಲ್ಲ. ಆದ್ದರಿಂದ ಎಲ್ಲರೂ ಸುಲಭವಾಗಿ ಮಾತನಾಡುತ್ತಾರೆ. ನ್ಯಾಯಮೂರ್ತಿ ಗವಾಯಿ ಅವರು ವಿಷ್ಣು ದೇವರ ಬಗ್ಗೆ ಟೀಕೆ ಮಾಡಿರುವುದು ಗೊತ್ತಿದ್ದೂ ಅವರು ಜಾಗರೂಕರಾಗಿಬೇಕು. ಗೋಡ್ಸೆಯಂತಹ ಹಿಂಸೆ ಮಾಡುವುದು ಸರಿಯಲ್ಲ, ಆದರೆ ಗಾಂಧಿಯಂತೆ ಶಾಂತಿಯಿಂದ ಪ್ರತಿಭಟಿಸಬಹುದು. ಒಂದು ವೇಳೆ ಗವಾಯಿ ಅವರ ಮುಖದ ಮೇಲೆ ಯಾರಾದರೂ ಉಗುಳಿದರೆ, ಕಾನೂನಿನ ಪ್ರಕಾರ ಗರಿಷ್ಠ ಆರು ತಿಂಗಳು ಜೈಲು ಶಿಕ್ಷೆಯಾಗಬಹುದು. ಆದರೆ, ಹಿಂದೂಗಳು ಇಂತಹ ಸಣ್ಣ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ” ಎಂದಿದ್ದ.

“ಗವಾಯಿ ಅವರಂತಹವರು ಅಥವಾ ಯಾರಾದರೂ ಹಿಂದೂಗಳ ವಿರುದ್ಧ ಧಾರ್ಮಿಕವಾಗಿ ಟೀಕೆ ಮಾಡಿದರೆ, ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಆದರೆ, ಹಿಂದೂಗಳು ಒಂದು ದಿನ ಈ ರೀತಿಯ ಟೀಕೆಗೆ ಒಂದು ಬೆಲೆ (ಶಿಕ್ಷೆ ಅಥವಾ ಪರಿಣಾಮ) ನಿಗದಿಪಡಿಸಿದರೆ, ಉದಾಹರಣೆಗೆ, “ವಿಷ್ಣು ದೇವರ ಬಗ್ಗೆ ಟೀಕಿಸಿದರೆ ಇಂತಹ ಶಿಕ್ಷೆ ಎದುರಿಸಬೇಕು” ಎಂದು ಹೇಳಿದರೆ, ಜನರು ಜಾಗರೂಕರಾಗುತ್ತಾರೆ. ಒಂದೆರಡು ಜನರಿಗೆ ಶಿಕ್ಷೆಯಾದರೆ, ಇಂತಹ ಘಟನೆಗಳು 60-70% ಕಡಿಮೆಯಾಗುತ್ತವೆ” ಎಂದು ಹೇಳಿದ್ದ.

ಕಾರ್ಯಕ್ರಮದಲ್ಲಿ ಅಜಿತ್ ಭಾರ್ತಿ ನ್ಯಾಯಮೂರ್ತಿ ಗವಾಯಿ ಅವರ ಕಾರನ್ನು ಸುತ್ತುವರಿಯುವಂತೆ ಸೂಚಿಸಿದ್ದ.

ಸೋಮವಾರ ಗವಾಯಿ ಅವರ ಮೇಲಿನ ದಾಳಿಯ ನಂತರ, ರಾಯ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೂ ಬೆದರಿಕೆ ಹಾಕಿದ್ದ.

ಸಿಜೆಐ ಮೇಲಿನ ದಾಳಿಯನ್ನು ಖಂಡಿಸಿದ್ದ ಪ್ರಶಾಂತ್ ಭೂಷಣ್, “ಇದು ಸಿಜೆಐ ಅವರನ್ನು ಬೆದರಿಸಲು ಬ್ರಾಹ್ಮಣ ಮನಸ್ಥಿತಿಯ ವಕೀಲರೊಬ್ಬರು ಮಾಡಿರುವ ಹೇಯ ಪ್ರಯತ್ನ. ಇದು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದರು.

ಪ್ರಶಾಂತ್ ಭೂಷಣ್ ಅವರ ಈ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿದ್ದ ರಾಯ್‌ “ಭೂಷಣ್ ಜಿ ರ‍್ಯಾಪ್‌ನಿಂದ ತೃಪ್ತರಾಗಿಲ್ಲ ಎಂದು ತೋರುತ್ತದೆ” ಎಂದು ಬರೆದಿದ್ದ.

ಅಜಿತ್ ಭಾರ್ತಿಯ ಕಾರ್ಯಕ್ರಮದಲ್ಲಿ ಕೌಶಲೇಶ್ ರಾಯ್ ಸಿಜೆಐ ಗವಾಯಿ ಅವರ ಕುಟುಂಬದ ಬಗ್ಗೆಯೂ ಟೀಕೆ ಮಾಡಿದ್ದ. “ಗವಾಯಿ ಅವರ ತಂದೆ ಮೂರು ರಾಜ್ಯಗಳ ಗವರ್ನರ್ ಆಗಿದ್ದರು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕರಾಗಿದ್ದರು. ಈ ಎಲ್ಲ ವಿಷಯಗಳನ್ನು ಜೋಡಿಸಿದರೆ, ಭಾರತದಲ್ಲಿ ಕೆಲವು ಕೆಟ್ಟ ಬರಹಗಳು ಅಥವಾ ದ್ವೇಷ ಹರಡುವ ಸಾಹಿತ್ಯಕ್ಕೆ (‘ದೌರ್ಜನ್ಯ ಸಾಹಿತ್ಯ’) ಗವಾಯಿ ಕುಟುಂಬವೇ ಕಾರಣ ಎಂದು ತೋರುತ್ತದೆ” ಎಂದು ಹೇಳಿದ್ದ.

ಅಕ್ಟೋಬರ್ 5ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ 100ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿಜೆಐ ಗವಾಯಿ ಅವರ ತಾಯಿ ಕಮಲಾತೈ ಗವಾಯಿ ಅವರನ್ನು ಆಹ್ವಾನಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕಮಲಾತೈ ಅವರು, ನಾವು ಅಂಬೇಡ್ಕರ್ ಸಿದ್ದಾಂತದವರು, ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ನಾನು ಒಂದು ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಅಂಬೇಡ್ಕರ್ ಸಿದ್ದಾಂತವನ್ನೇ ಹೇಳುತ್ತಿದ್ದೆ ಎಂದಿದ್ದರು. ಈ ಬೆಳವಣಿಗೆಗಳನ್ನು ಸಿಜೆಐ ಮೇಲಿನ ದಾಳಿಯ ಈ ಸಂದರ್ಭದಲ್ಲಿ ನಾವು ಗಮನಿಸಬೇಕಿದೆ.

ಹಿಂದುತ್ವ ಬಲಪಂಥೀಯರಿಂದ ವ್ಯಾಪಕ ಅಭಿಯಾನ

ಅಜಿತ್ ಭಾರ್ತಿ ಮತ್ತು ಕೌಶಲೇಶ್ ರಾಯ್ ಇತರ ಹಲವಾರು ಹಿಂದುತ್ವ ಬಲಪಂಥೀಯ ಸಂಘಟನೆಗಳು ಮತ್ತು ವ್ಯಕ್ತಿಗಳೊಂದಿಗೆ ಸೇರಿ ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಪ್ರಚಾರ ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಲೋಕ್ ಕುಮಾರ್ “ನ್ಯಾಯಾಲಯದಲ್ಲಿ ಭಾಷೆಯಲ್ಲಿ ಸಂಯಮ” ವನ್ನು ಕಾಯ್ದುಕೊಳ್ಳುವಂತೆ ಹೇಳಿದ್ದರು. ಸನಾತನ ಕಥಾ ವಾಚಕ್ ಸಮನ್ವಯ ಪರಿಷತ್ ಎಂಬ ಗುಂಪು ಅಕ್ಟೋಬರ್ 2 ರಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಗೆ ಕರೆ ನೀಡಿತ್ತು.

ವಕೀಲ ವಿನೀತ್ ಜಿಂದಾಲ್ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿಗೂ ಪತ್ರ ಕಳುಹಿಸಿದ್ದರು. #ImpeachCJI ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಹಲವಾರು ಯೂಟ್ಯೂಬ್ ಚಾನೆಲ್‌ಗಳು ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಅಭಿಯಾನ ಆರಂಭಿಸಿತ್ತು.

Courtesy : thewirehindi.com

ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...