ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಮಾರಾಟದ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಪರಮೇಶ್ವರ್, ಬಾಡಿಗೆ ಮನೆಗಳಲ್ಲಿ ವಾಸಿಸುವ ವಿದೇಶಿ ಪ್ರಜೆಗಳಾಗಿರುವ ಪುನರಾವರ್ತಿತ ಅಪರಾಧಿಗಳು ಪೊಲೀಸರ ಗಮನಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
“ಡ್ರಗ್ಸ್ ತಡೆಗೆ ಮತ್ತು ಅಂತಹ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಡ್ರಗ್ಸ್ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ದಂಧೆಕೋರರ ವಿರುದ್ಧ ಸಮರ ನಡೆಯಲಿದೆ. ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಅವುಗಳ ಬಳಕೆ ಜಾಗತಿಕವಾಗಿ ದಿನೇ ದಿನೇ ಹೆಚ್ಚುತ್ತಿದೆ. ಮಾದಕ ವಸ್ತುಗಳ ಮಾರಾಟವು ಮಾರಾಟಗಾರರಿಗೆ ಅತೀ ಹೆಚ್ಚಿನ ಲಾಭಾಂಶ ತರುವ ಉದ್ಯಮವಾಗಿ ಪರಿವರ್ತನೆಯಾಗಿದೆ. ಅತೀ ಹೆಚ್ಚಿನ ಲಾಭಕ್ಕಾಗಿ ಅಂತರ್ ರಾಜ್ಯ/ ಅಂತರ್ ರಾಷ್ಟ್ರೀಯ ಜಾಲಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಸದನಕ್ಕೆ ಮಾಹಿತಿ ನೀಡಿದರು.
“ಈ ಜಾಲಗಳು ಜಗತ್ತಿನಾದ್ಯಾಂತ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಸಕ್ರೀಯವಾಗಿರುವುದರಿಂದ ಈ ಡಗ್ಸ್ ಸಮಸ್ಯೆಯು ಸಾರ್ವತ್ರಿಕವಾಗಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ತಡೆಗಟ್ಟಲು ರಾಜ್ಯ ಸರ್ಕಾರವು ನಾನಾ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ಹಾವಳಿಯನ್ನು ಎದುರಿಸಲು ಹಾಗೂ ತಡೆಗಟ್ಟಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎ.ಎನ್.ಟಿ.ಎಫ್) ಪಡೆಯನ್ನು ಸ್ಥಾಪಿಸಲಾಗಿದೆ” ಎಂದು ಹೇಳಿದರು.
“ರಾಜ್ಯದ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವ ಕುರಿತು ಡ್ರಗ್ಸ್ ಹಾವಳಿಯನ್ನು ಪೂರ್ಣವಾಗಿ ತಡೆಗಟ್ಟಲು ಗಾಂಜಾ ಬೆಳೆಯನ್ನು ಬೆಳೆಯುವುದು, ಮಾರಾಟ ಮಾಡುವುದು ಕಾನೂನಾತ್ಮಕ ಅಪರಾಧವಾಗಿರುತ್ತದೆ ಎಂಬ ಅಂಶಗಳ, ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಅದರಿಂದಾಗುವ ಶಿಕ್ಷೆಯ ಕುರಿತು ಶಾಲಾ-ಕಾಲೇಜುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ” ಎಂದರು.
“ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ಮತ್ತು ಜಾಲ ಕುರಿತು ಸ್ಥಳೀಯ ಬಾತ್ಮೀದಾರರು, ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಬೀಟ್ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯಗಳ ಅಕ್ರಮ ಸಾಗಾಣಿಕೆ ಬಗ್ಗೆ ವಿಶೇಷವಾಗಿ ಮಾಹಿತಿಯನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
“ಪ್ರತಿ ತಿಂಗಳು ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಾದಕ ವಸ್ತುಗಳ ಸೇವನೆಯಿಂದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಸಂಶಯಾಸ್ಪದ ಹೈ ಸೆಕ್ಯುರಿಟಿ ಸ್ಥಳಗಳಲ್ಲಿ ಬಿಗಿ ನಿಗಾವಣೆ ಇಡಲಾಗಿದೆ. ಪಾರ್ಸಲ್ ಸರ್ವೀಸ್, ಕೋರಿಯರ್ ಸೆಂಟರ್, ರೆಸಾರ್ಟ್/ಫಾರ್ಮ್ ಹೌಸ್‌ಗಳಿಗೆ ದಿಢೀರ್ ಭೇಟಿ ಕೈಗೊಂಡು ನಗರ ಹೊರವಲಯಗಳಲ್ಲಿ ಡ್ರಗ್ಸ್ ಪಾರ್ಟಿಗಳನ್ನು ತಡೆಗಟ್ಟುವ ಬಗ್ಗೆ ವಿಶೇಷ ಪೆಟ್ರೋಲಿಂಗ್ ನಡೆಸಲಾಗಿರುತ್ತದೆ” ಎಂದು ವಿವರಿಸಿದರು.
“ಪ್ರತಿ ಮಾಹೆಯಲ್ಲಿ ಜಿಲ್ಲಾ ಮಟ್ಟದ ಎನ್‌ಸಿಒಆರ್‌ಡಿ ಸಭೆಗಳನ್ನು ನಡೆಸಲು ಎಲ್ಲಾ ಘಟಕಾಧಿಕಾರಿಗಳಿಗೆ ತಿಳಿಸಲಾಗಿರುತ್ತದೆ. ಪ್ರತಿ ವರ್ಷ ಜೂನ್ 26ರಂದು ಮಾದಕ ವಸ್ತುಗಳ ನಿಗ್ರಹ ದಿನವನ್ನು ಆಚರಣೆ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಾದಕ ವಸ್ತು ಮಾರಾಟ ಉತ್ಪಾದನೆ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ವಿ.ಸಿ. ಮೂಲಕವು ಸಹ ಎಲ್ಲ ಘಟಕಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ” ಎಂದು ಅವರು ಹೇಳಿದರು.


