ಬುದ್ಧನ ತತ್ವಗಳು, ಬಸವ- ಅಲ್ಲಮರ ಚಿಂತನೆಗಳು, ಬಾಬಾ ಸಾಹೇಬರ ವಿಚಾರಗಳು , ನಮ್ಮ ಸಂವಿಧಾನದ ದಿಕ್ಸೂಚಿಗಳು ಹಾಗೂ ಕಳೆದ 75 ವರ್ಷಗಳಿಂದ ಸ್ಕ್ಯಾಂಡಿನೇವಿಯನ್ ದೇಶಗಳು ಒಂದು ಮಟ್ಟಿಗೆ ಸಾಧಿಸಿದ ಆಧುನಿಕ ಮಾನವೀಯ- ವೈಜ್ಞಾನಿಕ ಸಂರಚನೆಗಳು ಇಷ್ಟು ಸಾಕು ಜಗತ್ತು ಮತ್ತು ಅದರೊಳಗಣ ಭಾರತ ಜೀವಂತವಾಗಿ ಇನ್ನಷ್ಟು ವರ್ಷಗಳ ಕಾಲ ಬದುಕಲು.
ಆದರೆ;
ಸರ್ವಾಧಿಕಾರಿ ಫ್ಯಾಸಿಸ್ಟ್ ವ್ಯವಸ್ಥೆಗಳು ಮನುಷ್ಯರು ಬದುಕಬಹುದಾದ ಅವಕಾಶಗಳನ್ನೆ ನಾಶ ಮಾಡುತ್ತಿವೆ.
ಪ್ರಭುತ್ವವಷ್ಟೆ ಫ್ಯಾಸಿಸಮ್ಮನ್ನು ಹುಟ್ಟಿ ಹಾಕುವುದಿಲ್ಲ ಎಂಬ ಅಂಬರ್ಟೊ ಎಕೊನ ಚಿಂತನೆಗಳನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ.
ಪ್ರಭುತ್ವ ಎನ್ನುವುದಕ್ಕಿಂತ
ವ್ಯವಸ್ಥೆ ಎನ್ನುವುದು ಹೆಚ್ಚು ಸೂಕ್ತ. ಮಧ್ಯಮ ವರ್ಗದ ಗುಮಾನಿಯ,ಆತಂಕದ , ಫೋಬಿಯಾಕಾರಕವಾದ ಮನೋಭಾವವು ತನಗೆ ಬೇಕಾದ ಪ್ರಭುತ್ವವನ್ನು ನಿರ್ಮಾಣ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಮಧ್ಯಮ ವರ್ಗವು ಹುಡುಕೀ ಹುಡುಕಿ ಫ್ಯಾಸಿಸ್ಟ್ ನಾಯಕರನ್ನು ಬೆಳೆಸುತ್ತಿದೆ.
ಹಾಗೆ ಸೃಷ್ಟಿಯಾದ ಈ ನಾಯಕರು ಜೀವ ಶತ್ರುಗಳಾಗಿ ಬೆಳೆಯುತ್ತಿದ್ದಾರೆ. ಅಮೆರಿಕದಲ್ಲಿ ಫ್ಯಾಂಗ್ಸ್ ( Face book, Alphabet, Netflix, Google) ಕಂಪೆನಿಗಳು ಅಲ್ಲಿ ಫ್ಯಾಸಿಸಂ ಬೆಳೆಯಲು ಕಾರಣವಾಗುತ್ತಿವೆ. ಜಗತ್ತಿನ ಪ್ರಮುಖ ದೇಶಗಳಲ್ಲಿ ಈ ರೀತಿಯ ಬೃಹತ್ ಬಂಡವಾಳಿಗ ಕುಳಗಳು ಹಾಗೂ ಇವುಗಳಿಗೆ ಪೂರಕವಾಗಿ ದುಡಿಯುವವರು ಜನರಲ್ಲಿ ಫ್ಯಾಸಿಸ್ಟ್ ಮನಸ್ಥಿತಿಗೆ ಬೇಕಾದ Consentನ್ನು ಉತ್ಪಾದಿಸುತ್ತಿದ್ದಾರೆ.
ಇದರ ಅಪಾಯಗಳ ಕುರಿತು ಜನರಿಗೆ ತಿಳಿ ಹೇಳಬೇಕಾದ ಚಳುವಳಿಗಳು ಹಾಗೂ ಚಿಂತಕರು ಸೋತು ಹೋದಂತೆ ಕಾಣಿಸುತ್ತಿದ್ದಾರೆ. ಸಮಾಜಗಳು ಗದ್ದಲಗಳ ಗ್ರಾಹಕರಾಗಿ ಸ್ಮಾರ್ಟ್ ಫೋನುಗಳಲ್ಲಿ ಮುಳುಗಿವೆ.
ಆದರೂ ಕವಿಯುತ್ತಿರುವ ಕಗ್ಗತ್ತಲಿಗೆ ದಿಕ್ಕೆಡಲೇಬೇಕು. ಹಾಗೆ ದಿಕ್ಕೆಟ್ಟ. ಕ್ಷಣ. ಬುದ್ಧ, ಜೀಸಸ್, ಪೈಗಂಬರ್, ಬಸವ- ಅಲ್ಲಮ, ಅಂಬೇಡ್ಕರ್, ನಾರಾಯಣಗುರು, ಗಾಂಧಿ ಬೇಕಾಗುತ್ತಾರೆ.
ಆದರೆ ಇತ್ತೀಚೆಗೆ ಎಲಾನ್ ಮಸ್ಕ್ ಮೂರನೇ ಮಹಾಯುದ್ಧ ಹತ್ತಿರದಲ್ಲೆ ಇದೆ ಎಂದಾಗ ಎದೆ ಧಸಕ್ಕೆಂದಿದ್ದಂತೂ ನಿಜ.
ಬಾಬಾ ಸಾಹೇಬರ ಪರಿನಿಬ್ಬಾಣ ಜಗತ್ತಿನ ಕವಲುದಾರಿಗೊಂದು ಕೈಮರದಂತೆ ಕಾಣಿಸುತ್ತಿದೆ.
ಡಾ. ನೆಲ್ಕುಂಟೆ ವೆಂಕಟೇಶಯ್ಯ,


